Tag: ಚಾಯಾ ಪೇ ಚರ್ಚಾ

  • ಗುಜರಾತ್ ಚುನಾವಣೆ: ಮತ್ತೆ ಮೋದಿ ಗೆಲುವಿಗೆ ಕಾಂಗ್ರೆಸ್ ಹಾಕಿ ಕೊಟ್ಟಿತಾ ರೆಡ್ ಕಾರ್ಪೆಟ್?

    ಗುಜರಾತ್ ಚುನಾವಣೆ: ಮತ್ತೆ ಮೋದಿ ಗೆಲುವಿಗೆ ಕಾಂಗ್ರೆಸ್ ಹಾಕಿ ಕೊಟ್ಟಿತಾ ರೆಡ್ ಕಾರ್ಪೆಟ್?

    ಳೆದ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡಲು ಹೊರಟ ಯೂಥ್ ಕಾಂಗ್ರೆಸ್ ಮಾಡಿರುವ ಎಡವಟ್ಟು ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿಗೆ ವರವಾಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

    ಹೌದು. ತನ್ನ ಅಧಿಕೃತ ಸಾಮಾಜಿಕ ಜಾಲಾತಾಣದಲ್ಲಿ ಫೋಟೊವೊಂದಕ್ಕೆ ಗ್ರಾಫಿಕ್ಸ್ ಮಾಡಿದ್ದ ಯೂಥ್ ಕಾಂಗ್ರೆಸ್ ಮೋದಿಯನ್ನು ‘ಚಾಯ್ ವಾಲಾ’ ಎಂದು ಬಿಂಬಿಸುವ ಪ್ರಯತ್ನ ಮಾಡಿತ್ತು. ಫೋಟೋ ಪ್ರಕಟವಾದ ಕೆಲವೇ ಸಮಯದಲ್ಲಿ ಇದು ಸಾಕಷ್ಟು ಪರ ವಿರೋಧ ಚರ್ಚೆಗೆ ಸಾಕ್ಷಿಯಾಯಿತು. ದೇಶದ ಪ್ರಧಾನಿಯನ್ನು ವಿಡಂಬನಾತ್ಮಕವಾಗಿ ಚಿತ್ರಿಸಿದಕ್ಕಾಗಿ ಯೂಥ್ ಕಾಂಗ್ರೆಸ್ ಕ್ಷಮೆ ಕೇಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

     

    ಪ್ರಧಾನಿ ನರೇಂದ್ರ ಮೋದಿ ಅವರನ್ನ ಚಾಯ್ ವಾಲಾ ಎಂದು ವಿಡಂಬನೆ ಮಾಡಿದ್ದ ಯೂಥ್ ಕಾಂಗ್ರೆಸ್ ಪ್ಲಾನ್‍ನ್ನು ಅವರಿಗೆ ತಿರುಗೇಟು ನೀಡಲು ಬಳಸಿಕೊಳ್ಳುತ್ತಿರುವ ಬಿಜೆಪಿ, ಜನರೊಂದಿಗೆ ನೇರವಾಗಿ ಬೆರೆಯುವ ಪ್ರಯತ್ನ ಮಾಡುತ್ತಿದೆ. ಅದರಂತೆ ಮೋದಿ ಕೂಡಾ ಗುಜರಾತ್ ಚುನಾವಣಾ ಪ್ರಚಾರದಲ್ಲಿ ಉದ್ದೇಶ ಪೂರ್ವಕವಾಗಿ ಚಾಯ್ ವಾಲಾ ಪದವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ರಾಜ್‍ಕೋಟ್ ಚುನಾವಣಾ ಸಭೆಯೊಂದರಲ್ಲಿ ಮಾತನಾಡುತ್ತಾ ಮೋದಿ ತಮ್ಮನ್ನು ತಾವು ಮಣ್ಣಿನ ಮಗ ಎಂದು ಕರೆದುಕೊಂಡಿದ್ದರು. ನನ್ನ ವಿನಮ್ರತೆಯನ್ನು ಕಾಂಗ್ರೆಸ್ ಇಷ್ಟಪಡುತ್ತಿಲ್ಲ ಎಂದು ಟೀಕಿಸಿದರು. ನಾನು ಚಾಯ್ ವಾಲಾ, ನಾನು ಚಹಾವನ್ನು ಮಾರಿದ್ದೇನೆ ಆದರೆ ದೇಶವನ್ನು ಮಾರುವಂತಹ ಪಾಪದ ಕೆಲಸ ಮಾಡುವುದಿಲ್ಲ ಎಂದು ಹೇಳಿ ಜನರಿಂದ ಭರ್ಜರಿಯಾಗಿ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.(ಇದನ್ನೂ ಓದಿ: ನೀವು ಚಹಾ ಮಾರಾಟ ಮಾಡಿ, ದೇಶ ಮಾರಬೇಡಿ: ಕಾಂಗ್ರೆಸ್ಸಿಗೆ ಮೋದಿ ಟಾಂಗ್)

    ಕಳೆದ ಭಾನುವಾರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ‘ಮನ್ ಕೀ ಬಾತ್ ಚಾಯ್ ಕೇ ಸಾಥ್ ಎಂದು ಬದಲಾಯಿಸಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಬಿಜೆಪಿ ಯಶಸ್ವಿಯಾಗಿತ್ತು. ಇದಕ್ಕೆ ಸಾಕಷ್ಟು ದೊಡ್ಡ ಪ್ರಮಾಣದ ಬೆಂಬಲವೂ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಐವಾಂಕಾ ಟ್ರಂಪ್ ಮಂಗಳವಾರ ಹೈದರಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಹೊಗಳಿದ ಪರಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಚಾಯ್ ವಾಲಾ ಸ್ಥಾನದಿಂದ ಪ್ರಧಾನಿ ವರೆಗಿನ ಹುದ್ದೆಗೆ ತೆರಳಿದ ಮೋದಿ ಹಾದಿಯನ್ನು ಐವಾಂಕಾ ಹೊಗಳಿದ್ದರು. ಇದರಿಂದ ಬಿಜೆಪಿಗೆ ಮತ್ತಷ್ಟು ಬೂಸ್ಟ್ ಸಿಕ್ಕಿದ್ದು ‘ಚಾಯ್‍ವಾಲಾ’ ಪದವನ್ನೇ ಬಳಸಿ ಕಾಂಗ್ರೆಸ್ ಮೇಲೆ ಅಕ್ರಮಣ ಮಾಡಲು ಮುಂದಾಗಿದೆ.

     

    ಪಾಠ ಕಲಿಯದ ಕಾಂಗ್ರೆಸ್:
    ಒಮ್ಮೆ ಇತಿಹಾಸವನ್ನು ನೋಡಿದಾಗ ಚಾಯ್ ವಾಲಾ ಎಂಬ ಪದ ಮೋದಿ ಅವರಿಗೆ ಒಂಥರಾ ಅದೃಷ್ಟದ ಪದ ಎನಿಸುತ್ತೆ. ಮೋದಿ ವಿರುದ್ಧ ವೈಯಕ್ತಿಕ ವಾಗಿ ದಾಳಿ ಮಾಡಿದಾಗ ಆ ದಾಳಿಗಳು ಮೋದಿ ಪರ ಅಲೆಯನ್ನು ಸೃಷ್ಟಿ ಮಾಡಿವೆ. 2007 ರಲ್ಲಿ ಸೋನಿಯಾ ಗಾಂಧಿ ಮೌತ್ ಕಾ ಸೌದ್ಗಾರ್ (ಸಾವಿನ ಏಜೆಂಟ್) ಎಂದು ಮೋದಿಯನ್ನು ಟೀಕಿಸಿದ್ರು. ಇದನ್ನೇ ಬಳಸಿಕೊಂಡಿದ್ದ ಮೋದಿ ಅಂದು ಗುಜರಾತ್ ವಿಧಾನಸಭೆ ಚುನಾವಣೆ ಹಿಂದೂ ಮತಗಳನ್ನು ಧ್ರುವೀಕರಣ ಮಾಡಿಕೊಂಡು ಗೆಲವು ಸಾಧಿಸಿ ಸಿಎಂ ಆಗಿದ್ದರು.

    2014ರ ಲೋಕಸಭೆ ಚುನಾವಣೆಯಲ್ಲಿ ಮಣಿ ಶಂಕರ್ ಅಯ್ಯರ್ ಯೂಥ್ ಕಾಂಗ್ರೆಸ್ ರೀತಿಯಲ್ಲೇ ಮೋದಿಯನ್ನ ಚಾಯ್ ವಾಲಾ ಅಂತಾ ಟೀಕೆ ಮಾಡಿದ್ದರು. ಮೋದಿ ಪ್ರಧಾನಿ ಅಭ್ಯರ್ಥಿಯೇ ಅಲ್ಲ. ಚಹಾ ಮಾರುವುದಕ್ಕೆ ಸೂಕ್ತ ವ್ಯಕ್ತಿ ಎಂದಿದ್ದರು. ಇದನ್ನು ಬಳಸಿಕೊಂಡಿದ್ದ ಬಿಜೆಪಿ ‘ಚಾಯ್ ಪೇ ಚರ್ಚಾ’ ಅಂತಾ ಹೊಸ ಅಭಿಯಾನ ಹುಟ್ಟು ಹಾಕಿತ್ತು. ಈ ಅಭಿಯಾನ ದೊಡ್ಡಮಟ್ಟದಲ್ಲಿ ಜನ ಮಾನಸದಲ್ಲಿ ಉಳಿದುಕೊಳ್ಳುವ ಮೂಲಕ ಯಶಸ್ವಿಯಾಯಿತು. ಈಗ ಮತ್ತೆ ಕಾಂಗ್ರೆಸ್ ಚಾಯ್ ವಾಲಾ ಅಸ್ತ್ರ ಪ್ರಧಾನಿ ಕೈಗೆ ಕೊಟ್ಟಿದ್ದು ಮೋದಿ ಗೆಲುವಿನ ಹಾದಿಗೆ ಕಾಂಗ್ರೆಸ್ ಮತ್ತೊಮ್ಮೆ ರೆಡ್ ಕಾರ್ಪೆಟ್ ಹಾಕಿ ಕೊಟ್ಟಿತಾ ಎನ್ನುವ ಪ್ರಶ್ನೆ ಮತ್ತು ವಿಶ್ಲೇಷಣೆ ಈಗ ಆರಂಭವಾಗಿದೆ. (ಇದನ್ನೂ ಓದಿ:  ನಾವು ದೇಶ ಮಾರಿದ್ದರೆ ನೀವು ಪ್ರಧಾನಿಯಾಗುತ್ತಿರಲಿಲ್ಲ- ಮೋದಿ ವಿರುದ್ಧ ಖರ್ಗೆ ವಾಗ್ದಾಳಿ)

    ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಮೋದಿ ಚಹಾ ಮಾರಾಟ ಮಾಡಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಆರ್‍ಟಿಐ ಅಡಿಯಲ್ಲಿ ಕೇಳಲಾದ ಪ್ರಶ್ನೆಗೆ ರೈಲ್ವೇ ಇಲಾಖೆ ನೀಡಿದ ಸುದ್ದಿಯನ್ನು ಟ್ವೀಟ್ ಮಾಡಿ ಮೋದಿ ಅಭಿಮಾನಿಗಳಿಗೆ ತಿರುಗೇಟು ನೀಡಿದ್ದಾರೆ.

    ಚಾಯ್ ಪೇ ಚರ್ಚಾ ಐಡಿಯಾ ಕೊಟ್ಟಿದ್ದು ಯಾರು?
    2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಜಕೀಯ ಸಲಹೆಗಾರರಾಗಿ ಪ್ರಶಾಂತ್ ಕಿಶೋರ್ ಕೆಲಸ ಮಾಡಿದ್ದರು. ಮಣಿಶಂಕರ್ ಅಯ್ಯರ್ ಟೀಕೆಗೆ ಸರಿಯಾಗಿಯೇ ತಿರುಗೇಟು ನೀಡಲು ಪ್ರಶಾಂತ್ ಕಿಶೋರ್ ಬಿಜೆಪಿ ನಾಯಕರಿಗೆ ಚಾಯ್ ಪೇ ಚರ್ಚಾ ನಡೆಸಲು ಸಲಹೆ ನೀಡಿದ್ದರು. ಈ ಸಲಹೆ ಬಿಜೆಪಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಪ್ರಶಾಂತ್ ಕಿಶೋರ್ ಬಿಜೆಪಿಯನ್ನು ತೊರೆದಿದ್ದರು. ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಪರ ಕೆಲಸ ಮಾಡಿ ಜೆಡಿಯು, ಕಾಂಗ್ರೆಸ್, ಆರ್‍ಜೆಡಿ ಮೈತ್ರಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗುಜರಾತ್, ಬಿಹಾರದಲ್ಲಿ ಯಶಸ್ವಿಯಾಗಿದ್ದ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಉತ್ತರಪ್ರದೇಶಲ್ಲಿ ವಿಫಲವಾಗಿತ್ತು. (ಗುಜರಾತ್ ಚುನಾವಣೆಗೆ ಸಂಬಂಧಿಸಿದ ಎಲ್ಲ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ: ಗುಜರಾತ್ ಚುನಾವಣೆ)