Tag: ಚುನಾವಣಾ ಸಿಬ್ಬಂದಿ

  • ನಾಮಪತ್ರ ಸಲ್ಲಿಸುವ ವೇಳೆ ಕಪಿರಾಯನ ಎಂಟ್ರಿ- ಚಹಾ ನೀಡಿ ಸತ್ಕರಿಸಿದ ಸಿಬ್ಬಂದಿ

    ನಾಮಪತ್ರ ಸಲ್ಲಿಸುವ ವೇಳೆ ಕಪಿರಾಯನ ಎಂಟ್ರಿ- ಚಹಾ ನೀಡಿ ಸತ್ಕರಿಸಿದ ಸಿಬ್ಬಂದಿ

    ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ನಾಮಪತ್ರ ಸಲ್ಲಿಸುವ ವೇಳೆ ಪುರಸಭೆ ಕಚೇರಿಗೆ ಕೋತಿ ಎಂಟ್ರಿ ಕೊಟ್ಟಿದೆ.

    ಪಟ್ಟಣದಲ್ಲಿ ಪುರಸಭೆ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಈ ವೇಳೆ ಮಂಗವೊಂದು ಪುರಸಭೆ ಕಚೇರಿಗೆ ನುಗ್ಗಿ ಟೇಬಲ್ ಮೇಲೆ ಕುಳಿತು ಚೇಷ್ಟೆ ಮಾಡಿದೆ. ಅಲ್ಲದೆ ಅಧಿಕಾರಿಗಳ ಕೈ ಎಳೆದು, ಮೊಬೈಲ್ ಹಿಡಿದು ಟೇಬಲ್ ಮೇಲೆ ಕುಳಿತು, ಕಚೇರಿಯಲ್ಲಿ ಸುಮಾರು ಅರ್ಧ ಗಂಟೆ ಕಾಲ ತನ್ನ ದರ್ಬಾರ್ ನಡೆಸಿದೆ.

    ಹೊರಗಡೆ ಪೊಲೀಸರ ಕಂಗಾವಲಿನಲ್ಲೇ ಚುನಾವಣೆ ಕಚೇರಿಗೆ ಕೋತಿ ನುಗ್ಗಿ ತನ್ನ ತುಂಟಾಟ ನಡೆಸಿದೆ. ನಂತರ ತುಂಟ ಕಪಿರಾಯನಿಗೆ ಚುನಾವಣಾ ಸಿಬ್ಬಂದಿ ಚಹಾ ಕುಡಿಸಿ ಕಳುಹಿಸಿದ್ದಾರೆ. ಈ ದೃಶ್ಯವನ್ನು ಸಿಬ್ಬಂದಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

  • ಚೆಕ್‌ಪೋಸ್ಟ್‌ನಲ್ಲಿ ಸಿಎಂ ಕಾರು ತಡೆದು ಪರಿಶೀಲನೆ

    ಚೆಕ್‌ಪೋಸ್ಟ್‌ನಲ್ಲಿ ಸಿಎಂ ಕಾರು ತಡೆದು ಪರಿಶೀಲನೆ

    ಹಾಸನ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕಾರನ್ನು ಹಾಸನ ಗಡಿ ಹಿರೀಸಾವೆ ಚೆಕ್ ಪೋಸ್ಟ್ ನಲ್ಲಿ ತಡೆದು ಚುನಾಚಣಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರು ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಹಿರೀಸಾವೆ ಚೆಕ್ ಪೋಸ್ಟ್ ಬಳಿ ಸಿಎಂ ಕಾರು ಬರುತ್ತಿದ್ದಂತೆಯೇ, ಅದನ್ನು ತಡೆದು ಪೊಲೀಸ್ ಹಾಗೂ ಚುನಾವಣಾ ಸಿಬ್ಬಂದಿ ವಾಹನವನ್ನು ತಪಾಸಣೆ ಮಾಡಿದ್ದಾರೆ.

