Tag: ಚಿಕ್ಕಬಳ್ಳಾಪುರು

  • ಆದ್ಯತಾ ಗುಂಪಿನವರಿಗೆ ಲಸಿಕೆ – ಮೇ 31 ಕೊನೆಯ ದಿನ

    ಆದ್ಯತಾ ಗುಂಪಿನವರಿಗೆ ಲಸಿಕೆ – ಮೇ 31 ಕೊನೆಯ ದಿನ

    ಚಿಕ್ಕಬಳ್ಳಾಪುರ: ಆದ್ಯತಾ ಗುಂಪಿನವರಿಗೆ ಲಸಿಕಾಕರಣ ನಡೆಸಲು ಮೇ 31 ಕೊನೆ ದಿನಾಂಕ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್ ಕಬಾಡೆ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ 18 ರಿಂದ 44 ವರ್ಷದೊಳಗಿನ ವಯೋಮಾನದವರಲ್ಲಿ ಆದ್ಯತೆ ಗುಂಪುಗಳನ್ನು ರಾಜ್ಯ ಸರ್ಕಾರ ಗುರುತಿಸಿ ಕೋವಿಡ್-19 ಲಸಿಕಾಕರಣವನ್ನು ನಡೆಸಲು ಸೂಚಿಸಿತ್ತು. ಅದರಂತೆ 18 ರಿಂದ 44 ವರ್ಷದ ಕೆಳಕಂಡ ಆದ್ಯತಾ ಗುಂಪಿನವರಿಗೆ ಕೋವಿಡ್ ಲಸಿಕಾಕರಣವನ್ನು ಮೇ 22 ರಿಂದ ಪ್ರಾರಂಭಿಸಲಾಗಿತ್ತು. ಸದ್ಯ ಮೇ 31ಕ್ಕೆ ಈ ಅಭಿಯಾನ ಅಂತ್ಯಗೊಳ್ಳಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹೇಳಿದ್ದಾರೆ.

    ಯಾರಿಗೆಲ್ಲ ಲಸಿಕೆ?
    ಅಂಗವೈಕಲ್ಯ ಹೊಂದಿರುವ (ಮಾನಸಿಕ ಅಸ್ವಸ್ಥತೆ ಸೇರಿದಂತೆ) ಫಲಾನುಭವಿಗಳು ಮತ್ತು ಒಬ್ಬ ಆರೈಕೆದಾರರು, ಖೈದಿಗಳು, ಚಿತಾಗಾರ/ಸ್ಮಶಾನ/ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವಸಹಾಯಕರು. ಆರೋಗ್ಯ ಕಾರ್ಯರ್ಕರ ನಿಕಟ ಕುಟುಂಬಸ್ಥರು, ಕೋವಿಡ್-19 ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು, ಸರ್ಕಾರಿ ಸಾರಿಗೆ ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರು, ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು, ಅಂಚೆ ಇಲಾಖೆ ಸಿಬ್ಬಂದಿಗಳು, ಬೀದಿ ಬದಿಯ ವ್ಯಾಪಾರ ಮಾಡುವವರು, ಭದ್ರತೆ ಮತ್ತು ಕಛೇರಿಗಳ ಹೌಸ್ಕೀ ಪಿಂಗ್ ಸಿಬ್ಬಂದಿಗಳು, ನ್ಯಾಯಾಂಗ ಅಧಿಕಾರಿಗಳು, ವಯೋವೃದ್ಧರು/ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರ ಆರೈಕೆದಾರರು, ಮಕ್ಕಳ ಸಂರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಧ್ಯಮದವರು, ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವ ವ್ಯಕ್ತಿಗಳು, ಆಯಿಲ್ ಇಂಡಸ್ಟ್ರಿ ಮತ್ತು ಗ್ಯಾಸ್ ಸರಬರಾಜು ಮಾಡುವವರು (ಪೆಟ್ರೊಲ್ ಬಂಕ್, ಕರ್ಮಚಾರಿ ಒಳಗೊಂಡಂತೆ) ಔಷಧಿ ತಯಾರಿಸುವ ಕಂಪನಿಯ ಸಿಬ್ಬಂದಿಗಳು, ಆಸ್ಪತ್ರೆಗಳಿಗೆ ಆಕ್ಸಿಜನ್, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವ ಸಿಬ್ಬಂದಿಗಳು, ಅಧಿಕೃತ ಗುರುತಿನ ಚೀಟಿ ಹೊಂದಿರುವ ಫಲಾನುಭವಿಗಳು(ಉದಾಹರಣೆ: ವೃದ್ದಾಶ್ರಮ ವಾಸಿಗಳು, ನಿರ್ಗತಿಕರು), ಭಾರತೀಯ ಆಹಾರ ನಿಗಮ ಸಿಬ್ಬಂದಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎ.ಪಿ.ಎಂ.ಸಿ) ಕೆಲಸಗಾರರು. ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಸಿಬ್ಬಂದಿ, ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಮತ್ತು ಬಿ ಇಎಲ್ ಸಿಬ್ಬಂದಿ ಮೇಲ್ಕಂಡ ಎಲ್ಲಾ ಆದ್ಯತಾ ಗುಂಪಿನ ಚಿಕ್ಕಬಳ್ಳಾಪುರ ಜಿಲ್ಲೆಯ ಫಲಾನುಭವಿಗಳು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಲಸಿಕಾ ಕೇಂದ್ರಗಳಲ್ಲಿ ಮೇ 31ರ ಒಳಗಾಗಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಸದರಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

  • ಯಡಿಯೂರಪ್ಪ ಕೊಟ್ಟ ಮಾತು ತಪ್ಪಿಲ್ಲ, ಮಂತ್ರಿ ಮಾಡ್ತಾರೆ – ಸುಧಾಕರ್

    ಯಡಿಯೂರಪ್ಪ ಕೊಟ್ಟ ಮಾತು ತಪ್ಪಿಲ್ಲ, ಮಂತ್ರಿ ಮಾಡ್ತಾರೆ – ಸುಧಾಕರ್

    ಚಿಕ್ಕಬಳ್ಳಾಪುರ: ಸಿಎಂ ಯಡಿಯೂರಪ್ಪ ಎಂದೂ ಕೂಡ ಕೊಟ್ಟ ಮಾತು ತಪ್ಪಿಲ್ಲ, ಹೀಗಾಗಿ ಈಗಲೂ ಸಹ ಯಡಿಯೂರಪ್ಪ ಮಾತು ತಪ್ಪಲ್ಲ ಎಂದು ಭಾವಿಸಿದ್ದೇನೆ ಅಂತ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಶಾಸಕ ಡಾ. ಸುಧಾಕರ್ ಹೇಳಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು ಮಂತ್ರಿ ಸ್ಥಾನ ಕೊಡಲು ಸಿಎಂ ಒಳ್ಳೆಯ ಮೂಹೂರ್ತ ಇಟ್ಟಿದ್ದು, ಶುಭ ಗಳಿಗೆಯಲ್ಲಿ ಅಧಿಕಾರ ಕೊಡಲು ತೀರ್ಮಾನ ಮಾಡಿದ್ದಾರೆ. ಇದರಿಂದ ಶುಭ ಗಳಿಗೆಯಲ್ಲಿ ಕ್ಷೇತ್ರಕ್ಕೆ ರಾಜ್ಯಕ್ಕೆ ಒಳ್ಳೆಯದಾಗಲಿದೆ. ಸಂಕ್ರಾಂತಿ ಆದ ಮೇಲೆ ಒಳ್ಳೆಯ ದಿನಗಳಿದ್ದು, ಬಹುಶಃ ಸಂಕ್ರಾಂತಿ ಆದ ಮೇಲೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದರು. ಸೋತವರಿಗೆ ಮಂತ್ರಿ ಸ್ಥಾನ ಕೊಡೋದು ನಾಯಕರಿಗೆ ಬಿಟ್ಟ ವಿಚಾರ ಎಂದು ಹೇಳಿ ನುಣುಚಿಕೊಂಡರು.

    ನಾನು ಸಿಎಂ ಆಗಿದ್ರೆ ಪ್ರಧಾನಿ ಮನೆ ಎದುರು ಧರಣಿ ಕೂರುತ್ತಿದ್ದೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಸಿಎಂ ಆದಾಗ ಎಷ್ಟು ಬಾರಿ ಧರಣಿ ಕೂತಿದ್ರು? ಎಷ್ಟು ಬಾರಿ ಧರಣಿ ಕೂತಿದ್ರು ಅಂತ ಜನತೆಗೆ ತಿಳಿಸಲಿ ಎಂದು ಪ್ರಶ್ನಿಸಿದರು. ಈಗಾಗಲೇ ನೆರೆ ಪರಿಹಾರಕ್ಕಾಗಿ ಎರಡು ಕಂತಲ್ಲಿ ಸರಿಸುಮಾರು 3000 ಕೋಟಿ ಹಣ ಬಂದಿದೆ. ಇದು ಬಿಡಿಗಾಸು ಎಂದು ಸಿದ್ದರಾಮಯ್ಯ ಹೇಳೋದು ಸರಿ ಅಲ್ಲ ಎಂದು ಮಾಜಿ ಸಿಎಂ ವಿರುದ್ಧ ಕಿಡಿಕಾರಿದರು.

  • ಜಿಲ್ಲಾಸ್ಪತ್ರೆಯ ಶೌಚಾಲಯಗಳೇ ಬಾರ್- ಕಸದ ಬುಟ್ಟಿಯಲ್ಲಿ ಪ್ರತಿದಿನ ರಾಶಿ ರಾಶಿ ಮದ್ಯದ ಪ್ಯಾಕೆಟ್

    ಜಿಲ್ಲಾಸ್ಪತ್ರೆಯ ಶೌಚಾಲಯಗಳೇ ಬಾರ್- ಕಸದ ಬುಟ್ಟಿಯಲ್ಲಿ ಪ್ರತಿದಿನ ರಾಶಿ ರಾಶಿ ಮದ್ಯದ ಪ್ಯಾಕೆಟ್

    ಚಿಕ್ಕಬಳ್ಳಾಪುರ: ಹೈಟೆಕ್ ಜಿಲ್ಲಾಸ್ಪತ್ರೆಯಲ್ಲಿ ಶೌಚಾಲಯಗಳೇ ಕುಡುಕುರ ಪಾಲಿನ ಬಾರ್‍ಗಳಾಗಿದ್ದು, ಶೌಚಾಲಯಗಳಲ್ಲಿ ಎಲ್ಲೆಂದರಲ್ಲಿ ಮದ್ಯದ ಪಾಕೆಟ್‍ಗಳು ಕಾಣಿಸುತ್ತಿರುವುದು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಇದು ಆರೋಗ್ಯ ಸಚಿವರ ಜಿಲ್ಲೆಯ ಪಕ್ಕದ ಜಿಲ್ಲಾಸ್ಪತ್ರೆಯಲ್ಲಿ ನಡೆದಿರೋ ಘಟನೆ.

    ಚಿಕ್ಕಬಳ್ಳಾಪುರದ ಆಸ್ಪತ್ರೆಯ ಶೌಚಾಲಯಗಳಲ್ಲಿ ಕಸದ ಬುಟ್ಟಿಗಳಲ್ಲಿ ಪ್ರತಿದಿನ ರಾಶಿ ರಾಶಿ ಮದ್ಯದ ಪಾಕೆಟ್ ಗಳು ಸಿಗುತ್ತಿವೆ. ಆರೋಗ್ಯ ಭಾಗ್ಯ ಕರುಣಿಸುವ ಆಸ್ಪತ್ರೆಯಲ್ಲೇ ಕದ್ದು ಮುಚ್ಚಿ ಮದ್ಯ ಸೇವನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

    ಆಸ್ಪತ್ರೆಯ ಶೌಚಾಲಯಗಳಲ್ಲಿನ ಕಿಟಕಿ, ಪಾರ್ಕಿಂಗ್ ಪ್ಲಾಟ್ ಸೇರಿದಂತೆ ಆಸ್ಪತ್ರೆಯ ನಿರ್ಜನ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಮದ್ಯದ ಪ್ಯಾಕೆಟ್ ಗಳು ಕಣ್ಣಿಗೆ ರಾಚುತ್ತಿದ್ದು, ಜಿಲ್ಲಾಸ್ಪತ್ರೆ ಕುಡುಕರ ಪಾಲಿನ ಸ್ವರ್ಗ ಎಂಬಂತಾಗಿದೆ. ಇದರಿಂದ ರೋಗಿಗಳು ಶೌಚಾಲಯಕ್ಕೆ ಹೋಗಲು, ಆಸ್ಪತ್ರೆಯಲ್ಲಿ ಓಡಾಡಲು ತೊಂದರೆಯಾಗುತ್ತಿದೆ. ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸದ ಹಿನ್ನೆಲೆಯಲ್ಲಿ ಕುಡುಕ ಮಹಾಶಯರು ಆಸ್ಪತ್ರೆಯನ್ನೇ ಬಾರ್‍ಗಳಾಗಿ ಮಾಡಿದ್ದಾರೆ.

    ಅಧಿಕಾರಿಗಳು ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.