Tag: ಚಾಹಲ್

  • ಜೈಸ್ವಾಲ್, ಚಾಹಲ್ ಆಟಕ್ಕೆ ಮಂಕಾದ ಪಂಜಾಬ್ – ಪ್ಲೇ ಆಫ್ ಸನಿಹಕ್ಕೆ ರಾಜಸ್ಥಾನ್ ರಾಯಲ್ಸ್

    ಜೈಸ್ವಾಲ್, ಚಾಹಲ್ ಆಟಕ್ಕೆ ಮಂಕಾದ ಪಂಜಾಬ್ – ಪ್ಲೇ ಆಫ್ ಸನಿಹಕ್ಕೆ ರಾಜಸ್ಥಾನ್ ರಾಯಲ್ಸ್

    ಮುಂಬೈ: ಶನಿವಾರ ನಡೆದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಆರ್ಭಟ ಮತ್ತು ಯಜುವೇಂದ್ರ ಚಾಹಲ್ ಬೌಲಿಂಗ್ ಮೋಡಿಗೆ ರಾಜಸ್ಥಾನ್ ರಾಯಲ್ಸ್ ತಂಡವು ಆರು ವಿಕೆಟ್‍ಗಳ ಅಂತರದಿಂದ ಜಯಭೇರಿ ಸಾಧಿಸಿದೆ.

    ಗೆಲುವಿನ ಹಾದಿಗೆ ಮರಳಿರುವ ರಾಜಸ್ಥಾನ್, ಪ್ಲೇ-ಆಫ್‍ನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಮಯಂಕ್ ಅಗರವಾಲ್ ಪಡೆಯ ಪ್ಲೇ-ಆಫ್ ಹಾದಿ ಇನ್ನಷ್ಟೂ ಕಠಿಣವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಂಜಾಬ್ ತಂಡವು ಜಾನಿ ಬೆಸ್ಟೊನ ಆಕರ್ಷಕ ಅರ್ಧಶತಕದ ನೆರವಿನಿಂದ (56) ತಂಡವು ಐದು ವಿಕೆಟ್ ನಷ್ಟಕ್ಕೆ 189 ರನ್‍ಗಳ ಗುರಿ ನೀಡಿತ್ತು.

    ರಾಜಸ್ಥಾನ್ ಪರ ಚಾಹಲ್ ಸ್ಪಿನ್ ಮೋಡಿ ಮಾಡಿ ಮೂರು ವಿಕೆಟ್ ಕಬಳಿಸುವ ಮೂಲಕ ಪಂಜಾಬ್‍ನ ಬ್ಯಾಟಿಂಗ್ ಕ್ರಮಾಂಕವನ್ನು ಕಟ್ಟಿ ಹಾಕಿದರು. ನಂತರದಲ್ಲಿ ಮಯಂಕ್ ಪಡೆ ನೀಡಿದ್ದ 190 ರನ್‍ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್, ಜೈಸ್ವಾಲ್‍ನ ಅರ್ಧಶತಕದ ನೆರವಿನಿಂದ ಇನ್ನೂ ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ 19.4 ಓವರ್‍ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು.

    ಇದರೊಂದಿಗೆ ರಾಜಸ್ಥಾನ ಆಡಿರುವ 11 ಪಂದ್ಯಗಳಲ್ಲಿ ಏಳನೇ ಗೆಲುವಿನೊಂದಿಗೆ ಒಟ್ಟು 14 ಅಂಕ ಸಂಪಾದಿಸಿರುವ ರಾಜಸ್ಥಾನ್, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ. ಪಂಜಾಬ್ 11 ಪಂದ್ಯಗಳಲ್ಲಿ ಆರನೇ ಸೋಲಿನ ಕಹಿಯುಂಡಿದ್ದು, ಏಳನೇ ಸ್ಥಾನದಲ್ಲಿದೆ.

    ರಾಜಸ್ಥಾನ್‍ನ ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಬಿರುಸಿನ ಆಟವಾಡಿ ನಾಲ್ಕು ಓವರ್‍ಗಳಲ್ಲೇ 46 ರನ್ ಪೇರಿಸಿ ಗೆಲುವಿಗೆ ಬುನಾದಿ ಹಾಕಿಕೊಟ್ಟರು.

    ನಾಲ್ಕನೇ ಓವರ್‍ನಲ್ಲಿ ರಬಾಡ ಬೌಲಿಂಗ್‍ಗೆ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಬಟ್ಲರ್ ಅಬ್ಬರಿಸಿದರು. ಅದೇ ಓವರ್‍ನ ಕೊನೆಯ ಎಸೆತದಲ್ಲಿ ರಬಾಡಾಗೆ ವಿಕೆಟ್ ಒಪ್ಪಿಸಿದರು. ಒಟ್ಟು 16 ಎಸೆತಗಳನ್ನು ಎದುರಿಸಿದ ಬಟ್ಲರ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್‍ನೊಂದಿಗೆ 30 ರನ್ ಗಳಿಸಿದರು. ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್‍ನಲ್ಲಿ 600 ರನ್ ಸಾಧನೆ ಮಾಡಿದರು.

    ಪವರ್ ಪ್ಲೇ ಅಂತ್ಯಕ್ಕೆ ರಾಜಸ್ಥಾನ್ ಒಂದು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತ್ತು. ನಾಯಕ ಸಂಜು ಸ್ಯಾಮ್ಸನ್ 23 ರನ್‍ಗಳ (12 ಎಸೆತ, 4 ಬೌಂಡರಿ) ಕಾಣಿಕೆ ನೀಡಿದರು. ನಂತರದಲ್ಲಿ ಜೊತೆಯಾದ ಯಶಸ್ವಿ ಜೈಸ್ವಾಲ್ ಹಾಗೂ ದೇವದತ್ತ ಪಡಿಕ್ಕಲ್ ಮೂರನೇ ವಿಕೆಟ್‍ಗೆ ಮಹತ್ವದ 50 ರನ್‍ಗಳ ಜೊತೆಯಾಟವನ್ನಾಡಿ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟರು. ಆಕರ್ಷಕ ಬ್ಯಾಟಿಂಗ್ ಮೂಲಕ ಜೈಸ್ವಾಲ್, ಕೇವಲ 33 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. ಈ ಮೂಲಕ ತಮ್ಮ ಸಾಮಥ್ರ್ಯವನ್ನು ಸಾಬೀತು ಮಾಡಿದರು.

    41 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 68 ರನ್ ಗಳಿಸಿದರು. ಅವರ ಈ ಬಿರುಸಿನ ಇನ್ನಿಂಗ್ಸ್‍ನಲ್ಲಿ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದ್ದವು. ಅಂತಿಮ 30 ಎಸೆತಗಳಲ್ಲಿ ರಾಜಸ್ಥಾನ್ ಗೆಲುವಿಗೆ 47 ರನ್ ಬೇಕಾಗಿತ್ತು. ಈ ವೇಳೆ ಬಿರುಸಿನ ಆಟವಾಡಿದ ಶಿಮ್ರಾನ್ ಹೆಟ್ಮೆಯರ್ ಆರ್‍ಆರ್‍ಗೆ ಅರ್ಹ ಗೆಲುವು ಒದಗಿಸಿಕೊಡಲು ನೆರವಾದರು. ಅವರಿಗೆ ದೇವದತ್ತ ಪಡಿಕ್ಕಲ್ ತಕ್ಕ ಸಾಥ್ ಕೊಟ್ಟರು.

    ಅಂತಿಮವಾಗಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಕೇವಲ 16 ಎಸೆತಗಳನ್ನು ಎದುರಿಸಿದ ಹೆಟ್ಮೆಯರ್ 31 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ಪಡಿಕ್ಕಲ್ 32 ಎಸೆತಗಳಲ್ಲಿ 31 ರನ್ ಗಳಿಸಿದರು. ಪಂಜಾಬ್ ಪರ ಅರ್ಶದೀಪ್ ಎರಡು ವಿಕೆಟ್ ಗಳಿಸಿದರು.

    ಈ ಮೊದಲು ಜಾನಿ ಬೆಸ್ಟೊನ ಆಕರ್ಷಕ ಅರ್ಧಶತಕದ ನೆರವಿನಿಂದ (56) ಪಂಜಾಬ್ ಕಿಂಗ್ಸ್ ತಂಡವು ಐದು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಪಂಜಾಬ್ ಉತ್ತಮ ಆರಂಭವನ್ನು ಪಡೆದುಕೊಂಡಿತ್ತು. ಜಾನಿ ಬಿರುಸಿನ ಆಟವಾಡುವ ಮೂಲಕ ಎಲ್ಲರ ಗಮನ ಸೆಳೆದರು. ಅಲ್ಲದೆ ಮೊದಲ ವಿಕೆಟ್‍ಗೆ ಶಿಖರ್ ಧವನ್ ಜೊತೆಗೆ 5.1 ಓವರ್‍ಗಳಲ್ಲಿ 47 ರನ್‍ಗಳ ಜೊತೆಯಾಟದಲ್ಲಿ ಭಾಗಿಯಾದರು. ಧವನ್ 12 ರನ್ ಗಳಿಸಿ ಔಟ್ ಆದರು. ಭಾನುಕ ರಾಜಪಕ್ಸ 27 ರನ್‍ಗಳ (18 ಎಸೆತ, 2 ಬೌಂಡರಿ, 2 ಸಿಕ್ಸರ್) ಹೊಡೆದಿದ್ದು ಯಜುವೇಂದ್ರ ಚಾಹಲ್‍ಗೆ ತಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. 15ನೇ ಓವರ್‍ನಲ್ಲಿ ನಾಯಕ ಮಯಂಕ್ ಅಗರವಾಲ್ (15) ಹಾಗೂ ಬೆಸ್ಟೊ ವಿಕೆಟ್ ಗಳಿಸಿದ ಚಾಹಲ್ ಡಬಲ್ ಆಘಾತ ನೀಡಿದರು. 40 ಎಸೆತಗಳನ್ನು ಎದುರಿಸಿದ ಬೆಸ್ಟೊ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು.

    ಕೊನೆಯ ಹಂತದಲ್ಲಿ ಜಿತೇಶ್ ಶರ್ಮಾ ಹಾಗೂ ಲಿಯಾಮ್ ಲಿವಿಂಗ್‍ಸ್ಟೋನ್ ಅರ್ಧಶತಕದ ಜೊತೆಯಾಟ ಕಟ್ಟುವ ಮೂಲಕ ಪಂಜಾಬ್ ಸವಾಲಿನ ಮೊತ್ತವನ್ನು ಪೇರಿಸಲು ನೆರವಾದರು. ಈ ಮೂಲಕ ಪಂಜಾಬ್ ಐದು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. 18 ಎಸೆತಗಳನ್ನು ಎದುರಿಸಿದ ಜಿತೇಶ್ 38 ರನ್ (18 ಎಸೆತ, 4 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ಮತ್ತೊಂದೆಡೆ ಲಿವಿಂಗ್‍ಸ್ಟೋನ್ 22 ರನ್ (14 ಎಸೆತ, 2 ಸಿಕ್ಸರ್) ಗಳಿಸಿದರು.

  • ಶ್ರೀಲಂಕಾದ 100ನೇ ಟಿ20 ಪಂದ್ಯದಲ್ಲಿ ಬಂದಿದ್ದು ಕೇವಲ 4 ಬೌಂಡರಿ, 2 ಸಿಕ್ಸ್ ಮಾತ್ರ!

    ಶ್ರೀಲಂಕಾದ 100ನೇ ಟಿ20 ಪಂದ್ಯದಲ್ಲಿ ಬಂದಿದ್ದು ಕೇವಲ 4 ಬೌಂಡರಿ, 2 ಸಿಕ್ಸ್ ಮಾತ್ರ!

    ಕಟಕ್: ಟೀಂ ಇಂಡಿಯಾ – ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯದ ಭಾರತದ ಇನ್ನಿಂಗ್ಸ್ ಹೊಡಿ ಬಡಿ ಆಟಕ್ಕೆ ಸಾಕ್ಷಿಯಾದರೆ ಶ್ರೀಲಂಕಾದ ಇನ್ನಿಂಗ್ಸ್ ಎಲ್ಲೂ ಇದು ಟಿ20 ಪಂದ್ಯವೆಂದು ಅನ್ನಿಸಲೇ ಇಲ್ಲ. ಈ ಪಂದ್ಯ ಶ್ರೀಲಂಕಾದ 100ನೇ ಪಂದ್ಯವಾಗಿತ್ತು. ಆದರೆ ಇದರ ಸವಿ ಶ್ರೀಲಂಕನ್ನರಿಗೆ ಸಿಗಲೇ ಇಲ್ಲ. ಕಾರಣ 100ನೇ ಪಂದ್ಯದಲ್ಲಿ ಶ್ರೀಲಂಕಾ 93 ರನ್ ಗಳಿಂದ ಸೋಲನ್ನಪ್ಪಿದೆ.

    ಶ್ರೀಲಂಕಾ ಆಟಗಾರರು ಬ್ಯಾಟ್ ಮಾಡಿದ 16 ಓವರಲ್ಲಿ ಕೇವಲ 4 ಬೌಂಡರಿ ಹಾಗೂ 2 ಸಿಕ್ಸರ್ ಮಾತ್ರ ಬಂತು. ಇಂದಿನ ಪಂದ್ಯದಲ್ಲಿ ಭಾರತದ ಪರವಾಗಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಒಟ್ಟು 4 ವಿಕೆಟ್ ಪಡೆದು ಪಂದ್ಯಕ್ಕೆ ಮಹತ್ವದ ತಿರುವು ತಂದುಕೊಟ್ಟರು. ಅಲ್ಲದೇ ಚಾಹಲ್ 2017ರಲ್ಲಿ 19 ವಿಕೆಟ್ ಪಡೆದು, ಈ ವರ್ಷ ಗರಿಷ್ಠ ವಿಕೆಟ್ ಪಡೆದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

    ರೋಹಿತ್ ದಾಖಲೆ!: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಂಜೆಲೋ ಮ್ಯಾಥ್ಯೂಸ್ ಬೌಲಿಂಗಲ್ಲಿ 10ನೇ ಬಾರಿಗೆ ಔಟಾದರು. 2010ರ ಬಳಿಕ ಭಾರತದ ಯಾವುದೇ ಆಟಗಾರ ಒಬ್ಬನೇ ಬೌಲರ್ ಗೆ 10 ಬಾರಿ ಔಟಾದ ದಾಖಲೆಗಳಿರಲಿಲ್ಲ.

    ಧೋನಿ ಸ್ಪೆಷಲ್: ಯಾರು ಏನೇ ಹೇಳಿದರೂ ನನ್ನ ನೆಮ್ಮದಿಗೆ ಭಂಗವಿಲ್ಲ ಎಂಬಂತೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಪಂದ್ಯದಲ್ಲೂ ತನ್ನ ಮ್ಯಾಜಿಕ್ ಮುಂದುವರೆಸಿದರು. ಬ್ಯಾಟಿಂಗಲ್ಲಿ 22 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದರೆ, ಕೀಪಿಂಗಲ್ಲಿ ಶ್ರೀಲಂಕಾದ ನಾಲ್ವರು ಆಟಗಾರರು ಔಟಾಗುವಲ್ಲಿ ಪ್ರಧಾನ ಪಾತ್ರ ವಹಿಸಿದರು. ಇಬ್ಬರು ಆಟಗಾರರನ್ನು ಸ್ಟಂಪಿಂಗ್ ಮಾಡಿದರೆ, ಇನ್ನಿಬ್ಬರು ಆಟಗಾರರು ಧೋನಿಗೆ ಕ್ಯಾಚಿತ್ತು ಪೆವಿಲಿಯನ್ ನತ್ತ ಮುಖ ಮಾಡಿದರು.

  • ರೋಚಕ ಲಾಸ್ಟ್ ಓವರ್‍ನಲ್ಲಿ ಪಾಂಡ್ಯಾ ಕೊಹ್ಲಿಗೆ ಹೇಳಿದ್ದೇನು?

    ರೋಚಕ ಲಾಸ್ಟ್ ಓವರ್‍ನಲ್ಲಿ ಪಾಂಡ್ಯಾ ಕೊಹ್ಲಿಗೆ ಹೇಳಿದ್ದೇನು?

    ತಿರುವನಂತಪುರ: `ನಾನು ಉತ್ತಮ ಬೌಲಿಂಗ್ ಮಾಡುತ್ತೇನೆ, ನೀವು ಚೀತಸಬೇಡಿ’ ಎಂದು ಪಾಂಡ್ಯಾ ನಾಯಕ ಕೊಹ್ಲಿಗೆ ಭರವಸೆ ನೀಡಿ, ನಿರ್ಣಾಯಕ ಓವರ್‍ ನಲ್ಲಿ ಕೇವಲ 12 ರನ್‍ಗಳನ್ನು ನೀಡುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

    ಪಂದ್ಯದ ಮುಕ್ತಾಯದ ನಂತರ ಮಾತನಾಡಿದ ಕೊಹ್ಲಿ, ಪಾಂಡ್ಯಾ ಅಂತಿಮ ಓವರ್‍ನಲ್ಲಿ ಹೇಳಿದ ಮಾತನ್ನು ಬಿಚ್ಚಿಟ್ಟರು. ಪಂದ್ಯದ ನಿರ್ಣಾಯಕ ಒವರ್‍ನಲ್ಲಿ ಬೌಲರ್‍ಗೆ ಧೈರ್ಯ ತುಂಬುವುದು ನಾಯಕನ ಕರ್ತವ್ಯ ಆದ್ದರಿಂದಲೇ ನಾನು ಪಾಂಡ್ಯಾಗೆ ಸಲಹೆ ನೀಡಲು ತೆರಳಿದೆ. ಈ ವೇಳೆ ಪಾಂಡ್ಯಾ ತಮ್ಮದೇ ಶೈಲಿಯಲ್ಲಿ `ನಾನು ಉತ್ತಮ ಬೌಲಿಂಗ್ ಮಾಡುತ್ತೇನೆ, ನೀವು ಚಿಂತಿಸಬೇಡಿ’ ಎಂದರು. ತಂಡದ ನಾಯಕನಿಗೆ ಬೌಲರ್ ಇಷ್ಟು ಭರವಸೆ ನೀಡಿದರೆ ಸಾಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಪಾಂಡ್ಯಾ ಅವರ ಬೌಲಿಂಗ್ ಮೇಲಿನ ವಿಶ್ವಾಸದಿಂದಲೇ ಅವರಿಗೆ ಬಾಲ್ ನೀಡಿದೆ. ಪಾಂಡ್ಯಾರ ಆಫ್ ಕಟ್ ಸ್ವಿಂಗ್ ಉತ್ತಮ ಫಲಿತಾಂಶವನ್ನು ನೀಡಿತು. ಇನ್ನೂಳಿದಂತೆ ಬೂಮ್ರಾ ಅವರ ಶಿಸ್ತುಬದ್ಧ ದಾಳಿ ನ್ಯೂಜಿಲೆಂಡ್ ಆಟಗಾರರನ್ನು ಒತ್ತಡದಲ್ಲಿ ಸಿಲುಕಿಸಿತು ಎಂದರು.

    ಒಟ್ಟಾರೆ ತಂಡದ ಸಾಂಘಿಕ ಹೋರಾಟದಿಂದ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

    ಕೊನೆಯ ಆ ಓವರ್: ನ್ಯೂಜಿಲೆಂಡ್ ಗೆಲ್ಲಲು ಕೊನೆಯ ಓವರ್ ನಲ್ಲಿ 19 ರನ್ ಬೇಕಾಗಿತ್ತು. ಮೊದಲ ಎಸೆತದಲ್ಲಿ 1 ರನ್ ಬಂದರೆ 2ನೇ ಎಸೆತದಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಈ ವೇಳೆ ಬಾಲ್ ಪಾಂಡ್ಯಾ ಎಡಕೈಗೆ ತಗುಲಿತ್ತು. ತಕ್ಷಣ ಟೀಂ ಫಿಸಿಯೋ ಬಂದು ನೋವು ನಿವಾರಕ ಸ್ಪ್ರೇ ಹಾಕಿದರು. ಬಳಿಕ ಬೌಲಿಂಗ್ ಆರಂಭಿಸಿದ ಪಾಂಡ್ಯಾ 3ನೇ ಎಸೆತದಲ್ಲಿ ಗ್ರಾಂಡ್ ಹೋಮ್ ಸಿಕ್ಸರ್ ಬಾರಿಸಿದಾಗ ಸ್ಟೇಡಿಯಂನಲ್ಲಿ ನೀರವ ಮೌನ. ನಂತರದ ಬಾಲ್ ನಲ್ಲಿ ಪಾಂಡ್ಯಾ ವೈಡ್ ಎಸೆದರು. 4ನೇ ಎಸೆತದಲ್ಲಿ ಕೇವಲ 1 ರನ್ ಮಾತ್ರ ಬಂತು. 5 ನೇ ಎಸೆತದಲ್ಲಿ 2 ರನ್ ಬಂದಿತ್ತು. ಅಷ್ಟರಲ್ಲಾಗಲೇ ಟೀಂ ಇಂಡಿಯಾ ಗೆಲುವು ಖಚಿತವಾಗಿತ್ತು. ಯಾಕೆಂದರೆ ಬಾಕಿ ಉಳಿದಿದ್ದ 1 ಎಸೆತದಲ್ಲಿ 8 ರನ್ ಬೇಕಾಗಿತ್ತು. ಆದರೆ ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್ ಆಟಗಾರರು ಕೇವಲ 1 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಮೂಲಕ ಟೀಂ ಇಂಡಿಯಾ 6 ರನ್ ಗಳ ಗೆಲುವು ಸಾಧಿಸಿತ್ತು.

