Tag: ಚಾರ್ಮಡಿ ಘಾಟ್

  • ಮಲೆನಾಡಲ್ಲಿ ಮಳೆ ಅಬ್ಬರ-ಚಾರ್ಮಾಡಿಯಲ್ಲಿ ಕುಸಿದ ಗುಡ್ಡ

    ಮಲೆನಾಡಲ್ಲಿ ಮಳೆ ಅಬ್ಬರ-ಚಾರ್ಮಾಡಿಯಲ್ಲಿ ಕುಸಿದ ಗುಡ್ಡ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಚಾರ್ಮಾಡಿ ಘಾಟಿಯ ಮಲಯ ಮಾರುತದ ಬಳಿ ಗುಡ್ಡದ ಕಲ್ಲು-ಮಣ್ಣು ರಸ್ತೆ ಮೇಲೆ ಕುಸಿದಿದ್ದು ಪ್ರಯಾಣಿಕರಲ್ಲಿ ಆತಂಕ ಎದುರಾಗಿದೆ.

    ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಸದ್ಯ ಭಾರೀ ಮಳೆಯಿಂದ ಅಲ್ಲಲ್ಲಿ ಗುಡ್ಡ ಕುಸಿಯುತ್ತಿರುವುದರಿಂದ ವಾಹನ ಸವಾರರ ಆತಂಕ ಕೂಡ ಇಮ್ಮಡಿಗೊಂಡಿದೆ. ಕಳೆದ ಬಾರಿಯೂ ಇದೇ ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆಗೆ ಚಾರ್ಮಾಡಿ ಘಾಟ್ ಅಲ್ಲೋಲ ಕಲ್ಲೋಲವಾಗಿತ್ತು. ಬರೋಬ್ಬರಿ ಆರು ತಿಂಗಳುಗಳ ಕಾಲ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರವನ್ನ ಸಂಪೂರ್ಣ ಬಂದ್ ಮಾಡಲಾಗಿತ್ತು.

    ಚಾರ್ಮಾಡಿ ಘಾಟಿಯ ಹಲವೆಡೆ ಕೊಚ್ಚಿ ಹೋಗಿದ್ದ ರಸ್ತೆ ಕಾಮಗಾರಿಯನ್ನ ಇತ್ತೀಚಿಗಷ್ಟೇ ಮುಗಿಸಲಾಗಿತ್ತು. ಆದರೆ ಈಗ ಮತ್ತೆ ಮಳೆ ಜೋರಾಗಿದ್ದು, ಗುಡ್ಡ ಕುಸಿಯುತ್ತಿರುವುದರಿಂದ ರಸ್ತೆ ಸಂಪರ್ಕ ಮತ್ತೆ ಬಂದ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಅಷ್ಟೆ ಅಲ್ಲದೆ ಸಂಜೆ ಆರಂಭವಾದ ಭಾರೀ ಮಳೆ ಒಂದೇ ಸಮನೆ ಸುರಿಯುತ್ತಿದ್ದು, ಈ ದೈತ್ಯ ಮಳೆ ಇನ್ನೇನು ಸೃಷ್ಟಿಸುತ್ತೋ ಎಂದು ಸ್ಥಳೀಯರು ಕೂಡ ಆತಂಕಕ್ಕೀಡಾಗಿದ್ದಾರೆ.

    ಸುರಿಯುತ್ತಿರೋ ರಣ ಮಳೆ ಇಡೀ ರಾತ್ರಿ ಸುರಿಯಬಹುದೆಂದು ಸ್ಥಳೀಯರು ಊಹಿಸಿದ್ದಾರೆ. ಗುಡುಗು-ಗಾಳಿ ಇದ್ದರೆ ಮಳೆ ಕಡಿಮೆಯಾಗುತ್ತೆಂಬುದು ಗ್ರಾಮೀಣ ಜನರ ನಂಬಿಕೆ. ಆದರೆ ಮಲೆನಾಡಲ್ಲಿ ಗುಡುಗು-ಮಿಂಚು-ಗಾಳಿ ಏನೂ ಇಲ್ಲದೆ ಸುರಿಯುತ್ತಿರೋ ಮಳೆ ಇಡೀ ರಾತ್ರಿ ಬರಬಹುದೆಂದು ಸ್ಥಳೀಯರು ಭಾವಿಸಿದ್ದಾರೆ.

  • ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ಬಸ್ ಕೆಟ್ಟು ನಿಂತು ಚಾರ್ಮಾಡಿ ಘಾಟ್ ಟ್ರಾಫಿಕ್ ಜಾಮ್!

    ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ಬಸ್ ಕೆಟ್ಟು ನಿಂತು ಚಾರ್ಮಾಡಿ ಘಾಟ್ ಟ್ರಾಫಿಕ್ ಜಾಮ್!

    ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ತನ್ನ ಆರ್ಭಟ ಮುಂದುವರಿಸಿದ್ದಾನೆ.

    ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದಲೂ ಸುರಿಯುತ್ತಿರೋ ಧಾರಾಕಾರ ಮಳೆಯಿಂದಾಗಿ ಶಾಲಾ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳ ಪರದಾಟ ನಡೆಸಿದ್ದಾರೆ. ಶೃಂಗೇರಿ, ಕೊಪ್ಪ, ಮೂಡಿಗೆರೆ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ.

    ತೀವ್ರ ಮಳೆಯಿಂದಾಗಿ ಚಾರ್ಮಾಡಿ ಘಾಟ್ ನಲ್ಲಿ ಸರ್ಕಾರಿ ಬಸ್ ಕೆಟ್ಟು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದೆ. ಕಳೆದೊಂದು ಗಂಟೆಯಿಂದ ವಾಹನ ಸವಾರರು ಟ್ರಾಫಿಕ್ ಜಾಮ್ ನಿಂದ ತೊಂದರೆಗೆ ಸಿಲುಕಿದ್ದಾರೆ. ಮಳೆಯ ನಡುವೆ ಪ್ರಯಾಣಿಕರ ಪರದಾಟ ನಡೆಸಿದ್ದು, ಮಂಗಳೂರಿಗೆ ತಲುಪಲು ಹರಸಾಹಸ ಪಡುತ್ತಿದ್ದಾರೆ.

    ಕೆಲ ದಿನಗಳ ಹಿಂದೆ ಚಿಕ್ಕಮಗಳೂರಿನಿಂದ ಧರ್ಮಸ್ಥಳ, ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿದಿದ್ದರಿಂದ ರಸ್ತೆ ಸಂಚಾರ ಬಂದ್ ಆಗಿತ್ತು.