ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ನಲ್ಲಿ ಭಾರತಕ್ಕೆ ಚಿನ್ನ ತಂದ ಆಟಗಾರ್ತಿ ಪಿ.ವಿ ಸಿಂಧು ಅವರು ಅಭ್ಯಾಸ ಮಾಡುವ ವಿಡಿಯೋ ನೋಡಿ ನಾನು ಆಯಾಸಗೊಂಡೆ ಎಂದು ಉದ್ಯಮಿ ಅನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪರ ಮೊದಲ ಬಾರಿಗೆ ಚಿನ್ನ ಗೆದ್ದ ಪಿ.ವಿ ಸಿಂಧು ಅವರು ಹೈದರಾಬಾದಿನ ಸುಚಿತ್ರಾ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿರುವ ಅನಂದ್ ಮಹೀಂದ್ರಾ ತುಂಬಾ ಕ್ರೂರವಾಗಿದೆ ಈ ಅಭ್ಯಾಸ. ಈ ವಿಡಿಯೋ ನೋಡಿಯೇ ನಾನು ದಣಿದಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಆಕೆಯ ಅಭ್ಯಾಸ ಮಾಡುವ ವಿಡಿಯೋ ನೋಡಿಯೇ ನಾನು ದಣಿದಿದ್ದೇನೆ. ಆಕೆ ವಿಶ್ವ ಚಾಂಪಿಯನ್ ಎಂಬುದರಲ್ಲಿ ಯಾವುದೇ ರಹಸ್ಯವಿಲ್ಲ. ಉದಯೋನ್ಮುಖ ಭಾರತೀಯ ಕ್ರೀಡಾಪಟುಗಳು ಆಕೆಯನ್ನು ಅನುಸರಿಸಬೇಕು ಮತ್ತು ಉನ್ನತವಾದದ್ದನ್ನು ಸಾಧಿಸಲು ಆಕೆಯ ಬದ್ಧತೆಯನ್ನು ನೋಡಿ ಕಲಿಯಬೇಕು ಎಂದು ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಿಂಧು ಅವರು ರನ್ನಿಂಗ್ ಮಾಡುತ್ತಿರುವುದು, ವೇಟ್ ಲಿಫ್ಟಿಂಗ್ ಸೇರಿದಂತೆ ಹಲವು ಅಭ್ಯಾಸಗಳನ್ನು ಮಾಡುತ್ತಿರುವುದು ಸೆರೆಯಾಗಿದೆ.

ಭಾನುವಾರ ನಡೆದ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪಿ.ವಿ ಸಿಂಧು ಅವರು ಜಪಾನ್ ದೇಶದ ಒಕುಹಾರ ಅವರ ವಿರುದ್ಧ 21-7, 21-7 ರ ನೇರ ಸೆಟ್‍ನಲ್ಲಿ ಗೆದ್ದು ಚಿನ್ನಕ್ಕೆ ಕೊರಳೊಡ್ಡಿದರು. ಪಂದ್ಯದ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಸಿಂಧು ನೇರ ಸೆಟ್‍ನಲ್ಲಿ ಸುಲಭವಾಗಿ ಜಯಸಾಧಿಸಿದರು. ಈ ಮೂಲಕ ಭಾರತದ ಪರ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಚಿನ್ನ ಗೆದ್ದು ಭಾರತಕ್ಕೆ ವಾಪಸ್ ಬಂದ 24 ವರ್ಷದ ಪಿ.ವಿ ಸಿಂಧು, ಈ ವಿಜಯಕ್ಕಾಗಿ ತುಂಬಾ ದಿನಗಳಿಂದ ತಯಾರಿಯಾಗಿದ್ದೆ. ಇದಕ್ಕಾಗಿ ನನ್ನ ಪೋಷಕರಿಗೆ ಮತ್ತು ನನ್ನ ತರಬೇತುಗಾರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇವರ ಬೆಂಬಲವಿಲ್ಲದೆ ನಾನು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆಲ್ಲಲು ಆಗುತ್ತಿರಲಿಲ್ಲ. ಮುಖ್ಯವಾಗಿ ನನ್ನ ಪ್ರಯೋಜಕರಿಗೆ ಮತ್ತು ನನ್ನನ್ನು ಬೆಂಬಲಿಸಿದ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಪಿ.ವಿ ಸಿಂಧು ಹೇಳಿದ್ದಾರೆ.
ವಿಶ್ವ ಚಾಂಪಿಯನ್‍ಶಿಪ್ ಮುಗಿಸಿ ಸೋಮವಾರ ರಾತ್ರಿ ದೆಹಲಿಗೆ ಬಂದಿಳಿದ ಪಿ.ವಿ ಸಿಂಧು ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು. ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೀಡಾ ಸಚಿವ ಕಿರೆನ್ ರಿಜಿಜು ಅವರನ್ನು ಮಂಗಳವಾರ ಭೇಟಿಯಾದರು. ಈ ಸಮಯದಲ್ಲಿ ಸಿಂಧು ಅವರನ್ನು “ಭಾರತದ ಹೆಮ್ಮೆ” ಎಂದು ಕರೆದ ಮೋದಿ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದರು.