Tag: ಚಿನ್ನದ ರಥ

  • ಪುಷ್ಪರಥದ ಬದಲು ಚಿನ್ನದ ರಥದಲ್ಲಿ ಮೂಕಾಂಬಿಕೆಯ ಉತ್ಸವ- ಕೆಲ ಅರ್ಚಕರು, ಭಕ್ತರಿಗೆ ಅಸಮಾಧಾನ

    ಪುಷ್ಪರಥದ ಬದಲು ಚಿನ್ನದ ರಥದಲ್ಲಿ ಮೂಕಾಂಬಿಕೆಯ ಉತ್ಸವ- ಕೆಲ ಅರ್ಚಕರು, ಭಕ್ತರಿಗೆ ಅಸಮಾಧಾನ

    ಉಡುಪಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದಲ್ಲಿ ನವಮಿಯಂದು ನಡೆದ ಮಹಾರಥೋತ್ಸವ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಪುಷ್ಪಾಲಂಕೃತ ಮರದ ರಥದ ಬದಲು ಚಿನ್ನದ ರಥವನ್ನು ಉತ್ಸವಕ್ಕೆ ಬಳಸಿದ್ದು ಇದಕ್ಕೆ ಕಾರಣ.

    ಕೊಲ್ಲೂರಲ್ಲಿ ನವಮಿಗೆ ಪ್ರತಿವರ್ಷ ಉತ್ಸವಮೂರ್ತಿಯನ್ನು ಮರದ ಪುಷ್ಪಾಲಂಕೃತ ರಥದಲ್ಲಿಟ್ಟು ದೇಗುಲದ ಪ್ರಾಂಗಣದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಆದರೆ ಈ ಬಾರಿ ಚಿನ್ನದ ರಥದಲ್ಲಿಟ್ಟು ಮೂಕಾಂಬಿಕಾ ದೇವಿಯ ರಥೋತ್ಸವ ಮಾಡಲಾಗಿದೆ. ಇದು ಕೆಲ ಅರ್ಚಕರಿಗೆ ಅಸಮಾಧಾನ ತಂದಿದೆ. ಅಲ್ಲದೆ ಕೆಲ ಭಕ್ತರೂ ಇದಕ್ಕೆ ದನಿಗೂಡಿಸಿದ್ದಾರೆ.

    ಭಾರತದ ಶಕ್ತಿಪೀಠಗಳಲ್ಲಿ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕೂಡ ಒಂದು. ರಾಜ್ಯದ ಮೂಲೆ ಮೂಲೆಗಳಿಂದ ಹೊರರಾಜ್ಯಗಳಿಂದ ಇಲ್ಲಿಗೆ ಭಕ್ತರು ಬಂದು ದೇವಿಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹರಕೆ ಹೊತ್ತು ಕೃತಾರ್ಥರಾದ ಲಕ್ಷಾಂತರ ಜನ ಇದ್ದಾರೆ. ನವರಾತ್ರಿಯ ಸಂದರ್ಭದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪೂರ್ತಿ ತಿಂಗಳು ಅನೇಕ ಕಾರ್ಯಕ್ರಮಗಳು ನಡೆಯುತ್ತದೆ.

    ನವಮಿಯಂದು ದೇಗುಲದ ಪ್ರಾಂಗಣದಲ್ಲಿ ಕೊಲ್ಲೂರು ಮೂಕಾಂಬಿಕೆಯ ಉತ್ಸವ ನಡೆಯುತ್ತದೆ. ಕಳೆದ ಇಷ್ಟೂ ವರ್ಷಗಳಲ್ಲಿ ದೇವಿಯನ್ನು ಹೂವಿನಿಂದ ಅಲಂಕರಿಸಿದ ಮರದ ರಥದಲ್ಲಿಟ್ಟು ಉತ್ಸವ ಮಾಡಲಾಗುತ್ತಿತ್ತು. ಈ ಬಾರಿ ಕೊರೊನಾ ಸಾಂಕ್ರಾಮಿಕದ ಕಾರಣ ದೇಗುಲದ ಅರ್ಚಕರು, ಸಿಬ್ಬಂದಿ ಆಸು-ಪಾಸಿನವರು ಮಾತ್ರ ರಥೋತ್ಸವದಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ಮರದ ರಥದ ಬದಲು ಚಿನ್ನದ ರಥದಲ್ಲಿ ದೇವಿಯನ್ನು ಉತ್ಸವ ಮಾಡಲಾಯಿತು. ಕೆಲ ಭಕ್ತರು ಅರ್ಚಕರಿಗೆ ಇದು ಸರಿ ಕಂಡಿಲ್ಲ.

    ಇದು ಸಂಪ್ರದಾಯಕ್ಕೆ ವಿರುದ್ಧ, ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ತಗಾದೆ ತೆಗೆದಿದ್ದಾರೆ. ದೇಗುಲದ ಪ್ರಾಂಗಣದಲ್ಲಿ, ಆಡಳಿತಾಧಿಕಾರಿಯ ಕಚೇರಿಯ ಜಗಲಿಯಲ್ಲಿ ಕುಳಿತು ಗೊಣಗಾಟ ಶುರುಮಾಡಿದ್ದಾರೆ. ಹಲವಾರು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಮುರಿಯಲಾಯ್ತು ಎಂದು ಮೂಗು ಮುರಿದಿದ್ದಾರೆ.

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಹತ್ತು ವರ್ಷದ ಹಿಂದೆ ಬಿ.ಎಂ ಸುಕುಮಾರ್ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಚಿನ್ನವನ್ನು ಸಮರ್ಪಿಸಲಾಗಿತ್ತು. ಬೈಂದೂರು ಕ್ಷೇತ್ರಕ್ಕೆ ಈಗ ಸುಕುಮಾರ್ ಶೆಟ್ಟಿ ಶಾಸಕರು. ಹೀಗಾಗಿ ಅಂದು ಸಮರ್ಪಿಸಲಾದ ಚಿನ್ನದ ರಥವನ್ನು ನವರಾತ್ರಿ ಉತ್ಸವಕ್ಕೆ ಬಳಸಿ ಎಂದು ಹೇಳಿದ್ದಾರಂತೆ. ಹೀಗಾಗಿ ಸಿದ್ಧವಾದ ಮರದ ರಥ ಪಕ್ಕಕ್ಕಿಟ್ಟು ಚಿನ್ನದ ರಥದಲ್ಲಿ ದೇವಿಯ ಮೆರವಣಿಗೆ ಆಗಿದೆ. ಈ ಬೆಳವಣಿಗೆ ಸದ್ಯ ಕೊಲ್ಲೂರಿನಲ್ಲಿ ಚರ್ಚೆಯ ವಿಷಯ.

  • ಇನ್ಮುಂದೆ ಮಲೆ ಮಹದೇಶ್ವರ ಚಿನ್ನದ ರಥಕ್ಕೆ ದವಸ, ನಾಣ್ಯ ಎಸೆಯುವಂತಿಲ್ಲ

    ಇನ್ಮುಂದೆ ಮಲೆ ಮಹದೇಶ್ವರ ಚಿನ್ನದ ರಥಕ್ಕೆ ದವಸ, ನಾಣ್ಯ ಎಸೆಯುವಂತಿಲ್ಲ

    ಚಾಮರಾಜನಗರ: ಪ್ರಸಿದ್ಧ ಯಾತ್ರಾ ಸ್ಥಳವಾದ ಮಹದೇಶ್ವರ ಬೆಟ್ಟದಲ್ಲಿ ಪ್ರತಿ ದಿನ ರಾತ್ರಿ 7 ಗಂಟೆಗೆ ನಡೆಯುವ ಚಿನ್ನದ ರಥೋತ್ಸವದ ಸಂದರ್ಭದಲ್ಲಿ, ಇನ್ನು ಮುಂದೆ ಭಕ್ತರು ತೇರಿಗೆ ನಾಣ್ಯ, ದವಸ ಧಾನ್ಯಗಳನ್ನು ಎಸೆಯುವಂತಿಲ್ಲ.

    ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಹೊಸ ನಿಯಮಗಳನ್ನು ರೂಪಿಸಿದೆ. ಹರಕೆ ರೂಪದಲ್ಲಿ ರಥಕ್ಕೆ ಎಸೆಯಲು ತರುವ ಧಾನ್ಯ ಹಾಗೂ ನಾಣ್ಯಗಳನ್ನು ಭಕ್ತರು ಇನ್ನು ಮುಂದೆ ನಿಗದಿತ ಸ್ಥಳದಲ್ಲಿಯೇ ಹಾಕಬೇಕು ಎಂದು ಆಡಳಿತಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಮೊದಲ ದಿನವೇ ಒಂದು ಕ್ವಿಂಟಾಲ್‍ನಷ್ಟು ದವಸ ಧಾನ್ಯ ಸಂಗ್ರಹವಾಗಿದೆ. 10 ಸಾವಿರದಷ್ಟು ಮೌಲ್ಯದ ನಾಣ್ಯ ಹಾಗೂ ನೋಟುಗಳು ಸಂಗ್ರಹವಾಗಿವೆ. ಧಾನ್ಯಗಳನ್ನು ದಾಸೋಹದ ಉದ್ದೇಶಕ್ಕೆ ಬಳಸಿದರೆ, ನಾಣ್ಯಗಳನ್ನು ಹುಂಡಿಗೆ ಹಾಕಲಾಗಿದೆ.

    ಪ್ರತಿದಿನ ಚಿನ್ನದ ತೇರು ನೋಡುವುದಕ್ಕಾಗಿಯೇ ಬೆಟ್ಟಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ದೇವಸ್ಥಾನದ ಸುತ್ತ ತೇರು ಸಾಗುತ್ತಿರುವಾಗ ಭಕ್ತರು ತಮ್ಮ ಹೊಲಗದ್ದೆಯಲ್ಲಿ ಬೆಳೆದ ಬೆಳೆಯನ್ನು (ಅಕ್ಕಿ, ಹುರುಳಿ, ರಾಗಿ, ಬೇಳೆ, ಕಡಲೆಕಾಯಿ) ರಥದತ್ತ ಎಸೆದು ಹರಕೆ ತೀರಿಸುತ್ತಾರೆ. ಅದೇ ರೀತಿ ನಾಣ್ಯಗಳನ್ನು ಭಕ್ತಿಯಿಂದ ಎಸೆಯುವವರೂ ಇದ್ದಾರೆ. ಇನ್ನೂ ಕೆಲವರು ತಮ್ಮ ಮೊದಲ ಸಂಬಳವನ್ನು ಕಾಣಿಕೆ ರೂಪದಲ್ಲಿ ರಥಕ್ಕೆ ಅರ್ಪಿಸುತ್ತಾರೆ.

    ಏನು ಕಾರಣ?:
    ಎಸೆದ ನಾಣ್ಯಗಳನ್ನು ದೇವರ ಪ್ರಸಾದ ಎಂದು ನಂಬಿ ಅದನ್ನು ಹೆಕ್ಕುವುದಕ್ಕಾಗಿ ಮಹಿಳೆಯರು, ಮಕ್ಕಳೆನ್ನದೆ ಭಕ್ತರು ಮುಗಿಬೀಳುತ್ತಾರೆ. ಇದರಿಂದ ಅನಾಹುತ ಸಂಭವಿಸುವ ಅಪಾಯ ಇದೆ. ಜೊತೆಗೆ ನೂಕುನುಗ್ಗಲು ಉಂಟಾಗುತ್ತದೆ. ರಥದ ಸಂಚಾರಕ್ಕೂ ತಡೆಯಾಗುತ್ತದೆ. ಅಕ್ಕಿ, ಬೇಳೆಕಾಳು ಹಾಗೂ ಇನ್ನಿತರ ಧಾನ್ಯಗಳನ್ನು ಎಸೆಯುವುದರಿಂದ ನೂರಾರು ಕೆಜಿಗಳಷ್ಟು ಆಹಾರ ಪದಾರ್ಥ ಹಾಳಾಗುತ್ತಿತ್ತು. ಇದನ್ನು ಮನಗಂಡು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಮಾಹಿತಿ ನೀಡಿದ್ದಾರೆ.

    ನಾಣ್ಯವನ್ನು ಎಸೆಯುವುದರಿಂದ ಚಿನ್ನದ ರಥಕ್ಕೆ ಅದರಲ್ಲೂ ವಿಶೇಷವಾಗಿ ಮಹದೇಶ್ವರ ಸ್ವಾಮಿಯ ಚಿನ್ನದ ಮೂರ್ತಿಗೆ ಹಾನಿಯಾಗುತ್ತಿತ್ತು ಎಂದಿದ್ದಾರೆ.

  • ಚಾಮುಂಡಿ ತಾಯಿಗೆ ಬರುತ್ತಾ ಚಿನ್ನದ ರಥ ? ಬೆಟ್ಟಕ್ಕೆ ಬರುತ್ತಾ ರೋಪ್ ವೇ?

    ಚಾಮುಂಡಿ ತಾಯಿಗೆ ಬರುತ್ತಾ ಚಿನ್ನದ ರಥ ? ಬೆಟ್ಟಕ್ಕೆ ಬರುತ್ತಾ ರೋಪ್ ವೇ?

    ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿ ದೇವಿಗೆ ಚಿನ್ನದ ರಥ ಮಾಡಿಸುವುದು ಮತ್ತು ಬೆಟ್ಟಕ್ಕೆ ರೋಪ್ ವೇ  ನಿರ್ಮಾಣದ ವಿಚಾರದಲ್ಲಿ ರಾಜ್ಯ ಸರ್ಕಾರ ಮಾತುಕತೆ ಆರಂಭಿಸಿದೆ.

    ಸುಮಾರು 7 ಕೋಟಿ ವೆಚ್ಚದಲ್ಲಿ ಚಿನ್ನದ ರಥ ಮಾಡಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ. ಈಗಾಗಲೇ ಈ ವಿಚಾರದಲ್ಲಿ ಅಧಿಕಾರಿಗಳ ಸಭೆಯೂ ನಡೆದಿದೆ. ಆದರೆ, ಈ ಪ್ರಸ್ತಾಪಕ್ಕೆ ಇನ್ನೂ ಸಿಎಂ ಒಪ್ಪಿಗೆ ಸಿಕ್ಕಿಲ್ಲ. ಮುಂದಿನ ಕ್ಯಾಬಿನೆಟ್ ಸಭೆ ವೇಳೆ ಈ ವಿಚಾರವನ್ನು ಸಿಎಂ ಮುಂದೆ ಪ್ರಸ್ತಾಪಿಸಿ ಈ ಬಗ್ಗೆ ಸ್ಪಷ್ಪ ನಿರ್ಧಾರ ತಿಳಿಸಲಾಗುವುದು ಎಂದು ಉಸ್ತುವಾರಿ ಸಚಿವ ವಿ. ಸೋಮಣ್ಣ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಿಳಿಸಿದರು.

    ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಳವಡಿಸುವ ವಿಚಾರದಲ್ಲೂ ಚರ್ಚೆ ಸಾಗಿವೆ. ಈ ಬಗ್ಗೆಯೂ ಸಚಿವ ಸೋಮಣ್ಣ ಮಾಹಿತಿ ನೀಡಿ, ರೋಪ್ ವೇಯನ್ನು ಕೆಲವೆಡೆ ನೋಡಿದ್ದೇವೆ. ರೋಪ್ ವೇ ಮಾಡುವ ವಿಚಾರವಾಗಿ ಸಾಕಷ್ಟು ಚರ್ಚೆ ಆಗುತ್ತಿದೆ. ಅದರ ಸಾಧಕ ಬಾಧಕ ತಿಳಿಯಲು ಬಿಟ್ಟಿದ್ದೇವೆ. ಇದು ಅದು ಸರಿಯೇ? ಇಲ್ಲವೇ ಎಂಬುದು ಚರ್ಚೆಯಾಗಬೇಕು. ಅದಕ್ಕಾಗಿ ಚರ್ಚೆಯಾಗಲಿ ನಂತರ ಆ ಬಗ್ಗೆ ನೋಡೋಣ ಎಂದು ಹೇಳಿದರು.

    ಕಾಮಗಾರಿ ವೀಕ್ಷಣೆ: ಚಾಮುಂಡಿಬೆಟ್ಟದ ನಂದಿ ಪ್ರತಿಮೆಗೆ ಸಾಗುವ ರಸ್ತೆ ಮಧ್ಯೆ ಉಂಟಾಗಿದ್ದ ರಸ್ತೆ ಕುಸಿತದ ದುರಸ್ಥಿ ಕಾಮಗಾರಿ ಪ್ರಗತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ವೀಕ್ಷಿಸಿದರು.ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ತ್ವರಿತವಾಗಿ ಕೆಲಸ ಮುಗಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಚಿವರು ತಿಳಿಸಿದರು.

    ಕಾಮಗಾರಿ 49 ಲಕ್ಷ ರೂ‌ಗಳ ಅಂದಾಜು ವೆಚ್ಚದಲ್ಲಿ ನಡೆಯುತ್ತಿದ್ದು, ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಜಿ‌.ಟಿ‌.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಲೋಕೋಪಯೋಗಿ ಕಾರ್ಯಪಾಲಕ ಇಂಜಿನಿಯರ್ ವಿನಯ್ ಕುಮಾರ್ ಮತ್ತಿತರರು ಇದ್ದರು.

  • ಪುತ್ರನ ಗೆಲುವಿಗಾಗಿ ಕುಕ್ಕೆಗೆ ಮೊರೆ – ಎಚ್‍ಡಿಕೆಯಿಂದ ಸುಬ್ರಹ್ಮಣ್ಯನಿಗೆ ಬಂಗಾರದ ರಥ!

    ಪುತ್ರನ ಗೆಲುವಿಗಾಗಿ ಕುಕ್ಕೆಗೆ ಮೊರೆ – ಎಚ್‍ಡಿಕೆಯಿಂದ ಸುಬ್ರಹ್ಮಣ್ಯನಿಗೆ ಬಂಗಾರದ ರಥ!

    – ಕೊನೆಗೂ ಈಡೇರುತ್ತಾ ಧರಂ ಸಿಂಗ್ ಕಾಲದ ಹರಕೆ

    ಬೆಂಗಳೂರು: ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಸಿಎಂ ಕುಮಾರಸ್ವಾಮಿ ಇದುವರೆಗೂ ಅಸಾಧ್ಯವಾಗಿಯೇ ಉಳಿದಿರುವ ಕಾಯಕವನ್ನ ಪೂರ್ಣಗೊಳಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ಶಾಪ ವಿಮೋಚನೆಗಾಗಿ ಮುಂದಾಗಿದ್ದಾರೆ.

    ಹೌದು. ಕುಕ್ಕೆ ಸುಬ್ರಹ್ಮಣ್ಯನಿಗೆ ಬಂಗಾರದ ರಥ ಮಾಡಿಸುವ ಹರಕೆಯನ್ನ ಈಡೇರಿಸಲು ಎಚ್‍ಡಿಕೆ ಮುಂದಾಗಿದ್ದಾರೆ. 15 ವರ್ಷಗಳ ಹಿಂದೆ ಧರಂ ಸಿಂಗ್ ಅವರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಿಎಂ ಆಗಿದ್ದಾಗ ಕುಕ್ಕೆಗೆ ಚಿನ್ನದ ರಥ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಅವತ್ತು ಸುಬ್ರಹ್ಮಣ್ಯನಿಗೆ ಕೊಟ್ಟಿದ್ದ ವಾಗ್ದಾನ ಇದುವರೆಗೂ ಪೂರ್ಣಗೊಂಡಿಲ್ಲ. ಯಡಿಯೂರಪ್ಪ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿ ಸಿಎಂ ಆದರೂ ಕುಮಾರಸ್ವಾಮಿಗೆ ಚಿನ್ನದ ರಥ ಮಾಡಿಸಲು ಆಗಿರಲಿಲ್ಲ. ಒಂದೂವರೆ ದಶಕದಷ್ಟು ಹಳೆಯದಾದ ಹರಕೆಯನ್ನು ಈಡೇರಿಸುವಂತೆ ಇತ್ತೀಚೆಗಷ್ಟೇ ಜ್ಯೋತಿಷಿ ದ್ವಾರಕನಾಥ್ ಸಿಎಂ ಕುಮಾರಸ್ವಾಮಿಗೆ ಹೇಳಿದ್ದರು.

    ಹರಕೆ ಈಡೇರಿಸಿಲ್ಲ ಅಂದರೆ ಸುಬ್ರಹ್ಮಣ್ಯನ ಶಾಪ ತಟ್ಟುತ್ತದೆ. ಸಿಎಂ ಸ್ಥಾನದಲ್ಲಿ ಇರುವವರು ಇದನ್ನು ನೆರವೇರಿಸಬೇಕು. ಇಲ್ಲದಿದ್ದರೆ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ದ್ವಾರಕನಾಥ್‍ರನ್ನು ಮನೆಗೆ ಕರೆಸಿಕೊಂಡು ಸಿಎಂ ಮಾತುಕತೆ ನಡೆಸಿದ್ದಾರೆ.

    ಸುಬ್ರಹ್ಮಣ್ಯನಿಗೆ ಇನ್ನೂರು ಕೋಟಿ ರೂಪಾಯಿ ಮೊತ್ತದ ಚಿನ್ನದ ರಥ ಮಾಡಿಸುವಂತೆ ಮುಜರಾಯಿ ಇಲಾಖೆಗೆ ಸೂಚಿಸಿದ್ದಾರೆ. ಒಂದೆಡೆ ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಊರಲ್ಲಿರುವ ದೇವರಿಗೆಲ್ಲ ಪೂಜೆ ಮಾಡುತ್ತಿದ್ದರೆ, ಇತ್ತ ಕುಮಾರಸ್ವಾಮಿ ಅವರು ಕುಕ್ಕೆಗೆ ಬಂಗಾರದ ರಥ ಕೊಟ್ಟು ಶಾಪ ವಿಮೋಚನೆ ಮೂಲಕ ಮಗನ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದ್ವಾರಕಾನಾಥ್, 2014ರಲ್ಲಿ ಧರಂ ಸಿಂಗ್ ಕಾಲದಲ್ಲಿ ಸುಬ್ರಹ್ಮಣ್ಯ ದೇವರಿಗೆ ಒಂದು ಬಂಗಾರದ ರಥ ಅರ್ಪಣೆ ಮಾಡಬೇಕೆಂದು ತೀರ್ಮಾನ ಮಾಡಿದ್ದರು. ಅಲ್ಲದೆ ಮುಖ್ಯಮಂತ್ರಿ ಆದ ಮೇಲೆ ಬಂಗಾರದ ರಥ ಮಾಡಿಕೊಡುತ್ತೇನೆ ಎಂದು ಧರಂ ಸಿಂಗ್ ಮಾತು ಕೊಟ್ಟಿದ್ದರು. ಮಾತು ಕೊಟ್ಟ ಬಳಿಕ ಅವರಿಗೆ ಅಧಿಕಾರಿಗಳು ಯಾರೂ ಕೂಡ ಸಹಕಾರ ಕೊಡಲಿಲ್ಲ. ಅಲ್ಲದೆ ಮುಂದಿನ ಸರ್ಕಾರ ಕೂಡ ಅದನ್ನು ಜಾರಿ ಮಾಡಿಲ್ಲ. ಸದ್ಯ ಈ ಬಗ್ಗೆ ಕುಮಾರಸ್ವಾಮಿ ನನ್ನ ಜೊತೆ ಈ ಬಗ್ಗೆ ಮಾತುಕತೆ ನಡೆಸಿ, ಚಾಲನೆ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

  • 12 ಗ್ರಾಂ ಚಿನ್ನದಲ್ಲಿ ಮೂಡಿಬಂತು ಹಂಪಿಯ ಕಲ್ಲಿನ ರಥ!

    12 ಗ್ರಾಂ ಚಿನ್ನದಲ್ಲಿ ಮೂಡಿಬಂತು ಹಂಪಿಯ ಕಲ್ಲಿನ ರಥ!

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಕ್ಕಸಾಲಿಗರೊಬ್ಬರು ಬಂಗಾರದಲ್ಲಿ ಹಂಪಿಯ ಕಲ್ಲಿನ ರಥದ ಪ್ರತಿರೂಪ ಕೆತ್ತುವ ಮೂಲಕ ದಾಖಲೆ ಬರೆಯಲು ಮುಂದಾಗಿದ್ದಾರೆ.

    ಕಾರವಾರ ನಗರದ ಕಡವಾಡದ ನಿವಾಸಿಯಾಗಿರುವ ಮಿಲಿಂದ್ ಅಣ್ವೇಕರ್ ಅವರು 12 ಗ್ರಾಂ ಬಂಗಾರದಲ್ಲಿ ವಿಶ್ವ ಪ್ರಸಿದ್ಧ ಹಂಪಿ ರಥವನ್ನು ರಚನೆ ಮಾಡಿದ್ದಾರೆ. 17 ವರ್ಷಗಳಿಂದ ಆಭರಣ ತಯಾರಿಕೆಯಲ್ಲಿ ಪಳಗಿರುವ ಇವರು, ಬಂಗಾರದ ರಥ ನಿರ್ಮಾಣಕ್ಕಾಗಿ ಒಂದು ತಿಂಗಳು ಸಮಯ ತೆಗೆದುಕೊಂಡಿದ್ದಾರೆ.

    ಒಂದು ಇಂಚು ಉದ್ದ ಒಂದೂವರೆ ಇಂಚು ಅಗಲ ಸುತ್ತಳತೆಯ ಈ ಬಂಗಾರದ ರಥ ಅತಿ ಅದ್ಭುತವಾಗಿದ್ದು ಆನೆಗಳು, ರಥ, ರಥದ ಚಕ್ರಗಳು ಅತ್ಯಂತ ನಾಜೂಕಾಗಿ ಮೂಡಿಬಂದಿದೆ. ಇನ್ನು ಇದರ ಒಳಭಾಗದಲ್ಲಿ ಚಿಕ್ಕ ದೀಪವನ್ನು ಅಳವಡಿಸಿದ್ದು ಆಕರ್ಷಕವಾಗಿ ಕಾಣಿಸಿದೆ.

    2013ರಲ್ಲಿ 0.980 ಮಿಲಿಗ್ರಾಂನಲ್ಲಿ ಬಂಗಾರದ ಚೈನ್ ತಯಾರಿಸಿ ಮಿಲಿಂದ್ ಲಿಮ್ಕಾ ದಾಖಲೆ ನಿರ್ಮಿಸಿದ್ದಾರೆ. ಇದಲ್ಲದೇ ಈಗ ವಿಶ್ವ ದಾಖಲೆ ನಿರ್ಮಿಸುವ ಹಂಬಲ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv