Tag: ಚಿಕಿತ್ಸೆ

  • ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಸರ್ಕಾರಿ ಕೋಟಾ ಮೀಸಲಿಡಬೇಕು: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

    ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಸರ್ಕಾರಿ ಕೋಟಾ ಮೀಸಲಿಡಬೇಕು: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

    ಶಿವಮೊಗ್ಗ: ಸರ್ಕಾರದ ಆದೇಶದ ಪ್ರಕಾರ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಶೇ.50 ರಷ್ಟು ಹಾಸಿಗೆಗಳನ್ನು ಸರ್ಕಾರಿ ಕೋಟಾದ ಅಡಿಯಲ್ಲಿ ಕಡ್ಡಾಯವಾಗಿ ಮೀಸಲಿರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಅವರು, ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದೆ. ಕೋವಿಡ್ ಪಾಸಿಟಿವ್ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳ ಸೌಲಭ್ಯವನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಲಿದೆ. ಅಂತಹ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಆಸ್ಪತ್ರೆಗಳು ತಮ್ಮಲ್ಲಿನ ಜನರಲ್ ಹಾಸಿಗೆ, ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್ ಸೌಲಭ್ಯ ಹೊಂದಿರುವ ಬೆಡ್‍ಗಳ ಪೈಕಿ ಶೇ.50ರಷ್ಟನ್ನು ಸರ್ಕಾರದ ಕೋಟಾದ ಅಡಿ ನೀಡಬೇಕು ಎಂದರು.

    ಒಂದು ವೇಳೆ ಈ ಬೆಡ್‍ಗಳನ್ನು ಬಳಸುವುದಿದ್ದರೆ ಜಿಲ್ಲಾಡಳಿತದಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು. ಈ ನಿರ್ದೇಶನ ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಈ ಬಾರಿ ಕ್ರಮ ಜರುಗಿಸುವುದು ಖಚಿತ ಎಂದು ಅವರು ಎಚ್ಚರಿಕೆ ನೀಡಿದರು. ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಈ ಹಿಂದೆಯೇ ನಿಗದಿಪಡಿಸಿದೆ. ಅದರಂತೆ ಶುಲ್ಕ ವಿಧಿಸಲು ಅವಕಾಶವಿದೆ. ಹೆಚ್ಚುವರಿ ಶುಲ್ಕ ವಿಧಿಸುವ ಕುರಿತು ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಇದಕ್ಕೂ ಮೊದಲು ಜಿಲ್ಲಾಧಿಕಾರಿ ಅವರು ಎಲ್ಲಾ ತಾಲೂಕು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಕೋವಿಡ್ ನಿರ್ವಹಣೆ ಕುರಿತು ಸೂಚನೆಗಳನ್ನು ನೀಡಿದರು.

    ಪ್ರಸ್ತುತ ಗಾಜನೂರಿನಲ್ಲಿ ಕೋವಿಡ್ ಕೇರ್ ಸೆಂಟರ್ ಸಜ್ಜುಗೊಳಿಸಲಾಗಿದೆ. ಎಲ್ಲಾ ತಾಲೂಕುಗಳಲ್ಲಿ ಸಹ ಕೇರ್ ಸೆಂಟರ್ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಮನೆ ಆರೈಕೆಯಲ್ಲಿ ಇರುವ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಮಾಹಿತಿಯನ್ನು ಪ್ರತಿದಿನ ಪಡೆಯಲು ತಾಲೂಕು ಮಟ್ಟದಲ್ಲಿ ತಂಡ ರಚಿಸಬೇಕು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ಆರಂಭಿಸಬೇಕು. ಪ್ರತಿ ತಾಲೂಕಿನಲ್ಲಿ ಕನಿಷ್ಟ 50 ಆಕ್ಸಿಜನ್ ಬೆಡ್ ಸೌಲಭ್ಯ ಇರಬೇಕು. ವ್ಯಾಕ್ಸಿನೇಷನ್ ಲಭ್ಯತೆ ಬಗ್ಗೆ ಪ್ರತಿ ದಿನ ಮಾಹಿತಿ ನೀಡಬೇಕು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳ ಮೇಲುಸ್ತುವಾರಿಗೆ ಪೊಲೀಸ್ ಇಲಾಖೆ ನೇತೃತ್ವದಲ್ಲಿ ನೋಡಲ್ ಅಧಿಕಾರಿ ನೇಮಕ ಮಾಡಲಾಗುವುದು. ಅಂಬುಲೆನ್ಸ್ ನಿರ್ವಹಣೆಗೆ ನೋಡಲ್ ಅಧಿಕಾರಿ ನೇಮಕ ಮಾಡಬೇಕು ಎಂದು ಹೇಳಿದರು.

    ರೂಪಾಂತರಿತ ಕರೋನಾ ಅತ್ಯಂತ ವೇಗವಾಗಿ ಹರಡುತ್ತಿದ್ದು, ಪ್ರಾಥಮಿಕ ಸೋಂಕಿತರಲ್ಲಿ ಶೇ.30ರಷ್ಟು ಮಂದಿಗೆ ಪಾಸಿಟಿವ್ ಕಂಡು ಬರುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಹೇಳಿದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ಎಂ.ಎಲ್, ಅಪರ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೇಖರ್ ಎಚ್.ಟಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಶಿಮ್ಸ್ ನಿರ್ದೇಶಕ ಡಾ.ಸಿದ್ಧಪ್ಪ, ವಿವಿಧ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

