Tag: ಚುನಾವಣೆ ಕರ್ನಾಟಕ 2018

  • ವರುಣಾ ಕ್ಷೇತ್ರದಿಂದ ವಿಜಯೇಂದ್ರಗೆ ಬಿಜೆಪಿ ಟಿಕೆಟ್ ಇಲ್ಲ

    ವರುಣಾ ಕ್ಷೇತ್ರದಿಂದ ವಿಜಯೇಂದ್ರಗೆ ಬಿಜೆಪಿ ಟಿಕೆಟ್ ಇಲ್ಲ

    ಮೈಸೂರು: ಕೊನೆಗೂ ವರಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಿದ್ದು, ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧಿಸುತ್ತಿಲ್ಲ ಎಂದು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೇ ಹೇಳಿದ್ದಾರೆ.

    ವಿಜಯೇಂದ್ರಗೆ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಬಿಎಸ್‍ವೈ ಜೊತೆ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರ್ ರಾವ್ ಹಾಗೂ ಪ್ರಕಾಶ್ ಜಾವ್ಡೇಕರ್ ಅವರು ಒಂದು ಸುತ್ತಿನ ಮಾತುಕತೆ ಮುಕ್ತಾಯಗೊಂಡಿದೆ. ಆದರೆ ಮತ್ತೆ ಮೈಸೂರು ಮತ್ತು ಚಾಮರಾಜನಗರ ಅಭ್ಯರ್ಥಿಗಳ ಜೊತೆಯಲ್ಲೂ ರಾಷ್ಟ್ರೀಯ ನಾಯಕರು ಸಭೆ ನಡೆಸಿದ್ದಾರೆ.

    ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್‍ವೈ, ಬೆಳಗ್ಗೆಯಿಂದ ಸತತ ಎರಡು ಗಂಟೆಯ ಕಾಲ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನಮ್ಮ ಅಭ್ಯರ್ಥಿಗಳು ಮತ್ತು ಮುಖಂಡರನ್ನ ಕರೆದು ಸಮಾಲೋಚನೆ ಮಾಡಲಾಗಿದೆ. ಇವತ್ತು ಬೇರೆ ಬೇರೆ ವಿಚಾರಗಳಿಂದಾಗಿ ವರುಣಾ ಕ್ಷೇತ್ರದಿಂದ ಬೇರೆ ಅವರನ್ನು ಸ್ಪರ್ಧೆ ಮಾಡಲು ಹೇಳಿದ್ದೇವೆ. ಮತ್ತೆ ವಿಜಯೇಂದ್ರ 20 ದಿನ ಇಲ್ಲೆ ಇದ್ದು ಮೈಸೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಪ್ರವಾಸ ಮಾಡುತ್ತಾರೆ ಅಂತಾ ತಿಳಿಸಿದ್ರು.

    ನಾನೇದರೂ ತಪ್ಪು ಮಾಡಿದ್ದರೆ ಕ್ಷಮಿಸಿ. ಆದರೆ ಯಾವುದೇ ಬಿಜೆಪಿ ಅಭ್ಯರ್ಥಿ ಇರಲಿ, ಇಲ್ಲೆ ಇದ್ದು ಅವರನ್ನು ಗೆಲ್ಲಿಸಲು ಕೆಲಸ ಮಾಡುತ್ತೇನೆ ಎಂದು ವಿಜಯೇಂದ್ರ ಒಪ್ಪಿಕೊಂಡಿದ್ದಾರೆ. ಅವರ ಕಡೆಯಿಂದ ಏನು ಗೊಂದಲವಿಲ್ಲ. ಆದ್ದರಿಂದ ನಮ್ಮ ಮತದಾರರು ಕೇಂದ್ರದ ತೀರ್ಮಾನವನ್ನು ಒಪ್ಪಿಕೊಳ್ಳಬೇಕು ಎಂದು ಯಡಿಯೂರಪ್ಪ ಕೈ ಮುಗಿದು ಮನವಿ ಮಾಡಿಕೊಂಡ್ರು.

    ಈ ವೇಳೆ ಮುರುಳಿಧರ್ ರಾವ್ ಮಾತನಾಡಿ, ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಐತಿಹಾಸಿಕ ತಿರ್ಮಾನವನ್ನು ನಾವು ಒಪ್ಪಿಕೊಂಡಿದ್ದೇವೆ. ವಿಜಯೇಂದ್ರ ಅವರಿಗೆ ಬಿಜೆಪಿಯ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಇನ್ನು ಮುಂದಿನ 20 ದಿನಗಳ ಕಾಲ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಪ್ರಚಾರ ಮಾಡುತ್ತಾರೆ ಎಂದು ತಿಳಿಸಿದರು.