ನವದೆಹಲಿ: ಗುಜರಾತ್ ವಿಧಾನಸಭೆಯ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆಬೀಳುವ ಮುನ್ನ ಭಾರೀ ವಾಕ್ಸಮರ ನಡೆದಿದೆ. ಪ್ರಧಾನಿ ಮೋದಿ ಅವರನ್ನು ಮಾನಸಿಕವಾಗಿ ಆಘಾತಗೊಳಿಸುವ ಕಾಂಗ್ರೆಸ್ ಯತ್ನ ಮುಂದುವರಿದಿದೆ. 2014ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಅಭ್ಯರ್ಥಿ ಮೋದಿಯನ್ನು ಚಾಯ್‍ವಾಲಾ ಎಂದು ಹೀಗಳೆದಿದ್ದ ಮಣಿಶಂಕರ್ ಅಯ್ಯರ್ ಇವತ್ತು ಮತ್ತೆ ಹರಕುಬಾಯಿಯನ್ನು ಹರಿಬಿಟ್ಟು ವಿವಾದಕ್ಕೆ ಕಾರಣರಾಗಿದ್ದಾರೆ.
ತಾನೊಬ್ಬ ಶಿವಭಕ್ತ ಎನ್ನುತ್ತಿರುವ ಕಾಂಗ್ರೆಸ್‍ನವರಿಗೆ ಈಗ ಬಾಬಾ ಸಾಹೇಬ್‍ಗಿಂತ ಬಾಬಾ ಬೋಲೆ ಅಂದ್ರೆ ಶಿವನ ನೆನಪು ಆಗುತ್ತಿದೆ ಎಂದು ಹೇಳಿ ಪ್ರಧಾನಿ ಮೋದಿ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡುವ ಯತ್ನದಲ್ಲಿ ಮೋದಿಯೊಬ್ಬ `ನೀಚ ಮನುಷ್ಯ’, ಅವರಿಗೆ ಮೌಲ್ಯಗಳೇ ಇಲ್ಲ. ಅಂಥವರ ಬಗ್ಗೆ ಏನು ಹೇಳಲಿಕ್ಕೆ ಆಗುತ್ತೆ ಎಂದು ಮಣಿಶಂಕರ್ ಅಯ್ಯರ್ ಮತ್ತೊಮ್ಮೆ ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ.
ಈ ಹೇಳಿಕೆಗೆ ಸೂರತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಇದು `ಗುಜರಾತ್ ಜನರಿಗೆ ಮಾಡಿದ ಅವಮಾನ’ ಎಂದು ತಿರುಗೇಟು ನೀಡಿದ್ದರೆ, ಪ್ರಧಾನಿ ವಿರುದ್ಧದ ಇಂಥ ಹೇಳಿಕೆಗಳು ನಾಚಿಕೆಗೇಡು. `ಮೊಘಲ್ ಮನಸ್ಥಿತಿ’ ಅಂತ ಸಚಿವ ರವಿಶಂಕರ್ ಪ್ರಸಾದ್ ಕಿಡಿ ಕಾರಿದರು.
ಈ ವಿಚಾರ ದೊಡ್ಡದಾಗುತ್ತಿದ್ದಂತೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಮಣಿಶಂಕರ್ ಅಯ್ಯರ್ ಬಳಸಿದ ಭಾಷೆ ಸರಿಯಲ್ಲ, ಕಾಂಗ್ರೆಸ್ ಈ ಸಂಸ್ಕೃತಿಯನ್ನು ಬಯಸುವುದಿಲ್ಲ. ಹೀಗಾಗಿ ಮಣಿಶಂಕರ್ ಅಯ್ಯರ್ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ಈ ಟ್ವೀಟ್ ಬೆನ್ನಲ್ಲೇ ಮಣಿಶಂಕರ್ ಅಯ್ಯರ್ ಪ್ರತಿಕ್ರಿಯಿಸಿ ಕ್ಷಮೆ ಕೇಳಿ ನಾನು ಆ ಪದವನ್ನು ಜಾತಿ ಆಧಾರದಲ್ಲಿ ಬಳಸಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮೋದಿ ತಿರುಗೇಟು: ತನ್ನ ವಿರುದ್ಧ ಮಾತನಾಡಿದವರ ಹೇಳಿಕೆಯನ್ನು ಬಳಸಿಕೊಂಡೇ ಅವರಿಗೆ ತಿರುಗೇಟು ನೀಡುವ ಅಭ್ಯಾಸ ಮಾಡಿಕೊಂಡಿರುವ ಮೋದಿ ಅಯ್ಯರ್ ಹೇಳಿಕೆಯನ್ನೇ ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಹೌದು ನಾನು, ಕೆಳ ವರ್ಗದಲ್ಲಿ ಜನಿಸಿದ ವ್ಯಕ್ತಿ. ನನ್ನ ಜೀವನದ ಪ್ರತಿಕ್ಷಣವನ್ನು ಬಡವರ ಏಳಿಗೆಗಾಗಿ ಮುಡುಪಾಗಿಟ್ಟಿದ್ದೇನೆ. ಬಡವರು, ದಲಿತರು, ಬುಡಕಟ್ಟು ಜನಾಂಗ ಮತ್ತು ಹಿಂದೂಳಿದ ವರ್ಗಗಳ ಅಭಿವೃದ್ಧಿಗಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಅವರು ತನ್ನ ಬಗ್ಗೆ ಏನು ಬೇಕಾದರೂ ಹೇಳಲಿ ನಾನು ನನ್ನ ಕೆಲಸವನ್ನು ಮಾಡುತ್ತಿರುತ್ತೇನೆ. ನನ್ನ ಕೆಲಸ ಮೇಲ್ಮಟ್ಟ(ಉಂಚ್)ದಲ್ಲಿದೆ. ಅಯ್ಯರ್ ಹೇಳಿಕೆ ಗುಜರಾತ್ ಜನತೆಗೆ ಮಾಡಿದ ಅವಮಾನ. ಇದಕ್ಕೆ ಜನ ಬ್ಯಾಲೆಟ್ ಬಾಕ್ಸ್ ನಲ್ಲಿ ಸರಿಯಾದ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿ ವಾಗ್ದಾಳಿ ನಡೆಸಿದರು.
ಪಾಠ ಕಲಿಯದ ಕಾಂಗ್ರೆಸ್:
ಒಮ್ಮೆ ಇತಿಹಾಸವನ್ನು ನೋಡಿದಾಗ ಯಾವ ಪದ ಬಳಸಿ ಲೇವಡಿ ಮಾಡಲಾಗುತ್ತದೋ ಆ ಪದ ಮೋದಿ ಅವರ ಯಶಸ್ಸಿಗೆ ಕಾರಣವಾಗುತ್ತದೆ. ಮೋದಿ ವಿರುದ್ಧ ವೈಯಕ್ತಿಕವಾಗಿ ದಾಳಿ ಮಾಡಿದಾಗ ಆ ದಾಳಿಗಳು ಮೋದಿ ಪರ ಅಲೆಯನ್ನು ಸೃಷ್ಟಿ ಮಾಡಿರುವುದು ನಮ್ಮ ಕಣ್ಣ ಮುಂದಿದೆ. 2007ರಲ್ಲಿ ಸೋನಿಯಾ ಗಾಂಧಿ ಮೌತ್ ಕಾ ಸೌದ್ಗಾರ್ (ಸಾವಿನ ಏಜೆಂಟ್) ಎಂದು ಮೋದಿಯನ್ನು ಟೀಕಿಸಿದ್ದರು. ಇದನ್ನೇ ಬಳಸಿಕೊಂಡಿದ್ದ ಮೋದಿ ಅಂದು ಗುಜರಾತ್ ವಿಧಾನಸಭೆ ಚುನಾವಣೆ ಹಿಂದೂ ಮತಗಳನ್ನು ಧ್ರುವೀಕರಣ ಮಾಡಿಕೊಂಡು ಗೆಲವು ಸಾಧಿಸಿ ಸಿಎಂ ಆಗಿದ್ದರು.
2014ರ ಲೋಕಸಭೆ ಚುನಾವಣೆಯಲ್ಲಿ ಮಣಿ ಶಂಕರ್ ಅಯ್ಯರ್ ಚಾಯ್ ವಾಲಾ ಎಂದು ಟೀಕೆ ಮಾಡಿದ್ದರು. ಮೋದಿ ಪ್ರಧಾನಿ ಅಭ್ಯರ್ಥಿಯೇ ಅಲ್ಲ. ಚಹಾ ಮಾರುವುದಕ್ಕೆ ಸೂಕ್ತ ವ್ಯಕ್ತಿ ಎಂದಿದ್ದರು. ಇದನ್ನು ಬಳಸಿಕೊಂಡಿದ್ದ ಬಿಜೆಪಿ `ಚಾಯ್ ಪೇ ಚರ್ಚಾ’ ಹೆಸರಿನಲ್ಲಿ ಹೊಸ ಅಭಿಯಾನ ಹುಟ್ಟು ಹಾಕಿತ್ತು. ಈ ಅಭಿಯಾನ ದೊಡ್ಡಮಟ್ಟದಲ್ಲಿ ಜನ ಮಾನಸದಲ್ಲಿ ಉಳಿದುಕೊಳ್ಳುವ ಮೂಲಕ ಯಶಸ್ವಿಯಾಗಿತ್ತು.
ಈ ಚುನಾವಣೆಯಲ್ಲೇ ಯುವ ಕಾಂಗ್ರೆಸ್ ಕೆಲ ದಿನಗಳ ಹಿಂದೆ ಚಾಯ್‍ವಾಲಾ ಎಂದು ಬಿಂಬಿಸಿ ಗ್ರಾಫಿಕ್ಸ್ ಮಾಡಿದ ಫೋಟೋ ಒಂದನ್ನು ಟ್ವೀಟ್ ಮಾಡಿತ್ತು. ಈ ಟ್ವೀಟ್ ಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಅದನ್ನು ಡಿಲೀಟ್ ಮಾಡಿತ್ತು. ಆದರೆ ಇದನ್ನೆ ಬಳಸಿಕೊಂಡ ಮೋದಿ ಹೌದು ನಾನು ಚಾಯ್‍ವಾಲ. ಚಹಾ ಮಾರಾಟ ಮಾಡಿದ್ದೇನೆ. ಆದರೆ ನಿಮ್ಮಂತೆ ನಾನು ದೇಶ ಮಾರಾಟ ಮಾಡಿಲ್ಲ. ಬೇಕಾದ್ರೆ ನೀವು ಚಹಾ ಮಾರಾಟ ಮಾಡಿ ದೇಶ ಮಾತ್ರ ಮಾರಬೇಡಿ ಎಂದು ಹೇಳಿ ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೇ ಈ ಚುನಾವಣೆ ಸಂದರ್ಭದಲ್ಲಿ ನಡೆದ ಮನ್ ಕೀ ಬಾತ್ ಕಾರ್ಯಕ್ರಮವನ್ನು ಗುಜರಾತ್ ಬಿಜೆಪಿ ನಾಯಕರು ಚಹಾ ಕುಡಿಯುತ್ತಾ ಕೇಳಿ ಕಾಂಗ್ರೆಸ್ ತಿರುಗೇಟು ನೀಡಿದ್ದರು.

