ಮುಂಬೈ: ವಿಶ್ವ ಅತ್ಯಂತ ದುಬಾರಿ ಚಾಕಲೇಟೊಂದು ಸದ್ದು ಮಾಡುತ್ತಿದ್ದು, ಅದರ ಬೆಲೆ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ.
ಹೌದು ವಿಶ್ವದ ಬೆಲೆ ಬಾಳುವ ಚಾಕಲೇಟ್‍ನ್ನು ಐಟಿಸಿಯ ಅಂಗ ಸಂಸ್ಥೆ ಬಿಡುಗಡೆ ಮಾಡಿದೆ. ಇದರ ಬೆಲೆ ಪ್ರತಿ ಕೆ.ಜಿ.ಗೆ ಅಂದಾಜು 4.3 ಲಕ್ಷ ರೂ. ಆಗಿದ್ದು, ಚಾಕಲೇಟ್‍ನ ಸೀಮಿತ ಆವೃತ್ತಿಯನ್ನು ಐಟಿಸಿ ಫ್ಯಾಬೆಲ್ಲೆ ಅನಾವರಣಗೊಳಿಸಿದೆ.
ಐಟಿಸಿಯ ಸ್ಥಳಿಯ ಐಷಾರಾಮಿ ಬ್ರ್ಯಾಂಡ್ ಫ್ಯಾಬೆಲ್ಲೆ ಎಕ್ಸ್ ಕ್ವಿಸಿಟ್ ಈ ಚಾಕಲೇಟ್‍ನ್ನು ತಯಾರಿಸಿದೆ. ಫ್ಯಾಬೆಲ್ಲೆ ಸಂಸ್ಥೆ ದಿ ಟ್ರಿನಿಟಿ-ಟ್ರಫಲ್ಸ್ ಎಕ್ಸ್ ಟ್ರಾರ್ಡಿನರಿಯನ್ನು ಪ್ರಾರಂಭಿಸಿದೆ. ಈ ಚಾಕಲೇಟ್‍ಗಳನ್ನು ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಅತ್ಯಂತ ದುಬಾರಿ ಚಾಕಲೇಟ್ ಎಂದು ಪಟ್ಟಿ ಮಾಡಲಾಗಿದೆ.
ಬುಧವಾರ ಈ ಚಾಕಲೇಟ್‍ಗಳನ್ನು ಬಿಡುಗಡೆ ಮಾಡಲಾಗಿದ್ದು, ದೀಪಾವಳಿಯ ಅಂಗವಾಗಿ ಸಂಸ್ಥೆ ಬಿಡುಗಡೆ ಮಾಡಿತು.
ವಿಶ್ವದ ಅತ್ಯುತ್ತಮ ಚಾಕಲೇಟ್ ನ್ನು ಭಾರತದಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತದೆ ಎಂದು ಜಗತ್ತಿಗೆ ತಿಳಿಸುವುದು ನಮ್ಮ ಗುರಿಯಾಗಿದೆ. ಅಲ್ಲದೆ ನಮ್ಮ ಸಂಸ್ಥೆಯಿಂದ ವಿವಿಧ ಮಾದರಿಯ ಚಾಕಲೇಟ್‍ಗಳು, ಸಿಹಿ ತಿಂಡಿ, ಕಾಫಿ ಹಾಗೂ ಹೊಸ ಮಾದರಿಯ ಆಹಾರ ಪದಾರ್ಥಗಳನ್ನು ತಯಾರಿಸುತ್ತೇವೆ ಎಂದು ಐಟಿಸಿ ಸಂಸ್ಥೆಯ ಸಿಒಒ ಅನುಜ್ ರುಸ್ತಗಿ ಹೇಳಿದ್ದಾರೆ.
ಐಟಿಸಿಯಲ್ಲಿ ನಾವು ವಿಶ್ವ ದರ್ಜೆಯ ಭಾರತೀಯ ಬ್ರ್ಯಾಂಡ್‍ಗಳನ್ನು ರಚಿಸಲು ಬದ್ಧರಾಗಿದ್ದೇವೆ. ಇದರ ಭಾಗವಾಗಿ ಫ್ಯಾಬೆಲ್ಲೆ ಈ ವಿಶಿಷ್ಠ ಚಾಕಲೇಟ್‍ಗಳನ್ನು ತಯಾರಿಸಿದೆ. ಇದು ವಿಶ್ವ ಮಟ್ಟದಲ್ಲಿ ನಡೆದ ಅತ್ಯುತ್ತಮ ಪ್ರಯತ್ನಗಳಲ್ಲಿ ಒಂದಾಗಿದೆ ಎಂದು ಸಿಒಒ ಬಣ್ಣಿಸಿದರು.
ದಿ ಟ್ರಿನಿಟಿ-ಟ್ರಪಲ್ಸ್ ಎಕ್ಸ್ ಟ್ರಾರ್ಡಿನರಿ ಚಾಕೊಲೇಟ್‍ಗಳನ್ನು ಫ್ಯಾಬೆಲ್ಲೆ ಮತ್ತು ಮೈಕೆಲಿನ್ ಸ್ಟಾರ್ ಚೇಪ್ ಫಿಲಿಪ್ ಕಾಂಟಿಸಿನಿ ಪಾಲುದಾರಿಕೆಯಲ್ಲಿ ತಯಾರಿಸಲಾಗಿದೆ. ಈ ಚಾಕಲೇಟ್‍ಗಳನ್ನು ಸೃಷ್ಟಿ, ಸ್ಥಿತಿ, ಲಯ ಎಂಬ ಆಧ್ಯಾತ್ಮಿಕ ಸೂತ್ರದಿಂದ ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಚೆಫ್ ಕಾಂಟಿಸಿನಿ ಮಾರ್ಗದರ್ಶನ ಹಾಗೂ ಪಾಲುದಾರಿಕೆಯಲ್ಲಿ ಈ ಚಾಕಲೇಟ್ ತಯಾರಿಸಲು ಸಾಧ್ಯವಾಗಿದೆ. ಇದಕ್ಕಾಗಿ ಕೈಯಿಂದ ತಯಾರಿಸಿದ ಮರದ ಪೆಟ್ಟಿಗೆಯನ್ನು ರಚಿಸಲಾಯಿತು. ಪ್ರತಿ ಮರದ ಪೆಟ್ಟಿಗೆಯಲ್ಲಿ 15 ಕರಕುಶಲ ಟ್ರಫಲ್‍ಗಳಿವೆ, ಪ್ರತಿಯೊಂದು ಸುಮಾರು 15 ಗ್ರಾಂ. ತೂಕ ಹೊಂದಿವೆ ಎಂದು ರುಸ್ಟಗಿ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಚಾಕಲೇಟ್‍ಗಳನ್ನು ಭಾರತೀಯರಿಗೆ ಕೈಗೆಟಕುವಂತೆ ಮಾಡಲಾಗುವುದು. ವಿದೇಶಕ್ಕೆ ತೆರಳಿದಾಗ ಭಾರತೀಯರು ಅಲ್ಲಿಂದ ವಿದೇಶಿ ಬ್ರಾಂಡ್‍ನ ಚಾಕಲೇಟ್ ತುಂಬಿಕೊಂಡು ಬರುವುದನ್ನು ನೋಡಿದ್ದೇವೆ. ಇದನ್ನು ಬದಲಾಯಿಸಿ, ಭಾರತದಲ್ಲೇ ಉತ್ತಮ ಗುಣಮಟ್ಟದ ಚಾಕಲೇಟ್‍ಗಳನ್ನು ತಯಾರಿಸುವ ಗುರಿ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಾಕಲೇಟ್‍ಗಳನ್ನು ತಯಾರಿಸುತ್ತೇವೆ ಎಂದು ಸಿಒಒ ಭರವಸೆ ನೀಡಿದರು.