ವಿಜಯಪುರ: ಐತಿಹಾಸಿಕ ಜಿಲ್ಲೆ ವಿಜಯಪುರಕ್ಕೆ ಇದೀಗ ಹೊಸ ತಲೆನೋವು ಶುರುವಾಗಿದೆ. ಒಂದೆಡೆ ಕೊರೊನಾ ಕಾಟವಾದ್ರೆ, ಇನ್ನೊಂದೆಡೆ ಬ್ಲ್ಯಾಕ್ ಫಂಗಸ್ ಕಾಟ ಜಿಲ್ಲೆಯಲ್ಲಿ ಹೆಚ್ಚಾಗಿದೆ.
14 ಜನರಲ್ಲಿ ಬ್ಲಾಕ್ ಫಂಗಸ್ ಪ್ರಕರಣ ಪತ್ತೆಯಾಗಿವೆ. ಒಟ್ಟು ಜಿಲ್ಲೆಯಲ್ಲಿ 81 ಜನರಿಗೆ ಬ್ಲ್ಯಾಕ್ ಫಂಗಸ್ ಅಟ್ಯಾಕ್ ಮಾಡಿದೆ. ಕೊರೊನಾ ಹೆಮ್ಮಾರಿಯಿಂದ ಬಚಾವ್ ಆದವರಿಗೆ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಸದ್ಯ 11 ಜನರು ಬ್ಲ್ಯಾಕ್ ಫಂಗಸ್‍ನಿಂದ ಗುಣಮುಖರಾಗಿ ಡಿಶ್ಚಾರ್ಜ್ ಆಗಿದ್ದಾರೆ. ನಾರ್ಮಲ್ ಕೋರ್ಸ್ ಮೂಲಕ ಬ್ಲ್ಯಾಕ್ ಫಂಗಸ್‍ಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಸರ್ಕಾರದಿಂದ ಬರಬೇಕಾದ ಔಷಧಿ ಇನ್ನು ಬಂದಿಲ್ಲ. ಅಲ್ಲಿಯವರೆಗೆ ನಾರ್ಮಲ್ ಕೋರ್ಸ್‍ನಂತೆ ಚಿಕಿತ್ಸೆ ನೀಡಲು ಸೂಚಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ಪಿ ಸುನೀಲ್‍ಕುಮಾರ್ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.
ಕೊಪ್ಪಳ: ಕೊರೊನಾದ ಎರಡನೇ ಅಲೆಯಲ್ಲಿ ಹೆಚ್ಚಾಗಿ ಯುವಕ ಯುವತಿಯರು ಸಾವನ್ನಪ್ಪುತ್ತಿದ್ದು, ಸದ್ಯ ಕೊಪ್ಪಳ ಜಿಲ್ಲೆಯಲ್ಲಿ ಯುವಕನೋರ್ವ ಕೊರೊನಾ ಸೋಂಕಿಗೆ ಬಲಿಯಾಗಿದ್ದಾನೆ.
ಕೊಪ್ಪಳದ ಗಂಗಾವತಿ ತಾಲೂಕಿನ ಅರಳಹಳ್ಳಿ ರಾಜರಾಜೇಶ್ವರಿ ಬ್ರಹನ್ಮಠದ ಸ್ವಾಮೀಜಿಯಾದ ಶ್ರೀ ಗವಿಸಿದ್ದೇಶ್ವರ ತಾತನವರ ದ್ವಿತೀಯ ಸುಪುತ್ರ ಪ್ರಸಾದ್ (19) ಮೃತ ಯುವಕ.
ಕಳೆದ 10 ದಿನಗಳ ಹಿಂದೆ ಯುವಕನಿಗೆ ಸೊಂಕು ಕಾಣಿಸಿಕೊಂಡಿದ್ದು, ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದನು, ಚಿಕಿತ್ಸೆ ಫಲಕಾರಿಯಾಗದೆ ತೀವ್ರ ಉಸಿರಾಟದ ತೊಂದರೆಯಿಂದ ಪ್ರಸಾದ್ ಇಂದು ಕೊನೆಯುಸಿರೆಳೆದಿದ್ದಾನೆ. ಬಾಳಿ-ಬದುಕಬೇಕಾದ ಯುವಕ ಕೊರೊನಾಗೆ ಬಲಿಯಾಗಿದ್ದು, ಕುಟುಂಬದ ಅಕ್ರಂದನ ಮುಗಿಲು ಮುಟ್ಟಿದೆ. ನಂತರ ಮಠದ ಜಮೀನಿನಲ್ಲಿ ಯುವಕನ ಅಂತ್ಯ ಸಂಸ್ಕಾರ ನಡೆಸಲಾಯಿತು.
ಮೈಸೂರು: ವಾರದ ಅಂತರದಲ್ಲಿ ಇಬ್ಬರು ಸಹೋದರರು ಕೊರೊನಾಗೆ ಬಲಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಪ್ರಸಾದ್( 31) ರಾಘವೇಂದ್ರ (33) ಮೃತರಾಗಿದ್ದಾರೆ. ಮೈಸೂರಿನ ಬಂಡಿಪಾಳ್ಯ ನಿವಾಸಿಯಾದ ನವೀನ್ ಅವರ ಇಬ್ಬರು ಹಿರಿಯ ಸಹೋದರರು ಒಂದು ವಾರದ ಅಂತರದಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ.
ಕಳೆದ ವಾರ ನವೀನ್ ಅವರ ಎರಡನೇ ಅಣ್ಣ ಪ್ರಸಾದ್ ಸಾವನ್ನಪ್ಪಿದ್ದರು. ಇಂದು ಮೊದಲನೇ ಅಣ್ಣ ರಾಘವೇಂದ್ರ ಕೊರೊನಾಗೆ ಬಲಿಯಾಗಿದ್ದಾರೆ. ಆಸ್ಪತ್ರೆಯಿಂದ ಕೊನೆ ಕ್ಷಣದಲ್ಲಿ ಪತ್ನಿ ಹಾಗೂ ತಮ್ಮನಿಗೆ ವೀಡಿಯೋ ಕಾಲ್ ಮಾಡಿದ್ದ ರಾಘವೇಂದ್ರ, ನಾನು ಗುಣಮುಖನಾಗಿ ಬರುವೆ ಎಂದು ಹೇಳಿದ್ದರು.
ವೀಡಿಯೋ ಕಾಲ್ ಮಾಡಿದ ಮರು ದಿನವೇ ಸಾವನ್ನಪ್ಪಿದ್ದಾರೆ. ಇಬ್ಬರು ಅಣ್ಣರ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಮೃತ ಸಹೋದರನ ಕೊನೆಯ ತಮ್ಮ ನವೀನ್ ಆರೋಪಿಸಿದ್ದಾರೆ. ಇಬ್ಬರು ಸಹೋದರರನ್ನುಕೇದುಕೊಂಡು ಕಣ್ಣೀರು ಹಾಕಿದ್ದಾರೆ.
ಚೆನ್ನೈ: ದಕ್ಷಿಣ ಭಾರತದ ಖ್ಯಾತ ಖಳನಟ ಪೊನ್ನಂಬಲಂ ಕಿಡ್ನಿ ಚಿಕಿತ್ಸೆಗೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಧನ ಸಹಾಯ ಮಾಡಿದ್ದಾರೆ. ಈ ಬಗ್ಗೆ ಪೊನ್ನಂಬಲಂರವರೆ ಸ್ವತಃ ವೀಡಿಯೋವೊಂದನ್ನು ಮಾಡುವ ಮೂಲಕ ಚಿರಂಜೀವಿಯವರಿಗೆ ಧನ್ಯವಾದ ತಿಳಿಸಿದ್ದಾರೆ.
ಹಲವು ದಿನಗಳಿಂದ ಪೊನ್ನಂಬಲಂರವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಸಹಾಯಕ್ಕಾಗಿ ಆರ್ಥಿಕ ಸಹಾಯಬೇಕಿದೆ ಎಂದು ಆಸ್ಪತ್ರೆಯ ಬೆಡ್ ಮೂಲಕ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದೀಗ ಪೊನ್ನಂಬಲಂ ಕಿಡ್ನಿ ಆಪರೇಷನ್‍ಗೆ ಮೆಗಾಸ್ಟಾರ್ ಚಿರಂಜೀವಿ 2 ಲಕ್ಷ ರೂ. ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. ಹೀಗಾಗಿ ಪೊನ್ನಂಬಲಂ, ಚಿರಂಜೀವಿ ಅಣ್ಣನಿಗೆ ನಮಸ್ತೇ. ನನ್ನ ಕಿಡ್ನಿ ಆಪರೇಷನ್‍ಗೆ ನೀವು 2 ಲಕ್ಷ ನೀಡಿದ್ದು, ಬಹಳ ಸಹಾಯವಾಯಿತು. ಜೀವನಪೂರ್ತಿ ಈ ಸಹಾಯವನ್ನು ನಾನು ಮರೆಯಲ್ಲ. ಆ ದೇವರು ನಿಮಗೆ ಒಳ್ಳೆಯದು ಮಾಡಲಿ’ ಎಂದು ವೀಡಿಯೋ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.
ಈ ಮುನ್ನ ಪೊನ್ನಂಬಲಂ ಆರೋಗ್ಯ ಸ್ಥಿತಿ ಹದಗೆಟ್ಟಾಗ ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ಆರ್ಥಿಕ ನೆರವು ನೀಡಿದ್ದರು. ಅಲ್ಲದೆ ನಟ ಕಮಲ್ ಹಾಸನ್ ಪೊನ್ನಂಬಲಂರವರ ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಭರವಸೆ ನೀಡಿದ್ದರು.
ಪೊನ್ನಂಬಲಂರವರು ತಮಿಳು, ತೆಲುಗು ಸೇರಿದಂತೆ ಕನ್ನಡದಲ್ಲಿದ ಓ ನನ್ನ ನಲ್ಲೆ, ಚಿನ್ನ, ಲೇಡಿ ಕಮೀಷನರ್, ಕಿಚ್ಚ, ಗುನ್ನಾ, ಮಸ್ತಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ.
ಯಾದಗಿರಿ: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ನಿರ್ಧಾರ ಕೈಗೊಂಡಿರುವ ಯಾದಗಿರಿ ಜಿಲ್ಲಾಡಳಿತ ನಕಲಿ ವೈದ್ಯರ ವಿರುದ್ಧ ಸಮರಸಾರಿದ್ದು, ಆರ್‍ಎಂಪಿ (ಗ್ರಾಮೀಣ ವೈದ್ಯಕೀಯ ವೈದ್ಯರು) ವೈದ್ಯರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ.
ಕೊರೊನಾ ಎರಡನೇ ಅಲೆ ಯಾದಗಿರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಇದಕ್ಕೆ ಪರೋಕ್ಷವಾಗಿ ನಕಲಿ ವೈದ್ಯರ ಹಾವಳಿ ಕಾರಣವಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿನ ಮತ್ತು ಗ್ರಾಮಗಳ ಜನ ನಕಲಿ ವೈದ್ಯರನ್ನು ನೆಚ್ಚಿಕೊಂಡಿದ್ದಾರೆ. ಬಂಡವಾಳ ಮಾಡಿಕೊಂಡಿರುವ ನಕಲಿ ವೈದ್ಯರು ಜನರಿಗೆ ಕೊರೊನಾ ಇದ್ದರೂ, ಅದನ್ನು ಅವರಿಗೆ ತಿಳಿಸದೆ ಸಾಮಾನ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಜನರಿಗೆ ಆರೋಗ್ಯ ತೀರಾ ಆರೋಗ್ಯ ಹದಗೆಟ್ಟಾಗ, ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆ.
ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಕೆಂಡಾಮಂಡಲವಾಗಿ ಡಿಸಿ ರಾಗಪ್ರಿಯ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ತಂಡಗಳನ್ನು ರಚಿಸಿದ್ದು, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ತಹಶಿಲ್ದಾರ ಚನ್ನಮಲ್ಲಪ್ಪ, ಜನಗನಾಥ್ ರೆಡ್ಡಿ ಸೇರಿದಂತೆ ವಿವಿಧ ಅಧಿಕಾರಿಗಳು ನಕಲಿ ಕ್ಲಿನಿಕ್ ಮೇಲೆ ದಾಳಿ ಮಾಡಿ, ವೈದ್ಯರನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.
ಮಡಿಕೇರಿ: ಪ್ರಾಥಮಿಕ ಅರೋಗ್ಯ ಕೇಂದ್ರದ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸಿಬ್ಬಂದಿಯನ್ನು ಕರೆಸಿ ಕರ್ತವ್ಯ ಮಾಡಿಸಿ ವೈದ್ಯರೊಬ್ಬರು ಎಡವಟ್ಟು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಆರೋಗ್ಯ ಕೇಂದ್ರದ ಸಿಬ್ಬಂದಿ ಲ್ಯಾಬ್ ಟೆಕ್ನಿಷಿಯನ್‍ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಬಳಿಕ ಎಂಟು ದಿನ ಕಳೆದ ಬಳಿಕ ಮತ್ತೆ ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಅಗಲೂ ಅವರಿಗೆ ಪಾಸಿಟಿವ್ ಎಂದು ವರದಿ ಬಂದಿದೆ. ಅದ್ರೂ ಅರೋಗ್ಯ ಇಲಾಖೆ ವೈದ್ಯ ಸಿಬ್ಬಂದಿ ಕೊರತೆಯಿಂದ ಲ್ಯಾಬ್ ಟೆಕ್ನಿಷಿಯನ್ ಕರೆಸಿ ಕರ್ತವ್ಯ ಮಾಡುವಂತೆ ಸೂಚನೆ ನೀಡಿದ್ದಾರೆ.
ಸಾರ್ವಜನಿಕರು ಅಸ್ಪತ್ರೆಯ ಸಿಬ್ಬಂದಿಯಿಂದ ಕೊರೊನಾ ಮಾಹಾಮಾರಿ ಊರಿಗೆ ಹರಡುವ ಸಾಧ್ಯತೆ ಇದೆ. ಕೆಲವು ಜನರಿಗೆ ಸೋಂಕು ಹರಡಿದೆ ಎಂದು ಸಾರ್ವಜನಿಕರು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಅಲ್ಲಿನ ಪಂಚಾಯಿತಿ ಸದಸ್ಯರಿಗೆ ದೂರು ನೀಡಿದ್ದಾರೆ. ಸಾರ್ವಜನಿಕರ ದೂರು ಬಂದ ಹಿನ್ನೆಲೆಯಲ್ಲಿ ಪಂಚಾಯಿತಿಯ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಅಸ್ಪತ್ರೆಯ ವೈದ್ಯ ಜೀವನ್ ಅವರ ಬಳಿ ಕೇಳುಲು ಮುಂದಾಗುತ್ತಿದಂತೆ. ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರ ವಿರುದ್ಧವೇ ವೈದ್ಯ ಜೀವನ್ ಕರ್ತವ್ಯ ಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವೈದ್ಯರ ದೂರು ಪಡೆದ ಠಾಣಾಧಿಕಾರಿ ಪುನೀತ್ ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯರುಗಳನ್ನು ಠಾಣೆಗೆ ಕರೆಸಿ ಪಂಚಾಯಿತಿ ಸದಸ್ಯರ ಜೊತೆ ಅನುಚಿತವಾಗಿ ವರ್ತಿಸಿದ್ದೀರಾ. ಪಂಚಾಯಿತಿ ಸದಸ್ಯರು ಟೆಕ್ನಿಷಿಯನ್ ಹಾಗೂ ವೈದ್ಯರ ವಿರುದ್ದವೇ ದೂರು ನೀಡಲು ಪಂಚಾಯಿತಿ ಅಡಳಿತ ಮಂಡಳಿಯಿಂದ ಮುಂದಾಗಿದ್ದರು. ಆಗ ಠಾಣಾಧಿಕಾರಿ ಪುನೀತ್ ರಾಜಿ ಮಾಡಿಕೊಳ್ಳುವಂತೆ ಹೇಳಿ ಕಳುಹಿಸಿದ್ದಾರೆ. ಸದ್ಯ ಪಾಸಿಟಿವ್ ಬಂದ ಲ್ಯಾಬ್ ಟೆಕ್ನಿಷಿಯನ್ ಸಿಬ್ಬಂದಿಯನ್ನು ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಲಾಗಿದೆ ಎಂದು ಪಂಚಾಯತಿ ಪಿಡಿಓ ವೇಣುಗೋಪಾಲ್ ತಿಳಿಸಿದ್ದಾರೆ. ಸಾರ್ವಜನಿಕರಿಗೆ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ವೈದ್ಯರೇ ಈ ರೀತಿ ಎಡವಟ್ಟು ಮಾಡಿ ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.
ಧಾರವಾಡ: ಕೊರೊನಾ ಸೋಂಕಿತರಿಂದ ಹೆಚ್ಚು ಹಣ ಪಡೆಯಬೇಡಿ ಎಂದು ಖಾಸಗಿ ಆಸ್ಪತ್ರೆಗಳಿಗೆ ಸಾಕಷ್ಟು ಬಾರಿ ತಿಳಿಸಿದ್ದೇವೆ. ಆದರೂ ಅವರಿಗೆ ಅರ್ಥ ಆಗುತ್ತಿಲ್ಲ. ಆಸ್ಪತ್ರೆಯವರು ಕೊರೊನಾ ಸೋಂಕಿತರಿಗೆ ಮಾನವೀಯ ದೃಷ್ಟಿಯಿಂದ ಚಿಕಿತ್ಸೆ ನೀಡಲಿ ಎಂದು ಖಾಸಗಿ ಆಸ್ಪತ್ರೆಗಳ ವಿರುದ್ಧ ಸಚಿವ ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಖಾಸಗಿ ಆಸ್ಪತ್ರೆಯವರಿಗೆ ಸಾಕಷ್ಟು ಹೇಳಿದ್ದೇವೆ. ಹೆಚ್ಚು ಬೆಲೆ ತೆಗೆದುಕೊಳ್ಳಬೇಡಿ ಎಂದು ಹಲವು ಬಾರಿ ತಿಳಿಸಿದ್ದೇವೆ. ಇಷ್ಟಾದ ಮೇಲೂ ಖಾಸಗಿ ಆಸ್ಪತ್ರೆಯವರು ಮಾನವೀಯತೆ ದೃಷ್ಟಿಯಿಂದ ನೋಡಬೇಕಲ್ವಾ? ಇಂತಹ ಸಮಯದಲ್ಲಿಯೂ ದುಬಾರಿ ಹಣ ತೆಗೆದುಕೊಳ್ಳುವುದು ಹೇಗೆ ಮತ್ತು ಹೆಚ್ಚು ದರ ತೆಗೆದುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
ಸರ್ಕಾರದ ಕಡೆಯಿಂದ ಖಾಸಗಿಯವರು ಪದೇ ಪದೇ ಹೇಳಿಸಿಕೊಳ್ಳುವಂತೆ ಆಗಬಾರದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಒಂದು ಕಡೆ ನಡೆಯುತ್ತಿದೆ. ಮೊದಲು ಜನರ ಜೀವ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಕೇಸ್ ಹೆಚ್ಚಳವಾದರೆ ಧಾರವಾಡದಲ್ಲೂ ಆಕ್ಸಿಜನ್ ಕೊರತೆ ಎದುರಾಗಲಿದ್ದು, ಬೆಡ್ ಹೆಚ್ಚಾದಂತೆ ಆಕ್ಸಿಜನ್ ತೊಂದರೆ ಆಗುತ್ತದೆ. ಆ ಹಿನ್ನೆಲೆಯಲ್ಲಿ ತಯಾರಿ ಮಾಡಿಕೊಂಡಿದ್ದೇವೆ. 900ಕ್ಕೂ ಹೆಚ್ಚು ರೋಗಿಗಳು ಕಿಮ್ಸ್ ನಲ್ಲೇ ಇದ್ದಾರೆ. ಇನ್ನೂ ಹೆಚ್ಚು ಬೆಡ್ ಕ್ರಿಯೇಟ್ ಮಾಡಿದ್ರೆ ಆಕ್ಸಿಜನ್ ತೊಂದರೆ ಆಗುವ ಸಾಧ್ಯತೆ ಇದೆ. ಹೀಗಾಗಿ ತಾಲೂಕು ಆಸ್ಪತ್ರೆಗಳ ವೆಂಟಿಲೇಟರ್ ಕಿಮ್ಸ್ ಗೆ ಅಳವಡಿಸುತ್ತೇವೆ, ತಾಲೂಕು ಪ್ರದೇಶದಲ್ಲಿ ಸರ್ಕಾರದಿಂದ ಕೊಟ್ಟ ವೆಂಟಿಲೇಟರ್ ಇವೆ, ಅಲ್ಲಿ ಬಳಕೆಯಾಗದಿದ್ದಲ್ಲಿ ಕಿಮ್ಸ್‍ಗೆ ಉಪಯೋಗಿಸಲು ಸಲಹೆ ಕೊಟ್ಟಿದ್ದೇನೆ ಎಂದು ಮಾಹಿತಿ ನೀಡಿದರು.
ಹಾವೇರಿ: ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. ನಿತ್ಯವೂ ಸಾವಿರಾರು ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಹಾವೇರಿಯ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಕೊರೊನಾ ಮಹಾಮಾರಿಯ ಹೊಡೆದೊಡಿಸುವ ಸಲುವಾಗಿ ವಿಶೇಷ ಹೋಮವನ್ನು ಹರಸೂರು ಬಣ್ಣದಮಠದಲ್ಲಿ ನಡೆಸಲಾಯಿತು.
ಮಠದ ಆವರಣದಲ್ಲಿ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ನೇತ್ರತ್ವದಲ್ಲಿ ಹೋಮ ಪೂಜೆ, ಶನಿ ಪೂಜೆ, ಕುಜದೋಷ ಹೋಮ ಹಾಗೂ ನಾಗದೋಷ ಹೋಮವನ್ನ ಸ್ವಾಮೀಜಿಗಳು ಮಾಡಿದರು. ಸತತವಾಗಿ ಎರಡು-ಮೂರು ಗಂಟೆಗಳ ಕಾಲ ನಿರಂತರವಾಗಿ ಹೋಮ ನಡೆಸಿ ಕೊರೊನಾ ಮಹಾಮಾರಿ ರೋಗ ಸುಟ್ಟು ನಾಶವಾಗಲಿ ಎಂದರು.
ವಿಶ್ವ, ದೇಶ ಸೇರಿದಂತೆ ರಾಜ್ಯಕ್ಕೆ ಅಂಟಿದ ಮಾಹಾಮಾರಿ ಕೊರೊನಾ ನಾಶವಾಗಬೇಕು. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರಿಗೆ ಆಕ್ಸಿಜನ್ ಹಾಗೂ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಕೊರೊನಾ ಮಾಹಮಾರಿ ನಾಶವಾಗಲಿ ಅಂತಾ ವಿಶೇಷವಾದ ಹೋಮ, ಶನಿ ಪೂಜೆ, ನಾಗದೋಷ ಸೇರಿದಂತೆ ವಿಶೇಷಪೂಜೆ ಮಾಡಲಾಯಿತು.
ಭೋಪಾಲ್: ಆಸ್ಪತ್ರೆಗಳಿಗೆ ತೆರಳಲು ಭಯಪಟ್ಟು ಹೊಲಗಳಲ್ಲಿ ಮರಗಳ ಕೆಳಗೆ ಹಳ್ಳಿಗಳ ವೈದ್ಯರಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವುದು ಮಧ್ಯಪ್ರದೇಶದಲ್ಲಿ ಕಂಡು ಬಂದಿದೆ.
ಮಧ್ಯಪ್ರದೇಶದ ಅಗರ್-ಮಾಲ್ವಾ ಜಿಲ್ಲೆಯ ಹಳ್ಳಿಗಳಲ್ಲಿ ರಸ್ತೆಯ ಪಕ್ಕದಲ್ಲಿಯೇ ಕೊರೊನಾ ಸೋಂಕಿತರು ಮಲಗಿದ್ದಾರೆ. ಮರಗಳ ರಂಬೆಗೆ ಡ್ರಿಪ್ ಬಾಟಲಿಗಳನ್ನು ತೂಗಿಹಾಕಿ ಸ್ಥಳೀಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಗ್ರಾಮಗಳಲ್ಲಿ ಜ್ವರ ಹಾಗೂ ನೆಗಡಿ ವ್ಯಾಪಕವಾಗಿ ಹರಡಿದೆ. ಆದರೆ ಜನರು ಮಾತ್ರ ಸರ್ಕಾರಿ ಆಸ್ಪತ್ರೆಗೆ ತೆರಳಲು ಹಿಂಜರಿಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಅದಕ್ಕಾಗಿ ನಾವು ಹೋಗುವುದಿಲ್ಲ. ಸ್ಥಳೀಯ ವೈದ್ಯರಿಂದಲೇ ಚಿಕಿತ್ಸೆ ಪಡೆಯುತ್ತೇವೆ ಎಂದು ಸ್ಥಳೀಯರು ಹೇಳಿದ್ದಾರೆ.
#कोरोना के मरीजों की बढ़ती संख्या के कारण स्वास्थ्य सेवाएं बेहाल हैं, सुसनेर में झोलाछाप डॉक्टर पेड़ पर लटाकर मरीज़ों को स्लाइन चढ़ा रहे हैं, गांववाले डरे हैं कि सरकारी अस्पताल में अगर इलाज कराने गए तो कोरोना वार्ड में भर्ती करा दिया जाएगा #CovidIndia#COVIDEmergencyIndiapic.twitter.com/KhsZvxSz8E
ಹೆದ್ದಾರಿಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಕಿತ್ತಳೆ ತೋಪಿನಲ್ಲಿ ಕಾರ್ಡ್‍ಬೋರ್ಡ್ ಶಿಟ್‍ಗಳನ್ನು ಹಾಕಿ ರೋಗಿಗಳು ಮಲಗಿದ್ದಾರೆ. ಸುಮಾರು 10 ಹಳ್ಳಿಗಳಿಂದ ಜನರು ಚಿಕಿತ್ಸೆಗೆಂದು ಇಲ್ಲಿಗೆ ಬರುತ್ತಿದ್ದಾರೆ. ಹೀಗೆ ಬಯಲು ಪ್ರದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯದ ವೀಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸ್ಥಳಿಯ ವೈದ್ಯರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ನೆಗಡಿ, ಕೆಮ್ಮು ಲಕ್ಷಣಗಳು ಕಂಡು ಬಂದ ತಕ್ಷಣ ಸರ್ಕಾರಿ ವೈದ್ಯರನ್ನು ಭೇಟಿ ಮಾಡಿ ಎಂದು ಆರೋಗ್ಯಾಧಿಕಾರಿ ಮನಿಶ್ ಕುರ್ಲಿ ಹೇಳಿದ್ದಾರೆ. ಮುಖ್ಯ ಆರೋಗ್ಯಾಧಿಕಾರಿ ಸಮಾಂದರ್ ಸಿಂಗ್ ಮಾಲ್ವಿಯಾ ತಂಡವೊಂದನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಆದರೆ ಆ ವೇಳೆಗೆ ಅಲ್ಲಿ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ.
– ರಾಜ್ಯದ ಜನತೆಯಲ್ಲಿ ಆರೋಗ್ಯ ಸಚಿವ ಮನವಿ – ಸೋಂಕು ಹೆಚ್ಚಿರುವ ಜಿಲ್ಲೆಗಳಿಗೆ ಶೀಘ್ರವೇ ಭೇಟಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ನಿಟ್ಟಿನಲ್ಲಿ ವೈಜ್ಞಾನಿಕ ನೆಲೆಗಟ್ಟು, ಸೋಂಕು ನಿಯಂತ್ರಣ, ಚಿಕಿತ್ಸೆ ವ್ಯವಸ್ಥೆ ಅಧ್ಯಯನ ಮಾಡಿ ಬಿಗಿ ನಿಯಮ ತರಲಾಗಿದೆ. ಈ ಮಾರ್ಗಸೂಚಿಯಲ್ಲಿ ಹದಿನಾಲ್ಕು ದಿನಗಳ ಕಾಲ ಕಠಿಣ ನಿಯಮ ಜಾರಿಗೆ ತರಲಾಗಿದೆ. ಒಂದು ಚೈನ್ ಮುರಿಯಲು ಕನಿಷ್ಟ 14 ದಿನ ಬೇಕು. ಹಾಗಾಗಿ 14 ದಿನ ಬಿಗಿಯಾದ ನಿಯಮಗಳ ಜಾರಿ ಮಾಡಲಾಗಿದ್ದು, ಜನ ಮಾರ್ಗಸೂಚಿಯನ್ವಯ ನಡೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ರಾಜ್ಯದ ಜನತೆಯೊಂದಿಗೆ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಸಕ್ರಿಯ ಸೋಂಕಿತರಿಗೆ ಸೂಕ್ತ ರೀತಿಯ ಚಿಕಿತ್ಸೆ ಕೊಡುವ ವ್ಯವಸ್ಥೆ ಈಗಾಗಲೇ ಮಾಡಲಾಗುತ್ತಿದ್ದು, ರೆಮೆಡಿಸಿವಿರ್, ಐಸಿಯು, ಬೆಡ್, ಆಕ್ಸಿಜನ್ ಲಭ್ಯತೆ ಹೆಚ್ಚು ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ವೈದ್ಯಕೀಯ ಸಿಬ್ಬಂದಿಗೆ ಹೆಚ್ಚುವರಿಯಾಗಿ ಕೆಲವು ವಿಶೇಷ ವೇತನ, ಜವಾಬ್ದಾರಿ ಕೊಡುತ್ತೇವೆ. ಬೆಂಗಳೂರಿನ ಎಂಟು ವಲಯಗಳಲ್ಲಿ ಉಸ್ತುವಾರಿ ಸಚಿವರು ನೇತೃತ್ವ ವಹಿಸಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ, ನಾನ್ ಕೋವಿಡ್ ರೋಗಿಗಳ ಡಿಸ್ಚಾರ್ಜ್ ಮಾಡಿಸುವ ಕೆಲಸ ಮಾಡಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕೆಲವು ಆಸ್ಪತ್ರೆಗಳ ನಿರ್ದೇಶಕರ ಜೊತೆಗೆ ಸಿಎಂ ವಿಡಿಯೋ ಕಾನ್ಫರೆನ್ಸ್ ಮಾಡಲಿದ್ದಾರೆ. ಎಲ್ಲ ಪ್ರತಿಪಕ್ಷ ನಾಯಕರೂ ಸರ್ಕಾರಕ್ಕೆ ಬೆಂಬಲ ಕೊಟ್ಟಿದಾರೆ ಅವರೆಲ್ಲರಿಗೂ ಧನ್ಯವಾದಗಳು. ಸಿಎಂ ಕೈ ಬಲಪಡಿಸಲು ಎಲ್ಲ ನಾಯಕರೂ ನೈತಿಕವಾಗಿ ಜೊತೆಗಿದ್ದಾರೆ. ಜನ ಭಯಪಡುವ ಅಗತ್ಯ ಇಲ್ಲ. ಪ್ರತಿಯೊಬ್ಬರಿಗೂ ಆಸ್ಪತ್ರೆ ದಾಖಲಾಗುವ ಅವಶ್ಯಕತೆ ಇಲ್ಲ. ಯಾರು ಆಸ್ಪತ್ರೆಗೆ ದಾಖಲಾಗಬೇಕು, ಯಾರು ಆಗಬಾರದು ಎಂದು ಸಂಜೆ ವಿವರವಾಗಿ ಹೇಳುತ್ತೇನೆ ಎಂದಿದ್ದಾರೆ.
ಇವತ್ತು ಸಹ ಸಭೆ ಮಾಡುತ್ತೇವೆ ಕಂದಾಯ ಸಚಿವರು, ಗೃಹ ಸಚಿವರ ಜೊತೆ ಸಭೆ ನಡೆಯಲಿದ್ದು, ಐದು ಸೋಂಕು ಹೆಚ್ಚಿರುವ ಜಿಲ್ಲೆಗಳ ಡಿಸಿಗಳ ಜೊತೆ ಇಂದು ಸಭೆ ನಡೆಸಲಿದ್ದೇವೆ. ನಾಳೆ ಪೂರ್ತಿ ದಿನ ಮೈಸೂರಲ್ಲಿರುತ್ತೇನೆ. ರಾಜ್ಯದ ಏಳು ಸೋಂಕು ಹೆಚ್ಚಿರುವ ಜಿಲ್ಲೆಗಳಿಗೂ ಹೋಗುತ್ತೇನೆ. ಹೊಸ ಮಾರ್ಗಸೂಚಿಗಳಿಂದ ಚೈನ್ ಲಿಂಕ್ ಕಟ್ ಮಾಡಬಹುದು. ಇನ್ನು ಮೂರ್ನಾಲ್ಕು ದಿನಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗಲಿದೆ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.