ರಾಮನಗರ: ಚುನಾವಣಾ ಚೆಕ್ ಪೋಸ್ಟ್‌ಗೆ (Election Chek Post) ಡಿಕ್ಕಿ ಹೊಡೆದು ಲಾರಿ ಪಲ್ಟಿಯಾದ ಘಟನೆ ಚನ್ನಪಟ್ಟಣ (Channapatna) ತಾಲೂಕಿನ ಕೋಲೂರು ಗ್ರಾಮದ ಬಳಿ ತಡರಾತ್ರಿ ನಡೆದಿದೆ.
ಮರದ ಹೊಟ್ಟು ತುಂಬಿಕೊಂಡು ಮಂಡ್ಯದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ ಚೆಕ್ ಪೋಸ್ಟ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಕರ್ತವ್ಯ ನಿರತರಾಗಿದ್ದ ಸಿಬ್ಬಂದಿ ಪಾರಾಗಿದ್ದಾರೆ. ಇದನ್ನೂ ಓದಿ: ಏಳೆಂಟು ದಿನದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ : ರಾಜನಾಥ್ ಸಿಂಗ್
ಚಾಲಕ ಮದ್ಯಪಾನ ಮಾಡಿ ಲಾರಿ ಚಲಾಯಿಸಿದ್ದರಿಂದ ಈ ಅಪಘಾತ ಸಂಭವಿಸಿದೆ. ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಚಿಕ್ಕೋಡಿ: ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ (Assembly Election) ಹಿನ್ನೆಲೆ ನೀತಿ ಸಂಹಿತೆ (Code of Conduct) ಜಾರಿಯಲ್ಲಿದೆ. ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಚುನಾವಣೆ ಆಯೋಗದ ಪ್ರತಿ ತಾಲೂಕಿನ ಸರಹದ್ದಿನಲ್ಲಿ ಚೆಕ್ ಪೋಸ್ಟ್ (Check Post) ನಿರ್ಮಿಸಿ ಪ್ರತಿಯೊಂದು ವಾಹನ ಹಾಗೂ ವ್ಯಕ್ತಿಗಳ ಮೇಲೆ ಅಧಿಕಾರಿಗಳು ನಿಗಾ ಇಡುವಂತೆ ಸೂಚನೆ ನೀಡಲಾಗುತ್ತಿದೆ. ಇದನ್ನು ಕಟ್ಟುನಿಟ್ಟಿನಿಂದ ರಾಜ್ಯಾದ್ಯಂತ ಅಧಿಕಾರಿಗಳು ಪಾಲನೆ ಮಾಡುತ್ತಿದ್ದಾರೆ. ಆದರೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ (Shrimant Patil) ಅವರ ಪುತ್ರನ ಕಾರನ್ನು ಅಧಿಕಾರಿಗಳು ಪರಿಶೀಲನೆ ಮಾಡದೆ ಕರ್ತವ್ಯ ಲೋಪ ಎಸಿಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಥಳದಲ್ಲಿದ್ದ ಚೆಕ್ ಪೋಸ್ಟ್ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಹೊರವಲಯದ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಮಧ್ಯದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದು, ಇಲ್ಲಿ ಪ್ರತಿಯೊಂದು ವಾಹನಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರ ಪುತ್ರ ಶ್ರೀನಿವಾಸ ಪಾಟೀಲ್ ಆಗಮಿಸುತ್ತಿದ್ದಂತೆ ಅಧಿಕಾರಿಗಳು ಅವರ ಕಾರನ್ನು ಪರಿಶೀಲನೆ ಮಾಡದೆ ಹಾಗೆ ಬಿಟ್ಟಿದ್ದಾರೆ. ಇದರಿಂದ ಕೆಲವು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೇಲಾಧಿಕಾರಿಗಳಿಗೆ ಮೌಖಿಕವಾಗಿ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕಾಗವಾಡ ತಹಶೀಲ್ದಾರ್ ಎಂಎಂ ಬಳೇಗಾರ ಆಗಮಿಸಿ ಕರ್ತವ್ಯದಲ್ಲಿದ್ದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮೇಲೆ FIR ದಾಖಲು
ಕಾಗವಾಡ ಶಾಸಕರ ಮನೆ ಮಹಾರಾಷ್ಟ್ರದ ಸಾಂಗ್ಲಿ ನಗರದಲ್ಲಿ ಇದೆ. ಇದರಿಂದ ಕಾಗವಾಡ ಸಾಂಗ್ಲಿಯಲ್ಲಿ ದಿನನಿತ್ಯ ಅವರು ಸಂಚಾರ ಬೆಳೆಸುವುದರಿಂದ ಅಧಿಕಾರಿಗಳು ಅವರ ಕಾರು ತಪಾಸಣೆಗೆ ಮುಂದೆ ಹೋಗಿರಲಿಲ್ಲ. ಇದರಿಂದ ಕೆಲವು ಸ್ಥಳೀಯರು ಅಸಮಾಧಾನಗೊಂಡಿದ್ದಾರೆ. ಕಾನೂನು ಎಲ್ಲರಿಗೂ ಸಮನಾಗಿದೆ. ಇಲ್ಲಿ ರಾಜಕೀಯ ಮಕ್ಕಳಿಗೆ ಬೇರೆ ಕಾನೂನು ಇಲ್ಲ ಎಂದು ಹಿರಿಯ ಅಧಿಕಾರಿಗಳನ್ನು ಕೆಲವು ಸ್ಥಳೀಯರು ತರಾಟೆ ತೆಗೆದುಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಗವಾಡ ತಹಶೀಲ್ದಾರ್ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾಕೆ ಶಾಸಕರ ಮಗನ ವಾಹನವನ್ನು ತಪಾಸಣೆ ಮಾಡಿಲ್ಲ? ನಿಮಗೆ ನೋಟಿಸ್ ನೀಡಲಾಗುವುದು. ಪ್ರತಿಯೊಂದು ವಾಹನ ತಪಾಸಣೆ ಮಾಡುವಂತೆ ನಿಮಗೆ ಈಗಾಗಲೇ ಹೇಳಿದ್ದೇವೆ. ಆದರೂ ನೀವು ಕರ್ತವ್ಯ ಲೋಪ ಮಾಡಿದ್ದೀರಿ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾರ್ಕಳ ಅಖಾಡದಲ್ಲಿ ಮುಟ್ಟಾಳ ಫೈಟ್- ಮುತಾಲಿಕ್ ಪೋಸ್ಟರ್‌ಗೆ ಬಿಜೆಪಿ ಕೌಂಟರ್
ರಾಮನಗರ: 2023ರ ವಿಧಾನಸಭಾ ಚುನಾವಣೆ (Vidhanasabha Election 2023) ಗೆ ದಿನಾಂಕ ನಿಗದಿ ಹಿನ್ನೆಲೆ ನಿಷ್ಪಕ್ಷಪಾತ ಚುನಾವಣೆಗೆ ರಾಮನಗರ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ರಾಮನಗರ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ರಾಮನಗರ (Ramanagar) ದಲ್ಲಿ ಒಟ್ಟು 8,84,044 ಮತದಾರರಿದ್ದಾರೆ. ಅದರಲ್ಲಿ 4,35,572 ಪುರುಷ ಮತದಾರರು, 4,50,573 ಮಹಿಳಾ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1139 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಈ ಬಾರಿ ಗೋ ಗ್ರೀನ್ ಹಾಗೂ ಚನ್ನಪಟ್ಟಣದ ಗೊಂಬೆಗಳ ಥೀಮ್ ನಲ್ಲಿ ಎರಡು ವಿಶೇಷ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಅಲ್ಲದೇ ಚುನಾವಣಾ ಅಕ್ರಮ ತಡೆಯಲು ಜಿಲ್ಲೆಯಲ್ಲಿ ಒಟ್ಟು 16 ಚೆಕ್ ಪೋಸ್ಟ್ ಗಳ ನಿರ್ಮಾಣ ಮಾಡಲಾಗಿದೆ. ಚುನಾವಣಾ ಪ್ರಕ್ರಿಯೆಗೆ ಒಟ್ಟು 5775 ಸಿಬ್ಬಂದಿ ನೇಮಕ ಮಾಡಿದ್ದೇವೆ ಎಂದರು.
ಸಾಂದರ್ಭಿಕ ಚಿತ್ರ
ಅಲ್ಲದೇ ಪ್ರತಿ ಕ್ಷೇತ್ರ ವ್ಯಾಪ್ತಿಯಲ್ಲಿ 9 ಫ್ಲೈಯಿಂಗ್ ಸ್ವ್ಕಾಡ್ ರಚನೆ ಮಾಡಿ ರಾಜಕೀಯ ಕಾರ್ಯಕ್ರಮಗಳ ಮೇಲೆ ಹದ್ದಿನಕಣ್ಣು ಇಡಲಾಗಿದೆ. ಚುನಾವಣಾ ಅಕ್ರಮದ ಬಗ್ಗೆ ಮಾಹಿತಿ ನೀಡಲು ಸಹಾಯವಾಣಿ ಆರಂಭಿಸಿದ್ದು, ಸಾರ್ವಜನಿಕರು ಕೂಡಾ ಮಾಹಿತಿ ನೀಡಬಹುದಾಗಿದೆ. ಅಲ್ಲದೇ ಚುನಾವಣಾ ಸಮಯದಲ್ಲಿ ಯಾವುದೇ ಅಕ್ರಮ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಐವರು ರೌಡಿಶೀಟರ್‍ಗಳನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 4ನೇ ಬಾರಿ ಸತತ ಜಯದತ್ತ ಸುಧಾಕರ್ – ಬ್ರೇಕ್ ಹಾಕಲು ಜೆಡಿಎಸ್-ಕಾಂಗ್ರೆಸ್ ಪೈಪೋಟಿ
ಹಬ್ಬ, ಜಾತ್ರೆಗಳ ಹೆಸರಿನಲ್ಲಿ ರಾಜಕೀಯ ಮುಖಂಡರು ಬಾಡೂಟ ಹಾಕಿಸುವುದರ ಮೇಲೂ ನಿಗಾ ಇಡಲಾಗಿದೆ. ದಾಖಲೆ ಇಲ್ಲದೇ ಹಣಸಾಗಾಟ, ಬ್ಯಾಂಕ್ ವಹಿವಾಟುಗಳ ಬಗ್ಗೆ ಪರಿಶೀಲನೆ ನಡೆಸಿ ಈ ಬಾರಿ ನಿಷ್ಪಕ್ಷಪಾತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ಮಾಹಿತಿ ನೀಡಿದ್ದಾರೆ.
ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಚೆಕ್ ಪೋಸ್ಟ್‌ಗೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಕ್ತಿನಗರ ಬಳಿ ನಡೆದಿದೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಚೆಕ್ ಪೋಸ್ಟ್ ನಾಶವಾಗಿದೆ. ಚಾಲಕನ ಸಹಾಯಕನಿಗೆ ಗಂಭೀರ ಗಾಯಗಳಾಗಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಟೈಯರ್ ಬ್ಲಾಸ್ಟ್ ಆಗಿರುವುದರಿಂದ ಚಾಲಕನಿಗೆ ಲಾರಿಯ ನಿಯಂತ್ರಣ ತಪ್ಪಿ, ಈ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮದ್ಯ ಸೇವಿಸಿ ಯದ್ವಾತದ್ವಾ ಲಾರಿ ಓಡಿಸಿದ ಚಾಲಕ- ಸಾರ್ವಜನಿಕರಿಂದ ಆಕ್ರೋಶ
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕನ ದೇಹ ಎರಡು ತುಂಡಾಗಿದ್ದು, ಇಡೀ ಚೆಕ್ ಪೋಸ್ಟ್ ಸಂಪೂರ್ಣ ನಾಶವಾಗಿದೆ. ಚಾಲಕನ ಮೃತದೇಹವನ್ನು ರಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಇದನ್ನೂ ಓದಿ: ಲಸಿಕೆ ಪ್ರಮಾಣ ಹೆಚ್ಚಳ – ಯಾದಗಿರಿ ಜಿಲ್ಲಾಡಳಿತದ ಪ್ಲ್ಯಾನ್ ಯಶಸ್ವಿಯಾಗಿದ್ದು ಹೇಗೆ?
ಯಾದಗಿರಿ: ಬಕ್ರೀದ್ ಹಬ್ಬದ ಹಿನ್ನಲೆ ಜಾನುವಾರು ಅಕ್ರಮ ಸಾಗಣೆಕೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾಡಳಿತ ಸಭಾಂಗಣದ ಕಚೇರಿಯಲ್ಲಿ ಶನಿವಾರ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು, ಬಕ್ರೀದ್ ಹಬ್ಬ ಸಂದರ್ಭದಲ್ಲಿ ಮಸೀದಿಗಳಲ್ಲಿ 50 ಜನ ಸೇರುವ ಬದಲು, ಆಯಾ ಮಸೀದಿ ಸಾಮರ್ಥ್ಯದ ಶೇ.50ರಷ್ಟು ಮಂದಿಗೆ ಸಾಮೂಹಿಕ ಪ್ರಾರ್ಥನೆ ಮಾಡಲು ಅವಕಾಶ ನೀಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪರಿಷ್ಕೃತ ಅದೇಶ ಹೊರಡಿಸಿದೆ. ಅದೇ ರೀತಿ ಪರಸ್ಪರ 6 ಆಡಿ ಅಂತರ, ಮಾಸ್ಕ್ ಕಡ್ಡಾಯ ಮತ್ತಿತರ ಅಂಶಗಳನ್ನು ಪಾಲಿಸಬೇಕು. ಹಸ್ತಲಾಘವ, ಪರಸ್ಪರ ಆಲಿಂಗನ ಮತ್ತಿತರ ಪ್ರಕ್ರಿಯೆಗಳನ್ನು ನಿರ್ಬಂಧಿಸಬೇಕು ಎಂದು ಹೇಳಿದರು.
ಬಳಿಕ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಮಾತನಾಡಿ, ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ರನ್ವಯ ಯಾವುದೇ ರೀತಿಯ ಜಾನುವಾರುಗಳ ಹತ್ಯೆ ಮಾಡುವಂತಿಲ್ಲ ಎಂದು ಹೇಳಿದರು. ಜಾನುವಾರು ಅಕ್ರಮ ಸಾಗಣಿಕೆ ಕಾನೂನು ಬಾಹಿರವಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ವತಿಯಿಂದ ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು ಎಂದರು.
ಮಡಿಕೇರಿ: ಕೇರಳದಲ್ಲಿ ಕೋವಿಡ್ ಮತ್ತೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಕೇರಳ ಚೆಕ್‍ಪೋಸ್ಟ್ ನಲ್ಲಿ ಯಾವುದೇ ತಪಾಸಣೆ ನಡೆಸದ ಕುರಿತು ಪಬ್ಲಿಕ್ ಟಿವಿ ವರದಿ ಬಿತ್ತರಿಸಿತ್ತು. ಇದರಿಂದ ಕೂಡಲೇ ಎಚ್ಚೆತ್ತುಕೊಂಡಿರುವ ಕೊಡಗು ಜಿಲ್ಲಾಡಳಿತ ಕರಿಕೆ ಚೆಕ್‍ಪೋಸ್ಟ್ ನಲ್ಲಿ ಕೇರಳದಿಂದ ಆಗಮಿಸುವವರ ಕೋವಿಡ್ ಟೆಸ್ಟ್ ಗೆ ಮುಂದಾಗಿದೆ. ಈ ಮೂಲಕ ಪಬ್ಲಿಕ್ ಟಿವಿ ವರದಿಯು ಫಲಶ್ರುತಿ ಗೊಂಡಿದೆ.
ಬೆಳಗ್ಗೆ ಗಡಿಗಳಲ್ಲಿ ಜಿಲ್ಲಾಡಳಿತ ಯಾವ ರೀತಿ ಕ್ರಮಕ್ಕೆ ಮುಂದಾಗಿದೆ ಎನ್ನುವ ಕುರಿತು ಪಬ್ಲಿಕ್ ಟಿವಿ ವಿರಾಜಪೇಟೆ ತಾಲೂಕಿನ ಮಾಕುಟ್ಟ ಚೆಕ್‍ಪೋಸ್ಟ್ ನ ಪೆರುಂಬಾಡಿ ಸ್ಥಳದ ರಿಯಾಲಿಟಿ ಚೆಕ್ ಮಾಡಿತ್ತು. ಬಳಿಕ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೇರಳಕ್ಕೆ ಸಂಚರಿಸುವ ಗಡಿಭಾಗವಾದ ಕರಿಕೆ ಚೆಕ್‍ಪೋಸ್ಟ್ ನಲ್ಲಿ ಕೋವಿಡ್ ಟೆಸ್ಟ್ ಗೆ ಮುಂದಾಗಿದೆ.
ಸದ್ಯ ಕರಿಕೆ ಚೆಕ್‍ಪೋಸ್ಟ್ ನಲ್ಲಿ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಕೇರಳಕ್ಕೆ ಹೋಗಿ ಬರುತ್ತಿರುವವರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಕೋವಿಡ್ ಲಕ್ಷಣಗಳು ಕಂಡು ಬರುವವರಿಗೆ ಸ್ಥಳದಲ್ಲಿಯೇ ಆ್ಯಂಟಿಜೆನ್ ಟೆಸ್ಟ್ ಮಾಡಿ ಕೋವಿಡ್ ಹರಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.
ಬೆಂಗಳೂರು: ಮಧ್ಯಾಹ್ನದ ಹೊತ್ತಿಗೆ ವಾಹನದಟ್ಟಣೆ ಹಾಗೂ ಜನಜಂಗುಳಿಯಿಂದ ಕೂಡಿದ್ದ ನೆಲಮಂಗಲ ಟೋಲ್, ಸಂಜೆ ಹೊತ್ತಿಗೆ ಬಿಕೋ ಎನ್ನುತ್ತಿದೆ. ಲಾಕ್‍ಡೌನ್ ಹಿನ್ನೆಲೆ ಜನರೆಲ್ಲ ಬೆಂಗಳೂರಿನಿಂದ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದು ಈ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಖಾಲಿ ಹೊಡೆಯುತ್ತಿದೆ. ಇನ್ನೊಂದೆಡೆ ಲಾಕ್‍ಡೌನ್ ಜಾರಿಯಾಗುವುದರಿಂದ ಬೆಂಗಳೂರಿನ ಕಡೆಗೂ ವಾಹನಗಳು ಬರುತ್ತಿಲ್ಲ.
ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಲಾಕ್‍ಡೌನ್‍ಗೆ ಕ್ಷಣ ಗಣನೆ ಹಿನ್ನಲೆ ರಾಷ್ಟ್ರೀಯ ಹೆದ್ದಾರಿ ಖಾಲಿ ಹೊಡೆಯುತ್ತಿದೆ. ಬೆಂಗಳೂರು ಕಡೆ ಬರುವವರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದ್ದು, ಜನಜಂಗುಳಿಯಿಂದ ಕೂಡಿರುತ್ತಿದ್ದ ನೆಲಮಂಗಲದ ಟೋಲ್ ಇದೀಗ ವಾಹನಗಳೇ ಇಲ್ಲದೆ ಬಿಕೋ ಎನ್ನುತ್ತಿದೆ. ತುರ್ತುಪರಿಸ್ಥಿತಿಯ ವಾಹನಗಳು, ಲಾರಿಗಳು ಮಾತ್ರ ಸಂಚರಿಸುತ್ತಿವೆ. ಬೆಂಗಳೂರು-ತುಮಕೂರು ರಸ್ತೆಯ ನವಯುಗ ಟೋಲ್ ಬಳಿ ರಸ್ತೆ ಖಾಲಿ ಹೊಡೆಯುತ್ತಿದೆ.
ಇನ್ನೊಂದೆಡೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್‍ಡೌನ್‍ಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಗಡಿಭಾಗದಲ್ಲಿ ಸಿಬ್ಬಂದಿ ಚೆಕ್ ಪೋಸ್ಟ್ ನಿರ್ಮಾಣ ಮಾಡುತ್ತಿದ್ದಾರೆ. ನೆಲಮಂಗಲ ತಾಲೂಕಿನ ಎರಡು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ತುಮಕೂರು-ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಿಂದ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಹಳೆ ನಿಜಗಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಲ್ಯಾಂಕೋ ಟೋಲ್ ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗುತ್ತಿದೆ. ಇವು 17 ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳಾಗಿವೆ. ಅಧಿಕಾರಿಗಳು ಶಾಮಿಯಾನ ಹಾಕಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮಂಗಳೂರು-ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ 75 ಬಳಿ ಸಹ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗುತ್ತಿದೆ.
ಚಾಮರಾಜನಗರ: ಜಿಲ್ಲೆಯಲ್ಲಿ ದಿನೇದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಐದು ಕಡೆ ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಗಳನ್ನು ಮರು ಸ್ಥಾಪಿಸಲಾಗಿದೆ. ಆದರೆ ಈ ಚೆಕ್ ಪೋಸ್ಟ್ ಗಳು ನಾಮಕಾವಸ್ಥೆ ಎಂಬಂತಿದ್ದು ಇವುಗಳ ಉದ್ದೇಶವೇ ವಿಫಲವಾಗಿದೆ.
ಹೊರ ಜಿಲ್ಲೆಗಳಿಂದ ಅನಾವಶ್ಯಕವಾಗಿ ಬರುವವರನ್ನು ನಿರ್ಬಂಧಿಸುವುದು ಉಳಿದವರನ್ನು ಚೆಕ್ ಪೋಸ್ಟ್ ಗಳಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಿ ತಪಾಸಣೆ ನಡೆಸುವುದು, ರೋಗ ಲಕ್ಷಣ ಇದ್ದರೆ ವಾಪಸ್ ಕಳುಹಿಸುವ ಉದ್ದೇಶದಿಂದ ಈ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಹಾಗೆಯೇ ಚಾಮರಾಜನಗರ ಜಿಲ್ಲೆಯಿಂದ ಹೊರಜಿಲ್ಲೆಗಳಿಗೆ ಕಾರಣವಿಲ್ಲದೆ ಹೋಗುವವರಿಗೆ ನಿರ್ಬಂಧ ಹೇರುವುದು ಈ ಚೆಕ್ ಪೋಸ್ಟ್ ಗಳ ಉದ್ದೇಶವಾಗಿದೆ. ಆದರೆ ಇಲ್ಲಿ ಯಾವುದೇ ತಪಾಸಣೆ ನಡೆಯುತ್ತಿಲ್ಲ. ವಾಹನಗಳು ಚೆಕ್ ಪೋಸ್ಟ್ ಗಳ ಮೂಲಕ ವಾಹನಗಳು ಎಗ್ಗಿಲ್ಲದೆ ಸಂಚರಿಸುತ್ತಿವೆ.
ಪ್ರತಿ ಚೆಕ್ ಪೋಸ್ಟ್ ಗು ಒಬ್ಬ ನೂಡಲ್ ಅಧಿಕಾರಿ ಸೇರಿದಂತೆ ಒಂದು ಪಾಳಿಗೆ ಆರು ಮಂದಿ ಸರ್ಕಾರಿ ನೌಕರರನ್ನು ನಿಯೋಜಿಸಲಾಗಿದೆ. ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ. ಇವರ ಜೊತೆ ಪೊಲೀಸರನ್ನು ಸಹ ನಿಯೋಜಿಸಲಾಗಿದೆ. ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಿಂದ ಚಾಮರಾಜನಗರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಬಾಣಹಳ್ಳಿ, ಹೆಗ್ಗವಾಡಿ, ಹಿರಿಕಾಟಿ, ಟಗರಪುರ ಸತ್ತೇಗಾಲ ಬಳಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು ಇವುಗಳ ಉದ್ದೇಶ ಕಾರ್ಯಗತವಾಗದೆ ನಿಷ್ಪ್ರಯೋಜಕವಾಗಿವೆ.
ಚೆಕ್ ಪೋಸ್ಟ್ ಗಳ ಬಳಿ ಶಾಮಿಯಾನಗಳನ್ನು ಹಾಕಲಾಗಿದೆ. ತಮ್ಮ ಸರದಿ ಬಂದಾಗ ಇಲ್ಲಿಗೆ ಬರುವ ಸರ್ಕಾರಿ ನೌಕರರು ಮತ್ತು ಪೊಲೀಸರು ಶಾಮಿಯಾನದಡಿ ಕುಳಿತು ತಮ್ಮ ಅವಧಿ ಮುಗಿದ ನಂತರ ಹೋಗತೊಡಗಿದ್ದಾರೆ. ಹಾಗಾಗಿ ಯಾವ ಪುರುಷಾರ್ಥಕ್ಕೆ ಈ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ ಎಂಬ ಆರೋಪಗಳು ಕೇಳಿಬರತೊಡಗಿವೆ.
ರಾಯಚೂರು: ಕೊರೊನಾ ಲಾಕ್‍ಡೌನ್ ಮುಂದುವರಿಕೆ ಹಿನ್ನೆಲೆ ಜನರ ಓಡಾಟಕ್ಕೆ ಮತ್ತಷ್ಟು ಬ್ರೇಕ್ ಬಿದ್ದಿದೆ. ಆದರೆ ಅಡ್ಡದಾರಿ ಹಿಡಿದ ಜಿಲ್ಲೆಯ ಕೆಲ ಜನ ನಕಲಿ ಪಾಸ್ ಸೃಷ್ಟಿಸಿಕೊಂಡು ಚೆಕ್ ಪೋಸ್ಟ್, ನಾಕಾಬಂದಿಗಳಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ.
ಅನುಮಾನದ ಮೇಲೆ ಪರಿಶೀಲನೆ ಆರಂಭಿಸಿದ ರಾಯಚೂರು ಪೊಲೀಸರು ನೂರಕ್ಕೂ ಹೆಚ್ಚು ನಕಲಿ ಪಾಸ್ ಜಪ್ತಿ ಮಾಡಿದ್ದಾರೆ. ಅನಾವಶ್ಯಕವಾಗಿ ತಿರುಗಾಡುವವರನ್ನ ಪರಿಶೀಲಿಸಿ ನಕಲಿ ಪಾಸ್ ಗಳನ್ನ ಜಪ್ತಿ ಮಾಡಲಾಗಿದೆ. ಮಾಧ್ಯಮದವರು, ಆರೋಗ್ಯ ಇಲಾಖೆ ಸಿಬ್ಬಂದಿಗಳ ಹೆಸರಲ್ಲಿ ನಕಲಿ ಪಾಸ್ ಗಳನ್ನು ಸೃಷ್ಟಿಸಿಕೊಂಡು ಜನ ಓಡಾಡುತ್ತಿದ್ದರು.
ನಗರದ ಗಂಜ್ ವೃತ್ತದಲ್ಲಿ ಪೊಲೀಸರು ಪರಿಶೀಲನೆ ಮಾಡಿದ್ದು, ಪರಿಶೀಲನೆಯ ವೇಳೆ ಸುಮಾರು ನೂರಕ್ಕೂ ಅಧಿಕ ನಕಲಿ ಪಾಸ್ ಪತ್ತೆಯಾಗಿವೆ. ಮಾರ್ಕೆಟ್ ಯಾರ್ಡ್ ಪೊಲೀಸರು ನಕಲಿ ಪಾಸ್, ಬೈಕ್ ಹಾಗೂ ಕಾರುಗಳನ್ನ ಜಪ್ತಿ ಮಾಡಿದ್ದಾರೆ. ನಕಲಿ ಪಾಸ್ ಸೃಷ್ಟಿಸಿಕೊಂಡು ಅನಗತ್ಯವಾಗಿ ಓಡಾಡುತ್ತಿರುವವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಘಟನೆಯಿಂದ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ಪ್ರತಿಯೊಬ್ಬರ ಪಾಸ್ ಗಳನ್ನು ಪರಿಶೀಲನೆ ಮಾಡಿ ಚೆಕ್ ಪೋಸ್ಟ್ ಸಿಬ್ಬಂದಿಗೆ ಸರಿಯಾಗಿ ಪರಿಶೀಲಿಸುವಂತೆ ಎಚ್ಚರಿಕೆ ನೀಡಿದ್ದಾರೆ.
ಚಾಮರಾಜನಗರ: ಚೆಕ್ಪೋಸ್ಟ್ನಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಆರು ಜನರನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಹೆಗ್ಗವಾಡಿ ಕ್ರಾಸ್ ಚೆಕ್‍ಪೋಸ್ಟ್ ನಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರದೇ ಹಾಗೂ ಪೂರ್ವಾನುಮತಿ ಪಡೆಯದೇ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಹಾದು ಹೋಗಲು ಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಕ್ಕಡಹಳ್ಳಿಯ ಗ್ರಾ.ಪಂ. ಬಿಲ್ ಕಲೆಕ್ಟರ್ ಮಹದೇವಸ್ವಾಮಿ, ನಂಜದೇವನಪುರ ವೃತ್ತದ ಗ್ರಾಮ ಲೆಕ್ಕಿಗ ಸಂತೋಷ್ ಕುಮಾರ್, ತಮ್ಮಡಹಳ್ಳಿ ವೃತ್ತದ ಗ್ರಾಮ ಲೆಕ್ಕಿಗ ಕೆ. ಶ್ರೀಧರ್, ಮುಕ್ಕಡಹಳ್ಳಿ ಗ್ರಾಮ ಪಂಚಾಯತಿಯ ನೀರುಗಂಟಿ ನಂಜುಂಡಸ್ವಾಮಿ, ಕುಲಗಾಣ ವೃತ್ತದ ಲೆಕ್ಕಿಗ ಡಿ.ಜೆ. ಮಹೇಶ್, ಮುಕ್ಕಡಹಳ್ಳಿ ವೃತ್ತದ ಗ್ರಾಮ ಲೆಕ್ಕಿಗ ನಂದೀಶ್ ಆರು ಜನರನ್ನು ಅಮಾನತುಗೊಳಿಸಲಾಗಿದೆ.
ಕೊರೊನಾ ವೈರಸ್ ತಡೆಗಾಗಿ ಹೆಗ್ಗವಾಡಿ ಕ್ರಾಸ್ ನಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿತ್ತು. ಮೊದಲನೇ ಮತ್ತು ಎರಡನೇ ಪಾಳಿಯಲ್ಲಿ ಕಾರ್ಯ ನಿರ್ವಹಿಸಿದ್ದ ಆರು ಮಂದಿ ನೌಕರರು 23 ವಾಹನಗಳನ್ನು ಪರಿಶೀಲನೆ ನಡೆಸದೇ ಬಿಟ್ಟಿದ್ದರು. ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಸರ್ಕಾರದ ಮಾರ್ಗಸೂಚಿ ಅನ್ವಯ ಜೀವನಾವಶ್ಯಕ ವಸ್ತುಗಳನ್ನು ಮಾತ್ರ ಸಾಗಿಸಲು ಅವಕಾಶವಿದೆ. ಆದರೆ ಈ ನೌಕರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾದುಹೋಗಲು ಅವಕಾಶ ಕಲ್ಪಿಸಿದ್ದರಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.