Tag: ಚುನಾವಣಾ ನೀತಿ ಸಂಹಿತೆ

  • ಚಿಕ್ಕೋಡಿಯಲ್ಲಿ 16 ಲಕ್ಷ ನಗದು ಸೀಜ್- ಇಬ್ಬರನ್ನು ವಶಕ್ಕೆ ಪಡೆದ ಪೊಲೀಸ್ರು

    ಚಿಕ್ಕೋಡಿಯಲ್ಲಿ 16 ಲಕ್ಷ ನಗದು ಸೀಜ್- ಇಬ್ಬರನ್ನು ವಶಕ್ಕೆ ಪಡೆದ ಪೊಲೀಸ್ರು

    ಚಿಕ್ಕೋಡಿ: ಲೋಕಸಭಾ ಚುನಾವಣೆಯ (Loksabha Elections 2024) ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆ (Code Of Conduct) ಕೂಡ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆಕ್ಟೀವ್ ಆಗಿದ್ದಾರೆ. ಅಂತೆಯೇ ಚಿಕ್ಕೋಡಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಬಸ್ ಮೂಲಕ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 16 ಲಕ್ಷ 31 ಸಾವಿರ ರೂ. ವಶಕ್ಕೆ ಪಡೆದಿದ್ದಾರೆ.

    ತಡರಾತ್ರಿ ಚಿಕ್ಕೋಡಿ ಬಸ್ ನಿಲ್ದಾಣದಲ್ಲಿ ಪೊಲೀಸರ ತಪಾಸಣೆ ವೇಳೆ ಹಣ ಪತ್ತೆಯಾಗಿದೆ. ಚಿಕ್ಕೋಡಿಯಿಂದ ಮಹಾರಾಷ್ಟ್ರದ ಇಚಲಕರಂಜಿ ನಗರಕ್ಕೆ ತೆರಳುತ್ತಿದ್ದ ಬಸ್ ತಪಾಸಣೆ ವೇಳೆ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಅಕ್ರಮ ಹಣದ ಜೊತೆಗೆ ಇಬ್ಬರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಹಣ ಸಾಗಾಟ ಮಾಡುವರು ಮಹಾರಾಷ್ಟ್ರದ ಇಚಲಕರಂಜಿ ನಗರದ ನಿವಾಸಿಗಳಾಗಿದ್ದಾರೆ. ಪ್ರಕರಣವನ್ನ ಆದಾಯ ತೆರಿಗೆ ಇಲಾಖೆಗೆ ಪೊಲೀಸರು ಹಸ್ತಾಂತರಿಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಎಳನೀರು ಕುಡಿದು 15 ಮಂದಿ ಅಸ್ವಸ್ಥ!

  • ಸಿಇಎನ್ ಪೊಲೀಸರ ಭರ್ಜರಿ ಬೇಟೆ – 2.93 ಕೋಟಿ ರೂ. ನಗದು ಜಪ್ತಿ

    ಸಿಇಎನ್ ಪೊಲೀಸರ ಭರ್ಜರಿ ಬೇಟೆ – 2.93 ಕೋಟಿ ರೂ. ನಗದು ಜಪ್ತಿ

    – ಇಬ್ಬರು ವಶಕ್ಕೆ, ಟೊಯೊಟಾ ಕಾರು, ಮೊಬೈಲ್ ಜಪ್ತಿ

    ವಿಜಯಪುರ: ಚುನಾವಣಾ ನೀತಿ ಸಂಹಿತೆ (Code of Election Conduct) ಜಾರಿ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ. ವಿಜಯಪುರದಲ್ಲಿ (Vijayapura) ಸಿಇಎನ್ ಪೊಲೀಸರು (CEN Police) ಭರ್ಜರಿ ಬೇಟೆ ಆಡಿ ಒಂದಲ್ಲ, ಎರಡಲ್ಲ ಬರೋಬ್ಬರಿ 2.93 ಕೋಟಿ ರೂ. ನಗದನ್ನು ಜಪ್ತಿ ಮಾಡಿದ್ದಾರೆ.

