Tag: ಚೂರಲ್ಮಲ

  • ಸೈನಿಕರಿಗೆ ಸೆಲ್ಯೂಟ್‌: ಕೇವಲ 16 ಗಂಟೆಯಲ್ಲಿ 24 ಟನ್‌ ಸಾಮರ್ಥ್ಯದ 190 ಅಡಿ ಉದ್ದದ ಸೇತುವೆ ರೆಡಿ!

    ಸೈನಿಕರಿಗೆ ಸೆಲ್ಯೂಟ್‌: ಕೇವಲ 16 ಗಂಟೆಯಲ್ಲಿ 24 ಟನ್‌ ಸಾಮರ್ಥ್ಯದ 190 ಅಡಿ ಉದ್ದದ ಸೇತುವೆ ರೆಡಿ!

    ವಯನಾಡು: ಭೂಕುಸಿತ ಸಂಭವಿಸಿದ್ದ ಚೂರಲ್ಮಲ (Chooralmala) ಮತ್ತು ಮುಂಡಕ್ಕೈಗೆ (Mundakkai) ಸಂರ್ಪಕ್ಕೆ ಕಲ್ಪಿಸುವ ಚಾರಲ್‌ಮಲೈ ನದಿಗೆ ಅಡ್ಡಲಾಗಿ ಕಟ್ಟಲಾದ 190 ಅಡಿ ಉದ್ದದ ಸೇತುವೆಯನ್ನು ಭಾರತೀಯ ಸೇನೆ ದಾಖಲೆಯ ಕೇವಲ 16 ಗಂಟೆಯಲ್ಲಿ ಪೂರ್ಣಗೊಳಿಸಿದೆ.

    ಜುಲೈ 31 ರ ರಾತ್ರಿ 9 ಗಂಟೆಗೆ ನಿರ್ಮಾಣಕ್ಕೆ ಕೈ ಹಾಕಿದ ಸೇನೆಯ ಎಂಜಿನಿಯರ್‌ಗಳು ಆಗಸ್ಟ್ 01 ರ ಸಂಜೆ 5:30ಕ್ಕೆ ಪೂರ್ಣಗೊಳಿಸಿದರು. ಈ ಸೇತುವೆ 24 ಟನ್‌ ತೂಕದ ಸಾಮರ್ಥ್ಯವನ್ನು ಹೊಂದಿದೆ.  ಇದನ್ನೂ ಓದಿ: Wayanad Landslide | ದಯವಿಟ್ಟು ಅಳಿಯನ ಮೃತ ದೇಹ ಹುಡುಕಿ, ಕೊನೆ ಬಾರಿ ನೋಡ್ತಿವಿ!

    ಎಲ್ಲಾ ರೀತಿಯ ಸವಾಲುಗಳನ್ನು ಮೀರಿ 1 ಮದ್ರಾಸ್ ಎಂಜಿನಿಯರ್ಸ್ ಗ್ರೂಪ್‌ನ ಮೇಜ್ ಸೀತಾ ಶೆಲ್ಕೆ ಮತ್ತು ಅವರ ತಂಡ ಈ ಸೇತುವೆಯನ್ನು ಯಶಸ್ವಿಯಾಗಿ ನಿರ್ಮಿಸಿದೆ. ಇದನ್ನೂ ಓದಿ: 206 ಮಂದಿ ನಾಪತ್ತೆ – ಇಂದಿನಿಂದ 3 ಸಾವಿರ ಮಂದಿಯಿಂದ ಮೃತದೇಹ ಶೋಧ ಕಾರ್ಯ

    ಈ ಸೇತುವೆ ನಿರ್ಮಾಣವನ್ನು ಮಧ್ಯಾಹ್ನ 12 ಗಂಟೆಯ ಒಳಗಡೆ ಪೂರ್ಣಗೊಳಿಸಲು ಸೇನೆ ಟಾರ್ಗೆಟ್‌ ಹಾಕಿಕೊಂಡಿತ್ತು.ಆದರೆ ಭಾರೀ ಮಳೆಯಿಂದ ಕೆಲಸಕ್ಕೆ ಅಡ್ಡಿಯಾಗಿದ್ದರೂ ಸೇನೆಯ ಎಂಜಿನಿಯರ್‌ಗಳು ದಾಖಲೆಯ ಅವಧಿಯಲ್ಲಿ ಸೇತುವೆ ನಿರ್ಮಿಸಿ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದ್ದಾರೆ. ಬೈಲಿ ಸೇತುವೆಯು ತಾತ್ಕಾಲಿಕ ಸೇತುವೆಯಾಗಿದ್ದು ಉಕ್ಕಿನ ತುಂಡುಗಳನ್ನು ಜೋಡಿಸಿ ನಿರ್ಮಾಣ ಮಾಡಲಾಗಿದೆ.

    ಸೇತುವೆ ನಿರ್ಮಾಣಗೊಂಡ ಬಳಿಕ ರಕ್ಷಣಾ ಕಾರ್ಯಾಚರಣೆ ಬಿರುಸು ಪಡೆದಿದೆ. ಜೆಸಿಬಿಗಳು, ಅಂಬುಲೆನ್ಸ್‌ಗಳು, ರಕ್ಷಣಾ ಪಡೆ ಎಲ್ಲರೂ ಈ ಸೇತುವೆಯ ಮೂಲಕವೇ ಸಾಗುತ್ತಿದ್ದಾರೆ.

     

  • 206 ಮಂದಿ ನಾಪತ್ತೆ – ಇಂದಿನಿಂದ 3 ಸಾವಿರ ಮಂದಿಯಿಂದ ಮೃತದೇಹ ಶೋಧ ಕಾರ್ಯ

    206 ಮಂದಿ ನಾಪತ್ತೆ – ಇಂದಿನಿಂದ 3 ಸಾವಿರ ಮಂದಿಯಿಂದ ಮೃತದೇಹ ಶೋಧ ಕಾರ್ಯ

    – ಪಬ್ಲಿಕ್‌ ಟಿವಿಗೆ ಡಿಸಿ ಮೇಘಾಶ್ರೀ ಪ್ರತಿಕ್ರಿಯೆ

    ವಯನಾಡು: ಇಂದಿನಿಂದ 3 ಸಾವಿರ ಮಂದಿಯಿಂದ ಮೃತದೇಹ ಪತ್ತೆ ಮಾಡುವ ಕಾರ್ಯ ನಡೆಯಲಿದೆ ಎಂದು ವಯನಾಡು (Wayanad) ಜಿಲ್ಲಾಧಿಕಾರಿ ಮೇಘಾಶ್ರೀ (Meghashree) ತಿಳಿಸಿದ್ದಾರೆ.

    ಕರ್ನಾಟಕ ಚಿತ್ರದುರ್ಗ ಮೂಲದ ಮೇಘಾಶ್ರೀ ಅವರನ್ನು ಪಬ್ಲಿಕ್‌ ಟಿವಿ ಚೂರಲ್ಮಲದಲ್ಲಿ (Chooralmala) ಮಾತನಾಡಿಸಿದೆ. ಈ ವೇಳೆ ಅವರು, ಸಾವಿನ ಅಧಿಕೃತ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಕ್ಷಣ ಕ್ಷಣಕ್ಜೂ ಪಟ್ಟಿ ಬೆಳೆಯುತ್ತಿದೆ. ಮೃತಪಟ್ಟವರಲ್ಲಿ ಪ್ರವಾಸಿಗರು ಇದ್ದಾರೆ. ಇದುವರೆಗೂ 3 ಸಾವಿರ ಜನರ ರಕ್ಷಣೆ ಮಾಡಲಾಗಿದೆ ಎಂದು ಹೇಳಿದರು.

    ಭೂಕುಸಿತಗೊಂಡ ಜಾಗದಲ್ಲಿ ಎಷ್ಟು ಮನೆಗಳು ಇದ್ದವು ಎನ್ನುವುದರ ಬಗ್ಗೆ ರೇಷನ್‌ ಕಾರ್ಡ್‌, ವೋಟರ್‌ ಐಡಿ ಡೇಟಾದ ಮೂಲಕ ಮಾಹಿತಿಗಳನ್ನು ನಾವು ಈಗ ಸಂಗ್ರಹ ಮಾಡುತ್ತಿದ್ದೇವೆ. ಇದಕ್ಕೆ ಸ್ಥಳೀಯ ಜನರು ಸಹಕಾರ ನೀಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರಿಂದ ಅವರ ಮನೆಯಲ್ಲಿದ್ದವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ 206 ಜನ ನಾಪತ್ತೆಯಾಗಿದ್ದಾರೆ. ಆದರೆ ಇದೇ ಅಧಿಕೃತವಲ್ಲ ಎಂದು ಮಾಹಿತಿ ನೀಡಿದರು.  ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ; ಐವರು ಸಾವು, 50 ಮಂದಿ ಕಣ್ಮರೆ

    ಭೂಕುಸಿತ ನಡೆದ ಜಾಗ ಬಹಳ ದೊಡ್ಡದಿದೆ. ಸೇನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಗ್ನಿಶಾಮಮಕ ದಳ ಸೇರಿದಂತೆ ಎಲ್ಲಾ ತಂಡಗಳನ್ನು ಸೇರಿಸಿದ್ದರೆ ಅಂದಾಜು 3 ಸಾವಿರ ಮಂದಿ ಈಗ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕೆಲಸಕ್ಕೆ ಸ್ಥಳೀಯರ ಅಗತ್ಯ ನೆರವು ಬೇಕು. ಸ್ಥಳೀಯರ ನೆರವು ಇಲ್ಲದೇ ಪತ್ತೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರ ಸಹಕಾರ ಪಡೆದು ಪತ್ತೆ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿದರು.

     

    ಈ ವೇಳೆ ನಾಪತ್ತೆಯಾಗಿರುವ ಪ್ರವಾಸಿಗರ ಬಗ್ಗೆ ಕೇಳಿದ ಪ್ರಶ್ನೆಗೆ, ಪ್ರವಾಸಿಗರು ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಎಷ್ಟು ಮಂದಿ ಬಂದಿದ್ದಾರೆ? ಎಲ್ಲಿ ಅವರು ತಂಗಿದ್ದರು ಎಂಬ ಮಾಹಿತಿಯನ್ನು ನಾವು ಈಗ ಇಲ್ಲಿರುವ ಹೋಮ್‌ಸ್ಟೇಗಳಿಂದ ಸಂಗ್ರಹಿಸುವ ಕೆಲಸ ಮಾಡುತ್ತಿದ್ದೇವೆ ಎಂದು ವಿವರಿಸಿದರು.

    ಮೊದಲ ಭೂಕುಸಿತ ಸಂಭವಿಸಿದ ಒಂದು ಗಂಟೆಯ ಒಳಗಡೆ ನಮ್ಮ ರಕ್ಷಣಾ ತಂಡ ಈ ಸ್ಥಳವನ್ನು ತಲುಪಿತ್ತು. ಸೇತುವೆ ಕೊಚ್ಚಿ ಹೋಗಿದ್ದರಿಂದ ಕೂಡಲೇ ಇನ್ನೊಂದು ಬದಿಯನ್ನು ತಲುಪಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.

  • Wayanad Landslide| ವಯನಾಡು ಜಲಪ್ರಳಯಕ್ಕೆ ಕೊಡಗಿನ ಬಾಲಕ ಬಲಿ

    Wayanad Landslide| ವಯನಾಡು ಜಲಪ್ರಳಯಕ್ಕೆ ಕೊಡಗಿನ ಬಾಲಕ ಬಲಿ

    ಮಡಿಕೇರಿ: ವಯನಾಡು ಜಲಪ್ರಳಯಕ್ಕೆ (Wayanad Landslide) ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಲಕ ಬಲಿಯಾಗಿದ್ದಾನೆ.

    ಗುಹ್ಯ ಗ್ರಾಮದ ರೋಹಿತ್(9) ಮೃತ ಬಾಲಕ. ಪಳ್ಳಕ್ಕರೆ ಗೇಟ್ ಸಮೀಪದ ಖಾಸಗಿ ತೋಟದ ಲೈನ್ ಮನೆಯಲ್ಲಿ ರವಿ ಹಾಗೂ ಕವಿತಾ ದಂಪತಿ ತನ್ನ ಮೂವರು ಗಂಡು ಮಕ್ಕಳೊಂದಿಗೆ ವಾಸವಾಗಿದ್ದರು. ಇದನ್ನೂ ಓದಿ: Wayanad Landslide| ಆರು ಕೈ, ಮೂರು ತಲೆ, ಎಂಟು ಕಾಲು, ಐದು ತಲೆ ಇರದ ದೇಹ!

     

    ಒಂದು ತಿಂಗಳ ಹಿಂದೆ ಕವಿತಾ ತನ್ನ ಕಿರಿಯ ಮಗ ರೋಹಿತ್ ಜೊತೆ ವಯನಾಡುವಿನ ಮೆಪ್ಪಾಡಿಯಲ್ಲಿರುವ ಅಕ್ಕನ ಮನೆಗೆ ತೆರಳಿದ್ದರು. ನಂತರ ರೋಹಿತ್‌ನನ್ನು ಅಕ್ಕನ ಮನೆಯಲ್ಲೇ ಬಿಟ್ಟು ಕ್ಯಾಲಿಕಟ್‌ನಲ್ಲಿರುವ ಮನೆಯೊಂದರ ಕೆಲಸಕ್ಕೆ ಕವಿತಾ ಹೋಗಿದ್ದರು. ಇದನ್ನೂ ಓದಿ: Wayanad Landslide | ದಯವಿಟ್ಟು ಅಳಿಯನ ಮೃತ ದೇಹ ಹುಡುಕಿ, ಕೊನೆ ಬಾರಿ ನೋಡ್ತಿವಿ!

    ವಯನಾಡು ಜಲ ಪ್ರಳಯದಲ್ಲಿ ರೋಹಿತ್ ಈಗ ಜೀವ ಕಳೆದುಕೊಂಡಿದ್ದಾನೆ. ತಂದೆ ರವಿ ಮೆಪ್ಪಾಡಿಗೆ ತೆರಳಿದ್ದಾರೆ. ಮಗ ನಾಪತ್ತೆಯಾಗಿರುವ ಬಗ್ಗೆ ರವಿ ಅವರು ಸಮೀಪದ ನಿವಾಸಿಗಳಿಗೆ ಮಾಹಿತಿ ನೀಡಿ ಹೋಗಿದ್ದಾರೆ ಎಂದು ಸ್ಥಳೀಯರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • Wayanad Landslide | ದಯವಿಟ್ಟು ಅಳಿಯನ ಮೃತ ದೇಹ ಹುಡುಕಿ, ಕೊನೆ ಬಾರಿ ನೋಡ್ತಿವಿ!

    Wayanad Landslide | ದಯವಿಟ್ಟು ಅಳಿಯನ ಮೃತ ದೇಹ ಹುಡುಕಿ, ಕೊನೆ ಬಾರಿ ನೋಡ್ತಿವಿ!

    ವಯನಾಡು: ಪ್ರಕೃತಿ ಮಾತೆಯ ಅರ್ಧ ಸೆಕೆಂಡ್ ಮುನಿಸಿಗೆ (Wayanad Landslide) ನೂರು ಜನರ ಬದುಕು ಮುಗಿದಿದೆ. ನೂರಾರು ಮನೆಗಳಲ್ಲಿ ಕಣ್ಣೀರ ಕೋಡಿ ಹರಿದಿದೆ. ಕೊಚ್ಚಿ ಹೋದ ವ್ಯಕ್ತಿ ಸಂಬಂಧಿಕರು ದಯವಿಟ್ಟು ಮೃತದೇಹ ತೋರಿಸಿ ಕೊನೆಯ ಬಾರಿ ನೋಡುತ್ತೇನೆ ಎಂದು ಸಿಕ್ಕ ಸಿಕ್ಕವರಿಗೆ ಕೈ ಮುಗಿದು ಬೇಡಿಕೊಂಡರೆ ಇನ್ನು ಕೆಲವರು ನದಿ ತೀರದಲ್ಲಿರುವ ಕುಟುಂಬ ಸದಸ್ಯರನ್ನು ಹುಡುಕುತ್ತಿದ್ದಾರೆ.

    ಮಾವನ ಅರಣ್ಯರೋಧನ
    ನನ್ನ ಎರಡು ವರ್ಷದ ಅಳಿಯನ ಮೃತ ದೇಹವನ್ನು ದಯವಿಟ್ಟು ಕೊಡಿಸಿ ಅಂತಾ ಮಾವನ ಕಣ್ಣೀರು ಸುರಿಸುತ್ತಿದ್ದಾರೆ. ಇದು ಮಂಡ್ಯ (Mandya) ಜಿಲ್ಲೆಯ ಕೆ.ಆರ್. ಪೇಟೆಯ ಸಿದ್ದೇಶ್ ಅವರ ಅರಣ್ಯರೋದನ.  ಇದನ್ನೂ ಓದಿ: Wayanad Landslide: 6 ತಿಂಗಳ ಹಿಂದೆ ಗೃಹಪ್ರವೇಶ, ಈಗ ಆ ಮನೆ ಸಮೇತ ಜಲ ಸಮಾಧಿ!

    ನನ್ನ ಅಳಿಯನನ್ನು ಹುಡುಕಿಕೊಡಿ. ಕೊನೆ ಪಕ್ಷ ಅವನ ಮೃತ ದೇಹವಾದರೂ ಕೊಡಿ. ಕಣ್ಣು ತುಂಬಿಕೊಂಡು ಮಣ್ಣು ಮಾಡುತ್ತೇವೆ ಎಂದು ಮೆಪ್ಪಾಡಿಯಲ್ಲಿ ಸಿಕ್ಕ ಸಿಕ್ಕವರ ಕೈ ಮುಗಿಯುತ್ತಿದ್ದಾರೆ. ಸಿದ್ದೇಶ್‌ ತಮ್ಮ ತಂಗಿಯನ್ನು ಮಂಡಕೈ ಗ್ರಾಮದ ಅನಿಲ್‌ ಅವರಿಗೆ ಮದುವೆ ಮಾಡಿಕೊಟ್ಟಿದ್ದರು.

    ಅನಿಲ್ ಯುರೋಪ್‌ನಲ್ಲಿ ಕೆಲಸ ಮಾಡುತ್ತಿದ್ದು ರಜೆ ಮೇಲೆ ಊರಿಗೆ ಬಂದಿದ್ದರು. ಜಲಪ್ರಳಯದಲ್ಲಿ ಅನಿಲ್ ಅವರಿಗೆ ಗಂಭೀರ ಗಾಯವಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಇವರ ತಾಯಿ ಹಾಗೂ ಎರಡು ವರ್ಷದ ಮಗ ನೀರು ಪಾಲಾಗಿದ್ದಾರೆ. ತನ್ನ ತಾಯಿಯ ಕೈಹಿಡಿದು ಮಲಗಿದ್ದ ಮಗು ಯಾವ ಕ್ಷಣದಲ್ಲಿ ಕೈ ಜಾರಿತೋ ಗೊತ್ತೇ ಆಗಿಲ್ಲ. ಮಗು ಕೆಸರಲ್ಲಿ ಮುಳುಗಿದೆ. ಇದನ್ನೂ ಓದಿ: Wayanad Landslide| ಆರು ಕೈ, ಮೂರು ತಲೆ, ಎಂಟು ಕಾಲು, ಐದು ತಲೆ ಇರದ ದೇಹ!

    ತನ್ನವರ ಹುಡುಕುತ್ತಾ ನದಿ ತೀರ ಅಲೆಯುತ್ತಿದ್ದಾನೆ ಮೈಸೂರಿಗ
    ಜಲಪ್ರಳಯದಲ್ಲಿ ಅಕ್ಷರಶಃ ಕೊಚ್ಚಿ ಹೋದ ಚೂರಲ್ಮಲದ (Chooralmala)ಮೈಸೂರು ಭಾಗದ ಒಂದು ದೊಡ್ಡ ಕುಟುಂಬ ವಾಸವಿತ್ತು. ಮೈಸೂರಿನ ಹುಣಸೂರು ಮೂಲದ ರವಿ 40 ವರ್ಷದ ಹಿಂದೆ ಈ ಪ್ರದೇಶಕ್ಕೆ ಪ್ರವಾಸ ಬಂದಿದ್ದರು. ಈ ಸ್ಥಳ ಇಷ್ಟವಾಗಿ ಈಗ ಇಲ್ಲೇ ನೆಲೆಸಿದ್ದಾರೆ. ಇವರ ಜೊತೆ ಇವರು ಸಂಬಂಧಿಗಳು ಬಂದು ದೊಡ್ಡ ಕುಟುಂಬವೇ ಆಗಿದೆ‌. ಈಗ ಇವರು ಅಪ್ಪಟ ಕೇರಳಿಗರೇ ಆಗಿದ್ದಾರೆ. ಈಗ ಈ ಕುಟುಂಬದ 11 ಮಂದಿ ನಾಪತ್ತೆಯಾಗಿದ್ದಾರೆ.

     

    ರವಿ ಅವರು ಚೂರಲ್ಮಲ ಎತ್ತರದ ಪ್ರದೇಶದಲ್ಲಿ ವಾಸವಾಗಿರುವ ಕಾರಣ ಬಚಾವ್ ಆಗಿದ್ದಾರೆ. ಆದರೆ ಕುಟುಂಬದ 11 ಜನರ ನಾಪತ್ತೆಯಿಂದ ರವಿ ಈಗ ಕಂಗಾಲಾಗಿದ್ದಾರೆ. ಕೋಲು ಹಿಡಿದುಕೊಂಡು ಒಬ್ಬರೇ ನದಿ ತೀರದಲ್ಲಿ ತಮ್ಮವರಿಗೆ ಹುಡುಕಾಟ ಮಾಡುತ್ತಿದ್ದಾರೆ. ನಮ್ಮವರು ಸತ್ತಿದ್ದಾರೆ ಅನ್ನೋದು ನನಗೆ ಗೊತ್ತಿದೆ. ಶವ ಹುಡುಕುತ್ತಿದ್ದೇನೆ. ಶವವಾದರೂ ಸಿಕ್ಕರೇ ಅಂತ್ಯಸಂಸ್ಕಾರವಾದರೂ ಮಾಡುತ್ತೇನೆ ಎಂದು ಮಡುಗಟ್ಟಿದ ದುಃಖವನ್ನು ತಡೆದುಕೊಂಡು ಅಚ್ಚ ಕನ್ನಡದಲ್ಲಿ ನೋವು ಹೇಳುತ್ತಿದ್ದಾರೆ. ಆದರೆ ಈ ನೋವಿಗೆ ಕಿವಿಯಾಗುವವರೇ ಇಲ್ಲ. ಏಕೆಂದರೆ ಮೃತದೇಹ ಸಿಕ್ಕರೇ ಪುಣ್ಯ. ಸಿಗದಿದ್ದರೆ ಭೂಮಿ ತಾಯಿಗೆ ಅರ್ಪಣೆ ಎನ್ನುವ ತೀರ್ಮಾನಕ್ಕೆ ಬಹಳಷ್ಟು ಜನ ಬಂದಿದ್ದಾರೆ. ಇದೇ ವಾಸ್ತವದ ಕಠೋರ ಸತ್ಯ.

  • Wayanad Landslide| ಆರು ಕೈ, ಮೂರು ತಲೆ, ಎಂಟು ಕಾಲು, ಐದು ತಲೆ ಇರದ ದೇಹ!

    Wayanad Landslide| ಆರು ಕೈ, ಮೂರು ತಲೆ, ಎಂಟು ಕಾಲು, ಐದು ತಲೆ ಇರದ ದೇಹ!

    ವಯನಾಡು: ಜಲಸಮಾಧಿಯಾದವರ ಮನ ಕಲುಕುವ ಕಥೆಗಳನ್ನು ಕೇಳಿದರೆ ಎಂಥವರ ಕಣ್ಣನ್ನು ಒದ್ದೆ ಮಾಡುತ್ತಿವೆ. ಪ್ರಕೃತಿ ಮಾತೆಯ ಅರ್ಧ ಸೆಕೆಂಡ್ ಮುನಿಸಿಗೆ ನೂರು ಜನರ ಬದುಕು ಮುಗಿದಿದೆ. ನೂರಾರು ಮನೆಗಳಲ್ಲಿ ಕಣ್ಣೀರ ಕೋಡಿ ಹರಿದಿದೆ.

    ಮಲ್ಪಾಡಿಯಲ್ಲಿ ಇರುವ ಸರ್ಕಾರಿ ಆಸ್ಪತ್ರೆಯ ಶವಾಗಾರವನ್ನು ತಾತ್ಕಾಲಿಕವಾಗಿ ಸಭಾಂಗಣಕ್ಕೆ ಶಿಫ್ಟ್ ಮಾಡಲಾಗಿದೆ. ಏಕೆಂದರೆ ನೂರು ನೂರು ಹೆಣದ ರಾಶಿಗೆ ಜಾಗ ಬೇಕಲ್ವಾ? ತಮ್ಮವರ ಹೆಣ ಕಂಡ ಕೂಡಲೇ ಕೆಲವರು ಮುಗಿಲು ಮುಟ್ಟುವ ರೀತಿ ಅಳುತ್ತಾರೆ. ಅಂಬುಲೆನ್ಸ್‌ನಲ್ಲಿ ಬಂದ ಹೆಣ ತಮ್ಮವರದಲ್ಲ ಎಂದಾಗ ಅಯ್ಯೋ ನಮ್ಮವರ ಹೆಣ ಸಿಗುತ್ತೋ ಇಲ್ವೋ ಅಂತಾ ಒದ್ದಾಡುತ್ತಾರೆ. ಆದರೆ ಈ ಎರಡು ಸ್ಥಿತಿ ಇರದ ಒಂದಷ್ಟು ದೇಹಗಳು ಶವಾಗಾರ ಸೇರಿವೆ.

    ದೇಹವೇ ಇರದ ಆರು ಬರೀ ಕೈಗಳು ಇದುವರೆಗೆ ಸಿಕ್ಕಿದೆ. ಇದು ಯಾರ ಯಾರ ಕೈ? ಪತ್ತೆ ಮಾಡುವುದು ಹೇಗೆ? ಇನ್ನೂ ಮೂರು ತಲೆ ಸಿಕ್ಕಿವೆ. ಆದರೆ ಮುಖದ ಗುರುತೇ ಸಿಗದ ಮಟ್ಟಕ್ಕೆ ಮುಖ ಜಜ್ಜಿವೆ. ಇವು ಯಾರ ತಲೆ ಅಂತಾ ಯಾರಿಗೆ ಗೊತ್ತಾಗುತ್ತೆ? ಹೀಗೆ ಎಂಟು ಪ್ರತ್ಯೇಕವಾದ ಕಾಲು ಸಿಕ್ಕಿವೆ. ಐದು ತಲೆ ಇರದ ಅರ್ಧ ದೇಹ ಸಿಕ್ಕಿವೆ. ಎಲ್ಲವನ್ನೂ ತಂದು ಎನ್‌ಡಿಆರ್‌ಎಫ್‌ನವರು ಶವಗಾರ ಸೇರಿಸಿದ್ದಾರೆ. ಇದನ್ನು ನೋಡುತ್ತಿದ್ದರೆ ವಿಧಿ ಎಂಥಾ ಕ್ರೂರಿ ಅನ್ನಿಸುತ್ತೆ. ಇದನ್ನೂ ಓದಿ: Wayanad Landslide: 6 ತಿಂಗಳ ಹಿಂದೆ ಗೃಹಪ್ರವೇಶ, ಈಗ ಆ ಮನೆ ಸಮೇತ ಜಲ ಸಮಾಧಿ!

    ಬಹುತೇಕರದು ಸ್ವಂತ ಮನೆ. ಮನೆ ಜೊತೆಯೆ ಸಮಾಧಿಯಾದ್ರು!
    ಚೂರಲ್ಮಲ ಊರಿನ ನಸೀಬು ಹೀಗಿತ್ತೇನೋ. ಸಮೃದ್ಧ ಊರು ಎಂಬ ಪಟ್ಟ. ಜೊತೆಗೆ ಇಲ್ಲಿದ್ದವರೆಲ್ಲ ಬಡತನದಲ್ಲೇ ಸುಖ ಉಂಡವರು. ಎಲ್ಲಾದಕ್ಕಿಂತಾ ಹೆಚ್ಚಾಗಿ ಶೇ.98 ಭಾಗದ ಜನ ಇಲ್ಲಿ ತಮ್ಮ ಸ್ವಂತ ಮನೆಗಳಲ್ಲೇ ವಾಸವಿದ್ದರು. ಇನ್ನೊಂದು ಎರಡು ವರ್ಷ ಕಳೆದಿದ್ದರೆ ಶೇ.100ಕ್ಕೆ 100 ರಷ್ಟು ಜನ ಸ್ವಂತ ಮನೆ ಹೊಂದಿರುತ್ತಿದ್ದರು. ಇದನ್ನೂ ಓದಿ: ತುಂಗಭದ್ರಾ ಜಲಾಶಯದಿಂದ 1.58 ಲಕ್ಷ ಕ್ಯುಸೆಕ್‌ ನೀರು ನದಿಗೆ

    ಐಷಾರಾಮಿ ಅಲ್ಲದಿದ್ದರೂ ತಮ್ಮದು ಅಂತಾ ಒಂದು ಸ್ವಂತ ನೆಲೆ ಕಟ್ಟಿಕೊಂಡವರು ಚೂರಲ್ಮಲ ಗ್ರಾಮದ ಜನ. ಗ್ರಾಮದಲ್ಲಿ ಕಟ್ಟಿದ ಐದು ಮನೆಗಳಿಗೆ ಇನ್ನು ಒಂದು ಎರಡು ತಿಂಗಳಲ್ಲಿ ಗೃಹಪ್ರವೇಶ ಆಗಬೇಕಿತ್ತು. ಈಗ ಇದರಲ್ಲಿ ಬಹುತೇಕರು ತಮ್ಮ ಸ್ವಂತ ಮನೆಗಳ ಜೊತೆಗೆ ಸಮಾಧಿಯಾಗಿದ್ದಾರೆ. ಹೋಗುವಾಗ ಏನಾದರೂ ಹೊತ್ತುಕೊಂಡು ಹೋಗ್ತಿಯಾ ಅಂತಾ ಕೆಲವರು ಹಾಗಾಗ ಹೇಳುತ್ತಿರುತ್ತಾರೆ. ನೋಡಿ ಇಲ್ಲಿ ಕಟ್ಟಿದ ಮನೆ, ಇಷ್ಟ ಪಟ್ಟು ಖರೀದಿಸಿದ ವಸ್ತುಗಳವನ್ನು ಹೊತ್ತುಕೊಂಡೇ ಹೋಗಿದ್ದಾರೆ.

  • Wayanad Landslide| 6 ತಿಂಗಳ ಹಿಂದೆ ಗೃಹಪ್ರವೇಶ, ಈಗ ಆ ಮನೆ ಸಮೇತ ಜಲ ಸಮಾಧಿ!

    Wayanad Landslide| 6 ತಿಂಗಳ ಹಿಂದೆ ಗೃಹಪ್ರವೇಶ, ಈಗ ಆ ಮನೆ ಸಮೇತ ಜಲ ಸಮಾಧಿ!

    ವಯನಾಡು: ಎತ್ತ ನೋಡಿದರೂ ಹೆಣದ ರಾಶಿ. ಪ್ರತಿ ಮನೆಯಲ್ಲೂ ಸೂತಕ. ಎತ್ತ ಕಿವಿ ಇಟ್ಟರೂ ಆಕ್ರಂದನದ್ದೇ ಸದ್ದು! ಇದರ ನಡುವೆ ಜಲಸಮಾಧಿಯಾದವರ ಮನ ಕಲುಕುವ ಕಥೆಗಳು. ಎಂಥವರ ಕಣ್ಣನ್ನು ಒದ್ದೆ ಮಾಡುತ್ತಿವೆ. ಪ್ರಕೃತಿ ಮಾತೆಯ ಅರ್ಧ ಸೆಕೆಂಡ್ ಮುನಿಸಿಗೆ ನೂರು ಜನರ ಬದುಕು ಮುಗಿದಿದೆ. ನೂರಾರು ಮನೆಗಳಲ್ಲಿ ಕಣ್ಣೀರ ಕೋಡಿ ಹರಿದಿದೆ. ಒಂದೊಂದು ಮನೆಯಲ್ಲಿ ಒಂದೊಂದು ಕರುಳು ಹಿಂಡುವ ಕಥೆ‌. ಸತ್ತ ಕೆಲವರ ಬಗ್ಗೆ ಕಥೆಗಳೇ ಕೇಳುತ್ತಿಲ್ಲ. ಏಕೆಂದರೆ ಅವರ ಕಥೆ ಕೇಳಲು ಅವರ ಕುಟುಂಬದವರು ಯಾರು ಬದುಕಿಲ್ಲ- ಹೀಗಿದೆ ದೇವರ ನಾಡು ಕೇರಳದ ಸದ್ಯದ ಸ್ಥಿತಿ.

    ಆ ದಂಪತಿ ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದರು. ಮಕ್ಕಳಿರಲಿಲ್ಲ. ಹೆಚ್ಚು ಕೂಲಿ ಒಂದಿಷ್ಟು ಹೆಚ್ಚಿನ ಸೌಕರ್ಯ ಸಿಗುತ್ತೆ ಅಂತಾ ಹುಟ್ಟೂರು ಬಿಟ್ಟು ಜಲಪ್ರಳಯವಾದ ವಯನಾಡಿನ (Wayanad) ಚೂರಲ್ಮಲಕ್ಕೆ (Chooralmala) ಬಂದು ನೆಲೆಸಿದ್ದರು. ಪತಿ ಕಾರ್ಪೆಂಟರ್, ಪತ್ನಿ ಟೀ ಎಸ್ಟೇಟ್‌ನಲ್ಲಿ ಕೂಲಿ ಕೆಲಸ. ಇಬ್ಬರು ದುಡಿದ ಹಣದಲ್ಲಿ ಒಂದಿಷ್ಟು ಉಳಿತಾಯ ಮಾಡಿ ಚೂರಲ್ಮಲದಲ್ಲಿ ಸ್ವಂತ ಮನೆ ಕಟ್ಟಿಸಿದ್ರು. 6 ತಿಂಗಳ ಹಿಂದೆ ತಮ್ಮ ಬಂಧು ಬಾಂಧವರ ಕರೆಸಿ ಗೃಹ ಪ್ರವೇಶ ಮಾಡಿದ್ದರು. ಈಗ ಆ ಮನೆಯ ಜೊತೆಯೇ ಜಲಸಮಾಧಿ ಆಗಿದ್ದಾರೆ. ಇದನ್ನೂ ಓದಿ: ಮುಡಾ ಸೈಟ್ ಹಗರಣ ಕೇಸ್; ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರಿಂದ ನೋಟಿಸ್

    ಈ ದಂಪತಿಗಳ ಹೆಸರು ರಾಜೇಂದ್ರ ಮತ್ತು ರತ್ನಮ್ಮ. ಇವರು ಮೂಲತಃ ಚಾಮರಾಜನಗರ ಜಿಲ್ಲೆಯ ಐರಸವಾಡಿ ಗ್ರಾಮದವರು. ಊರಲ್ಲೂ ಸ್ವಲ್ಪ ಜಮೀನಿದೆ. ನೆಂಟರಿಷ್ಟರೆಲ್ಲಾ ಊರಲ್ಲೇ ಇದ್ದಾರೆ. ಆದರೆ ಹೆಚ್ಚು ಕೂಲಿ ಸಿಗುತ್ತೆ, ಕಾಫಿ ಎಸ್ಟೇಟ್‌ನಲ್ಲಿ ಒಂದಿಷ್ಟು ಸವಲತ್ತು ಜಾಸ್ತಿ ಸಿಗುತ್ತದೆ ಎಂದು ಚೂರಲ್ಮಲಕ್ಕೆ ಬಂದು ನೆಲೆಸಿದ್ದರು. ಆದರೆ ಈಗ ತಮ್ಮ ಹೊಸ ಮನೆಯ ಜೊತೆಯೆ ಜಲಸಮಾಧಿ ಆಗಿದ್ದಾರೆ.  ಇದನ್ನೂ ಓದಿ: ಗುಡ್ಡ ಕುಸಿತದಿಂದ ಶಿರಾಡಿ ಘಾಟ್ ಮತ್ತೆ ಬಂದ್ – ಕುಸಿತದ ರಭಸಕ್ಕೆ ಕಂಟೇನರ್ ಪಲ್ಟಿ

    ಜಲಸಮಾಧಿಯಾದ ಕನ್ನಡಿಗರೆಲ್ಲಾ ಕೂಲಿ ಕಾರ್ಮಿಕರು!
    ಜಲಪ್ರಳಯದಲ್ಲಿ ಕನ್ನಡಿಗರ (Kannadigas) ಸಾವಿನ ಪಟ್ಟಿ ಕೂಡ ದೊಡ್ಡದಾಗ್ತಿದೆ. ಇವರೆಲ್ಲಾ ಯಾಕೆ ಇಲ್ಲಿಗೆ ಬಂದಿದ್ರು, ಇಲ್ಲಿ ಬಂದು ಬದುಕು ಕಟ್ಟಿಕೊಳ್ಳುವಂತಹ ಅನಿವಾರ್ಯತೆ ಏನಿದೆ? ಕೇರಳದವರೇ (Kerala) ನಮ್ಮಲ್ಲಿಗೆ  ಬಂದು ಬದುಕು ಕಟ್ಟಿಕೊಳ್ಳುವಾಗ ನಮ್ಮವರೇ ಯಾಕೆ ಇಲ್ಲಿಗೆ ಬಂದರು ಅಂತಾ ಕೊಂಚ ಕುತೂಹಲದಿಂದ ನೋಡಿದರೆ ನಮಗೆ ಕಾಣುವುದು ಎಸ್ಟೇಟ್ ಕೂಲಿ!

     

    ಹೀಗೆ ಜಲಸಮಾಧಿಯಾದ ಬಹುತೇಕರು ಕೆಳ ಮಧ್ಯಮ ವರ್ಗದವರು. ಹಳೆ ಮೈಸೂರು ಭಾಗದವರು. ನಮ್ಮಲ್ಲಿ ಕೂಲಿ ಕಡಿಮೆ. ಅದಲ್ಲದೆ ಕೂಲಿ ಕಾರ್ಮಿಕರಿಗೆ ಕ್ವಾಟರ್ಸ್ ವ್ಯವಸ್ಥೆ ಇರಲ್ಲ. ಆದರೆ ಇಲ್ಲಿ ನಮ್ಮಲಿಗೆ ಹೋಲಿಸಿದರೆ ಟೀ ಎಸ್ಟೇಟ್ ಗಳಲ್ಲಿ ಹೆಚ್ಚು ಕೂಲಿ ಸಿಗುತ್ತೆ. ಜೊತೆಗೆ ಇತರೇ ಸೌಕರ್ಯ ಬೇರೆ. ಹೀಗಾಗಿ ಇಲ್ಲಿಗೆ ಬಂದವರ ಸಂಖ್ಯೆ ಹೆಚ್ಚು ಬದುಕು ಕಟ್ಟಿಕೊಳ್ಳಲು ಬಂದವರು ಸುಖ ನಿದ್ರೆಯಲ್ಲೇ ತಮ್ಮ ಬದುಕಿನ ಯಾತ್ರೆ ಮುಗಿಸಿದ್ದಾರೆ.

     

  • Wayanad Landslide |ಮೃತಪಟ್ಟ ಕನ್ನಡಿಗರಿಗೆ ತಲಾ 5 ಲಕ್ಷ ರೂ. ಪರಿಹಾರ : ಸಿಎಂ ಘೋಷಣೆ

    Wayanad Landslide |ಮೃತಪಟ್ಟ ಕನ್ನಡಿಗರಿಗೆ ತಲಾ 5 ಲಕ್ಷ ರೂ. ಪರಿಹಾರ : ಸಿಎಂ ಘೋಷಣೆ

    ನವದೆಹಲಿ: ಕೇರಳದ ವಯನಾಡು ದುರಂತದಲ್ಲಿ ಮೃತಪಟ್ಟ ಕನ್ನಡಿಗರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಘೋಷಣೆ ಮಾಡಿದ್ದಾರೆ. ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರಕಟಿಸಿದ್ದಾರೆ. ಇದೇ ವೇಳೆ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

    ಈಗಾಗಲೇ ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಎನ್.ಡಿ.ಆರ್.ಎಫ್ ತಂಡ ಮತ್ತು ಸೇನಾ ಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ರಕ್ಷಣಾ ಕಾರ್ಯದ ಉಸ್ತುವಾರಿಗಾಗಿ ಸಚಿವರಾದ ಸಂತೋಷ್ ಲಾಡ್ ಅವರನ್ನು ವಯನಾಡಿಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: Wayanad Landslide| ಪಾಪುವನ್ನು ಹಿಡಿಯುವಷ್ಟರಲ್ಲಿ ಗೋಡೆ ಕುಸಿದು ಬಿತ್ತು: ಕಣ್ಣೀರಿಟ್ಟ ತಾಯಿ

    ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇದೊಂದು ಅತ್ಯಂತ ಘೋರ ದುರಂತ, ಈ ದುರಂತದಲ್ಲಿ ಕನ್ನಡಿಗರು ಪ್ರಾಣ ಕಳೆದುಕೊಂಡದ್ದು ಮತ್ತಷ್ಟು ನೋವುಂಟು ಮಾಡಿದೆ ಅಂತಾ ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ: Wayanad Landslide | ಒಂದೇ ಕುಟುಂಬದ 9 ಜನ ಕನ್ನಡಿಗರು ನಾಪತ್ತೆ – ಕಣ್ಣೀರಿಟ್ಟ ಸಂಬಂಧಿಕ

    ಸಂತ್ರಸ್ತರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ನಮ್ಮ ಸರ್ಕಾರ ಶಕ್ತಿಮೀರಿ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.

     

  • Wayanad Landslide | ಒಂದೇ ಕುಟುಂಬದ 9 ಜನ ಕನ್ನಡಿಗರು ನಾಪತ್ತೆ – ಕಣ್ಣೀರಿಟ್ಟ ಸಂಬಂಧಿಕ

    Wayanad Landslide | ಒಂದೇ ಕುಟುಂಬದ 9 ಜನ ಕನ್ನಡಿಗರು ನಾಪತ್ತೆ – ಕಣ್ಣೀರಿಟ್ಟ ಸಂಬಂಧಿಕ

    – ಕೊಚ್ಚಿಕೊಂಡು ಹೋಯ್ತು ಎಸ್ಟೇಟ್ ಕ್ವಾಟರ್ಸ್
    – ನಾಪತ್ತೆಯಾದವರ ಸಂಬಂಧಿಕನ ಮನಕಲಕುವ ಮಾತುಗಳು

    ವಯನಾಡು: ಭೀಕರ ಭೂಕುಸಿತ ಸಂಭವಿಸಿದ್ದರಿಂದ ಚೂರಲ್ಮಲ (Chooralmala) ಎಸ್ಟೇಟ್ ಕ್ವಾಟರ್ಸ್ ಕೊಚ್ಚಿಕೊಂಡು ಹೋಗಿ 9 ಜನ ಕನ್ನಡಿಗರು ನಾಪತ್ತೆಯಗಿದ್ದಾರೆ.

    ಗುರುಮಲ್ಲಣ್ಣ (60), ಸಾವಿತ್ರಿ (54), ಸಬೀತಾ (43), ಶಿವಣ್ಣ (50), ಅಪ್ಪಣ್ಣ (39), ಅಶ್ವಿನ್ (13), ಜೀತು (11), ದಿವ್ಯ (35), ರತ್ನ (48) ಜಲಪ್ರಳಯದಲ್ಲಿ ನಾಪತ್ತೆಯಾಗಿರುವ ಕನ್ನಡಿಗರು.

    ಘಟನೆಯಲ್ಲಿ 11 ಜನ ನಾಪತ್ತೆಯಾಗಿದ್ದು, ಇಬ್ಬರ ಮೃತದೇಹ ಸಿಕ್ಕಿದೆ. ಇನ್ನೂ 9 ಜನರ ಮೃತದೇಹ ಸಿಗಲಿಲ್ಲ ಎಂದು ತಿಳಿದು ಬಂದಿದೆ. ಇದನ್ನೂ ಓದಿ: Wayanad Landslide : ಅರ್ಧ ಸೆಕೆಂಡ್‌ನಲ್ಲಿ ನೂರು ಜನ ಸಮಾಧಿ!

    ನಾಪತ್ತೆಯಾದವರ ಸಂಬಂಧಿಕ ರವಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ಏನ್ ಮಾಡುವುದು ಹುಡುಕುವುದಕ್ಕಂತೂ ಆಗುವುದಿಲ್ಲ. ನೀರಲ್ಲಿ ಯಾರಿಗೂ ಇಳಿಯುವುದಕ್ಕೆ ಆಗುತ್ತಿಲ್ಲ. ಅವರನ್ನು ಹುಡುಕಬೇಕೆಂದರೆ 90 ಕಿ.ಮೀ. ದೂರ ಹೋಗಿ ಹುಡುಕಬೇಕು. ಆದರೆ ಅವರು ಅಲ್ಲಿ ಇದ್ದಾರೋ, ಇಲ್ವೋ ಗೊತ್ತಿಲ್ಲ? ಇವಾಗ 30-40 ಶವಗಳು ಸಿಕ್ಕಿದ್ದಾವೆ ಎಂದು ಹೇಳುತ್ತಿದ್ದಾರೆ ನೋಡಬೇಕು ಎಂದು ತನ್ನ ಅಸಾಹಾಯಕತೆಯನ್ನು ತೊಡಿಕೊಂಡಿದ್ದಾರೆ. ಇದನ್ನೂ ಓದಿ: Wayanad Landslide| ಪಾಪುವನ್ನು ಹಿಡಿಯುವಷ್ಟರಲ್ಲಿ ಗೋಡೆ ಕುಸಿದು ಬಿತ್ತು: ಕಣ್ಣೀರಿಟ್ಟ ತಾಯಿ

    ನಾವು ಸರಕಾರದಿಂದ ಕೊಡಿಸಲಾಗಿದ್ದ ಮನೆಯಲ್ಲಿದ್ದಿವಿ. ನಮ್ಮ ಸಂಬಂಧಿಕರು ಅವರಿದ್ದ ಸ್ವಂತ ಮನೆಯಿಂದ ಕೊಚ್ಚಿಕೊಂಡು ಹೋಗಿದ್ದಾರೆ. ಮನೆಯಲ್ಲಿರುವುದರಿಂದ ಹೀಗೆ ಆಗುವುದಿಲ್ಲವೆಂದು ನಂಬಿ ಅವರು ಅಲ್ಲೇ ಉಳಿದುಕೊಂಡಿದ್ದರು. ಹೀಗೆ ಆಗುತ್ತೆ ಎಂದು ಯಾರು ತಿಳಿದುಕೊಂಡಿಲ್ಲ. ಇವಾಗ ಹೋದವರು ನಮ್ಮ ನಾದಿನಿಯ ಕುಟುಂಬದವರು ಎಂದು ಹೇಳುತ್ತಾ, ನಮ್ಮ ದೊಡ್ಡಪ್ಪನ ಮಗಳು ಮತ್ತು ಭಾವನಿಗೆ ಆಶ್ರಮಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ದುಃಖತಪ್ತರಾಗಿ ತಿಳಿಸಿದರು.

    2018-19 ರಲ್ಲಿಯೂ ಕೂಡ ಇಲ್ಲಿ ಸ್ವಲ್ಪ ಭೂಕುಸಿತ ಸಂಭವಿಸಿತ್ತು. ಅದರ ಅನುಭವ ನಮಗಿದೆ. ಆ ಹೆದರಿಕೆಯಿಂದ ಜನರು ಬೇರೆ ಕಡೆಗೆ ಸ್ಥಳಾಂತರ ಆಗಿದ್ದರು. ನಾವು ಬಂದಾಗ ಹೆಚ್ಚು ಜನ ಕನ್ನಡಿಗರು ಇಲ್ಲಿ ಇದ್ದರು. ಹೀಗೆ ಆಗಿದ್ದರಿಂದ ಇವಾಗ ಎಲ್ಲರೂ ವಾಪಸ್ ಹೋಗಿದ್ದಾರೆ. ಇವಾಗ 500 ಜನ ಕನ್ನಡಿಗರು ಇಲ್ಲಿ ಇರಬಹುದು ಎಂದವರು ನೆನಪಿಸಿಕೊಂಡರು.

    ರವಿ ಮತ್ತು ಅವರ ಸಂಬಂಧಿಕರು ಮೂಲತಃ ಕರ್ನಾಟಕದ ಗುಂಡ್ಲುಪೇಟೆಯ ನಿವಾಸಿಯಾಗಿದ್ದಾರೆ. ಕನ್ನಡಿಗರ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.