Tag: ಚಿನ್ನದ ಮಳೆ

  • ಮಳೆ ಜೊತೆಯಲ್ಲಿ ಬಿತ್ತಾ ಚಿನ್ನದ ನಾಣ್ಯ?- ಬಾಗಲೂರಿನಲ್ಲಿ ಮುಗಿಬಿದ್ದ ಜನ

    ಮಳೆ ಜೊತೆಯಲ್ಲಿ ಬಿತ್ತಾ ಚಿನ್ನದ ನಾಣ್ಯ?- ಬಾಗಲೂರಿನಲ್ಲಿ ಮುಗಿಬಿದ್ದ ಜನ

    ಬೆಂಗಳೂರು/ಅನೇಕಲ್: ಮಳೆ ಬರೋವಾಗ ಚಿನ್ನದ ನಾಣ್ಯ ಬಿದ್ದಿದೆ ಎಂಬ ವದಂತಿಯನ್ನು ನಂಬಿದ ಜನರು ಒಂದೇಡೆ ಜಮಾಯಿಸಿ ಚಿನ್ನದ ನಾಣ್ಯ ಹುಡುಕಾಟ ನಡೆಸಿರುವ ಘಟನೆ ಕರ್ನಾಟಕದ ಗಡಿಯ ತಮಿಳುನಾಡಿನ ಬಾಗಲೂರಿನಲ್ಲಿ ನಡೆದಿದೆ.

    ನಿನ್ನೆ ಮಧ್ಯಾಹ್ನ ನಾಲ್ಕು ಗಂಟೆ ಸಮಯಕ್ಕೆ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಬಾಗಲೂರು ಪೊಲೀಸ್ ಕ್ವಾಟ್ರಸ್ ಎದುರು ಮಳೆ ಬಂದಾಗ ನಾಣ್ಯ ಬಿದ್ದಿದೆ ಎನ್ನುವ ವದಂತಿ ಹಬ್ಬಿತ್ತು. ಈ ಹಿನ್ನೆಲೆ ಅಕ್ಕಪಕ್ಕದ ಜನರೆಲ್ಲ ಜಮಾಯಿಸಿ ಚಿನ್ನದ ನಾಣ್ಯದ ಹುಡುಕಾಟ ಮಾಡಿದ್ದಾರೆ. ಈ ವೇಳೆ ಕೆಲವರಿಗೆ ನಾಣ್ಯಗಳು ಸಿಕ್ಕಿದ್ದು, ಇನ್ನು ಕೆಲವರು ಹುಡುಕಾಟ ನಡೆಸಿ ಬೇಸರದಿಂದ ಮನೆಗೆ ಹೋಗಿದ್ದಾರೆ. ಆ ವೇಳೆಗಾಗಲೇ ಮಾಹಿತಿ ತಿಳಿದ ಬಾಗಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಕೆಲವು ನಾಣ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

    ಚಿನ್ನದ ನಾಣ್ಯ ಸಿಗುತ್ತಿದೆ ಎಂದಾಕ್ಷಣ ಜನಮರುಳೋ ಜಾತ್ರೆ ಮರುಳೋ ಎಂಬಂತೆ ಅಕ್ಕಪಕ್ಕದ ಗ್ರಾಮಸ್ಥರಲ್ಲದೆ ಸರ್ಜಾಪುರ-ಬಾಗಲೂರು ರಸ್ತೆಯ ಅಕ್ಕಪಕ್ಕದ ನಿವಾಸಿಗಳು ಕೂಡ ಸ್ಥಳಕ್ಕೆ ತೆರಳಿದ್ದರು. ಈ ವದಂತಿಯನ್ನು ನಂಬಿದ್ದ ಜನರು ಇಂದು ಬೆಳಗ್ಗೆಯೂ ನಾಣ್ಯವನ್ನು ಹುಡುಕಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

    ಘಟನೆ ಕುರಿತಂತೆ ಪೊಲೀಸರು ಈಗಾಗಲೇ ಘಟನೆ ವೇಳೆ ಸಿಕ್ಕಿರುವ ನಾಣ್ಯಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ರವಾನಿಸಿ ಪರಿಶೀಲನೆ ನಡೆಸಿದಾಗ ಇದು ಚಿನ್ನದ ನಾಣ್ಯ ಎನ್ನುವುದು ಗೊತ್ತಾಗಿದ್ದು, ನಾಣ್ಯವನ್ನು ತೆಗೆದುಕೊಂಡು ಮನೆಗೆ ಹೋದವರಲ್ಲಿಯೂ ಕೂಡ ಆತಂಕ ಪ್ರಾರಂಭವಾಗಿದೆ. ಈ ಬಗ್ಗೆ ಕೆಲ ಸ್ಥಳೀಯರು ಹೇಳುವ ಪ್ರಕಾರ ಹಳೆಯ ಕಾಲದಲ್ಲಿ ಈ ಭಾಗದಲ್ಲಿ ಚಿನ್ನದ ನಿಕ್ಷೇಪ ಆಗಿರಬಹುದು ಅಥವಾ ರಾಜಮಹಾರಾಜರ ಕಾಲದಲ್ಲಿ ನಾಣ್ಯಗಳನ್ನು ಭೂಮಿಯಲ್ಲಿ ಇಟ್ಟಿರಬಹುದು, ಮಳೆ ಬಂದಾಗ ಇದು ಮಣ್ಣಿನಲ್ಲಿ ಇರುವುದು ಕೊಚ್ಚಿಕೊಂಡು ಹೀಗೆ ಬಂದಿರಬಹುದು ಎನ್ನುತ್ತಿದ್ದಾರೆ.

    ಚಿನ್ನದ ನಾಣ್ಯ ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ತನಿಖೆಯ ನಂತರವಷ್ಟೇ ಇದು ಎಲ್ಲಿಂದ ಬಂದ ನಾಣ್ಯಗಳು ಎನ್ನುವ ಬಗ್ಗೆ ಮಾಹಿತಿ ತಿಳಿಸಬೇಕಿದೆ. ಕೆಲ ನಾಣ್ಯಗಳಲ್ಲಿ ಉರ್ದು ಭಾಷೆಯಲ್ಲಿ ಬರೆದಿರುವ ಲಿಪಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಬಾಗಲೂರಿನಲ್ಲಿ ಸಿಕ್ಕ ನಾಣ್ಯಗಳ ಬಗ್ಗೆ ಈಗ ಎಲ್ಲೆಡೆ ಚರ್ಚೆ ಪ್ರಾರಂಭವಾಗಿದ್ದು, ಮಳೆಯಲ್ಲಿ ಸಿಡಿಲಿನಿಂದ ಬಂದ ನಾಣ್ಯಗಳೋ ಅಥವಾ ಭೂಮಿಯಿಂದ ಹೊರ ಬಂದ ನಾಣ್ಯಗಳು ಎನ್ನುವುದು ತನಿಖೆಯಿಂದಷ್ಟೇ ಹೊರಬರಬೇಕಿದೆ.