Tag: ಚುನಾವಣಾ ಅಧಿಕಾರಿ

  • ಚುನಾವಣಾಧಿಕಾರಿಗಳ ದಿಕ್ಕು ತಪ್ಪಿಸುತ್ತೀರೊ ಕಿಡಿಗೇಡಿಗಳು

    ಚುನಾವಣಾಧಿಕಾರಿಗಳ ದಿಕ್ಕು ತಪ್ಪಿಸುತ್ತೀರೊ ಕಿಡಿಗೇಡಿಗಳು

    ಚಿಕ್ಕಬಳ್ಳಾಪುರ: ರಾಜ್ಯ ಚುನಾವಣಾ ದಿನಾಂಕ ಘೋಷಣೆಯಾದಂದೇ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಅಧಿಕಾರಿಗಳು ಹಗಲು-ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಕೆಲ ಕಿಡಿಗೇಡಿಗಳು ಅಧಿಕಾರಿಗಳ ದಿಕ್ಕು ತಪ್ಪಿಸಲು ಕರೆ ಮಾಡಿ ಸುಳ್ಳು ದೂರುಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ.

    ದೂರು ಪ್ರಾಧಿಕಾರಕ್ಕೆ ಬರುವ ಬಹುತೇಕ ಕರೆಗಳಿಂದ ಸುಳ್ಳು ಮಾಹಿತಿ ನೀಡಲಾಗುತ್ತಿದೆ. ದೂರು ಪ್ರಾಧಿಕಾರಕ್ಕೆ ಬರ್ತಿರೋ ಶೇ 70 ರಷ್ಟು ಕರೆಗಳು ಸುಳ್ಳು ಮಾಹಿತಿ ಅನ್ನೋದು ಈಗ ಬಯಲಾಗಿದೆ. ದೂರುಗಳು ಬಂದ ಮೇಲೆ ಪರಿಶೀಲನೆಗೆ ತೆರಳಿದಾಗ ಅಲ್ಲಿ ಏನು ಇರದೇ ಹಿಂದಿರುಗವ ಸ್ಥಿತಿ ಬಂದಿದೆ. ಕೆಲವರು ಈ ರೀತಿಯಾಗಿ ಫೇಕ್ ಕಾಲ್ ಮಾಡಿ ಅಧಿಕಾರಿಗಳ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾರಾದ್ರೂ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ರೆ ಅಂತ ಚುನಾವಣಾ ದೂರು ನಿರ್ವಹಣಾ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವಜನಿಕರು ದೂರು ನಿರ್ವಹಣಾ ಕೇಂದ್ರಕ್ಕೆ ಕರೆ ಅಥವಾ ವಾಟ್ಸಪ್ ಸಂದೇಶದ ಮೂಲಕ ಕಂಪ್ಲೇಂಟ್ ನೀಡಬಹುದು. ಆದ್ರೆ ಇದೀಗ ಜನರು ನಮಗೆ ಸುಳ್ಳು ಮಾಹಿತಿಗಳನ್ನು ನೀಡುತ್ತಿದ್ದಾರೆ ಅಂತಾ ಅಧಿಕಾರಿಗಳು ಹೇಳುತ್ತಿದ್ದಾರೆ.

    ಜಿಲ್ಲೆಯಲ್ಲಿ ದೂರು ಪ್ರಾಧಿಕಾರಕ್ಕೆ ಬರುವ ಕರೆಗಳನ್ನ ಆಧರಿಸಿ ದಾಳಿ ಮಾಡೋಕೆ ಅಂತಲೇ 37 ಸಂಚಾರಿ ತಂಡಗಳನ್ನ ನೇಮಕ ಮಾಡಲಾಗಿದ್ದು, ಪ್ರತಿ ತಂಡದಲ್ಲೂ ಒರ್ವ ತಾಲೂಕು ಮಟ್ಟದ ಆಧಿಕಾರಿ, ಇಬ್ಬರು ಪೊಲೀಸರು, ಒರ್ವ ಅಬಕಾರಿ ಇಲಾಖೆಯ ಸಿಬ್ಬಂದಿ ಸೇರಿ 200 ಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ರೆ ಕರೆ ಬಂದ ಮಾಹಿತಿ ಆಧರಿಸಿ ಹೋದ್ರೆ ಅಲ್ಲಿ ಏನೂ ಇಲ್ಲ ಬರೀ ಸುಳ್ಳು ಅಂತ ಅಧಿಕಾರಿಗಳು ಸುಸ್ತಾಗಿ ಹೋಗ್ತಿದ್ದಾರೆ

  • ಕುಂದಾಪುರದಲ್ಲಿ ಚುನಾವಣಾ ಅಧಿಕಾರಿಗಳ ಮೇಲೆ ಹಲ್ಲೆ ಯತ್ನ

    ಕುಂದಾಪುರದಲ್ಲಿ ಚುನಾವಣಾ ಅಧಿಕಾರಿಗಳ ಮೇಲೆ ಹಲ್ಲೆ ಯತ್ನ

    ಉಡುಪಿ: ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಅಧಿಕಾರಿಗಳ ಮೇಲೆ ಜಿಲ್ಲೆಯ ಕುಂದಾಪುರದಲ್ಲಿ ಹಲ್ಲೆಯತ್ನ ನಡೆದಿದೆ. ಕುಂದಾಪುರದ ಸಹನಾ ರೆಸ್ಟೋರೆಂಟ್ ಮೇಲೆ ದಾಳಿ ಮಾಡಲು ತೆರಳಿದ್ದ ಕುಂದಾಪುರ ಸಹಾಯಕ ಕಮಿಷನರ್ ಮತ್ತು ಐಎಎಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ.

    ಸಹನಾ ಹೋಟೆಲ್ ಮತ್ತು ಲಾಡ್ಜ್ ನಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಕುಂದಾಪುರ ಸಹಾಯಕ ಕಮಿಷನರ್ ಭೂಬಾಲನ್ ಮತ್ತು ಐಎಎಸ್ ಅಧಿಕಾರಿ ಪೂವಿತಾ ಅವರಿಗೆ ಸಾರ್ವಜನಿಕರು ದೂರು ನೀಡಿದ್ದರು.

    ಚುನಾವಣಾ ನೀತಿ ಸಂಹಿತೆ ಪಾಲನೆ ನಿಟ್ಟಿನಲ್ಲಿ ಸೋಮವಾರ ರಾತ್ರಿ ಕುಂದಾಪುರ ಬಳಿ ರಾಷ್ಟ್ರೀಯ ಹೆದ್ದಾರಿ ಕೋಟೇಶ್ವರದ ಸಹನಾ ಹೋಟೆಲ್ ಆಂಡ್ ಲಾಡ್ಜ್ ಹೋಟೆಲ್ ಮೇಲೆ ದಾಳಿ ನಡೆಸಿದ್ದರು. ಸಹನಾ ಹೋಟೆಲಿನಲ್ಲಿ ಹೊರಗಿನವರಿಗೆ ಮದ್ಯ ಸರಬರಾಜಿಗೆ ಅವಕಾಶ ಇಲ್ಲದೆ ಹೋದರೂ ಅನಧಿಕೃತವಾಗಿ ಮದ್ಯ ಸರಬರಾಜು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳು ಹೋಟೆಲಿನವರೊಂದಿಗೆ ಪ್ರಶ್ನೆ ಮಾಡಿದ್ದಾರೆ.

    ಈ ವೇಳೆ ಹೋಟೆಲಿನವರು ಮತ್ತು ಅಲ್ಲಿದ್ದ ಕೆಲವರೊಂದಿಗೆ ಮಾತಿನ ಚಕಮಕಿ ನಡೆದಿದೆ. ಅಪಾಯದ ಮುನ್ಸೂಚನೆಯನ್ನು ಅರಿತ ಅಧಿಕಾರಿಗಳು ಕೂಡಲೇ ಕುಂದಾಪುರ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಇನ್ನಿಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದು ಶೋಧ ಕಾರ್ಯ ನಡೆದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ಮಾಹಿತಿ ನೀಡಿದ್ದಾರೆ. ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಸಲುವಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಹಾಯಕ ಕಮೀಷನರ್ ಅವರಿಗೆ ಗನ್ ಮ್ಯಾನ್ ನೀಡಿದ್ದು, ಇದರಿಂದ ನಡೆಯಬಹುದಾದ ಹಲ್ಲೆ ತಪ್ಪಿದೆ.

    ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಹೋಟೆಲಿನವರ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಮತದಾನ ಜಾಗೃತಿ ಮೂಡಿಸುವ ಫಲಕದಲ್ಲಿ ಚುನಾವಣಾ ಅಧಿಕಾರಿಗಳಿಂದ ಎಡವಟ್ಟು

    ಮತದಾನ ಜಾಗೃತಿ ಮೂಡಿಸುವ ಫಲಕದಲ್ಲಿ ಚುನಾವಣಾ ಅಧಿಕಾರಿಗಳಿಂದ ಎಡವಟ್ಟು

    ಚಾಮರಾಜನಗರ: ಜನರಲ್ಲಿ ವಿಧಾನಸಭಾ ಚುನಾವಣೆಯ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಅಧಿಕಾರಿಗಳು ಚಾಮರಾಜನಗರದಲ್ಲಿ ಎಡವಟ್ಟೊಂದು ಮಾಡಿದ್ದಾರೆ.

    ಚಾಮರಾಜನಗರದಲ್ಲಿ 2014 ನೇ ಸಾಲಿನಲ್ಲಿ ನಡೆದ ಲೋಕಸಭಾ ಚುನಾವಣೆಯ ಪೋಸ್ಟರ್‍ಗಳನ್ನು ಬಳಸಿ ಕಡ್ಡಾಯ ಮತದಾನ ಮಾಡಿ ಎಂದು ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಅಬ್ದುಲ್ ಕಲಾಂ ಅವರು ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಆ ವೇಳೆ ಅಬ್ದುಲ್ ಕಲಾಂರ ಭಾವಚಿತ್ರದೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಭಾಗಿ ಆಗುವಂತೆ ಕೋರಲಾಗಿದ್ದ ಪೋಸ್ಟರ್ ಗಳು ಚಾಮರಾಜನಗರದಲ್ಲಿ ರಾರಾಜಿಸುತ್ತಿವೆ.

    ಈ ಬಾರಿಯ ವಿಧಾನಸಭಾ ಚುನಾವಣೆಯ ಬಗ್ಗೆ ಜನರಲ್ಲಿ ಮತದಾನ ಜಾಗೃತಿ ಮೂಡಿಸಲು ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ನೇಮಕ ಮಾಡಿಕೊಂಡಿದೆ. ಹೀಗಾಗಿ ಎಲ್ಲಾ ಜಿಲ್ಲೆಗಳಲ್ಲೂ ದ್ರಾವಿಡ್ ಅವರ ಭಾವ ಚಿತ್ರವನ್ನು ಹಾಕಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ಚುನಾವಣಾ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.