Tag: ಚೀಟಿ ವ್ಯವಹಾರ

  • ಚೀಟಿ ವ್ಯವಹಾರ- 8 ಕೋಟಿ ಹಣದೊಂದಿಗೆ ಮಹಿಳೆ ಪರಾರಿ

    ಚೀಟಿ ವ್ಯವಹಾರ- 8 ಕೋಟಿ ಹಣದೊಂದಿಗೆ ಮಹಿಳೆ ಪರಾರಿ

    ಬೆಂಗಳೂರು: ಜನ ಕಷ್ಟ ಪಟ್ಟು ಸಂಪಾದನೆ ಮಾಡಿದ ಹಣವನ್ನು ಸ್ವಲ್ಪವಾದರೂ ಕೂಡಿಡಬೇಕೆಂದು ಚೀಟಿ ಹಾಕುತ್ತಾರೆ. ಕಷ್ಟವಾದರೂ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಹಣ ಕಟ್ಟುತ್ತಾರೆ. ಹೀಗೆ 100ಕ್ಕೂ ಹೆಚ್ಚು ಜನರ ಬಳಿ ಹಣ ಕಟ್ಟಿಸಿಕೊಂಡು ಮಹಿಳೆ ಪರಾರಿಯಾಗಿದ್ದಾಳೆ.

    ಬೆಂಗಳೂರು ಗ್ರಾಮಂತರ ಜಿಲ್ಲೆಯ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಪುರದಲ್ಲಿ ಘಟನೆ ನಡೆದಿದ್ದು, ಕಳೆದ ಐದಾರು ವರ್ಷಗಳಿಂದ ಬಸವನಪುರದಲ್ಲಿ ನೆಲೆಸಿದ್ದ ಮಂಜುಳಾ, ಚೀಟಿ ವ್ಯವಹಾರ ನಡೆಸುತ್ತಿದ್ದಳು. ಆಕೆಯನ್ನು ನಂಬಿ ಜನ ಲಕ್ಷಾಂತರ ಮೌಲ್ಯದ ಚೀಟಿಗಳನ್ನು ಹಾಕಿದ್ದರು.

    ಸುಮಾರು ನೂರಕ್ಕೂ ಹೆಚ್ಚು ಜನರ ಬಳಿ 8 ಕೋಟಿ ರೂ.ಗೂ ಅಧಿಕ ಹಣವನ್ನು ಕಟ್ಟಿಸಿಕೊಂಡಿದ್ದ ಮಂಜುಳಾ, ಗ್ರಾಮಸ್ಥರಿಗೆ ಪಂಗನಾಮ ಹಾಕಿ ಊರನ್ನೇ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾಳೆ. ಇತ್ತ ಕಷ್ಟ ಕಾಲಕ್ಕೆ ಇರಲೆಂದು ಚೀಟಿ ಹಾಕಿದ್ದ ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತಮ್ಮ ಹಣ ವಾಪಸ್ ಕೊಡಿಸುವಂತೆ ಪೊಲೀಸರ ಬಳಿ ಕಣ್ಣೀರು ಹಾಕುತ್ತಿದ್ದಾರೆ.

    ಮೊದಲು ಚೀಟಿ ಹಣವನ್ನು ಕಾಲ ಕಾಲಕ್ಕೆ ನೀಡುತ್ತ ಬಂದ ಮಂಜುಳಾ, ಜನರ ಬಳಿ ವಿಶ್ವಾಸದಿಂದ ನಡೆದುಕೊಂಡಿದ್ದಳು. ಬಳಿಕ ಕೋಟಿ ಕೋಟಿ ರೂಪಾಯಿ ಮೌಲ್ಯದ ಚೀಟಿಗಳನ್ನು ನಡೆಸಲು ಶುರು ಮಾಡಿದ್ದು, ತಿಂಗಳಿಗೆ ಲಕ್ಷಾಂತರ ರೂ. ಹಣವನ್ನು ಜನರಿಂದ ವಸೂಲಿ ಮಾಡುತ್ತಿದ್ದಳು. ಆದರೆ ಕಳೆದ ಒಂದು ವಾರದ ಹಿಂದೆ ಏಕಾಏಕಿ ಮನೆ ಖಾಲಿ ಮಾಡಿರುವ ಮಂಜುಳಾ ಗ್ರಾಮಸ್ಥರ ಬಳಿ ಕಟ್ಟಿಸಿಕೊಂಡಿದ್ದ ಸುಮಾರು 8 ಕೋಟಿ ರೂ.ಗೂ ಅಧಿಕ ಮೌಲ್ಯದ ಚೀಟಿ ಹಣವನ್ನು ತೆಗೆದುಕೊಂಡು ರಾತ್ರೋರಾತ್ರಿ ಊರನ್ನೇ ಖಾಲಿ ಮಾಡಿ ಪರಾರಿಯಾಗಿದ್ದಾಳೆ.

    ಚೀಟಿ ಹಾಕಿದವರಲ್ಲಿ ಅತೀ ಹೆಚ್ಚು ಗಾರ್ಮೆಂಟ್ಸ್ ನೌಕರರು, ಆಟೋ ಡ್ರೈವರ್, ದಿನಗೂಲಿ ನೌಕರರೇ ಇದ್ದು, ಹಣ ಕಳೆದುಕೊಂಡ ಜನ ದಿಕ್ಕು ತೋಚದೆ ಕಂಗಾಲಾಗಿದ್ದಾರೆ.

    ಮೊದಲು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಖತರ್ನಾಕ್ ಮಂಜುಳಾ ಬಳಿಕ ಚೀಟಿ ವ್ಯವಹಾರ ಆರಂಭಿಸಿದ್ದಳು. ಗಾರ್ಮೆಂಟ್ಸ್ ನಲ್ಲಿ ಪರಿಚಯವಿದ್ದ ಮಹಿಳೆಯರನ್ನು ಮೊದಲು ಟಾರ್ಗೆಟ್ ಮಾಡಿಕೊಂಡ ಈಕೆ, ಅವರ ಬಳಿ ಚೀಟಿ ಹಾಕಿಸಿಕೊಂಡಿದ್ದಳು. ಇದೇ ಚೀಟಿ ವ್ಯವಹಾರದ ಮೂಲಕವೇ ಲಕ್ಷಾಂತರ ರೂಪಾಯಿ ಹಣವನ್ನು ಸಂಪಾದನೆ ಮಾಡಿ, ಭವ್ಯವಾದ ಸ್ವಂತ ಮನೆಯನ್ನು ಸಹ ಖರೀದಿ ಮಾಡಿದ್ದಳು. ಬಣ್ಣದ ಮಾತಿನಿಂದ ಜನರಿಗೆ ಮಂಕು ಬೂದಿ ಎರಚಿದ್ದಳು. ಇದೀಗ ತನ್ನ ಸ್ವಂತ ಮನೆಯನ್ನೂ ಮಾರಿಕೊಂಡು ಪರಾರಿಯಾಗಿದ್ದು, ಹಣ ಕಳೆದುಕೊಂಡವರು ಹುಳಿಮಾವು ಪೊಲೀಸ್ ಠಾಣೆ ಮುಂದೆ ಕಣ್ಣೀರು ಹಾಕುತ್ತಿದ್ದಾರೆ.

  • ಚೀಟಿ ಹೆಸರಲ್ಲಿ ಕೋಟ್ಯಂತರ ರೂ. ದೋಖಾ – ಕಚೇರಿ ಮುಚ್ಚಿಕೊಂಡು ವಂಚಕ ಪರಾರಿ

    ಚೀಟಿ ಹೆಸರಲ್ಲಿ ಕೋಟ್ಯಂತರ ರೂ. ದೋಖಾ – ಕಚೇರಿ ಮುಚ್ಚಿಕೊಂಡು ವಂಚಕ ಪರಾರಿ

    ಶಿವಮೊಗ್ಗ: ಮೋಸ ಹೋಗುವ ಜನ ಇರುವವರೆಗೆ ಮೋಸ ಮಾಡೋ ಜನ ಇದ್ದೇ ಇರುತ್ತಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಶಿವಮೊಗ್ಗದಲ್ಲಿ ಚೀಟಿ ಹೆಸರಿನಲ್ಲಿ ವಂಚಕನೋರ್ವ ಕೋಟ್ಯಂತರ ರೂ. ಹಣ ದೋಚಿಕೊಂಡು ಜನರಿಗೆ ಪಂಗನಾಮ ಹಾಕಿದ್ದಾನೆ.

    ನಗರದ ಬಿ.ಎಚ್ ರಸ್ತೆಯಲ್ಲಿ ತುಂಗಾ ಪತ್ತಿನ ಸಹಕಾರ ಸಂಘದ ಹೆಸರಿನಲ್ಲಿ ಅದರ ಸಂಸ್ಥಾಪಕ ಶಂಕರ್ ನಾಗ್ ನೂರಾರು ಮಂದಿಯಿಂದ ಚೀಟಿ ಹಾಗು ಪಿಗ್ಮಿ ಕಲೆಕ್ಟ್ ಮಾಡುತ್ತಿದ್ದನು. ಈತನನ್ನು ನಂಬಿ ನೂರಾರು ಮಂದಿ ಅಮಾಯಕರು, ಬಡ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಕಷ್ಟಪಟ್ಟು ದುಡಿದಿದ್ದ ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಇದೀಗ ಹಣ ವಸೂಲಿ ಮಾಡಿಕೊಂಡ ಶಂಕರ್ ನಾಗ್ ಕಳೆದೊಂದು ವಾರದಿಂದ ಕಚೇರಿಯ ಬಾಗಿಲು ಮುಚ್ಚಿಕೊಂಡು ಎಸ್ಕೇಪ್ ಆಗಿದ್ದಾನೆ.

    ಸುಮಾರು 4 ಕೋಟಿಗೂ ಅಧಿಕ ಹಣದೊಂದಿಗೆ ಜಾಗ ಖಾಲಿ ಮಾಡಿದ್ದಾನೆ. ಶಂಕರ್ ನಾಗ್ ಬಳಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ನೂರಾರು ಮಂದಿ ಆತಂಕಕ್ಕೊಳಗಾಗಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ತಮ್ಮ ಹಣದೊಂದಿಗೆ ನಾಪತ್ತೆಯಾಗಿರುವ ಶಂಕರ್ ನಾಗ್‍ನನ್ನು ಪತ್ತೆ ಹಚ್ಚಿ, ಹಣವನ್ನು ವಾಪಸ್ ಕೊಡಿಸುವಂತೆ ಪೊಲೀಸರಲ್ಲಿ ಹಣಹೂಡಿದವರು ಮನವಿ ಮಾಡಿಕೊಂಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ವಂಚಕನ ಪತ್ತೆಗೆ ಬಲೆ ಬೀಸಿದ್ದಾರೆ.

  • ವಿಕೆಟ್‍ಗಳಿಂದ ಬಡಿದಾಡಿಕೊಂಡ ಯೂತ್ ಕಾಂಗ್ರೆಸ್ ಕಾರ್ಯದರ್ಶಿ, ವಾರ್ಡ್ ಅಧ್ಯಕ್ಷ

    ವಿಕೆಟ್‍ಗಳಿಂದ ಬಡಿದಾಡಿಕೊಂಡ ಯೂತ್ ಕಾಂಗ್ರೆಸ್ ಕಾರ್ಯದರ್ಶಿ, ವಾರ್ಡ್ ಅಧ್ಯಕ್ಷ

    ಬೆಂಗಳೂರು: ಹಣದ ವಿಚಾರವಾಗಿ ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಹಾಗೂ ಬಾಗಲಗುಂಟೆ ವಾರ್ಡ್ ಅಧ್ಯಕ್ಷರಿಬ್ಬರೂ ಕ್ರಿಕೆಟ್ ವಿಕೆಟ್‍ಗಳಿಂದ ಬಡಿದಾಡಿಕೊಂಡಿದ್ದಾರೆ.

    ನಗರದ ಹೆಗ್ಗನಹಳ್ಳಿಯಲ್ಲಿ ಘಟನೆ ನಡೆದಿದ್ದು, ರಾಜ್ಯ ಯೂತ್ ಕಾರ್ಯದರ್ಶಿ ಉಮೇಶ್ ಬೈರೇಗೌಡ ಬಾಗಲಗುಂಟೆ ವಾರ್ಡ್ ಅಧ್ಯಕ್ಷ ಜಗದೀಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಉಮೇಶ್ ಬೈರೇಗೌಡ ಹೆಗ್ಗನಹಳ್ಳಿಯಲ್ಲಿ ಅಕ್ಷಯ ಶ್ರೀ ಫೈನಾನ್ಸ್ ನಡೆಸುತ್ತಿದ್ದಾರೆ. ಫೈನಾನ್ಸ್ ಕಂಪನಿ ಮೂಲಕ ಚೀಟಿ ರೂಪದಲ್ಲಿ ಪ್ರತಿ ತಿಂಗಳು 30 ಸಾವಿರ ರೂಗಳಂತೆ 2 ವರ್ಷಗಳ ವರೆಗೆ ಜಗದೀಶ್ ಹಣ ಹೂಡಿಕೆ ಮಾಡಿದ್ದರು. 3 ವರ್ಷಗಳಿಂದ 30 ಸಾವಿರ ಪಾವತಿಸಿ ಚೀಟಿ ಮುಗಿದ ಬಳಿಕ ಒಟ್ಟು 9 ಲಕ್ಷ ರೂ. ಹಣ ಕೊಡುವಂತೆ ಜಗದೀಶ್ ಫೈನಾನ್ಸ್ ಕಛೇರಿ ಬಳಿ ತೆರಳಿದ್ದಾರೆ. ಈ ವೇಳೆ ವಾಗ್ವಾದ ನಡೆದು ಹಲ್ಲೆಗೆ ತಿರುಗಿದೆ.

    ಚೀಟಿ ಕೊನೆಗೊಂಡು ಒಂದು ವರ್ಷ ಕಳೆದರೂ ಹಣ ಕೊಡದ್ದಕ್ಕೆ ಜಗದೀಶ್ ಸಿಟ್ಟಾಗಿದ್ದಾರೆ. ಈ ವೇಳೆ ವಾಗ್ವಾದ ನಡೆದಿದ್ದು, ಇಬ್ಬರೂ ಕ್ರಿಕೆಟ್ ವಿಕೆಟ್‍ಗಳಿಂದ ಬಡಿದಾಡಿಕೊಂಡಿದ್ದಾರೆ. ರಾಜಗೋಪಾಲ್ ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಜಗದೀಶ್ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಂತರ ರಾಜಗೋಪಾಲನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

  • ಚೀಟಿ ವ್ಯವಹಾರ ಮಾಡಿ 175 ಮಂದಿ ರೈಲ್ವೇ ಸಿಬ್ಬಂದಿಗೆ ವ್ಯಕ್ತಿ ಮೋಸ!

    ಚೀಟಿ ವ್ಯವಹಾರ ಮಾಡಿ 175 ಮಂದಿ ರೈಲ್ವೇ ಸಿಬ್ಬಂದಿಗೆ ವ್ಯಕ್ತಿ ಮೋಸ!

    ರಾಯಚೂರು: ಮೋಸ ಹೋಗೋರು ಎಲ್ಲಿಯತನಕ ಇರುತ್ತಾರೋ ಮೋಸ ಮಾಡೋರು ಅಲ್ಲಿಯವರೆಗೂ ಇದ್ದೇ ಇರ್ತಾರೆ ಎಂಬುದಕ್ಕೆ ರಾಯಚೂರಿನ ಈ ಘಟನೆ ಸಾಕ್ಷಿಯಾಗಿದೆ.

    ಚೀಟಿ ಹಣ ಹಾಕಿದ್ರೆ ಮದುವೆ, ಮನೆ ನಿರ್ಮಾಣ ಸೇರಿ ನಾನಾ ಕೆಲಸಕ್ಕೆ ಸಮಯಕ್ಕೆ ಬೇಗ ಹಣ ಸಿಗುತ್ತೆ ಎಂಬ ಆಸೆಯಿಂದ 175 ಮಂದಿ ರೈಲ್ವೇ ಇಲಾಖೆ ಸಿಬ್ಬಂದಿ ಇಲ್ಲಿನ ಟೈಪಿಸ್ಟ್ ರಾಘವೇಂದ್ರ ಬಳಿ ಚೀಟಿ ಹಾಕಿದ್ರು.

    ಆಂಧ್ರಪ್ರದೇಶದ ಕಡಪ ಮೂಲದ ಈ ರಾಘವೇಂದ್ರ ಸುಮಾರು 25 ವರ್ಷಗಳಿಂದ ನಿಯತ್ತಾಗಿ ಚೀಟಿ ವ್ಯವಹಾರ ಮಾಡುತ್ತಿದ್ದ. ಆದ್ರೆ ಕಳೆದ 2 ತಿಂಗಳಿನಿಂದ ರಜೆ ಮೇರೆಗೆ ಆಂಧ್ರಕ್ಕೆ ತೆರಳಿರುವ ರಾಘವೇಂದ್ರ, ಈಗ ನನ್ನ ಬಳಿ ಹಣವಿಲ್ಲ ಅಂತಿದ್ದು ಇರೋದು ಕೇವಲ 75 ಲಕ್ಷ ರೂಪಾಯಿ ಆಸ್ತಿ ಅದನ್ನೇ ಮಾರಿ ಬಂದಷ್ಟು ಕೊಡುತ್ತೇನೆ ಅಂತಿದ್ದಾನೆ.

    ಆದ್ರೆ ಸಿಬ್ಬಂದಿ ಸೇರಿ ಹಾಕಿರುವ ಒಟ್ಟು ಚೀಟಿ ಹಣ 8 ಕೋಟಿ ದಾಟುತ್ತೆ. ಇದಲ್ಲದೇ ತನ್ನ ಪತ್ನಿ ಸುಜಾತ ಹೆಸರಿನಲ್ಲಿ ಕೋರ್ಟ್ ನೊಟೀಸ್ ನೀಡಿರೋ ರಾಘವೇಂದ್ರ ಹಣಕ್ಕಾಗಿ ಕಿರಿಕಿರಿ ಮಾಡದಂತೆ ರೈಲು ಇಲಾಖೆ ಸಿಬ್ಬಂದಿಗೆ ಎಚ್ಚರಿಸಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಚೀಟಿ ವ್ಯವಹಾರದಲ್ಲಿ ಜನರಿಗೆ 5 ಕೋಟಿ ರೂ. ವಂಚಿಸಿದ್ದ ದಂಪತಿ ಆತ್ಮಹತ್ಯೆ!

    ಚೀಟಿ ವ್ಯವಹಾರದಲ್ಲಿ ಜನರಿಗೆ 5 ಕೋಟಿ ರೂ. ವಂಚಿಸಿದ್ದ ದಂಪತಿ ಆತ್ಮಹತ್ಯೆ!

    ತುಮಕೂರು: ಚೀಟಿ ವ್ಯವಹಾರದಲ್ಲಿ ನೂರಾರು ಜನರಿಗೆ ಸುಮಾರು 5 ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚಿಸಿದ್ದ ದಂಪತಿ ಆತ್ಮಹತ್ಯೆಗೆ ಶರಣಾಗಿರೋ ಘಟನೆ ತುಮಕೂರಿನ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ.

    ರವಿ ಹಾಗೂ ಪ್ರಭಾ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಪತಿ ರವಿ ನೇಣು ಬಿಗಿದುಕೊಂಡು ಸಾವಿಗೆ ಶರಣಾದ್ರೆ, ಪತ್ನಿ ಪ್ರಭಾ ವಿಷ ಕುಡಿದು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ರವಿ ಹಾಗೂ ಪ್ರಭಾ ಜನರ ಚೀಟಿ ಹಣದಿಂದ ಬಂಗಲೆ ಕಟ್ಟಿಕೊಂಡು, ಕಾರು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಆದ್ರೆ ಚೀಟಿ ಹಣ ವಾಪಸ್ ನೀಡದಿದ್ದಾಗ ದಂಪತಿ ವಿರುದ್ಧ ಮೋಸ ಹೋದವರು ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಈ ದಂಪತಿ ಕೆಲದಿನ ಜೈಲಿನಲ್ಲಿ ಇದ್ದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

    ಇದೀಗ ವಂಚಿಸಿದ ಹಣ ವಾಪಸ್ ಮಾಡಲಾಗದೆ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಕುರಿತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.