Tag: ಚಿಕ್ಕಬಳ್ಳಾಪು

  • ಕಾಂಗ್ರೆಸ್ ಮುಖಂಡನ ಕೊಲೆ ಪ್ರಕರಣ- 8 ಮಂದಿ ಬಂಧನ

    ಕಾಂಗ್ರೆಸ್ ಮುಖಂಡನ ಕೊಲೆ ಪ್ರಕರಣ- 8 ಮಂದಿ ಬಂಧನ

    – ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಬಂಧನ

    ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಮುಖಂಡ ಹಾಗೂ ರೌಡಿಶೀಟರ್ ಅಮ್ಜದ್ ಕೊಲೆ ಪ್ರಕರಣ ಸಂಬಂಧ ಶಿಡ್ಲಘಟ್ಟ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ.

    ರಘು ಅಲಿಯಾಸ್ ರಾಘವೇಂದ್ರ, ಗೂಳಿ ಅಲಿಯಾಸ್ ಅಕ್ಷಯ್, ಶ್ರೀನಾಥ್, ಚಾಲಕ ಪವನ್, ಅಮಿತ್, 16 ವರ್ಷದ ಅಪ್ರಾಪ್ತ, ಕಲ್ಲು ಅಲಿಯಾಸ್ ಕಲಂಧರ್ ಹಾಗೂ ಡಾಂಬರ್ ಮೌಲಾ ಬಂಧಿತರು.

    ಕೊಲೆಗೆ ಕಾರಣ ಏನು?
    ಕಲ್ಲು ಅಲಿಯಾಸ್ ಕಲಂಧರ್ ಗೆ ಕೆಲ ವರ್ಷಗಳ ಹಿಂದೆ ಮೃತ ಕಾಂಗ್ರೆಸ್ ಮುಖಂಡ 43 ವರ್ಷದ ಅಮ್ಜದ್ ಹಲ್ಲೆ ಮಾಡಿದ್ದ ಎನ್ನಲಾಗಿದ್ದು, ಇದರಿಂದ ಕಲ್ಲು ಅಲಿಯಾಸ್ ಕಲಂಧರ್ ನ ಎರಡು ಕೈಗಳು ಸ್ವಾಧೀನ ಇಲ್ಲದಂತಾಗಿತ್ತು. ಇದೇ ದ್ವೇಷದಿಂದ ತನ್ನ ಸಹಚರರ ಜೊತೆ ಸೇರಿ ಸಂಚು ರೂಪಿಸಿದ ಕಲಂಧರ್ ಅಮ್ಜದ್ ಕೊಲೆ ಮಾಡಿದ್ದಾನೆ.

    ಕಲಂಧರ್, ಅಮಿತ್, ರೋಷನ್, ಮೌಲಾ ನಾಲ್ವರು ಅಮ್ಜದ್ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಇತ್ತ ಚಾಲಕ ಒವನ್ ಒಮ್ನಿ ಕಾರಿನ ಮೂಲಕ ಅಮ್ಜದ್ ಬೈಕ್ ಹಿಂಬಾಲಿಸಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ಕೂಗಳತೆ ದೂರದ ರೈಲ್ವೆ ಅಂಡರ್ ಪಾಸ್ ಬಳಿ ಅಮ್ಜದ್ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಆಗ ಕೂಡಲೇ ಕಾರಿನಲ್ಲಿದ್ದ ರಘು, ಅಕ್ಷಯ್ ಹಾಗೂ ಶ್ರೀನಾಥ್ ಅಮ್ಜದ್ ಮೇಲೆ ದಾಳಿ ನಡೆಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಅದೇ ಒಮ್ನಿ ಕಾರಿನಲ್ಲಿ ಪರಾರಿಯಾಗಿದ್ದರು. ಆದರೆ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

  • ನಾನು ಸದ್ಯಕ್ಕೆ ಏನು ಹೇಳುವುದಿಲ್ಲ: ಸುಧಾಕರ್ ಕುತುಹಲ ಹೇಳಿಕೆ

    ನಾನು ಸದ್ಯಕ್ಕೆ ಏನು ಹೇಳುವುದಿಲ್ಲ: ಸುಧಾಕರ್ ಕುತುಹಲ ಹೇಳಿಕೆ

    – ಪಿಸಿಬಿ ಅಧ್ಯಕ್ಷ ಸ್ಥಾನ ನೀಡದಿದ್ರೆ ಸಾಮೂಹಿಕ ರಾಜೀನಾಮೆ: ಬೆಂಬಲಿಗರಿಂದ ಬೆದರಿಕೆ

    ಬೆಂಗಳೂರು/ ಚಿಕ್ಕಬಳ್ಳಾಪುರ: ವಿಪ್ ಜಾರಿಯಾಗಿದ್ದರೂ ಅಧಿವೇಶಕ್ಕೆ ಗೈರು ಆಗುವ ಮೂಲಕ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಮೈತ್ರಿ ಸರ್ಕಾರದ ವಿರುದ್ಧ ಮತ್ತೆ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ಟಿವಿಯವರೊಂದಿಗೆ ಮಾತನಾಡುವುದಿಲ್ಲ. ಸದನಕ್ಕೆ ಹಾಜರಾಗದ ಕುರಿತು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ನಾನು ಸದ್ಯಕ್ಕೆ ಏನು ಹೇಳುವುದಿಲ್ಲ ಎಂದು ಕುತೂಹಲದ ಹೇಳಿಕೆ ನೀಡಿದ್ದಾರೆ.

