Tag: ಚಾಲನೆ

  • ಸ್ಥಳೀಯ ಶಾಸಕರು ಅನರ್ಹ, ಸಚಿವರಿಲ್ಲ – ದಸರಾ ಗಜಪಯಣ ಚಾಲನೆಗೆ ಶುರುವಾಯ್ತು ಗೊಂದಲ

    ಸ್ಥಳೀಯ ಶಾಸಕರು ಅನರ್ಹ, ಸಚಿವರಿಲ್ಲ – ದಸರಾ ಗಜಪಯಣ ಚಾಲನೆಗೆ ಶುರುವಾಯ್ತು ಗೊಂದಲ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2019ರ ದಸರಾ ಗಜಪಯಣಕ್ಕೆ ನಾಳೆಯಿಂದ ಚಾಲನೆ ನೀಡಬೇಕಿದೆ. ಆದರೆ ಒಂದೆಡೆ ಜಿಲ್ಲೆಯ ಸ್ಥಳೀಯ ಶಾಸಕರು ಅನರ್ಹಗೊಂಡಿದ್ದಾರೆ, ಇನ್ನೊಂದು ಕಡೆ ಈ ಭಾಗದಲ್ಲಿ ಯಾವ ಸಚಿವರು ಇಲ್ಲ. ಹೀಗಾಗಿ ದಸರಾ ಗಜಪಯಣಕ್ಕೆ ಸ್ವಾಗತ, ಚಾಲನೆ ನೀಡುವವರು ಯಾರು ಎಂಬ ಪ್ರಶ್ನೆ ಹುಟ್ಟುಕೊಂಡಿದೆ.

    ಸಾಂಪ್ರದಾಯಿಕವಾಗಿ ಪ್ರತಿ ವರ್ಷ ಜಿಲ್ಲಾ ಉಸ್ತುವಾರಿ ಸಚಿವರು ಪೂಜೆ ಸಲ್ಲಿಸಿ, ಗಜಪಯಣಕ್ಕೆ ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ದಸರಾ ಗಜಪಯಣಕ್ಕೆ ಚಾಲನೆ ನೀಡುವ ವಿಚಾರಕ್ಕೆ ಗೊಂದಲ ಶುರುವಾಗಿದೆ. ಪ್ರತಿ ವರ್ಷದಂತೆ ಈ ವರ್ಷ ದಸರಾ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಅನುಮಾನ ಹುಟ್ಟುಕೊಂಡಿದೆ. ಯಾಕೆಂದರೆ ಪ್ರತಿ ಬಾರಿ ದಸರಾ ಗಜಪಯಣಕ್ಕೆ ಉಸ್ತವಾರಿ ಸಚಿವರು ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ಜಿಲ್ಲೆಯಿಂದ ಯಾವ ನಾಯಕರು ಸಚಿವರಾಗಿಲ್ಲ. ಅಲ್ಲದೆ ಸ್ಥಳೀಯ ಶಾಸಕರ ಬಳಿ ಚಾಲನೆ ಕೊಡಿಸೋಣ ಎಂದರೆ ಶಾಸಕರು ಕೂಡ ಅನರ್ಹರಾಗಿದ್ದಾರೆ. ಹೀಗಾಗಿ ಗಜಪಯಣಕ್ಕೆ ಚಾಲನೆ ನೀಡುವವರು ಯಾರು ಎಂಬ ಗೊಂದಲ ಎದುರಾಗಿದೆ.

    ಪದ್ಧತಿ ಪ್ರಕಾರ ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಬಳಿ ಗಜಪಯಣಕ್ಕೆ ಚಾಲನೆ ನೀಡಲಾಗುತ್ತದೆ. ಶಾಸಕರು, ಸಚಿವರು ಇಲ್ಲದ ಕಾರಣಕ್ಕೆ ಈ ಬಾರಿ ಹೇಗೆ ಗಜಪಯಣಕ್ಕೆ ಚಾಲನೆ ನೀಡಬೇಕು? ಸರ್ಕಾರ ಇದ್ದರೂ ಅಧಿಕಾರಿಗಳೇ ಚಾಲನೆ ಕೊಡಬೇಕೇ? ಅಥವಾ ಬೇರೆ ಯಾವ ವ್ಯವಸ್ಥೆ ಮಾಡಬೇಕು ಎಂಬ ಚರ್ಚೆ ಆರಂಭವಾಗಿದೆ.

  • ತುಂಗಾರತಿಯೊಂದಿಗೆ ಹಂಪಿ ಉತ್ಸವಕ್ಕೆ ಅಧಿಕೃತ ಚಾಲನೆ

    ತುಂಗಾರತಿಯೊಂದಿಗೆ ಹಂಪಿ ಉತ್ಸವಕ್ಕೆ ಅಧಿಕೃತ ಚಾಲನೆ

    ಬಳ್ಳಾರಿ: ಐತಿಹಾಸಿಕ ಹಂಪಿ ಉತ್ಸವಕ್ಕೆ ಇನ್ನೇನು ಕೆಲ ದಿನಗಳು ಬಾಕಿ ಇರುವಂತೆಯೇ, ಹಂಪಿ ನದಿ ತೀರದಲ್ಲಿ ತುಂಗಾರತಿ ಮಾಡುವ ಮೂಲಕ ಹಂಪಿ ಉತ್ಸವಕ್ಕೆ ಸಚಿವ ಡಿ.ಕೆ. ಶಿವಕುಮಾರ್ ಅಧಿಕೃತ ಚಾಲನೆ ನೀಡಿದರು. ವಿಜಯನಗರ ಪರಂಪರೆಯನ್ನು ಮುಂದುವರಿಸುವ ತುಂಗಾರತಿ ಕಾರ್ಯಕ್ರಮವನ್ನು ನದಿತಟದಲ್ಲಿ ನೋಡಲು ಜನಸಾಗರವೇ ಹರಿದು ಬಂದಿತ್ತು.

    ಮಾರ್ಚ್ 2 ಮತ್ತು 3ರಂದು ನಡೆಯಲಿರುವ ಐತಿಹಾಸಿಕ ಹಂಪಿ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಉಲ್ಲೇಖಸಿದಂತೆ ಹಂಪಿ ದಸರಾ ಉತ್ಸವದ ವೇಳೆ ಈ ರೀತಿ ತುಂಗಾರತಿ ಮಾಡುವ ಮೂಲಕ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದರಂತೆ ಆ ಪರಂಪರೆಯನ್ನು ಮುಂದುವರಿಸೋ ನಿಟ್ಟಿನಲ್ಲಿ ಇದೀಗ ಹಂಪಿ ಉತ್ಸವದ ವೇಳೆ ತುಂಗಾರತಿ ಮಾಡುವ ಪರಂಪರೆಯನ್ನು ಹುಟ್ಟು ಹಾಕಲಾಗಿದೆ. ಅಲ್ಲದೆ ತುಂಗಾರತಿ ಮೂಲಕವೇ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಸಚಿವ ಡಿಕೆ.ಶಿವಕುಮಾರ್ ಹಿಂದಿನ ಪರಂಪರೆಯನ್ನು ನಮ್ಮ ಸರ್ಕಾರ ಮುಂದುವರಿಸುತ್ತಿದೆ. ಎಂ.ಪಿ. ಪ್ರಕಾಶ್ ಅವರ ಆಶಯದಂತೆ ಪ್ರತಿ ವರ್ಷ ಅದ್ಧೂರಿಯಾಗಿ ಉತ್ಸವ ನಡೆಯುತ್ತದೆ ಎಂದರು.

    ದಿವಂಗತ ಎಂ.ಪಿ. ಪ್ರಕಾಶ್ ಅವರ ಕನಸಿನ ಕೂಸೆಂದು ಬಿಂಬಿಸಲಾಗುವ ಹಂಪಿ ಉತ್ಸವವನ್ನು ಪ್ರತಿ ವರ್ಷ ನವೆಂಬರ್ 3, 4 ಮತ್ತು 5ರಂದು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಉಪಚುನಾವಣೆ ಮತ್ತು ಬರದ ನೆಪವೊಡ್ಡಿ ಉತ್ಸವ ರದ್ದು ಮಾಡಲು ಯೋಚನೆ ಮಾಡಲಾಗಿತ್ತು. ಆದರೆ ಕಲಾವಿದರ ಮತ್ತು ಹೋರಾಟಗಾರರ ಪ್ರತಿಭಟನೆಯಿಂದಾಗಿ ಇದೀಗ ಎರಡು ದಿನಗಳ ಕಾಲ ಸರಳವಾಗಿ ಆಚರಿಸಲಾಗುತ್ತಿದೆ. ಈ ಬಾರಿ ಉತ್ಸವದ ಉದ್ಘಾಟನೆಗೆ ನಟ ದರ್ಶನ್ ಮುಖ್ಯ ಅತಿಥಿಯಾಗಿ ಬಂದು ಉತ್ಸವವನ್ನು ರಂಗೇರಿಸಿದರೆ, ಗಾಯಕ ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ಕಾರ್ಯಕ್ರಮಗಳಲ್ಲಿ ಮತ್ತಷ್ಟು ಮೆರುಗನ್ನು ತರಲಿದ್ದಾರೆ.

    ಹಲವು ಅಡ್ಡಿ ಆತಂಕಗಳ ನಿವಾರಣೆ ಬಳಿಕ ಇದೀಗ ಹಂಪಿ ಉತ್ಸವ ನಡೆಯಲು ಸಕಲ ಸಿದ್ಧತೆಯನ್ನು ಮಾಡಲಾಗಿದ್ದು, ಇಂದು ಅಧಿಕೃತ ಚಾಲನೆ ನೀಡಲಾಗಿದೆ. ಹಂಪಿ ಬೈಸ್ಕೈ, ಪಾರಂಪರಿಕ ನಡಿಗೆ, ಕುಸ್ತಿ, ಕುದುರೆ ಓಟ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಈ ಬಾರಿ ವಿಶೇಷವಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಗವಿಸಿದ್ದೇಶ್ವರ ಜಾತ್ರೆಗೆ ಅದ್ಧೂರಿ ಚಾಲನೆ

    ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಗವಿಸಿದ್ದೇಶ್ವರ ಜಾತ್ರೆಗೆ ಅದ್ಧೂರಿ ಚಾಲನೆ

    ಕೊಪ್ಪಳ: ಮೂರು ದಿನ ನಡೆಯುವ ದಕ್ಷಿಣ ಭಾರತದ ಕುಂಭ ಮೇಳ ಎಂದು ಖ್ಯಾತಿ ಪಡೆದಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ.

    ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಕೆನಡಾ ಮೂಲದ ಮ್ಯಾಥ್ಯೂ ಫೌರ್ಟಿಯರ್ ದಂಪತಿ ಧ್ವಜಾರೋಹಣ ಮಾಡುವ ಮೂಲಕ ಈ ಬಾರಿಯ ಜಾತ್ರೆಗೆ ಚಾಲನೆ ನೀಡಿದ್ದಾರೆ. ಮ್ಯಾಥ್ಯೂ ಫೌರ್ಟಿಯರ್ ದಂಪತಿ ಭಾರತೀಯ ಸಂಸ್ಕೃತಿಗೆ ಮಾರು ಹೋಗಿ ಧಾರವಾಡ ಜಿಲ್ಲೆಯ ಕಲ್ಕೇರಿ ಗ್ರಾಮದಲ್ಲಿ ಸಂಗೀತ ಶಾಲೆ ಆರಂಭಿಸಿ, ಬಡ ಮಕ್ಕಳಿಗೆ ಉಚಿತ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.

    ರಥೋತ್ಸವದ ಪೂರ್ವದಲ್ಲಿ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನಲೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ರಥೋತ್ಸವದ ಪೂರ್ವದಲ್ಲಿ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಸಿದ್ದಗಂಗಾ ಶ್ರೀಗಳ ಕುರಿತು ಮಾತನಾಡಿದರು. ಬಳಿಕ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಸಿದ್ದಗಂಗಾ ಶ್ರೀಗಳಿಗೆ ಸಂತಾಪ ಸೂಚಿಸಲಾಯಿತು. ಈ ವೇಳೆ ಸುಮಾರು 4 ಲಕ್ಷಕ್ಕೂ ಅಧಿಕ ಭಕ್ತರು ಮೌನಾಚರಣೆ ಮಾಡುವ ಮೂಲಕ ಸಿದ್ದಗಂಗಾ ಶ್ರೀಗಳಿಗೆ ಗೌರವ ಸೂಚಿಸಿದರು.

    ನಾಡಿನ ಹಲವು ಜನಪ್ರತಿನಿಧಿಗಳು, ಸಾಧಕರು ಪಾಲ್ಗೊಳ್ಳುವ ಮೂಲಕ ಜಾತ್ರೆಗೆ ವಿಶೇಷ ಮೆರಗು ತಂದರು. ಈ ವೇಳೆ ಜಾತ್ರೆಯಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಸಾಧನೆಗೈದ ಕ್ಯಾಪ್ಟನ್ ಗೋಪಿನಾಥನ್ ಪಾಲ್ಗೊಂಡಿದ್ದರು. ಮಂಗಳವಾರ ಗವಿಸಿದ್ದೇಶ್ವರ ಜಾತ್ರೆಗೆ ಚಾಲನೆ ದೊರಕಿದ್ದು, ಮೂರು ದಿನಗಳ ಕಾಲ ಶ್ರೀಮಠದ ಆವರಣದಲ್ಲಿ ಕಲೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆ ಜೊತೆಗೆ ಸಮಾಜಮುಖಿ ಚಿಂತನೆಗಳ ಚಿತ್ತಾರ ಅನಾವರಣಗೊಳ್ಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಆರ್‌ಎಸ್‌ ನೀರಿನಲ್ಲಿ ಮೋಜು-ಮಸ್ತಿ: ಭದ್ರತೆ ಲೆಕ್ಕಿಸದೆ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿದ ಉದ್ಯಮಿ

    ಕೆಆರ್‌ಎಸ್‌ ನೀರಿನಲ್ಲಿ ಮೋಜು-ಮಸ್ತಿ: ಭದ್ರತೆ ಲೆಕ್ಕಿಸದೆ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿದ ಉದ್ಯಮಿ

    ಮಂಡ್ಯ: ಭದ್ರತೆ ಲೆಕ್ಕಿಸದೆ ಮೈಸೂರಿನ ಉದ್ಯಮಿಯೊಬ್ಬರು ಕೆಆರ್‌ಎಸ್‌ ನೀರಿನಲ್ಲಿ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿ ಮೋಜು-ಮಸ್ತಿ ಮಾಡಿದ್ದಾರೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್‌ ಡ್ಯಾಂನ ಹಿನ್ನೀರಲ್ಲಿ ಉದ್ಯಮಿ ವಿಕ್ರಂ ಗುಪ್ತಾ ತಮ್ಮ ಪುಂಡಾಟ ಮೆರೆದಿದ್ದಾರೆ. ಭದ್ರತೆ ಲೆಕ್ಕಿಸದೆ ವಿಕ್ರಂ ಅಣೆಕಟ್ಟಿನ ನೀರಲ್ಲಿ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವಿಕ್ರಂ ಮೈಸೂರಿನ ಉದ್ಯಮಿಯಾಗಿದ್ದು, ಕೆಆರ್‌ಎಸ್‌ನಲ್ಲೂ ಸ್ವಂತ ಮನೆ ಹೊಂದಿದ್ದಾರೆ. ಕೆಆರ್‌ಎಸ್‌ ಹಿನ್ನೀರಿನಲ್ಲಿ ತನ್ನ ಎಸ್‍ಯುವಿ ವೆಹಿಕಲ್‍ನಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ಇವರ ರೇಸಿಂಗ್ ಅವತಾರ ನೋಡಿಯೂ ಡ್ಯಾಂನಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ಕೂಡ ಸೈಲೆಂಟ್ ಆಗಿದ್ದರು.

    ಈ ಬಗ್ಗೆ ಕಾವೇರಿ ನೀರಾವರಿ ನಿಗಮ ಎಇ ಬಸವರಾಜೇಗೌಡ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, “ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು 2 ದಿನ ಕೋಲ್ಕತ್ತಾಗೆ ಕೆಲಸಕ್ಕೆಂದು ಹೋಗಿ ಇಂದು ಬೆಳಗ್ಗೆ ಬಂದೆ. ಹಿನ್ನೀರಿನಲ್ಲಿ ಸಾಕಷ್ಟು ರಸ್ತೆಗಳು ಇರುವ ಕಾರಣ ಜನಗಳು ಬರುತ್ತಾರೆ. ಈ ರೀತಿ ಮಾಡುವವರ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಬಗ್ಗೆ ವೀಕ್ಷಿಸಿ ನಾವು ಆ ವ್ಯಕ್ತಿ ವಿರುದ್ಧ ಕ್ರಮಗೈಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

    ಕೆಆರ್‌ಎಸ್‌ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರಿದ್ದು, ಸಾಮಾನ್ಯ ಜನರನ್ನು ಅಣೆಕಟ್ಟು ಬಳಿ ಬಿಡಲು ಭದ್ರತಾ ಸಿಬ್ಬಂದಿ ನಿರಾಕರಿಸುತ್ತಾರೆ. ಆದ್ರೆ ಇವರಿಗೆ ಯಾಕೆ ಅವಕಾಶ ನೀಡಿದ್ದೀರಿ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯ ಇಬ್ಬಗೆ ನೀತಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

    ಸಾಮಾನ್ಯ ಜನರನ್ನು ಅಣೆಕಟ್ಟು ಬಳಿ ಬಿಡದ ಭದ್ರತಾ ಸಿಬ್ಬಂದಿ ಹಾಗೂ ಉದ್ಯಮಿ ನಡೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ…

    https://www.youtube.com/watch?v=jujoFIfUf8w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಸಿ ವ್ಯಾಲಿ ಯೋಜನೆಯ 2ನೇ ಹಂತಕ್ಕೆ ಚಾಲನೆ – ಕಾರ್ಯಕ್ರಮದ ವೇದಿಕೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಬೇಸರ ಮಾತು

    ಕೆಸಿ ವ್ಯಾಲಿ ಯೋಜನೆಯ 2ನೇ ಹಂತಕ್ಕೆ ಚಾಲನೆ – ಕಾರ್ಯಕ್ರಮದ ವೇದಿಕೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಬೇಸರ ಮಾತು

    ಕೋಲಾರ: ಬಯಲು ಸೀಮೆ ಜಿಲ್ಲೆಯಾದ ಕೋಲಾರದ 126 ಕೆರೆಗಳಿಗೆ ಕೋರಮಂಗಲ – ಚಲ್ಲಘಟ್ಟ ಸಂಸ್ಕರಿಸಿದ ತ್ಯಾಜ್ಯ ನೀರನ್ನು ತುಂಬಿಸುವ ಕೆ.ಸಿ.ವ್ಯಾಲಿ ಯೋಜನೆಯ 2ನೇ ಹಂತಕ್ಕೆ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದರು. ಈ ವೇಳೆ ಯೋಜನೆ ವಿರೋಧಿಸಿ ಕಣ್ಣೀರು ತರಿಸಿ, ನಮ್ಮ ಬದುಕಿಗೆ ಬೆಂಕಿ ಹಾಕಿ ಗೋಳಾಡಿಸಿದವರಿಗೆ ದೇವರ ಒಳ್ಳೆಯದರು ಮಾಡಲಿ ಎಂದು ವಿಧಾನ ಸಭಾ ಸ್ಪೀಕರ್ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

    ಸುಮಾರು 1,400 ಕೋಟಿ ರೂಪಾಯಿ ವೆಚ್ಚದ ಕೋಲಾರ ಜಿಲ್ಲೆಯ 136 ಕೆರೆಗಳನ್ನು ತುಂಬಿಸುವ ಯೋಜನೆಗೆ ಅಂದಿನ ಸಿಎಂ ಸಿದ್ದರಾಮಯ್ಯ ಸರ್ಕಾರ ಬೆಂಗಳೂರಿನ ತ್ಯಾಜ್ಯ ನೀರನ್ನು ಎರಡು ಹಂತಗಳಲ್ಲಿ ಸಂಸ್ಕರಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಸದ್ಯ ಹಲವು ಅಡೆತಡೆಗಳ ಮಧ್ಯೆ 2ನೇ ಹಂತಕ್ಕೆ ಚಾಲನೆ ನೀಡುವ ಮೂಲಕ ಜಿಲ್ಲೆಯ ಕೆರೆಗಳಿಗೆ ಹರಿಸಿದೆ.

    ಬೆಳ್ಳಂದೂರು ಕೆರೆಯಿಂದ ಪೈಪ್ ಲೈನ್ ಮೂಲಕ ಲಕ್ಷ್ಮೀಸಾಗರ, ನರಸಾಪುರ ಕೆರೆಗೆ ಸದ್ಯ 140 ಎಂಎಲ್‍ಡಿ ನೀರು ಹರಿಸಲಾಗುತಿದೆ. ಕೆರೆಗೆ ಹರಿದು ಬಂದಿರುವ ಕೆ.ಸಿ.ವ್ಯಾಲಿ ನೀರನ್ನು ಇಲ್ಲಿಂದ ಜಿಲ್ಲೆಯ ಮಾಲೂರು, ಶ್ರೀನಿವಾಸಪುರ, ಬಂಗಾರಪೇಟೆ ಹಾಗೂ ಮುಳಬಾಗಲು ತಾಲೂಕಿನ ಕೆರೆಗಳಿಗೆ ಪಂಪ್ ಮಾಡುವ ಮಾಡುವ 2ನೇ ಹಂತದ ಯೋಜನೆಗೆ ಇಂದು ಚಾಲನೆ ನೀಡಲಾಯಿತು.

    ಗೊಂದಲ ಗೂಡದ ಕಾರ್ಯಕ್ರಮ: ಯೋಜನೆಗೆ ಮೊದಲಿನಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಕಂಟಕಗಳು ಎದುರಾಗುತ್ತಿದ್ದವು. ಇಂದಿನ ಕಾರ್ಯಕ್ರಮವೂ ಕಾಂಗ್ರೆಸ್ ಪಕ್ಷದ ಒಳಗಿನ ಗುಂಪುಗಾರಿಕೆಯಿಂದ ನಗೆ ಪಾಟಲಿಗೀಡಾಗಿತ್ತು. ಮೊದಲಿಗೆ ಯೋಜನೆಗೆ ಸಹಕರಿಸಿದ ಸಚಿವರು, ಸ್ಪೀಕರ್ ಹೆಸರಿನ ಸ್ವಾಗತ ಬ್ಯಾನರ್ ಅಳವಡಿಸಲಾಗಿತ್ತು. ಗಮನಿಸಿದ ಕೋಲಾರ ಸಂಸದ ಮುನಿಯಪ್ಪ ಬೆಂಬಲಿಗರು ಸಂಸದರ ಹೆಸರು ಕೈ ಬಿಟ್ಟಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಆದರೆ ಈ ವೇಳೆ ಬ್ಯಾನರ್ ತೆರವು ಮಾಡಿ ಅಸಮಾಧಾನಕ್ಕೆ ತೆರೆ ಎಳೆಯಲಾಯಿತು. ಆದರೆ ಕಾರ್ಯಕ್ರಮಕ್ಕೆ ಆಹ್ವಾನವೇ ನೀಡಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಸ್ಥಳದಲ್ಲಿ ಹೈಡ್ರಾಮಾ ಸೃಷ್ಠಿ ಮಾಡಿದರು.

    ಕಾರ್ಯಕ್ರಮದ ವೇದಿಕೆ ಸ್ಥಳದಲ್ಲೇ ಜಿಲ್ಲಾಡಳಿತದ ವಿರುದ್ಧ ಸದಸ್ಯರು ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಚಿವರು, ಸಂಸದ ಸದಸ್ಯರ ಮನವೊಲಿಸಿ ವೇದಿಕೆಗೆ ಕರೆತಂದರು. ಬಳಿಕ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಪ್ರತಿಭಟನಾಕಾರರು, ಯೋಜನೆಗೆ ವಿರೋಧಿಸಿದವರನ್ನ ಒಳಗೊಂಡಂತೆ ಯೋಜನೆಗೆ ಯಾರೆಲ್ಲ ಅಡಚಣೆ, ತೊಂದರೆಗಳನ್ನು ನೀಡಿದರೋ ಅವರ ಪಾದಗಳಿಗೆ ನಮಸ್ಕಾರ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿ ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಸವನಗುಡಿಯಲ್ಲಿ ಶುರುವಾಯ್ತು ಸಂಭ್ರಮದ ಕಡಲೆಕಾಯಿ ಪರಿಷೆ

    ಬಸವನಗುಡಿಯಲ್ಲಿ ಶುರುವಾಯ್ತು ಸಂಭ್ರಮದ ಕಡಲೆಕಾಯಿ ಪರಿಷೆ

    ಬೆಂಗಳೂರು: ಕಾರ್ತಿಕ ಮಾಸದ ಕಡೆಯ ಸೋಮವಾರವಾದ ಇಂದು ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ವಿದ್ಯುಕ್ತವಾಗಿ ಚಾಲನೆ ದೊರೆತಿದೆ.

    ಹೌದು, ರಾಜಧಾನಿಯ ಪ್ರಮುಖ ಹಬ್ಬಗಳಲ್ಲೊಂದಾದ ಕಡಲೆಕಾಯಿ ಪರಿಷೆಗೆ ಸೋಮವಾರ ಚಾಲನೆ ದೊರೆತಿದೆ. ಬಿಬಿಎಂಪಿ ಮಹಾಪೌರರಾದ ಗಂಗಾಬಿಕೆಯವರು ಬೆಳಗ್ಗೆ 10 ಗಂಟೆಗೆ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮೂಲಕ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದ್ದಾರೆ.

    ಮುಂಜಾನೆಯಿಂದಲೇ ಭಕ್ತರು ಬಸವನಗುಡಿಯ ದೊಡ್ಡ ಗಣೇಶ ಹಾಗೂ ದೊಡ್ಡ ಬಸವಣ್ಣನ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಭಕ್ತರು ಕಡಲೆಕಾಯಿಗಳನ್ನು ದೇವರಿಗೆ ಅರ್ಪಿಸುವ ಮೂಲಕ ತಮ್ಮ ಕೋರಿಕೆಯನ್ನು ಬೇಡಿಕೊಂಡಿದ್ದಾರೆ. ಅಲ್ಲದೇ ಗಣೇಶನಿಗೆ ಬೆಣ್ಣೆ ಅಲಂಕಾರದೊಂದಿಗೆ ಕಡಲೆಕಾಯಿ ಅಲಂಕಾರ ಮಾಡುವ ಮೂಲಕ ವಿಶೇಷ ಪೂಜೆ ನೆರವೇರಿಸಲಾಗಿದೆ.

    ಕಡಲೆಕಾಯಿ ಪರಿಷೆಗೆ ಸೇಲಂ, ಯಶವಂತಪುರ, ದೊಡ್ಡಬಳ್ಳಾಪುರ, ಮೈಸರೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕಡಲೆಕಾಯಿ ವ್ಯಾಪಾರಿಗಳು ಆಗಮಿಸಿದ್ದಾರೆ. ಈ ಬಾರಿ ಹಿಂದಿನ ವರ್ಷಕ್ಕಿಂತಲೂ ಅತಿ ಹೆಚ್ಚು ಕಡಲೆಕಾಯಿ ಸ್ಟಾಲ್ ಗಳು ತಲೆ ಎತ್ತಿದೆ.

    ಪರಿಷೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೇಯರ್ ಗಂಗಾಬಿಕೆ, ಪ್ರತಿ ವರ್ಷ ಕಡಲೆಕಾಯಿ ಪರಿಷೆ ನಡೆಯುವದರಿಂದ ಬಸವನಗುಡಿಗೆ ಗ್ರಾಮೀಣ ಸೊಗಡು ನೀಡುತ್ತದೆ. ಪರಿಷೆಗೆ ಬರುವ ಪ್ರತಿಯೊಬ್ಬರು ಹಾಗೂ ವ್ಯಾಪಾರಸ್ಥರು ಪ್ಲಾಸ್ಟಿಕ್ ಕವರ್‍ಗಳನ್ನು ಬಳಸಬಾರದು. ಸ್ವಚ್ಛ ಬೆಂಗಳೂರಿಗೆ ಕಡಲೆಕಾಯಿ ಪರಿಷೆ ಅಡಿಪಾಯವಾಗಬೇಕು. ಕಳೆದ ವರ್ಷದ ಪರಿಷೆಯಲ್ಲಿ ದಿವಂಗತ ಅನಂತ ಕುಮಾರ್ ಅವರು ಪಾಲ್ಗೊಂಡಿದ್ದರು. ಆದರೆ ಈ ಬಾರಿ ಅವರು ಇಲ್ಲ ಅನ್ನುವುದು ತುಂಬಾ ದುಃಖಕರ ವಿಚಾರ. ಅವರು ಈ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ಕನಸನ್ನು ನನಸಾಗಿಸುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಲಿದೆ ಎಂದು ಹೇಳಿದ್ರು.

    ಕಡಲೆಕಾಯಿ ಪರಿಷೆ ಉದ್ಘಾಟನಾ ಕಾರ್ಯಕ್ರಮಕ್ಕೆ ಮೇಯರ್ ಗಂಗಾಂಬಿಕೆ, ಶಾಸಕ ಗರುಡಾಚಾರ್, ವಿಧಾನ ಪರಿಷತ್ ಸದಸ್ಯ ಸಿ.ಶರವಣ, ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯ ಸರ್ಕಾರದ ಮಹತ್ವದ ‘ಬಡವರು ಬಂಧು’ ಯೋಜನೆಗೆ ಚಾಲನೆ

    ರಾಜ್ಯ ಸರ್ಕಾರದ ಮಹತ್ವದ ‘ಬಡವರು ಬಂಧು’ ಯೋಜನೆಗೆ ಚಾಲನೆ

    ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವ ಮೈತ್ರಿ ಸರ್ಕಾರದ ಮಹತ್ವದ ‘ಬಡವರ ಬಂಧು’ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇಂದು ಚಾಲನೆ ನೀಡಲಿದ್ದಾರೆ.

    ಗುರುವಾರ ಬೆಳಗ್ಗೆ 11 ಗಂಟೆಗೆ ನಗರದ ಯಶವಂತಪುರದ ಎಪಿಎಂಸಿ ಯಾರ್ಡ್ ನಲ್ಲಿ ಮುಖ್ಯಮಂತ್ರಿಗಳು ‘ಬಡವರ ಬಂಧು’ ಯೋಜನೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರು ನಗರವೊಂದರಲ್ಲೇ ಮೊದಲ ದಿನವೇ 53 ಸಾವಿರ ವರ್ತಕರಿಗೆ ನೆರವು ನೀಡಲಾಗುವುದು. ಈಗಾಗಲೇ ರಾಜ್ಯಾದ್ಯಂತ ಬಡವರ ಬಂಧು ಯೋಜನೆಯಡಿ ಸಾಲಕ್ಕಾಗಿ ಭಾರಿ ಬೇಡಿಕೆ ಬಂದಿದೆ. ಈ ಯೋಜನೆಯಿಂದ ಖಾಸಗಿ ಲೇವಾದೇವಿದಾರರ ಮೀಟರ್ ಬಡ್ಡಿ ದಂಧೆಯ ಮೇಲೆ ಕಡಿವಾಣ ಬೀಳುತ್ತದೆ ಎಂದು ಹೇಳಲಾಗುತ್ತಿದೆ.

    ಇದಲ್ಲದೇ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬಡವರ ಬಂಧು ಯೋಜನೆಗೆ ಒಂದೊಂದು ನೋಡಲ್ ಬ್ಯಾಂಕ್ ಗುರುತಿಸಲಾಗುತ್ತದೆ. ಈ ಬ್ಯಾಂಕುಗಳು ಆಯಾ ಜಿಲ್ಲೆಗಳಲ್ಲಿನ ಸಾಲ ಸೌಲಭ್ಯದ ಬ್ಯಾಂಕ್‍ಗಳನ್ನು ಸೂಚಿಸುತ್ತವೆ. ಬೆಂಗಳೂರಿನಲ್ಲಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್, ಜನತಾ ಕೋ-ಆಪರೇಟಿವ್ ಬ್ಯಾಂಕ್ ಹಾಗೂ ಬೆಂಗಳೂರು ಡಿಸಿಸಿ ಬ್ಯಾಂಕ್‍ಗಳನ್ನು ನೋಡಲ್ ಬ್ಯಾಂಕ್‍ಗಳಾಗಿ ಗುರುತಿಸಲಾಗಿದೆ. ಈ ಬ್ಯಾಂಕ್‍ಗಳು ಮೊಬೈಲ್ ಸರ್ವಿಸ್ ವ್ಯಾನ್‍ಗಳನ್ನು ಹೊಂದಲಿವೆ. ಸಣ್ಣ ವರ್ತಕರು ಬೆಳಗ್ಗೆ ಸಾಲ ಪಡೆದು ಸಂಜೆ ವಾಪಸ್ ಮಾಡಬಹುದಾಗಿದೆ.

    ಏನಿದು ಬಡವರ ಬಂಧು ಯೋಜನೆ?
    ವರ್ತಕರಿಗೆ ಶೂನ್ಯ ಬಡ್ಡಿದರದಲ್ಲಿ 10 ಸಾವಿರ ರೂ.ವರೆಗೆ ಸಾಲ ನೀಡುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಮೀಟರ್ ಬಡ್ಡಿ ದಂಧೆಗೆ ಶಾಶ್ವತ ಪರಿಹಾರ ನೀಡುವ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಬಡ್ಡಿ, ಸಾಲದ ಶೂಲಕ್ಕೆ ಸಿಲುಕಿರುವ ಜನರ ನೆರವಿಗೆ ಬರಲು ‘ಬಡವರ ಬಂಧು’ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಇಂದ ಬೀದಿ ಬದಿ ವ್ಯಾಪಾರಿಗಳಿಗೆ ಇನ್ನು ಮುಂದೆ ಬಡ್ಡಿಯೇ ಇಲ್ಲದ ದಿನದ ಸಾಲ ಲಭ್ಯವಾಗಲಿದೆ. ಇದನ್ನೂ ಓದಿ: ಬೀದಿ ಬದಿ ವ್ಯಾಪಾರಿಗಳಿಗೆ ಇನ್ಮುಂದೆ ಸಿಗಲಿದೆ ಬಡ್ಡಿಯೇ ಇಲ್ಲದ ದಿನದ ಸಾಲ: ಏನಿದು ಬಡವರ ಬಂಧು ಯೋಜನೆ? ಯಾರು ಅರ್ಹರು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮುಂಬದಿಯ ಎಡಭಾಗದ ಟೈರ್ ಇಲ್ಲದೇ ಕಾರು ಚಾಲನೆ- ಎಲ್ಲರಿಗೂ ಭೀತಿ ಹುಟ್ಟಿಸಿದ ಅಪರಿಚಿತ

    ಮುಂಬದಿಯ ಎಡಭಾಗದ ಟೈರ್ ಇಲ್ಲದೇ ಕಾರು ಚಾಲನೆ- ಎಲ್ಲರಿಗೂ ಭೀತಿ ಹುಟ್ಟಿಸಿದ ಅಪರಿಚಿತ

    ಬೆಂಗಳೂರು: ಅಪರಿಚಿತನೊಬ್ಬ ಎರ್ರಾಬಿರ್ರಿ ಕಾರು ಚಲಾಯಿಸಿ ಕೆಲಕಾಲ ಎಲ್ಲರಿಗೂ ಭೀತಿ ಹುಟ್ಟಿಸಿದ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ವ್ಯಾಪ್ತಿಯಲ್ಲಿ ನಡೆದಿದೆ.

    ಅಪರಿಚಿತ ವ್ಯಕ್ತಿ ಕಾರನ್ನು ಎರ್ರಾಬಿರ್ರಿ ಚಲಾಯಿಸಿ ಮನೆ ಮುಂದೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸುಮಾರು 40 ಕ್ಕೂ ಅಧಿಕ ಕಾರುಗಳಿಗೆ ಡ್ಯಾಮೇಜ್ ಮಾಡಿದ್ದಾನೆ. ಇತನ ಪುಂಡಾಟವನ್ನು ನೋಡಿದ ಸ್ಥಳೀಯರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಕೊನೆಗೂ ಆ ಅಪರಿಚಿತ ವ್ಯಕ್ತಿಯನ್ನು ಸೆರೆ ಹಿಡಿದಿದ್ದಾರೆ.

    ಲಗ್ಗೆರೆ ರಿಂಗ್ ರೋಡ್ ಬಳಿ ಸ್ಥಳೀಯರು ಅಪರಿಚಿತ ವ್ಯಕ್ತಿಯನ್ನು ಸೆರೆ ಹಿಡಿದಿದ್ದಾರೆ. ಸದ್ಯ ಅಪರಿಚಿತ ವ್ಯಕ್ತಿ ಈಗ ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರ ವಶದಲ್ಲಿ ಇದ್ದಾನೆ. ಕಾರಿನ ಮುಂಬದಿಯ ಎಡ ಭಾಗದ ಟೈರ್ ಇಲ್ಲದೇನೆ ಎರ್ರಾಬಿರ್ರಿ ಕಾರ್ ಚಾಲಯಿಸಿದ್ದಾನೆ. ಕೆಎ 13 ಬಿ 7921 ನಂಬರಿನ ಸ್ವಿಫ್ಟ್ ಡಿಸೈರ್ ಕಾರನ್ನು ಅಪರಿಚಿತ ವ್ಯಕ್ತಿ ಚಲಾಯಿಸುತ್ತಿದ್ದನು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬಸ್ ಚಾಲನೆ ಮಾಡಿದ ಕೋತಿ ವೀಡಿಯೋ ವೈರಲ್- KSRTC ಬಸ್ ಚಾಲಕ ಅಮಾನತು

    ಬಸ್ ಚಾಲನೆ ಮಾಡಿದ ಕೋತಿ ವೀಡಿಯೋ ವೈರಲ್- KSRTC ಬಸ್ ಚಾಲಕ ಅಮಾನತು

    ದಾವಣಗೆರೆ: ಕೆಎಸ್ಆರ್‌ಟಿಸಿ ಬಸ್ಸನ್ನು ಕೋತಿಯೊಂದು ಚಾಲನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಸಖತ್ ವೈರಲ್ ಆಗಿದ್ದು, ಅಧಿಕಾರಿಗಳು ಸದ್ಯ ಚಾಲಕನನ್ನು ತರಾಟೆಗೆ ತೆಗೆದುಕೊಂಡು ಅಮಾನತು ಮಾಡಿದ್ದಾರೆ.

    ದಾವಣಗೆರೆ ಕೆಎಸ್ಆರ್‌ಟಿಸಿ ಡಿಪೋದ ಪ್ರಕಾಶ್ ಅಮಾನತುಗೊಂಡ ಚಾಲಕ. ದಾವಣಗೆರೆ ಡಿಪೋಗೆ ಸೇರಿರುವ ಬಸ್ಸಿನಲ್ಲಿ ಅಕ್ಟೋಬರ್ 1 ರಂದು ಘಟನೆ ನಡೆದಿದೆ. ಚಾಲಕ ಪ್ರಕಾಶ್ ಅವರು ಗೇರ್ ಹಾಕಿದರೆ, ಕೋತಿ ಸ್ಟೇರಿಂಗ್ ತಿರುಗಿಸುತ್ತಿತ್ತು. ಇದನ್ನು ನೋಡುತ್ತಿದ್ದ ಪ್ರಯಾಣಿಕರಿಗೆ ಕೊಂಚ ಮನರಂಜನೆಯಾಗಿತ್ತು.

    ದಾವಣಗೆರೆಯಿಂದ ಚಿತ್ರದುರ್ಗ ಜಿಲ್ಲೆಯ ಭರಮಸಾಗರ-ಆಲಿಕಲ್ಲುಗೆ ಬಸ್ ಹೊರಟಿತ್ತು. ಮಾರ್ಗ ಮಧ್ಯದಲ್ಲಿ ಕೋತಿಗೆ ಬಸ್ ಚಾಲನೆ ಮಾಡಲು ಪ್ರಕಾಶ್ ಕೊಟ್ಟಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್ಸಿನಲ್ಲಿ ಸುಮಾರು ಪ್ರಯಾಣಿಕರಿದ್ದು, ಒಂದು ವೇಳೆ ಅನಾಹುತ ಸಂಭವಿಸಿದ್ದರೆ ಕೆಎಸ್ಆರ್‌ಟಿಸಿಗೆ ಭಾರೀ ನಷ್ಟವಾಗುತ್ತಿತ್ತು.

    ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಚಾಲಕ ಪ್ರಕಾಶ್‍ನನ್ನು ಪತ್ತೆ ಹಚ್ಚಿದ ಅಧಿಕಾರಿಗಳು, ಬೇಜವಾಬ್ದಾರಿ ಕರ್ತವ್ಯ ದೋಷಕ್ಕೆ ಕಿಡಿಕಾರಿದ್ದಾರೆ. ಬಳಿಕ ಪ್ರಕಾಶ್‍ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/GchRutCpKYE

  • ಮೈಸೂರಲ್ಲಿ ಯುವ ದಸರಾ ಸಂಭ್ರಮ – ಯೂತ್ಸ್ ಉತ್ಸಾಹ ಹೆಚ್ಚಿಸಿದ್ರು ನಟಿ ಹರ್ಷಿಕಾ

    ಮೈಸೂರಲ್ಲಿ ಯುವ ದಸರಾ ಸಂಭ್ರಮ – ಯೂತ್ಸ್ ಉತ್ಸಾಹ ಹೆಚ್ಚಿಸಿದ್ರು ನಟಿ ಹರ್ಷಿಕಾ

    ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ 2018ರ ಸಂಭ್ರಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭಾನುವಾರ ಯುವ ಸಂಭ್ರಮಕ್ಕೆ ಚಾಲನೆ ನೀಡಲಾಗಿದ್ದು, ನಟಿ ಹರ್ಷಿಕಾ ಪೂಣಚ್ಚ ಯೂತ್ಸ್ ಉತ್ತಾಹ ಹೆಚ್ಚಿಸಿದ್ದಾರೆ.

    ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಡೋಲು ಬಾರಿಸುವ ಮೂಲಕ ಯುವ ಸಂಭ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಶಾಸಕರಾದ ಎಲ್.ನಾಗೇಂದ್ರ, ಅಶ್ವಿನ್ ಕುಮಾರ್, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಎಸ್‍ಪಿ ಅಮಿತ್ ಸಿಂಗ್ ಉಪಸ್ಥಿತರಿದ್ದರು.

    ಯುವ ಸಂಭ್ರಮಕ್ಕೆ ನಟಿ ಹರ್ಷಿಕಾ ಪೂರ್ಣಚ್ಚ ತಾರಾ ಮೆರಗು ನೀಡಿದರು. ಭಾನುವಾರದಿಂದ ಅಕ್ಟೋಬರ್ 7ರ ವರೆಗೂ ಯುವ ಸಂಭ್ರಮ ನಡೆಯಲಿದ್ದು, ಪ್ರತಿದಿನ 20 ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.

    ಯುಕ್ರೆನ್ ದೇಶದ ಯುಲಿಯಾ ನೃತ್ಯಗಾರ್ತಿ ವಿಶೇಷ ನೃತ್ಯ ಮಾಡಿದ್ದಾರೆ. ಕ್ಲಸ್ಟರ್ ಇಲಿಯಂ ಬಲೂನ್ ಮೂಲಕ ನೃತ್ಯ ಮಾಡಲಾಗಿದ್ದು, ಬಯಲು ರಂಗಮಂದಿರದ ಯುವ ಸಂಭ್ರಮದಲ್ಲಿ ಯುವ ಸಮೂಹ ಮಿಂದೆದ್ದಿದ್ದಾರೆ.

    ವಿಂಟೇಜ್ ಕಾರು ರ‍್ಯಾಲಿ ಕೂಡ ಮೈಸೂರಿಗೆ ತಲುಪಿದೆ. ಐತಿಹಾಸಿಕ ವಾಹನಗಳ ಭಾರತದ ಕಾರು ಒಕ್ಕೂಟ ಹಾಗೂ ಯುನೆಸ್ಕೋ ಸಹಯೋಗದಲ್ಲಿ ಕಾರ್ ರ‍್ಯಾಲಿ ನಡೆದಿದೆ. ಭಾನುವಾರ ಬೆಳಗ್ಗೆ ಬೆಂಗಳೂರಿನಲ್ಲಿ ಸಿಎಂ ಕುಮಾರಸ್ವಾಮಿ ರ‍್ಯಾಲಿ ಉದ್ಘಾಟಿಸಿದ್ದರು. ವಿಧಾನಸೌಧ ಆವರಣದಲ್ಲಿ ವಿಂಟೇಜ್ ಕಾರ್ ರ್ಯಾಲಿಗೆ ಚಾಲನೆ ನೀಡಿದರು.

    ಬೆಂಜ್, ಫೋಕ್ಸ್ ವಾಗನ್, ಬೀಡಲ್ ಕಾರು ಸೇರಿದಂತೆ 19ನೇ ಶತಮಾನದ ಕಾರ್ ಗಳ ರ‍್ಯಾಲಿ ನಡೆದಿದೆ. ಸದ್ಯ ವಿಂಟೇಜ್ ಕಾರುಗಳನ್ನು ನೋಡಲು ಜನತೆ ಮುಗಿಬಿದ್ದಿದ್ದು, ಕಾರುಗಳು ಲಲಿತ್ ಮಹಲ್ ತಲುಪಿದೆ. ಸಚಿವ ಜಿ.ಟಿ ದೇವೇಗೌಡ ವಿಂಟೇಜ್ ಕಾರಿನಲ್ಲಿ ಸುತ್ತು ಹೊಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv