Tag: ಚಹಾ ಅಂಗಡಿ

  • ಅತ್ತೆ ಮನೆ ಮುಂದೆ ಅಳಿಯನ ಟೀ ಅಂಗಡಿ – ಕೈಗೆ ಕೋಳ ಧರಿಸಿ ಚಹಾ ಮಾರಾಟ

    ಅತ್ತೆ ಮನೆ ಮುಂದೆ ಅಳಿಯನ ಟೀ ಅಂಗಡಿ – ಕೈಗೆ ಕೋಳ ಧರಿಸಿ ಚಹಾ ಮಾರಾಟ

    -ಅನ್ಯಾಯದ ವಿರುದ್ಧ ವಿಶಿಷ್ಟ ರೀತಿಯ ಪ್ರತಿಭಟನೆ 

    ಜೈಪುರ: ಪತ್ನಿ ಮತ್ತು ಅತ್ತೆ ಕಿರುಕುಳಕ್ಕೆ ಬೇಸತ್ತು ರಾಜಸ್ಥಾನದ ಯುವಕ ಅತ್ತೆ ಮನೆ ಮುಂದೆ ಠಿಕಾಣಿ ಹೂಡಿದ್ದಾರೆ. ಬರೀ ಠಿಕಾಣಿ ಹೂಡಿರೋದಷ್ಟೆ ಅಲ್ಲ, ಅತ್ತೆ ಮನೆ ಮುಂದೆ ಟೀ ಸ್ಟಾಲ್ (Tea Stall) ಇಟ್ಟಿದ್ದಾರೆ. ಟೀ ಅಂಗಡಿಗೆ `498 ಎ’ ಟೀ ಕೆಫೆ ಎಂದು ಹೆಸರಿಟ್ಟಿದ್ದಾರೆ. ವಿಶೇಷವೆಂದರೆ ಇವರು ಕೈಗೆ ಕೋಳ ಧರಿಸಿ ಚಹಾ ಮಾಡುತ್ತಾರೆ. ಇದರ ಹಿಂದೆ ಬಹಳ ಸ್ವಾರಸ್ಯಕರ ಹಾಗೂ ನೋವಿನ ಕಥೆ ಇದೆ.

    ಕೃಷ್ಣಕುಮಾರ್ ರಾಜಸ್ಥಾನದ ನೀಮುಚ್ ಜಿಲ್ಲೆಯ ಅಥಾನಾ ಪ್ರದೇಶದ ನಿವಾಸಿ. ನಾನು ಜುಲೈ 6, 2018 ರಂದು ಮೀನಾಕ್ಷಿ ಎಂಬವರನ್ನು ಮದುವೆಯಾದೆ. ಇಬ್ಬರೂ ಒಟ್ಟಿಗೆ ಜೇನುಸಾಕಣೆಯನ್ನು ಪ್ರಾರಂಭಿಸಿದೆವು. ಕೆಲ ದಿನಗಳ ಬಳಿಕ ಪತ್ನಿ ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾಳೆ. ವರದಕ್ಷಿಣೆ ಕಿರುಕುಳ, ಖರ್ಚುಗಳಿಗೆ ಬೇಡಿಕೆ (ಸೆಕ್ಷನ್ 125) ಸುಳ್ಳು ಪ್ರಕರಣ ದಾಖಲಿಸಿ, 3 ವರ್ಷದಿಂದ ಕೋರ್ಟ್‌ಗೆ ಅಲೆಯುವಂತಾಗಿದೆ. ಇದರ ವಿರುದ್ಧ ಹೋರಾಟ ಮಾಡುವ ಸಲುವಾಗಿ ಈ ರೀತಿ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಕೃಷ್ಣಕುಮಾರ್‌ ತಿಳಿಸಿದ್ದಾರೆ.

    ನಾನು ನ್ಯಾಯಾಲಯಕ್ಕೆ ಹೋದಾಗಲೆಲ್ಲಾ, ನನಗೆ ದಿನಾಂಕದ ನಂತರ ದಿನಾಂಕ ಸಿಗುತ್ತದೆ. ನನ್ನ ವೃದ್ಧ ತಾಯಿ ನನ್ನೊಂದಿಗಿದ್ದಾರೆ. ಹೀಗಾಗಿ ನನ್ನ ಅತ್ತೆ ಮನೆ ಮುಂದೆ ಅಂದ್ರೆ ಬರಾನ್ ಜಿಲ್ಲೆಯ ಅಂತಾ ಪಟ್ಟಣದಲ್ಲಿ, ಕೆಕೆ ಧಕಾಡ್ ಎಂಬ ಅಂಗಡಿ ಇದೆ. ಆ ಅಂಗಡಿಯಲ್ಲಿ `498 ಎ’ ಟೀ ಕೆಫೆ ಬ್ಯಾನರ್ ಹಾಕಿದ್ದೇನೆ. ವರದಕ್ಷಿಣೆ ಕಿರುಕುಳಕ್ಕೆ ಹಾಕಿರುವ ಸೆಕ್ಷನ್ ‘498 ಎ’ ಅನ್ನೇ ನನ್ನ ಟೀ ಅಂಗಡಿಗೆ ಹೆಸರಿಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

  • ಕೈಕೊಟ್ಟ ಲವರ್‌ಗೆ ಠಕ್ಕರ್ ಕೊಡಲು ಆಕೆಯ ಮೊದಲ ಅಕ್ಷರ ಬಳಸಿ ಚಹಾ ಅಂಗಡಿ ತೆರೆದ ಪ್ರೇಮಿ

    ಕೈಕೊಟ್ಟ ಲವರ್‌ಗೆ ಠಕ್ಕರ್ ಕೊಡಲು ಆಕೆಯ ಮೊದಲ ಅಕ್ಷರ ಬಳಸಿ ಚಹಾ ಅಂಗಡಿ ತೆರೆದ ಪ್ರೇಮಿ

    ಭೋಪಾಲ್: ಲವರ್ (Girl Friend) ಕೈಕೊಟ್ಟಿದ್ದಕ್ಕೆ ಆ ದ್ವೇಷ ತೀರಿಸಿಕೊಳ್ಳಲು ಯುವಕನೊಬ್ಬ ಚಾಯ್ ಅಂಗಡಿ ತೆಗೆದು ಎಂ ಬೇವಾಫಾ ಚಾಯ್‍ವಾಲಾ ಎಂದು ಹೆಸರಿಟ್ಟ ವಿಚಿತ್ರ ಘಟನೆ ಮಧ್ಯಪ್ರದೇಶದ (Madhya Pradesh) ರಾಜ್‍ಗಢ್‍ನಲ್ಲಿ ನಡೆದಿದೆ.

    ಅಂತರ್ ಗುಜ್ಜಾರ್ ಎಂಬಾತ ತನ್ನ ಮಾಜಿ ಪ್ರೇಯಸಿಯು ತನಗೆ ದ್ರೋಹ ಬಗೆದಿದ್ದಾಳೆ ಎಂಬ ಸಿಟ್ಟಿನಿಂದ ಖಲ್ಚಿಪುರ್ ನಗರದ ಬಸ್ ನಿಲ್ದಾಣದ ಬಳಿ ಚಹಾದ ಅಂಗಡಿಯನ್ನು ತೆರೆದಿದ್ದಾನೆ. ಅದಕ್ಕೆ ಎಂ ಬೇವಾಫಾ ಚಾಯ್‍ವಾಲ್ (M Bewafa Chaiwala) ಎಂದು ಹೆಸರಿಟ್ಟಿದ್ದಾನೆ. ಎಂ ಎಂದರೆ ಅಂತರ್‌ನ ಮಾಜಿ ಪ್ರೇಯಸಿಯ ಹೆಸರಿನ ಮೊದಲ ಅಕ್ಷರವಾಗಿದೆ. ಬೇವಫಾ ಎಂದರೆ ವಿಶ್ವಾಸದ್ರೋಹ ಎಂದಾಗಿದ್ದು, ʼಎಂ ವಿಶ್ವಾಸದ್ರೋಹಿ ಚಹಾದ ಅಂಗಡಿʼ ಎಂಬುದು ಕನ್ನಡದಲ್ಲಿ ಅಂಗಡಿಯ ಹೆಸರಾಗಿದೆ.

    ಅಂತರ್‌ಗೆ ಐದು ವರ್ಷಗಳ ಹಿಂದೆ ಸಂಬಂಧಿಕರೊಬ್ಬರ ಮದುವೆಯಲ್ಲಿ ಹುಡುಗಿಯೊಬ್ಬಳ ಪರಿಚಯವಾಗಿತ್ತು. ಅದಾದ ಬಳಿಕ ಅವರಿಬ್ಬರು ಸ್ನೇಹಿತರಾಗಿದ್ದು, ಆ ಸ್ನೇಹವೇ ಮುಂದೆ ಪ್ರೀತಿಗೆ ತಿರುಗಿತ್ತು. ಸುಮಾರು 2 ವರ್ಷಗಳ ಕಾಲ ಸಂಬಂಧದಲ್ಲಿದ್ದರಿಂದ ಅಂತರ್ ಆ ಹುಡುಗಿಯ ಬಳಿ ಮದುವೆ (Marriage) ಪ್ರಸ್ತಾಪವನ್ನು ಇಟ್ಟಿದ್ದಾನೆ. ಆದರೆ ಆಕೆ ಆ ಪ್ರಸ್ತಾಪವನ್ನು ತಿರಸ್ಕರಿಸಿ ಇನ್ನೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಳು. ಅಷ್ಟೇ ಅಲ್ಲದೇ ಅಂತರ್‌ನಿಗೆ ನೀನು ನಿರುದ್ಯೋಗಿ, ನನ್ನ ವರನ ಬಳಿ ಎಲ್ಲವೂ ಇದೆ ಎಂದು ಹೇಳಿ ಅಂತರ್ ಅನ್ನು ಹೀಯಾಳಿಸಿ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು.

    ಇದಾದ ಬಳಿಕ ಪ್ರೇಯಸಿ ಕೈಕೊಟ್ಟಿದ್ದರಿಂದ ಡಿಪ್ರೆಶನ್‌ಗೆ ಒಳಗಾದ ಅಂತರ್ ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿದ್ದನು. ಆದರೆ ಆತನ ಸ್ನೇಹಿತರು ಧೈರ್ಯದ ಮಾತುಗಳು ಅವರ ಮಾರ್ಗದರ್ಶನವು ಅಂತರ್‌ಗೆ ಡಿಪ್ರೆಶನ್‌ನಿಂದ ಹೊರಬರಲು ಸಾಧ್ಯವಾಯಿತು. ಇದಾದ ನಂತರ ತನ್ನ ಮಾಜಿ ಗೆಳತಿಯ ಮೇಲಿನ ದ್ವೇಷವನ್ನು ತೀರಿಸಿಕೊಳ್ಳಲು ಸಿದ್ಧನಾಗಿ, ಆಕೆಯ ಹೆಸರ ಮೊದಲ ಅಕ್ಷರವನ್ನು ಬಳಸಿಕೊಂಡು ಅವಳನ್ನು ಕೀಟಲೆ ಮಾಡಲು ಚಹಾ ಅಂಗಡಿಯನ್ನು ತೆರೆದಿದ್ದಾನೆ. ಇದನ್ನೂ ಓದಿ: ಶ್ರದ್ಧಾ ಕೊಲೆ ಆಕಸ್ಮಿಕ, ಇದರಲ್ಲಿ ಹೊಸದೇನಿಲ್ಲ- ಅಶೋಕ್ ಗೆಹ್ಲೋಟ್ ವಿವಾದಿತ ಹೇಳಿಕೆಗೆ ಬಿಜೆಪಿ ಕಿಡಿ

    ಈ ಚಾಯ್ ಅಂಗಡಿಯಲ್ಲಿ ಅಂತರ್ ವಿಭಿನ್ನ ರೀತಿಯಲ್ಲಿ ದರ ಫಿಕ್ಸ್ ಮಾಡಿದ್ದಾನೆ. ಈತ ದಂಪತಿ ಬಳಿ ಚಹಾಕ್ಕೆ 10 ರೂ. ತೆಗೆದುಕೊಂಡರೆ, ಇನ್ನೂ ಲವ್ ಫೇಲ್ ಆದವರ ಬಳಿ ಅಥವಾ ಹುಡುಗಿ ಕೈಕೊಟ್ಟವರ ಬಳಿ ಒಂದು ಚಹಾಕ್ಕೆ ಕೇವಲ 5 ರೂ. ತೆಗೆದುಕೊಳ್ಳುತ್ತಿದ್ದಾನೆ. ಇದನ್ನೂ ಓದಿ: ಮಾನ, ಮರ್ಯಾದೆ ಇದ್ದರೆ ಡಿಕೆಶಿ ರಾಜೀನಾಮೆ ನೀಡಲಿ: ಈಶ್ವರಪ್ಪ

    Live Tv
    [brid partner=56869869 player=32851 video=960834 autoplay=true]

  • ಹೈವೇಯಲ್ಲಿ ಹಾಕಿದ್ದ ಅಂಗಡಿ ತೆಗೆಯಿರಿ ಎಂದಿದ್ದಕ್ಕೆ ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ

    ಹೈವೇಯಲ್ಲಿ ಹಾಕಿದ್ದ ಅಂಗಡಿ ತೆಗೆಯಿರಿ ಎಂದಿದ್ದಕ್ಕೆ ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ

    ಹಾವೇರಿ: ಜನರ ಓಡಾಟಕ್ಕೆ ಅಡೆತಡೆ ಮಾಡದಂತೆ ಹೇಳಿದ್ದಕ್ಕೆ ಕರ್ತವ್ಯನಿರತ ಇಬ್ಬರು ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಗೇಟ್ ಬಳಿ ನಡೆದಿದೆ.

    ಬಂಕಾಪುರ ಪೊಲೀಸ್ ಠಾಣೆಯ ಗಂಗಾಧರ್ ಹರಿಜನ ಮತ್ತು ದುಂಡಪ್ಪ ಸಿಬ್ಬಂದಿ ಹಲ್ಲೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಹಲ್ಲೆ ಮಾಡಿದ ಆರೋಪಿಗಳನ್ನು ಹಾನಗಲ್ ತಾಲೂಕಿನ ಹರವಿ ಗ್ರಾಮದ ಅರ್ಜುನ್ ಮತ್ತು ಶಿವಕುಮಾರ್ ಎಂದು ಗುರುತಿಸಲಾಗಿದೆ.

    ಟೋಲ್ ಗೇಟ್ ಬಳಿ ಇರುವ ಚಹಾ ಅಂಗಡಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಅಂಗಡಿ ಮುಂದಿನ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಟ್ಟಿಗೆ ಇಟ್ಟು ಹಗ್ಗ ಕಟ್ಟಿ ತಿಂಡಿ-ತಿನ್ನಿಸುಗಳ ಪ್ಯಾಕೇಟ್ ಹಾಕಿ ವಾಹನಗಳ ಓಡಾಟಕ್ಕೆ ತೊಂದರೆ ಮಾಡುತ್ತಿದ್ದರು.

    ರಸ್ತೆಯಲ್ಲಿ ಇಟ್ಟಿಗೆ ಇಟ್ಟು ಹಗ್ಗ ಕಟ್ಟಿದ್ದನ್ನು ತೆಗೆಯುವಂತೆ ಹೇಳಿದ್ದಕ್ಕೆ ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕಟ್ಟಿಗೆಯಿಂದ ಹೊಡೆದು ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ ಮತ್ತಿಬ್ಬರು ಪೊಲೀಸರು ಅಂಗಡಿ ಹತ್ತಿರ ಬರುವುದನ್ನು ನೊಡಿ ಆರೋಪಿಯೊಬ್ಬ ಓಡಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ಚಹಾ ಅಂಗಡಿ ತೆರೆದು ಬದುಕು ಕಟ್ಟಿಕೊಂಡ ಅರ್ಥಶಾಸ್ತ್ರ ಪದವೀಧರೆ

    ಚಹಾ ಅಂಗಡಿ ತೆರೆದು ಬದುಕು ಕಟ್ಟಿಕೊಂಡ ಅರ್ಥಶಾಸ್ತ್ರ ಪದವೀಧರೆ

    ಪಾಟ್ನಾ: ಉನ್ನತ ಶಿಕ್ಷಣ ಪಡೆದರೂ ಹಲವು ಮಂದಿಗೆ ಕೆಲಸ ಸಿಗದೆ ಮನೆಯಲ್ಲಿಯೇ ಇರುವ ಅನೇಕ ಉದಾಹರಣೆಗಳು ಮನಮ್ಮ ಕಣ್ಣ ಮುಂದಿವೆ. ಆದರೆ ಇಲ್ಲೊಬ್ಬ ಯುವತಿ ಮಾತ್ರ ತನಗೆ ಕೆಲಸ ಸಿಕ್ಕಿಲ್ಲ ಎಂದು ಕೈ ಕಟ್ಟಿ ಕುಳಿತುಕೊಳ್ಳದೆ ಪರ್ಯಾಯ ