Tag: ಚಿದಂಬರಂ

  • ಲಂಡನ್‍ ನಿಂದ ಬಂದಿಳಿಯುತ್ತಿದ್ದಂತೆ ಚಿದಂಬರಂ ಪುತ್ರ ಕಾರ್ತಿ ಅರೆಸ್ಟ್

    ಲಂಡನ್‍ ನಿಂದ ಬಂದಿಳಿಯುತ್ತಿದ್ದಂತೆ ಚಿದಂಬರಂ ಪುತ್ರ ಕಾರ್ತಿ ಅರೆಸ್ಟ್

    ಚೆನ್ನೈ: ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಹಣಕಾಸು ಸಚಿವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂನನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಉಲ್ಲಂಘನೆಯ ಆರೋಪದಡಿ ಇಂದು ಸಿಬಿಐ ಬಂಧಿಸಿದೆ.

    ಲಂಡನ್‍ನಿಂದ ಚೆನ್ನೈಗೆ ವಾಪಸ್ಸಾಗಿದ್ದ ಕಾರ್ತಿಯನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ವಲಸೆ ಅಧಿಕಾರಿಗಳು ನಂತರ ಸಿಬಿಐ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸದ್ಯ ಏರ್‍ಪೋರ್ಟ್‍ನಲ್ಲೇ ಸಿಬಿಐ ಅಧಿಕಾರಿಗಳು ಕಾರ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಬಳಿಕ ದೆಹಲಿಗೆ ಕರೆದೊಯ್ಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಚಿದಂಬರಂ ಅವರು ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದ ವೇಳೆ ಕಾರ್ತಿ ಚಿದಂಬರಂ ತಂದೆಯ ಹೆಸರು ಬಳಸಿ ಐಎನ್‍ಎಕ್ಸ್ ಮೀಡಿಯಾಗೆ 300 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಕಿಕ್‍ಬ್ಯಾಕ್ ಪಡೆದಿದ್ದಾರೆಂಬ ಆರೋಪವಿದೆ. ಮೊದಲು ಪ್ರಕರಣ ದಾಖಲಾದಾಗ 10 ಲಕ್ಷ ರೂ. ಪಡೆದಿದ್ದಾರೆಂದು ಉಲ್ಲೇಖಿಸಲಾಗಿತ್ತು. ಆದ್ರೆ ಈಗ ಅದಕ್ಕೂ ಹೆಚ್ಚಿನ ಮೊತ್ತ ಪಡೆದಿರುವುದಕ್ಕೆ ಸಾಕ್ಷಿ ಸಿಕ್ಕಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

    ಕಳೆದ ವರ್ಷ ಮೇನಲ್ಲಿ ಜಾರಿ ನಿರ್ದೇಶನಾಲಯ ಕಾರ್ತಿ ಚಿದಂಬರಂ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಸಿಬಿಐ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ಕಾರ್ತಿ ಚಿದಂಬರಂ ತೆರಿಗೆಗೆ ಸಂಬಂಧಿಸಿದ ತನಿಖೆ ತಪ್ಪಿಸಲು ಐಎನ್‍ಎಕ್ಸ್ ಮೀಡಿಯಾದಿಂದ ಹಣ ಪಡೆದಿದ್ದಾರೆಂಬ ಆರೋಪವೂ ಇದೆ.

    ಕಾರ್ತಿ ಚಿದಂಬರಂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮಗಳಿಗೆ ಅಡ್ಮಿಷನ್ ಮಾಡಿಸುವ ಸಲುವಾಗಿ ನವೆಂಬರ್‍ನಲ್ಲಿ ಇಂಗ್ಲೆಂಡಿಗೆ ಹೋಗಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಕಾರ್ತಿಯನ್ನ ಬಂಧಿಸಿರುವುದು ಸೇಡಿನ ರಾಜಕೀಯ ಎಂದು ಕಾಂಗ್ರೆಸ್ ಹೇಳಿದೆ.

    ಏನಿದು ಪ್ರಕರಣ?: 2008ರಲ್ಲಿ ಐಎನ್‍ಎಕ್ಸ್ ಮೀಡಿಯಾ ಕಾರ್ತಿ ಅವರ ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಸಂಸ್ಥೆ ಹಾಗೂ ಅದರ ಸಹ ಸಂಸ್ಥೆಗಳಿಗೆ ಹಣ ಪಾವತಿಸಿ ಶೇರುಗಳನ್ನು ನೀಡಿತ್ತು. ಪೀಟರ್ ಮುಖರ್ಜಿ ಅವರ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆ ಹಲವು ಕಂತುಗಳಲ್ಲಿ ಹಣವನ್ನ ಪಾವತಿಸಿತ್ತು. ಅಲ್ಲದೆ 60 ಶೇರುಗಳನ್ನು ಲಂಡನ್ ಮೂಲದ ಆರ್ಟಿವಿಯಾ ಡಿಜಿಟಲ್ ಯುಕೆ ಲಿಮಿಟಡ್ ಕಂಪೆನಿಯಿಂದ ಕಾರ್ತಿ ಅವರ ಸಂಸ್ಥೆಗೆ ವರ್ಗಾಯಿಸಲಾಗಿತ್ತು ಎಂದು ವರದಿಯಾಗಿತ್ತು.

    ಈ ಹಿಂದೆ ಕಾರ್ತಿ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಕಾರ್ತಿ ಅವರ ಸಂಸ್ಥೆಯ ಬಗ್ಗೆ ಮಾಹಿತಿವುಳ್ಳ ಹಾರ್ಡ್ ಡಿಸ್ಕ್ ಗಳನ್ನ ಜಪ್ತಿ ಮಾಡಲಾಗಿತ್ತು. ಕಾರ್ತಿ ಅವರು ಐಎನ್‍ಎಕ್ಸ್ ಮೀಡಿಯಾದಿಂದ ಕಿಕ್‍ಬ್ಯಾಕ್ ಪಡೆದಿದ್ದಾರೆಂಬುದು ತನಿಖೆಯಿಂದ ಬಹಿರಂಗವಾಗಿತ್ತು. 2008 ಸೆಪ್ಟೆಂಬರ್ 22ರಂದು ಎಫ್‍ಐಪಿಬಿ(ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ) ಯಿಂದ 220 ಮಿಲಿಯನ್ ಡಾಲರ್ ಕ್ಲಿಯರೆನ್ಸ್ ಗಾಗಿ ಅರ್ಜಿ ಹಾಕಿದ್ದ ಐಎನ್‍ಎಕ್ಸ್ ಮೀಡಿಯಾ ಕಾರ್ತಿ ಅವರ ಸಂಸ್ಥೆಗೆ 35 ಲಕ್ಷ ರೂ. ನೀಡಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ಈ ಹಿಂದೆ ಐಎನ್‍ಎಕ್ಸ್ ಮೀಡಿಯಾದ ಮಾಲೀಕರಾಗಿದ್ದ ಪೀಟರ್ ಮುಖರ್ಜಿ ಮತ್ತು ಪತ್ನಿ ಇಂದ್ರಾಣಿ ಮುಖರ್ಜಿ ಸದ್ಯ ತಮ್ಮ ಮಗಳು ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಈ ಕೊಲೆ ಪ್ರಕರಣದ ತನಿಖೆ ವೇಳೆ ಮುಖರ್ಜಿ ಅವರ ಹಣಕಾಸು ವ್ಯವಹಾರಗಳನ್ನ ಪರೀಶಿಲನೆಗೆ ಒಳಪಡಿಸಿದಾಗ ಐಎನ್‍ಎಕ್ಸ್ ಮೀಡಿಯಾ ಡೀಲ್ ಬಗ್ಗೆ ಸುಳಿವು ಸಿಕ್ಕಿತ್ತು. 2009ರಲ್ಲಿ ಮುಖರ್ಜಿ ಐಎನ್‍ಎಕ್ಸ್ ಮೀಡಿಯಾದಿಂದ ಹೊರಬಂದಿದ್ದರು.

  • ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಬರುತ್ತಾ: ಅರುಣ್ ಜೇಟ್ಲಿ ಹೇಳಿದ್ದು ಹೀಗೆ

    ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಬರುತ್ತಾ: ಅರುಣ್ ಜೇಟ್ಲಿ ಹೇಳಿದ್ದು ಹೀಗೆ

    ನವದೆಹಲಿ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲವನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬೆಂಬಲಿಸಿದ್ದಾರೆ.

    ರಾಜ್ಯಸಭೆಯಲ್ಲಿ ಮಾಜಿ ಹಣಕಾಸು ಸಚಿವ ಪಿಚಿದಂಬರಂ ಮಾತನಾಡಿ, ಪ್ರಸ್ತುತ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿ ಅಡಿಯಲ್ಲಿ ತರಲು ಅಡ್ಡಿಯಾಗಿರುವುದು ಏನು? ಯಾವಾಗ ಜಿಎಸ್‍ಟಿ ಕೌನ್ಸಿಲ್ ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: 2014ರ ನಂತರ ಮೋದಿ ಸಾಮ್ರಾಜ್ಯ ಎಲ್ಲೆಲ್ಲಿ ವಿಸ್ತರಣೆಯಾಗಿದೆ? ಮ್ಯಾಪ್ ನೋಡಿ

    ಇದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, ಜಿಎಸ್‍ಟಿ ಕರಡು ನಿಯಮಗಳನ್ನು ರಚಿಸುವ ವೇಳೆ ಯುಪಿಎ ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‍ಟಿ ವ್ಯಾಪ್ತಿಯ ಒಳಗಡೆ ಸೇರಿಸಲಿಲ್ಲ. ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಹಾಳಾಗಬಹುದು ಎನ್ನುವ ಕಾರಣಕ್ಕೆ ಯುಪಿಎ ಸೇರಿಸಲಿಲ್ಲ. ಆದರೆ ಈಗ ರಾಜ್ಯಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗುವ ಬಗ್ಗೆ ರಾಜ್ಯಗಳು ಶೀಘ್ರ ಅಥವಾ ನಂತರವಾದರೂ ಒಪ್ಪಿಗೆ ನೀಡಬಹುದು ಎನ್ನುವ ಆಶಾವಾದವನ್ನು ನಾವು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.

    ಕಳೆದ ವಾರ ಬಿಹಾರದ ಹಣಕಾಸು ಸಚಿವ ಸುಶೀಲ್ ಮೋದಿ ಕಳೆದ ವಾರ ಜಿಎಸ್‍ಟಿ ವ್ಯಾಪ್ತಿಯ ಅಡಿಯಲ್ಲಿ ವಿದ್ಯುತ್, ಪೆಟ್ರೋಲಿಯಂ ಉತ್ಪನ್ನಗಳನ್ನು ತರುವ ಬಗ್ಗೆ ಸುಳಿವು ನೀಡಿದ್ದರು. ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಮಾತನಾಡಿದ ಸುಶೀಲ್ ಮೋದಿ, ಎಲೆಕ್ಟ್ರಿಸಿಟಿ, ರಿಯಲ್ ಎಸ್ಟೇಟ್, ಪೆಟ್ರೋಲಿಯಂ ಜಿಎಸ್‍ಟಿ ವ್ಯಾಪ್ತಿಗೆ ತರಬೇಕಿದೆ. ಆದರೆ ಇದನ್ನು ವ್ಯಾಪ್ತಿಗೆ ತರುವುದು ಜಿಎಸ್‍ಟಿ ಕೌನ್ಸಿಲ್‍ಗೆ ಬಹಳ ಸವಾಲಿದೆ ಎಂದು ತಿಳಿಸಿದ್ದರು.

    ಬೆಂಗ್ಳೂರಿನಲ್ಲಿ ಎಷ್ಟು ಇರಲಿದೆ?
    ಪೆಟ್ರೋಲ್, ಡೀಸೆಲ್ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ವ್ಯಾಪ್ತಿಗೆ ತಂದರೆ ಬೆಂಗಳೂರಿನಲ್ಲಿ 40 ರೂ. ಆಗಬಹುದು ಎಂದು ಈ ಹಿಂದೆ ವೆಬ್‍ಸೈಟ್ ಸುದ್ದಿ ಪ್ರಕಟ ಮಾಡಿತ್ತು. Factly.in ವೆಬ್‍ಸೈಟ್ ಈ ವರದಿ ಪ್ರಕಟಿಸಿದ್ದು ಒಂದು ವೇಳೆ ಪೆಟ್ರೋಲ್‍ಗೆ ಶೇ.18 ರಷ್ಟು ತೆರಿಗೆ ವಿಧಿಸಿದರೆ ಬೆಲೆ 40 ರೂ. ಆಗುತ್ತದೆ ಎಂದು ಹೇಳಿದೆ. ಪ್ರಸ್ತುತ ಭಾರತದಲ್ಲಿ ವಸ್ತುಗಳ ಮೇಲೆ ಶೇ.5, ಶೇ.12, ಶೇ.18, ಶೇ.28 ಜಿಎಸ್‍ಟಿ ತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ ಈ ಪೆಟ್ರೋಲ್ ಗೆ ಎಷ್ಟು ಜಿಎಸ್‍ಟಿ ಹಾಕಿದ್ರೆ ಎಷ್ಟು ರೂ. ಆಗಬಹುದು ಎನ್ನುವ ವಿವರಣೆಯಲ್ಲಿ ಈ ವೆಬ್‍ಸೈಟ್ ಪ್ರಕಟಿಸಿದೆ.

    ಎಷ್ಟು ತೆರಿಗೆ ಆದ್ರೆ ಎಷ್ಟು ರೂ.?
    ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 71.17 ರೂ. ಇದೆ ಎಂದು ಪರಿಗಣಿಸಿಜಿಎಸ್‍ಟಿ ವ್ಯಾಪ್ತಿಗೆ ತಂದು ಶೇ.12 ತೆರಿಗೆ ವಿಧಿಸಿದರೆ 38.01 ರೂ., ಶೇ.18 ತೆರಿಗೆ ವಿಧಿಸಿದರೆ 40.05 ರೂ., ಶೇ.28 ತೆರಿಗೆ ವಿಧಿಸಿದರೆ 43.44 ರೂ. ಆಗಬಹುದು. ಒಂದು ವೇಳೆ ಜಿಎಸ್‍ಟಿ ಶೇ. 28 ಮತ್ತು ಹೆಚ್ಚುವರಿಯಾಗಿ ಶೇ.22 ಜಿಎಸ್‍ಟಿ ಸೆಸ್ ವಿಧಿಸಿದರೂ ಬೆಲೆ 50.91 ರೂ. ಆಗಲಿದೆ.

    ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 58.82 ರೂ. ಇದೆ. ಜಿಎಸ್‍ಟಿ ಅಡಿಯಲ್ಲಿ ಡೀಸೆಲ್ ಬಂದರೆ ಶೇ.12 ತೆರಿಗೆ ಹಾಕಿದ್ರೆ 36.65 ರೂ. ಆಗುತ್ತದೆ. ಒಂದು ವೇಳೆ ಶೇ.18ರಷ್ಟು ತೆರಿಗೆ ವಿಧಿಸಿದರೆ 38.61 ರೂ. ಆದರೆ ಶೇ.28 ತೆರಿಗೆ ವಿಧಿಸಿದರೆ 41.88 ರೂ. ಆಗುತ್ತದೆ. ಜಿಎಸ್‍ಟಿ ಶೇ.28 ಜೊತೆಗೆ ಹೆಚ್ಚುವರಿ ಸೆಸ್ 22 ಹಾಕಿದ್ರೆ ಡೀಸೆಲ್ ಬೆಲೆ 49.8 ಆಗಬಹುದು.