  • ಚಾಹಲ್, ಬೂಮ್ರಾ ಓವರ್ ಟರ್ನಿಂಗ್ ಪಾಯಿಂಟ್! – ರೋಚಕವಾಗಿತ್ತು ಪಾಂಡ್ಯ ಲಾಸ್ಟ್ ಓವರ್!

    ಚಾಹಲ್, ಬೂಮ್ರಾ ಓವರ್ ಟರ್ನಿಂಗ್ ಪಾಯಿಂಟ್! – ರೋಚಕವಾಗಿತ್ತು ಪಾಂಡ್ಯ ಲಾಸ್ಟ್ ಓವರ್!

    ತಿರುವನಂತಪುರ: ನ್ಯೂಜಿಲೆಂಡ್ ವಿರುದ್ಧದ ಕೊನೆಯ ಹಾಗೂ ನಿರ್ಣಾಯಕ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಸಿದ್ದು ಟೀಂ ಇಂಡಿಯಾದ ಸಾಂಘಿಕ ಹೋರಾಟ. ಸಿಕ್ಕಿದ ಯಾವ ಅವಕಾಶವನ್ನೂ ಕೈಚೆಲ್ಲದ ಟೀಂ ಇಂಡಿಯಾ ಆಟಗಾರರು ಟಿ20 ಕಪ್ ತಮ್ಮ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.

    ಅದರಲ್ಲೂ ಮುಖ್ಯವಾಗಿ ವೇಗಿ ಜಸ್ಪ್ರೀತ್ ಬೂಮ್ರಾ ಹಾಗೂ ಸ್ಪಿನ್ನರ್ ಚಾಹಲ್ ತಮ್ಮ ನಾಯಕ ವಿರಾಟ್ ಕೊಹ್ಲಿ ಮೇಲಿಟ್ಟ ವಿಶ್ವಾಸವನ್ನು ಹುಸಿಗೊಳಿಸಲಿಲ್ಲ. 8 ಓವರ್ ಗಳ ಈ ಪಂದ್ಯದಲ್ಲಿ ಬೂಮ್ರಾ ಹಾಗೂ ಚಾಹಲ್ 4 ಓವರ್ ಗಳನ್ನು ಎಸೆದರು. 4 ಓವರ್‍ಗಳಲ್ಲಿ ಇಬ್ಬರೂ ಸೇರಿ ಕೇವಲ 17 ರನ್ ಮಾತ್ರ ಬಿಟ್ಟು ಕೊಟ್ಟು 2 ಮಹತ್ವದ ವಿಕೆಟ್ ಗಳನ್ನು ಕಬಳಿಸಿದರು. ಇದರಲ್ಲಿ ಬೂಮ್ರಾ 2 ಓವರ್ ನಲ್ಲಿ 9 ರನ್ ಗೆ 2 ವಿಕೆಟ್ ಪಡೆದರೆ, ಚಹಲ್ 2 ಓವರ್ ಗಳಲ್ಲಿ ಕೇವಲ 8 ರನ್ ಮಾತ್ರ ಬಿಟ್ಟು ಕೊಟ್ಟರು. 2 ಓವರ್ ನಲ್ಲಿ 2 ವಿಕೆಟ್ ಪಡೆದ ಜಸ್ಪ್ರೀತ್ ಬೂಮ್ರಾ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

    ಕೊನೆಯ ಆ ಓವರ್: ನ್ಯೂಜಿಲೆಂಡ್ ಗೆಲ್ಲಲು ಕೊನೆಯ ಓವರ್ ನಲ್ಲಿ 19 ರನ್ ಬೇಕಾಗಿತ್ತು. ಮೊದಲ ಎಸೆತದಲ್ಲಿ 1 ರನ್ ಬಂದರೆ 2ನೇ ಎಸೆತದಲ್ಲಿ ಯಾವುದೇ ರನ್ ಗಳಿಸುವುದು ಸಾಧ್ಯವಾಗಲಿಲ್ಲ. ಆದರೆ ಈ ವೇಳೆ ಬಾಲ್ ಪಾಂಡ್ಯಾ ಎಡಕೈಗೆ ತಗುಲಿತ್ತು. ತಕ್ಷಣ ಟೀಂ ಫಿಸಿಯೋ ಬಂದು ನೋವು ನಿವಾರಕ ಸ್ಪ್ರೇ ಹಾಕಿದರು. ಬಳಿಕ ಬೌಲಿಂಗ್ ಆರಂಭಿಸಿದ ಪಾಂಡ್ಯ 3ನೇ ಎಸೆತದಲ್ಲಿ ಗ್ರಾಂಡ್ ಹೋಮ್ ಸಿಕ್ಸರ್ ಬಾರಿಸಿದಾದ ಸ್ಟೇಡಿಯಂನಲ್ಲಿ ನೀರವ ಮೌನ. ನಂತರದ ಬಾಲ್ ನಲ್ಲಿ ಪಾಂಡ್ಯಾ ವೈಡ್ ಎಸೆದರು. 4ನೇ ಎಸೆತದಲ್ಲಿ ಕೇವಲ 1 ರನ್ ಮಾತ್ರ ಬಂತು. 5 ನೇ ಎಸೆತದಲ್ಲಿ 2 ರನ್ ಬಂದಿತ್ತು. ಅಷ್ಟರಲ್ಲಾಗಲೇ ಟೀಂ ಇಂಡಿಯಾ ಗೆಲುವು ಖಚಿತವಾಗಿತ್ತು. ಯಾಕೆಂದರೆ ಬಾಕಿ ಉಳಿದಿದ್ದ 1 ಎಸೆತದಲ್ಲಿ 8 ರನ್ ಬೇಕಾಗಿತ್ತು. ಆದರೆ ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್ ಆಟಗಾರರು ಕೇವಲ 1 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಮೂಲಕ ಟೀಂ ಇಂಡಿಯಾ 6 ರನ್ ಗಳ ಗೆಲುವು ಸಾಧಿಸಿತ್ತು.

     

  • 70 ವರ್ಷದಲ್ಲಿ ಮೊದಲ ಬಾರಿಗೆ ಈ ‘ಅಪೂರ್ವ’ ದಾಖಲೆ ಮಾಡುತ್ತಾ ಟೀಂ ಇಂಡಿಯಾ!

    70 ವರ್ಷದಲ್ಲಿ ಮೊದಲ ಬಾರಿಗೆ ಈ ‘ಅಪೂರ್ವ’ ದಾಖಲೆ ಮಾಡುತ್ತಾ ಟೀಂ ಇಂಡಿಯಾ!

    ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯನ್ನು ಭಾರತ ಗೆದ್ದರೆ ಮತ್ತೊಂದು ದಾಖಲೆ ಇತಿಹಾಸದ ಪುಟಗಳಲ್ಲಿ ಸೇರ್ಪಡೆಯಾಗಲಿದೆ. ಆಸೀಸ್ ವಿರುದ್ಧ ಗೆದ್ದರೆ ಇದೇ ಮೊದಲ ಬಾರಿ ಸತತ 4 ದ್ವಿಪಕ್ಷೀಯ ಅಂತಾರಾಷ್ಟ್ರೀಯ ಸರಣಿಯನ್ನು ಭಾರತ ಗೆದ್ದಂತಾಗುತ್ತದೆ.

    ಭಾರತ ಇದುವರೆಗೆ 3 ಸರಣಿಯಲ್ಲಿ ಸತತವಾಗಿ ಕಾಂಗರೂ ಪಡೆಯನ್ನು ಸೋಲಿಸಿದೆ. 2016ರಲ್ಲಿ ಅಸ್ಟ್ರೇಲಿಯಾದಲ್ಲಿ ನಡೆದ ಟಿ20 ಸರಣಿಯಲ್ಲಿ 3-0, ಭಾರತದಲ್ಲಿ ನಡೆದ ಟೆಸ್ಟ್ ಸರಣಿಯನ್ನು 2-1 ಹಾಗೂ ಕಳೆದ ತಿಂಗಳು ನಡೆದ ಏಕದಿನ ಸರಣಿಯನ್ನು 4-1ರ ಅಂತರದಿಂದ ಗೆದ್ದಿತ್ತು. ಇಂದಿನ ಪಂದ್ಯ ಅಥವಾ ಈ ಸರಣಿ ಗೆದ್ದರೆ ಭಾರತ ಮತ್ತೆ ದಾಖಲೆ ಮಾಡಲಿದೆ.

    ಆಸ್ಟ್ರೇಲಿಯಾ ವಿರುದ್ಧ ಇಂದಿನ ಪಂದ್ಯ ಸಂಜೆ 7 ಗಂಟೆಗೆ ಶುರುವಾಗಲಿದೆ. ಈಗಾಗಲೇ ಎರಡೂ ತಂಡಗಳು ಗುವಾಹಟಿಗೆ ಆಗಮಿಸಿದ್ದು ಪ್ರ್ಯಾಕ್ಟೀಸ್ ನಲ್ಲಿ ತೊಡಗಿವೆ. ಇಂದಿನ ಪಂದ್ಯವನ್ನೂ ಗೆದ್ದರೆ ಟೀಂ ಇಂಡಿಯಾ, ಆಸೀಸ್ ವಿರುದ್ಧ ಸತತ 8ನೇ ಪಂದ್ಯವನ್ನು ಗೆದ್ದಂತಾಗುತ್ತದೆ. ಟಿ20 ಸರಣಿಯ ಮೊದಲ ಪಂದ್ಯ ರಾಂಚಿಯಲ್ಲಿ ನಡೆದಿತ್ತು. ಈ ಪಂದ್ಯವನ್ನು ಭಾರತ ಡಕ್ ವರ್ತ್ ಲೂಯಿಸ್ ನಿಯಮದಡಿ 9 ವಿಕೆಟ್ ಅಂತರದಿಂದ ಗೆದ್ದಿತ್ತು.

  • ಇಂದು ಗೆದ್ದರೆ ಟಿ20ಯಲ್ಲಿ ಟೀಂ ಇಂಡಿಯಾ ನಂ.3!

    ಇಂದು ಗೆದ್ದರೆ ಟಿ20ಯಲ್ಲಿ ಟೀಂ ಇಂಡಿಯಾ ನಂ.3!

    ಬೆಂಗಳೂರು: ಗುವಾಹಟಿಯ ಬರ್ಸಪಾರಾ ಕ್ರೀಡಾಂಗಣದಲ್ಲಿ ಇಂದು ಆಸೀಸ್ ವಿರುದ್ಧ ನಡೆಯಲಿರುವ 2ನೇ ಪಂದ್ಯದಲ್ಲಿ ಗೆದ್ದರೆ ಟೀಂ ಇಂಡಿಯಾ ಟಿ20 ಶ್ರೇಯಾಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಲಿದೆ. ಇಂದಿನ ಪಂದ್ಯವನ್ನೂ ಸೋತರೆ ಆಸ್ಟ್ರೇಲಿಯಾ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಕೊನೆಯ ಪಂದ್ಯವನ್ನು ಆಡಿ ವಾಪಸ್ ಸ್ವದೇಶಕ್ಕೆ ವಾಪಾಸಾಗಬೇಕಾಗುತ್ತದೆ.

    ಇಂದಿನ ಪಂದ್ಯಕ್ಕೂ ಮಳೆ ಭೀತಿಯಿದ್ದು ನಿನ್ನೆ ಗುವಾಹಟಿಯಲ್ಲಿ ಮೋಡ ಕವಿದ ವಾತಾವರಣವಿತ್ತು. ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದರೆ 51ನೇ ಟಿ20 ಗೆಲುವು ಸಾಧಿಸಿದಂತಾಗುತ್ತದೆ. ಶ್ರೀಲಂಕಾವೂ ಇಷ್ಟೇ ಪಂದ್ಯವನ್ನು ಟಿ20ಯಲ್ಲಿ ಗೆದ್ದಿದೆ. ಆದರೆ ಭಾರತದ ಗೆಲುವಿನ ಸರಾಸರಿ ಶ್ರೀಲಂಕಾ ತಂಡಕ್ಕಿಂತ ಉತ್ತಮವಾಗಿದೆ. ಹೀಗಾಗಿ ಭಾರತ 3ನೇ ಸ್ಥಾನವನ್ನು ತಲುಪುವುದು ಖಚಿತ.

    84 ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ ಇದುವರೆಗೆ 50 ಪಂದ್ಯದಲ್ಲಿ ಗೆದ್ದಿದ್ದು 31ರಲ್ಲಿ ಸೋತಿದೆ. ಇಲ್ಲಿ ಗೆಲುವಿನ ಪ್ರಮಾಣ ಶೇ.62ರಷ್ಟಿದೆ. ಮತ್ತೊಂದೆಡೆ ಸಿಂಹಳೀಯರು ಇದುವರೆಗೆ 96 ಟಿ20 ಪಂದ್ಯಗಳನ್ನಾಡಿದ್ದು 51ರಲ್ಲಿ ಗೆದ್ದು, 43 ಪಂದ್ಯಗಳಲ್ಲಿ ಸೋತಿದ್ದಾರೆ. ಶ್ರೀಲಂಕಾ ಗೆಲುವಿನ ಪ್ರಮಾಣ ಶೇ.54ರಷ್ಟಾಗುತ್ತದೆ.

    ಆಸೀಸ್ ಗೆ ಸ್ಪಿನ್ನರ್ ಗಳ ಕಾಟ: ಸದ್ಯ ಆಸೀಸ್ ತಂಡಕ್ಕೆ ತಲೆನೋವಾಗಿರೋದು ಭಾರತದ ಸ್ಪಿನ್ನರ್ ಗಳು. ಅದರಲ್ಲೂ ಕುಲದೀಪ್ ಯಾದವ್ ಹಾಗೂ ಚಾಹಲ್ ಆಸೀಸ್ ತಂಡಕ್ಕೆ ಭಾರೀ ಸವಾಲಾಗಿ ಪರಿಣಮಿಸಿದ್ದಾರೆ. ಎಷ್ಟೇ ಜಾಗ್ರತೆಯಿಂದ ಆಟವಾಡಿದರೂ ಇವರಿಬ್ಬರಿಗೆ ವಿಕೆಟ್ ಒಪ್ಪಿಸುತ್ತಿದ್ದಾರೆ.

     

    ಚಾಹಲ್ ಹಾಗೂ ಕುಲದೀಪ್ ಯಾದವ್ ಇದುವರೆಗೆ ಈ ಪ್ರವಾಸದಲ್ಲಿ 4 ಏಕದಿನ ಹಾಗೂ 1 ಟಿ20 ಪಂದ್ಯದಿಂದ ಒಟ್ಟು 16 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಕುಲದೀಪ್ 9 ಹಾಗೂ ಚಾಹಲ್ 7 ವಿಕೆಟ್ ಹಂಚಿಕೊಂಡಿದ್ದಾರೆ. ಗ್ಲೆನ್ ಮ್ಯಾಕ್ಸ್ ವೆಲ್ ಅಂತಾ ಚಾಹಲ್ ದಾಳಿಗೆ ಕಕ್ಕಾಬಿಕ್ಕಿಯಾಗಿದ್ದಾರೆ. ಯಾಕೆಂದರೆ ಇದುವರೆಗೆ ಒಟ್ಟು 4 ಬಾರಿ ಚಾಹಲ್ ಗೆ ವಿಕೆಟ್ ಒಪ್ಪಿಸಿ ಮ್ಯಾಕ್ಸ್ ವೆಲ್ ಪೆವಿಲಿಯನ್ ನತ್ತ ಮುಖ ಮಾಡಿದ್ದಾರೆ.

  • ಮ್ಯಾಕ್ಸ್ ವೆಲ್‍ಗೆ 4ನೇ ಬಾರಿ ದುಸ್ವಪ್ನವಾಗಿ ಕಾಡಿದ ಸ್ಪಿನ್ನರ್ ಚಾಹಲ್!

    ಮ್ಯಾಕ್ಸ್ ವೆಲ್‍ಗೆ 4ನೇ ಬಾರಿ ದುಸ್ವಪ್ನವಾಗಿ ಕಾಡಿದ ಸ್ಪಿನ್ನರ್ ಚಾಹಲ್!

    ಬೆಂಗಳೂರು: ಆಸೀಸ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಗೆ ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಪದೇ ಪದೇ ದುಸ್ವಪ್ನವಾಗಿ ಕಾಡುತ್ತಿದ್ದಾರೆ. ಅದರಲ್ಲೂ ಪ್ರಸ್ತುತ ನಡೆಯುತ್ತಿರುವ ಭಾರತ ಪ್ರವಾಸದಲ್ಲಿ ಮ್ಯಾಕ್ಸ್ ವೆಲ್ 4 ಬಾರಿ ಚಾಹಲ್ ಎಸೆತದ ಮೋಡಿಗೆ ಬಲಿಯಾಗಿದ್ದಾರೆ.

    ಇಂದು ಮ್ಯಾಕ್ಸ್ ವೆಲ್ ವಿಕೆಟ್ ಪಡೆದ ಬಳಿಕ ಚಾಹಲ್ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದಾರೆ. ನಿನ್ನೆ ನಡೆದ ಮೊದಲ ಟಿ20 ಪಂದ್ಯದ ಬಳಿಕ ಟ್ವಿಟ್ಟರ್ ನಲ್ಲಂತೂ ಚಾಹಲ್ – ಮ್ಯಾಕ್ಸ್ ವೆಲ್ ಬೇಟೆಯದ್ದೇ ಮಾತು.

    ಅಂಕಿ ಅಂಶಗಳನ್ನು ನೋಡೋದಾದ್ರೆ ಮೊದಲ ಏಕದಿನ ಪಂದ್ಯದಲ್ಲಿ 39 ರನ್ ಗಳಿಸಿದ್ದಾಗ ಮ್ಯಾಕ್ಸ್ ವೆಲ್ ಹಾರ್ದಿಕ್ ಪಾಂಡ್ಯಾಗೆ ಕ್ಯಾಚ್ ನೀಡಿ ಔಟಾದ್ರು. 2ನೇ ಪಂದ್ಯದಲ್ಲಿ 14 ರನ್ ಗಳಿಸಿದ್ದಾಗ ಚಾಹಲ್ ಬೌಲಿಂಗಲ್ಲಿ ಕೀಪರ್ ಧೋನಿ ಸ್ಟಂಪ್ ಮಾಡಿದ್ರು. 3ನೇ ಪಂದ್ಯದಲ್ಲಿ 5 ರನ್ ಗಳಿಸಿದ್ದಾಗ ಮತ್ತೆ ಧೋನಿ ಸ್ಟಂಪ್ ಮಾಡಿದ್ರು. ಶನಿವಾರ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಬೂಮ್ರಾಗೆ ಕ್ಯಾಚ್ ನೀಡಿ 17 ರನ್ ಗಳಿಸಿ ಮ್ಯಾಕ್ಸ್ ವೆಲ್ ಔಟಾದರು.

    ಇಂದಿನ ಪಂದ್ಯದ 7ನೇ ಓವರ್ ನಲ್ಲಿ ಮ್ಯಾಕ್ಸ್ ವೆಲ್ ಹೊಡೆದ ಶಾಟ್, ಶಾರ್ಟ್ ಮಿಡ್ ವಿಕೆಟ್ ನಲ್ಲಿ ಫೀಲ್ಡ್ ಮಾಡುತ್ತಿದ್ದ ಜಸ್ಪ್ರೀತ್ ಬೂಮ್ರಾ ಕೈಸೇರಿತ್ತು. ಇದುವರೆಗೆ ಒಟ್ಟು 8 ಇನ್ನಿಂಗ್ಸ್ ಗಳಲ್ಲಿ 6 ಬಾರಿ ಚಾಹಲ್ ಸ್ಪಿನ್ ಕೈಚಳಕಕ್ಕೆ ಮ್ಯಾಕ್ಸ್ ವೆಲ್ ಔಟಾಗಿದ್ದಾರೆ. ಇತ್ತ ಮ್ಯಾಕ್ಸ್ ವೆಲ್ ಔಟಾಗುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಚಾಹಲ್ ಸ್ಟಾರ್ ಆಗಿದ್ದಾರೆ. ಕೆಲವರಂತೂ ಮ್ಯಾಕ್ಸ್ ವೆಲ್ ಔಟಾದಾಗ ಚಾಹಲ್ ನೀಡುವ ಸ್ಮೈಲ್ ಬಗ್ಗೆಯೇ ಬರೆಯುತ್ತಿದ್ದಾರೆ.