Tag: ಚಿಪ್

  • ಮಾನವನ ಮೆದುಳಿಗೆ ಚಿಪ್ – ಶೀಘ್ರವೇ ಪರೀಕ್ಷಿಸಲಿದೆ ಮಸ್ಕ್ ಕಂಪನಿ

    ಮಾನವನ ಮೆದುಳಿಗೆ ಚಿಪ್ – ಶೀಘ್ರವೇ ಪರೀಕ್ಷಿಸಲಿದೆ ಮಸ್ಕ್ ಕಂಪನಿ

    ವಾಷಿಂಗ್ಟನ್: ವಿಶ್ವದ ಶ್ರೀಮಂತ ಎಲೋನ್ ಮಸ್ಕ್ (Elon Musk) ಅವರ ನ್ಯೂರಾಲಿಂಕ್ (Neuralink) ಕಂಪನಿ ಮಾನವರ ಮೆದುಳಿಗೆ ಅಳವಡಿಸಬಹುದಾದ ರೋಬೋಟ್ ಚಿಪ್ (Chip) ಅನ್ನು ಶೀಘ್ರವೇ ಪರೀಕ್ಷಿಸಲಿದೆ ಎಂದು ತಿಳಿಸಿದ್ದಾರೆ. ಈ ತಂತ್ರಜ್ಞಾನದ ಪರೀಕ್ಷೆಯ ಬಳಿಕ ಮಸ್ಕ್ ಸ್ವತಃ ಈ ಚಿಪ್ ಅನ್ನು ಹೊಂದಲು ಬಯಸಿರುವುದಾಗಿ ಹೇಳಿದ್ದಾರೆ.

    ಮಸ್ಕ್‌ನ ಸ್ಟಾರ್ಟ್ಅಪ್ ನ್ಯೂರಾಲಿಂಕ್ ನಿರ್ಮಿಸಿರುವ ಈ ಚಿಪ್ ಮನುಷ್ಯನಿಗೆ ಅಳವಡಿಸಲಾದಲ್ಲಿ ಆತ ತನ್ನ ಆಲೋಚನೆಗಳ ಮೂಲಕ ನೇರವಾಗಿ ಕಂಪ್ಯೂಟರ್‌ಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

    ಈ ಚಿಪ್‌ಗೆ ಸಂಬಂಧಪಟ್ಟ ದಾಖಲೆಗಳನ್ನು ನಾವು ಎಫ್‌ಡಿಎಗೆ (ಅಮೆರಿಕದ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಸಲ್ಲಿಸಿದ್ದೇವೆ. ಅಲ್ಲಿಂದ ಅನುಮತಿ ಪಡೆದರೆ, ಇನ್ನು ಕೇವಲ 6 ತಿಂಗಳುಗಳಲ್ಲಿ ನಾವು ಮಾನವರಲ್ಲಿ ಮೊದಲ ಬಾರಿಗೆ ಚಿಪ್ ಅಳವಡಿಸಲು ಸಾಧ್ಯವಾಗಲಿದೆ ಎಂದು ಮಸ್ಕ್ ಹೇಳಿದ್ದಾರೆ. ಇದನ್ನೂ ಓದಿ: iPhone ತಯಾರಿಸುವ ಕೋಲಾರದ ವಿಸ್ಟ್ರಾನ್‌ ಖರೀದಿಗೆ ಮುಂದಾದ ಟಾಟಾ

    2019ರ ಜುಲೈನಲ್ಲಿ ನ್ಯೂರಾಲಿಂಕ್ 2020ರಲ್ಲಿಯೇ ಮಾನವರ ಮೇಲೆ ಈ ಚಿಪ್‌ನ ಮೊದಲ ಪರೀಕ್ಷೆ ನಡೆಸುವುದಾಗಿ ತಿಳಿಸಿತ್ತು. ಈಗಾಗಲೇ ಈ ನಾಣ್ಯದ ಗಾತ್ರದ ಚಿಪ್‌ಗಳನ್ನು ಪ್ರಾಣಿಗಳ ತಲೆಬುರುಡೆಗಳಲ್ಲಿ ಅಳವಡಿಸಿ ಪರೀಕ್ಷೆ ನಡೆಸಲಾಗಿದೆ.

