Tag: ಚಾಮುಂಡೇಶ್ವರಿ ಕ್ಷೇತ್ರ

  • ವೇದಿಕೆಯಲ್ಲಿ ನಂದಿನಿ ವೆನಿಲ್ಲಾ ಫ್ಲೇವರ್ ಹಾಲು ಕುಡಿದ ಸಿದ್ದರಾಮಯ್ಯ

    ವೇದಿಕೆಯಲ್ಲಿ ನಂದಿನಿ ವೆನಿಲ್ಲಾ ಫ್ಲೇವರ್ ಹಾಲು ಕುಡಿದ ಸಿದ್ದರಾಮಯ್ಯ

    ಮೈಸೂರು: ಇಲ್ಲಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ (Chamundeshwari Constituency) ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವೇದಿಕೆಯಲ್ಲಿ ನಂದಿನಿ ವೆನಿಲ್ಲಾ ಫ್ಲೇವರ್ ಹಾಲು ಕುಡಿದು `ನಂದಿನಿ’ ಉತ್ಪನ್ನಕ್ಕೆ (Nandini Products) ಬೆಂಬಲ ಸೂಚಿಸಿದ್ದಾರೆ.

    ಮೈಸೂರು (Mysuru) ಹೊರವಲಯದ ಕೇರ್ಗಳ್ಳಿ ಗ್ರಾಮದ ಖಾಸಗಿ ಭವನದಲ್ಲಿ ಸಭೆ ನಡೆಯುವಾಗ ಆಪ್ತರೊಂದಿಗೆ ವೇದಿಕೆಯಲ್ಲಿ ಕುಳಿತಿದ್ದ ಸಿದ್ದರಾಮಯ್ಯ ನಂದಿನಿ ವೆನಿಲ್ಲಾ ಫ್ಲೇವರ್ ಬಾಟಲಿ ಹಾಲು ಕುಡಿದು, ಬಳಿಕ ಬಾಟಲಿ ತೋರಿಸಿ `ನಂದಿನಿ’ ಉತ್ಪನ್ನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ನಂತರ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಮುಖಂಡರನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಎಲ್ಲರ ಅಭಿಪ್ರಾಯಪಡೆದು, ಎದುರಾಳಿಯನ್ನು ಎದುರಿಸುವ ಶಕ್ತಿ ಇರುವ ಅಭ್ಯರ್ಥಿಗೆ ಟಿಕೆಟ್ ನೀಡಿದ್ದೇವೆ. ಪಕ್ಷದಲ್ಲಿ ಎಲ್ಲರೂ ಸಮರ್ಥರಿದ್ದಾರೆ, ಆದ್ರೆ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ. ಆ ಕಾರಣಕ್ಕೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದೇಗೌಡರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ವರುಣಾದಲ್ಲಿ ಬಿಗ್‌ ಫೈಟ್‌: ಸಿದ್ದು v/s ಸೋಮಣ್ಣ – ಯಾರ ಕೈ ಹಿಡೀತಾರೆ ವರುಣಾ ಮತದಾರ?

    ಈಬಾರಿ ಚುನಾವಣೆಯನ್ನ ಪ್ರತಿಯೊಬ್ಬರು ಗಂಭೀರವಾಗಿ ತೆಗೆದುಕೊಳ್ಳಬೇಕು. ಕಳೆದಬಾರಿ ಜಿ.ಟಿ ದೇವೇಗೌಡ (GT Devegowda) ಅವರು ನನ್ನನ್ನ ಸೋಲಿಸಿದ್ರು. ನನ್ನನ್ನ ಸೋಲಿಸಿ ಬಹಳ ಒಳ್ಳಯ ಕೆಲಸ ಮಾಡಿದ್ರು, ಏಕೆಂದರೆ ಬಿಜೆಪಿ ಮಾತ್ರ ಅಧಿಕಾರಕ್ಕೆ ಬರಬಾರದು. ಅವರು ಮನುಷ್ಯ-ಮನುಷ್ಯರ ನಡುವೆ ಎತ್ತಿಕಟ್ತಾರೆ, ದೇಶದಲ್ಲಿ ಅಶಾಂತಿ ಉಂಟಾಗುತ್ತೆ, ಆ ಕಾರಣಕ್ಕೆ ಬಿಜೆಪಿ ಮಾತ್ರ ಅಧಿಕಾರಕ್ಕೆ ಬರಬಾರದು ಎಂದು ಗುಡುಗಿದರು. ಇದನ್ನೂ ಓದಿ: ವರುಣಾ ಕ್ಷೇತ್ರದಲ್ಲಿ ಜನ ಅಬ್ಬೆಪಾರಿಗಳಾಗಿದ್ದಾರೆ : ಪ್ರತಾಪ್ ಸಿಂಹ

    ಯಾರಾದ್ರೂ ರಕ್ತಕೊಡಿ ಎಂದು ಕೇಳುವಾಗ ಜಾತಿ ನೋಡಲ್ಲ, ಮುಸ್ಲಿಂ ಆದರೂ ಸರಿ ಕೊಡಿ ಅಂತೀವಿ. ಆದ್ರೆ ಬಿಜೆಪಿಯವರು ಭೇದ ಭಾವ ಮಾಡೋದ್ರಲ್ಲಿ ಮುಂಚೂಣಿಯಲ್ಲಿದ್ದಾರೆ. ಆ ಕಾರಣಕ್ಕೆ ನಾವು ಕಳೆದಬಾರಿ ಜೆಡಿಎಸ್‌ಗೆ ಅಧಿಕಾರ ನೀಡಿದ್ದೆವು. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಸಿಎಂ ಆದ್ರು, ಜಿ.ಟಿ ದೇವೇಗೌಡ ಶಿಕ್ಷಣ ಸಚಿವರಾದರು. ಅವರಿಬ್ಬರ ನಡುವೆ ಹೊಂದಾಣಿಕೆ ಇಲ್ಲದಿದ್ದಾಗ ನನ್ನ ಬಳಿ ಬಂದು, ಕಾಂಗ್ರೆಸ್‌ಗೆ ಬರ್ತೀನಿ ಅಂದಿದ್ರು. ಅವನೇ ಬಂದ, ಅವನೇ ಹೋದ, ಈವಾಗ ಜೆಡಿಎಸ್ ನಿಂದ ಅರ್ಜಿ ಹಾಕಿದ್ದಾನೆ. ಕುಮಾರಸ್ವಾಮಿ ಎಷ್ಟೇ `ಪಂಚರತ್ನ ಯಾತ್ರೆ’ ಮಾಡಿದ್ರೂ ಅಧಿಕಾರಕ್ಕೆ ಬರಲ್ಲ, ಇನ್ನೊಬ್ಬರ ಹೆಗಲಮೇಲೆ ಕುಳಿತೇ ಅಧಿಕಾರ ಮಾಡಬೇಕು ಎಂದು ಕುಟುಕಿದ್ದಾರೆ.

  • ಪಕ್ಷೇತರನಿಗೆ ಬಿದ್ದ ಅನಿರೀಕ್ಷಿತ ಮತ ಸಿದ್ದು ಪಾಲಿಗೆ ವರವಾಯ್ತು!

    ಪಕ್ಷೇತರನಿಗೆ ಬಿದ್ದ ಅನಿರೀಕ್ಷಿತ ಮತ ಸಿದ್ದು ಪಾಲಿಗೆ ವರವಾಯ್ತು!

    ಮೈಸೂರು: ರಾಜ್ಯ ರಾಜಕೀಯದಲ್ಲಿ ಬಹು ದೊಡ್ಡ ಸದ್ದು ಮಾಡಿದ್ದ ಚಾಮುಂಡೇಶ್ವರಿ ಕ್ಷೇತ್ರದ (Chamundeshwari Constituency) ಉಪ ಚುನಾವಣೆಯ ಬಹು ಮುಖ್ಯ ಸ್ವಾರಸ್ಯ ವಿಚಾರವಿದು. ಆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅನಾಮಧೇಯ ರೂಪದ ಪಕ್ಷೇತರ ಅಭ್ಯರ್ಥಿಗೆ ಬಂದ ಅನಿರೀಕ್ಷಿತ ಮತಗಳೇ ಸಿದ್ದರಾಮಯ್ಯ (Siddaramaiah) ಪಾಲಿಗೆ ವರದಾನವಾಗಿತ್ತು.

