Tag: ಚಾರ್ಮಾಡಿ ಘಟ್

  • ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಗೆ ಬಿದ್ದ ಬೃಹತ್ ಮರ – ಟ್ರಾಫಿಕ್ ಜಾಮ್

    ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಗೆ ಬಿದ್ದ ಬೃಹತ್ ಮರ – ಟ್ರಾಫಿಕ್ ಜಾಮ್

    ಚಿಕ್ಕಮಗಳೂರು: ಕಾಫಿನಾಡಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಪರಿಸ್ಥಿತಿ ಗಂಭೀರ ಮಟ್ಟಕ್ಕೆ ತಲುಪುತ್ತಿದೆ. ಭಾನುವಾರ ಚಾರ್ಮಾಡಿ ಘಾಟ್‌ನಲ್ಲಿ ಬೃಹತ್ ಮರ ಬಿದ್ದಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

    ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್‌ನಲ್ಲಿ ಇಂದು ರಸ್ತೆಗೆ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಘಾಟ್‌ನ 8ನೇ ತಿರುವಿನಲ್ಲಿ ಮರ ಬಿದ್ದಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಸುಮಾರು 1 ಕಿ.ಮೀ ಗೂ ಹೆಚ್ಚು ದೂರದವರೆಗೆ ಟ್ರಾಫಿಕ್ ಜಾಮ್ ಆಗಿದೆ.

    ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮದ ರಸ್ತೆ ಮೇಲೆ ಗುಡ್ಡ ಕುಸಿದಿದೆ. ರಸ್ತೆ ಮೇಲೆ ಮಣ್ಣು ಕುಸಿದಿರುವ ಪರಿಣಾಮ ಹೊರನಾಡು-ಶೃಂಗೇರಿ ಮಾರ್ಗದ ಸಂಚಾರ ಅಸ್ತವ್ಯಸ್ತವಾಗಿದೆ. ಸತತ ಮಳೆಯಿಂದಾಗಿ ಮಣ್ಣು ತೆರವು ಕಾರ್ಯಾಚರಣೆಗೂ ಅಡ್ಡಿಯಾಗಿದೆ. ಸ್ಥಳದಲ್ಲೇ ಇರುವ 4-5 ಮನೆಗಳ ಮೇಲೂ ಗುಡ್ಡ ಕುಸಿಯುವ ಸಾಧ್ಯತೆಯಿದ್ದು, ಗ್ರಾಮದ ಕೂಲಿ ಕಾರ್ಮಿಕರು ಆತಂಕದಲ್ಲಿದ್ದಾರೆ. ಇದನ್ನೂ ಓದಿ: ಮೈದುಂಬಿ ಧುಮ್ಮುಕ್ಕುತ್ತಿರುವ ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ

    ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಭಾರೀ ಮಳೆಯ ಹಿನ್ನೆಲೆ ಮರ, ಮಣ್ಣು, ಬಂಡೆಗಳು ರಸ್ತೆಗೆ ಉರುಳುತ್ತಿವೆ. ಕೊಳಗಾಮೆ-ಮುತ್ತೋಡಿ ಸಂಪರ್ಕ ಕಲ್ಪಿಸುವ ಗಿರಿ ಭಾಗದ ರಸ್ತೆಯಲ್ಲಿ ಭೂ ಕುಸಿತವಾಗಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದನ್ನೂ ಓದಿ: ಕಾಣಿಯೂರಿನಲ್ಲಿ ಹೊಳೆಗೆ ಬಿದ್ದ ಕಾರು- ನೀರಿನಲ್ಲಿ ಕೊಚ್ಚಿಕೊಂಡು ಹೋಗಿರೋ ಶಂಕೆ

    ಇನಾಂ ದತ್ತಾತ್ರೇಯ ಪೀಠಕ್ಕೆ ಹೋಗುವ ರಸ್ತೆಯಲ್ಲೂ ಮುಕ್ಕಾಲು ಭಾಗಕ್ಕೆ ಗುಡ್ಡ ಕುಸಿತವಾಗಿದೆ. ದತ್ತಪೀಠಕ್ಕೆ ಹೋಗುವ ಸರ್ಪಹಾದಿಯಲ್ಲಿ ಕುಸಿತ ಉಂಟಾಗಿದ್ದು ಈ ಹಿನ್ನೆಲೆ ಕಾರು, ಬೈಕ್ ಹೊರತುಪಡಿಸಿ ಭಾರೀ ವಾಹನಗಳ ಸಂಚಾರ ಬಂದ್ ಆಗಿದೆ. ಗಿರಿ ಶ್ರೇಣಿಯಲ್ಲಿ ಇನ್ನಷ್ಟು ಕುಸಿಯುವ ಆತಂಕ ಸೃಷ್ಟಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಂಚಾರಕ್ಕೆ ಮುಕ್ತವಾದ್ರೂ 2 ದಿನ ಚಾರ್ಮಾಡಿ ಘಾಟ್ ಬಂದ್-ಪ್ರಯಾಣಿಕರಿಗೆ ಆಹಾರ ನೀಡಿ ಮಾನವೀಯತೆ ತೋರಿದ್ರು ಸ್ಥಳೀಯರು

