Tag: ಚಾಮರಾಜನಗರ ದುರಂತ

  • ಆಕ್ಸಿಜನ್ ನೀಡದೇ ಕೊಂದು ಹಾಕಿ, ಸಹಜ ಸಾವು ಅಂತಾ ಮರಣ ಪತ್ರ ನೀಡ್ತಿದ್ದಾರೆ: ಡಿ.ಕೆ.ಶಿವಕುಮಾರ್

    ಆಕ್ಸಿಜನ್ ನೀಡದೇ ಕೊಂದು ಹಾಕಿ, ಸಹಜ ಸಾವು ಅಂತಾ ಮರಣ ಪತ್ರ ನೀಡ್ತಿದ್ದಾರೆ: ಡಿ.ಕೆ.ಶಿವಕುಮಾರ್

    ಬೆಂಗಳೂರು: ಆಕ್ಸಿಜನ್ ನೀಡದೇ ಕೊಂದು ಹಾಕಿ, ಸಹಜ ಸಾವು ಅಂತಾ ಮರಣ ಪತ್ರ ನೀಡ್ತಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಇಡೀ ರಾಜ್ಯ ಸುತ್ತಿ ಜನರ ಸಂಕಷ್ಟ ಆಲಿಸಬೇಕು. ಇಡೀ ರಾಜ್ಯ ಆಗದಿದ್ದರೂ ಕನಿಷ್ಟ ಪಕ್ಷ ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 36 ಮಂದಿಯ ಕುಟುಂಬಗಳನ್ನಾದರೂ ಭೇಟಿ ಮಾಡಿ, ಅವರ ಕಷ್ಟ ಕೇಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

    ನಮ್ಮ ಧ್ವನಿ ಸರ್ಕಾರಕ್ಕೆ ಕೇಳಿಸುತ್ತಿಲ್ಲ. ನಮ್ಮ ಜನರ ನೋವು ಅದಕ್ಕೆ ಕಾಣುತ್ತಿಲ್ಲ. ನಮಗೆ ಹಾಗೂ ನ್ಯಾಯಾಲಯಗಳಿಗೆ ಕಾಣುತ್ತಿವೆ. ಈ ನಿಟ್ಟಿನಲ್ಲಿ ನ್ಯಾಯಾಲಯ ನಿರಂತರವಾಗಿ ಜನಪರ ಆದೇಶ ನೀಡುತ್ತಲೇ ಇದೆ. ನಿನ್ನೆ ಕೂಡ ಸುಪ್ರೀಂ ಕೋರ್ಟ್ ಪರಿಹಾರ ವಿಚಾರವಾಗಿ 6 ತಿಂಗಳ ಸಮಯಾವಕಾಶ ನೀಡಿದೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗದ ವರದಿಗಳನ್ನು ನ್ಯಾಯಾಂಗ ಗಂಭೀರವಾಗಿ ಪರಿಗಣಿಸಿ ಜನರ ಪರವಾಗಿ ನಿಂತಿದೆ. ಅದಕ್ಕಾಗಿ ರಾಜ್ಯದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.

    ಈ ಸರ್ಕಾರ ಯಾಕಿರಬೇಕು?:
    ಚಾಮರಾಜನಗರ ದುರಂತದಲ್ಲಿ 36 ಜನ ಸತ್ತಿದ್ದರೂ ಸರ್ಕಾರ 24 ಕುಟುಂಬಗಳಿಗೆ ಮಾತ್ರ ಪರಿಹಾರ ಕೊಟ್ಟಿದೆ. ಈ ಘಟನೆಗೆ ಇದುವರೆಗೂ ಯಾರನ್ನೂ ಹೊಣೆ ಮಾಡಿಲ್ಲ. ನೀವು ತಪ್ಪು ಮಾಡಿಲ್ಲ ಅಂದಮೇಲೆ ನೀವ್ಯಾಕೆ ಜನರ ಬಳಿ ಹೋಗಿ ಅವರನ್ನು ಮಾತನಾಡಿಸುತ್ತಿಲ್ಲ. ಅವರ ಗೋಳು ಕೇಳದಿದ್ದ ಮೇಲೆ ಈ ಸರ್ಕಾರ ಯಾಕಿರಬೇಕು? ಮುಖ್ಯಮಂತ್ರಿಗಳೇ ಹೋಗಬೇಕು ಅಂತಾ ಇಲ್ಲ, ಯಾರಾದರೂ ಮಂತ್ರಿ ಹೋಗಬಹುದಲ್ಲ. ಯಾಕೆ ಆ ಕೆಲಸ ಆಗಿಲ್ಲ?

    ನ್ಯಾಯಾಲಯವೇ ಈ ಸಾವುಗಳು ಆಕ್ಸಿಜನ್ ಕೊರತೆಯಿಂದ ಆಗಿವೆ ಎಂದ ಮೇಲೆ ಇವು ಸಹಜ ಸಾವೋ, ಕೊಲೆಯೋ ನೀವೇ ನಿರ್ಧರಿಸಿ. ಅಲ್ಲಿ ಆಕ್ಸಿಜನ್ ಕೊರತೆ ಇದೆ ಅಂತ ಅಧಿಕಾರಿಗಳಿಂದ ಮಂತ್ರಿಗಳವರೆಗೂ ಎಲ್ಲರಿಗೂ ಮೊದಲೇ ಗೊತ್ತಿತ್ತು. ಆದರೂ ಆಕ್ಸಿಜನ್ ಪೂರೈಸಲು ಕ್ರಮ ತೆಗೆದುಕೊಳ್ಳಲಿಲಿಲ್ಲ. ಕೊರತೆ ಇದ್ದ ಕಾರಣ ಒಂದೇ ಆಕ್ಸಿಜನ್ ಪೈಪ್ ಅನ್ನು ಒಬ್ಬರಾದ ಮೇಲೆ ಮತ್ತೊಬ್ಬರಿಗೆ ಐದೈದು ನಿಮಿಷದಂತೆ ನೀಡಲಾಗಿದೆ.

    ಪ್ರಾಣಿಗಳಂತೆ ನರಳಾಡಿ ಸತ್ತಿದ್ದಾರೆ:
    ನಾನು ಚಾಮರಾಜನಗರ ನಗರಕ್ಕೆ ಹೋದಾಗ ಅಲ್ಲಿನ ಜನ ತಮ್ಮ ಗೋಳು ತೋಡಿಕೊಂಡಾಗ ಮನಸಿಗೆ ಬಹಳ ಬೇಸರವಾಯಿತು. ರಾಷ್ಟ್ರೀಯ ಮಟ್ಟದ ಶೂಟರ್ ಮಡಿಲಿನಲ್ಲೇ ತಾಯಿ ವಿಲಿವಿಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ. ಕೆಲವು ಕಡೆ ವೈದ್ಯರು, ನರ್ಸ್ ಗಳು ಇರಲಿಲ್ಲ. 36 ಜನರೂ ಪ್ರಾಣಿಗಳಂತೆ ನರಳಾಡಿ ಸತ್ತಿದ್ದಾರೆ. ಜನರಿಗೆ ಗೊತ್ತಾಗಬಾರದು ಎಂದು ಸತ್ತವರನ್ನು ಅಲ್ಲಿಂದ ಬೆರೆ ಕಡೆಗೆ ಸಾಗಿಸಿದ್ದಾರೆ.

    36 ಮೃತರ ಪೈಕಿ 80% ರಷ್ಟು ಜನ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಒಬ್ಬನಿಗೆ ಮದುವೆಯಾಗಿ 3 ತಿಂಗಳಾಗಿದೆ. ಮತ್ತೊಬ್ಬನಿಗೆ ಮದುವೆ ನಿಶ್ಚಯವಾಗಿತ್ತು. ಎಲ್ಲರೂ ಅವರವರ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದವರು. ಎಲ್ಲ ವಿಚಾರವನ್ನು ನಾನು ಇಲ್ಲಿ ಮಾತನಾಡುವುದಿಲ್ಲ, ಅಧಿವೇಶನದಲ್ಲಿ ಮಾತನಾಡುತ್ತೇನೆ. ಮೆಡಿಕಲ್ ಟೂರಿಸಂಗೆ ಹೆಸರುವಾಸಿಯಾಗಿರುವ ನಮ್ಮ ರಾಜ್ಯದಲ್ಲೇ, ವೈದ್ಯರು, ಡೀನ್ ಗಳು ಇರುವ ಆಸ್ಪತ್ರೆಯಲ್ಲೇ ಈ ಪರಿಸ್ಥಿತಿಯಾದರೆ ಇನ್ನು ಬೇರೆ ಕಡೆ ಹೇಗಿರಬೇಡ?

    ಒಬ್ಬ ಯುವಕನ ದೇಹವನ್ನು ಬೇರೆಯವರಿಗೆ ನಿಮ್ಮ ಕಡೆಯವರು ತೆಗೆದುಕೊಂಡು ಹೋಗಿ ಎಂದು ಬಲವಂತ ಮಾಡಿದ್ದಾರೆ. ಆಮೇಲೆ ಅವರು ನಮ್ಮವರಲ್ಲ ಎಂದು ಮತ್ತೆ ವಾಪಸ್ ತಂದುಕೊಟ್ಟಿದ್ದಾರೆ. ನಂತರ ಆತನನ್ನು ಅವನ ಸ್ನೇಹಿತರು ಗುರುತಿಸಿ, ಆತನ ತಾಯಿಗೆ ಶವ ಹಸ್ತಾಂತರ ಮಾಡಿದ್ದಾರೆ.

    ಸೋಂಕಿತನಿಗೆ ಅತ್ತೆ, ಮಗಳ ಸಾವಿನ ಸುದ್ದಿಯೇ ಗೊತ್ತಿಲ್ಲ:
    ನಾನು ಹೋಗುವ ದಿನದವರೆಗೂ ಸೋಂಕಿತನಾಗಿದ್ದ ವ್ಯಕ್ತಿಗೆ ತನ್ನ ಮಗಳು ಹಾಗೂ ಅತ್ತೆ ಸತ್ತಿದ್ದಾಳೆ ಎನ್ನುವ ವಿಷಯವೇ ಗೊತ್ತಿರಲಿಲ್ಲ. ಗಂಡನನ್ನು ಕಳೆದುಕೊಂಡ ಮತ್ತೊಂದು ಹೆಣ್ಣು ಮಗಳಿಗೆ ಚಿಕ್ಕ ಮಕ್ಕಳು ಹಾಗೂ ಅತ್ತೆ, ಮಾವನ ಜವಾಬ್ದಾರಿ ಇದೆ. ಆಕೆಗೆ ಗಂಡನ ಮರಣ ಪ್ರಮಾಣ ಪತ್ರವನ್ನೇ ನೀಡುತ್ತಿಲ್ಲ. ಹೀಗಾಗಿ ಪರಿಹಾರವೂ ಸಿಕ್ಕಿಲ್ಲ. ಆಕ್ಸಿಜನ್ ನೀಡದೇ ಕೊಂದು ಹಾಕಿ, ಸಹಜ ಸಾವು ಅಂತಾ ಮರಣ ಪತ್ರ ನೀಡುತ್ತಿದ್ದಾರೆ.

    ಸರ್ಕಾರ ಪರಿಹಾರ ನೀಡ್ತಿಲ್ಲ ಯಾಕೆ?:
    ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಸತ್ತವರಿಗೆ ಪರಿಹಾರ ನೀಡಬೇಕು ಅಂತಾ ಕೋರ್ಟ್ ಹಾಗೂ ನಾವು ಒತ್ತಾಯ ಮಾಡಿದ್ದೇವೆ. ನಾನು ಹಾಗೂ ನಮ್ಮ ನಾಯಕರು ಚಾಮರಾಜನಗರಕ್ಕೆ ಹೋಗಿ ಅವರಿಗೆ ತಲಾ 1 ಲಕ್ಷ ರುಪಾಯಿ ಪರಿಹಾರವನ್ನು ಪಕ್ಷದ ವತಿಯಿಂದ ಕೊಟ್ಟಿದ್ದೇವೆ. ಸಂತ್ರಸ್ತ ಕುಟುಂಬದವರಿಗೆ ಮರಣ ಪ್ರಮಾಣ ಪತ್ರ ನೀಡುತ್ತಿಲ್ಲ. ಹಾಗಾದರೆ ಅವರು ಈಗ ಹೇಗೆ ಅರ್ಜಿ ಹಾಕಬೇಕು? ಅವರಿಗೆ ಪರಿಹಾರ ಹೇಗೆ ಸಿಗಬೇಕು? ಇಂತಹ ಸಮಯದಲ್ಲಿ ನಾನು ಚೆಕ್ ಬುಕ್ ತೆಗೆದುಕೊಂಡು ಹೋಗಿ, ಸಂಬಂಧಪಟ್ಟವರನ್ನು ಮಾತನಾಡಿಸಿ, ಕೋವಿಡ್ ನಿಂದ ಸತ್ತವರ ಕುಟುಂಬಗಳಿಗೆ ಪರಿಹಾರ ನೀಡಿದ್ದೇನೆ. ಅದೇ ರೀತಿ ಸರ್ಕಾರಕ್ಕೆ ಯಾಕೆ ನೀಡಲು ಆಗುತ್ತಿಲ್ಲ.

    ಸರ್ಕಾರಿ ವೆಬ್ಸೈಟ್ ನಲ್ಲಿ ಜೂನ್ 13 ರವರೆಗೂ 3,27,985 ಜನ ಕೋವಿಡ್ ನಿಂದ ಸತ್ತಿದ್ದಾರೆ. ಆದರೆ ಸರ್ಕಾರ ಹೇಳುತ್ತಿರೋದು 30 ಸಾವಿರ ಮಾತ್ರ. ಹಾಗಾದರೆ ಉಳಿದವರಿಗೆ ಪರಿಹಾರ ನೀಡುವವರು ಯಾರು? ಪರಿಹಾರದಿಂದ ಅವರು ಬದುಕುವುದಿಲ್ಲ ಎನ್ನುವುದು ಬೇರೆ ಮಾತು. ಆದರೆ ನಿಮ್ಮ ಜತೆ ಸರ್ಕಾರ ಇದೆ ಅಂತಾ ಧೈರ್ಯ ಹೇಳಬಹುದಲ್ಲವೇ?

    ಒಂದು ತಿಂಗಳ ಜನ ಸಂಪರ್ಕ ಅಭಿಯಾನ:
    ಆಸ್ಪತ್ರೆಗೆ ಸೇರುವಾಗಲೂ ಹಣ, ಸತ್ತ ಮೇಲೆ ಹೆಣ ಪಡೆಯಲು ಹಣ. ರಾಜ್ಯಕ್ಕೆ ಇದೇನು ಗ್ರಹಚಾರ ಬಂತು ಮುಖ್ಯಮಂತ್ರಿಗಳೇ? ಆರೋಗ್ಯ ಸಚಿವರೇ? ನಾನು ಮಂತ್ರಿಗಳನ್ನು ಕಳಿಸಿ ಎಂದು ಹೇಳಿದ ನಂತರ ಮಂತ್ರಿಗಳನ್ನು ಕಳಿಸುತ್ತೀರಿ. ಅಲ್ಲಿಯವರೆಗೂ ಯಾರೂ ಹೋಗುವುದಿಲ್ಲ? ದೊಡ್ಡವರು ಸತ್ತರೆ, ಅವರ ಮನೆಗೆ ಹೋಗಿ ನಿಮ್ಮ ಜತೆ ಇದ್ದೇವೆ ಎಂದು ಹೇಳುತ್ತೀರಿ. ಆದರೆ ಬಡವರು ಸತ್ತಾಗ, ಯಾರೂ ಹೋಗಿ ನೋಡುವುದಿಲ್ಲ. ಸರ್ಕಾರಕ್ಕೆ ಜವಾಬ್ದಾರಿ ಬೇಡವೇ? ಇದನ್ನು ಕೇಳುವುದು ತಪ್ಪಾ? ನಾವು ರಾಜಕೀಯ ಮಾಡುತ್ತಿಲ್ಲ, ಅದರ ಅಗತ್ಯವಿಲ್ಲ. ಹೀಗಾಗಿ ಕೋವಿಡ್ ಸಂತ್ರಸ್ತರು, ರೈತರು, ಕಾರ್ಮಿಕರನ್ನು ಭೇಟಿ ಮಾಡಿ, ಅವರಿಗೆ ಕಷ್ಟ ಆಲಿಸಿ, ಪರಿಹಾರ ದೊರಕಿಸಿಕೊಡಲು ನೆರವಾಗುವಂತೆ ನಮ್ಮ ನಾಯಕರು, ಕಾರ್ಯಕರ್ತರಿಗೆ ಮನವಿ ಮಾಡಿದ್ದೇನೆ. ಕೋವಿಡ್ ಸಂತ್ರಸ್ತರ ಪರವಾಗಿ ನಾವು ಹೋರಾಟ ಮಾಡಬೇಕಿದೆ. ವಿರೋಧ ಪಕ್ಷದ ಜವಾಬ್ದಾರಿ ಅದು. ಇದಕ್ಕಾಗಿ ನಾವು ನಮ್ಮ ಮುಖಂಡರು ಸೇರಿ ಒಂದು ತಿಂಗಳ ಜನ ಸಂಪರ್ಕ ಅಭಿಯಾನ ಮಾಡುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ಸೂಚನೆ, ದಾಖಲೆ ಕಳುಹಿಸಿಕೊಟ್ಟಿದ್ದೇನೆ.

    ಕೋವಿಡ್ ಡೆತ್ ಆಡಿಟ್ ಆಗಿಲ್ಲ. ಅದು ಆಗಬೇಕು. ಸತ್ತಿರುವ ಎಲ್ಲರಿಗೂ ಹೈಕೋರ್ಟ್ ಸೂಚನೆಯಂತೆ ಪರಿಹಾರ ಸಿಗಬೇಕು. ರಾಜ್ಯದಲ್ಲಿ ಕೋವಿಡ್ ನಿಂದ ಸತ್ತಿರುವ ಎಲ್ಲ 3 ಲಕ್ಷ ಜನರಿಗೂ ಕೋರ್ಟ್ ಆದೇಶದಂತೆ ಪರಿಹಾರ ಸಿಗಬೇಕು. ಇದು ಜನರ ಹಕ್ಕು, ಸರ್ಕಾರದ ಜವಾಬ್ದಾರಿ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕೋವಿಡ್ ವಾರಿಯರ್ ಗಳನ್ನು ನೇಮಕ ಮಾಡಿ, ಪ್ರತಿ ಮನೆ ಮನೆಗೂ ಹೋಗಿ ಸಂತ್ರಸ್ತರಿಗೆ ಸಾಂತ್ವನ ಹೇಳಲು ಸೂಚಿಸಲಾಗಿದೆ. ಅವರಿಗೆ ಸಹಾಯ ಹಸ್ತ ನೀಡಬೇಕು, ಅವರಿಂದ ಮಾಹಿತಿ ಪಡೆದು ನಮಗೆ ಕಳುಹಿಸಿಕೊಡಬೇಕು.

    ಇದು ಜನರ ಕಾರ್ಯಕ್ರಮ:
    ಇದರ ಮೇಲ್ವಿಚಾರಣೆಗೆ ಒಂದೊಂದು ಜಿಲ್ಲೆಗೂ ನಾಯಕರನ್ನು ನೇಮಿಸುತ್ತಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವೀಕ್ಷಕರನ್ನು ನೇಮಿಸುತ್ತಿದ್ದು, ಅವರು ಅಲ್ಲಿ ಹೋಗಿ ಸಭೆ ಮಾಡಬೇಕು. ಜುಲೈ 7 ರಂದು ಬೆಲೆ ಏರಿಕೆ ವಿರುದ್ಧ ಸೈಕಲ್ ಜಾಥಾ ಮಾಡಲಾಗುತ್ತದೆ. ನಂತರ ಕೋವಿಡ್ ವಿಚಾರವಾಗಿ ಸಭೆ ಮಾಡುತ್ತಾರೆ. ನಾನು ನಮ್ಮ ನಾಯಕರು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಭೆ ಮಾಡುತ್ತೇವೆ. ಇದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕ್ರಮ ಅಲ್ಲ. ಇದು ಜನರ ಕಾರ್ಯಕ್ರಮ. ಜನರ ನೋವಿಗೆ ಸ್ಪಂದಿಸುವ ಕಾರ್ಯಕ್ರಮ. ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸದಿದ್ದಾಗ, ನಾವು ಈ ಕಾರ್ಯಕ್ರಮ ಮಾಡುತ್ತಿದ್ದೇವೆ.

    ಸುಮೋಟೋ ಕೇಸ್ ದಾಖಲಿಸಿ:
    ಚಾಮರಾಜನಗರ ದುರಂತದಲ್ಲಿ 36 ಮಂದಿ ಸತ್ತಿದ್ದರೂ ಇದರ ಹೊಣೆಯನ್ನು ಯಾರೂ ಹೊತ್ತಿಲ್ಲ. ಸುಮೋಟೋ ಕೇಸ್ ದಾಖಲಿಸಿ ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಷ್ಟು ದೊಡ್ಡ ದುರಂತ ನಡೆದರೂ ಯಾರ ಮೇಲೂ ಕ್ರಮ ಇಲ್ಲ. ಇವರನ್ನು ರಕ್ಷಣೆ ಮಾಡಲು ಸರ್ಕಾರ ಮುಂದಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ. ಆದರೂ ಸರ್ಕಾರ ಸುಳ್ಳು ಹೇಳುತ್ತಿದೆ.

    ಸತ್ತವರ ಜೇಬಿನಲ್ಲಿ ಇದ್ದ ವಸ್ತುಗಳನ್ನು ತೆಗೆದುಕೊಂಡಿದ್ದಾರೆ, ಎಷ್ಟೋ ಹೆಣ್ಣು ಮಕ್ಕಳ ತಾಳಿ ಎಳೆದುಕೊಂಡಿದ್ದಾರೆ. ಕಿವಿ ಒಲೆ, ಮೂಗು ಬೊಟ್ಟುಗಳನ್ನು ಚರ್ಮಸಮೇತ ಕಿತ್ತು ಹಾಕಿದ್ದಾರೆ ಎಂದು ಜನ ನಮ್ಮ ಬಳಿ ನೋವು ಹೇಳಿಕೊಂಡರು. ಆ 36 ಕುಟುಂಬದ ನೋವು ನೋಡಿದರೆ ಕರಳು ಕಿತ್ತು ಬರುತ್ತದೆ. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇದೆಯೋ, ಇಲ್ಲವೋ ಅನಿಸುತ್ತದೆ. ಮುಖ್ಯಮಂತ್ರಿಗಳೇ ಈಗಲಾದರೂ ನೀವು ಅಥವಾ ನಿಮ್ಮ ಮಂತ್ರಿಗಳು ರಾಜ್ಯ ಪ್ರವಾಸ ಮಾಡಬೇಕು. ರಾಜ್ಯ ಪ್ರವಾಸ ಮಾಡಲು ಆಗದಿದ್ದರೆ ಕನಿಷ್ಟ ಪಕ್ಷ ಆ 36 ಮಂದಿ ಅತ್ತವರ ಕುಟುಂಬಗಳನ್ನಾದರೂ ಭೇಟಿ ಮಾಡಿ, ಅವರ ನೋವು ಕೇಳಿ ಎಂದು ಕೇಳಿಕೊಳ್ಳುತ್ತೇನೆ. ಆಗಲಾದರು ನೀವು ಆ ಜನರ ಪರ ಕಾರ್ಯಕ್ರಮ ಹಾಕಿಕೊಳ್ಳಲು ಅವಕಾಶವಾಗುತ್ತದೆ.

    ಅರ್ಹರಿಗೆ ಪರಿಹಾರ ತಲುಪಿದೆಯಾ?
    ನೀವು ಕಾರ್ಮಿಕರಿಗೆ 2 ಸಾವಿರ ಕೊಟ್ಟ ಮಾತ್ರಕ್ಕೆ ಅವರ ಜೀವನ ಸುಧಾರಿಸುತ್ತದೆಯಾ? ಅರ್ಹರಿಗೆ ಪರಿಹಾರ ತಲುಪಿದೆಯಾ? ರೈತರಿಗೆ ಹೆಕ್ಟೇರ್ ಗೆ 10 ಸಾವಿರ ಎಂದರೆ ಅರ್ಧ ಎಕರೆ, ಸಣ್ಣ ಜಮೀನು ಇರುವವರು ಅದಕ್ಕೆ ಅರ್ಜಿ ಹಾಕುತ್ತಾರಾ? ಕೂಲಿ ಕಾರ್ಮಿಕ ಪರಿಹಾರ ಪಡೆಯಲು ಅಧಿಕಾರಿಯಿಂದ ಪ್ರಮಾಣ ಪತ್ರ ಬೇಕಂತೆ. ಅದನ್ನು ಪಡೆಯಲು ಕೂಲಿ ಕಾರ್ಮಿಕ ಲಂಚ ಕೊಡಬೇಕಾ? ಇಂದು ಸಂಜೆ ಒಳಗೆ ನಿಮ್ಮ ಸಚಿವರಿಗೆ ಹೇಳಿ, ಎಷ್ಟು ಜನ ಅರ್ಜಿ ಹಾಕಿದ್ದಾರೆ ಅಂತಾ ಹೇಳಿಸಿ. 2 ಸಾವಿರ ಭಿಕ್ಷೆ ಬೇಡಲು ಜನ ನಿಮ್ಮ ಬಳಿ ಬರುವುದಿಲ್ಲ. ಅವರ ಸ್ವಾಭಿಮಾನದ ಬದುಕಿಗೆ ಕೊಳ್ಳಿ ಇಡಬೇಡಿ. ಸರ್ಕಾರ ಅಧಿವೇಶನ ಕರೆಯಲಿ ಅಂತಾ ಕಾಯುತ್ತಿದ್ದೇವೆ. ಅವರು ಕರೆಯಲಿ, ನಾವು ನಮ್ಮ ಹೋರಾಟ ಮಾಡುತ್ತೇವೆ.’

    ಈಶ್ವರ್ ಖಂಡ್ರೆ ಮಾತು
    ಈ ವೇಳೆ ಮಾತನಾಡಿದ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಅವರು, ‘ಸರ್ಕಾರ ಸಾವಿನಲ್ಲಿ ಸುಳ್ಳು ಲೆಕ್ಕ ಕೊಡುತ್ತಿದೆ. ಬೀದರ್ ಜಿಲ್ಲಾ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ 557 ಜನ ಸತ್ತಿದ್ದಾರೆ. ಆ ಪಟ್ಟಿ ನನ್ನ ಬಳಿ ಇದೆ. ಆದರೆ ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ 141 ಜನ ಸತ್ತಿದ್ದಾರೆ ಎಂದು ಸುಳ್ಳು ಲೆಕ್ಕ ಕೊಟ್ಟಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸತ್ತವರು ಹೊರತುಪಡಿಸಿ, ಖಾಸಗಿ ಆಸ್ಪತ್ರೆ ಹಾಗೂ ಮನೆಯಲ್ಲಿ ಒಂದು ತಿಂಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಇದು ಕೇವಲ ಬೀದರ್ ಜಿಲ್ಲೆಯ ಲೆಕ್ಕ. ಇಡೀ ರಾಜ್ಯದ ಲೆಕ್ಕ ಪರಿಗಣಿಸಿದರೆ, ನಮ್ಮ ಅಧ್ಯಕ್ಷರು ಹೇಳಿದಂತೆ 3 ಲಕ್ಷಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ’ ಎಂದರು.

  • ಚಾಮರಾಜನಗರ ಆಕ್ಸಿಜನ್ ದುರಂತ – ತಾಳಿ ಉಳಿಸಿಕೊಡಿ ಅಂತ ಅಂಗಲಾಚಿದ ನವ ವಧು

    ಚಾಮರಾಜನಗರ ಆಕ್ಸಿಜನ್ ದುರಂತ – ತಾಳಿ ಉಳಿಸಿಕೊಡಿ ಅಂತ ಅಂಗಲಾಚಿದ ನವ ವಧು

    – ನನ್ನಳಿಯ ನನಗೆ ಬೇಕು, ಮಗಳನ್ನ ಹೀಗೆ ನೋಡಲಾರೆ: ಕಣ್ಣೀರಿಟ್ಟ ಹೆತ್ತೊಡಲು
    – ಪತ್ನಿಗೆ ಕರೆ ಮಾಡಿ ನರಳಿ ನರಳಿ ಸಾವನ್ನಪ್ಪಿದ ಸೋಂಕಿತ

    ಚಾಮರಾಜನಗರ: ರಾಜ್ಯ ಸರ್ಕಾರದ ಕುಂಭಕರ್ಣನ ನಿದ್ದೆಗೆ 24 ಅಮಾಯಕ ಜೀವಗಳು ಬಲಿಯಾಗಿದೆ. ಈ ದುರಂತದಲ್ಲಿ ಪತಿಯನ್ನ ಕಳೆದುಕೊಂಡು ನವ ವಧು ನನ್ನ ತಾಳಿ ಉಳಿಸಿಕೊಡಿ ಅಂತ ಕಣ್ಣೀರಿಟ್ಟ ದೃಶ್ಯ ನೋಡಿದವರು ಕಣ್ಣೀರು ಹಾಕುವಂತಿತ್ತು. ಇಷ್ಟು ಚಿಕ್ಕ ವಯಸ್ಸಿನ ಮಗಳನ್ನ ಹೀಗೆ ನೋಡಲಾರೆ ಅಂತ ಸೆರಗೊಡ್ಡಿ ಅಳಿಯನನ್ನ ಉಳಿಸಿಕೊಡಿ ಎಂದು ಹೆತ್ತಮ್ಮ ಕಣ್ಣೀರಿಡುತ್ತಿತ್ತು.

    ಬೆಳಗ್ಗೆ ಇಡ್ಲಿ ತರೋಕೆ ಹೇಳಿದ್ರು:
    ಬೆಂಗಳೂರಿನ ಯಲಹಂಕದ ಮಹಾದೇವ ಸ್ವಾಮಿ ಎಂಬ 28 ವರ್ಷದ ಯುವಕನಿಗೆ ಪಾಸಿಟಿವ್ ಆಗಿತ್ತು. 3 ದಿನಗಳ ಹಿಂದೆ ಬೆಂಗಳೂರಲ್ಲಿ ವೆಂಟಿಲೇಟರ್ ಇಲ್ಲ ಎಂದು ಕುಟುಂಬಸ್ಥರು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಕ್ಸಿಜನ್ ಸಿಗದೇ ಸೋಂಕಿತ ಸಾವನ್ನಪ್ಪಿದ್ದಾನೆ. ಜಿಲ್ಲಾಸ್ಪತ್ರೆ ಮುಂದೆ ಕುಟುಂಬಸ್ಥರು ಬಿದ್ದು ಹೊರಳಾಡಿದ್ರು. ನಮಗೆ ಫೆಬ್ರವರಿ 21ಕ್ಕೆ ಮದ್ವೆ ಆಗಿತ್ತು. ನಿನ್ನೆ ರಾತ್ರಿ ಅವರಿಗೆ ನಾನೇ ಊಟ ಮಾಡಿಸಿ ಬಂದಿದ್ದೆ. ಬೆಳಗ್ಗೆ ತಿಂಡಿಗೆ ಇಡ್ಲಿ ಬೇಕೆಂದು ಹೇಳಿದ್ದರು. ಆದರೆ ಬೆಳಗ್ಗೆ ನೋಡಿದ್ರೆ ಹೀಗಾಗಿದೆ ಎಂದು ಮಹಾದೇವ ಸ್ವಾಮಿ ಪತ್ನಿ ಗೋಳಾಡಿದರು.

    ಮದ್ವೆಯಾಗಿ 2 ತಿಂಗಳು ಆಗಿತ್ತು:
    ಮಹದೇವಸ್ವಾಮಿ ಮದುವೆಯಾಗಿ ಎರಡು ತಿಂಗಳು ಆಗಿತ್ತು. ನಿನ್ನೆ ರಾತ್ರಿ ಹತ್ತೂವರೆ ಸುಮಾರಿಗೆ ಹೆಂಡ್ತಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ನನಗೆ ಆಕ್ಸಿಜನ್ ಪ್ರಾಬ್ಲಂ ಆಗ್ತಿದೆ. ಆಕ್ಸಿಜನ್ ಕೊಡ್ತಿಲ್ಲ ಅಂತ ಹೇಳಿದ್ದಾನೆ. ಆಗ ತಕ್ಷಣ ನರ್ಸ್ ಬಂದು ಫೋನ್ ಕಿತ್ತಿಕೊಂಡು ಇಟ್ಟುಕೊಂಡಿದ್ದಾರೆ. ಆಮೇಲೆ ಅವನು ನಾಲ್ಕೂವರೆ ಗಂಟೆ ನರಳಾಡಿ ನರಳಾಡಿ ಪ್ರಾಣ ಬಿಟ್ಟಿದ್ದಾನೆ ಅಂತ ಮೃತನ ಸಂಬಂಧಿ ಆರೋಪಿಸಿದ್ದಾರೆ. 24 ಸೋಂಕಿತರ ಸಾವಿಗೆ ಕಾರಣವಾದ ಚಾಮರಾಜನಗರ ಜಿಲ್ಲಾಸ್ಪತ್ರೆ ಎದುರು ಮೃತರ ಕುಟುಂಬಸ್ಥರು ಹಿಡಿ ಶಾಪ ಹಾಕುತ್ತಿದ್ದರು. ಮೃತದೇಹದ ಮೇಲೆ ರಕ್ತದ ಕಲೆಗಳನ್ನು ಗಮನಿಸಿ ಅನುಮಾನ ವ್ಯಕ್ತಪಡಿಸುವ ದೃಶ್ಯಗಳು ಕಂಡು ಬಂದವು.

    ಇಷ್ಟಾದ್ರೂ ಸರ್ಕಾರ ಮಾತ್ರ ಸಾಧ್ಯವಾದಷ್ಟೂ ನುಣಚಿಕೊಳ್ಳುವ ಮೂಲಕ ತನ್ನ ಹಳೆ ನಿರ್ಲಕ್ಷ್ಯದ ಚಾಳಿಯನ್ನ ಮುಂದುವರಿಸಿಕೊಂಡು, ಸಭೆ ಮಾಡ್ತೀವಿ, ಚರ್ಚೆ ಮಾಡ್ತೀವಿ, ತನಿಖೆ ಮಾಡ್ತೀವಿ ಅಂತ ತೋಚಿದ್ದನ್ನ ಹೇಳ್ಕೊಂಡು ಬೀಸೋ ದೊಣ್ಣೆಯಿಂದ ಪಾರಾದ್ರೆ ಸಾಕು ಅಂತ ಓಡಾಡ್ತಿದೆ.

    ಫೆಬ್ರವರಿ ಆರಂಭದಲ್ಲಿ ಕೊರೊನಾ ಸ್ಫೋಟದ ಮುನ್ಸೂಚನೆಯನ್ನ ತಜ್ಞರು ನೀಡಿದ್ರೂ ಸರ್ಕಾರ ಮಾತ್ರ ಏನೂ ಆಗಿಲ್ಲ ಅನ್ನುವಂತೆ ತನ್ನ ರಾಜಕಾರಣದಲ್ಲಿ ಮೈಮರೆತಿತ್ತು. ಈಗ ಸರ್ಕಾರದ ಬೇಜಾವಾಬ್ದಾರಿಗೆ 24 ಜೀವಗಳು ಬಲಿಯಾಗಿವೆ. ಒಂದೊಂದು ಕುಟುಂಬದ್ದು ಕಣ್ಣೀರ ಕಥೆ. ಕೇಳಿದ್ರೆ ಕಲ್ಲು ಹೃದಯದಲ್ಲಿ ಕಣ್ಣೀರು ಜಿನುಗುತ್ತೆ. ತಮ್ಮವರನ್ನ ಕಳೆದುಕೊಂಡವರ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಅದಕ್ಕಿಂತ ಸಾಮಾನ್ಯ ಜನರು ಏನು ಮಾಡೋದಕ್ಕೆ ಸಾಧ್ಯ ಇಲ್ಲ ಅನ್ನೋದು ತಿಳಿದ ಹುಂಬ ಸರ್ಕಾರ ಒಂದು ಸುದ್ದಿಗೋಷ್ಠಿ ನಡೆಸಿ ಅವರಿವರ ಮೇಲೆ ಆರೋಪ ಮಾಡಿ ಕೈ ತೊಳೆದುಕೊಳ್ಳೋಕೆ ಮುಂದಾದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.