    ಅದು ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಕಾಲ. ಹೆಚ್‌ಡಿ ದೇವೇಗೌಡರೊಂದಿಗೆ ಮುನಿಸಿಕೊಂಡು ಸಿದ್ದರಾಮಯ್ಯ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಪರಿಣಾಮ 2006 ಡಿಸೆಂಬರ್‌ನಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಿತು.

    ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಬಳಸಲಾಗಿತ್ತು. ಜೆಡಿಎಸ್‌ನವರು ಹೋದೆಡೆಯೆಲ್ಲಾ ಮೊದಲನೇ ಗುಂಡಿ ಒತ್ತಿ ಎಂದು ಪ್ರಚಾರ ಮಾಡಿದ್ದರು. ಏಕೆಂದರೆ ಜೆಡಿಎಸ್ ಅಭ್ಯರ್ಥಿ ಶಿವಬಸಪ್ಪ ಅವರ ಹೆಸರು ಮತಯಂತ್ರದಲ್ಲಿ ಮೊದಲಿತ್ತು. ಅದರಂತೆ ಮತದಾರರು ಮೊದಲ ಗುಂಡಿ ಒತ್ತಿದರು. ಮತಯಂತ್ರದ ಮೇಲಿನಿಂದ ಮೊದಲ ಗುಂಡಿಯೋ ಅಥವಾ ಮತಯಂತ್ರದ ಕೆಳಗಿನಿಂದ ಮೊದಲ ಗುಂಡಿಯೋ ಎಂದು ಹೇಳಿರಲಿಲ್ಲ. ಇದರಿಂದ ದೊಡ್ಡ ಯಡವಟ್ಟಾಗಿ ಹೋಗಿತ್ತು. ಇದನ್ನೂ ಓದಿ: ರಾಜ್ಯ ನಾಯಕರು ತಂದ ಪಟ್ಟಿ ನೋಡಿ ಮೋದಿ ಕೆಂಡ : ಬಿಜೆಪಿ ಸಭೆಯಲ್ಲಿ ಏನಾಯ್ತು?

    ಮತಯಂತ್ರದ ಮೇಲ್ಬಾಗದ ಮೊದಲ ಗುಂಡಿ ಒತ್ತಿದ್ದರಿಂದ ಶಿವಬಸಪ್ಪ ಅವರಿಗೆ 1,15,255 ಮತಗಳು ದೊರೆತರೆ, ಮತ ಯಂತ್ರದ ಕೆಳಭಾಗದ ಮೊದಲ ಗುಂಡಿ ಒತ್ತಿದ್ದರಿಂದ ಪಕ್ಷೇತರರಾದ ಸರ್ವೋತ್ತಮ ಅವರಿಗೆ ಅನಿರೀಕ್ಷಿತವಾಗಿ 4,183 ಮತಗಳು ದೊರೆತಿದ್ದವು. ಏಕೆಂದರೆ ಸಮಾಜವಾದಿ ಪಕ್ಷದ ಬಿ ಕರುಣಾಕರ್ ಅವರಿಗೆ 3,304, ಜೆಡಿಎಸ್‌ನಿಂದ ಬಂಡಾಯವೆದ್ದು ಜೆಡಿಯು ಅಭ್ಯರ್ಥಿಯಾಗಿದ್ದ ಎಎಸ್ ಗುರುಸ್ವಾಮಿ ಅವರಿಗೆ 941 ಮತಗಳು ದೊರೆತಿದ್ದವು.

    ಗುಂಡಿ ಒತ್ತುವುದರಲ್ಲಿ ಆದ ಗೊಂದಲದ ಪರಿಣಾಮ ಎಂಬಂತೆ 1,15,512 ಮತಗಳನ್ನು ಪಡೆದ ಸಿದ್ದರಾಮಯ್ಯ ಗೆದ್ದರು. ಶಿವಬಸಪ್ಪ ಮತ್ತು ಸಿದ್ದರಾಮಯ್ಯ ಅವರು ಪಡೆದ ಮತಗಳ ಅಂತರ ಕೇವಲ 257 ಮಾತ್ರ ಆಗಿತ್ತು. ಇದನ್ನೂ ಓದಿ: ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಯಾವುದೇ ಕಾರಣಕ್ಕೂ ಗೆಲ್ಲಲ್ಲ: HDK

  • ಚಾಮುಂಡೇಶ್ವರಿ ಉಪ ಚುನಾವಣೆ ನೆನೆದರೆ ಈಗಲೂ ಬೆಚ್ಚುತ್ತಾರೆ ಸಿದ್ದು!

    ಚಾಮುಂಡೇಶ್ವರಿ ಉಪ ಚುನಾವಣೆ ನೆನೆದರೆ ಈಗಲೂ ಬೆಚ್ಚುತ್ತಾರೆ ಸಿದ್ದು!

    ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) 2006ರಲ್ಲಿ ಎದುರಿಸಿದ ಚಾಮುಂಡೇಶ್ವರಿ ಕ್ಷೇತ್ರದ (Chamundeshwari Assembly Constituency) ಉಪ ಚುನಾವಣೆಯನ್ನು (By-election)ಈಗಲೂ ನೆನೆಸಿಕೊಂಡರೆ ಬೆಚ್ಚುತ್ತಾರೆ. `ಸಾಕಪ್ಪ ಸಾಕು’ ಎಂದು ಕೈ ಮುಗಿಯುತ್ತಾರೆ.

    1978 ರಲ್ಲಿ ಮೈಸೂರು ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿದ್ದ ಸಿದ್ದರಾಮಯ್ಯ ಅವರು, ನಂತರ ರೈತ ಸಂಘಟನೆಯಲ್ಲಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರೊಂದಿಗೆ ಓಡಾಡಿಕೊಂಡಿದ್ದರು. 1980 ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 1978 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದಿದ್ದ ಕಾಂಗ್ರೆಸ್ ಡಿ.ಜಯದೇವರಾಜ ಅರಸರ (D.Devaraj Arasu)  ಉಪಟಳ ತಡೆಯಲಾಗದೇ ಅವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕೆಂದು ಮಾಜಿ ಶಾಸಕ ಕೆಂಪೀರೇಗೌಡ ಸೇರಿದಂತೆ ಮೈಸೂರು ತಾಲೂಕಿನ ಹಲವು ಮುಖಂಡರು 1983ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ನಿಲ್ಲಿಸಿದ್ದರು. ಆಗ ಸಿದ್ದರಾಮಯ್ಯ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ವಾಹನಗಳ ಪರಿಶೀಲನೆ ಆರಂಭ – ಮೊದಲ ದಿನವೇ 10 ಕೆಜಿ ಬೆಳ್ಳಿ ವಶ

    ಅದೇ ಮೊದಲ ಬಾರಿಗೆ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ (Ramakrishna Hegde) ನೇತೃತ್ವದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆಗ ಬಿಜೆಪಿ ಹಾಗೂ ಪಕ್ಷೇತರರರ ಬೆಂಬಲ ಪಡೆಯಲಾಗಿತ್ತು. ಸಿದ್ದರಾಮಯ್ಯ ಅವರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಯಿತು. ನಂತರ ಸಚಿವರಾದರು. 1985ರಲ್ಲಿ ಮಧ್ಯಂತರ ಚುನಾವಣೆ ಎದುರಾದಾಗ ಸಿದ್ದರಾಮಯ್ಯ ಜನತ ಪಕ್ಷದ ಅಭ್ಯರ್ಥಿಯಾಗಿ 2ನೇ ಬಾರಿಗೆ ಆಯ್ಕೆಯಾದರು. ಮತ್ತೆ ಸಚಿವರಾದರು. 1989ರಲ್ಲಿ ಜನತಾದಳ ಅಭ್ಯರ್ಥಿಯಾಗಿ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್‍ನ ಎಂ. ರಾಜಶೇಖರಮೂರ್ತಿ ಅವರೆದುರು ಸೋತರು. 1994ರಲ್ಲಿ ಜನತಾದಳ ಅಭ್ಯರ್ಥಿಯಾಗಿ ಗೆದ್ದರು.

    ದೇವೇಗೌಡರ ಸಂಪುಟದಲ್ಲಿ ಹಣಕಾಸು, ಜೆ.ಎಚ್.ಪಟೇಲರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾದರು. 1999ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್‍ನ ಎ.ಎಸ್. ಗುರುಸ್ವಾಮಿ, ಅವರೆದುರು ಸೋತರು. 2004ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್‍ನ ಎಲ್.ರೇವಣಸಿದ್ದಯ್ಯ ಅವರೆದುರು ಜಯ ಗಳಿಸಿದರು. ಆ ವರ್ಷ ಎನ್.ಧರಂಸಿಂಗ್ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ 2ನೇ ಬಾರಿಗೆ ಉಪ ಮುಖ್ಯಮಂತ್ರಿಯಾದರು.

    ಹುಬ್ಬಳ್ಳಿಯಲ್ಲಿ (Hubballi) ಅಹಿಂದ ಸಮಾವೇಶ ನಡೆಸುವ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ (H.D.Deve Gowda) ಹಾಗೂ ಸಿದ್ದರಾಮಯ್ಯ ನಡುವಿನ ಭಿನ್ನಮತ ತಲೆದೋರಿ, ಕೊನೆಗೆ ಸಿದ್ದರಾಮಯ್ಯ ಅವರ ತಲೆದಂಡವಾಯಿತು. ಡಿಸಿಎಂ ಸ್ಥಾನದಿಂದ ಪದಚ್ಯುತರಾದರು. 2006 ರಲ್ಲಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ, ಕಾಂಗ್ರೆಸ್ (Congress) ಸೇರಿದರು. ಆಗ ಎದುರಾಗಿದ್ದೆ ಚಾಮುಂಡೇಶ್ವರಿ ಉಪ ಚುನಾವಣೆ. ಆ ವೇಳೆಗೆ ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರವಿತ್ತು. ಬಿ.ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದರು.

    ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ, ಜೆಡಿಎಸ್- ಬಿಜೆಪಿ (BJP) ಜಂಟಿಯಾಗಿ ಶಿವಬಸಪ್ಪ ಎಂಬವರನ್ನು ಕಣಕ್ಕಿಳಿಸಿದರು. ಎಲ್ಲರೂ ಸಿದ್ದರಾಮಯ್ಯ ಗೆಲುವು ಸುಲಭ ಎಂದೇ ಭಾವಿಸಿದ್ದರು. ಆದರೆ ಇಡೀ ಸರ್ಕಾರ, ಜಾತಿ, ಹಣ ಎಲ್ಲಾ ಕೆಲಸ ಮಾಡಿತು. ಸಿದ್ದರಾಮಯ್ಯ ಸೋತೆ ಹೋದರೂ ಎಂದು ಎಣಿಸಲಾಗಿತ್ತು. ಆದರೆ ಕೊನೆ ಸುತ್ತಿನಲ್ಲಿ 257 ಮತಗಳ ಕೂದಲೆಳೆಯ ಅಂತರದಲ್ಲಿ ಜಯಗಳಿಸಿ, ರಾಜಕೀಯವಾಗಿ ಪುನರ್ಜನ್ಮ ಪಡೆದರು. ಅವರಿಗೆ 1,15,512 ಮತಗಳು ದೊರೆತ ಶಿವಬಸಪ್ಪ ಅವರಿಗೆ 1,15,255 ಮತಗಳು ದೊರೆತವು. ಇದರಿಂದ ಹತಾಶರಾದ ಸಿದ್ದರಾಮಯ್ಯ `ಸಾಕಪ್ಪ ಸಾಕು ಉಪ ಚುನಾವಣೆ ಸಹವಾಸ, ಇನ್ನೆಂದೂ ಉಪ ಚುನಾವಣೆಗೆ ನಿಲ್ಲುವುದಿಲ್ಲ’ ಎಂದು ಶಪಥ ಮಾಡಿದರು. ವಿಧಾನಸಭೆಯ ಒಳಗೆ, ಹೊರಗೆ ಈ ವಿಷಯವನ್ನು ಸಿದ್ದರಾಮಯ್ಯ ಆಗಾಗ ಪ್ರಸ್ತಾಪಿಸುತ್ತಾರೆ. ಇದನ್ನೂ ಓದಿ: ದೇಶದಲ್ಲೇ ಮೊದಲ ಉಪಚುನಾವಣೆ ನಡೆದಿದ್ದು ಚಿಕ್ಕಮಗಳೂರಿನ ತರೀಕೆರೆಯಲ್ಲಿ

  • ರಂಗೇರಿದ ಚಾಮುಂಡೇಶ್ವರಿ ಕ್ಷೇತ್ರ- ಸಿದ್ದರಾಮಯ್ಯ ಬೆಂಬಲಿಗರಿಗೆ ಜಿಟಿಡಿ ಸೆಡ್ಡು

    ರಂಗೇರಿದ ಚಾಮುಂಡೇಶ್ವರಿ ಕ್ಷೇತ್ರ- ಸಿದ್ದರಾಮಯ್ಯ ಬೆಂಬಲಿಗರಿಗೆ ಜಿಟಿಡಿ ಸೆಡ್ಡು

    ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ (Chamundeshwari Constituency) ದಲ್ಲಿ ಚುನಾವಣಾ ಕಣ ನಿಧಾನವಾಗಿ ರಂಗೇರುತ್ತಿದೆ. ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಅಸಮಾಧಾನಿತ ಜೆಡಿಎಸ್ (JDS) ನಾಯಕರನ್ನು ಕಾಂಗ್ರೆಸ್ (Congress) ಸೇರ್ಪಡೆ ಮಾಡಿಕೊಂಡು ಒಂದು ಹಂತದ ಶಕ್ತಿ ಪ್ರದರ್ಶನ ಮಾಡಿದ್ದರು. ಈಗ ಹಾಲಿ ಶಾಸಕ ಜಿ.ಟಿ. ದೇವೇಗೌಡ, ದಳಪತಿಗಳ ಮಕ್ಕಳ ಹುಟ್ಟುಹಬ್ಬದ ಹೆಸರಿನಲ್ಲಿ ಶಕ್ತಿ ಪ್ರದರ್ಶನ ನಡೆಸಿ ಚುನಾವಣಾ ರಣ ಕಹಳೆ ಊದಿದ್ದಾರೆ.

    ಸಿದ್ದರಾಮಯ್ಯ (Siddaramaiah) ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಸಂಘಟನೆ ವಿಚಾರದಲ್ಲಿ ಸಕ್ರಿಯರಾಗುತ್ತಿದ್ದಂತೆ ಅಲರ್ಟ್ ಆದ ಜಿ.ಟಿ. ದೇವೇಗೌಡ (GT Devegowda), ತಮ್ಮ ಮಗ ಜಿ.ಡಿ. ಹರೀಶ್ ಗೌಡ ಹಾಗೂ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬವನ್ನು ಜಂಟಿಯಾಗಿ ಆಯೋಜಿಸಿ ದೊಡ್ಡ ರಾಜಕೀಯ ಸಮಾವೇಶವನ್ನೇ ನಡೆಸಿದ್ದಾರೆ. ಈ ಹುಟ್ಟುಹಬ್ಬ ರೂಪದ ಸಮಾವೇಶಕ್ಕೆ ಸಾವಿರಾರು ಜನರನ್ನು ಸೇರಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.

    ಕಾಂಗ್ರೆಸ್ ಎಷ್ಟೇ ಜೆಡಿಎಸ್‍ನ ಸ್ಥಳೀಯ ನಾಯಕರನ್ನು ತಮ್ಮ ಸೆಳೆದು ಕೊಂಡರು ಜೆಡಿಎಸ್ ಸಂಘಟನೆಗೆ ಯಾವುದೇ ನಷ್ಟ ಇಲ್ಲ ಎಂಬ ಸಂದೇಶವನ್ನು ವಿರೋಧಿ ಪಡೆಗೆ ಜಿಟಿಡಿ ಈ ಸಮಾವೇಶದ ಮೂಲಕ ರವಾನಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್‍ನ ಭದ್ರಕೋಟೆ ಎಂಬುದನ್ನು ಚುನಾವಣೆ ಹೊಸ್ತಿಲಲ್ಲಿ ಮತ್ತೆ ಪ್ರೂವ್ ಮಾಡುವ ರೀತಿ ಜಿಟಿಡಿ ತಮ್ಮ ಮಗ ಹಾಗೂ ನಿಖಿಲ್ ಜೊತೆಗೂಡಿ ಶಕ್ತಿ ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: ನನ್ನ ರಕ್ತದ ಕಣ ಕಣದಲ್ಲೂ ಕಾಂಗ್ರೆಸ್ ಇದೆ, ಬಿಜೆಪಿ ಬಿಡೋಕೆ ಸಿದ್ಧ – ಹೆಚ್. ವಿಶ್ವನಾಥ್

    ಕಳೆದ ವಿಧಾನಸಭಾ ಚುನಾವಣೆಯ ಮೋಸ್ಟ್ ಹೈವೋಲ್ಟೇಜ್ ಕ್ಷೇತ್ರ ಅಂದರೆ ಅದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ. ಸಿದ್ದರಾಮಯ್ಯ- ಜಿಟಿಡಿ ನಡುವಿನ ಜಿದ್ದಾಜಿದ್ದಿನಿಂದ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿತ್ತು. ಈ ಬಾರಿ ಅಂತಹ ದೊಡ್ಡ ಮಟ್ಟದ ಪೈಪೋಟಿಯ ಲಕ್ಷಣಗಳು ಇಲ್ಲ. ಕಾರಣ ಸಿದ್ದರಾಮಯ್ಯ ತಮಗೆ ಚಾಮುಂಡೇಶ್ವರಿ ಕ್ಷೇತ್ರದ ಸಹವಾಸ ಸಾಕು ಎನ್ನುವ ರೀತಿ ತಮ್ಮ ರಾಜಕೀಯ ಹೆಜ್ಜೆ ಇಟ್ಟಿದ್ದಾರೆ. ಆದರೆ ತಾವು ಸೋತ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಈ ಬಾರಿಯಾದರೂ ಗೆಲ್ಲಿಸಿ ಸೋಲಿನ ಸೇಡು ತೀರಿಸಿಕೊಳ್ಳಬೇಕೆಂಬ ಹಠವಂತೂ ಸಿದ್ದರಾಮಯ್ಯ ಅವರಲ್ಲಿದೆ. ಹೀಗಾಗಿಯೆ ಮೊನ್ನೆ ಮೊನ್ನೆ ಜೆಡಿಎಸ್ ನಲ್ಲಿ ಅಸಮಾಧಾನಗೊಂಡ ಸ್ಥಳೀಯ ನಾಯಕರನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಂಡು ಹಾಲಿ ಶಾಸಕ ಜಿ.ಟಿ. ದೇವೇಗೌಡರ ಶಕ್ತಿ ಕುಂದಿಸುವ ಮೊದಲ ಪಟ್ಟು ಹಾಕಿದ್ದರು.

    ಅಲ್ಲಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಶ್ಚಿತ ಕಾಂಗ್ರೆಸ್ ಅಭ್ಯರ್ಥಿ ಈ ಕ್ಷಣಕ್ಕೆ ಇರದೆ ಇದ್ದರು ಕಾಂಗ್ರೆಸ್ ದೊಡ್ಡ ಸೋಲಿನ ಸೇಡು ತೀರಿಸಿ ಕೊಳ್ಳುವ ಯತ್ನವಂತೂ ನಡೆಸಿದೆ. ಈ ಮೂಲಕ ಜೆಡಿಎಸ್ – ಕಾಂಗ್ರೆಸ್ ನಡುವಿನ ಮೆಗಾ ಫೈಟ್ ಗೆ ಚಾಮುಂಡೇಶ್ವರಿ ಅಖಾಡ ಸಿದ್ಧವಾಗ ತೊಡಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾನು ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಲ್ಲ: ಸಿದ್ದರಾಮಯ್ಯ

    ನಾನು ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಲ್ಲ: ಸಿದ್ದರಾಮಯ್ಯ

    ಮಂಡ್ಯ: ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಲ್ಲ. ನನಗೆ ನಾಲ್ಕೈದು ಕ್ಷೇತ್ರಗಳಿಂದ ಸ್ಪರ್ಧಿಸಲು ಆಹ್ವಾನ ಬಂದಿದೆ. ನಾನು ಇನ್ನೂ ಎಲ್ಲಿ ನಿಲ್ಲಬೇಕೆಂದು ನಿರ್ಧಾರ ಮಾಡಿಲ್ಲ. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ನನ್ನ ಪ್ರಕಾರ ಅವಧಿಗೂ ಮುನ್ನ ಚುನಾವಣೆ ಬರಲ್ಲ. ಈ ಬಗ್ಗೆ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಸಿಟಿ ರವಿ ಸೇರಿದಂತೆ ಹಲವಾರು ನಾಯಕರು ಹೇಳಿದ್ದಾರೆ. ಅವಧಿಗೂ ಮುನ್ನ ಚುನಾವಣೆ ಯಾಕೆ ಮಾಡುತ್ತಾರೆ. ಚುನಾವಣೆ ಇರುವುದು ಏಪ್ರಿಲ್‍ನಲ್ಲಿ. ಇದೆಲ್ಲ ಊಹಾಪೋಹಗಳಷ್ಟೇ. ಒಂದು ವೇಳೆ ಅವಧಿಗೂ ಮುನ್ನ ಚುನಾವಣೆ ಬಂದರೆ ನಾವು ಸಿದ್ಧರಾಗಿದ್ದೇವೆ. ಜನರು ನಮ್ಮ ಪರವಾಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪನೇ ಕಾರಣ: ನಾರಾಯಣಗೌಡ

    ಪಂಚರಾಜ್ಯ ಚುನಾವಣೆ ನಂತರ ಕಾಂಗ್ರೆಸ್ ಜೆಡಿಎಸ್ ಶಾಸಕರು ಬಿಜೆಪಿಗೆ ಬರುತ್ತಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪಕ್ಷದಿಂದ ಕಾಂಗ್ರೆಸ್‍ಗೆ ಎಷ್ಟು ಜನ ಬರುತ್ತಾರೆ ಕಾದು ನೋಡಿ. ಕಾಂಗ್ರೆಸ್ ತೊರೆದು ಯಾರು ಬಿಜೆಪಿ ಸೇರಲ್ಲ. ಬಿಜೆಪಿಯ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

    ಸಿಎಂ ಇಬ್ರಾಹಿಂ ಕಾಂಗ್ರೆಸ್ ತೊರೆದ ವಿಚಾರ: ವಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಅಂತಾರಲ್ಲ ಆ ರೀತಿ ಇಬ್ರಾಹಿಂ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಇಬ್ರಾಹಿಂಗೆ ಎಲ್ಲವನ್ನು ಕೊಟ್ಟಿದೆ. ಆದರೆ ಮನುಷ್ಯನಿಗೆ ಆಸೆ ಇರಬೇಕು ದುರಾಸೆ ಇರಬಾರದು. ಹಾಲಿ ಶಾಸಕ ಸಂಗಮೇಶ್‍ಗೆ ಟಿಕೆಟ್ ತಪ್ಪಿಸಿ ಭದ್ರಾವತಿಯಲ್ಲಿ ಇಬ್ರಾಹಿಂ ಟಿಕೆಟ್ ಕೊಟ್ಟಿದ್ದೇವು. ಅಲ್ಲಿಯು ಆತ ಸೋತ. ಅದಾದ ಮೇಲೆ ಎಂಎಲ್‍ಸಿಯನ್ನು ರಿನಿವಲ್ ಮಾಡಿದ್ದೇವು. ಆದರೂ ಕೂಡ ಪಕ್ಷ ಬಿಟ್ಟೋಗಿದ್ದಾನೆ. ನಾನು ಪಕ್ಷ ಬಿಡಬೇಡ ಅಂತ ಫೋನ್ ಮಾಡಿ ಹೇಳಿದೆ. ಆದರೆ ಲೀಡರ್ ಆಫ್ ಅಪೋಸಿಷನ್ ಸಿಗಲಿಲ್ಲ ಅಂತ ಪಕ್ಷ ಬಿಟ್ಟಿದ್ದಾರೆ. ರಾಜಕಾರಣದಲ್ಲಿ ಆಸೆಗಳಿರಬೇಕು ಆದರೆ ದುರಾಸೆ ಇರಬಾರದು ಎಂದು ಟಾಂಗ್ ನೀಡಿದ್ದಾರೆ.

