– ಮೈತ್ರಿಯನ್ನು ಆರಂಭದಲ್ಲೇ ಒಡೆದಿದ್ದು ಅಮಿತ್ ಶಾ
– ಸಿದ್ಧಾಂತ ಬದಿಗೊತ್ತಿ ಮೈತ್ರಿಯಾಗಿದ್ದು ಚಾಣಕ್ಯ ನಡೆ
ಮುಂಬೈ: ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದ ಮಹಾ ಹೈಡ್ರಾಮಾ ಕೊನೆಗೂ ಮುಕ್ತಾಯಗೊಂಡಿದೆ. ಹೈಡ್ರಾಮಾ ಮುಕ್ತಾಯಗೊಂಡರೂ ಈಗ ಚಾಣಕ್ಯ ಯಾರು ಎನ್ನುವ ಪ್ರಶ್ನೆಯನ್ನು ಮುಂದಿಟ್ಟು ಜನ ಸಾಮಾಜಿಕ ಜಾಲತಾಣದಲ್ಲಿ ಅವರದ್ದೇ ಆದ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
ಬಿಜೆಪಿ ಅಭಿಮಾನಿಗಳು ಅಮಿತ್ ಶಾ ಅವರೇ ಚಾಣಕ್ಯ. ಈಗ ಬಿಜೆಪಿ ಸರ್ಕಾರ ರಚಿಸುವಲ್ಲಿ ವಿಫಲರಾದರೂ ಮುಂದೆ ಸರ್ಕಾರ ಖಂಡಿತವಾಗಿಯೂ ರಚನೆ ಮಾಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ ಈ ಬಾರಿ ಚಾಣಕ್ಯ ಪಟ್ಟ ಶರದ್ ಪವಾರ್ ಅವರಿಗೆ ಸಿಗಬೇಕು. ಬಹುಮತ ಇಲ್ಲದೇ ಇದ್ದರೂ ಶಿವಸೇನೆ ಜೊತೆ ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರನ್ನು ಮನವೊಲಿಸಿ ಅಧಿಕಾರಕ್ಕೆ ಏರುತ್ತಿರುವುದೇ ದೊಡ್ಡ ಸಾಧನೆ ಎಂದು ಬಿಜೆಪಿ ವಿರೋಧಿಗಳು ತಿರುಗೇಟು ನೀಡುತ್ತಿದ್ದಾರೆ.
ಅಮಿತ್ ಶಾ ಚಾಣಕ್ಯ ಯಾಕೆ?
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚುನಾವಣಾ ಚತುರ ಎಂದೇ ಹೆಸರು ಪಡೆದವರು. ಪಕ್ಷ ಸಂಘಟನೆ ವಿಚಾರದಲ್ಲಿ ಯಶಸ್ವಿಯಾಗಿ ಪಳಗಿರುವ ಅಮಿತ್ ಶಾ 2014ರ ಲೋಕಸಭಾ ಚುನಾವಣೆಗೂ ಮುನ್ನವೇ ಹೆಸರು ಪಡೆದಿದ್ದಾರೆ. 2014ರಲ್ಲಿ ಉತ್ತರ ಪ್ರದೇಶದಲ್ಲಿ ಒಟ್ಟು 80 ಕ್ಷೇತ್ರಗಳ ಪೈಕಿ ಸ್ಪರ್ಧೆ ಮಾಡಿದ್ದ 78 ರಲ್ಲಿ ಬಿಜೆಪಿ 71 ಸ್ಥಾನವನ್ನು ಗೆಲ್ಲುವ ಮೂಲಕ ರಾಷ್ಟ್ರಮಟ್ಟದಲ್ಲಿ ಮುನ್ನೆಲೆಗೆ ಬಂದ ಬಳಿಕ ಚುನಾವಣಾ ‘ಶಾ’ಣಕ್ಯ ಎಂದೇ ಹೆಸರುವಾಸಿಯಾಗಿದ್ದಾರೆ. ಲೋಕಸಭೆ ಚುನಾವಣೆಯ ನಂತರ ಬಹುಮತ ಇಲ್ಲದೇ ಇದ್ದರೂ ಮಿತ್ರ ಪಕ್ಷಗಳನ್ನು ಒಗ್ಗೂಡಿಸಿ ಬಿಜೆಪಿ ಸರ್ಕಾರ ರಚಿಸಿದ ಖ್ಯಾತಿ ಇದ್ದ ಕಾರಣ ಮಹಾರಾಷ್ಟ್ರದಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ಲೇಷಣೆ ಚುನಾವಣಾ ಫಲಿತಾಂಶ ಬಂದ ಬಳಿಕ ಕೇಳಿ ಬಂದಿತ್ತು.
ಶಿವಸೇನೆಯ ಸಿಎಂ ಪಟ್ಟದ ಬೇಡಿಕೆಗೆ ಜಗ್ಗದ ಪರಿಣಾಮ ಬಿಜೆಪಿ ಹೇಗೆ ಅಧಿಕಾರಕ್ಕೆ ಏರುತ್ತದೆ ಎನ್ನುವ ಪ್ರಶ್ನೆ ಎದ್ದಿತ್ತು. ಈ ಮಧ್ಯೆ ರಾಷ್ಟ್ರಪತಿ ಆಡಳಿತವೂ ಜಾರಿ ಆಯ್ತು. ಶಿವಸೇನೆ, ಎನ್‍ಸಿಪಿ, ಕಾಂಗ್ರೆಸ್ ಮಾತುಕತೆ ಅಂತಿಮಗೊಂಡು ಶುಕ್ರವಾರ ಸಂಜೆ ಉದ್ಧವ್ ಠಾಕ್ರೆ ಸಿಎಂ ಎಂಬ ನಿರ್ಧಾರ ಪ್ರಕಟಗೊಂಡ ಬಳಿಕ ಎಲ್ಲವೂ ಮುಗಿಯಿತು ಎನ್ನುವಷ್ಟರಲ್ಲಿ ರಾತ್ರೋರಾತ್ರಿ ದಿಢೀರ್ ಬೆಳವಣಿಗೆ ನಡೆದು ರಾಷ್ಟ್ರಪತಿ ಆಡಳಿತ ರದ್ದಾಗಿ ದೇವೇಂದ್ರ ಫಡ್ನವೀಸ್ ಮುಖ್ಯಮತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರೆ ಎನ್‍ಸಿಪಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಈ ಬೆಳವಣಿಗೆಯನ್ನು ನೋಡಿ ಬಿಜೆಪಿ ಅಭಿಮಾನಿಗಳು, ಮಹಾರಾಷ್ಟ್ರದಲ್ಲಿ ಅಮಿತ್ ಶಾರಿಂದ ರಾಜಕೀಯ ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಬಿಜೆಪಿ ಈಗ ಕಮಲ ಮಾತ್ರ ಅಲ್ಲ, ರಾತ್ರಿ ಅರಳುವ ಬ್ರಹ್ಮಕಮಲ. ಎಲ್ಲ ಘಟನೆಗಳನ್ನು ನೋಡಿಕೊಂಡು ಯಾರಿಗೂ ಯಾವುದೇ ಮಾಧ್ಯಮಕ್ಕೆ ಸುಳಿವು ನೀಡದೇ ಸರ್ಕಾರ ರಚಿಸುವುದು ಅಂದರೆ ಇದು ಎಂದು ಅಭಿಪ್ರಾಯ ವ್ಯಕ್ತಪಡಿಸಲು ಆರಂಭಿಸಿದರು. ಶೀವಸೇನೆ ಹೋದರೆ ಏನಂತೆ ಎನ್‍ಸಿಪಿ ನಾಯಕನನ್ನೇ ಡಿಸಿಎಂ ಮಾಡಿ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರಿಗೆ ಶಾಕ್ ನೀಡಿದ್ದು ಗ್ರೇಟ್ ಎಂದು ಬಣ್ಣಿಸಲು ಆರಂಭಿಸಿದರು.
ಮಂಗಳವಾರದವರೆಗೆ ಬಹುಮತ ಇಲ್ಲದೇ ಇದ್ದರೂ ಬಿಜೆಪಿ ಸರ್ಕಾರ ಹೇಗೆ ಪರೀಕ್ಷೆಯಲ್ಲಿ ಪಾಸ್ ಆಗುತ್ತದೆ ಎನ್ನುವ ಕುತೂಹಲ ಎದ್ದಿತ್ತು. ಆದರೆ ಬೆಳಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಸಂಜೆ 5 ಗಂಟೆಯ ಒಳಗಡೆ ಬಹುಮತ ಸಾಬೀತು ಪಡಿಸಬೇಕೆಂಬ ಆದೇಶ ಪ್ರಕಟವಾಗಿ ಅಜಿತ್ ಪವಾರ್ ರಾಜೀನಾಮೆ ನೀಡಿ ಫಡ್ನವೀಸ್ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಗೊಂಡ ಬಳಿಕ ಬಿಜೆಪಿಯ ಅಧಿಕಾರದ ಕನಸು ಕನಸಾಗಿಯೇ ಉಳಿಯಿತು.
ವಿದ್ಯಮಾನಗಳು ನಡೆದರೂ ಶಾ ಅಭಿಮಾನಿಗಳು ಶಾಣಕ್ಯನನ್ನು ಬಿಟ್ಟುಕೊಡಲು ತಯಾರಿಲ್ಲ. ಈಗ ಅಧಿಕಾರಕ್ಕೆ ಏರದೇ ಇದ್ದರೂ ಕರ್ನಾಟಕದಲ್ಲಿ ಯಡಿಯೂರಪ್ಪ ಸಿಎಂ ಆದಂತೆ ಮುಂದೆ ಫಡ್ನವೀಸ್ ಮುಖ್ಯಮತ್ರಿ ಆಗುತ್ತಾರೆ. ಒಗ್ಗಟ್ಟಾಗಿದ್ದ ಪಕ್ಷವನ್ನು ಬ್ರೇಕ್ ಮಾಡುವುದೇ ಮೊದಲ ಕೆಲಸ. ಈ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಇನ್ನು ಶಿವಸೇನೆ ಶಾಸಕರನ್ನು ಮತ್ತು ಎನ್‍ಸಿಪಿ ಶಾಸಕರನ್ನು ಸೆಳೆದು ಪಕ್ಷೇತರರರನ್ನು ಸೆಳೆದರೆ ಕೆಲಸ ಪೂರ್ಣಗೊಳ್ಳುತ್ತದೆ. ಎನ್‍ಸಿಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಇಡಿ ರಾಷ್ಟ್ರಕ್ಕೆ ಗೊತ್ತಾಗಿದೆ. ಅಧಿಕಾರ ಮತ್ತು ನೆರವು ವಿಚಾರದಲ್ಲಿ ಬ್ಲಾಕ್‍ಮೇಲ್ ಮಾಡುವ ಪಕ್ಷಕ್ಕೆ ಯಾವತ್ತೂ ಬಗ್ಗಬಾರದು. ಅಂದು ಆಂಧ್ರಪ್ರದೇಶದಕ್ಕೆ ವಿಶೇಷ ಪ್ಯಾಕೇಜ್ ಪ್ರಕಟಿಸದ್ದಕ್ಕೆ ಎನ್‍ಡಿಎ ಒಕ್ಕೂಟವನ್ನು ಬಿಟ್ಟು ಚಂದ್ರಬಾಬು ನಾಯ್ಡು ತೆರಳಿದಾಗಲೂ ಬಿಜೆಪಿ ಬಗ್ಗಲಿಲ್ಲ. ನಂತರ ನಡೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ ಸೋತಿತ್ತು. ಆಗುವುದೆಲ್ಲ ಒಳ್ಳೆಯದು ಮುಂದೆ ಶಿವಸೇನೆಗೂ ಇದೇ ಗತಿ ಆಗಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ.
ಶರದ್ ಪವಾರ್ ಚಾಣಕ್ಯ ಯಾಕೆ?
ಬಹುಮತ ಇಲ್ಲದೇ ಇದ್ದ ರಾಜ್ಯಗಳಲ್ಲಿ ಅಮಿತ್ ಶಾ ತಂತ್ರಗಾರಿಕೆ ಉಪಯೋಗಿಸಿ ಬಿಜೆಪಿ ಸರ್ಕಾರ ಬರುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ಮಹಾರಾಷ್ಟ್ರದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಏರಲು ಬಿಡುವುದಿಲ್ಲ. ಮಹಾರಾಷ್ಟ್ರದಲ್ಲಿ ಅವರು ಏನು ಮ್ಯಾಜಿಕ್ ಮಾಡುತ್ತಾರೋ ನೋಡೇ ಬಿಡೋಣ ಎಂದು ಸವಾಲ್ ಹಾಕಿದ್ದರು. ಈ ಸವಾಲಿನಲ್ಲಿ ಈಗ ಶರದ್ ಪವಾರ್ ಗೆದ್ದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶಿವಸೇನೆ ಮೈತ್ರಿಕೂಟ ಯಶಸ್ವಿಯಾಗಿ ಒಟ್ಟು 48 ಸ್ಥಾನಗಳ ಪೈಕಿ 41(23+18) ಕ್ಷೇತ್ರಗಳನ್ನು ಗೆದ್ದಾಗ ವಿಧಾನಸಭಾ ಚುನಾವಣೆಯಲ್ಲಿ ಎನ್‍ಸಿಪಿ, ಕಾಂಗ್ರೆಸ್ಸಿಗೆ ಹೀನಾಯ ಸೋಲು ಎಂದು ಮೊದಲೇ ವಿಶ್ಲೇಷಿಸಲಾಗಿತ್ತು. ಆದರೆ ಚುನಾವಣೆಯಲ್ಲಿ ಪವಾರ್ ಏಕಾಂಗಿಯಾಗಿ ಪಕ್ಷವನ್ನು ಮುನ್ನಡೆಸಿ ಮಳೆ ಬಂದರೂ ಭಾಷಣ ಮಾಡಿ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಪರಿಣಾಮ ಎನ್‍ಸಿಪಿ 54 ಸ್ಥಾನವನ್ನು ಗೆದ್ದುಕೊಂಡಿತ್ತು. ಶಿವಸೇನೆ ಬಿಜೆಪಿ ಜೊತೆಗಿನ ಸಂಬಂಧ ಹಳಸಿದ ವಿಚಾರ ತಿಳಿಯುತ್ತಿದ್ದಂತೆ ಶರದ್ ಪವಾರ್ ಕಾಂಗ್ರೆಸ್ ಜೊತೆ ಸೇತುವೆಯಾಗಿ ನಿಂತು ಸರ್ಕಾರ ರಚಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.
ಸಾಧಾರಣವಾಗಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ ಪಕ್ಷಗಳು ನಾಯಕರ ವಿರುದ್ಧ ಕ್ರಮಕೈಗೊಳ್ಳುತ್ತಾರೆ. ಆದರೆ ಶಿಷ್ಯ ಅಜಿತ್ ಪವಾರ್ ತನ್ನ ತನ್ನ ವಿರುದ್ಧವೇ ಬಂಡಾಯ ಎದ್ದು ಹೋದರೂ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೇ ಭಾವನಾತ್ಮಕವಾಗಿ ಮರಳಿ ಪಕ್ಷಕ್ಕೆ ಬರುವಂತೆ ನೋಡಿಕೊಂಡರು. ಈ ಮೂಲಕ ಎಲ್ಲ ಶಾಸಕರನ್ನು ಹಿಡಿದಿಟ್ಟುಕೊಂಡು ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರ ಅಧಿಕಾರಕ್ಕೆ ಬರುವಂತೆ ನೋಡಿಕೊಂಡರು.
ಲೋಕಸಭೆ ಚುನಾವಣೆಯ ನಂತರ 2017ರಲ್ಲಿ ಬಿಜೆಪಿ ದೇಶದ ಶೇ.71ರಷ್ಟು ಭಾಗಗಳಲ್ಲಿ ವಿಸ್ತರಿಸಿತ್ತು. ಆದರೆ ಈಗ ಶೇ.40 ರಷ್ಟು ಭಾಗದಲ್ಲಿ ಮಾತ್ರ ಇದೆ. ಮಿತ್ರರ ಮಧ್ಯೆ ಇರುವ ವಿರಸವನ್ನು ಲಾಭ ಮಾಡುವ ಮೂಲಕ ಶರದ್ ಪವಾರ್ ತಮ್ಮ ಚಾಣಕ್ಯ ಬುದ್ಧಿಯನ್ನು ಪ್ರದರ್ಶಿಸಿದ್ದಾರೆ ಎಂದು ಬಿಜೆಪಿ ವಿರೋಧಿ ಅಭಿಮಾನಿಗಳು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡುತ್ತಿರುವ ಬಿಜೆಪಿ ಅಭಿಮಾನಿಗಳು ಶಿವಸೇನೆಯ ಈಗ ಅಧಿಕಾರಕ್ಕೆ ಏರಿರಬಹುದು. ಆದರೆ ಮುಂದೆ ಖಂಡಿತ ಸರ್ವನಾಶವಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ 2014ರಲ್ಲಿ ಬಿಜೆಪಿ 282 ಸ್ಥಾನಗಳನ್ನು ಏಕಾಂಗಿಯಾಗಿ ಗೆದ್ದಿದ್ದರೆ 2019ರಲ್ಲಿ 303 ಸ್ಥಾನಗಳನ್ನು ಗೆದ್ದುಕೊಂಡಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೆ ಬಿಜೆಪಿಗೆ ಸ್ಪಷ್ಟವಾದ ಬಹುಮತ ಸಿಗುತಿತ್ತು. ಮೈತ್ರಿ ಧರ್ಮ ಪಾಲನೆ ಮಾಡಿದ ಶಿವಸೇನೆ ಈಗ ಕೈಕೊಟ್ಟಿದೆ ಎಂದು ತಿರುಗೇಟು ನೀಡುತ್ತಿದ್ದಾರೆ.
ಬಿಹಾರದಲ್ಲಿ ಮಹಾಘಟಬಂಧನ್ ಒಡೆದು ಜೆಡಿಯು ಜೊತೆ ಮೈತ್ರಿ, ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜೊತೆ ಸರ್ಕಾರ, ಗೋವಾದಲ್ಲಿ ಬಹುಮತ ಇಲ್ಲದೇ ಇದ್ದರೂ ಸರ್ಕಾರ, ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಅಲೆ ಕೊನೆಗೆ ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ ನೀಡಿ ಸರ್ಕಾರ ರಚಿಸಿದ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಈಗ ಅಧಿಕಾರ ಸಿಗದೇ ಇದ್ದರೂ ಮುಂದಿನ ವರ್ಷಗಳಲ್ಲಿ ಅಧಿಕಾರಕ್ಕೆ ಖಂಡಿತವಾಗಿಯೂ ಏರುತ್ತದೆ ಎಂದು ಬಿಜೆಪಿ ಅಭಿಮಾನಿಗಳು ಹೇಳುತ್ತಿದ್ದಾರೆ. ಬಿಜೆಪಿ ವಿರೋಧಿಗಳು ಕೆಲವೊಮ್ಮೆ ವೈರಿಗಳನ್ನು ಮಣಿಸಬೇಕಾದರೆ ಸಿದ್ಧಾಂತದಲ್ಲಿ ರಾಜಿಯಾಗಬೇಕು. ರಾಜಿಯಾದ ತಕ್ಷಣ ಸಿದ್ಧಾಂತವನ್ನು ಪೂರ್ಣವಾಗಿ ಮರೆಯುವುದಲ್ಲ. ಸಿಕ್ಕಿದ ಅಧಿಕಾರವನ್ನು ಬಳಸಿಕೊಂಡು ವೈರಿಯನ್ನು ಮಟ್ಟ ಹಾಕುವುದೇ ಚಾಣಕ್ಯ ನೀತಿ. ಈ ತಂತ್ರಗಾರಿಕೆಯನ್ನು ಶರದ್ ಪವಾರ್ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡು ಬಿಜೆಪಿಯ ದಕ್ಷಿಣ ಭಾರತದ ಓಟಕ್ಕೆ ಬ್ರೇಕ್ ಹಾಕಿದ್ದಾರೆ ಎಂದು ತಿರುಗೇಟು ನೀಡುತ್ತಿದ್ದಾರೆ.
ಒಟ್ಟಿನಲ್ಲಿ ಈಗ ಮಹಾರಾಷ್ಟ್ರ ಸರ್ಕಾರ ರಚನೆಯಾದ ಬಳಿಕ ನಿಜವಾದ ಚಾಣಕ್ಯ ಯಾರು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದ್ದು ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ಅಭಿಪ್ರಾಯ ತಿಳಿಸಿ.