Tag: ಚೂರಲ್ ಮಲೈ

  • Wayanad Landslide : ರಕ್ಷಣಾ ಕಾರ್ಯಾಚರಣೆ ಯಾಕೆ ಕಷ್ಟವಾಗುತ್ತಿದೆ?

    Wayanad Landslide : ರಕ್ಷಣಾ ಕಾರ್ಯಾಚರಣೆ ಯಾಕೆ ಕಷ್ಟವಾಗುತ್ತಿದೆ?

    – ರೋಪ್‌ ವೇ ಬಳಸಿ ಸಂತ್ರಸ್ತರನ್ನು ತಲುಪಿತ್ತಿವೆ ರಕ್ಷಣಾ ತಂಡಗಳು
    – ಕೊಚ್ಚಿ ಹೋಗಿದೆ ನಗರಗಳ ಮಧ್ಯೆ ಇದ್ದ ಏಕೈಕ ಸೇತುವೆ

    ವಯನಾಡು: ಭೀಕರ ಜಲಪ್ರಳಯಕ್ಕೆ 143 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರಿಕೆ ಆಗುತ್ತಲೇ ಇದೆ. ಸೇತುವೆ (Bridge) ಕೊಚ್ಚಿ ಹೋಗಿದ್ದರಿಂದ ಗ್ರಾಮಗಳು ನಡುಗಡ್ಡೆಯಾಗಿವೆ.

    ಭಾರತೀಯ ಸೇನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ಸೇರಿದಂತೆ ಎಲ್ಲಾ ಸರ್ಕಾರಿ ಸಂಸ್ಥೆಗಳು ಒಗ್ಗೂಡಿ ಕಾರ್ಯಾಚರಣೆ ಮಾಡುತ್ತಿದ್ದರೂ ನಡುಗಡ್ಡೆಯಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಲು ಭಾರೀ ಕಷ್ಟವಾಗುತ್ತಿದೆ. ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ಕಾರಣ ಮರದಿಂದ ಮರಕ್ಕೆ ಹಗ್ಗ ಕಟ್ಟಿ ರೋಪ್ ವೇ ನಿರ್ಮಿಸಿ ಆ ರೋಪ್ ವೇ ಮೂಲಕ ಒಂದು ಕಡೆಯಿಂದ ಮತ್ತೊಂದು ಕಡೆಗೆ ಶವ ಸಾಗಿಸಲಾಗುತ್ತಿದೆ.

    ಯಾಕೆ ಕಷ್ಟವಾಗುತ್ತಿದೆ?
    ಮುಂಡಕ್ಕೈ(Mundakkai), ಅಟ್ಟಮಲಾ ನಗರ ಮತ್ತು ಚೂರಲ್ ಮಲೈ (Chooralmala) ನಗರವನ್ನು ಸಂಪರ್ಕಿಸಲು ಇದ್ದ ಏಕೈಕ ದೊಡ್ಡ ಸೇತುವೆ ಕೊಚ್ಚಿ ಹೋಗಿದೆ. ಪರಿಣಾಮ ಈಗ ರಕ್ಷಣಾ ತಂಡಗಳು ರೋಪ್‌ವೇ ಬಳಸಿಕೊಂಡು ಸಂತ್ರಸ್ತರನ್ನು ತಲುಪಿ ರಕ್ಷಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: Wayanad Landslide : ಅರ್ಧ ಸೆಕೆಂಡ್‌ನಲ್ಲಿ ನೂರು ಜನ ಸಮಾಧಿ!

    ಮಂಗಳವಾರ ಬೆಳಗ್ಗೆ ದುರಂತ ನಡೆದ ಬಳಿಕ ಮಂಡಕ್ಕೈಯಲ್ಲಿ ಸಿಲುಕಿದ್ದ ಜನರನ್ನು ತಲುಪಲು 13 ಗಂಟೆ ಬೇಕಾಗಿತ್ತು. ಮೆಪ್ಪಾಡಿ (Meppadi) ಮತ್ತು ಚೂರಲ್ ಮಲೈ ಹೊರ ಜಗತ್ತಿನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು. ಹೆಲಿಕಾಪ್ಟರ್‌ ಬಳಸಿ ಕಾರ್ಯಾಚರಣೆಗೆ ಸೇನೆ ಸಿದ್ಧವಾಗಿದ್ದರೂ ನಿರಂತರ ಮಳೆ ಸುರಿಯುತ್ತಿದೆ. ಕೆಟ್ಟ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆ ದುಸ್ತರವಾಗಿದೆ. ಇದನ್ನೂ ಓದಿ: Wayanad Landslides: ನಾಲ್ವರು ಕನ್ನಡಿಗರು ದುರ್ಮರಣ – ಬೆಂಗಳೂರಿನ ಇಬ್ಬರು ಪ್ರವಾಸಿಗರು ಕಣ್ಮರೆ!

    ಮೆಪ್ಪಾಡಿ ಎಲೆಕ್ಟ್ರಿಕಲ್‌ ಸ್ಟೇಷನ್‌ 3 ಕಿ.ಮೀ ಹೈ ಟೆನ್ಷನ್‌ ಲೈನ್‌, 8 ಕಿ.ಮೀ ಲೋ ಟೆನ್ಷನ್‌ ಲೈನ್‌, 2 ಟ್ರಾನ್ಸ್‌ಫಾರಂಗಳು ನೀರಿನ ಅಬ್ಬರಕ್ಕೆ ಕೊಚ್ಚಿ ಹೋಗಿದೆ. 3 ಟ್ರಾನ್ಸ್‌ಫಾರಂಗಳು ಹಾಳಾಗಿದೆ. ಪಟ್ಟಣದಲ್ಲಿ ವಿದ್ಯುತ್‌ ಸಂಪರ್ಕ ಇಲ್ಲದ ಕಾರಣ ಮೊಬೈಲ್‌ ಮೂಲಕ ಜನರ ಜೊತೆ ಸಂಪರ್ಕ ಸಾಧಿಸಲು ಕಷ್ಟವಾಗುತ್ತಿದೆ.

    ಚೂರಲ್ ಮಲೈ ಸೇತುವೆ ಕಡಿತದಿಂದ ಅಂದಾಜು 500 ಕುಟುಂಬಗಳು ಸಂಪರ್ಕ ಕಡಿತಕೊಂಡಿದೆ ಎಂದು ವರದಿಯಾಗಿದೆ.

  • Wayanad Landslide : ಅರ್ಧ ಸೆಕೆಂಡ್‌ನಲ್ಲಿ ನೂರು ಜನ ಸಮಾಧಿ!

    Wayanad Landslide : ಅರ್ಧ ಸೆಕೆಂಡ್‌ನಲ್ಲಿ ನೂರು ಜನ ಸಮಾಧಿ!

    – ಇಡೀ ಊರಿಗೆ ಊರೇ ಸ್ಮಶಾನ
    – ನೀರಿನಲ್ಲಿ ಕೊಚ್ಚಿ ಹೋಯ್ತು 300ಕ್ಕೂ ಹೆಚ್ಚು ಮನೆಗಳು

    ಕೆಪಿ ನಾಗರಾಜ್‌
    ಮೇಪ್ಪಾಡಿ: ಕೇರಳದ ವಯನಾಡಿನಲ್ಲಿ (Wayanad) ಜಲಪ್ರಳಯ ಉಂಟಾಗಿದೆ. ಇಡೀ ಊರಿಗೆ ಊರೇ ಸ್ಮಶಾನವಾಗಿದೆ. ಮನೆ, ಮಠ, ಜೀವ ಎಲ್ಲವು ಕ್ಷಣಾರ್ಧದಲ್ಲಿ ಸಮಾಧಿಯಾಗಿವೆ. ಇಲ್ಲೊಂದು ಊರು ಇತ್ತಾ? ಇಲ್ಲಿ ನೂರಾರು ಜನರು ಬದುಕಿದ್ರಾ ಎಂಬ ಯಾವ ಕುರುಹು ಸಿಗದಂತೆ ಈ ಪ್ರಳಯ ಕ್ಷಣಾರ್ಧದಲ್ಲಿ ಮಾಡಿಟ್ಟಿದೆ. ರಾತ್ರೋರಾತ್ರಿ ಊರಿನ ಶೇ.50 ರಷ್ಟು ಜನ ಜಲ ಸಮಾಧಿಯಾಗಿದ್ದಾರೆ. ಮನೆ, ತೋಟ, ಶಾಲೆ, ದೇವಸ್ಥಾನ, ಮಸೀದಿ ಗಳು ನೀರಿನಲ್ಲಿ ಹೋಮವಾಗಿ ಹೋಗಿವೆ –