    ನ್ಯೂರಾಲಿಂಕ್ ಅಭಿವೃದ್ಧಿಪಡಿಸಿರುವ ಚಿಪ್ ಒಂದು ವೇಳೆ ಯಶಸ್ವಿಯಾದರೆ, ಇದು ಮಾನವನ ಮೆದುಳನ್ನು ನಿಯಂತ್ರಿಸಲು ಸಹಾಯ ಮಾಡಲಿದೆ. ಸ್ನಾಯುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರದ ವ್ಯಕ್ತಿಗಳೂ ಸಕ್ರಿಯರಾಗುತ್ತಾರೆ. ಮಾನವನ ಬೆನ್ನುಹುರಿ ತುಂಡಾಗಿದ್ದರೂ ಆತನ ದೇಹ ಸಂಪೂರ್ಣವಾಗಿ ಕೆಲಸ ಮಾಡಲು ಸಾಧ್ಯವಾಗಿಸುವ ಸಾಮರ್ಥ್ಯ ಇದೆ. ಆ ವ್ಯಕ್ತಿ ಮೆದುಳಿನಿಂದಲೇ ಯಂತ್ರಗಳ ಜೊತೆ ಸಂವಹಿಸಬಹುದು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಟ್ವಿಟ್ಟರ್‌ ಅಕ್ಷರ ಮಿತಿ 280ರಿಂದ 1,000ಕ್ಕೆ ಏರಿಕೆ – ಸುಳಿವು ನೀಡಿದ ಮಸ್ಕ್‌

    Live Tv
    [brid partner=56869869 player=32851 video=960834 autoplay=true]

  • ಗುಜರಾತ್‌ನಿಂದ ಕರ್ನಾಟಕಕ್ಕೆ 3 ಶತಕೋಟಿ ಡಾಲರ್‌ ಹೂಡಿಕೆಯ ಚಿಪ್‌ ಘಟಕ ಶಿಫ್ಟ್‌?

    ಗುಜರಾತ್‌ನಿಂದ ಕರ್ನಾಟಕಕ್ಕೆ 3 ಶತಕೋಟಿ ಡಾಲರ್‌ ಹೂಡಿಕೆಯ ಚಿಪ್‌ ಘಟಕ ಶಿಫ್ಟ್‌?

    – ಐಎಸ್‌ಎಂಸಿ ಡಿಜಿಟಲ್‌ ಫ್ಯಾಬ್‌ ಜೊತೆ ಮಾತುಕತೆ
    – ನೀರು ಹೆಚ್ಚಿರುವ ಮೈಸೂರು ಜಿಲ್ಲೆಯಲ್ಲಿ ಘಟಕ ಸ್ಥಾಪನೆಗೆ ಆಸಕ್ತಿ

    ಬೆಂಗಳೂರು: ಎಲ್ಲ ಮಾತುಕತೆಗಳು ಫಲಪ್ರದವಾದರೆ ಇಂಟೆಲ್‌ ಕಂಪನಿಯ ಚಿಪ್‌ ತಯಾರಕ ಘಟಕ ಕರ್ನಾಟಕದಲ್ಲಿ ಸ್ಥಾಪನೆಯಾಗಲಿದೆ.

    ಸೆಮಿಕಂಡಕ್ಟರ್‌ ಉತ್ಪಾದನೆ ಸಂಬಂಧ ಕೇಂದ್ರ ಸರ್ಕಾರ 10 ಶತಕೋಟಿ ಡಾಲರ್‌ ಮೌಲ್ಯದ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಗೆ  ಐಎಸ್‌ಎಂಸಿ ಡಿಜಿಟಲ್‌ ಫ್ಯಾಬ್‌ ಆಯ್ಕೆಯಾಗಿದೆ. ಆರಂಭದಲ್ಲಿ ಗುಜರಾತ್‌ನ ಧೋಲೇರಾದಲ್ಲಿ 3 ಶತಕೋಟಿ ಡಾಲರ್‌(23 ಸಾವಿರ ಕೋಟಿ ರೂ.) ಹೂಡಿಕೆ ಮಾಡಲು ಈ ಕಂಪನಿ ಮುಂದಾಗಿತ್ತು. ಆದರೆ ಈಗ ರಾಜ್ಯದ ಮೈಸೂರಿನಲ್ಲಿ ಘಟಕ ತೆರೆಯಲು ಕಂಪನಿ ಆಸಕ್ತಿ ತೋರಿಸಿದೆ ಎಂದು ವರದಿಯಾಗಿದೆ.

    ನೀರಿನ ಲಭ್ಯತೆ ಇರುವ ಕಾಣ ಮೈಸೂರಿನಲ್ಲಿ ಘಟಕ ತೆರೆಯುವ ಸಂಬಂಧ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಸೆಮಿಕಂಡಕ್ಟರ್‌ ಘಟಕ ಸ್ಥಾಪಿಸಿದರೆ ದೀರ್ಘಾವಧಿಯಲ್ಲಿ ರಾಜ್ಯಕ್ಕೆ ಲಾಭವಾಗುವುದರಿಂದ ಕರ್ನಾಟಕವೂ ಉತ್ಸಾಹ ತೋರಿಸಿದೆ.