    ಕುಮಾರಸ್ವಾಮಿ ಅವರು ಶಿವಮೊಗ್ಗಕ್ಕೆ ಹೋಗುವ ಮಾರ್ಗದಲ್ಲಿ ಚನ್ನರಾಯಪಟ್ಟಣದಲ್ಲಿರುವ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಮನೆಗೆ ಹೋಗಿದ್ದರು. ಅಲ್ಲಿ ಉಪಹಾರ ಸೇವನೆ ಬಳಿಕ ಕಾರ್ಯಕರ್ತರೊಂದಿಗೆ ಚುನಾವಣೆ ಸಂಬಂಧ ಚರ್ಚೆ ನಡೆಸಿದ್ದಾರೆ. ಬಳಿಕ ಅರಸೀಕೆರೆ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳಲಿದ್ದಾರೆ.

    ಚನ್ನರಾಯಪಟ್ಟಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಇಂದು ಶಿವಮೊಗ್ಗದಲ್ಲಿ ಮದುಭಂಗಾರಪ್ಪ ನಾಮಪತ್ರ ಸಲ್ಲಿಸಲಿದ್ದಾರೆ. ಅಲ್ಲಿಂದ ಕುಂದಾಪುರದಲ್ಲಿ ಮೀನುಗಾರರ ಸಮಾವೇಶ ಇದೆ. ಹೀಗಾಗಿ ಗೋಕರ್ಣದಲ್ಲಿ ವಾಸ್ತವ್ಯ ಮಾಡುತ್ತೇನೆ. ಇಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮೆಲ್ಲ ಅಭ್ಯರ್ಥಿಗಳು ಯಾರು ಕಣದಲ್ಲಿದ್ದಾರೆ. ಅವರೆಲ್ಲರ ಕ್ಷೇತ್ರಗಳಿಗೂ ಭೇಟಿ ನೀಡುತ್ತೇನೆ. ನಮಗೆ ಹೆಲಿಕಾಪ್ಟರ್ ಭೇಟಿ ಬಳಸುವುದಕ್ಕೆ ಬಿಜೆಪಿ-ಕೇಂದ್ರ ಸರ್ಕಾರ ತಡೆ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.

  • ಬಿಸಿಲಿನಿಂದ ಹೈರಾಣಾದ ಚುನಾವಣಾ ಸಿಬ್ಬಂದಿ ನೆರವಿಗೆ ಬಂದ ಜಿಲ್ಲಾಡಳಿತ

    ಬಿಸಿಲಿನಿಂದ ಹೈರಾಣಾದ ಚುನಾವಣಾ ಸಿಬ್ಬಂದಿ ನೆರವಿಗೆ ಬಂದ ಜಿಲ್ಲಾಡಳಿತ

    – ವಿಶೇಷ ವ್ಯವಸ್ಥೆ ಕಲ್ಪಿಸಿದ ಜಿಲ್ಲಾಧಿಕಾರಿಗೆ ಶ್ಲಾಘನೆ

    ಬಳ್ಳಾರಿ: ಜಿಲ್ಲೆಯಲ್ಲಿ ಬೇಸಿಗೆ ಆರಂಭದಲ್ಲೆ ಬಿಸಿಲಿನ ತಾಪ ಬಲುಜೋರಾಗಿದೆ. ಚುನಾವಣಾ ಸಿಬ್ಬಂದಿ ಸಾಕಪ್ಪ ಸಾಕು ಈ ಬಿಸಿಲು ಎಂದಿದ್ದಾರೆ. ಹೀಗಾಗಿಯೇ ಬಿಸಿಲಿನ ತಾಪ ತಪ್ಪಿಸಿಕೊಳ್ಳಲು ಸಿಬ್ಬಂದಿಗೆ ಜಿಲ್ಲಾಡಳಿತ ವಿಶೇಷ ವ್ಯವಸ್ಥೆ ಮಾಡಿದೆ.

    ಈಗ ಎಲ್ಲೆಡೆ ದಿನೇ ದಿನೇ ಚುನಾವಣೆ ಬಿಸಿ ಏರುತ್ತಿದೆ. ಆದ್ರೆ ಬಳ್ಳಾರಿಯಲ್ಲಿ ಮಾತ್ರ ಚುನಾವಣಾ ಬಿಸಿಗಿಂತಲೂ ಬಿಸಿಲಿನ ಬಿಸಿ ಜೋರಾಗುತ್ತಿದೆ. ಬಿಸಿಲಿನ ಬೇಗೆಗೆ ಹಗಲಿರುಳು ಕೆಲಸ ಮಾಡೋ ಚುನಾವಣಾ ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರೆ. ಸೂರ್ಯನ ಪ್ರಪಾತ ಕಂಡು ಸಾಕಪ್ಪ ಸಾಕು ಈ ಬಿಸಿಲು ಬೇಗೆ ಅಂತಿದ್ದಾರೆ. ಆದ್ರೆ ಬಿಸಿಲಿನ ಬೇಗೆಯಿಂದ ಕಂಗೆಟ್ಟಿರುವ ಚುನಾವಣಾ ಸಿಬ್ಬಂದಿಗೆ ಬಳ್ಳಾರಿ ಜಿಲ್ಲಾಡಳಿತ ಎಲ್ಲ ಚೆಕ್‍ಪೊಸ್ಟ್ ಗಳಿಗೆ ಏರ್ ಕೂಲರ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಿಬ್ಬಂದಿಯ ನೆರವಿಗೆ ಧಾವಿಸಿದೆ ಎಂದು ಕರ್ತವ್ಯ ನಿರತ ಪೊಲೀಸ್ ಪೇದೆ ಮುದುಕಯ್ಯ ತಿಳಿಸಿದ್ದಾರೆ.

    ಬಳ್ಳಾರಿ ಜಿಲ್ಲೆಯಲ್ಲಿ ಸದ್ಯ 40 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪವಿದೆ. ಹಗಲು ಹೊತ್ತಿನಲ್ಲಿ ಹೊರಬರಲಾಗದಷ್ಟು ಬಿಸಿಲಿನ ಬೇಗೆ ಹೆಚ್ಚಳವಾಗಿರುವುದರಿಂದ ಚೆಕ್‍ಪೊಸ್ಟ್ ಗಳಲ್ಲಿ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಹೈರಣಾಗಿ ಹೋಗಿದ್ದಾರೆ. ಹೀಗಾಗಿ ಬಳ್ಳಾರಿ ಜಿಲ್ಲಾಧಿಕಾರಿ ರಾಮಪ್ರಸಾದ್ ಮನೋಹರ್ ವಿಶೇಷ ಕಾಳಜಿ ತೆಗೆದುಕೊಳ್ಳುವ ಮೂಲಕ ಎಲ್ಲ ಚೆಕ್‍ಪೊಸ್ಟ್ ಗಳಿಗೆ ಏರ್ ಕೂಲರ್ ಹಾಗೂ ತಣ್ಣೀರಿನ ಗಡಿಗೆಗಳ ವ್ಯವಸ್ಥೆ ಕಲ್ಪಿಸಿದ್ದಾರೆ. ಜಿಲ್ಲಾಡಳಿತದ ಈ ವ್ಯವಸ್ಥೆಯಿಂದ ಬಿಸಿಲಿನ ಬೇಗೆ ತಪ್ಪಿಸಿಕೊಳ್ಳಲು ಅನೂಕೂಲವಾಗಿದೆ ಎಂದು ಕರ್ತವ್ಯನಿರತ ಚುನಾವಣಾ ಸಿಬ್ಬಂದಿ ರಾಜಶೇಖರ್ ಹೇಳುತ್ತಾರೆ.

    ಹಗಲು ರಾತ್ರಿಯೆನ್ನದೆ ಚೆಕ್‍ಪೊಸ್ಟ್ ಗಳಲ್ಲಿ ಕರ್ತವ್ಯನಿರ್ವಹಿಸುವ ಸಿಬ್ಬಂದಿಗೆ ಜಿಲ್ಲಾಡಳಿತ ಏರ್ ಕೂಲರ್ ವ್ಯವಸ್ಥೆ ಮಾಡಿರುವುದರಿಂದ ಸಿಬ್ಬಂದಿಗೆ ಖುಷಿ ತಂದಿದೆ. ಹೀಗಾಗಿ ಬಳ್ಳಾರಿ ಜಿಲ್ಲಾಡಳಿತದ ಈ ಕಾರ್ಯಕ್ಕೆ ಚುನಾವಣಾ ಸಿಬ್ಬಂದಿ ಶಾಘ್ಲನೆ ವ್ಯಕ್ತಪಡಿಸುವ ಮೂಲಕ ಹುರುಪಿನಿಂದ ಚುನಾವಣಾ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ.