Tag: ಚಿಕನ್ ಗುನ್ಯಾ

  • ಮಾಜಿ ಸಚಿವ ಸುರೇಶ್‌ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಮಾಜಿ ಸಚಿವ ಸುರೇಶ್‌ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    -ನಾನು ಆರೋಗ್ಯವಾಗಿದ್ದೇನೆ ಎಂದ ಬಿಜೆಪಿ ಶಾಸಕ

    ಬೆಂಗಳೂರು: ರೂಪಾಂತರಿ ಚಿಕುನ್ ಗುನ್ಯಾದಿಂದ (Chikungunya) ಬಳಲುತ್ತಿದ್ದ ಬಿಜೆಪಿ ಶಾಸಕ ಸುರೇಶ್ ಕುಮಾರ್ (S Suresh Kumar) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ರೂಪಾಂತರಿ ಚಿಕುನ್ ಗುನ್ಯಾ ಸೋಂಕು ತಗುಲಿದ ಕಾರಣ ಸುರೇಶ್ ಕುಮಾರ್ ಕೆಲ ದಿನಗಳ ಹಿಂದೆ ಶೇಷಾದ್ರಿಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಐಸಿಯು ಘಟಕದಲ್ಲಿ ಸುರೇಶ್ ಕುಮಾರ್‌ಗೆ ಚಿಕಿತ್ಸೆ ನೀಡಿದ್ದಾರೆ. ಈಗ ಸುರೇಶ್ ಕುಮಾರ್ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಭರ್ಜರಿ ಗೆಲುವು – ಗ್ರಾಮಸ್ಥರ ಹರಕೆ ತೀರಿಸಿದ ಅನುಸೂಯ ಮಂಜುನಾಥ್

    ಇನ್ನು ತಮ್ಮ ಅನಾರೋಗ್ಯ ಸಂಬಂಧ ವದಂತಿ ಹಬ್ಬಿದ ಹಿನ್ನೆಲೆ ಸುರೇಶ್ ಕುಮಾರ್ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ನಾನು ಆರೋಗ್ಯವಾಗಿದ್ದೇನೆ. ಚಿಕುನ್ ಗುನ್ಯಾ ನನ್ನನ್ನು ಕೆಲ ದಿನಗಳಿಂದ ಬಾಧಿಸಿದ್ದು, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೇನೆ. ಜ್ವರದಿಂದ ಈಗ ಸಂಪೂರ್ಣ ಚೇತರಿಕೆ ಕಂಡಿದ್ದು, ಗುಣಮುಖನಾಗಿದ್ದೇನೆ ಹಾಗೂ ಸದ್ಯಕ್ಕೆ ವಿಶ್ರಾಂತಿಯಲ್ಲಿದ್ದೇನೆ. ಹಿತೈಶಿಗಳು ಅನಗತ್ಯ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚುನಾವಣೆಗೂ ಮುನ್ನ ಮಹಾ ವಿಕಾಸ್ ಅಘಾಡಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಅಗತ್ಯವಿಲ್ಲ: ಶರದ್ ಪವಾರ್

  • ಯಾದಗಿರಿಯ ಒಂದೇ ಗ್ರಾಮದಲ್ಲಿ 100ಕ್ಕೂ ಹೆಚ್ಚು ಜನರಿಗೆ ಚಿಕನ್ ಗುನ್ಯಾ

    ಯಾದಗಿರಿಯ ಒಂದೇ ಗ್ರಾಮದಲ್ಲಿ 100ಕ್ಕೂ ಹೆಚ್ಚು ಜನರಿಗೆ ಚಿಕನ್ ಗುನ್ಯಾ

    ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಬೈಲಾಪುರ ತಾಂಡಾದ ಒಂದೇ ಗ್ರಾಮದಲ್ಲಿ 100 ಕ್ಕೂ ಹೆಚ್ಚು ಜನರಿಗೆ ಚಿಕನ್ ಗುನ್ಯಾ (Chickengunya) ಬಾಧಿಸಿದೆ.

    ಬೈಲಾಪುರ ತಾಂಡಾದ 100ಕ್ಕೂ ಹೆಚ್ಚು ಜನರಿಗೆ ಚಿಕನ್ ಗುನ್ಯಾ ಬಾಧಿಸಿದ್ದು, ಜನರು ಹಾಸಿಗೆ ಹಿಡಿದಿದ್ದಾರೆ. ಬೈಲಾಪುರ ತಾಂಡಾದಲ್ಲಿ 150 ಕುಟುಂಬಗಳಿವೆ. ಅದರಲ್ಲಿ 100ಕ್ಕೂ ಅಧಿಕ ಜನರಿಗೆ ಚಿಕನ್ ಗುನ್ಯಾ ಖಾಯಿಲೆ ಬಂದಿದ್ದು, ಖಾಯಿಲೆಗೆ ತುತ್ತಾಗಿರುವ ಜನ ನಡೆಯಲಾಗದ ಪರಿಸ್ಥಿತಿಯಲ್ಲಿದ್ದು ಹಾಸಿಗೆ ಹಿಡಿದಿದ್ದಾರೆ.

    ಜ್ವರ, ಕೈ-ಕಾಲು ನೋವು, ತಲೆ ನೋವು ಬಾಧಿಸಿದ್ದರಿಂದ ಗ್ರಾಮದ ಮನೆ, ದೇವಾಲಯ, ರಸ್ತೆ ಬಳಿಯೇ ರೋಗಿಗಳು ಮಲಗಿದ್ದಾರೆ. ಇನ್ನೂ ಬಹುತೇಕ ನಿತ್ಯ ಕೂಲಿ ಮಾಡಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಇಡೀ ಗ್ರಾಮಕ್ಕೆ ಚಿಕನ್ ಗುನ್ಯಾ ಅಟ್ಯಾಕ್ ಆಗಿರುವುದರಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರಿತಪಿಸುವಂತಾಗಿದೆ.

    ನೂರಾರು ಜನ ಖಾಯಿಲೆಯಿಂದ ಹಾಸಿಗೆ ಹಿಡಿದು ತಿಂಗಳುಗಳೇ ಕಳೆದಿದ್ದರೂ ಇದವರೆಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ತಿಳಿದುಬಂದಿದೆ. ಎಯ್ಡೀಸ್ ಇಜಿಪ್ಟಿ ಮತ್ತು ಎಯ್ಡೀಸ್ ಆಲ್ಬೋಪಿಕ್ಟಸ್ ಸೊಳ್ಳೆಗಳು ಈ ವೈರಸ್ ಅನ್ನು ಹಬ್ಬಿಸುತ್ತವೆ. ಈ ಚಿಕನ್ ಗುನ್ಯಾ ವೈರಾಣು ಡೆಂಗೇ ಜ್ವರಕ್ಕೆ ಹೋಲುವಂತಹ ಲಕ್ಷಣಗಳಿರುವ ಖಾಯಿಲೆಯನ್ನು ಉಂಟುಮಾಡುತ್ತದೆ ಎನ್ನುವ ಅರಿವಿದ್ದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. ಇದನ್ನೂ ಓದಿ: SDRF ತಂಡದಿಂದ 20 ಅಡಿ ಬಾವಿಗೆ ಬಿದ್ದಿದ್ದ ಕುದುರೆಯ ರಕ್ಷಣೆ

    ಬೈಲಾಪುರ ತಾಂಡಾದಲ್ಲಿ 2 ನೀರಿನ ಓವರ್ ಹೆಡ್ ಟ್ಯಾಂಕ್‌ಗಳಿದ್ದರೂ ಈ ಟ್ಯಾಂಕ್ ನೀರು ಕುಡಿಯಲು ಯೋಗ್ಯವಲ್ಲ ಎನ್ನಲಾಗಿದೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಕೊಳಚೆ ಶೇಖರಣೆ ಆಗಿದ್ದು ಸ್ವಚ್ಚತೆ ಸಂಪೂರ್ಣ ಮಾಯವಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮದಲ್ಲಿ ಸ್ವಚ್ಚತೆಯೆಡೆಗೆ ಗಮನ ಹರಿಸದೇ ನಿರ್ಲಕ್ಷ್ಯ ತೋರಿದ್ದರಿಂದ ಜನ ಆಕ್ರೋಶ ಹೊರಹಾಕಿದ್ದಾರೆ.

    ಇಡೀ ಗ್ರಾಮಕ್ಕೆ ಗ್ರಾಮವೇ ಚಿಕನ್ ಗುನ್ಯಾ ಖಾಯಿಲೆಗೆ ತುತ್ತಾಗಿ, ಸಂಕಷ್ಟ ಅನುಭವಿಸ್ತಿದ್ದು, ಈಗಲಾದ್ರೂ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ಕೂಡಲೇ ಗ್ರಾಮದಲ್ಲಿ ಕ್ಯಾಂಪ್ ಆಯೋಜನೆ ಮಾಡಿ, ಖಾಯಿಲೆಗೆ ತುತ್ತಾದವರಿಗೆ ಅಗತ್ಯ ಚಿಕಿತ್ಸೆ ನೀಡಿ, ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಬೇಕಿದೆ. ಇದನ್ನೂ ಓದಿ: ಭಾರೀ ಮಳೆಗೆ ಪ್ರವಾಹದಂತಾದ ಜ್ಯುವೆಲ್ಲರಿ ಶಾಪ್ – ಕೊಚ್ಚಿ ಹೋಯ್ತು 2.5 ಕೋಟಿಯ ಆಭರಣ

  • ಕೊರೊನಾ ಮಧ್ಯೆ ಶುರುವಾಯ್ತು ಜನರಿಗೆ ಚಿಕನ್ ಗುನ್ಯಾ ಕಾಟ

    ಕೊರೊನಾ ಮಧ್ಯೆ ಶುರುವಾಯ್ತು ಜನರಿಗೆ ಚಿಕನ್ ಗುನ್ಯಾ ಕಾಟ

    ಧಾರವಾಡ: ಕೊರೊನಾ ಮಧ್ಯೆ ಗ್ರಾಮವೊಂದಕ್ಕೆ ಕೊರೊನಾ ಮಧ್ಯದಲ್ಲಿ ಈಗ ಚಿಕನ್ ಗುನ್ಯಾ ಕಾಟ ಆರಂಭವಾಗಿದೆ.

    ಜಿಲ್ಲೆಯ ಲಕಮಾಪುರ ಎಂಬ 2 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಚಿಕನ್ ಗುನ್ಯಾ ಕಾಣಿಸಿಕೊಂಡಿದ್ದು. ಕಳೆದ ವಾರ ಗ್ರಾಮದಲ್ಲಿ ಕೈ ಕಾಲು ಬೇನೆ ಬಂದವರಿಗೆ ತಪಾಸಣೆ ಮಾಡಿಸಿದಾಗ, ಗ್ರಾಮದ ಒಬ್ಬರಲ್ಲಿ ಚಿಕನ್ ಗುನ್ಯಾ ಪತ್ತೆಯಾಗಿತ್ತು. ನಂತರ ಗ್ರಾಮದಲ್ಲಿ ಇದು ಹೆಚ್ಚಾಗಬಾರದೆಂದು ಆರೋಗ್ಯ ಇಲಾಖೆಯವರು ಲಾರ್ವಾ ಸರ್ವೇ ಕೂಡಾ ಮಾಡಿಸಿದ್ದರು. ಇದನ್ನು ಓದಿ:ಕಳ್ಳಬಟ್ಟಿ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ

    ಈಗ ಗ್ರಾಮದಲ್ಲಿ ಚಿಕನ್ ಗುನ್ಯಾ ಹೆಚ್ಚಾಗಬಾರದೆಂದು ಫಾಗಿಂಗ್ ಕೂಡಾ ಮಾಡಲಾಗುತ್ತಿದೆ. ಎಲ್ಲ ಕಡೆ ಕೊರೊನಾ ಕೂಡಾ ಹೆಚ್ಚಾಗಿರುವ ಕಾರಣ, ನಿನ್ನೆಯಷ್ಟೇ ಇದೇ ಗ್ರಾಮದಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. 60 ಜನರಿಗೆ ನಡೆಸಿದ ಕೊರೊನಾ ಟೆಸ್ಟ್‍ನಲ್ಲಿ ಎರಡು ಪಾಸಿಟಿವ್ ಬಂದಿವೆ.

    ಸದ್ಯ ಗ್ರಾಮದಲ್ಲಿ ಚಿಕನ್ ಗುನ್ಯಾ ಹೆಚ್ಚಾಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದ್ದು, ಜನರಿಗೆ ಸ್ವಚ್ಛತೆ ಕಾಪಾಡಲು ಹಾಗೂ ನೀರು ಬಹಳ ದಿನಗಳ ತುಂಬಿ ಇಡದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಕೊರೊನಾ ಸೋಂಕು ಹರಡದಂತೆ ಗ್ರಾಮದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದನ್ನು ಓದಿ: ಹೆದ್ದಾರಿಯಲ್ಲಿ ಚಾಲಕರನ್ನು ಬೆದರಿಸಿ ಹಣ ದರೋಡೆ – ಆರೋಪಿಗಳ ಬಂಧನ

  • ಕೊರೊನಾ, ಹಕ್ಕಿಜ್ವರ ಆತಂಕದ ಬೆನ್ನಲ್ಲೇ ಈಗ ಚಿಕನ್ ಗುನ್ಯಾ ಭಯ

    ಕೊರೊನಾ, ಹಕ್ಕಿಜ್ವರ ಆತಂಕದ ಬೆನ್ನಲ್ಲೇ ಈಗ ಚಿಕನ್ ಗುನ್ಯಾ ಭಯ

    ಬೀದರ್: ಡೆಡ್ಲಿ ಕೊರೊನಾ ವೈರಸ್, ಹಕ್ಕಿಜ್ವರ, ಹಂದಿಜ್ವರದ ಬೆನ್ನಲ್ಲೇ ಈಗ ಗಡಿ ಜಿಲ್ಲೆ ಬೀದರ್‌ನ ಜನರಿಗೆ ಚಿಕನ್ ಗುನ್ಯಾ ಭಯ ಶುರುವಾಗಿದೆ.

    ಬುಧವಾರ ಹುಮ್ನಮಾದ್ ತಾಲೂಕಿನ ನಂದಗಾಂವ್ ಗ್ರಾಮದಲ್ಲಿ ಹಂದಿ ಜ್ವರದಿಂದ 200ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಇಂದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗೂರು ಗ್ರಾಮದ 20ಕ್ಕೂ ಹೆಚ್ಚು ಜನರಿಗೆ ಏಕಾಏಕಿ ಜ್ವರ, ಕಾಲು ಹಾಗೂ ಕೈ ನೋವು ಕಾಣಿಸಿಕೊಳ್ಳುವ ಮೂಲಕ ಚಿಕನ್ ಗುನ್ಯಾ ಲಕ್ಷಣಗಳು ಪತ್ತೆಯಾಗಿವೆ.

    ಈಗಾಗಲೇ ವಿಷಯ ತಿಳಿದು ಸ್ಥಳಕ್ಕೆ ಬಂದ ತಾಲೂಕು ಆರೋಗ್ಯಾಧಿಕಾರಿಗಳು ಗ್ರಾಮದ 20ಕ್ಕೂ ಹೆಚ್ಚು ಜನರ ರಕ್ತ ಮಾದರಿಯನ್ನು ಬ್ರೀಮ್ಸ್ ಪ್ರಯೋಗಾಲಯಕ್ಕೆ ಕಳಿಸಿಕೊಟ್ಟಿದ್ದಾರೆ. ಇನ್ನು ಕೆಲವರಿಗೆ ಹತ್ತಿರದಲ್ಲಿರುವ ವಡಗಾಂವ್ ಪ್ರಾಥರ್ಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳಿಂದ ಗ್ರಾಮದಲ್ಲಿ ಜ್ವರ ಹಾಗೂ ನೋವಿನಿಂದ ಜನರು ಭಯಗೊಂಡಿದ್ದರೂ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಬಂದಿರಲಿಲ್ಲ. ಇದರಿಂದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಪ್ರಯೋಗಾಲಯಕ್ಕೆ ರಕ್ತ ಮಾದರಿಯನ್ನು ಕಳಿಸಿಕೊಡಲಾಗಿದೆ. ವರದಿ ಬಂದ ಬಳಿಕ ಚಿಕನ್ ಗುನ್ಯಾ ಬಗ್ಗೆ ಖಚಿತ ಮಾಹಿತಿ ನೀಡುತ್ತೇವೆ ಎಂದು ಪಬ್ಲಿಕ್ ಟಿವಿಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಯ್ಯ ಸ್ವಾಮಿ ಮಾಹಿತಿ ನೀಡಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರಿಗೆ ಚಿಕನ್ ಗುನ್ಯಾ ಲಕ್ಷಣಗಳು ಏಕಾಏಕಿ ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯ ಜನರನ್ನು ಮೊತ್ತೊಮ್ಮೆ ಆತಂಕಕ್ಕೆ ದೂಡಿದೆ.

  • ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಚಿಕನ್ ಗುನ್ಯಾ, ಡೆಂಗ್ಯೂ ಪ್ರಕರಣಗಳು

    ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಚಿಕನ್ ಗುನ್ಯಾ, ಡೆಂಗ್ಯೂ ಪ್ರಕರಣಗಳು

    ಬೆಂಗಳೂರು: ಮುಂಗಾರಿನ ಅಬ್ಬರದ ಮಧ್ಯೆ ರಾಜ್ಯದಲ್ಲಿ ಚಿಕನ್‍ಗುನ್ಯಾ, ಡೆಂಗ್ಯೂ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಹೆಚ್ಚಾಗುತ್ತಿವೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರು ಸಿಟಿಯಲ್ಲಿ ಒಟ್ಟು 313 ಡೆಂಗ್ಯೂ ಕೇಸ್ ಹಾಗೂ 782 ಚಿಕನ್ ಗುನ್ಯಾ ಕೇಸ್ ಪತ್ತೆಯಾಗಿವೆ. ದಕ್ಷಿಣಕನ್ನಡದಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯಾದ್ಯಂತ ಒಟ್ಟು 1,141 ಕೇಸ್ ಗಳು ಪತ್ತೆಯಾಗಿವೆ. ಹಾವೇರಿ ಹಾಗೂ ಚಿತ್ರದುರ್ಗದಲ್ಲಿ ಹೆಚ್ಚು ಚಿಕನ್ ಗುನ್ಯಾ ಕೇಸ್ ಗಳು ಪತ್ತೆಯಾಗಿವೆ.

    ನಾಗರಿಕರಿಗೆ ಸಾಂಕ್ರಾಮಿಕ ಕಾಯಿಲೆಯ ಬಗ್ಗೆ ಎಚ್ಚರವಾಗಿರುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮನವಿ ಮಾಡಿದ್ದು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೂ ಸೂಕ್ತ ಚಿಕಿತ್ಸೆ ಹಾಗೂ ಎಚ್ಚರ ವಹಿಸುವಂತೆ ಸುತ್ತೋಲೆ ಹೊರಡಿಸಿದೆ.

    ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಲ್ಯಾಬ್ ಟೆಸ್ಟ್ ಗೆ ಹೆಚ್ಚುವರಿ ಶುಲ್ಕ ಸಂಗ್ರಹ ಮಾಡದಂತೆ ಖಾಸಗಿ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಲಾಗಿದ್ದು ಸರ್ಕಾರಿ ಆಸ್ಪತ್ರೆಗೆ ರೋಗಿಗಳನ್ನು ಕಳಿಸುವಂತೆ ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.