    ನೆಕ್ಷ್ಟ್‌ಆರ್ಬಿಟ್‌ ಮತ್ತು ಸೆಮಿಕಂಡಕ್ಟರ್‌ ಟೆಕ್ನಾಲಜಿ ಕಂಪನಿ ಟವರ್‌ ಸೆಮಿಕಂಡಕ್ಟರ್‌ ಕಂಪನಿ ಐಎಸ್‌ಎಂಸಿ ಡಿಜಿಟಲ್‌ ಸ್ಥಾಪಿಸಿತ್ತು. ಈ ಐಎಸ್‌ಎಂಸಿಯನ್ನು 5.4 ಶತಕೋಟಿ ಡಾಲರ್‌ ನೀಡಿ ಇಂಟೆಲ್‌ ಕಂಪನಿ ಇತ್ತೀಚೆಗೆ ಖರೀದಿಸಿದೆ.

    ಭಾರತದ ಸರ್ಕಾರದ ಪಿಎಲ್ಐ ಅಡಿ ಐಎಸ್‌ಎಂಸಿ ಡಿಜಿಟಲ್‌ ಫ್ಯಾಬ್‌ ಅಲ್ಲದೇ  ವೇದಾಂತ-ಫಾಕ್ಸ್‌ಕಾನ್‌ ಮತ್ತು ಸಿಂಗಾಪೂರ ಮೂಲದ ಐಜಿಎಸ್‌ಎಸ್‌ ಆಯ್ಕೆಯಾಗಿವೆ. ಚಿಪ್‌ ತಯಾರಿಕಾ ಘಟಕ ಸ್ಥಾಪನೆ ಸಂಬಂಧ ರಾಜ್ಯ ರಾಜ್ಯಗಳ ಮಧ್ಯೆ ಆರೋಗ್ಯಕರ ಸ್ಪರ್ಧೆ ಇದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌ ಸಚಿವಾಲಯದ ಸೆಮಿಕಂಡಕ್ಟರ್‌ ಸಲಹಾ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

    ಐಎಸ್‌ಎಂಸಿಯ ಹೂಡಿಕೆ ಪ್ರಸ್ತಾವನೆಯನ್ನು ಬೊಮ್ಮಾಯಿ ನೇತೃತ್ವದ ಕರ್ನಾಟಕದ ಉನ್ನತ ಮಟ್ಟದ ಸಮಿತಿ ಇನ್ನೂ ಅನುಮೋದನೆ ನೀಡಿಲ್ಲ. 500 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ಪ್ರಸ್ತಾವನೆಗಳನ್ನು ಈ ಸಮಿತಿ ಅನುಮೋದಿಸುತ್ತದೆ.

    ಏಪ್ರಿಲ್‌ 29 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ Semicon ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಚಿಪ್‌ ಕ್ಷೇತ್ರದ ದಿಗ್ಗಜ ಕಂಪನಿಗಳು ಭಾಗಿಯಾಗಲಿದೆ.  ಇದನ್ನೂ ಓದಿ: ಸೆಮಿಕಂಡಕ್ಟರ್ ಉತ್ಪಾದನೆಗೆ 76,000 ಕೋಟಿ – ಕೇಂದ್ರ ಸಂಪುಟ ಅನುಮೋದನೆ

    ಪ್ರಸ್ತುತ ವಿಶ್ವದ ಚಿಪ್‌ ಮಾರುಕಟ್ಟೆಯಲ್ಲಿ ಚೀನಾ ಮತ್ತು ತೈವಾನ್‌ ಕಂಪನಿಗಳೇ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ. ಭಾರತವನ್ನು ಚಿಪ್‌, ಮೊಬೈಲ್‌ ಉತ್ಪಾದನಾ ಹಬ್‌ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಯನ್ನು ಆರಂಭಿಸಿದೆ. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್‌ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಹಲವು ಕಂಪನಿಗಳು ಆಯ್ಕೆಯಾಗಿವೆ.

  • ರೈಲ್ವೇಗೆ ಇಸ್ರೋ ನೆರವು: ಮಾನವರಹಿತ ಲೆವೆಲ್ ಕ್ರಾಸಿಂಗ್‍ನಲ್ಲಿ ಅಪಘಾತ ತಪ್ಪಿಸಲು ಬಂದಿದೆ ವಿಶೇಷ ಚಿಪ್!

    ರೈಲ್ವೇಗೆ ಇಸ್ರೋ ನೆರವು: ಮಾನವರಹಿತ ಲೆವೆಲ್ ಕ್ರಾಸಿಂಗ್‍ನಲ್ಲಿ ಅಪಘಾತ ತಪ್ಪಿಸಲು ಬಂದಿದೆ ವಿಶೇಷ ಚಿಪ್!

    ನವದೆಹಲಿ: ಮಾನವರಹಿತ ಲೆವೆಲ್ ಕ್ರಾಸಿಂಗ್ ನಿಂದಾಗಿ ರೈಲಿಗೆ ಸಿಕ್ಕಿ ಅಪಘಾತವಾಗುವುದನ್ನು ತಡೆಯಲು ರೈಲ್ವೇ ಸಚಿವಾಲಯ ಈಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನೆರವನ್ನು ಪಡೆದುಕೊಂಡಿದೆ.

    ಹೌದು. ಉಪಗ್ರಹ ಆಧಾರಿತ ಚಿಪ್ ವ್ಯವಸ್ಥೆಯನ್ನು ಇಸ್ರೋ ಅಭಿವೃದ್ಧಿಪಡಿಸಿದ್ದು ಪರೀಕ್ಷಾರ್ಥ ಪ್ರಯೋಗವಾಗಿ ಮುಂಬೈ ಮತ್ತು ಅಸ್ಸಾಂ ರಾಜಧಾನಿ ಗುವಾಹಟಿ ಮಧ್ಯೆ ಸಂಚರಿಸುವ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಅಳವಡಿಸಲಾಗಿದೆ.

    ಏನಿದು ಹೊಸ ವ್ಯವಸ್ಥೆ?
    ಮಾನವರಹಿತ ಲೆವೆಲ್ ಕ್ರಾಸಿಂಗ್ ಬಳಿ ಹೂಟರ್ಸ್ ಗಳನ್ನು ರೈಲ್ವೇ ಈಗ ಅಳವಡಿಸಿದೆ. ರೈಲು ಸಿಗ್ನಲ್ ಬಳಿ ಬರುತ್ತಿದ್ದಾಗ ರೈಲಿನಲ್ಲಿ ಅಳವಡಿಸಲಾಗಿರುವ ಇಂಟಿಗ್ರೇಟೆಡ್ ಸರ್ಕ್ಯೂಟ್(ಐಸಿ) ಚಿಪ್‍ನಿಂದ ಸಿಗ್ನಲ್ ರವಾನೆಯಾಗಿ ಹೂಟರ್ಸ್ ಜೋರಾಗಿ ಶಬ್ಧ ಮಾಡುವ ಮೂಲಕ ಜನರನ್ನು ಎಚ್ಚರಿಸುತ್ತದೆ.

    ಈಗಾಗಲೇ 20 ಹೂಟರ್ಸ್ ಗಳನ್ನು ಮುಂಬೈ – ಗುವಾಹಟಿ ಮಧ್ಯೆ ಇರುವ ಮಾನವರಹಿತ ಲೆವೆಲ್ ಕ್ರಾಸಿಂಗ್ ಬಳಿ ಅಳವಡಿಸಲಾಗಿದೆ ಎಂದು ಈ ಯೋಜನೆಯಲ್ಲಿ ತೊಡಗಿಕೊಂಡಿರುವ ರೈಲ್ವೇ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಎಷ್ಟು ದೂರದಲ್ಲಿದ್ರೆ ಶಬ್ಧ?
    500 ಮೀಟರ್ ದೂರದಿಂದ ರೈಲು ಬರುತ್ತಿದ್ದಾಗ ಹೂಟರ್ಸ್ ಎಚ್ಚರಿಕೆಯ ಶಬ್ಧ ಮೊಳಗಿಸಲು ಆರಂಭಿಸುತ್ತದೆ. ರೈಲು ಹತ್ತಿರ ಹತ್ತಿರ ಬರುತ್ತಿದ್ದಂತೆ ಸಿಗ್ನಲ್‍ನಲ್ಲಿ ಶಬ್ಧ ಜೋರಾಗುತ್ತದೆ. ರೈಲು ಸಂಪೂರ್ಣವಾಗಿ ಲೆವೆಲ್ ಕ್ರಾಸಿಂಗ್ ದಾಟಿದ ಮೇಲೆ ಹೂಟರ್ಸ್ ತಾನಾಗಿಯೇ ನಿಲ್ಲುತ್ತದೆ.

    ಯೋಜನೆ ಪ್ರಕಾರ ಮುಂದಿನ ದಿನಗಳಲ್ಲಿ ಉಳಿದ ರೈಲುಗಳು ಸಂಚರಿಸುವ ಮಾರ್ಗಗಳಲ್ಲಿ ಹೂಟರ್ಸ್ ಗಳನ್ನು ಅಳವಡಿಸಲು ಇಲಾಖೆ ಮುಂದಾಗಿದೆ. ಜನರನ್ನು ಎಚ್ಚರಿಸುವುದು ಮಾತ್ರವಲ್ಲದೇ ಉಪಗ್ರಹ ಆಧಾರಿತ ಈ ವ್ಯವಸ್ಥೆ ರೈಲಿನ ಚಲನೆಯ ಮಾಹಿತಿಯನ್ನು ರಿಯಲ್ ಟೈಂನಲ್ಲಿ ತೋರಿಸುತ್ತದೆ.

    ಪ್ರಸ್ತುತ ದೇಶದಲ್ಲಿ 9,340 ಮಾನವ ರಹಿತ ಲೆವೆಲ್ ಕ್ರಾಸಿಂಗ್ ಗಳು ಇದೆ ಎಂದು ರೈಲ್ವೇಯ ರಾಜ್ಯ ಸಚಿವ ಮನೋಜ್ ಸಿನ್ಹಾ ಎಂದು 2016ರ ಜುಲೈನಲ್ಲಿ ರಾಜ್ಯಸಭೆಗೆ ತಿಳಿಸಿದ್ದರು. ಪ್ರತಿ ವರ್ಷ ದೇಶದಲ್ಲಿ ಸಂಭವಿಸುವ ರೈಲ್ವೇ ಅಪಘಾತಲ್ಲಿ ಮಾನವ ರಹಿತ ಕ್ರಾಸಿಂಗ್ ನಿಂದಾಗಿ ಶೇ.40 ರಷ್ಟು ಅಪಘಾತಗಳು ಆಗುತ್ತಿದೆ.

    2014-15ರಲ್ಲಿ 1,148, 2015-16ರಲ್ಲಿ 1,253 ಮಾನವ ರಹಿತ ಕ್ರಾಸಿಂಗ್ ತೆಗೆಯಲಾಗಿತ್ತು. ಮುಂದಿನ 2-3 ವರ್ಷದಲ್ಲಿ ಸಂಪೂರ್ಣವಾಗಿ ಎಲ್ಲ ಮಾನವ ರಹಿತ ಲೆವೆಲ್ ಕ್ರಾಸಿಂಗ್ ತೆಗೆಯಲು ಸಚಿವಾಲಯ ಗುರಿಯನ್ನು ಹಾಕಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ:ಗೋವಾದಿಂದ ಮುಂಬೈಗೆ ಮರಳಿದ ತೇಜಸ್ ರೈಲಿನ ಸ್ಥಿತಿ ನೋಡಿ ಅಧಿಕಾರಿಗಳಿಗೆ ಶಾಕ್!

     

     

  • ವಿಶೇಷ ಬ್ಯಾಟ್ ಬಳಸಲಿದ್ದಾರೆ ರೋಹಿತ್: ಏನಿದು  ಚಿಪ್ ಬ್ಯಾಟ್? ವಿಶೇಷತೆ ಏನು? ವಿಡಿಯೋ ನೋಡಿ

    ವಿಶೇಷ ಬ್ಯಾಟ್ ಬಳಸಲಿದ್ದಾರೆ ರೋಹಿತ್: ಏನಿದು ಚಿಪ್ ಬ್ಯಾಟ್? ವಿಶೇಷತೆ ಏನು? ವಿಡಿಯೋ ನೋಡಿ

    ಲಂಡನ್: ಇಲ್ಲಿಯವರೆಗೆ ಬೌಲಿಂಗ್ ಸ್ಪೀಡ್ ಎಷ್ಟಿದೆ ಎನ್ನುವ ಮಾಹಿತಿ ಸಿಗುತಿತ್ತು. ಆದರೆ ಇನ್ನು ಮುಂದೆ ಬ್ಯಾಟ್ಸ್ ಮನ್ ಎಷ್ಟು ವೇಗದಲ್ಲಿ ಬ್ಯಾಟ್ ಬೀಸಿದ್ದಾನೆ. ಎಷ್ಟು ಡಿಗ್ರಿಯಲ್ಲಿ ಬ್ಯಾಟ್ ಹಿಡಿದಿದ್ದಾನೆ ಎನ್ನುವ ಎಲ್ಲ ಮಾಹಿತಿಗಳು ಸಿಗಲಿದೆ.

    ಹೌದು. ಹಲವಾರು ದೇಶಗಳಲ್ಲಿ ಕ್ರಿಕೆಟ್ ಜಪ್ರಿಯವಾಗುತ್ತಿದೆ. ಈಗ ಕ್ರಿಕೆಟನ್ನು ಮತ್ತಷ್ಟು ಜನಪ್ರಿಯಗೊಳಿಸಲು ಐಸಿಸಿ ಮುಂದಾಗುತ್ತಿದ್ದು, ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆನ್ಸರ್ ಹೊಂದಿರುವ ಬ್ಯಾಟ್ ಗಳನ್ನು ಬಳಸಲು ಅನುಮತಿ ನೀಡಿದೆ.

    ಕ್ರಿಕೆಟ್ ಇತಿಹಾಸಲ್ಲಿ ಮೊದಲ ಬಾರಿಗೆ ಈ ರೀತಿಯ ಚಿಪ್ ಬ್ಯಾಟ್ ನಲ್ಲಿ ಅಳವಡಿಸಲಾಗುತ್ತಿದೆ. ಟೆಕ್ ಕಂಪೆನಿ ಇಂಟೆಲ್ ಈ ಚಿಪ್ ಅನ್ನು ತಯಾರಿಸಿದೆ.

    ಎಲ್ಲಿರಲಿದೆ ಚಿಪ್?
    ಇಂಟೆಲ್ ಕ್ಯೂರಿ ಟೆಕ್ನಾಲಜಿಯ ‘ಬ್ಯಾಟ್ ಸೆನ್ಸ್’ ಚಿಪ್ ಬ್ಯಾಟಿನ ಮೇಲ್ಬಾಗದಲ್ಲಿ ಇರಲಿದೆ. ಅಂದರೆ ಹ್ಯಾಂಡಲ್ ತುದಿಯಲ್ಲಿ ಇರುವ ವೃತ್ತಾಕಾರದ ಜಾಗದಲ್ಲಿ ಈ ಚಿಪ್ ಅಳವಡಿಸಲಾಗುತ್ತದೆ.

    ಚಿಪ್ ಅಳವಡಿಸುವುದು ಹೇಗೆ?
    ಬ್ಯಾಟಿನ ಹ್ಯಾಂಡಲ್ ಕವರ್ ಮೊದಲು ಹಾಕಿ, ಬಳಿಕ ಅದನ್ನು ಕೆಳಗೆ ಸರಿಸಬೇಕಾಗುತ್ತದೆ. ಇದಾದ ಬಳಿಕ ಚಿಪ್ ಫಿಕ್ಸ್ ಆಗಿರುವ ಸಣ್ಣ ಹ್ಯಾಂಡಲ್ ಕವರ್ ಅನ್ನು ಹಾಕಬೇಕು. ನಂತರ ಕೆಳಗಡೆ ಸರಿಸಲಾಗಿರುವ ಹ್ಯಾಂಡಲ್ ಕವರ್ ಮೇಲಕ್ಕೆ ಸರಿಸಿದಾಗ ಸೆನ್ಸರ್ ಚಿಪ್ ಫಿಕ್ಸ್ ಆಗಿ ಗಟ್ಟಿಯಾಗಿ ಮೇಲ್ಬಾಗದಲ್ಲಿ ಕುಳಿತುಕೊಳ್ಳುತ್ತದೆ.

    ಲಾಭ ಏನು?
    ಬ್ಯಾಟಿನ ಆಂಗಲ್ ಹೇಗೆ ಬದಲಾಗುತ್ತದೆ? ಬ್ಯಾಟ್ ಸ್ಪೀಡ್ ಎಷ್ಟಿರಲಿದೆ? ಹೀಗೆ ಬ್ಯಾಟ್ ಪ್ರತಿಯೊಂದು ಚಲನೆ ಕೂಡ ಚಿಪ್ ನಲ್ಲಿ ದಾಖಲಾಗಿರುತ್ತದೆ. ಇದರಲ್ಲಿ ದಾಖಲಾಗಿರುವ ಮಾಹಿತಿಯನ್ನು ಕಂಪ್ಯೂಟರ್ ಹಾಕಿ ಬ್ಯಾಟ್ಸ್ ಮನ್ ತನ್ನ ತಪ್ಪನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ಬ್ಯಾಟ್ಸ್ ಮನ್ ಸಂಪೂರ್ಣ ಗ್ರೌಂಡ್ ರಿಪೋರ್ಟ್ ದಾಖಲಾಗುವುದರಿಂದ ವಿಶೇಷವಾಗಿ ಕೋಚ್ ಗಳಿಗೂ ನೆರವಾಗಲಿದೆ.

    ಯಾರ ಬ್ಯಾಟಲ್ಲಿ ಚಿಪ್ ಇರಲಿದೆ?
    ಸದ್ಯಕ್ಕೆ ಐಸಿಸಿ ಒಂದು ತಂಡದ ಮೂವರು ಆಟಗಾರರಿಗೆ ಚಿಪ್ ಬ್ಯಾಟಿನೊಂದಿಗೆ ಆಡಲು ಅನುಮತಿ ನೀಡಿದೆ. ಭಾರತದ ಪರ, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಹಾಗೂ ಆರ್ ಅಶ್ವಿನ್ ಚಿಪ್ ಇರುವ ಬ್ಯಾಟ್ ನಲ್ಲಿ ಆಡಲಿದ್ದಾರೆ.

    ವಿಆರ್ ಟೆಕ್ನಾಲಜಿ ಬಳಕೆ
    ಬ್ಯಾಟ್ ಸೆನ್ಸರ್ ಅಲ್ಲದೇ ಪ್ರೆಕ್ಷಕರಿಗೆ ಮುದ ನೀಡಲು ವರ್ಚುಯಲ್ ರಿಯಾಲಿಟಿ(ವಿಆರ್) ಈ ಬಾರಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೇ ಪಂದ್ಯಕ್ಕೂ ಪಿಚ್ ಸಂಪೂರ್ಣ ಮಾಹಿತಿ ಪಡೆಯಲು, ಎಚ್‍ಡಿ ಮತ್ತುಇನ್‍ಫ್ರಾರೆಡ್ ಕ್ಯಾಮೆರಾ ಹೊಂದಿರುವ 8 ಡ್ರೋನ್ ಗಳು ಪಿಚ್ ಮೇಲೆ ಹಾರಾಟ ನಡೆಸಲಿದೆ.

  • ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!

    ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!

    ಲಕ್ನೋ: ರಿಮೋಟ್ ಕಂಟ್ರೋಲ್ ಚಿಪ್‍ಗಳನ್ನ ಬಳಸಿ ಗ್ರಾಹಕರಿಗೆ ವಂಚಸುತ್ತಿದ್ದ ಆರೋಪದ ಮೇಲೆ ಉತ್ತರಪ್ರದೇಶದ ಎಸ್‍ಟಿಎಫ್ ಪೊಲೀಸರು ಶುಕ್ರವಾರದಂದು ಇಲ್ಲಿನ 7 ಪೆಟ್ರೋಲ್ ಬಂಕ್‍ಗಳನ್ನ ಜಪ್ತಿ ಮಾಡಿದ್ದು, 4 ಪೆಟ್ರೋಲ್ ಬಂಕ್ ಮಾಲೀಕರು ಸೇರಿದಂತೆ 23 ಜನರನ್ನ ಬಂಧಿಸಿದ್ದಾರೆ. ಈ ಸಂಬಂಧ 7 ಎಫ್‍ಐಆರ್‍ಗಳು ದಾಖಲಾಗಿವೆ.

    ಹೇಗೆ ಮೋಸ ಮಾಡ್ತಿದ್ರು: ಪೆಟ್ರೋಲ್ ಹಾಕಲಾಗುವ ಮಷೀನ್‍ನಲ್ಲಿ ಚಿಪ್ ಆಧಾರಿತ ಸಾಧನವನ್ನ ಅಳವಡಿಸಿ ಪೆಟ್ರೋಲ್ ಹರಿವನ್ನ ಶೇ. 5 ರಿಂದ 10 ರಷ್ಟು ಕಡಿಮೆಯಾಗಿಸುತ್ತಿದ್ದರು. ಆದ್ರೆ ಇದರಿಂದ ಮಷೀನಿನ ಮೀಟರ್ ರೀಡಿಂಗ್‍ನಲ್ಲಿ ಯಾವುದೇ ಬದಲಾವಣೆಯಾಗುತ್ತಿರಲಿಲ್ಲ. ಅಂದ್ರೆ ಗ್ರಾಹಕರು ಒಂದು ಲೀಟರ್ ಪೆಟ್ರೋಲ್‍ಗೆ ದುಡ್ಡು ಕೊಟ್ಟರೂ ಅವರಿಗೆ ಸಿಗುತ್ತಿದ್ದದ್ದು 900 ರಿಂದ 950 ಎಂಎಲ್ ಪೆಟ್ರೋಲ್ ಮಾತ್ರ.

    ಈ ಬಗ್ಗೆ ಎಸ್‍ಟಿಎಫ್ ಮುಖ್ಯಕಚೇರಿಗೆ 2016ರಲ್ಲಿ ಮಾಹಿತಿ ಬಂದಿತ್ತು. ಅಂದಿನಿಂದ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ರು. 2017ರಲ್ಲಿ ರವೀಂದರ್ ಎಂಬ ಎಲೆಕ್ಟ್ರಿಷಿಯನ್ ಈ ಜಾಲದ ಹಿಂದಿರುವುದು ಗೊತ್ತಾಯಿತು. ಈತನೇ ಪೆಟ್ರೋಲ್ ಪಂಪ್‍ಗಳಲ್ಲಿ ಚಿಪ್‍ಗಳನ್ನ ಅಳವಡಿಸುತ್ತಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿತ್ತು.

    ಎಸ್‍ಟಿಎಫ್ ಪೊಲೀಸರು ಈತನ ಮೇಲೆ ಕಣ್ಣಿಟ್ಟಿದ್ದರು. ಈತ ಎಲ್ಲೆಲ್ಲಿ ಓಡಾಡ್ತಾನೆ, ಯಾರನ್ನೆಲ್ಲಾ ಭೇಟಿ ಮಾಡ್ತಾನೆ ಎಂಬುದನ್ನ ಗಮನಿಸುತ್ತಿದ್ರು. ಈತ ಈ ಜಾಲದ ಹಿಂದಿರುವುದು ಖಾತ್ರಿಯಾದ ಮೇಲೆ ಪೊಲೀಸರು ರವೀಂದರ್‍ನನ್ನ ಬಂಧಿಸಿದ್ದಾರೆ.

    ಪೊಲೀಸ್ ತನಿಖೆ ವೇಳೆ ರವೀಂದರ್ ತನ್ನ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈ ಕೆಲಸವನ್ನ 6 ವರ್ಷಗಳಿಂದ ಮಾಡುತ್ತಿದ್ದು, 3 ಸಾವಿರ ರೂ.ನಿಂದ 40 ಸಾವಿರ ರೂ.ವರೆಗೆ ಈ ಚಿಪ್‍ಗಳನ್ನ ಪೆಟ್ರೋಲ್ ಪಂಪ್ ಮಾಲೀಕರಿಗೆ ಮಾರಾಟ ಮಾಡಿದ್ದೀನಿ ಎಂಬ ಸಂಗತಿಯನ್ನ ಬಹಿರಂಗಪಡಿಸಿದ್ದಾನೆ. ಕಾನ್ಪುರದ ಸಂಸ್ಥೆಯೊಂದರಿಂದ ಈ ಚಿಪ್ ಖರೀದಿಸಿ, ಪೆಟ್ರೋಲ್ ಪಂಪ್‍ಗಳಲ್ಲಿ ಅಳವಡಿಸುತ್ತಿದ್ದೆ. ಈ ಮಷೀನ್‍ಗಳಿಗೆ ರಿಪೇರಿ ಅಗತ್ಯವಿದ್ದಾಗಲೂ ನಾನೇ ರಿಪೇರಿ ಮಾಡಲು ಹೋಗಬೇಕಿತ್ತು ಎಂದು ಹೇಳಿದ್ದಾನೆ.

    ಚಿಪ್ ಅಳವಡಿಸ್ತಿದ್ದಿದ್ದು ಹೇಗೆ?: ಪೆಟ್ರೋಲ್ ಪಂಪ್ ಮಾಲೀಕರು ಮಷೀನ್ ಸರಿಯಾಗಿ ಕೆಲಸ ಮಾಡ್ತಿಲ್ಲ ಅಂತ ಮೆಶರ್‍ಮೆಂಟ್ ಇಲಾಖೆಗೆ ದೂರು ನೀಡ್ತಿದ್ರು. ಇಲಾಖೆಯವರು ಬಂದು ಯಂತ್ರದ ಪ್ಲಾಸ್ಟಿಕ್ ಬಾಕ್ಸ್ ತೆಗೆದಾಗ ಚಿಪ್ ಅಳವಡಿಸುತ್ತಿದ್ರು. ವಿವಿಧ ರೀತಿಯ ಬಾಕ್ಸ್ ಗಳಿಗೆ ಬೇರೆ ಬೇರೆ ವಿಧದ ಚಿಪ್‍ಗಳನ್ನ ಹಾಕ್ತಿದ್ರು. ಆದ್ರೆ ಈ ಬಾಕ್ಸ್ ಗಳನ್ನ ಸೀಲ್ ಮಾಡಲಾಗುತ್ತಿದ್ದರಿಂದ ಇದನ್ನ ತೆಗೆಯಬೇಕಾದ್ರೆ ಮೆಶರ್‍ಮೆಂಟ್ ಇಲಾಖೆಯವರೇ ಬರಬೇಕು. ಯಾವಾಗ ಬಕ್ಸ್ ತೆಗೆಯುತ್ತಾರೋ ಆಗ ಚಿಪ್ ಅಳವಡಿಸಲಾಗ್ತಿತ್ತು. ಪ್ರತಿ ಚಿಪ್‍ನಲ್ಲೂ ವಿಶೇಷ ಕೋಡ್ ಇದ್ದು, ಇದನ್ನು ಅಳವಡಿಸಿದ ನಂತರ ಪೆಟ್ರೋಲ್ ಪಂಪ್ ಮ್ಯಾನೇಜರ್‍ಗಳ ಬಳಿ ಇರುತ್ತಿದ್ದ ರಿಮೋಟ್‍ನಿಂದ ಆಪರೇಟ್ ಮಾಡಲಾಗ್ತಿತ್ತು.

    ಈ ಪೆಟ್ರೊಲ್ ವಂಚನೆ ಜಾಲ ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ಹಾಗೂ ಬೇರೆ ರಾಜ್ಯಗಳಲ್ಲೂ ಇರಬಹುದು ಎಂದು ಎಸ್‍ಟಿಎಫ್ ಪೊಲೀಸರು ಶಂಕಿಸಿದ್ದಾರೆ. ಈ ಪ್ರಕರಣದ ಬಗ್ಗೆ ಶೀಘ್ರದಲ್ಲೇ ಸಂಪೂರ್ಣ ವರದಿ ಸಲ್ಲಿಸಲಿದ್ದಾರೆ.