    ಪೆಟ್ರೋಲ್ ಜಿಎಸ್‍ಟಿಯಲ್ಲಿ ಬರಲ್ಲ:
    ಡೀಸೆಲ್, ಪೆಟ್ರೋಲ್, ನೈಸರ್ಗಿಕ ಅನಿಲ, ಕಚ್ಚಾ ತೈಲ ಮತ್ತು ವಿಮಾನ ಇಂಧನವನ್ನು ಸದ್ಯಕ್ಕೆ ಜಿಎಸ್‍ಟಿಯಿಂದ ಹೊರಗೆ ಇಡಲಾಗಿದೆ. ರಾಜ್ಯ ಸರ್ಕಾರಗಳು ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಬಿಟ್ಟುಕೊಡಲು ಮುಂದಾಗದ ಹಿನ್ನೆಲೆಯಲ್ಲಿ ಇವುಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ.

    ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್ ಬರುತ್ತಾ?
    ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಹಣಕಾಸು ಸಚಿವರು ಇರುವ ಜಿಎಸ್‍ಟಿ ಮಂಡಳಿಯಲ್ಲಿ ಒಪ್ಪಿಗೆ ಸಿಕ್ಕಿದರೆ ಪೆಟ್ರೋಲ್ ಬೆಲೆ ಕಡಿಮೆಯಾಗಬಹುದು. ಈಗಾಗಲೇ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ದೇಶಾದ್ಯಂತ ಏಕರೂಪದ ದರ ವಿಧಿಸಬಹುದು ಎಂದು ಹೇಳಿದ್ದಾರೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರುವ ಕಾರಣ ಎಲ್ಲ ರಾಜ್ಯಗಳು ಒಪ್ಪಿಗೆ ನೀಡಿದರೆ ಬೆಲೆ ಕಡಿಮೆಯಾಗಬಹುದು.

    ಬೆಲೆ ಯಾಕೆ ಜಾಸ್ತಿ?
    ಪ್ರವೇಶ ತೆರಿಗೆ, ವ್ಯಾಟ್, ಅಬಕಾರಿ ಸುಂಕ, ಅಕ್ಟ್ರಾಯ್, ಪೆಟ್ರೋಲ್ ಪಂಪ್ ಮಾಲೀಕರ ಕಮಿಷನ್ ಸೇರಿ ಪೆಟ್ರೋಲ್, ಡೀಸೆಲ್ ದರ ನಿಗದಿಯಾಗುತ್ತದೆ. 2014ರಿಂದ ಲೀಟರ್ ಪೆಟ್ರೋಲ್ ಮೇಲೆ 11.77 ರೂ. ಮತ್ತು ಡೀಸೆಲ್ ಮೇಲೆ 13.47 ರೂ. ರಷ್ಟು ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಹೇರಿದೆ. ಇದರಿಂದ 99,000 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.  ಇದನ್ನೂ ಓದಿ: 70 ರೂ. ಪೆಟ್ರೋಲ್ ನಲ್ಲಿ ಯಾರಿಗೆ ಎಷ್ಟು ಪಾಲು? ಬೇರೆ ರಾಷ್ಟ್ರಗಳಲ್ಲಿ ಎಷ್ಟು ದರವಿದೆ?

    ಜಿಎಸ್‍ಟಿಯಲ್ಲಿ ಪೆಟ್ರೋಲ್ ಬೆಲೆ

    ಜಿಎಸ್‍ಟಿಯಲ್ಲಿ ಡೀಸೆಲ್ ಬೆಲೆ