    ಇದು ಕೇರಳದ ವಯನಾಡು ಜಿಲ್ಲೆಯ ಮೇಪ್ಪಾಡಿ (Meppadi) ಪಟ್ಟಣದಿಂದ 8 ಕಿ.ಮೀ ದೂರದಲ್ಲಿ ಮುಂಡಕೈ ಎಂಬ ಬೆಟ್ಟದ ತಪ್ಪಲಿನಲ್ಲಿನ ಚೂರಲ್ ಮಲೈ (Chooralmala) (ಮಲಯಾಳಂನಲ್ಲಿ ಚೂರಲ್ ಅಂದರೆ ಬಿದಿರು ಎಂದರ್ಥ) ಗ್ರಾಮದ ಸ್ಥಿತಿ. ಈ ಗ್ರಾಮದಲ್ಲಿ 500 ಮನೆಗಳಿದ್ದವು. ಗ್ರಾಮಕ್ಕೆ ಹೊಂದಿಕೊಂಡಂತೆ ಚೂರಲ್ ಮಲೈ ಎಂಬ ನದಿ ನಿಧಾನವಾಗಿ ಹರಿಯುತ್ತಿತ್ತು. ಮುಂಡಕೈ ಎಂಬ ಬೆಟ್ಟದಿಂದ ಹರಿಯುವ ನೀರಿನಿಂದ ಚೂರಲ್ ಮಲೈ ನದಿ ಸೃಷ್ಟಿಯಾಗಿ ಹರಿಯುತ್ತದೆ. ಇದರ ವೈಭೋಗ ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಆದರೆ ಈಗ ಅದೇ ನದಿ ಯಮ ಸ್ವರೂಪಿಯಾಗಿ ಇಡೀ ಊರನ್ನೇ ಅಹುತಿ ಪಡೆದಿದೆ. ಇದನ್ನೂ ಓದಿ: Wayanad Landslides: ನಾಲ್ವರು ಕನ್ನಡಿಗರು ದುರ್ಮರಣ – ಬೆಂಗಳೂರಿನ ಇಬ್ಬರು ಪ್ರವಾಸಿಗರು ಕಣ್ಮರೆ!

    ಹೆಚ್ಚು ಕಡಿಮೆ 300 ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. 150 ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ. ಇದರಲ್ಲಿ ಸದ್ಯಕ್ಕೆ 100 ಜನರ ಮೃತದೇಹ ಪತ್ತೆಯಾಗಿವೆ. ಉಳಿದವರು ಬದುಕಿದ್ದಾರಾ ಜಲ ಸಮಾಧಿಯಾಗಿದ್ದಾರಾ ಗೊತ್ತಿಲ್ಲ. ಅಷ್ಟರಮಟ್ಟಿಗೆ ಈ ನದಿ ಊರನ್ನು ತನ್ನ ಒಡಲಲ್ಲಿ ಸೇರಿಸಿಕೊಂಡು ಕೇಕೆ ಹಾಕಿದೆ.

    ಚೂರಲ್ ಮಲೈನಲ್ಲಿ ಇದ್ದವರೆಲ್ಲಾ ಬಹುತೇಕರು ಕೂಲಿ ಕಾರ್ಮಿಕ ವರ್ಗದ ಜನ. ಸುತ್ತಮುತ್ತಲಿನ ಎಸ್ಟೇಟ್ ನೋಡಿಕೊಳ್ಳುತ್ತಾ ಬದುಕು ಕಟ್ಟಿಕೊಂಡಿದ್ದರು. ಇದರಲ್ಲಿ ಶೇ.20 ರಷ್ಟು ಕುಟುಂಬದ ಮನೆಯ ಯುವಕರು ಗಲ್ಫ್‌ ರಾಷ್ಟ್ರಕ್ಕೆ ಕೆಲಸಕ್ಕೆ ಹೋಗಿದ್ದಾರೆ. ಇಲ್ಲಿ ಇದ್ದಿದ್ದು ಇಳಿ ವಯಸ್ಸಿನ ತಂದೆ, ತಾಯಿಗಳು ಮಾತ್ರ! ಕೆಲವರು ಪತ್ನಿ – ಮಕ್ಕಳನ್ನು ಇಲ್ಲೆ ಬಿಟ್ಟು ಗಲ್ಫ್‌ನಲ್ಲಿ ದುಡಿದ ಇವರನ್ನು ಸಾಕುತ್ತಿದ್ದರು.


    ಒಂದರ್ಥದಲ್ಲಿ ಈ ಊರು ಸ್ವರ್ಗ ದಂತಿತ್ತು. ಸುತ್ತು ಬೆಟ್ಟ, ಊರಿನ ಮಧ್ಯ ತಣ್ಣಗೆ ಹರಿಯವ ನದಿ‌. ಮನೆಯ ಮುಂಭಾಗವೆ ಕೆಲಸ. ಬಡತನ ನಿವಾರಣೆಗೆ ಮಗ, ಗಂಡ ದುಬೈನಿಂದ ಕಳಿಸುತ್ತಿದ್ದ ಹಣ! ಇವರ ಬದುಕಿಗೆ ಇಷ್ಟು ಸಾಕಾಗಿತ್ತು. ಊರಿನಿಂದ 8 ಕಿ.ಮೀ ದೂರ ಇರುವ ಮುಪ್ಪಾಡಿ ಎಂಬ ಪಟ್ಟಣದ ಸಹವಾಸವೂ ಬೇಡ ಎಂಬಂತೆ ಇಲ್ಲಿನ ಕುಟುಂಬಗಳು ಬದುಕುತ್ತಿದ್ದವು.

    ಕಳೆದ 15 ದಿನಗಳಿಂದ ಕೇರಳದಲ್ಲಿ ಕುಂಭದ್ರೋಣ ಮಳೆ ಆಗುತ್ತಿದೆ. ಹೀಗಾಗಿ ಚಿಕ್ಕ ನದಿಗಳು ಕೂಡ ಭೋರ್ಗರೆದು ಹರಿಯುತ್ತಿದ್ದವು. ಆದರೂ ಚೂರಲ್ ಮಲೈ ನದಿ ಅಪಾಯದ ಮಟ್ಟ ಮೀರಿರಲಿಲ್ಲ. ಯಾವಾಗಲೂ ಈ ನದಿಗೆ ಸೌಮ್ಯವೇ ಭೂಷಣವಾಗಿತ್ತು. ಹೀಗಾಗಿಯೇ ಈ ಗ್ರಾಮದ ಜನರು ಯಾವ ಆತಂಕವೂ ಇಲ್ಲದೆ ನಿದ್ದೆಗೆ ಜಾರಿದ್ದರು. ಗಲ್ಫ್‌ನಲ್ಲಿರುವ ಈ ಕುಟುಂಬದ ಆಧಾರ ಸ್ಥಂಭಗಳಿಗೂ ಮಳೆ ಹೆಚ್ಚಾಯ್ತು ಈಗ ಹೇಗಪ್ಪಾ ಎಂಬ ಕಿಂಚಿತ್ತೂ ಆತಂಕ ಕೂಡ ಇರಲಿಲ್ಲ.

    ಜುಲೈ 30ರ ನಸುಕಿನ ಜಾವ ನದಿಯ ವರಸೆಯೆ ಬದಲಾಯ್ತು. ದೈವ ಕಳೆಯಲ್ಲಿದ್ದ ನದಿ ಯಮಸ್ವರೂಪಿ ಆಗಿ ಬದಲಾಯ್ತು. ಹೀಗೆ ನದಿ ಯಮಸ್ವರೂಪಿ ಆಗಿ‌ಬದಲಾಗಲು ಕಾರಣ ಮುಂಡಕೈ ಬೆಟ್ಟದಲ್ಲಿ ಉಂಟಾದ ಭಾರೀ ಜಲಸ್ಪೋಟ. ಈ ಸ್ಪೋಟದ ಪರಿಣಾಮ ಚೂರಲ್ ಮಲೈ ನದಿಯ ಒಡಲಿಗೆ ಏಕಾಏಕಿ ಭಾರೀ ಪ್ರಮಾಣದ ನೀರು ಸೇರಿತು. ನೀರಿನ‌ ಜೊತೆಗೆ ಬೆಟ್ಟದಲ್ಲಿನ ಭಾರೀ ಬಂಡೆಗಳು ಗೋಲಿಯಂತೆ ನದಿಯಲ್ಲಿ ಹರಿದು ಬಂದವು. ನದಿಯ ಭೋರ್ಗರೆತದ ಸದ್ದು ಜೋರಾಯ್ತು. ಈ ಸದ್ದೇ ನೂರಾರು ಕನಸುಗಳ ಒದ್ದು ಮಲಗಿದ್ದ ಜನರ ಬದುಕಿಗೆ ಚರಮ ಗೀತೆಯಾಯ್ತು. ಇದನ್ನೂ ಓದಿ: Wayanad Landslides: 93 ಮೃತದೇಹ ಸಿಕ್ಕಿವೆ, ಸಾವಿನ ಸಂಖ್ಯೆ ಹೆಚ್ಚಾಗಬಹುದು – ಸಿಎಂ ಪಿಣರಾಯಿ ಆತಂಕ

    ಈ ಗ್ರಾಮದ ಎತ್ತರದ ಪ್ರದೇಶದಲ್ಲಿದ್ದ ಜನಕ್ಕೆ ಏನಾಗ್ತಿದೆ ಗ್ರಾಮದ ಒಳಗೆ ಅನ್ನೋದು ಗೊತ್ತಾಗುವ ಮುನ್ನವೇ ಅರ್ಧ ಊರು ನೀರು ಪಾಲಾಗಿತ್ತು.‌ ಸಂಬಂಧಿಕರು, ಸ್ನೇಹಿತರು ಎಲ್ಲರೂ ಜಲಸಮಾಧಿ ಆಗಿಬಿಟ್ಟಿದ್ದಾರೆ. ಮಂಗಳವಾರದ ಸೂರ್ಯೋದಯದ ಹೊತ್ತಿಗೆ ಇಡೀ ದೇಶಕ್ಕೆ ಈ ಸುದ್ದಿ ಹಬ್ಬಿತು.