  • ಬಿಹಾರದ ಮಾಜಿ ಶಿಕ್ಷಣ ಸಚಿವ ಮೇವಲಾಲ್ ಚೌಧರಿ ಕೋವಿಡ್‍ಗೆ ಬಲಿ

    ಬಿಹಾರದ ಮಾಜಿ ಶಿಕ್ಷಣ ಸಚಿವ ಮೇವಲಾಲ್ ಚೌಧರಿ ಕೋವಿಡ್‍ಗೆ ಬಲಿ

    ಪಾಟ್ನಾ: ಬಿಹಾರದ ಮಾಜಿ ಶಿಕ್ಷಣ ಸಚಿವ ಹಾಗೂ ಜನತಾ ದಳದ ಶಾಸಕ ಮೇವಲಾಲ್ ಚೌಧರಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

    ಕಳೆದ ಕೋವಿಡ್-19ಗೆ ಒಳಗಾಗಿದ್ದ ಸಚಿವರು ಪ್ಯಾರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮುಂಜಾನೆ ನಾಲ್ಕು ಗಂಟೆಗೆ ಕೋವಿಡ್ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.

    ಮೇವಲಾಲ್ ಚೌಧರಿ, ಬಿಹಾರದ ತಾರಾಪುರ ಕ್ಷೇತ್ರದ ವಿಧಾನಸಭೆಯ ಸದಸ್ಯರಾಗಿದ್ದರು. ಆದರೆ ಭ್ರಷ್ಟಾಚಾರದ ಆರೋಪದಡಿ ರಾಜ್ಯ ಶಿಕ್ಷಣ ಸಚಿವ ಹುದ್ದೆಯಿಂದ ಅವರನ್ನು ತೆಗೆದುಹಾಕಲಾಯಿತು.

    ಭಾನುವಾರ ರಾತ್ರಿಯಿಂದ ಬಿಹಾರದ ಸರ್ಕಾರ ರಾಜ್ಯದಲ್ಲಿ ನೈಟ್ ಕಫ್ರ್ಯೂ ಜಾರಿಗೊಳಿಸಿದ್ದು, ಮೇ 15ರವರೆಗೂ ಬಿಹಾರದ ಶಾಲಾ-ಕಾಲೇಜುಗಳನ್ನು ಮುಚ್ಚಲು ನಿರ್ಧರಿಸಿದೆ. ಇತ್ತೀಚೆಗೆ ಆರೋಗ್ಯ ಸಿಬ್ಬಂದಿಗೆ ಸಂಬಳದ ಜೊತೆಗೆ ಒಂದು ತಿಂಗಳು ಬೋನಸ್ ನೀಡಲು ಬಿಹಾರ ಸರ್ಕಾರ ಘೋಷಿಸಿದೆ.

  • 17 ವರ್ಷ ವಯೋಲಿನ್ ನುಡಿಸಿ ಪತ್ನಿಯನ್ನ ಕ್ಯಾನ್ಸರ್‌ನಿಂದ ಮುಕ್ತಗೊಳಿಸಿದ 77ರ ವೃದ್ಧ!

    17 ವರ್ಷ ವಯೋಲಿನ್ ನುಡಿಸಿ ಪತ್ನಿಯನ್ನ ಕ್ಯಾನ್ಸರ್‌ನಿಂದ ಮುಕ್ತಗೊಳಿಸಿದ 77ರ ವೃದ್ಧ!

    ಕೋಲ್ಕತ್ತಾ: ವೃದ್ಧರೊಬ್ಬರು ತನ್ನ ಪತ್ನಿಯ ಮೇಲಿನ ಪ್ರೀತಿ ಹಾಗೂ ಸಂಗೀತದ ಮೇಲೆ ಇರುವ ಅಭಿಮಾನವನ್ನು ಜನರ ಮುಂದೆ ಪ್ರದರ್ಶಿಸಿರುವ ಮನಕಲಕುವ ಕಥೆಯೊಂದು ಇಲ್ಲಿದೆ.

    ಕೋಲ್ಕತ್ತಾದ ಬಲರಾಮ್ ಡೇ ಸ್ಟ್ರೀಟ್‍ನ ನಿವಾಸಿ ಸ್ವಪನ್ ಸೇಟ್ ಅವರ ಕಥೆ ಸಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 2002ರಲ್ಲಿ ಸೆಟ್ ಪತ್ನಿಯ ಗರ್ಭಕೋಶದಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಬಡಕುಟುಂಬವಾಗಿದ್ದರಿಂದ ಸೇಟ್ ಗೆ ಪತ್ನಿಯ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪತ್ನಿಯ ಚಿಕಿತ್ಸೆಗೆ ಹಣ ಸಂಗ್ರಹಿಸುವ ಸಲುವಾಗಿ ಅವರು ಪಿಟೀಲು ನುಡಿಸಲು ದೇಶಾದ್ಯಂತ ಪ್ರಯಾಣಿಸಿದರು.

    ಸೇಟ್ ಕೇವಲ ಪಿಟೀಲು ವಾದಕ ಮಾತ್ರವಲ್ಲದೆ ಪೈಂಟರ್ ಹಾಗೂ ಶಿಲ್ಪಿ ಕೂಡ. ಹೀಗಾಗಿ ತಮ್ಮ ಕಲೆಯನ್ನೇ ಬಳಸಿಕೊಂಡು ಪತ್ನಿಯನ್ನು ಬದುಕಿಸುವ ನಿರ್ಧಾರಕ್ಕೆ ಬಂದರು. ತಮ್ಮ ಕಲೆಯ ಮೂಲಕ ಪತ್ನಿಯ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ನಿರ್ಧರಿಸಿದರು. 17 ವರ್ಷಗಳ ಕಾಲ ಅದನ್ನು ಮುಂದುವರಿಸಿದರು. ಅಂತೆಯೇ ಪತ್ನಿ 2019 ರಲ್ಲಿ ಚೇತರಿಸಿಕೊಂಡರು. ಅದಾಗ್ಯೂ ಸೇಟ್ ಅವರು ನಗರಗಳಲ್ಲಿ ಸಂಚರಿಸಿ ಜನರನ್ನು ರಂಜಿಸಲು ಪಿಟೀಲು ನುಡಿಸುತ್ತಿದ್ದರು. ಸಾಮಾನ್ಯವಾಗಿ ಸೆಟ್ ಅವರು ಪಿಟೀಲು ನುಡಿಸುವಾಗ ಬಿಳಿ ಕುರ್ತಾ ಮತ್ತು ಧೋತಿ ಧರಿಸುತ್ತಾರೆ.

    ಅಂತೆಯೇ ಇದೇ ತಿಂಗಳ ಆರಂಭದಲ್ಲಿ ಕೋಲ್ಕತ್ತಾದ ಶಾಪಿಂಗ್ ಮಾಲ್ ಹೊರಗಡೆ ಸೆಟ್ ಅವರು ವಯೋಲಿನ್ ನುಡಿಸುತ್ತಿರುವ ವೀಡಿಯೋವನ್ನು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಅದು ಸಾಕಷ್ಟು ವೈರಲ್ ಆಗಿದೆ.

    ಸ್ವಪನ್ ಸೇಟ್. ಪೈಂಟರ್, ಶಿಲ್ಪಿ ಹಾಗೂ ವಯೋಲಿನ್ ನುಡಿಸುತ್ತಿರುವ ಇವರು ಕೋಲ್ಕತ್ತಾದ ಬಲರಾಮ್ ಡೇ ಸ್ಟ್ರೀಟ್ ನಲ್ಲಿ ಸ್ಟುಡಿಯೋವನ್ನು ಕೂಡ ಹೊಂದಿದ್ದಾರೆ. 2002ರಲ್ಲಿ ಸೆಟ್ ಪತ್ನಿಗೆ ಗರ್ಭಾಶಯದ ಕ್ಯಾನ್ಸರ್ ಇರುವುದು ಗೊತ್ತಾಯಿತು. ಹೀಗಾಗಿ ಅವರಿಗೆ ದುಬಾರಿ ಬೆಲೆ ಚಿಕಿತ್ಸೆಯ ಅವಶ್ಯಕತೆ ಇತ್ತು. ಪತ್ನಿಯ ಚಿಕಿತ್ಸೆಗೆ ಹಣವನ್ನು ಸಂಗ್ರಹಿಸಲು ಸೆಟ್ ತಮ್ಮ ಕಲೆಯನ್ನೇ ಬಳಸಿಕೊಂಡರು. ಪಿಟೀಲು ನುಡಿಸಲು ಮತ್ತು ಪೈಂಟಿಂಗ್ ಮಾಡಲು ವಿವಿಧ ಸ್ಥಳಗಳಿಗೆ ಪ್ರಯಾಣಿಸಿದರು ಎಂದು ಕ್ಯಾಪ್ಷನ್ ನೀಡಲಾಗಿತ್ತು.

    17 ವರ್ಷಗಳ ಸತತ ಪ್ರಯತ್ನದಿಂದ 2019ರ ವೇಲೆ ಸೇಟ್ ಪತ್ನಿ ಕ್ಯಾನ್ಸರ್ ನಿಂದ ಚೇತರಿಸಿಕೊಂಡರು. ಆದರೂ ಸೇಟ್ ಮಾತ್ರ ತಮ್ಮ ಕಾಯಕ ಮುಂದುವರಿಸಿದ್ದಾರೆ. ವಿವಿಧ ಕಡೆ ತೆರಳಿ ಈಗಲೂ ವಯೋಲಿನ್ ಹಾಗೂ ಪೈಂಟಿಂಗ್ ಮಾಡುತ್ತಿದ್ದಾರೆ.

     

  • ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿ, ಕಾನೂನು ಚೌಕಟ್ಟನ್ನು ಮೀರಬೇಡಿ: ನಿವೃತ್ತ ಪೊಲೀಸ್ ಅಧೀಕ್ಷಕ ಬಡಿಗೇರ

    ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿ, ಕಾನೂನು ಚೌಕಟ್ಟನ್ನು ಮೀರಬೇಡಿ: ನಿವೃತ್ತ ಪೊಲೀಸ್ ಅಧೀಕ್ಷಕ ಬಡಿಗೇರ

    ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡುವ ಅವಕಾಶ ಎಲ್ಲರಿಗೂ ಲಭ್ಯವಾಗುವುದಿಲ್ಲ. ಸಮಾಜದಲ್ಲಿ ಹಿಂದೇ ಉಳಿದವರು, ಮಹಿಳೆಯರು ಅಶಕ್ತರು ಪೊಲೀಸರಲ್ಲಿ ನೆರವು ಕೋರಿ ಆಗಮಿಸುತ್ತಾರೆ. ಇವರ ಅಳುಲುಗಳನ್ನು ಆಲಿಸಿ, ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿ, ಕಾನೂನು ಚೌಕಟ್ಟನ್ನು ಮೀರಬೇಡಿ ಎಂದು ನಿವೃತ್ತ ಪೊಲೀಸ್ ಅಧೀಕ್ಷಕ ಎ.ಆರ್.ಬಡಿಗೇರ ಹೇಳಿದ್ದಾರೆ.

    ಹುಬ್ಬಳ್ಳಿ ಗೋಕುಲದ ಹೊಸ ಸಿ.ಆರ್. ಮೈದಾನದಲ್ಲಿ ಆಯೋಜಿಸಲಾಗಿದ್ದ 2021 ನೇ ಸಾಲಿನ ಪೊಲೀಸ್ ಧ್ವಜದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, 1992 ರಿಂದ 2000 ವರೆಗೆ ಹುಬ್ಬಳ್ಳಿ ಅತಿ ಸೂಕ್ಷ್ಮ ಪ್ರದೇಶವಾಗಿತ್ತು. ಕೋಮು ಘರ್ಷಣೆಗಳಾಗುತ್ತಿದ್ದ ನಗರದಲ್ಲಿ ಮತ್ತೆ ಕಾನೂನು ಸುವ್ಯವಸ್ಥೆಯನ್ನು ಸರಿ ದಾರಿಗೆ ತರಲಾಗಿದೆ. ಈಗ ಹುಬ್ಬಳ್ಳಿಯಲ್ಲಿ ಶಾಂತ ಪರಿಸ್ಥಿತಿ ಇದೆ. ಅವಳಿ ನಗರದ ಪೊಲೀಸರ ಶ್ರಮ ಇದಕ್ಕೆ ಕಾರಣವಾಗಿದೆ. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಶಿಸ್ತು ಅವಶ್ಯಕವಾಗಿದೆ. ಪೊಲೀಸರು ಸಮಯ ಪ್ರಜ್ಞೆ ರೂಢಿಸಿಕೊಳ್ಳಬೇಕು. ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬೇಕು. ಬಡವರ ಸಮಸ್ಯೆಗಳನ್ನು ಕಳಕಳಿಯಿಂದ ಬಗೆಹರಿಸಿ ಕಾನೂನು ನೆರವು ನೀಡಿದರೆ, ಜೀವನ ಪೂರ್ತಿ ನಿಮಗೆ ಅಭಾರಿಯಾಗಿರುತ್ತಾರೆ. ಇಲಾಖೆಯಲ್ಲಿ ಸುಧಾರಣೆಯಾಗಿದ್ದು, ಉತ್ತಮ ವಾಹನ, ಕಟ್ಟಡ, ಕಂಪ್ಯೂಟರ್ ಸೌಲಭ್ಯಗಳಿವೆ. ವೈದ್ಯರ ಹಾಗೆ ಪೊಲೀಸರು ಸಮಾಜವನ್ನು ಚಿಕಿತ್ಸೆ ದೃಷ್ಟಿಯಿಂದ ನೋಡಿ ಸರಿಪಡಿಸಬೇಕು. ಇತ್ತೀಚಿನ ದಿನಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದರು ಪೊಲೀಸ್ ವೃತ್ತಿ ಆಗಮಿಸುತ್ತಿದ್ದೀರಿ. ನಿಮಗೆಲ್ಲ ಒಳ್ಳೆಯದಾಗಲಿ ಎಂದರು.

    ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಪೊಲೀಸ್ ಆಯುಕ್ತ ಲಾಭುರಾಮ್, ಏಪ್ರಿಲ್ 2 ಮಹತ್ವದ ದಿನವಾಗಿದೆ. 1965 ರಲ್ಲಿ ಏಪ್ರಿಲ್ 2 ರಂದು ಕರ್ನಾಟಕ ಪೊಲೀಸ್ ಕಾಯ್ದೆಯ ಮೂಲಕ ಕರ್ನಾಟಕಕ್ಕೆ ಪೊಲೀಸ್ ಇಲಾಖೆಯನ್ನು ಪುನ್ರರಚಿಸಿ ಅಸ್ತಿತ್ವಕ್ಕೆ ತರಲಾಯಿತು. ಇದರ ನೆನಪಿಗಾಗಿ ಧ್ವಜ ದಿನಾಚರಣೆಯಲ್ಲಿ ಆಚರಿಸಲಾಗುತ್ತದೆ. ಪೊಲೀಸ್ ಧ್ವಜ ಮಾರಾಟದಿಂದ ಬರುವ ಹಣವನ್ನು ನಿವೃತ್ತ ಸಿಬ್ಬಂದಿಗಳ ಕಲ್ಯಾಣ ನಿಧಿಗೆ ಬಳಕೆ ಮಾಡಿಕೊಳ್ಳಲಾಗುವುದು. ನಿವೃತ್ತಿ ಸಿಬ್ಬಂದಿಯ ವೈದ್ಯಕೀಯ ವೆಚ್ಚ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ನೀಡಲಾಗುವುದು. ಧ್ವಜ ಮಾರಾಟದ ಹಣದಲ್ಲಿ ನಿವೃತ್ತ ಪೊಲೀಸರ ಕಲ್ಯಾಣ ನಿಧಿಗೆ ಶೇ.50, ಕಾರ್ಯ ನಿರತ ಪೊಲೀಸರ ನಿಧಿಗೆ ಶೇ.25 ಹಾಗೂ ಕೇಂದ್ರ ಪೊಲೀಸ್ ನಿಧಿಗೆ ಶೇ.25 ರಷ್ಟು ಹಣ ಸಲ್ಲಿಕೆಯಾಗುತ್ತದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಶಿವಪ್ಪ ಕಮಟಗಿ, ಕುಶಲ್ ಪಂಡ್ರೆ ಅವರಿಗೆ ಮುಖ್ಯ ಮಂತ್ರಿಗಳ ಪದಕ ದೊರತಿರುವುದು ಸಂತಸವಾಗಿದೆ ಎಂದು ನುಡಿದರು.

    ಈ ಸಂದರ್ಭದಲ್ಲಿ 2021 ಸಾಲಿನ ಧ್ವಜ ಬಿಡುಗಡೆ ಮಾಡಲಾಯಿತು. ಸ್ಥಳದಲ್ಲಿ ಸಾಂಕೇತಿಕವಾಗಿ ಧ್ವಜ ಮಾರಾಟ ಮಾಡಿ ಪೊಲೀಸ್ ಕಲ್ಯಾಣ ನಿಧಿಗೆ ಹಣ ಸಂಗ್ರಹಿಸಲಾಯಿತು. ಮಾರ್ಚ್ ತಿಂಗಳಲ್ಲಿ ನಿವೃತ್ತರಾದ ಸಹಾಯಕ ಆರಕ್ಷಕ ನಾಗರಾಜ್ ಪಾಟೀಲ, ಪೊಲೀಸ್ ದಲಾಯತ್ ಶಕುಂತಲ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

    ಸಿ.ಎ.ಆರ್ ತುಕಡಿ, ಉತ್ತರ, ದಕ್ಷಿಣ, ಧಾರವಾಡ, ಮಹಿಳಾ, ಸಂಚಾರ ಉಪವಿಭಾಗದ ಪೊಲೀಸ್ ಸಿಬ್ಬಂದಿಯಿಂದ ಪಥ ಸಂಚಲನ ಜರುಗಿತು. ಸಶಸ್ತೃ ಮೀಸಲು ಪಡೆ ಆರಕ್ಷಕ ಮಹದೇವ ಅಥಣಿ ನೇತೃತ್ವದಲ್ಲಿ ರಾಷ್ಟಧ್ವಜ ಹಾಗೂ ಪೊಲೀಸ್ ಧ್ವಜಗಳ ಆಗಮನ ಹಾಗೂ ನಿರ್ಗಮನವಾಯಿತು. ಆರ್.ಎಸ್.ಐ ಸಂತೋಷ್ ಬೋಜಪ್ಪಗೋಳ್ ಪಥ ಸಂಚಲದ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದರು. ಡಿಸೋಜಾ ತಂಡದಿಂದ ಪೊಲೀಸ್ ಬ್ಯಾಂಡ್ ನುಡಿಸಲಾಯಿತು.

    ನಿವೃತ್ತ ಪೊಲೀಸ್ ಅಧೀಕ್ಷಕರಾದ ಎಸ್.ಎಂ.ಸಂದಿಗಾವಡ, ರವಿ ಹೆಚ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಪ ಪೊಲೀಸ್ ಆಯುಕ್ತ ರಾಮರಾಜನ್, ಆರ್.ಬಿ.ಬಸರಗಿ, ಸಶಸ್ತ್ರ ಮೀಸಲ ಪಡೆ ಉಪ ಪೊಲೀಸ್ ಆಯುಕ್ತ .ಎಸ್.ವಿ.ಯಾದವ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

  • ಮಿಲಿಟರಿ ಕ್ಯಾಂಪ್‍ನಲ್ಲಿ ಸ್ಫೋಟ- 20 ಸಾವು, 600 ಮಂದಿಗೆ ಗಂಭೀರ ಗಾಯ

    ಮಿಲಿಟರಿ ಕ್ಯಾಂಪ್‍ನಲ್ಲಿ ಸ್ಫೋಟ- 20 ಸಾವು, 600 ಮಂದಿಗೆ ಗಂಭೀರ ಗಾಯ

    – ಸುಟ್ಟು ಕರಕಲಾದ ಕಟ್ಟಡಗಳು

    ಲಾಗೋಸ್: ಈಕ್ವಟೋರಿಯಲ್ ಗಿನಿಯದ ಮಿಲಿಟರಿ ಕ್ಯಾಂಪ್ ಮತ್ತು ವಸತಿ ಗೃಹ ಪ್ರದೇಶಗಳಲ್ಲಿ ಆಕಸ್ಮಿಕವಾಗಿ 4 ಸ್ಫೋಟಕಗಳು ಸ್ಫೋಟಗೊಂಡಿದ್ದು, 20 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.

    ಘಟನೆ ವೇಳೆ ಬಾಟಾದ ಎನ್‍ಕೋವಾ ಎನ್ಟೋಮಾ ಶಿಬಿರದ ಸುತ್ತಲಿನ ಕಟ್ಟಡಗಳು ಸುಟ್ಟುಕರಕಲಾಗಿದೆ. ಆಕಾಶದೆತ್ತರಕ್ಕೆ ಕಪ್ಪು ಹೊಗೆ ಹಾರಿದೆ. ಅಲ್ಲದೆ ಅನೇಕ ಮನೆಗಳು ನೆಲಕ್ಕೂರುಳಿದೆ. ಕಟ್ಟಡಗಳಲ್ಲಿ ಸಿಲುಕಿದ್ದ ಮಕ್ಕಳು ಹಾಗೂ ವಯಸ್ಕರನ್ನು ರಕ್ಷಿಸಲಾಗಿದ್ದು, ಇದೀಗ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಅಲ್ಲದೆ ಆರೋಗ್ಯ ಸಚಿವಾಲಯವು ಟ್ವಿಟ್ಟರ್ ಮೂಲಕ ಇನ್ನೂ ಅನೇಕ ಮಂದಿ ಕೆಳಗೆ ಸಿಲುಕಿಕೊಂಡಿರಬಹುದು ಎಂದು ಎಚ್ಚರಿಸಿದೆ. ಮಿಲಿಟರಿ ಕ್ಯಾಂಪ್‍ನಲ್ಲಿ ಸೈನಿಕರು ಸಂಗ್ರಹಿಸಿದ್ದ ಸ್ಫೋಟಗಳ ಪ್ರದೇಶದಲ್ಲಿ ರೈತರು ಬೆಂಕಿಯನ್ನು ಹೊತ್ತಿಸಿದ ಕಾರಣ ಘಟನೆ ಸಂಭವಿಸಿದೆ. ಅಲ್ಲದೆ ಎನ್ಕೋಮಾ ಮಿಲಿಟರಿ ಕ್ಯಾಂಪ್‍ನಲ್ಲಿ ಸ್ಫೋಟಕಗಳು, ಡೈನಮೈಟ್ ಹಾಗೂ ಸಿಡಿಮದ್ದುಗಳನ್ನು ಸಂಗ್ರಹಿಸುವ ಉಸ್ತುವಾರಿ ಘಟಕದ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಅಧ್ಯಕ್ಷ ಟಿಯೊಡೊರೊ ಒಬಿಯಾಂಗ್ ನ್ಗುಮಾ ಹೇಳಿದ್ದಾರೆ.

    ಸದ್ಯ ಘಟನೆಯಲ್ಲಿ 20 ಮಂದಿ ಮೃತಪಟ್ಟಿದ್ದು, ಸುಮಾರು 600 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯ ಆಫ್ರಿಕಾ ದೇಶದಲ್ಲಿ ಬಾಟಾ ಅತಿದೊಡ್ಡ ನಗರವಾಗಿದ್ದು, 1.4 ದಶಲಕ್ಷಜನಸಂಖ್ಯೆಹೊಂದಿದೆ.

  • 2 ಲಾರಿ, ಕಾರು ನಡುವೆ ಸರಣಿ ಅಪಘಾತ – ಇಬ್ಬರು ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ

    2 ಲಾರಿ, ಕಾರು ನಡುವೆ ಸರಣಿ ಅಪಘಾತ – ಇಬ್ಬರು ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೋಲಪಲ್ಲಿ ಬಳಿ ಸರಣಿ ಅಪಘಾತವಾಗಿದ್ದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಮೂರು ಲಾರಿ ಮತ್ತು ಒಂದು ಕಾರು ನಡುವೆ ಸರಣಿ ಅಪಘಾತ ನಡೆದಿದೆ.

    ಲಾರಿಗಳ ಮುಖಾಮುಖಿ ಡಿಕ್ಕಿಯಿಂದ ಅಪಘಾತ ಸಂಭವಿಸಿದೆ. ಮೃತರನ್ನ ದೇವದುರ್ಗ ಮೂಲದ ಹರ್ಷಿತಾ(18) ಹಾಗೂ ಭುವನ್(16) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ.

    ಲಾರಿ ಹಿಂದೆ ಬರುತ್ತಿದ್ದ ಕಾರಿಗೆ ಹಿಂಬದಿಯಲ್ಲಿನ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿ ಇದ್ದ ನಾಲ್ವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಹಟ್ಟಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ವ್ಯಕ್ತಿ ಬದುಕಿದ್ದಾಗಲೇ ಮೃತಪಟ್ಟಿದ್ದಾರೆಂದು ದೃಢಪಡಿಸಿದ ಖಾಸಗಿ ಆಸ್ಪತ್ರೆ!

    ವ್ಯಕ್ತಿ ಬದುಕಿದ್ದಾಗಲೇ ಮೃತಪಟ್ಟಿದ್ದಾರೆಂದು ದೃಢಪಡಿಸಿದ ಖಾಸಗಿ ಆಸ್ಪತ್ರೆ!

    ಕೊಪ್ಪಳ: ಜೀವ ಇರುವಾಗಲೇ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಹೇಳಿ ವೈದರು ಎಡವಟ್ಟು ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳದ ಕೆ ಎಸ್ ಆಸ್ಪತ್ರೆಯ ವೈದ್ಯರ ಈ ಎಡವಟ್ಟನ್ನ ಮಾಡಿಕೊಂಡಿದ್ದಾರೆ. ಕೊಪ್ಪಳ ತಾಲೂಕಿನ ಲಾಚನಕೇರಿ ಬಳಿ ಜ.3 ರಂದು ಅಪಘಾತ ಸಂಭವಿಸಿತ್ತು. ಅಪಘಾತಕ್ಕೆ ತುತ್ತಾಗಿದ್ದ ಪಕೀರಪ್ಪ ದೊಡಮನಿಯನ್ನು ರಾತ್ರಿ 9 ಘಂಟೆಗೆ ಕೊಪ್ಪಳದ ಕೆ ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮರುದಿನ ದಿನ ಆ ವ್ಯಕ್ತಿಗೆ ಜೀವ ಇದ್ದರೂ ಡಿಸ್ಚಾರ್ಜ್ ಸಮ್ಮರಿಯಲ್ಲಿ ಡೆತ್ ಎಂದು ಬರೆದಿದ್ದನ್ನ ನೋಡಿ ಬಾಡಿ ಕೊಡಿ ಎಂದು ಕೇಳಿದಾಗ ಜೀವ ಇರುವುದು ಬೆಳಕಿಗೆ ಬಂದಿದೆ.

    ಕುಟುಂಬಸ್ಥರು ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಆ ರೋಗಿಯನ್ನ ಜಿಲ್ಲಾ ಆಸ್ಪತ್ರೆಗೆ ಕರದೊಯ್ದರು ಅಲ್ಲಿ ಎರಡು ಗಂಟೆಗೆಗಳ ಕಾಲ ಚಿಕ್ಸಿತೆ ನೀಡಿದ್ದಾರೆ. ತೀವ್ರ ಉಸಿರಾಟದ ನಂತರ ಈಗ ಆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದರು. ನಂತರ ಕೆಎಸ್ ಆಸ್ಪತ್ರೆಗೆ ವಿರುದ್ಧ ರೋಗಿಯ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ವೈದ್ಯರು ಬರುವಂತೆ ಒತ್ತಾಯ ಮಾಡಿದ್ದಾರೆ.

  • ಗಾಯಾಳುಗಳನ್ನ ಶಾಸಕರೇ ಕರೆತಂದ್ರೂ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ

    ಗಾಯಾಳುಗಳನ್ನ ಶಾಸಕರೇ ಕರೆತಂದ್ರೂ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ

    – ವೈದ್ಯರನ್ನ ತರಾಟೆ ತೆಗದುಕೊಂಡ ಶಾಸಕಿ ರೂಪಾಲಿ ನಾಯ್ಕ್
    – ಬರದ 108 ಅಂಬುಲೆನ್ಸ್
    – ಖಾಸಗಿ ಅಂಬುಲೆನ್ಸ್ ನಲ್ಲಿ ಗಾಯಾಳುಗಳ ರವಾನೆ

    ಕಾರವಾರ: ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನ ಶಾಸಕಿ ರೂಪಾಲಿ ನಾಯ್ಕ್ ಕರೆ ತಂದರೂ ಸರ್ಕಾರಿ ಆಸ್ಪತ್ರೆ ಸಮರ್ಪಕ ಚಿಕಿತ್ಸೆ ಸಿಗದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ.

    ಇಂದು ಅಂಕೋಲಾದಿಂದ ಕಾರವಾರಕ್ಕೆ ಬರುತ್ತಿದ್ದ ಶಾಸಕರ ವಾಹನದ ಎದುರೇ ಬಿಣಗಾದ ಬಳಿ ಬೈಕ್ ಮೀನಿನ ಲಾರಿಗೆ ಡಿಕ್ಕಿ ಹೊಡೆದು ಅಪಘಾತಗೊಂಡಿತ್ತು. ಬೈಕ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದವು. ಇದನ್ನು ಗಮನಿಸಿದ ಶಾಸಕಿ 108ಕ್ಕೆ ಕರೆ ಮಾಡಿದ್ದಾರೆ. ಆದರೆ ಎಷ್ಟು ಕಾದರೂ ಅಂಬುಲೆನ್ಸ್ ಬರಲೇ ಇಲ್ಲ. ಹೀಗಾಗಿ ಖಾಸಗಿ ಅಂಬುಲೆನ್ಸ್ ತರಿಸಿ ಕಾರವಾರದ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನ ಕರೆತಂದಿದ್ದರು.

    ಗಾಯಾಳುಗಳನ್ನ ಕರೆ ತಂದ ಸಂದರ್ಭದಲ್ಲಿ ವೈದ್ಯರು ಕರ್ತವ್ಯದಲ್ಲಿರಲಿಲ್ಲ. ಆಕ್ಸಿಜನ್ ಸಹ ವ್ಯವಸ್ಥೆ ಮಾಡಲಿಲ್ಲ. ಇದರಿಂದ ಕುಪಿತಗೊಂಡ ಶಾಸಕಿ ಆರ್.ಎಂ.ಓ ವೆಂಕಟೇಶ್ ರವರನ್ನು ಕರೆಸಿ ವೈದ್ಯರು ಸೇರಿದಂತೆ ಸಿಬ್ಬಂದಿಯನ್ನ ತರಾಟೆ ತೆಗೆದುಕೊಂಡರು.

    ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ಕಾಮಗಾರಿ ನಡೆಯುತ್ತಿರುವುದರಿಂದ ಕರಾವಳಿ ಭಾಗದಲ್ಲಿ ಅಪಘಾತಗಳು ಸರ್ವೇ ಸಾಮಾನ್ಯವಾಗಿದೆ. ಆದ್ರೆ ಗಾಯಾಳುಗಳನ್ನ 108 ವಾಹನದಲ್ಲಿ ಸಾಗಿಸುವ ಮೊದಲೇ ಪ್ರಾಣ ಪಕ್ಷಿ ಹಾರಿ ಹೊಗಿರುತ್ತೆ. ಅಪಘಾತಗೊಂಡರೆ ವ್ಯಕ್ತಿಗಳನ್ನು ಕರೆದೊಯ್ಯಲು ಅಂಬುಲೆನ್ಸ್ ಗಳು ಬರುವುದೇ ಇಲ್ಲ. ಬಂದರೂ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆಗಳಿಲ್ಲ. ಜೊತೆಗೆ ಹಲವು ವೈದ್ಯರು ಚಿಕಿತ್ಸೆ ನೀಡದೇ ಗೋವಾ ಅಥವಾ ಮಣಿಪಾಲಿಗೆ ಕಳುಹಿಸಿಕೊಡುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

  • ಶ್ವಾನದ ಹೊಟ್ಟೆಯಿಂದ ಹತ್ತು ಕ್ಯಾನ್ಸರ್ ಗಡ್ಡೆಗಳನ್ನು ತೆಗೆದ ವೈದ್ಯರು

    ಶ್ವಾನದ ಹೊಟ್ಟೆಯಿಂದ ಹತ್ತು ಕ್ಯಾನ್ಸರ್ ಗಡ್ಡೆಗಳನ್ನು ತೆಗೆದ ವೈದ್ಯರು

    ಧಾರವಾಡ: ಕ್ಯಾನ್ಸರ್‍ನಿಂದ ಬಳಲುತ್ತಿರುವ ಶ್ವಾನದ ಹೊಟ್ಟೆಯಿಂದ 10 ಕ್ಯಾನ್ಸರ್ ಗಡ್ಡೆಗಳನ್ನು ವೈದ್ಯರು ತೆಗೆದಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪಶು ಚಿಕಿತ್ಸಾ ವಿಭಾಗದ ವೈದ್ಯ ಡಾ. ಅನಿಲಕುಮಾರ ಪಾಟೀಲ ಮತ್ತು ತಂಡ, ಕ್ಯಾನ್ಸರ್‍ನಿಂದ ಬಳಲುತ್ತಿದ್ದ ನಾಯಿಯೊಂದಕ್ಕೆ ವಿಶೇಷ ಚಿಕಿತ್ಸೆ ಮಾಡಿ, ಅದರ ಹೊಟ್ಟೆ ಒಳಗಿದ್ದ ಹತ್ತು ಕ್ಯಾನ್ಸರ್ ಗಡ್ಡೆಗಳನ್ನು ಹೊರತೆಗೆದಿದ್ದಾರೆ.

    ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ ಲ್ಯಾಬ್ರಡಾರ್ ನಾಯಿಯೇ ಈ ವಿಶೇಷ ಚಿಕಿತ್ಸೆಗೆ ಒಳಗಾಗಿತ್ತು. ಈ ನಾಯಿ ಅಬ್ಡೋಮಿನಲ್ ಟ್ಯೂಮರ್ ಎಂಬ ಕ್ಯಾನ್ಸರ್ ಗಡ್ಡೆ ಕಾಯಿಲೆಗೆ ತುತ್ತಾಗಿತ್ತು. ಇದೇ ನಾಯಿಗೆ ಒಂದೂವರೆ ವರ್ಷ ಇದ್ದಾಗಲೂ ಸಹ ಶಸ್ತ್ರ ಚಿಕಿತ್ಸೆಯನ್ನು ಈ ಹಿಂದೆ ಮಾಡಲಾಗಿತ್ತು.

    ಕಳೆದ ಹತ್ತು ದಿನಗಳಿಂದ ನಾಯಿ ಸರಿಯಾಗಿ ಆಹಾರ ಸೇವಿಸದೇ ಒದ್ದಾಡುತಿತ್ತು. ಏನೇ ತಿಂದರೂ ವಾಂತಿ ಮಾಡಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ನಾಯಿಯನ್ನು ಡಾ. ಅನಿಲಕುಮಾರ ಬಳಿ ನಾಯಿ ಮಾಲೀಕರು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಸೋನೋಗ್ರಾಫಿ ಮಾಡಿ ನೋಡಿದಾಗ ಹೊಟ್ಟೆಯೊಳಗೆ ಗಂಟುಗಳಿರುವುದು ಪತ್ತೆಯಾಗಿದ್ದವು. ಈ ಹಿನ್ನೆಲೆ ಸತತ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಅನೀಲ ಕುಮಾರ್ ಪಾಟೀಲ ನೇತೃತ್ವದ ತಂಡ, ನಾಯಿಯ ಹೊಟ್ಟೆಯಿಂದ ಗಡ್ಡೆ ತೆಗೆಯುವಲ್ಲಿ ಯಶಸ್ವಿಯಾಗಿದೆ.

  • ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಕೀಲ ಹೃದಯಾಘಾತದಿಂದ ಸಾವು

    ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಕೀಲ ಹೃದಯಾಘಾತದಿಂದ ಸಾವು

    ಚಿಕ್ಕಬಳ್ಳಾಪುರ: ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ನವೀನ್ ಕುಮಾರ್ ಮೃತ ವಕೀಲ. ಚಿಕ್ಕಬಳ್ಳಾಪುರ ನ್ಯಾಯಾಲಯದ ಕೋರ್ಟ್ ಸಿಬ್ಬಂದಿ ನವೀನ್ ಕುಮಾರ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ, ವಿಚಾರಣಾಧೀನ ಕೈದಿ ವಕೀಲ ನವೀನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

     

    ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದಲ್ಲಿದ್ದ ನವೀನ್ ಇಂದು ದಿಢೀರ್ ಅಂತ ಅಸ್ವಸ್ಥಗೊಂಡಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ಕರೆ ತರತಲಾಯಿತ್ತು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗದ ಮಧ್ಯೆದಲ್ಲಿ ನವೀನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

     

    ಚಿಕ್ಕಬಳ್ಳಾಪುರ ನ್ಯಾಯಾಲಯದ ಮಹಿಳಾ ಸಿಬ್ಬಂದಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ನವೀನ್, ಅದೇ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮತ್ತೊಬ್ಬ ನವೀನ್ ಕುಮಾರ್ ತನ್ನ ಪರಿಚಯಸ್ಥರಿಂದ ಕೊಲೆ ಮಾಡಿಸಿದ್ದ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಜೈಲು ಸೇರಿದ್ದರು.

    ಮೃತ ನವೀನ್‍ಗೆ ಕೆಳ ಹಂತದ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಹೈಕೋರ್ಟ್‍ನಲ್ಲಿ ಜಾಮೀನು ಮಂಜೂರಾಗಿ ಇನ್ನೆರೆಡು ದಿನಗಳಲ್ಲಿ ಜಾಮೀನಿನ ಮೂಲಕ ಕಾರಾಗೃಹದಿಂದ ಹೊರಬರುತ್ತಿದ್ದ ಎನ್ನಲಾಗಿದೆ. ಆದರೆ ಅಷ್ಟರಲ್ಲೇ ನವೀನ್ ಮೃತಪಟ್ಟಿದ್ದಾನೆ. ಜೈಲು ಅಧಿಕಾರಿ ಸಿಬ್ಬಂದಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಿಲ್ಲ ಅಂತ ಮೃತ ನವೀನ್ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.