    ಜಿಟಿಡಿ ಕಾಂಗ್ರೆಸ್ ಸೇರುವ ವಿಚಾರ: ಜಿ.ಟಿ.ದೇವೆಗೌಡರು ನನ್ನ ಜೊತೆ ಮಾತನಾಡಿದ್ದಾರೆ. ಅವರು ಮತ್ತು ಅವರ ಮಗನಿಗೆ ಟಿಕೆಟ್ ಕೇಳಿದ್ದಾರೆ. ನಾನು ಇನ್ನು ಈ ಬಗ್ಗೆ ಹೈಕಮಾಂಡ್ ಜೊತೆ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಕಿಂಗ್ ಆಗಲ್ಲ, ನನಗೆ ಕಿಂಗ್ ಮೇಕರ್ ಆಗೋಕೆ ಇಷ್ಟ: ಸಿಎಂ ಇಬ್ರಾಹಿಂ

  • ಸ್ವ ಪಕ್ಷೀಯರಿಂದಲೇ ನನಗೆ ಚಾಮುಂಡೇಶ್ವರಿಯಲ್ಲಿ ಸೋಲು: ಸಿದ್ದರಾಮಯ್ಯ

    ಸ್ವ ಪಕ್ಷೀಯರಿಂದಲೇ ನನಗೆ ಚಾಮುಂಡೇಶ್ವರಿಯಲ್ಲಿ ಸೋಲು: ಸಿದ್ದರಾಮಯ್ಯ

    – ಚುನಾವಣೆಯಲ್ಲಿ ಅಷ್ಟು ಕೆಟ್ಟದಾಗಿ ಸೋಲ್ತೇನೆ ಅಂದ್ಕೊಂಡಿರಲಿಲ್ಲ
    – ಅಷ್ಟು ಕೆಲಸ ಮಾಡಿದ್ದಕ್ಕೆ ನನ್ನನ್ನು ಸೋಲಿಸಿದಿರಾ?
    – ಸಮ್ಮಿಶ್ರ ಸರ್ಕಾರ ಬೀಳಲು ಕುಮಾರಸ್ವಾಮಿ ಕಾರಣ
    – ಬಾದಾಮಿಯಲ್ಲಿ ಗೆಲ್ಲದಿದ್ದರೆ ನನ್ನ ಭವಿಷ್ಯವೇ ಮಂಕಾಗುತ್ತಿತ್ತು

    ಮೈಸೂರು: ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಇಷ್ಟೊಂದು ಕೆಟ್ಟದಾಗಿ ಸೋಲುತ್ತೇನೆ ಅಂತ ಅಂದುಕೊಂಡಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

    ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲಿನ ಬಗ್ಗೆ ಮೊದಲ ಬಾರಿಗೆ ಸಿದ್ದರಾಮಯ್ಯ ಇಂದು ಮಾತನಾಡಿದರು. ನಾನು ಹಳ್ಳಿಗಳಿಗೆ ಹೋದಾಗ ಜನರೆಲ್ಲ ಪ್ರೀತಿ ತೋರಿಸಿದರು. ಆದರೆ ನನ್ನ ಸೋಲಿಗೆ ನಮ್ಮ ಪಕ್ಷದವರು ಕೂಡ ಕಾರಣರಾದರು. ಪಕ್ಷ ಅಂದರೆ ತಾಯಿ ಇದ್ದ ಹಾಗೆ. ಕ್ಷುಲ್ಲಕ ಕಾರಣಕ್ಕೆ ಪಕ್ಷ ದ್ರೋಹ ಮಾಡಬಾರದು. ಅವರಿಗೆ ಇಷ್ಟ ಇಲ್ಲ ಎಂದರೆ ಪಕ್ಷ ಬಿಟ್ಟು ಹೋಗಬೇಕು. ಪಕ್ಷ ಮುಖ್ಯವೇ ಹೊರತು ವ್ಯಕ್ತಿಗಳಲ್ಲ ಎಂದು ತಿಳಿಸಿದರು.

    ನನ್ನನ್ನು ಸೋಲಿಸೋಕೆ ಏನು ಕಾರಣ ಹೇಳಿ ಎಂದು ಸಭೆಯಲ್ಲಿ ಬಹಿರಂಗವಾಗಿ ಚಾಮುಂಡೇಶ್ವರಿ ಕ್ಷೇತ್ರದ ಜನರನ್ನು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ನನ್ನನ್ನು ಸೋಲಿಸೋಕೆ 1,2,3,4 ಅಂತ ಕಾರಣ ಕೊಡಿ. ನನ್ನ ವಿರುದ್ಧ ನಿಂತಿದ್ದ ಅಭ್ಯರ್ಥಿಗಳ ಪ್ಲಸ್ ಪಾಯಿಂಟ್ 1,2,3,4. ಅಂತ ಪಟ್ಟಿ ಕೊಡಿ. ನಾನು ಇಷ್ಟೆಲ್ಲ ಮಾಡಿದ್ದಕ್ಕೆ ಸೋಲಿಸೋದಾ, ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯವಾಗಿ ಪುನರ್ಜನ್ಮ ಜನ್ಮ ಕೊಟ್ಟ ಕ್ಷೇತ್ರ. ಅದೇ ರೀತಿ ರಾಜಕೀಯವಾಗಿ ಅತೀ ವೇದನೆ ನೀಡಿದ ಕ್ಷೇತ್ರವೂ ಚಾಮುಂಡೇಶ್ವರಿಯೇ ಎಂದರು.

    ನಾನು ಚಾಮುಂಡೇಶ್ವರಿಯಲ್ಲಿ ಇಷ್ಟು ಕೆಟ್ಟದಾಗಿ ಸೋಲುತ್ತೇನೆಂದು ಅಂದುಕೊಂಡಿರಲಿಲ್ಲ. ನನ್ನ ಸೋಲಿಗೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ನವರು ಕಾರಣ. ನಮ್ಮವರಲ್ಲೇ ಕೆಲವರಿಗೆ ನಾನು ಮತ್ತೆ ಸಿಎಂ ಆಗೋದು ಬೇಕಿರಲಿಲ್ಲ. ನಮ್ಮವರಲ್ಲೇ ಕೆಲವರು ಸಹಿಸದೆ ನನ್ನನ್ನು ಸೋಲುವಂತೆ ಮಾಡಿದರು. ನಾನು ಬಾದಾಮಿಯಲ್ಲಿ ಗೆಲ್ಲದಿದ್ದರೆ ನನ್ನ ರಾಜಕೀಯ ಭವಿಷ್ಯವೇ ಮಂಕಾಗಿ ಹೋಗುತ್ತಿತ್ತು. ನಾನು ಮತ್ತೆ ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಮರ್ಮಾಘಾತ ಮಾತ್ರ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಭಾವನಾತ್ಮಕವಾಗಿ ನುಡಿದರು.

    ನಾನು ಬಾದಾಮಿಗೆ ಹೋಗಲಿಲ್ಲ ಆದರೂ ಅಲ್ಲಿನ ಜನ ನನ್ನನ್ನು ಗೆಲ್ಲಿಸಿದರು. ನೀವು ಸೋಲಿಸಿದ ಹಾಗೆ ಅವರೂ ಸೋಲಿಸಿದ್ದರೆ ನನ್ನ ರಾಜಕೀಯ ಭವಿಷ್ಯವೆ ಮಂಕಾಗಿ ಹೋಗುತ್ತಿತ್ತು. ಈ ರಾಜ್ಯದ ಭವಿಷ್ಯ ಏನಾಗುತ್ತಿತ್ತು. ನಾನು ಗೆದಿದ್ದರೆ ಮತ್ತೊಮ್ಮೆ ಸಿಎಂ ಆಗುತ್ತಿದ್ದನೇನೋ. ಮತ್ತೆ ಸಿಎಂ ಆಗುವಂತಹ ಅವಕಾಶವೂ ಇತ್ತು. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನನ್ನ ಸೋಲಿಸಿದರು. 2006 ಉಪ ಚುನಾವಣೆಯಲ್ಲಿನ ಗೆಲುವಿನ ಋಣ ತೀರಿಸೋಕೆ ಬಂದಿದ್ದೆ. ಅದು ನನ್ನ ಕೊನೇ ಚುನಾವಣೆ ಅಂದುಕೊಂಡೇ ಸ್ಪರ್ಧಿಸಿದ್ದೆ. ಆದರೆ ಜನರು ನನ್ನನ್ನು ತಿರಸ್ಕಾರ ಮಾಡಿದರು. ಯಾಕಾಗಿ ತಿರಸ್ಕರಿಸಿದರು ಎಂದು ನೀವೇ ಒಮ್ಮೆ ಯೋಚನೆ ಮಾಡಿ ಎಂದರು.

    ಇದೇ ವೇಳೆ ಕಾರ್ಯಕರ್ತರು ಇನ್ನೊಮ್ಮೆ ನೀವೇ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಿ ಎಂದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಇನ್ನೊಂದು ಬಾರಿ ಚೂರಿ ಹಾಕಿದರೆ ಏನೂ ಮಾಡಲಿ ಎಂದರು. ಯಡಿಯೂರಪ್ಪ ಚೆಕ್ ಮೂಲಕ ಲಂಚ ಸ್ವೀಕರಿಸುತ್ತಿದ್ದರು. ಅವರ ಮಗ ವಿಜಯೇಂದ್ರ ಆರ್‍ಟಿಜಿಎಸ್ ಮೂಲಕ ಲಂಚ ಸ್ವೀಕರಿಸುತ್ತಿದ್ದಾನೆ. ಆದರೆ ಅವನಿಗೆ ಜೈಕಾರ ಹಾಕುತ್ತಾರೆ. ಅವನು 7.40 ಕೋಟಿ ರೂ.ಗಳನ್ನು ಆರ್‍ಟಿಜಿಎಸ್ ಮೂಲಕ ಲಂಚ ಸ್ವೀಕಾರ ಮಾಡಿದ್ದ. ಇನ್ನಷ್ಟು ಲಂಚ ಸ್ವೀಕರಿಸಲಿ ಅಂತ ಜೈಕಾರ ಹಾಕುತ್ತಿರಬೇಕು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

    ಕುಮಾರಸ್ವಾಮಿ ನಾನು ಸರ್ಕಾರ ಬಿಳಿಸಿದೆ ಅಂತಾನೆ. ನಾನು ಸರ್ಕಾರ ಬಿಳಿಸೋದಾಗಿದ್ದರೆ ಕುಮಾರಸ್ವಾಮಿಯನ್ನ ಸಿಎಂ ಆಗೋದಕ್ಕೆ ಬಿಡುತ್ತಿರಲಿಲ್ಲ. 80 ಸೀಟು ಗೆದ್ದಿದ್ದೇವೆ ನಾವು ಜೆಡಿಎಸ್‍ಗೆ ಸಪೋರ್ಟ್ ಮಾಡೋಲ್ಲ ಅಂದಿದ್ದರೆ ಕುಮಾರಸ್ವಾಮಿ ಸಿಎಂ ಆಗ್ತಿದ್ರಾ? ನಾನು ಒಪ್ಪದೇ ಕುಳಿತಿದ್ರೆ ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ಆಗ್ತಿತ್ತಾ? ಇವರು ಅಧಿಕಾರ ಕಳೆದುಕೊಂಡಿದ್ದು ನನ್ನಿಂದಲ್ಲ. ಬದಲಿಗೆ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಕುಳಿತು ಅಧಿಕಾರ ಮಾಡುತ್ತಿದ್ದಕ್ಕೆ ಅಧಿಕಾರ ಕಳೆದುಕೊಂಡರು. ಶಾಸಕರು, ಸಚಿವರ ಕೈಗೆ ಸಿಗುತ್ತಿರಲಿಲ್ಲ. ಯಾವ ಪತ್ರ ಕೊಟ್ಟರೂ ಒಂದಕ್ಷರ ಬರೆಯುತ್ತಿರಲಿಲ್ಲ. ಇದರಿಂದ ಬೇಸರಗೊಂಡು ಶಾಸಕರು ಹೊರಗೆ ಹೋದರು. ಇವರು ಶಾಸಕರ ಕೈಗೆ ಸಿಕ್ಕಿದ್ದರೆ 14 ಎಂಎಲ್‍ಎಗಳು ನಮ್ಮಲ್ಲೇ ಇರುತ್ತಿದ್ದರು. ಸರ್ಕಾರವು ಬೀಳುತ್ತಿರಲಿಲ್ಲ. ಕುಣಿಯೋಕೆ ಆಗದವರು ನೆಲಡೊಂಕು ಅಂತಾರೆ. ಕುಮಾರಸ್ವಾಮಿದು ಅದೇ ರೀತಿ. ಸಮ್ಮಿಶ್ರ ಸರ್ಕಾರ ಬೀಳಲು ಕಾರಣ ಕುಮಾರಸ್ವಾಮಿ ಎಂದು ಎಚ್‍ಡಿಕೆ ವಿರುದ್ಧ ಹರಿಹಾಯ್ದರು.

    ನನ್ನ ವಿರುದ್ಧ 5 ವರ್ಷ ಯಾವತ್ತೂ ಯಾವ ಎಂಎಲ್‍ಎಗಳು ಧ್ವನಿ ಎತ್ತಿರಲಿಲ್ಲ. ಸಚಿವ ಸ್ಥಾನದಿಂದ ಕೇಳಗಿಸಿದ್ದಕ್ಕೆ ಶ್ರೀನಿವಾಸ್ ಪ್ರಸಾದ್ ಹೋಗಿದ್ದು ಬಿಟ್ಟರೆ ಮತ್ಯಾರು ಮಾತನಾಡಿದ್ದರು ಹೇಳಿ. ಆದರೆ ಒಂದೂವರೆ ವರ್ಷ ಕುಮಾರಸ್ವಾಮಿ ವಿರುದ್ಧ ಎಲ್ಲ ಎಂಎಲ್‍ಎಗಳು ಮಾತನಾಡಿದ್ದರು. ಈಗ ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಾರೆ ಎಂದರು.

    ಗೋ ಹತ್ಯೆ ನಿಷೇಧ ಕಾಯ್ದೆ ವಿರೋಧಿಸಿಕ್ಕೆ ಮುಸ್ಲಿಂ ಒಲೈಕೆ ಮಾಡ್ತಿದ್ದಾನೆ ಎಂದು ಹೇಳಿದ್ರು. ಗೋ ಮಾಂಸವನ್ನ ಮುಸ್ಲಿಮರು ಮಾತ್ರ ತಿನ್ನುತ್ತಿದ್ದಾರಾ. ಎಲ್ಲರೂ ತಿನ್ನುತ್ತಾರೆ, ಹಿಂದುಳಿದವರು, ದಲಿತರು ಎಲ್ಲರೂ ತಿನ್ನುತ್ತಾರೆ. ಅಹಾರ ಪದ್ಧತಿ ನಮ್ಮ ಇಷ್ಟ. ಬೇಕು ಎಂದರೆ ನಾನು ಗೋಮಾಂಸ ತಿನ್ನುತ್ತೇನೆ. ದನವನ್ನು ಸಾಕುವ ರೈತರಿಗೆ ಅದರ ಕಷ್ಟ ಗೊತ್ತಿದೆ. ಆರ್‍ಎಸ್‍ಎಸ್ ನವರಿಗೇನು ಗೊತ್ತು. ಸಗಣಿ ಎತ್ತಿದ್ದರೆ ಅದರ ಕಷ್ಟ ಗೊತ್ತಿರುತ್ತಿತ್ತು. ರೈತ ಹಸು ಸಾಕುವುದನ್ನು ನಿಲ್ಲಿಸಿದರೆ ಹಾಲನ್ನು ಹೇಗೆ ಉತ್ಪಾದನೆ ಮಾಡುವುದು. ದನವನ್ನು ಸಾಕಲಾಗದವರು ನನ್ನ ಮನೆಗೆ ತಂದು ಕೊಡಿ ಎಂದು ಅಶೋಕ್ ಹೇಳುತ್ತಾನೆ. ದುಡ್ಡು ಕೊಟ್ಟು ತೆಗೆದುಕೊಂಡು ಸಾಕು ಅಂತ ನಾನು ಹೇಳಿದೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

    ಬಿಜೆಪಿಯ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಎನ್ನುವವಳು ಎಪಿಎಂಸಿ ರದ್ದು ಮಾಡೋಕೆ ಇದೆ ಸರಿಯಾದ ಸಮಯ ಅಂದಿದ್ದಾಳೆ. ಅವರು ಎಪಿಎಂಸಿ, ಕೃಷಿ ಕಾಯ್ದೆ ತಿದ್ದುಪಡಿ ಮಾಡಿದ್ದಾರೆ. ಇದರಿಂದ ರೈತರಿಗೆ ಅನಾನೂಕೂಲ ಆಗಿದೆ ಎಂದು ನಿರ್ಮಲಾ ಸೀತಾರಾಮನ್ ವಿರುದ್ಧ ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

  • ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದನ್ನು ಇನ್ನೂ ಮರೆಯದ ಸಿದ್ದು

    ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದನ್ನು ಇನ್ನೂ ಮರೆಯದ ಸಿದ್ದು

    ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೋತು ಒಂದೂವರೆ ಎರಡು ವರ್ಷ ಆಗುತ್ತಾ ಬಂದರೂ ಇನ್ನೂ ಅವರು ಆ ಸೋಲನ್ನು ಮರೆತಿಲ್ಲ.

    ಇವತ್ತು ಮೈಸೂರಿನಲ್ಲಿ ಹುಣಸೂರು ಉಪ ಚುನಾವಣೆಯಲ್ಲಿ ಗೆದ್ದ ಕಾರಣ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಕೆ ವೇಳೆ ತಮ್ಮ ಸೋಲನ್ನು ಸಿದ್ದು ನೆನಪಿಸಿಕೊಂಡರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದರು. ಗ್ರಾ.ಪಂ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯನ್ನು ಬಿಜೆಪಿಯವರು ನಿಲ್ಲಿಸಿದರು. ಇದರಿಂದ ಬಿಜೆಪಿ ಮತಗಳು ಜೆಡಿಎಸ್ ಪಾಲಾಯಿತು ಎಂದು ಹೇಳಿದ್ದಾರೆ.

    ಅಷ್ಟೇ ಅಲ್ಲದೆ ಶ್ರೀರಾಮುಲು ಡಿಸಿಎಂ ಮಾಡುತ್ತಾರೆ ಎಂದು ಪ್ರಚಾರ ಮಾಡಿದರು. ಲಿಂಗಾಯತರನ್ನು ಸಿದ್ದರಾಮಯ್ಯ ಒಡೆದ, ಹಿಂದೂ ಧರ್ಮ ವಿರೋಧಿ ಎಂದು ಅಪಪ್ರಚಾರ ಮಾಡಿದರು. ಇದನ್ನು ಸರಿಯಾಗಿ ನಮ್ಮವರು ಜನರಿಗೆ ತಿಳಿಸುವಲ್ಲಿ ವಿಫಲವಾದರು. ಇದರಿಂದ ನಮಗೆ ಸೋಲಾಯಿತು ಎಂದರು. ನನ್ನ ಚಾಮುಂಡೇಶ್ವರಿ ಉಪಚುನಾವಣೆಯಲ್ಲೇ 60 ಕೋಟಿ ಖರ್ಚು ಮಾಡಿ ಸೋಲಿಸಲು ಪ್ರಯತ್ನ ಪಟ್ಟರು ಎಂದು ತಿಳಿಸಿದರು.

    ಹುಣಸೂರು ಉಪ ಚುನಾವಣೆಯಲ್ಲಿ 100 ಕೋಟಿವರೆಗೆ ಖರ್ಚು ಮಾಡಿದರು. ಆದರೂ ಈ ಹೊಡೆತವನ್ನು ಮಂಜುನಾಥ್ ತಡೆದುಕೊಂಡ. ನನ್ನ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಚೆನ್ನಿಂಗಪ್ಪ ಅಂತ ಒಬ್ಬ ಇದ್ದ, ಅವ ನೂರು ರೂ. ಕಂತೆ ತೆಗೆದುಕೊಂಡು ಊರೂರಲ್ಲಿ ಚೆಲ್ಲಿ ಬಿಡುತ್ತಿದ್ದ. ಈ ಉಪಚುನಾವಣೆಗಳಲ್ಲಿ ಹಣವನ್ನು ಚೆಲ್ಲಿ ಚುನಾವಣೆ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಸಿದರು.

  • ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ರೌಂಡ್ಸ್

    ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ರೌಂಡ್ಸ್

    ಮೈಸೂರು: ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಚಿವ, ಶಾಸಕ ಜಿ.ಟಿ.ದೇವೇಗೌಡ ಅವರು ರೌಂಡ್ಸ್ ನಡೆಸಿದ್ದು, ಬೆಳಗ್ಗೆ 7 ಗಂಟೆಯಿಂದ ಕ್ಷೇತ್ರದಲ್ಲಿ ರೌಂಡ್ಸ್ ಆರಂಭಿಸಿರುವ ಜಿಟಿಡಿ ಕ್ಷೇತ್ರದ ಸಮಸ್ಯೆಗಳನ್ನು ಅಲಿಸುತ್ತಾ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಾ ಸಾಗುತ್ತಿದ್ದಾರೆ.

    ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಬಡಾವಣೆಗಳ ವೀಕ್ಷಣೆ ಮಾಡಿದ ಜಿಟಿಡಿ ರಸ್ತೆ, ಒಳಚರಂಡಿ, ಕುಡಿಯೋ ನೀರಿನ ಸಮಸ್ಯೆ ಆಲಿಸಿದರು. ಪಾರ್ಕ್ ಸ್ವಚ್ಛತೆ, ಡ್ರೈನೆಜ್ ಸಮಸ್ಯೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.

    ತಾವು ಭೇಟಿ ನೀಡಿದ ಪ್ರಾದೇಶಗಳ ಸಮಸ್ಯೆಗಳ ಕುರಿತ ಮಾಹಿತಿಯನ್ನು ಜನರಿಂದ ಪಡೆದು, ಆ ಸಮಸ್ಯೆಗಳಿಗೆ ಇರುವ ಪರಿಹಾರ ಮಾರ್ಗಗಳನ್ನು ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಾಜಿ ಸಚಿವರೊಂದಿಗೆ ಹಲವು ಇಲಾಖೆಯ ಅಧಿಕಾರಿಗಳು ಇದ್ದರು. ವಿವಿಧ ರಸ್ತೆಗಳಲ್ಲಿ 10 ಕಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಕೂಡ ನೆರವೇರಿಸಿದರು. ಜನರ ಎಲ್ಲಾ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಭರವಸೆ ನೀಡಿದರು.

  • ನನಗೆ ನೀವೆಲ್ಲ ನಾಮ ಹಾಕಿದ್ರಿ – ಕಾರ್ಯಕರ್ತರಿಗೆ ಸನ್ನೆ ಮೂಲಕ ಸಿದ್ದು ಟಾಂಗ್

    ನನಗೆ ನೀವೆಲ್ಲ ನಾಮ ಹಾಕಿದ್ರಿ – ಕಾರ್ಯಕರ್ತರಿಗೆ ಸನ್ನೆ ಮೂಲಕ ಸಿದ್ದು ಟಾಂಗ್

    ಮೈಸೂರು: ನನಗೆ ನೀವೆಲ್ಲ ನಾಮ ಹಾಕಿದ್ರಿ ಎಂದು ಕಾರ್ಯಕರ್ತರೊಬ್ಬರಿಗೆ ಸನ್ನೆ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

    ಜಿಲ್ಲೆಯ ಹುಣಸೂರಿನ ಧರ್ಮಾಪುರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ನನಗೆ ನೀವೆಲ್ಲ ನಾಮಹಾಕಿದಿರಿ ಎಂದು ಕಾರ್ಯಕರ್ತರೋಬ್ಬರಿಗೆ ಸನ್ನೆ ಮಾಡಿ ತೋರಿಸಿದ್ದಾರೆ.

    ವೇದಿಕೆ ಮೇಲಿದ್ದ ಸಿದ್ದರಾಮಯ್ಯ ಅವರನ್ನು ಮಾತನಾಡಿಸಲು ಕಾರ್ಯಕರ್ತ ಆಗಮಿಸಿದ್ದ. ಮಾತುಕತೆ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ತನ್ನ ಸೋಲನ್ನು ನೆನಪಿಸಿಕೊಂಡಿದ್ದಾರೆ. ಆಗ ನಿಮ್ಮನ್ನು ನಂಬಿದ್ದಕ್ಕೆ ನಾಮ ಹಾಕಿದಿರಲ್ಲ ಎಂದು ಹೇಳಿ ನಾಮವನ್ನು ಪ್ರದರ್ಶಿಸಿದ್ದಾರೆ.

    ಉಪಚುನಾವಣೆಯಲ್ಲಿ ಹೆಚ್.ಪಿ.ಮಂಜುನಾಥ್ ಅವರನ್ನು ಗೆಲ್ಲಿಸಿ ಎಂದು ಕೈ ಸನ್ನೆ ಮೂಲಕವೇ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಸೂಚನೆ ನೀಡಿದರು. ಇದೇ ವೇಳೆ ವೇದಿಕೆ ಮೇಲೆಯೇ ಕಾರ್ಯಕರ್ತನನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದೇ ವೇಳೆ ಅಯೋಧ್ಯೆ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಅವರು, ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಹಲವು ದಶಕಗಳ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಈ ತೀರ್ಪನ್ನು ನಮ್ಮ ಪಕ್ಷ ಸ್ವಾಗತಿಸಿ, ಗೌರವಿಸುತ್ತದೆ. ಎರಡೂ ಧರ್ಮದವರು ಈ ತೀರ್ಪನ್ನು ಸ್ವಾಗತಿಸಬೇಕು. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ನಮ್ಮಲ್ಲಿ ಮೂಡಲಿ ಅಭಿಪ್ರಾಯ ವ್ಯಕ್ತಪಡಿಸಿದರು.

  • ಮತ್ತೆ ಚಾಮುಂಡೇಶ್ವರಿ ಸೋಲಿನ ನೆನಪು ಮಾಡಿಕೊಂಡ ಮಾಜಿ ಸಿಎಂ

    ಮತ್ತೆ ಚಾಮುಂಡೇಶ್ವರಿ ಸೋಲಿನ ನೆನಪು ಮಾಡಿಕೊಂಡ ಮಾಜಿ ಸಿಎಂ

    – ಶ್ಯಾನಭೋಗರ ಮಾತು ಕೇಳಿದ್ರೆ ಸಿಎಂ ಆಗ್ತಿರಲಿಲ್ಲ ಎಂದ್ರು

    ಬೆಂಗಳೂರು: ರಾಜ್ಯ ಮುಖ್ಯಮಂತ್ರಿಯಾಗಿ ನಾನು ಜನತೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದೆ. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನನ್ನು ಸೋಲಿಸಿದರು. ಬಹುಶಃ ವರುಣಾ ಕ್ಷೇತ್ರದಲ್ಲಿ ನಿಂತಿದ್ದರು ಕೂಡ ನೀವು ಆರ್ಶೀವಾದ ಮಾಡುತ್ತಿದ್ದಿರಿ ಎಂದು ಸುತ್ತೂರು ಜಾತ್ರ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ಪದೇ ಪದೇ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಸೋಲು ಕನವರಿಕೆ ಆಗುತ್ತಿದ್ದು, ಈ ಹಿಂದೆ ಹಲವು ವೇದಿಕೆಗಳಲ್ಲಿ ತಮ್ಮ ಸೋಲಿನ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇಂದು ಕೂಡ ತಮ್ಮ ಆರಂಭಿಕ ಜೀವನದ ಬಗ್ಗೆ ನೆನಪಿಸಿಕೊಂಡ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಸೋಲು ಕನವರಿಕೆ ಆಯಿತು. ವೇದಿಕೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದರು ಕೂಡ ಚಾಮುಂಡೇಶ್ವರಿ ಜನರು ನನ್ನನ್ನು ಸೋಲಿಸಿದರು. ಆದರೆ ದೂರದ ಎಲ್ಲೋ ಬಾದಾಮಿ ಕ್ಷೇತ್ರದ ಜನ ಗೆಲ್ಲಿಸಿದರು. ವರುಣಾ ಕ್ಷೇತ್ರದಲ್ಲಿ ನಿಂತಿದ್ದರು ಕೂಡ ನೀವು ಆಶೀರ್ವಾದ ನೀಡುತ್ತಿದ್ದಿರಿ. ಹೀಗಾಗಿ ಈ ವರುಣಾ ಕ್ಷೇತ್ರ ಹಾಗೂ ಸುತ್ತೂರು ಮಠದ ಮೇಲೆ ನಮಗೆ ಅಪಾರ ಗೌರವ ಇದೆ ಎಂದರು.

    ಇದಕ್ಕೂ ಮುನ್ನ ಆರಂಭಿಕ ಜೀವನದ ಬಗ್ಗೆ ನೆನಪಿಸಿಕೊಂಡ ಅವರು, ಊರಿನಲ್ಲಿ ಪಂಚಾಯಿತಿ ಸೇರಿಸಿ ನಾನು ಲಾಯರ್ ಓದಿದೆ. ಏಕೆಂದರೆ ನಮ್ಮಪ್ಪ ನಮ್ಮೂರಿನ ಶ್ಯಾನಬೋಗರ ಮಾತು ಕೇಳುತ್ತಿದ್ದರು. ನನ್ನ ಮಗ ಲಾಯರ್ ಓದಬೇಕು ಎಂದು ಶ್ಯಾನಬೋಗರ ಬಳಿ ಕೇಳಿದರು. ಆಗ ಆ ಶ್ಯಾನಬೋಗರು ಹೇ ಕುರುಬರು ಲಾಯರ್ ಓದಲು ಆಗುತ್ತಾ? ಲಾಯರ್ ಗಿರಿ ಏನಿದ್ರು ಬ್ರಾಹ್ಮಣರ ಕೆಲಸ ಎಂದು ಹೇಳಿದ್ದರು. ಅಂದು ಶ್ಯಾನಬೋಗರ ಮಾತು ಕೇಳಿ ನಮ್ಮಪ್ಪ ನನಗೆ ಓದಿಸೋಲ್ಲ ಎಂದಿದ್ದ. ನಾನು ಮನೆಯಲ್ಲಿ ಗಲಾಟೆ ಮಾಡಿ ಲಾಯರ್ ಓದಿಸಲಿಲ್ಲ ಅಂದರೆ ಪಾಲು ಕೊಟ್ಟು ಬಿಡು ಎಂದು ಕೇಳಿದ್ದೆ. ಆಗ ಊರಿನಲ್ಲಿ ಪಂಚಾಯಿತಿ ಸೇರಿಸಿ ಕೊನೆಗೆ ನಾನು ಲಾಯರ್ ಓದಲು ಅನುಮತಿ ನೀಡಿದರು. ಆಗ ಶ್ಯಾನಬೋಗರ ಮಾತು ಕೇಳಿದರೆ ಲಾಯರ್ ಆಗುತ್ತಿರಲಿಲ್ಲಾ ಎಂದರು. ಅಲ್ಲದೇ ಲಾಯರ್ ಓದಿದಕ್ಕೆ ಸಿಎಂ ಆದೆ ಎಂದರು.

    ಇದೇ ವೇಳೆ ಯಾರು ಕೂಡ ಕರ್ಮವನ್ನ ನಂಬಬೇಡಿ ಎಂದ ಸಿದ್ದರಾಮಯ್ಯ ಅವರು, ಈ ಜನ್ಮದಲ್ಲಿ ಹೀಗಾಗಿದ್ದೆ, ಆ ಜನ್ಮದಲ್ಲಿ ಹಾಗಾಗಿದ್ದೆ ಎಂಬುವುದನ್ನು ನಂಬಲೇಬೇಡಿ. ಅದೊಂದು ದೊಡ್ಡ ಸುಳ್ಳಿನ ಕಥೆ. ಪಾಪ ಮಾಡಿದರೆ ಕುರಿ, ಕೋಳಿ, ನಾಯಿ ಆಗುತ್ತಾರೆ ಎಂಬುವುದು ಸುಳ್ಳು. ನಾನು ನಂಬಲ್ಲ ನೀವು ನಂಬಬೇಡಿ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv