Tag: ಚುನಾವಣೆ ಬಹಿಷ್ಕಾರ

  • ಚುನಾವಣೆ ಹೊತ್ತಲ್ಲಿ ಎಚ್ಚೆತ್ತ ಮತದಾರ-ಬೇಡಿಕೆ ಈಡೇರಿಕೆಗಾಗಿ ಚುನಾವಣೆ ಬಹಿಷ್ಕಾರ..!

    ಚುನಾವಣೆ ಹೊತ್ತಲ್ಲಿ ಎಚ್ಚೆತ್ತ ಮತದಾರ-ಬೇಡಿಕೆ ಈಡೇರಿಕೆಗಾಗಿ ಚುನಾವಣೆ ಬಹಿಷ್ಕಾರ..!

    ಕಾರವಾರ: ಚುನಾವಣೆ ಸಮೀಪಿಸುತಿದ್ದಂತೆ ರಾಜಕಾರಣಿಗಳ ಆಶ್ವಾಸನೆಗಳಿಗೇನೂ ಕಡಿಮೆ ಇಲ್ಲ. ಆದ್ರೆ ಈ ಹಿಂದೆ ನೀಡಿದ ಆಶ್ವಾಸನೆಗಳನ್ನು ನೆರವೇರಿಸದೇ ಮರೆತ ರಾಜಕಾರಣಿಗಳಿಗೀಗ ಚುನಾವಣೆ ಬಹಿಷ್ಕಾರ ದೊಡ್ಡ ತಲೆನೋವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೂರ್ವೆ ಗ್ರಾಮ ಚುನಾವಣೆಯನ್ನು ಬಹಿಷ್ಕರಿಸಿದೆ.

    ಸಾಮನ್ಯವಾಗಿ ಚುನಾವಣೆ ಹತ್ತಿರವಾಗಿದ್ದಂತೆ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಳ್ಳೊತ್ತವೆ. ಆದ್ರೆ ಈ ಬಾರಿ ಕಾಮನ್ ಮೆನ್‍ಗಳು ಸಹ ಎಚ್ಚೆತ್ತುಕೊಂಡಿದ್ದಾರೆ. ಬೇಡಿಕೆ ಈಡೇರಿಸುವವರಿಗೂ ಚುನಾವಣೆ ಬೇಡ ಅಂತ ಕೂರ್ವೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ಕೂರ್ವೆ ಗ್ರಾಮ ಗಂಗಾವಳಿ ನದಿಯ ನೀರಿನಿಂದ ಆವರಿಸಿದ್ದು ದ್ವೀಪದಂತಿದೆ. 47 ಕುಟುಂಬಗಳು ವಾಸವಿರುವ ಈ ಗ್ರಾಮಕ್ಕೆ ಹೋಗಬೇಕಾದ್ರೆ ಇಂದಿಗೂ ದೋಣಿಯಲ್ಲಿಯೇ ಸಂಚರಿಸಬೇಕು.

    ಈ ಹಿಂದೆ ಗ್ರಾಮಕ್ಕೆ ಸರ್ಕಾರದಿಂದ ಒಂದು ದೂಣಿಯನ್ನು ನೀಡಲಾಗಿತ್ತು. ಆದ್ರೆ ಕೆಲವು ಕಿಡಿಗೇಡಿಗಳು ದೋಣಿಯನ್ನು ಸುಟ್ಟುಹಾಕಿದ್ರು. ಈಗ ಈ ಗ್ರಾಮಕ್ಕೆ ಯಾವುದೇ ದೋಣಿಗಳು ಇಲ್ಲದಿದ್ರೂ ಜನರೇ ತಮ್ಮ ಸ್ವಂತ ದೋಣಿಯನ್ನು ಬಳಸಿಕೊಂಡು ದಿನನಿತ್ಯದ ವಸ್ತುಗಳನ್ನು ತರುತ್ತಾರೆ. ಇನ್ನು ಇಲ್ಲಿ ಅಂಗನವಾಡಿ ಹಾಗೂ ಕಿರಿಯ ಪ್ರಾಥಮಿಕ ಶಾಲೆ ಇದೆ. ಆದ್ರೆ ಶಿಕ್ಷಕರು ಈ ಭಾಗಕ್ಕೆ ಬರಬೇಕಿದ್ರೆ ಹಾಗೂ ಬಿಸಿಯೂಟಕ್ಕೆ ಸಾಮಗ್ರಿ ತರಬೇಕಿದ್ರೆ ಹರಸಾಹಸ ಪಡಬೇಕಿದೆ.

    ಗ್ರಾಮಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ತೂಗು ಸೇತುವೆ ನಿರ್ಮಿಸಬಹುದಿತ್ತು. ಆದರೆ ಜನಪ್ರತಿನಿಧಿಗಳ ಅಸಡ್ಡೆ ಇವರನ್ನ ಕತ್ತಲಲ್ಲಿ ಇರುವಂತೆ ಮಾಡಿದೆ. ಹೀಗಾಗಿ ಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾನವನ್ನು ಗ್ರಾಮದ ಜನರು ಕೈಗೊಂಡಿದ್ದಾರೆ.

  • ಕಲಬುರಗಿ: ಚುನಾವಣೆ ಬಹಿಷ್ಕರಿಸಿದ ಗ್ರಾಮಕ್ಕೆ ಸರ್ಕಾರಿ ಯೋಜನೆಗಳೇ ಕಟ್- ಹೊಲಕ್ಕೆ ಗೊಬ್ಬರ ಸಾಗಿಸಲು ಕತ್ತೆಗಳೇ ಆಧಾರ

    ಕಲಬುರಗಿ: ಚುನಾವಣೆ ಬಹಿಷ್ಕರಿಸಿದ ಗ್ರಾಮಕ್ಕೆ ಸರ್ಕಾರಿ ಯೋಜನೆಗಳೇ ಕಟ್- ಹೊಲಕ್ಕೆ ಗೊಬ್ಬರ ಸಾಗಿಸಲು ಕತ್ತೆಗಳೇ ಆಧಾರ

    ಕಲಬುರಗಿ: ತಮ್ಮ ಅಮೂಲ್ಯವಾದ ಮತ ನೀಡಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜನರ ಕಷ್ಟಗಳಿಗೆ ಜನಪ್ರತಿನಿಧಿಗಳು ಸ್ಪಂದಿಸಬೇಕು. ಆದ್ರೆ ಕಲಬುರಗಿಯ ಚಿಂಚೋಳಿ ತಾಲೂಕಿನ ಸುಂಠಾಣ ಗ್ರಾಮದ ಜನರು ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ ಮಾಡಿದ್ದಾರೆಂಬ ಒಂದೇ ಕಾರಣಕ್ಕೆ ಆ ಗ್ರಾಮಕ್ಕೆ ಸರ್ಕಾರಿ ಸೌಲಭ್ಯವನ್ನೇ ಕಡಿತಗೊಳಿಸಲಾಗಿದೆ.

    ಅಧಿಕಾರಿಗಳು ತಪ್ಪು ಮತ ಲೆಕ್ಕ ನೀಡಿದ ಕಾರಣ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿದ ಕಾರಣಕ್ಕೆ ಸುಂಠಾಣಾ ಗ್ರಾಮಕ್ಕೆ ಈ ಸ್ಥಿತಿ ಬಂದೊದೊಗಿದೆ. ಮತ ಬಹಿಷ್ಕಾರ ಹಾಕಿದ್ದಕ್ಕೆ ಇಲ್ಲಿನ ರಾಜಕಾರಣಿಗಳು ಈ ಗ್ರಾಮದ ಮೇಲೆ ಸೇಡು ತೀರಿಸಿಕೊಳ್ಳಲು ನಿಂತಂತಿದೆ. ಪರಿಣಾಮ ಆ ಊರಿಗೆ ಸರ್ಕಾರಿ ಯೋಜನೆಗಳೇ ತಲುಪುತ್ತಿಲ್ಲ.

    ರೈತರ ಜಮೀನುಗಳಿಗೆ ತಲಪಲು ನರೇಗಾ ಯೋಜನೆಯಡಿ ರಾಜ್ಯ ಸರ್ಕಾರ “ನಮ್ಮ ಹೊಲ ನಮ್ಮ ರಸ್ತೆ” ಯೋಜನೆ ಜಾರಿಗೆ ತಂದಿದೆ. ಗುಡ್ಡಗಾಡು ಪ್ರದೇಶದಲ್ಲಿರುವ ಸುಂಠಾಣ ಗ್ರಾಮದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಎಕರೆ ಜಮೀನಿನಲ್ಲಿ ರೈತರು ವ್ಯವಸಾಯ ಮಾಡುತ್ತಾರೆ. ಆದ್ರೆ ಯೋಜನೆ ಜಾರಿಯಾಗದ ಕಾರಣ ತಮ್ಮ ಜಮೀನುಗಳಿಗೆ ಗೊಬ್ಬರ ಒಯ್ಯಲು ಮತ್ತು ರಾಶಿ ಮಾಡಿದ ಬೆಳೆ ತರಲು ಸುಂಠಾಣ ಗ್ರಾಮದ ರೈತರು ಇಂದಿಗೂ ಕತ್ತೆಗಳನ್ನು ಅವಲಂಬಿಸಿದ್ದಾರೆ.

    ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ ಕಾರಣ ಈ ಗ್ರಾಮಕ್ಕೆ ಜನಪ್ರತಿನಿಧಿಗಳೂ ಇಲ್ಲ. ಗ್ರಾಮದ ಸಮಸ್ಯೆ ಹೇಳಲು ಕೋಡ್ಲಿ ಗ್ರಾಮ ಪಂಚಾಯತ್‍ನಲ್ಲಿ ಸದಸ್ಯರೂ ಇಲ್ಲದಂತಾಗಿದೆ. ಹೀಗಾಗಿ ಇತರೆ ಗ್ರಾಮಗಳ ಪಂಚಾಯ್ತಿ ಸದಸ್ಯರ ರಾಜಕೀಯದಿಂದ ಸುಂಠಾಣ ಗ್ರಾಮಕ್ಕೆ ಯಾವುದೇ ಸೌಕರ್ಯ ಸಿಗುತ್ತಿಲ್ಲ. ಈ ಬಗ್ಗೆ ಪಿಡಿಓ ಕೂಡ ತಲೆಕೆಡಿಸಿಕೊಂಡಂತೆ ಕಾಣ್ತಿಲ್ಲ.

    ಪಬ್ಲಿಕ್ ಟಿವಿ ವರದಿ ನೋಡಿಯಾದ್ರೂ ಜಿಲ್ಲಾಧಿಕಾರಿಗಳು, ಸಿಎಂ ಸಂಸದೀಯ ಕಾರ್ಯದರ್ಶಿಯೂ ಆಗಿರೋ ಸ್ಥಳೀಯ ಶಾಸಕ ಉಮೇಶ್ ಜಾಧವ್, ಪಿಡಿಓ ಸೇರಿದಂತೆ ಇತರೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.