    ಸಂಚಾರಕ್ಕೆ ಮುಕ್ತವಾದ್ರೂ 2 ದಿನ ಚಾರ್ಮಾಡಿ ಘಾಟ್ ಬಂದ್-ಪ್ರಯಾಣಿಕರಿಗೆ ಆಹಾರ ನೀಡಿ ಮಾನವೀಯತೆ ತೋರಿದ್ರು ಸ್ಥಳೀಯರು

    ಮಂಗಳೂರು: ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಬಂದ್ ಆಗಿದ್ದ ಚಾರ್ಮಾಡಿ ಘಟ್ ಬಳಿ ಕೊನೆಗೂ ಸಂಚಾರಕ್ಕೆ ಮುಕ್ತಗೊಂಡಿದೆ. ಆದರೆ ಮತ್ತೆ ಮಣ್ಣು ಕುಸಿಯುವ ಸಾಧ್ಯತೆ ಇರುವುದರಿಂದ ಎರಡು ದಿನ ಕಾಮಗಾರಿ ನಡೆಸಲು ಮಾರ್ಗ ಬಂದ್ ಮಾಡುವುದಾಗಿ ದಕ್ಷಿಣ ಕನ್ನಡ ಎಸ್ಪಿ ರವಿಕಾಂತೇ ಗೌಡ ಮಾಹಿತಿ ನೀಡಿದ್ದಾರೆ.

    ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ 2ನೇ ತಿರುವಿನಲ್ಲಿ ಭೂಕುಸಿತ ಆಗಿದ್ದರಿಂದ ಎರಡೂ ಕಡೆಯಿಂದ ವಾಹನ ಸಂಚಾರ ಬಂದ್ ಆಗಿತ್ತು. ಈ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಎಲ್ಲಾ ವಾಹನಗಳು ಸುಮಾರು ಮೂರು ಕಿಮೀ ಉದ್ದಕ್ಕೆ ಸಾಲುಗಟ್ಟಿ ನಿಂತಲ್ಲಿಯೇ ಸಿಲುಕಿಕೊಂಡಿದ್ದವು.

    ರಾತ್ರಿ 8 ಗಂಟೆಗೆ ಸಮಯದಲ್ಲಿ ಸಂಚಾರ ಬಂದ್ ಆಗಿದ್ದ ಕಾರಣ ವಾಹನಗಳಲ್ಲಿದ್ದ ಸುಮಾರು ಒಂದೂವರೆ ಸಾವಿರಕ್ಕಿಂತಲೂ ಹೆಚ್ಚು ಪ್ರಯಾಣಿಕರು ಸಮಸ್ಯೆ ಎದುರಿಸಿದರು. ಮಾರ್ಗವು ಕಡಿದಾದ ತಿರುವುಗಳ ರಸ್ತೆ ಆಗಿದ್ದರಿಂದ 250ಕ್ಕೂ ಹೆಚ್ಚು ವಾಹನಗಳು ಹಿಂದೆ ತಿರುಗಿ ಹೋಗುವುದಕ್ಕೂ ಸಾಧ್ಯವಾಗಲಿಲ್ಲ. ಹೀಗಾಗಿ ಸಾವಿರಾರು ಮಂದಿ ರಾತ್ರಿಯಿಡೀ ಮಳೆಯ ನಡುವೆ ತಾವಿದ್ದ ವಾಹನದಲ್ಲಿಯೇ ಕಾಲ ಕಳೆಯುವಂತಾಗಿತ್ತು.

    ಸ್ಥಳೀಯರ ಸಹಕಾರ: ರಾತ್ರಿ ಇಡೀ ವಾಹನದಲ್ಲೇ ಕಾಲ ಕಳೆದ ಹಲವು ಪ್ರಯಾಣಿಕರು ಬೆಳಗ್ಗಿನ ಹೊತ್ತಿಗೆ ಆಹಾರದ ಸಮಸ್ಯೆ ಎದುರಿಸಿದರು. ಈ ವೇಳೆ ಸ್ಥಳೀಯರು ಪ್ರಯಾಣಿಕರಿಗೆ ಹಾಲು, ಬ್ರೆಡ್ ವಿತರಣೆ ಮಾಡಿದರು. ಬಳಿಕ ಸ್ಥಳೀಯರು ಮತ್ತು ಬೆಳ್ತಂಗಡಿ ಪೊಲೀಸರು ಸೇರಿ ಮಣ್ಣು ತೆರವು ಮಾಡುವ ಪ್ರಯತ್ನ ಮಾಡಿದರು. ಆದರೆ, ಗುಡ್ಡ ಕುಸಿದ ಸ್ಥಳಕ್ಕೆ ಜೆಸಿಬಿ ಯಂತ್ರ ಒಯ್ಯಲು ಸಾಧ್ಯವಾಗದೇ ಕಾರ್ಯಾಚರಣೆಗೆ ಹಿನ್ನೆಡೆ ಆಯಿತು. ಕೊನೆಗೆ ಬೆಳ್ತಂಗಡಿ ಭಾಗದಿಂದ ವಾಹನಗಳನ್ನು ತೆರವುಗೊಳಿಸಿ ಜೆಸಿಬಿಗಳನ್ನು ಸ್ಥಳಕ್ಕೆ ಒಯ್ಯಲಾಯಿತು.

    ಮತ್ತೆ ಚಾರ್ಮಾಡಿ ಘಾಟ್ ಬಂದ್: ಚಾರ್ಮಾಡಿ ಘಾಟ್ ಭೂಕುಸಿತ ಹಿನ್ನೆಲೆ ಸದ್ಯ ಕಾಮಗಾರಿ ಮುಂದುವರಿಕೆಗೆ ಅವಕಾಶ ಕೇಳಿದ ಅಧಿಕಾರಿಗಳು ಮತ್ತೆರಡು ದಿನ ಚಾರ್ಮಾಡಿ ಘಾಟ್ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಬುಧವಾರ ಮತ್ತು ಗುರುವಾರ ಈ ರಸ್ತೆ ಬಂದ್ ಆಗಲಿದೆ.

    ಮಳೆಯಿಂದ ಮತ್ತಷ್ಟು ಮರ, ಗುಡ್ಡಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ನಮಗೆ 48 ಗಂಟೆಗೆ ಸಮಯ ಕೊಡಿ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲಾಡಳಿತದ ನೆರವಿಂದ ಎಲ್ಲವನ್ನೂ ತೆರವುಗೊಳಿಸ್ತೇವೆ ಎಂದು ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಹೇಳಿದ್ದಾರೆ.

    ಬದಲಿ ಮಾರ್ಗ: ಮಂಗಳೂರಿನಿಂದ ಬೆಂಗಳೂರು ಸಂಪರ್ಕಕ್ಕೆ ಬದಲಿ ಮಾರ್ಗವಾಗಿ ನಾರಾವಿ – ಕಳಸ – ಮೂಡಿಗೆರೆ- ಬೇಲೂರು ಮಾರ್ಗ ಹಾಗೂ ಬಿ.ಸಿ.ರೋಡ್ – ಸುಳ್ಯ – ಮಡಿಕೇರಿ – ಮೈಸೂರು ಮಾರ್ಗದಲ್ಲಿ ಸಂಚಾರ ಮಾಡಬಹುದಾಗಿದೆ.

    ಮಂಗಳೂರು – ಬೆಂಗಳೂರು ಸಂಪರ್ಕಕ್ಕೆ ಶಿರಾಡಿ ಘಾಟ್ ಬಿಟ್ಟರೆ ಸುಲಭದ ದಾರಿ ಚಾರ್ಮಾಡಿ ಮಾತ್ರ. ಇದು ಹೊರತುಪಡಿಸಿದರೆ ಮಡಿಕೇರಿ, ಮೈಸೂರು ರಾಜ್ಯ ಹೆದ್ದಾರಿಯಿಂದ ತೆರಳಬೇಕು. ಶಿರಾಡಿ ಘಾಟ್ ಹೆದ್ದಾರಿ ಕಾಂಕ್ರೀಟ್ ರಸ್ತೆ ಮಾಡುವ ಸಲುವಾಗಿ ಕಳೆದ ಆರು ತಿಂಗಳಿಂದ ಬಂದ್ ಮಾಡಲಾಗಿದೆ. ಮಳೆಗಾಲಕ್ಕೆ ಮುನ್ನ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಹೇಳಿದ್ದರೂ, ಕಾಮಗಾರಿ ವಿಳಂಬದಿಂದಾಗಿ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಒತ್ತಡ ಹೆಚ್ಚದ ಕಾರಣ ಭೂಕುಸಿತ ಆಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.