Tag: ಚುನವಣೆ

  • ರಾಜಕಾರಣ ನನಗೆ ಹೊಸದಲ್ಲ, ಹೊಂದಾಣಿಕೆ ಮಾತೇ ಇಲ್ಲ: ಡಿಕೆಶಿ

    ರಾಜಕಾರಣ ನನಗೆ ಹೊಸದಲ್ಲ, ಹೊಂದಾಣಿಕೆ ಮಾತೇ ಇಲ್ಲ: ಡಿಕೆಶಿ

    ಬೆಂಗಳೂರು: ರಾಜಕಾರಣ ನನಗೆ ಹೊಸದಲ್ಲ. ನಾನು ಯಾವತ್ತು ಹೊಂದಾಣಿಕೆ ಮಾಡಿಕೊಂಡು ಹೋಗುವ ಮಾತೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜಕಾರಣವನ್ನು ಫುಟ್ ಬಾಲ್ ಅಲ್ಲ, ಚೆಸ್ ಗೇಮ್ ಎಂದು ಹೇಳಿದ್ದೆ. ಅವರು ಚೆಸ್ ಆಡ್ತಾ ಇದ್ದಾರೆ, ನಾನು ಚೆಸ್ ಆಡ್ತಾ ಇದ್ದೇನೆ. ರಾಜಕಾರಣ ನನಗೆ ಹೊಸದಲ್ಲ. ದೇವೇಗೌಡರ ವಿರುದ್ಧ ಹೋರಾಡಿದ್ದೇನೆ. ಕುಮಾರಣ್ಣನ ವಿರುದ್ಧ ಹೋರಾಡಿದ್ದೇನೆ. ನಾನು ಯಾವತ್ತು ಹೊಂದಾಣಿಕೆ ಮಾಡಿಕೊಂಡು ಹೋಗುವ ಮಾತೇ ಇಲ್ಲ ಎಂದರು.

    ಪದ್ಮನಾಭನಗರದಲ್ಲಿ ಸುರೇಶ್ (DK Suresh) ಕೊಡಬೇಕು ಅಂತಾ ಒತ್ತಡ ಇದೆ, ಇಲ್ಲ ಅಂತಾ ಹೇಳಲ್ಲ. ಆದರೆ ರಘುನಾಥ್ ನಾಯ್ಡು ಹಾಕಿದ್ದೇವೆ ಮಾತಾಡಿ ನೋಡುತ್ತೇನೆ. ಅಭ್ಯರ್ಥಿ ಬದಲಾವಣೆ ಇಲ್ಲ. ಹಿಂದೆ ಒಕ್ಕಲಿಗ ಅಭ್ಯರ್ಥಿ ಹಾಕಿದ್ದೆವು ಅಲ್ಲಿ ಸೋತೆವು. ಪದ್ಮನಾಭ ನಗರದಲ್ಲಿ ನಾಯ್ಡುಗಳು ಜಾಸ್ತಿ ಇದ್ದಾರೆ. ಈ ಬಾರಿ ಅಶೋಕ್ (R Ashok) ಪದ್ಮನಾಭ ನಗರದಲ್ಲೂ ಸೋಲ್ತಾರೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಪದ್ಮನಾಭನಗರದಿಂದ ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಕಣಕ್ಕೆ?

    ಸಿಎಂ ವಿರುದ್ಧ ಪ್ರಬಲ ಸ್ಪರ್ಧಿ ಹಾಕ್ತೀರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿನಯ್ ಕುಲಕರ್ಣಿಗೆ ಧಾರವಾಡ ಗ್ರಾಮೀಣ ಕೊಟ್ಟಿದ್ದೇವೆ. ಕಾರ್ಯಕರ್ತರ ಜೊತೆ ಮಾತಾಡುತ್ತೇನೆ. ವಿನಯ್ ಕುಲಕರ್ಣಿನಾ ಹಾಕಬೇಕು ಅಂತಾ ನಿಮಗೆ ಆಸೆ ಇದೆ ಅನ್ನಿಸುತ್ತದೆ. ವಿನಯ್ ಕುಲಕರ್ಣಿ ಜೊತೆ ಮಾತಾಡಿ ನೋಡುತ್ತೇನೆ ಎಂದು ಹೇಳಿದರು.

    ಲಕ್ಷ್ಮಣ ಸವದಿ ನಮ್ಮನ್ನ ಸಂಪರ್ಕ ಮಾಡಿಲ್ಲ, ನಾನು ಸಂಪರ್ಕ ಮಾಡಿಲ್ಲ. ನಮ್ಮ ಕಾರ್ಯಕರ್ತರ ಜೊತೆ ಮಾತನಾಡುತ್ತಿದ್ದೇನೆ. ನಮ್ಮಲ್ಲಿ ಅಸಮಾಧಾನಿತರಿದ್ದಾರೆ. ಅವರ ಜೊತೆ ಮಾತಾಡ್ತಾ ಇದ್ದೇನೆ. ನಾನು ಯಾರನ್ನು ಸಂಪರ್ಕ ಮಾಡಿಲ್ಲ ಎಂದರು. ಇದನ್ನೂ ಓದಿ: 2019ರ ಲೋಕಸಭಾ ಚುನಾವಣೆಗೆ ಬಿದ್ದ ಮತಗಳನ್ನು ಪರಿಗಣಿಸಿದರೆ ಯಾರಿಗೆ ಎಷ್ಟು ಸ್ಥಾನ ಸಿಗಬಹುದು?

  • 2 ಕಡೆ ಟಿಕೆಟ್ ಕೊಡ್ತಾರೆ ಅಂತ ಕನಸಲ್ಲೂ ಅನ್ಕೊಂಡಿರಲಿಲ್ಲ: ಸೋಮಣ್ಣ

    2 ಕಡೆ ಟಿಕೆಟ್ ಕೊಡ್ತಾರೆ ಅಂತ ಕನಸಲ್ಲೂ ಅನ್ಕೊಂಡಿರಲಿಲ್ಲ: ಸೋಮಣ್ಣ

    ಬೆಂಗಳೂರು: ಎರಡು ಕಡೆ ಟಿಕೆಟ್ ಕೊಡ್ತಾರೆ ಅಂತಾ ನಾನು ಕನಸು ಮನಸಲ್ಲೂ ಅನ್ಕೊಂಡಿರಲಿಲ್ಲ. ವಿಧಿ ನಿಯಮ, ವರಿಷ್ಠರ ತೀರ್ಮಾನ ಎಂದು ಸಚಿವ ವಿ. ಸೋಮಣ್ಣ (V Somanna) ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಿಂದರಾಜನಗರ ನನ್ನ ಜನ್ಮ ಭೂಮಿ. ವರುಣಾ (Varuna), ಚಾಮರಾಜನಗರ (Chamarajanagar) ನನ್ನ ಕರ್ಮ ಭೂಮಿಯಾಗಿದೆ. ಭಗವಂತನ ಇಚ್ಛೆ ಹೇಗಿದಿಯೊ ನೋಡೋಣ. ನಾಳೆಯಿಂದ ವರುಣಾ, ಚಾಮರಾಜನಗರದಲ್ಲಿ ಪ್ರಚಾರ ಶುರು ಮಾಡುತ್ತೇನೆ ಎಂದು ಹೇಳಿದರು.

    ಗುಬ್ಬಿ, ಗೋವಿಂದರಾಜನಗರ ಮಗನಿಗೆ ಕೇಳಿದ್ದೇನೆ. ಈ ಬಗ್ಗೆ ಬಿಜೆಪಿ (BJP) ಹೈಕಮಾಂಡ್ ಜೊತೆಗೂ ಮಾತನಾಡಿದ್ದೇನೆ. ಮಗನಿಗೆ ಟಿಕೆಟ್ ಕೊಡೋದು ಬಿಡೋದು ಹೈಕಮಾಂಡ್‍ಗೆ ಬಿಟ್ಟದ್ದು, ಬೆಂಬಲಿಗರು ಸಂಯಮದಿಂದ ಇರಬೇಕು ಎಂದರು. ಇದನ್ನೂ ಓದಿ: ಟಿಕೆಟ್ ತಪ್ಪಿದ್ದಕ್ಕೆ ಲಕ್ಷ್ಮಣ ಸವದಿ ಕಣ್ಣೀರು

    ಗೋವಿಂದರಾಜನಗರ ಕ್ಷೇತ್ರ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸೋಮಣ್ಣನ ಮನೆ ಮುಂದೆ ನೂರಾರು ಕಾರ್ಯಕರ್ತರು ಜಮಾಯಿಸಿದರು. ಸೋಮಣ್ಣ ಮಗ ಡಾ. ಅರುಣ್ ಸೋಮಣ್ಣರಿಗೆ ಗೋವಿಂದರಾಜನಗರದಿಂದಲೇ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದರು. ಬೇರೆವರಿಗೆ ಟಿಕೆಟ್ ನೀಡಿದ್ರೆ ನಮ್ಮ ಬೆಂಬಲಿಗರಿಗೆ ಕೆಲಸ ಮಾಡಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಬಿಜೆಪಿ ಟಿಕೆಟ್ – ಜಾತಿವಾರು ಲೆಕ್ಕಾಚಾರ ಏನು?

  • ಚುನಾವಣಾಧಿಕಾರಿಗಳ ಎಡವಟ್ಟಿನಿಂದ ಮತದಾನ ಸ್ಥಗಿತ- ಕಣ್ಣೀರು ಹಾಕಿದ ಅಭ್ಯರ್ಥಿಗಳು

    ಚುನಾವಣಾಧಿಕಾರಿಗಳ ಎಡವಟ್ಟಿನಿಂದ ಮತದಾನ ಸ್ಥಗಿತ- ಕಣ್ಣೀರು ಹಾಕಿದ ಅಭ್ಯರ್ಥಿಗಳು

    ಶಿವಮೊಗ್ಗ: ಕುರುಬ ಸಂಘದ ನಿರ್ದೇಶಕ ಸ್ಥಾನಕ್ಕೆ ರಾಜ್ಯಾದ್ಯಂತ ಇಂದು ಮತದಾನ ನಡೆಯುತ್ತಿದೆ. ಆದರೆ ಚುನಾವಣಾಧಿಕಾರಿಗಳ ಎಡವಟ್ಟಿನಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಮತದಾನ ಸ್ಥಗಿತಗೊಂಡಿದೆ.

    ಶಿವಮೊಗ್ಗದ ದುರ್ಗಿಗುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುರುಬ ಸಮಾಜದ ನಿರ್ದೇಶಕ ಸ್ಥಾನಕ್ಕೆ ಇಂದು ಬೆಳಗ್ಗೆಯಿಂದ ಮತದಾನ ನಡೆಯುತ್ತಿತ್ತು. ಕೆಲವು ಮತದಾರರು ಮತದಾನವನ್ನು ಸಹ ಮಾಡಿದ್ದರು. ಆದರೆ ಶಿವಮೊಗ್ಗ ಜಿಲ್ಲೆಯ ಬ್ಯಾಲೆಟ್ ಪೇಪರ್ ಬದಲಿಗೆ ಬೀದರ್ ಜಿಲ್ಲೆಯ ಬ್ಯಾಲೆಟ್ ಪೇಪರ್ ರವಾನೆಯಾಗಿದ್ದವು. ಇದನ್ನು ಗಮನಿಸದ ಚುನಾವಣಾ ಅಧಿಕಾರಿಗಳು ಸಹ ಮತದಾನ ಆರಂಭಿಸಿದ್ದರು.

    ಬ್ಯಾಲೆಟ್ ಪೇಪರ್ ಬದಲಾಗಿರುವುನ್ನು ಗಮನಿಸಿದ ಕೆಲವು ಮತದಾರರು ಅಭ್ಯರ್ಥಿಗಳ ಗಮನಕ್ಕೆ ತಂದಿದ್ದಾರೆ. ನಂತರ ಎಚ್ಚೆತ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮತದಾನ ಕೇಂದ್ರದಲ್ಲಿ ಕೆಲಕಾಲ ಗೊಂದಲ ವಾತಾವರಣ ನಿರ್ಮಾಣವಾಗಿ ಮತದಾರರು ಹಾಗು ಅಭ್ಯರ್ಥಿಗಳು ಚುನಾವಣಾಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಅರಿತ ಪೊಲೀಸ್ ಅಧಿಕಾರಿಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದರು.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತದಾನ ಸ್ಥಗಿತಗೊಂಡಿದ್ದರಿಂದ ಮನನೊಂದ ಅಭ್ಯರ್ಥಿಗಳು ಕಣ್ಣೀರು ಹಾಕುತ್ತಾ ಮನೆಯತ್ತ ತೆರಳಿದರು. ಬ್ಯಾಲೆಟ್ ಪೇಪರ್ ಅದಲು ಬದಲಾಗಿ ಮತದಾನ ಸ್ಥಗಿತಗೊಂಡಿದ್ದರಿಂದ ಮುಂದಿನ ದಿನಗಳಲ್ಲಿ ಮತ್ತೆ ಮತದಾನದ ದಿನಾಂಕ ತಿಳಿಸಲಾಗುವುದು ಎಂದು ಚುನಾವಣಾಧಿಕಾರಿ ಪಾಶ ತಿಳಿಸಿದ್ದಾರೆ.