Tag: ಚಾರುಲತಾ ಸೋಮಲ್

  • ಕೊಡಗಿನಲ್ಲಿ 3 ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ : ಡಿಸಿ ಚಾರುಲತಾ ಸೋಮಲ್

    ಕೊಡಗಿನಲ್ಲಿ 3 ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ : ಡಿಸಿ ಚಾರುಲತಾ ಸೋಮಲ್

    ಮಡಿಕೇರಿ: ಕೋವಿಡ್-19 ನಿಯಂತ್ರಣ ಜೊತೆಗೆ, ಸರ್ಕಾರದ ಮಾರ್ಗಸೂಚಿ ಪಾಲಿಸುವ ನಿಟ್ಟಿನಲ್ಲಿ ವಾರದ 3 ದಿನ ಬೆಳಗ್ಗೆ 06 ರಿಂದ ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಅವಕಾಶ ಮಾಡಲು ಉದ್ದೇಶಿಸಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‍ರವರು ತಿಳಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ಸರ್ಕಾರ ಹೊರಡಿಸಿರುವ ಲಾಕ್‍ಡೌನ್ ಮಾರ್ಗಸೂಚಿ ಪಾಲನೆ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಗ್ಗೆ 6 ರಿಂದ ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಲಿಖಿತ ಆದೇಶ ಹೊರಡಿಸಲಾಗುವುದು ಎಂದರು.

    ಸಂತೆಗೆ ಆಗಮಿಸಿ ತರಕಾರಿ, ಹಣ್ಣು ಮತ್ತು ಇತರೆ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದವರಿಗೆ, ತಾತ್ಕಾಲಿಕ ಗುರುತಿನ ಚೀಟಿ ನೀಡಿ ತರಕಾರಿ, ಹಣ್ಣನ್ನು ತಳ್ಳುಗಾಡಿ ಅಥವಾ ಚಿಕ್ಕ ಗೂಡ್ಸ್ ವಾಹನದಲ್ಲಿ ಬಡಾವಣೆಗೆ ತೆರಳಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಇದರಿಂದ ತರಕಾರಿ ಅಥವಾ ಇನ್ನಿತರೆ ಖರೀದಿಗೆ ಮಾರುಕಟ್ಟೆ ಬರುವುದನ್ನು ತಪ್ಪಿಸಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬಡಾವಣೆಗೆ ತೆರಳಿ ತರಕಾರಿ ಮತ್ತು ಹಣ್ಣು ಮಾರಾಟ ಮಾಡುವವರಿಗೆ ವಾರಕ್ಕೊಮ್ಮೆ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು ಸಲಹೆ ನೀಡಿದರು. ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಕಡಿಮೆಯಾಗುತ್ತಿಲ್ಲ, ಆದ್ದರಿಂದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಪರೀಕ್ಷೆ ಮಾಡುವುದರ ಜೊತೆಗೆ, ಹೋಂ ಕ್ವಾರಂಟೈನ್‍ಗಳಲ್ಲಿ ಕಡ್ಡಾಯವಾಗಿ ಇರುವಂತೆ ಕ್ರಮವಹಿಸಬೇಕು. ಆ ನಿಟ್ಟಿನಲ್ಲಿ ಅಗತ್ಯ ಕಾಳಜಿ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

    ಈ ಸಂಬಂಧ ತಹಶೀಲ್ದಾರಗಳು, ತಾಲೂಕು ಪಂಚಾಯತಿ ಇಒಗಳು ಗಮನಹರಿಸಬೇಕು. ಕೋವಿಡ್-19 ಪಾಸಿಟಿವ್ ಕಂಡುಬಂದಲ್ಲಿ ಅವರ ಮನೆಯವರ ಜೊತೆಗೆ ಸಂಪರ್ಕಿತರನ್ನು ಪತ್ತೆ ಹಚ್ಚಬೇಕು. ನಿಯಮಗಳನ್ನು ಉಲಂಘಿಸಿದ್ದಲ್ಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್‍ರವರು ನಿರ್ದೇಶನ ನೀಡಿದರು.

    ಜಿಲ್ಲಾಧಿಕಾರಿಯವರು ಕಂದಾಯ, ಪೊಲೀಸ್, ಪಂಚಾಯತ್‍ರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸ್ಥಳೀಯ ಸಂಸ್ಥೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಸಂಪರ್ಕಿತರನ್ನು ಪತ್ತೆ ಹಚ್ಚುವಲ್ಲಿ ಇನ್ನಷ್ಟು ಪ್ರಯತ್ನಿಸಬೇಕಿದೆ. ಸೋಂಕಿತರು ಕಂಡುಬಂದಲ್ಲಿ ಕೋವಿಡ್ ಆರೈಕೆ ಕೇಂದ್ರಕ್ಕೆ ಕಳುಹಿಸಬೇಕು. ಅಗತ್ಯ ಮಾತ್ರೆಗಳನ್ನು ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

  • ಕೊಡಗಿನಲ್ಲಿ ಕೊರೊನಾ ಸ್ಫೋಟ – ಫೀಲ್ಡಿಗಿಳಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್

    ಕೊಡಗಿನಲ್ಲಿ ಕೊರೊನಾ ಸ್ಫೋಟ – ಫೀಲ್ಡಿಗಿಳಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಹಾಗಾಗಿ ಇಂದು ರಸ್ತೆಗಿಳಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾಸ್ಕ್ ಹಾಕದವರಿಗೆ ದಂಡ ಹಾಕಿದರು.

    ಮಡಿಕೇರಿ ನಗರದ ಪೋಸ್ಟ್ ಆಫೀಸ್ ಬಳಿಯಿಂದ ನಗರ ಪ್ರದಕ್ಷಿಣೆ ಹಾಕಿದ ಜಿಲ್ಲಾಧಿಕಾರಿಗಳು, ಕಾಲೇಜು ರಸ್ತೆ, ಮಾರ್ಕೆಟ್ ಸುತ್ತಮುತ್ತ ಕಾಲ್ನಡಿಗೆ ಮೂಲಕ ಓಡಾಡಿ ಜನರಿಗೆ ದಂಡ ಹಾಕಿದ್ದಾರೆ. ಸುಮಾರು ಒಂದು ಗಂಟೆಯಲ್ಲಿ ಎಪ್ಪತ್ತು ಜನರಿಗೆ ದಂಡ ಹಾಕಿದ್ದಾರೆ. ನಗರಸಭೆಯಿಂದಲೂ ಮಡಿಕೇರಿ ನಗರದ ಕೊರೊನಾ ನಿಯಮ ಪಾಲಿಸದ ಹೋಟೆಲ್ ಮಾಲೀಕರ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚನೆ ನೀಡಿದ್ದಾರೆ.

    ಮಡಿಕೇರಿ ನಗರಕ್ಕೆ ಪ್ರವಾಸಿಗರು, ಸಾರ್ವಜನಿಕರು ಹೋಟೆಲ್ ಗಳಿಗೆ ಬರುವುದು ಸರ್ವೇಸಾಮಾನ್ಯವಾಗಿದೆ. ಅದರೆ ಬರುವ ಗ್ರಾಹಕರು ಕೋವಿಡ್ ನಿಯಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರ ವಿರುದ್ಧ ಶಿಸ್ತು ಕ್ರಮವನ್ನು ನಗರಸಭೆ ಕೈಗೊಂಡಿದೆ. ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೆ ಹೊಟೇಲ್, ಅಂಗಡಿ ವ್ಯಾಪಾರ ಪರವಾನಿಗೆ ರದ್ದು ಮಾಡುವಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವಂತೆ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

    ಗ್ರಾಹಕರಿಗೆ ಮಾಸ್ಕ್ ಧರಿಸಿ ಅಂಗಡಿ, ಹೋಟೆಲ್ ರೆಸ್ಟೋರೆಂಟ್ ಗಳಿಗೆ ಬರಬೇಕು ಎಂದು ಅಂಗಡಿಗಳ ಮುಂದೆ ಬೋರ್ಡ್ ಹಾಕುವುದು ಕಡ್ಡಾಯ. ಅಂಗಡಿ ಮುಂದೆ ಸ್ಯಾನಿಟೈಸರ್ ಇಡುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ವ್ಯಾಪಾರ ಪರವಾನಿಗೆ ರದ್ದು ಮಾಡಲು ನಿರ್ಧರಿಸಲಾಗಿದೆ ಎಂದು ನಗರಸಭೆ ಆಯುಕ್ತ ಎಸ್.ವಿ.ರಾಮದಾಸ್ ಎಂದು ತಿಳಿಸಿದರು.