Tag: ಚಿರತೆ ಸಫಾರಿ

  • ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆ ಸಫಾರಿಗೆ ಪ್ಲ್ಯಾನ್‌ – ಪ್ರವಾಸಿಗರಿಗೆ ಸಿಗಲಿದೆ ಥ್ರಿಲ್ಲಿಂಗ್‌ ಅನುಭವ

    ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆ ಸಫಾರಿಗೆ ಪ್ಲ್ಯಾನ್‌ – ಪ್ರವಾಸಿಗರಿಗೆ ಸಿಗಲಿದೆ ಥ್ರಿಲ್ಲಿಂಗ್‌ ಅನುಭವ

    ನೀವು ವನ್ಯಜೀವಿ ಪ್ರಿಯರೇ? ಹಾಗಾದ್ರೆ ಖಂಡಿತವಾಗಿ ಯಾವುದಾದ್ರೂ ಒಂದು ಕಾಡಿಗೆ ಭೇಟಿ ಕೊಟ್ಟೇ ಇರ್ತೀರಿ. ತೆರೆದ ಜಿಪ್ಸಿಯಲ್ಲಿ ದಿನವಿಡೀ ಕಾಡು ಸುತ್ತಿ ಕೊನೇ ಕ್ಷಣದಲ್ಲಿ ಒಂದು ಚಿರತೆ (Leopard) ನಿಮ್ಮ ಮುಂದೆ ಹಾದು ಹೋದ್ರೆ ಅದೆಷ್ಟು ಖುಷಿ ಇರುತ್ತೆ ಅಲ್ಲವೇ? ಒಂದು ಕ್ಷಣ ಮೈ ರೋಮಗಳು ನೆಟ್ಟಗಾಗುತ್ತವೆ. ಅದರಂತೆಯೇ ಅಪರೂಪದ ಪ್ರಾಣಿ, ಪಕ್ಷಿಗಳು, ಗಮನ ಸೆಳೆಯುವ ಸಸ್ಯವರ್ಗ ಸೇರಿದಂತೆ ಹಲವು ಆಕರ್ಷಣೆಗಳೊಂದಿಗೆ ಪ್ರವಾಸಿಗರನ್ನ ಸೆಳೆಯುತ್ತವೆ ನಮ್ಮ ಭಾರತೀಯ ರಾಷ್ಟ್ರೀಯ ಉದ್ಯಾನಗಳು. ಇತ್ತೀಚೆಗಷ್ಟೇ ನಮ್ಮ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ದಕ್ಷಿಣ ಭಾರತದ ಮೊದಲ ಮತ್ತು ದೇಶದ ಅತಿ ದೊಡ್ಡ ಚಿರತೆ ಸಫಾರಿಯನ್ನ ಶುರು ಮಾಡಲಾಗಿದೆ. ಇದೀಗ ಮುಂಬೈನ ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲೂ (SGNP) ಚಿರತೆ ಸಫಾರಿ ಶುರು ಮಾಡಲು ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಈವರೆಗೆ ಇದ್ದ ತೊಡಕುಗಳೆಲ್ಲವನ್ನ ಪರಿಹರಿಸಿ ಪ್ರವಾಸೋದ್ಯಮಕ್ಕೆ ಪುನಶ್ಚೇತನ ನೀಡುವ ಮಹತ್ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಹೆಚ್ಚು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..

    ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಬಗ್ಗೆ ನಿಮಗೆಷ್ಟು ಗೊತ್ತು?

    ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ (Mumbai) 1969 ರಲ್ಲಿ ಸ್ಥಾಪಿಸಲಾದ ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನವು ಮೊದಲು 87 ಕಿಮೀ ವಿಸ್ತೀರ್ಣ ಹೊಂದಿತ್ತು. ಇದೀಗ ಮುಂಬೈ ಮತ್ತು ಥಾಣೆಯಲ್ಲಿ 104 ಚದರ ಕಿ.ಮೀ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರ ಮಾತ್ರವಲ್ಲದೇ ವನ್ಯಜೀವಿ ಸಂರಕ್ಷಣಾ (Wildlife Protection) ತಾಣವೂ ಆಗಿದೆ. ಈ ಜೀವ ವೈವಿಧ್ಯಮಯ ತಾಣವು ಅದ್ಭುತವಾದ ಸದ್ಯ ಮತ್ತು ಪ್ರಾಣಿಗಳ ನೆಲೆಯಾಗಿದೆ. 1,300ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು, 274 ಪಕ್ಷಿ ಪ್ರಭೇದಗಳು, 40 ಜಾತಿಯ ಸಸ್ತನಿಗಳು, 250 ಜಾತಿಯ ಪಕ್ಷಿಗಳು, 150 ಜಾತಿಯ ಚಿಟ್ಟೆಗಳು ಮತ್ತು 38 ಜಾತಿಯ ಸರೀಸೃಪಗಳಿಗೆ ನೆಲೆಯಾಗಿದೆ. ಈ ಉದ್ಯಾನವು ಪ್ರಕೃತಿ ಪ್ರಿಯರಿಗೆ ಕೇವಲ ಸ್ವರ್ಗವಲ್ಲ, ಇತಿಹಾಸ ಮತ್ತು ಸಂಸ್ಕೃತಿಯ ನಿಧಿಯೂ ಆಗಿದೆ. ಶತಮಾನಗಳ ಹಿಂದೆ ಬಂಡೆಗಳಲ್ಲಿ ಕೆತ್ತಿದ ಗುಹೆಗಳು ಇನ್ನೂ ಇಲ್ಲಿವೆ. ಇಷ್ಟು ವನ್ಯ ಸಂಪತ್ತನ್ನ ಹೊಂದಿರುವ ಉದ್ಯಾನದಲ್ಲಿ ಇದೀಗ ಚಿರತೆ ಸಫಾರಿ ಆರಂಭಿಸಲು ಸಕಲ ತಯಾರಿ ನಡೆಯುತ್ತಿದೆ. 

    ಯಾವಾಗಿನಿಂದ ಸಫಾರಿ ಶುರು? 

    2024ರ ಗಣತಿಯ ಪ್ರಕಾರ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನವು 54 ಚಿರತೆಗಳನ್ನು ಹೊಂದಿದೆ. ಇತ್ತೀಚೆಗಷ್ಟೇ ನಡೆದ ವಿಧಾನ ಪರಿಷತ್‌ ಸೆಷನ್‌ನಲ್ಲಿ ಮಹಾರಾಷ್ಟ್ರ ಅರಣ್ಯ ಸಚಿವ ಗಣೇಶ್ ನಾಯಕ್ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದರು. SGNP ನೈಸರ್ಗಿಕ ಸಂರಕ್ಷಣೆಯ ವಾತಾವರಣ ಇರೋದ್ರಿಂದ ಚಿರತೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಸ್ಥಿರವಾಗಿ ಬೆಳೆಯುತ್ತಲೇ ಇದೆ. 2015 ರಲ್ಲಿ 35 ಇದ್ದ ಚಿರತೆಗಳ ಸಂಖ್ಯೆ 2017 ರಲ್ಲಿ 41, 2018 ರಲ್ಲಿ 47, 2019 ರಲ್ಲಿ 46, 2023 ರಲ್ಲಿ 52 ಮತ್ತು 2024 ರಲ್ಲಿ 54 ಚಿರತೆಗಳು ಕಂಡುಬಂದಿವೆ. ಹೀಗಾಗಿ ಶೀಘ್ರದಲ್ಲೇ ಚಿರತೆ ಸಫಾರಿ ಆರಂಭಿಸಲು ತಯಾರಿ ನಡೆಸಲಾಗಿದೆ ಅಂತ ಸಚಿವರು ವಿವರಿಸಿದ್ದಾರೆ.

    ಇಷ್ಟು ವರ್ಷ ಶುರು ಮಾಡದಿದ್ದಕ್ಕೆ ಕಾರಣ ಏನು?

    ಕೆಪಿ ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡಕ್ಕೆ ಅನುವಾದಿಸಿರುವ ʻರುದ್ರ ಪ್ರಯಾಗದ ಭಯಾನಕ ನರಭಕ್ಷಕʼ (ಕೆನ್ನೆತ್ ಆಂಡರ್ಸನ್ ಅವರ ಅನುವಾದ ಕಥನ) ಕಾಡಿನ ಕಥೆಯನ್ನ ನೀವು ಓದಿದ್ದರೆ ನರಭಕ್ಷಕ ಚಿರತೆ ಇಡೀ ರುದ್ರ ಪ್ರಯಾಗವನ್ನು ಯಾವ ರೀತಿ ಕಾಡಿತ್ತು ಅನ್ನೋದು ನಿಮಗೆ ನೆನಪಾಗುತ್ತೆ. ಹಾಗೆಯೇ ಇಲ್ಲಿನ ಕಾಡಂಚಿನ ಗ್ರಾಮಗಳ ಜನ ಭಯದಲ್ಲೇ ಓಡಾಡುವಂತಾಗಿತ್ತು. 2017ರಲ್ಲಿ ಚಿರತೆ ದಾಳಿಗೆ ಇಬ್ಬರು ಮಕ್ಕಳು (ಒಂದು ಹುಡುಗಿ ಮತ್ತು ಒಂದು ಹುಡುಗ) ಬಲಿಯಾಗಿದ್ದರು. ಈ ಘಟನೆ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. 2022ರಲ್ಲಿ ಮತ್ತೆ ಹುಡುಗಿಯೊಬ್ಬಳು ಚಿರತೆ ದಾಳಿಗೆ ಬಲಿಯಾಗಿದ್ದಳು. ಕಾನೂನಿನ ಅನ್ವಯ ಸರ್ಕಾರ ಸಂತ್ರಸ್ತ ಕುಟುಂಬಗಳಿಗೆ ತಲಾ 20 ಲಕ್ಷ ರೂಪಾಯಿ ಪರಿಹಾರವನ್ನೇನೋ ನೀಡಲಾಯ್ತು. ಆದ್ರೆ ತಡೆಗೋಡೆಗಳು ಇಲ್ಲದಿದ್ದ ಪರಿಣಾಮ ಹೊರವಲಯದಲ್ಲಿ ವಾಸಿಸುವ ಮಕ್ಕಳ ಮೇಲೆ ಚಿರತೆ ದಾಳಿ ಮುಂದುವರಿಯುತ್ತಲೇ ಇದೆ. ಮನೆಯಿಂದ ಪ್ರಕೃತಿ ಕರೆಗೆ ಹೋದಂತಹ ಸಂದರ್ಭದಲ್ಲಿ ಏಕಾಏಕಿ ನೆಗೆದು ದಾಳಿ ಮಾಡಿವೆ. ಹೀಗಾಗಿಯೇ ಇಷ್ಟು ವರ್ಷ ಇಲ್ಲಿ ಚಿರತೆ ಸಫಾರಿ ಶುರು ಮಾಡಿರಲಿಲ್ಲ ಎಂದು ಹೇಳಲಾಗುತ್ತಿದೆ. 

    104 ಚದರ ಕಿಮೀ ವ್ಯಾಪಿಸಿಕೊಂಡಿರುವ ಉದ್ಯಾನದಲ್ಲಿ ಚಿರತೆಗಳಿಗೆ ಈಗ ಸಾಕಷ್ಟು ಬೇಟೆಗಳಿವೆ. ಚಿರತೆಗಳಿಗೆ ಬೇಟೆಯಾಗಿ ಸಸ್ಯಹಾರಿ ಪ್ರಾಣಿಗಳಿವೆ. ಇದನ್ನ ಇನ್ನಷ್ಟು ಖಚಿತಪಡಿಸಿಕೊಳ್ಳೋದಕ್ಕೆ ಸರ್ಕಾರವು ಆ ಪ್ರದೇಶದಲ್ಲಿ ಹೆಚ್ಚಿನ ಹಣ್ಣಿನ ಮರಗಳನ್ನ ನೆಡಲು ನಿರ್ಧರಿಸಿದೆ.

    ಗಡಿ ಗೋಡೆ ನಿರ್ಮಿಸಲು ಕ್ರಮ

    ಸದ್ಯ ಚಿರತೆ ಸಫಾರಿ ಶುರು ಮಾಡೋದಕ್ಕೂ ಮುನ್ನವೇ ಕಾಡಿನ ಸಮೀಪದಲ್ಲಿರುವ ಜನರ ಸುರಕ್ಷತೆಗೂ ಸರ್ಕಾರ ಒತ್ತುಕೊಟ್ಟಿದೆ. ಗಡಿಯುದ್ಧಕ್ಕೂ ಸಿಮೆಂಟ್‌ ಗೋಡೆಗಳನ್ನ ನಿರ್ಮಿಸುವ ಯೋಜನೆಯನ್ನ ಈಗಾಗಲೇ ಪ್ರಸ್ತಾಪಿಸಲಾಗಿದೆ. ಜೊತೆಗೆ ಉದ್ಯಾನವನದೊಳಗೆ ಪರಿಫೆರಲ್‌ ರಸ್ತೆ (ಸಫಾರಿಗೆ ಸೂಕ್ತ ಮಾರ್ಗ) ನಿರ್ಮಿಸುವ ಜೊತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಯೋಜನೆಯೂ ಇದೆ. ಹಿಂದೆಂದಿಗಿಂತಲೂ ವಾಚರ್ಸ್‌ಗಳ ಗಸ್ತು ಹೆಚ್ಚಾಗಿರುವಂತೆ ನೋಡಿಕೊಳ್ಳುವ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ. ಮುಖ್ಯವಾಗಿ ಉದ್ಯಾನವನದಲ್ಲಿರುವ ಪ್ರಾಣಿಗಳ ಸುರಕಕ್ಷತೆ ಮೇಲೆ ನಿಗಾ ಇಡಲು ಉಪಗ್ರಹ ತಂತ್ರಜ್ಞಾನ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.

    ಚಿರತೆ ಸಫಾರಿ ಆರಂಭಿಸುವುದಕ್ಕೂ ಮುನ್ನ ಉದ್ಯಾನವನದಲ್ಲಿರುವ 22 ಬುಡಕಟ್ಟು ಪಾಡಾಗಳು (ತಾಂಡಾಗಳು) ಇವೆ. ಉದ್ಯಾನವನದ ಹೊರಗೆ ನೆಲೆಸಿರುವ 2,000 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಜೊತೆಗೆ ಅವರಿಗೆ ಮನೆಗಳನ್ನು ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಅದಕ್ಕಾಗಿ ಮುಂಬೈನ ಆರೆ ಕಾಲೋನಿಯಲ್ಲಿ 90 ಎಕರೆ ಭೂಮಿಯನ್ನ ಗುರುತಿಸಲಾಗಿದೆ. ಚಿರತೆಗಳು ರಾತ್ರಿ ವೇಳೆಯಲ್ಲಿ ಮನೆಗಳ ಮೇಲೆ ದಾಳಿ ಮಾಡುವುದನ್ನ ತಪ್ಪಿಸಲು ಸೋಲಾರ್‌ ಬೇಲಿ ವ್ಯವಸ್ಥೆ ಕಲ್ಪಿಸಲು ಜೊತೆಗೆ ಬಹಿರ್ದೆಸೆಗೆ ಹೋಗುವುದನ್ನ ತಡೆಯಲು ಶೌಚಾಲಯ ವ್ಯವಸ್ಥೆ ಮಾಡಲು ನಿರ್ದೇಶಿದೆ.

    ಈ ಎಲ್ಲ ತಯಾರಿಗಳನ್ನು ಮಾಡಿಕೊಂಡ ಬಳಿಕ ಚಿರತೆ ಸಫಾರಿ ಪರಿಚಯಿಸಲು ಸರ್ಕಾರ ತಯಾರಿ ನಡೆಸಿದೆ. ಈ ಮೂಲಕ ವನ್ಯಜೀವಿಪ್ರಿಯರಿಗೆ ಚಿರತೆಗಳನ್ನು ವೀಕ್ಷಿಸುವ ಅವಕಾಶ ಮಾಡಿಕೊಡಲಿದೆ. ಪ್ರಸ್ತುತ ಹುಲಿ ಮತ್ತು ಸಿಂಹ ಸಫಾರಿಗಳನ್ನು ನಡೆಸುತ್ತಿರುವ SGNP ಚಿರತೆಗಳ ಸುರಕ್ಷಿತ ನೆಲೆಯಾಗಿದ್ದರೂ, ಸಫಾರಿ ಶುರು ಮಾಡಿರಲಿಲ್ಲ. ಅಲ್ಲದೇ ಚಿರತೆ ಸಫಾರಿಗೆ ಸುಮಾರು 30 ಹೆಕ್ಟೇರ್‌ ಪ್ರದೇಶದ ಅಗತ್ಯವಿದೆ. ಈಗಾಗಲೇ ಈ ಸೌಲಭ್ಯ ಉದ್ಯಾನದಲ್ಲಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಸಫಾರಿ ಅಭಿವೃದ್ಧಿಪಡಿಸಲು ಅಂದಾಜು 5 ಕೋಟಿ ರೂ. ವೆಚ್ಚ ನಿಗದಿ ಮಾಡಲಾಗಿದೆ. ಅರಣ್ಯ ಇಲಾಖೆ ಮತ್ತು ಜಿಲ್ಲಾ ಯೋಜನಾ ಸಮಿತಿಯ ಮೂಲಕ ಹಣವನ್ನು ವ್ಯವಸ್ಥೆ ಮಾಡಲಾಗುತ್ತದೆ.  

  • ಮಾಸಾಂತ್ಯಕ್ಕೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ: ಈಶ್ವರ ಖಂಡ್ರೆ

    ಮಾಸಾಂತ್ಯಕ್ಕೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ: ಈಶ್ವರ ಖಂಡ್ರೆ

    ಬೆಂಗಳೂರು: ಬನ್ನೇರುಘಟ್ಟ (Bannerughatta) ಜೈವಿಕ ಉದ್ಯಾನದಲ್ಲಿ ಹಾಲಿ ಇರುವ ಸಿಂಹ, ಹುಲಿ ಸಫಾರಿಯ ಜೊತೆಗೆ ಜೂನ್ ಮಾಸಾಂತ್ಯದೊಳಗೆ ಚಿರತೆ ಸಫಾರಿ ಆರಂಭಿಸಲು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಸೂಚನೆ ನೀಡಿದ್ದಾರೆ.

    ವಿಕಾಸ ಸೌಧದ ಸಚಿವರ ಕಾರ್ಯಾಲಯದಲ್ಲಿ ನಡೆದ ಮೃಗಾಲಯ ಪ್ರಾಧಿಕಾರದ 156ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ರಾಜ್ಯದಲ್ಲಿರುವ ವಿವಿಧ ಮೃಗಾಲಯಗಳಿಗೆ ಪ್ರವಾಸಿಗರನ್ನು ಹೆಚ್ಚು ಸೆಳೆಯಲು ಮತ್ತು ಆದಾಯ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಾಮರ್ಶಿಸಿದರು.

    ಮೈಸೂರು ಶ್ರೀ ಚಾಮರಾಜೇಂದ್ರ ಮಾಲಯ ಹಾಗೂ ಕಾರಂಜಿ ಕೆರೆ ಮಧ್ಯ ಭಾಗದಲ್ಲಿ ಸಾರ್ವಜನಿಕ, ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಅಕ್ವೇರಿಯಂ (ಮತ್ಸ್ಯಾಗಾರ) ನಿರ್ಮಿಸಲು, ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸಮಾಲೋಚನಾ ಸಂಸ್ಥೆ ಆಯ್ಕೆ ಮಾಡಲು 15 ದಿನಗಳ ಒಳಗಾಗಿ ಪ್ರಸ್ತಾವನೆ ಮಂಡಿಸಲು ಸೂಚಿಸಲಾಯಿತು.

    ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆ ಪ್ರಕೃತಿ ಉದ್ಯಾನದಲ್ಲಿ ಕ್ಯಾಮೆರಾ ಕಾಂಬೋ ಟಿಕೆಟ್ ಪರಿಚಯಿಸಿ, ಸ್ಥಿರ ಕ್ಯಾಮರಾಗೆ 150 ರೂ. ಮತ್ತು ವಿಡಿಯೋ ಕ್ಯಾಮರಾಗೆ 300 ರೂ. ದರ ವಿಧಿಸಲು ಅನುಮತಿಸಲಾಯಿತು. ಅದೇ ರೀತಿ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ಪಿಪಿಪಿ ಮಾದರಿಯಲ್ಲಿ ಸಿಹಿ ನೀರು ಮತ್ತು ಉಪ್ಪು ನೀರಿನ ಮತ್ಸ್ಯಾಗಾರಗಳನ್ನು ನಿರ್ಮಿಸಲು ಈಗಾಗಲೇ ನಡೆದಿರುವ ಪರಿಕಲ್ಪನೆ ಅಧ್ಯಯನ ವರದಿ ಮತ್ತು ಕಾರ್ಯಸಾಧ್ಯತೆ ವರದಿ ಪರಿಶೀಲಿಸಿ ಜಾಗತಿಕ ಮಾನದಂಡಗಳ ರೀತ್ಯ ಮತ್ಸ್ಯಾಗಾರ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು.

    ಮೃಗಾಲಯಗಳಲ್ಲಿ ವನ್ಯಜೀವಿ ಪಶುವೈದ್ಯರ ಕೊರತೆ ಆಗದಂತೆ ಮತ್ತು ಮೃಗಾಲಯದಲ್ಲಿರುವ ವನ್ಯಜೀವಿಗಳು ಸೋಂಕು ಇತ್ಯಾದಿಯಿಂದ ಸಾವಿಗೀಡಾಗದಂತೆ ಕ್ರಮ ವಹಿಸಲು ಪಶುವೈದ್ಯರ ನೇಮಕಾತಿಯ ಬಗ್ಗೆ ಚರ್ಚಿಸಿ, ವೈದ್ಯರ ನೇಮಕಾತಿಗೆ ಅನುಮೋದನೆ ನೀಡಲಾಯಿತು.

    ಚಿತ್ರದುರ್ಗದ ಆಡು ಮಲ್ಲೇಶ್ವರ ಕಿರು ಮೃಗಾಲಯಕ್ಕೆ ಸ್ಥಳೀಯ ಪಶುವೈದ್ಯಾಧಿಕಾರಿಗಳ ಸೇವೆ ಪಡೆಯಲು ಘಟನೋತ್ತರ ಅನುಮೋದನೆ ನೀಡಲಾಯಿತು.

    ಇತರ ನಿರ್ಣಯಗಳು:
    >. ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ, ಪಕ್ಷಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಬೆಂಗಳೂರು ಜಲಮಂಡಳಿಯಿಂದ ಕಾವೇರಿ ನೀರು ಒದಗಿಸಲು ಈಗಾಗಲೇ ಸರ್ಕಾರ ಅನುಮತಿ ನೀಡಿದ್ದು,, ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನೀರು ಹರಿಸು ಕ್ರಮ ಕೈಗೊಳ್ಳಲು ಸಮ್ಮತಿ.

    >. ಬನ್ನೇರುಘಟ್ಟ ಉದ್ಯಾನದಲ್ಲಿ ನೇರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು 21 ಸಾವಿರ ಮಾಸಿಕ ವೇತನ ಮೀರಿದ 153 ಸಿಬ್ಬಂದಿಗೆ ಸಿ.ಜಿ.ಎಚ್.ಎಸ್. ದರದಂತೆ ವೈದ್ಯಕೀಯ ವೆಚ್ಚ ಭರಿಸಲು ಅನುಮೋದನೆ.

    >. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ರಣಹದ್ದು ಸಂರಕ್ಷಣಾ ಸಂತಾನೋತ್ಪತ್ತಿ ಕೇಂದ್ರವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸ್ಯಾಟಲೈಟ್ ಕೇಂದ್ರವಾಗಿ ಕಾರ್ಯನಿರ್ವಹಣೆಗೆ ಅನುಮೋದನೆ.

    >. ಗದಗ ಮೃಗಾಲಯದ ವಿಸ್ತರಣೆ ಮತ್ತು ಅಭಿವೃದ್ಧಿಗೆ 13.20 ಎಕೆ ಜಮೀನು ಭೂಸ್ವಾಧೀನ ಮತ್ತು ಮೃಗಾಲಯದ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಮಧ್ಯಾಹ್ನದ ಊಟ ಪೂರೈಕೆಗೆ ಸಮ್ಮತಿ.