    ಸಚಿವ ಸ್ಥಾನ ಮತ್ತು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡದ್ದಕ್ಕೆ ಮೈತ್ರಿ ಸರ್ಕಾರದ ವಿರುದ್ಧ ಪರೋಕ್ಷವಾಗಿ ಅಸಮಾಧಾನವನ್ನು ಹೊರಹಾಕಿ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎಂದು ಸುಧಾಕರ್ ಈ ಹಿಂದೆ ಹೇಳಿಕೆ ನೀಡಿದ್ದರು.

    ಇತ್ತ ಚಿಕ್ಕಬಳ್ಳಾಪುರಲ್ಲಿ ಸುಧಾಕರ್ ಅವರ ಬೆಂಬಲಿಗರು ಸುದ್ದಿಗೋಷ್ಠಿ ನಡೆಸಿ, ಸಿಎಂ ಕುಮಾರಸ್ವಾಮಿ ಉದ್ದೇಶ ಪೂರ್ವಕವಾಗಿ ನಮ್ಮ ಸಚಿವರ ಹೆಸರನ್ನು ಪರಿಸರ ನಿಯಂತ್ರಣ ಮಂಡಳಿ (ಪಿಸಿಬಿ) ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟಿದ್ದಾರೆ. ಸುಧಾಕರ್ ಅವರಿಗೆ ಪಿಸಿಬಿ ಅಧ್ಯಕ್ಷ ಸ್ಥಾನ ನೀಡಲೇ ಬೇಕು. ಇಲ್ಲವಾದಲ್ಲಿ ನಗರಸಭೆ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಎಪಿಎಂಸಿ, ಪಿಎಲ್‍ಡಿ ಬ್ಯಾಂಕ್‍ನ ಎಲ್ಲಾ ಚುನಾಯಿತ ಸ್ಥಾನಗಳಿಗೂ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

    ಸುಧಾಕರ್ ಅವರು ಬೆಂಬಲಿಗರ ಮೂಲಕ ರಾಜೀನಾಮೆ ದಾಳ ಉರುಳಿಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಡೆಯುವುದಕ್ಕೆ ರಣತಂತ್ರ ರೂಪಿಸಿದ್ದಾರೆ. ಹೀಗಾಗಿ ಅಧಿವೇಶನಕ್ಕೂ ಗೈರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ ಎನ್ನುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯಕರನ ಜೊತೆ ಸೇರಿ ತಾಳಿ ಕಟ್ಟಿದ ಗಂಡನನ್ನೇ ಮುಗಿಸಿ ಇಬ್ಬರೂ ಜೈಲುಪಾಲಾದ್ರು!

    ಪ್ರಿಯಕರನ ಜೊತೆ ಸೇರಿ ತಾಳಿ ಕಟ್ಟಿದ ಗಂಡನನ್ನೇ ಮುಗಿಸಿ ಇಬ್ಬರೂ ಜೈಲುಪಾಲಾದ್ರು!

    ಚಿಕ್ಕಬಳ್ಳಾಪುರ: ಗಂಡನನ್ನೇ ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

    ಚಿಕ್ಕಬಳ್ಳಾಪುರದ 8ನೇ ವಾರ್ಡಿನಲ್ಲಿ 30 ವರ್ಷದ ಛಾಯಾಕುಮಾರ್ ಎಂಬಾತ ಮನೆಯ ಮುಂದೆ ಕೊಲೆಯಾಗಿ ಹೋಗಿದ್ದನು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪತ್ನಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

    ಕೊಲೆ ಮಾಡಿದ್ದು ಯಾಕೆ?
    ಮೂಲತಃ ಸೂಲಕುಂಟೆ ಗ್ರಾಮದ ಟ್ರಾಕ್ಟರ್ ಚಾಲಕನಾಗಿದ್ದ ಮೃತ ಛಾಯಾಕುಮಾರ್ ಹಾಗೂ ಜಾನಕಿಗೆ ಮದುವೆಯಾಗಿ 4 ವರ್ಷಗಳು ಕಳೆದಿದ್ದು, ಒಂದು ಮಗು ಕೂಡ ಇದೆ. ಆದ್ರೆ ಮಗುವಾದ ಬಳಿಕ ಕುಡಿತದ ದಾಸನಾಗಿದ್ದ ಛಾಯಾಕುಮಾರ್ ಜಾನಕಿ ಮೇಲೆ ಹಲ್ಲೆ ಮಾಡುತ್ತಿದ್ದನು. ವಾರಕ್ಕೊಂದು ಸಲ ಅಥವಾ ಎರಡು ಸಲ ಮಾತ್ರ ಮನೆಗೆ ಬರ್ತಿದ್ದನು. ಬಂದಾಗ ಕುಡಿದ ಅಮಲಿನಲ್ಲಿ ಜಾನಕಿ ಮೇಲೆ ಹಲ್ಲೆ ಮಾಡ್ತಿದ್ದನು ಅಂತ ಪತ್ನಿ ಜಾನಕಿ ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ತಾಳಿ ಕಟ್ಟಿದ ಗಂಡನನ್ನೇ ಚೂರಿಯಿಂದ ಇರಿದು ಬರ್ಬರವಾಗಿ ಕೊಲೆಗೈದ್ಳಾ ಪತ್ನಿ?

    ಗಂಡನ ಹಲ್ಲೆಯಿಂದಾಗಿ ಬೇಸತ್ತ ಜಾನಕಿ ಮಂಚೇನಹಳ್ಳಿ ಬಳಿಯ ಆರ್ಕುಂದ ಗ್ರಾಮದ ಕುಮಾರ್ ಎಂಬಾತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ. ಗಂಡ ಪದೇ ಪದೇ ಕುಡಿದು ಬಂದು ಹೊಡಿತಾನೆ ಅಂತ ಜಾನಕಿ ಹಾಗೂ ಪ್ರಿಯಕರ ಕುಮಾರ್ ಇಬ್ಬರು ಸೇರಿ ಕೊಲೆ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಅಲ್ಲದೇ ಒಂದು ತಿಂಗಳ ಮೊದಲೇ ಕುಮಾರ್ ಚಾಕುವೊಂದನ್ನು ತಂದು ಜಾನಕಿಗೆ ಕೊಟ್ಟಿದ್ದಾನೆ. ಕೊಲೆಯಾದ ದಿನ ಛಾಯಾಕುಮಾರ್ ಮಧ್ಯರಾತ್ರಿ ಮನೆಗೆ ಬರ್ತಾನೆ ಅನ್ನೋದನ್ನು ಖಾತ್ರಿ ಮಾಡಿಕೊಂಡ ಜಾನಕಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಳು. ಮಧ್ಯರಾತ್ರಿ ಮನೆಗೆ ಬಂದ ಛಾಯಾಕುಮಾರ್ ಮೇಲೆ ಮುಗಿಬಿದ್ದ ಜಾನಕಿ ಹಾಗೂ ಪ್ರಿಯಕರ ಕುಮಾರ್ ಹಲ್ಲೆ ಮಾಡಿದ್ದಾರೆ. ಈ ವೇಳೆ ಮೂವರ ಮಧ್ಯೆ ನಡೆದ ಜಗಳ ತಾರಕಕ್ಕೇರಿದ್ದು, ಕುಮಾರ್ ಚಾಕುವಿನಿಂದ ಛಾಯಾಕುಮಾರ್ ಕುತ್ತಿಗೆಗೆ ಇರಿದಿದ್ದಾನೆ. ಮನೆಯಲ್ಲಿ ಆರಂಭವಾದ ಜಗಳ ಮನೆಯ ಹೊರಗಡೆಯವರೆಗೂ ನಡೆದು ಕೊನೆಗೆ ಮರಳು ದಿಬ್ಬದ ಮೇಲೆ ಛಾಯಾಕುಮಾರ್ ಕುಸಿದು ಮೃತಪಟ್ಟಿದ್ದಾನೆ.

    ನನಗೇನು ಗೊತ್ತಿಲ್ಲವೆಂದಿದ್ದಳು: ಕೊಲೆ ನಡೆದ ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಛಾಯಕುಮಾರ್ ಪತ್ನಿಯ ಬಳಿಕ ಹೇಳಿಕೆ ಪಡೆದಿದ್ದರು. ಈ ವೇಳೆ ನನಗೆ ಏನು ಗೊತ್ತಿಲ್ಲ ಸರ್ ಅಂತ ಕಥೆ ಕಟ್ಟಿದ್ದಳು. ಆದ್ರೆ ಬಲವಾದ ಅನುಮಾನದ ಮೇಲೆ ಜಾನಕಿಯನ್ನ ವಶಕ್ಕೆ ಪಡೆದು ಪೊಲೀಸರು ಬೆಂಡೆತ್ತಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ.

    ಸದ್ಯ ಚಿಕ್ಕಬಳ್ಳಾಪುರ ಪೊಲೀಸರು ಪಾತಕಿ ಪತ್ನಿ ಜಾನಕಿ ಹಾಗೂ ಪ್ರಿಯಕರ ಕುಮಾರ್ ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.