    ಲೋಕಸಭಾ ಚುನಾವಣೆ (Lok Sabha Electon) ಹಿನ್ನೆಲೆ ಹೈದರಾಬಾದ್‌ನಿಂದ (Hyderabad) ಹುಬ್ಬಳ್ಳಿಗೆ ಟೊಯೊಟಾ ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು. ಈ ವೇಳೆ ವಿಜಯಪುರ ನಗರದ ಸಿಂದಗಿ ಬೈಪಾಸ್ ಬಳಿ ತಪಾಸಣೆ ನಡೆಸಿ ನಗದನ್ನು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಹನುಮಾನ್‌ ಚಾಲೀಸಾ ಕೇಸ್‌ – ಹಲ್ಲೆಗೆ ಒಳಗಾದ ಅಂಗಡಿ ಮಾಲೀಕನನ್ನೇ ವಶಕ್ಕೆ ಪಡೆದ ಪೊಲೀಸರು

    ಅಲ್ಲದೇ ಬಾಲಾಜಿ ನಿಕ್ಕಂ, ಸಚಿನ್ ಮೋಯಿತೆ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರಿಂದ 2.93 ಕೋಟಿ ರೂ. ನಗದು, ಟೊಯೊಟಾ ಕಾರು, ಎರಡು ಮೊಬೈಲ್ ಜಪ್ತಿಗೈದಿದ್ದಾರೆ. ಈ ಕುರಿತು ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿಶ್ಚಿತಾರ್ಥದ ಬಳಿಕ ಮದುವೆಗೆ ನಕಾರ – ವಿಷ ಕುಡಿಸಿ ಯುವತಿಯ ಹತ್ಯೆಗೈದ ಮಾವ

  • ತಮಿಳುನಾಡಿನ ಸೇಲಂನಲ್ಲಿ ಇಕ್ಕಟ್ಟಿಗೆ ಸಿಲುಕಿದ ಶಿವಮೊಗ್ಗದ ದಂಪತಿ!

    ತಮಿಳುನಾಡಿನ ಸೇಲಂನಲ್ಲಿ ಇಕ್ಕಟ್ಟಿಗೆ ಸಿಲುಕಿದ ಶಿವಮೊಗ್ಗದ ದಂಪತಿ!

    ಶಿವಮೊಗ್ಗ: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು (Code Of Conduct), ಈ ಬೆನ್ನಲ್ಲೇ ಶಿವಮೊಗ್ಗದ ದಂಪತಿ ತಮಿಳುನಾಡಿನ ಸೇಲಂನಲ್ಲಿ ಇಕ್ಕಟ್ಟಿಗೆ ಸಿಲುಕಿದ ಪ್ರಸಂಗವೊಂದು ನಡೆದಿದೆ.

    ಮಗನ ಮದುವೆಯ ಹಿನ್ನೆಲೆಯಲ್ಲಿ ಬಟ್ಟೆ ಖರೀದಿ ಮಾಡಲು ಹಾ.ನ.ವಿಜಯೇಂದ್ರ ದಂಪತಿ ಶಿವಮೊಗ್ಗದಿಂದ ಸೇಲಂಗೆ ತೆರಳಿದ್ದರು. ಈ ವೇಳೆ ಕಾರಿನಲ್ಲಿ ಬರುವಾಗ ಈರೋಡ್ ಚೆಕ್‍ ಪೋಸ್ಟ್ ಬಳಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಮದುವೆಯ ಹಿನ್ನೆಲೆಯಲ್ಲಿ ಖರೀದಿಸಿದ್ದ 40 ಸಾವಿರ ಮೌಲ್ಯದ ಸೀರೆ, 40 ಸಾವಿರ ನಗದು, ಪತ್ನಿ ಬಳಿ ಇದ್ದ 3 ಸಾವಿರವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಮದುವೆ ಆಮಂತ್ರಣ ಪತ್ರ, ದಾಖಲೆ ತೋರಿಸಿದರೂ ಚುನಾವಣಾ ಅಧಿಕಾರಿಗಳು ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ (Shivamogga) ದಂಪತಿ ಬೆಳಗ್ಗೆಯಿಂದ ಉಪಹಾರ ಇಲ್ಲದೇ ಪರದಾಟ ಅನುಭವಿಸಿದ್ದಾರೆ. ದಂಪತಿ ಬಳಿ ಇದ್ದ ಹಣವನ್ನೆಲ್ಲಾ ಕೂಡ ವಶಕ್ಕೆ ಪಡೆದಿದ್ದಾರೆ.

    ಒಟ್ಟಾರೆ ಚುನಾವಣಾ ಅಧಿಕಾರಿಗಳ ಧೋರಣೆಯಿಂದ ಕನ್ನಡಿಗರು ತಮಿಳುನಾಡಿನಲ್ಲಿ (Tamilnadu) ಪರದಾಟ ಅನುಭವಿಸುವಂತಾಗಿದೆ. ವಶಕ್ಕೆ ಪಡೆದ ವಸ್ತು, ಹಣ ವಾಪಸ್ ನೀಡುವಂತೆ ದಂಪತಿ ಕಣ್ಣೀರು ಹಾಕುತ್ತಿದ್ದಾರೆ.

  • ಬಂಧನಕ್ಕೆ ವಾರಂಟ್ ಹೊರಡಿಸಬೇಕಾಗುತ್ತೆ – ಶ್ರೀರಾಮುಲುಗೆ ಹೈಕೋರ್ಟ್ ಎಚ್ಚರಿಕೆ

    ಬಂಧನಕ್ಕೆ ವಾರಂಟ್ ಹೊರಡಿಸಬೇಕಾಗುತ್ತೆ – ಶ್ರೀರಾಮುಲುಗೆ ಹೈಕೋರ್ಟ್ ಎಚ್ಚರಿಕೆ

    ಬೆಂಗಳೂರು: ಚುನಾವಣಾ ನೀತಿ ಸಂಹಿಂತೆ (Election Code of Conduct) ಉಲ್ಲಂಘನೆ ಪ್ರಕರಣದಲ್ಲಿ ಮಾಜಿ ಸಚಿವ ಶ್ರೀರಾಮುಲು (B.Sriramulu) ಅವರನ್ನು ಹೈಕೋರ್ಟ್ (High Court of Karnataka) ತರಾಟೆ ತೆಗೆದುಕೊಂಡಿದೆ.

    ತಮ್ಮ ವಿರುದ್ಧ ದಾಖಲಾಗಿರುವ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ರದ್ದು ಪಡಿಸಬೇಕು ಎಂದು ಶ್ರೀರಾಮುಲು ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇದನ್ನೂ ಓದಿ: ಕೋವಿಡ್ ವೇಳೆ ಮೋದಿ ಸಹಕಾರ ಸ್ಮರಿಸಿದ ಸಿಜೆಐ ಚಂದ್ರಚೂಡ್

    ಈ ವೇಳೆ ನ್ಯಾಯಮೂರ್ತಿಗಳು ಅರ್ಜಿದಾರರು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಎಷ್ಟು ಬಾರಿ ಹಾಜರಾಗಿದ್ದಾರೆ? ಎಷ್ಟು ಬಾರಿ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸರ್ಕಾರದ ಪರ ವಕೀಲರು, ನಾಲ್ಕು ಬಾರಿ ಸಮನ್ಸ್ ಜಾರಿಯಾಗಿದ್ದು, ಒಂದು ಬಾರಿಯೂ ಅರ್ಜಿದಾರರು ಹಾಜರಾಗಿಲ್ಲ ಎಂದು ಉತ್ತರಿಸಿದ್ದಾರೆ.

    ಈ ವೇಳೆ ನ್ಯಾಯಮೂರ್ತಿಗಳು, ಸಚಿವರಾಗಲಿ, ಮಾಜಿ ಸಚಿವರಾಗಲಿ, ಕೇಸ್ ದಾಖಲಾದ ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು. ಮುಂದಿನ ವಿಚಾರಣೆ ವೇಳೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು. ಒಂದು ವೇಳೆ ಹಾಜರಾಗದಿದ್ದಲ್ಲಿ ಬಂಧನಕ್ಕೆ ವಾರಂಟ್ (Warrant) ಹೊರಡಿಸಬೇಕಾಗುತ್ತದೆ ಎಂದು ಚಾಟಿ ಬೀಸಿದರು.

    ಅನುಮತಿ ಪಡೆಯದೇ ಅಭ್ಯರ್ಥಿ ಪರ ಚುನಾವಣಾ ರ‍್ಯಾಲಿ ನಡೆಸಿದ ಆರೋಪವನ್ನು ಶ್ರೀರಾಮುಲು ಅವರು ಎದುರಿಸುತ್ತಿದ್ದಾರೆ. ಈ ಸಂಬಂಧ 2023ರ ಏ.28 ರಂದು ಚುನಾವಣಾ ಆಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇದನ್ನೂ ಓದಿ: ಅಕ್ಬರ್‌, ಸೀತಾ ಸಿಂಹಗಳಿಗೆ ಮರುನಾಮಕರಣ ಮಾಡಿ- ಕೋಲ್ಕತ್ತಾ ಹೈಕೋರ್ಟ್‌ ಸೂಚನೆ

  • ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ – ಸಾವಿರಾರು ಸೀರೆ, ಡಿಮಾಂಡ್ ಡ್ರಾಫ್ಟ್ ವಶಕ್ಕೆ

    ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ – ಸಾವಿರಾರು ಸೀರೆ, ಡಿಮಾಂಡ್ ಡ್ರಾಫ್ಟ್ ವಶಕ್ಕೆ

    ಬೆಂಗಳೂರು: ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತುರುಸುನ ಸಿದ್ಧತೆ ನಡೆಸುತ್ತಿದ್ದು, ಈ ನಡುವೆ ಐಟಿ (IT) ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಬುಧವಾರ ಬೆಂಗಳೂರಿನ (Bengaluru) ಕೆಜಿಎಫ್ ಬಾಬು (KGF Babu) ಮನೆ ಸೇರಿದಂತೆ ರಾಜ್ಯಾದ್ಯಂತ 50 ಕಡೆಗಳಲ್ಲಿ ಐಟಿ ದಾಳಿ ನಡೆಸಿದೆ. ಈ ವೇಳೆ ಅಧಿಕಾರಿಗಳಿಗೆ ಅಕ್ರಮವಾಗಿ ಸಂಗ್ರಹಿಸಿಟ್ಟ ಕೋಟ್ಯಂತರ ಮೌಲ್ಯದ ವಸ್ತುಗಳು ದೊರಕಿವೆ.

    ಕೆಜಿಎಫ್ ಬಾಬುಗೆ ಸಂಬಂಧಪಟ್ಟ ಬೆಂಗಳೂರಿನ ಹೈಗ್ರೌಂಡ್ ಬಳಿ ಇರುವ ರುಕ್ಸಾನಾ ಪ್ಯಾಲೆಸ್ ಮೇಲೆ ಬುಧವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ 2,000ಕ್ಕೂ ಹೆಚ್ಚು ಡಿಮಾಂಡ್ ಡ್ರಾಫ್ಟ್ (ಡಿಡಿ), 5,000ಕ್ಕೂ ಹೆಚ್ಚು ರೇಶ್ಮೆ ಸೀರೆಗಳು ದೊರಕಿವೆ.

    ಕೆಜಿಎಫ್ ಬಾಬು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಯಸಿ ಪ್ರಚಾರವನ್ನು ನಡೆಸಿದ್ದರು. ಆದರೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಕ್ಕಿರದ ಕಾರಣ ಅವರ ಪತ್ನಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ಕೆಜಿಎಫ್ ಬಾಬು ಕಣಕ್ಕೆ ಇಳಿಸಿದ್ದಾರೆ. ಐಟಿ ದಾಳಿ ವೇಳೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ 1,925 ವೋಟರ್ ಐಡಿಗಳು ಪತ್ತೆಯಾಗಿವೆ. ಪ್ರತಿ ವೋಟರ್ ಐಡಿಗಳನ್ನು ತಲಾ 5,000 ರೂ. ಚೆಕ್‌ಗಳೊಂದಿಗೆ ಶೇಖರಿಸಿಡಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ವರಿಷ್ಠರ ಆಯ್ಕೆಯನ್ನು ಯಾರು ಪ್ರಶ್ನೆ ಮಾಡುವ ಹಾಗೆ ಇಲ್ಲ : ಈಶ್ವರಪ್ಪ

    ನಿವಾಸದ ಮೊದಲ ಮಹಡಿಯ ಕೊಠಡಿಯಲ್ಲಿ ವೋಟರ್ ಐಡಿ ಹಾಗೂ ಚೆಕ್‌ಗಳು ದೊರೆತರೆ, ಮನೆಯ ನೆಲಮಹಡಿಯಲ್ಲಿ ಸುಮಾರು 26 ಬ್ಯಾಗ್‌ಗಳಲ್ಲಿ ಸೀರೆಗಳು ದೊರಕಿವೆ. ಸುಮಾರು 5,000 ಸೀರೆಗಳು ಪತ್ತೆಯಾಗಿದ್ದು, ಕಾಂಚಿಪುರಂ ರೇಷ್ಮೆ ಸೀರೆಗಳು ಇವಾಗಿವೆ ಎನ್ನಲಾಗಿದೆ.

    ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಈ ಎಲ್ಲಾ ವಸ್ತುಗಳ ಮೇಲೆ ಕೆಜಿಎಫ್ ಬಾಬು ಅವರಿಂದ ಉಡುಗೊರೆ ಎಂದು ಬರೆಯಲಾಗಿದ್ದು, ಅವರ ಫೋಟೋಗಳು ಕೂಡಾ ಕಂಡುಬಂದಿದೆ. ಈ ಎಲ್ಲಾ ವಸ್ತುಗಳನ್ನು ಮತದಾರರಿಗೆ ಹಂಚಲು ಸಂಗ್ರಹಿಸಿಡಲಾಗಿದ್ದು, ಇದೀಗ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಹಿನ್ನೆಲೆ ಶಿವಾಜಿನಗರ ವಲಯ ಚುನಾವಣಾ ಉಸ್ತುವಾರಿಯಿಂದ ಹೈ ಗ್ರೌಡ್ಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ನ ಅಂತಿಮ ಪಟ್ಟಿ ಬಿಡುಗಡೆ – 5 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ

  • ರಾಜ್ಯದಲ್ಲಿ ಒಟ್ಟು 22.79 ಕೋಟಿ ನಗದು, 1,52 ಕೋಟಿ ಮೌಲ್ಯದ ಲಿಕ್ಕರ್ ವಶ

    ರಾಜ್ಯದಲ್ಲಿ ಒಟ್ಟು 22.79 ಕೋಟಿ ನಗದು, 1,52 ಕೋಟಿ ಮೌಲ್ಯದ ಲಿಕ್ಕರ್ ವಶ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ (Karnataka Vidhanasabha Election 2023) ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾದ ಮೇಲೆ ಒಟ್ಟು 22.79 ಕೋಟಿ ನಗದು (Money) ಹಾಗೂ 1,52 ಕೋಟಿ ಮೌಲ್ಯದ ಲಿಕ್ಕರ್ (Liquor) ವಶಕ್ಕೆ ಪಡೆಯಲಾಗಿದೆ.

    ಬೆಂಗಳೂರು ನಗರ ಚುನಾವಣಾಧಿಕಾರಿಗಳು ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಅದರಲ್ಲಿ ನೀತಿ ಸಂಹಿತೆ (Code Of Conduct) ಉಲ್ಲಂಘನೆಯಾಗಿ ನಗದು, ಲಿಕ್ಕರ್, ಗಾಂಜಾ ವೆಹಿಕಲ್ ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಿಚ್ಚ ಸುದೀಪ್ ನಡೆಗೆ ಅಚ್ಚರಿಯಲ್ಲ, ನೋವು ತಂದಿದೆ : ಪ್ರಕಾಶ್ ರಾಜ್

    ಬುಧವಾರ ಒಂದೇ ದಿನ 6,52, 510 ನಗದು, 11,441,376 ಮೌಲ್ಯದ ಲಿಕ್ಕರ್, 2,001250 ಮೌಲ್ಯದ ಡ್ರಗ್ಸ್ ಹಾಗೂ 5 ವೆಹಿಕಲ್ ಗಳಲ್ಲಿ 38,5000 ನಗದು ಪತ್ತೆಯಾಗಿದೆ. ಒಟ್ಟಿನಲ್ಲಿ ನೀತೆ ಸಂಹಿತೆ ಜಾರಿಯಾದ ಮೇಲೆ ಇದ ಒಟ್ಟು 22.79 ಕೋಟಿ ನಗದು ಹಾಗೂ 3.14 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

    ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್, ಏಪ್ರಿಲ್ 13 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಆಯಾ ಜಿಲ್ಲಾ ಚುನಾವಣಾಧಿಕಾರಿಗಳು ಚುನಾವಣಾ ಅಧಿಸೂಚನೆ ಪ್ರಕಟಿಸಲಿದ್ದಾರೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏಪ್ರಿಲ್ 21 ನಾಮಪತ್ರ ಪರಿಶೀಲನೆ ನಡೆಲಿದ್ದು, ಏಪ್ರಿಲ್ 24 ನಾಮಪತ್ರ ವಾಪಸ್ಸಿಗೆ ಕೊನೆಯ ದಿನವಾಗಿದೆ. ಮೇ 10ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಮೇ 13 ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತದೆ ಎಂದು ತಿಳಿಸಿದ್ದರು.

  • ದಸರಾಗೆ ನೀತಿ ಸಂಹಿತೆ ಅಡ್ಡಿ ಇಲ್ಲ- ಚುನಾವಣಾ ಆಯೋಗ

    ದಸರಾಗೆ ನೀತಿ ಸಂಹಿತೆ ಅಡ್ಡಿ ಇಲ್ಲ- ಚುನಾವಣಾ ಆಯೋಗ

    ಮೈಸೂರು: ವಿಶ್ವವಿಖ್ಯಾತ ದಸರಾಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದ್ದು, ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ.

    ಈ ಕುರಿತು ಶನಿವಾರ ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್.ಜಿ.ಶಂಕರ್ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆ ರಾಜ್ಯ ಚುನಾವಣಾ ಆಯೋಗ 2018ರ ಆದೇಶದಂತೆ ಕ್ಷೇತ್ರ ವ್ಯಾಪ್ತಿಯಲ್ಲಿ ಮಾತ್ರ ನೀತಿ ಸಂಹಿತೆ ಜಾರಿ ಮಾಡಿ ಆದೇಶ ಹೊರಡಿಸಿದೆ. ಹೀಗಾಗಿ ಮೈಸೂರು ದಸರಾದ ಎಲ್ಲ ಕಾರ್ಯಕ್ರಮಗಳಿಗೆ ನೀತಿ ಸಂಹಿತೆಯಿಂದ ವಿನಾಯಿತಿ ದೊರೆತಿದೆ.

    ಇದರಿಂದ ಉಪಸಮಿತಿ ಸೇರಿದಂತೆ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಂತಾಗಿದೆ. ಆದೇಶದ ಬಗ್ಗೆ ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್.ಜಿ.ಶಂಕರ್ ಅಧಿಕೃತ ಮಾಹಿತಿ ನೀಡಿದ್ದಾರೆ.

  • ಐ ಆ್ಯಮ್ ಎ ಎಜುಕೇಟೆಡ್, ಐ ನೊ ವಾಟ್ ಐ ಆ್ಯಮ್- ಸಿಂಧೂರಿ ನೋಟಿಸ್‍ಗೆ ಮಂಜು ಗರಂ

    ಐ ಆ್ಯಮ್ ಎ ಎಜುಕೇಟೆಡ್, ಐ ನೊ ವಾಟ್ ಐ ಆ್ಯಮ್- ಸಿಂಧೂರಿ ನೋಟಿಸ್‍ಗೆ ಮಂಜು ಗರಂ

    ಹಾಸನ: ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಎ. ಮಂಜು ಅವರಿಗೆ ನೋಟಿಸ್ ಜಾರಿಯಾಗಿದ್ದು, ಈ ಕುರಿತು ಸಚಿವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಅರಕಲಗೂಡು ತಾಲೂಕಿನ ತಮ್ಮ ಸ್ವಗ್ರಾಮದಲ್ಲಿ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳಲ್ಲಿ ಬಂದ ಬಳಿಕ ನನ್ನ ಸ್ನೇಹಿತರು ಕರೆ ಮಾಡಿ ಡಿಸಿ ಕಚೇರಿಯಿಂದ ನೋಟಿಸ್ ಬಂದಿರುವುದಾಗಿ ನನ್ನ ಗಮನಕ್ಕೆ ತಂದ್ರು. ಆದ್ರೆ ಇಲ್ಲಿಯವರೆಗೂ ನನಗೆ ಯಾವುದೇ ರೀತಿಯ ನೋಟಿಸ್ ಬಂದಿಲ್ಲ. ನೋಟಿಸ್ ಕೊಡೋಕೆ ಸಮರ್ಥರ ಎಂಬುದನ್ನು ಮೊದಲು ಅವರು ಅರ್ಥ ಮಾಡಿಕೊಳ್ಳಬೇಕು. ಯಾಕಂದ್ರೆ ಆ ಕಚೇರಿ ಎ ಮಂಜು ಕಚೇರಿಯಲ್ಲ. ಬದಲಾಗಿ ಹಾಸನ ಜಿಲ್ಲೆಯ ಉಸ್ತುವಾರಿ ಮಂತ್ರಿ ಕಚೇರಿಯಾಗಿದೆ. ಹೀಗಾಗಿ ನಾನು ಸರ್ಕಾರದ ಓರ್ವ ಪ್ರತಿನಿಧಿಯಾಗಿ ಜನಸಾಮಾನ್ಯರು ಬಂದಾಗ ಅವರ ಕಷ್ಟ-ಸುಖಗಳನ್ನು ಆಲಿಸಲೆಂದು ಸರ್ಕಾರ ಕೊಟ್ಟಿರುವ ಕಚೇರಿಯನ್ನು ಬಳಸಿಕೊಂಡಿದ್ದೇನೆ. ಅದನ್ನು ದುರುಪಯೋಗಪಡಿಸಿಕೊಳ್ಳಬಾರದೆಂದು ನನಗೆ ಅರಿವಿದೆ ಅಂದ್ರು. ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ: ಸಚಿವ ಎ.ಮಂಜು ವಿರುದ್ಧ ಎಫ್‍ಐಆರ್ ದಾಖಲು

    ನಾನು ಕೂಡ ಎರಡು ಪದವಿಗಳನ್ನು ಪಡೆದಿದ್ದೇನೆ. ಕಾನೂನು ನನಗೂ ತಿಳಿದಿದೆ. ನೋಟಿಸ್ ಬಂದಿದೆ ಅಂತ ಸ್ನೇಹಿತರಿಂದ ತಿಳಿಯಿತು. ಹೀಗಾಗಿ ಆ ನೋಟಿಸ್ ನನ್ನ ಕೈಸೇರಿದ ಬಳಿಕ ಅದರಲ್ಲೇನಿದೆ ಅಂತ ತಿಳಿದು ಆಮೇಲೆ ಪ್ರತಿಕ್ರಿಯಿಸುತ್ತೇನೆ ಅಂತ ಹೇಳಿದ್ರು.

    ಚುನಾವಣೆಯಲ್ಲಿ ಜನ ನನ್ನನ್ನು ಗೆಲ್ಲಿಸಿ ಆಶೀರ್ವಾದ ಮಾಡಿದ್ದಾರೆ. ಅವರ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ನನ್ನನ್ನು ಮಂತ್ರಿಯನ್ನಾಗಿ ಮಾಡಿದೆ. ಮಂತ್ರಿಯಾದ ಬಳಿಕ ಜನಪರ ಕೆಲಸ ಮಾಡುವುದರ ಸಲುವಾಗಿ ಸರ್ಕಾರ ಕಚೇರಿ ನೀಡುತ್ತದೆ. ನಾನು ನನ್ನ ಕಚೇರಿಯನ್ನು ಸಾರ್ವಜನಿಕರ ಕೆಲಸಗಳನ್ನು ಆಲಿಸಲು ಮಾತ್ರ ಉಪಯೋಗಿಸುತ್ತೇನೆ ಹೊರತು ಯಾವುದೇ ರೀತಿಯ ರಾಜಕೀಯ ಪ್ರೇರಿತವಾಗಿ ಆ ಕಚೇರಿಯನ್ನು ಉಪಯೋಗಿಸಿಕೊಳ್ಳುವುದಿಲ್ಲ. ಅದು ನನಗೆ ತಿಳಿದಿದೆ. ಸೋ ಐ ಆ್ಯಮ್ ಎ ಎಜುಕೇಟೆಡ್. ಐ ನೋ ವಾಟ್ ಐ ಆ್ಯಮ್, ವಾಟ್ ಐ ಡಿಡ್ ಅಂತ ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದ್ದಾರೆ.

  • ಕುಷ್ಟಗಿಯಲ್ಲಿ ನೀತಿ ಸಂಹಿತೆಗಿಲ್ಲ ಕಿಮ್ಮತ್ತು – ಗಣೇಶ್, ಸುದೀಪ್ ಫೋಟೋ ಪ್ರಚಾರಕ್ಕೆ ಬಳಕೆ

    ಕುಷ್ಟಗಿಯಲ್ಲಿ ನೀತಿ ಸಂಹಿತೆಗಿಲ್ಲ ಕಿಮ್ಮತ್ತು – ಗಣೇಶ್, ಸುದೀಪ್ ಫೋಟೋ ಪ್ರಚಾರಕ್ಕೆ ಬಳಕೆ

    ಕೊಪ್ಪಳ: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಆದ್ರೆ ಕೊಪ್ಪಳದಲ್ಲಿ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸ್ಯಾಂಡಲ್ ವುಡ್ ನಟರ ಫೋಟೋ ಬಳಕೆ ಮಾಡಿಕೊಂಡು ಅಬ್ಬರದ ಪ್ರಚಾರಕ್ಕೆ ಕೈ ಹಾಕಲಾಗಿದೆ.

    ಕುಷ್ಟಗಿ ತಾಲೂಕಿನಲ್ಲಿ ಚುನಾವಣಾ ಪ್ರಚಾರಗಳು ದಿನದಿಂದ ದಿನಕ್ಕೆ ರಂಗೇರ್ತಿದೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಕರ್ತರ ಕೈ ಕಟ್ಟಿ ಹಾಕಿದ್ದಂತೆ ಆಗಿತ್ತು. ಆದ್ರೆ ಇದೀಗ ಅವರಿಗೆ ಫೇಸ್ ಬುಕ್ ವರದಾನವಾಗಿದೆ.

    ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಗಣೇಶ್ ಮತ್ತು ಸುದೀಪ್ ಫೋಟೋಗಳನ್ನು ಬಳಸಿಕೊಂಡು ಪ್ರಚಾರ ಮಾಡೋಕೆ ಶುರು ಮಾಡಿದ್ದಾರೆ. ಅಭ್ಯರ್ಥಿಗಳ ಫೋಟೋಗಳನ್ನು ನಟರು ತಮ್ಮ ಕೈಯಲ್ಲಿ ಹಿಡಿದಂತೆ ಎಡಿಟ್ ಮಾಡಿ ಫೇಸ್ ಬುಕ್ ಅಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಈ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ರೂ, ಚುನಾವಣಾಧಿಕಾರಿಗಳು ಮಾತ್ರ ಈವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.

  • ಸಚಿವ ಎ.ಮಂಜು ವಿರುದ್ಧ ಡಿಸಿ ರೋಹಿಣಿ ಸೆಡ್ಡು – ಹಾಸನದ ಮಂತ್ರಿಗಳ ಕಚೇರಿಗೆ ಬೀಗ

    ಸಚಿವ ಎ.ಮಂಜು ವಿರುದ್ಧ ಡಿಸಿ ರೋಹಿಣಿ ಸೆಡ್ಡು – ಹಾಸನದ ಮಂತ್ರಿಗಳ ಕಚೇರಿಗೆ ಬೀಗ

    ಹಾಸನ: ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಯಲ್ಲಿ ಇದ್ದರು, ಹಾಸನ ಮಂತ್ರಿಗಳ ಕಚೇರಿಯ ಮುಂಬಾಗಿಲಿಗೆ ಬೀಗ ಹಾಕಿ ಒಳಗೆ ಸಿಬ್ಬಂದಿ  ಕಾರ್ಯನಿರ್ವಹಿಸುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ರೋಹಿಣಿ ಅವರು ಸಚಿವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

    ಸಚಿವ ಎ.ಮಂಜು ಕಚೇರಿಯಲ್ಲಿ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ಕುರಿತು ಮಾಹಿತಿ ಪಡೆದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗಿದ್ದರು, ಆದರೆ ಈ ವೇಳೆ ಎಷ್ಟೇ ಪ್ರಯತ್ನ ಮಾಡಿದರು ಸಿಬ್ಬಂದಿ ಕಚೇರಿ ಬಾಗಿಲು ತೆರೆಯದ ಕಾರಣ ಜಿಲ್ಲಾಧಿಕಾರಿಗಳು ಕಚೇರಿಯನ್ನು ವಶಕ್ಕೆ ಪಡೆಯಲು ಆದೇಶ ನೀಡಿದ್ದಾರೆ.

    ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಡಿಸಿ ಕಚೇರಿ ಸಿಬ್ಬಂದಿ ಮತ್ತೊಂದು ಬೀಗ ಜಡಿದಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರು ಕಚೇರಿಯಲ್ಲಿ ಮೂವರು ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಈ ಸಂಬಂಧ ಅವರನ್ನು ಪರಿಶೀಲನೆ ನಡೆಸಿದ ಬಳಿಕ ಹೊರಕಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ನೀತಿ ಸಂಹಿತೆ ಜಾರಿ ಬಳಿಕ ಸರ್ಕಾರಿ ಕಟ್ಟಡ ದುರ್ಬಳಕೆ ಆರೋಪ ಇದಾಗಿದ್ದು, ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೆ ಚುನಾಣಾಧಿಕಾರಿಯಿಂದ ನೋಟಿಸ್ ಜಾರಿಯಾಗಿದೆ. ಚುನಾವಣಾ ಸಿಬ್ಬಂದಿ ಸ್ಥಳಪರಿಶಿಲನೆ ವೇಳೆ ಹೊರಗಿನಿಂದ ಬೀಗಹಾಕಿ ಒಳಗೆ ಕೆಲಸಮಾಡಲಾಗುತ್ತಿತ್ತು ಎಂಬ ಬಗ್ಗೆ ಉಲ್ಲೇಖಿಸಿ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ ನೀತಿ ಸಂಹಿತೆ ಜಾರಿಯಾದ ಬಳಿಕವೂ ಸರ್ಕಾರಿ ಕಟ್ಟಡವನ್ನ ರಾಜಕೀಯ ವ್ಯಕ್ತಿಗಳಿಗೆ ಬಿಟ್ಟು ಕೊಟ್ಟ ಕುರಿತು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಏಪ್ರಿಲ್ 2 ರೊಳಗೆ ಉತ್ತರ ನೀಡಲು ಸೂಚನೆ ನೀಡಲಾಗಿದೆ.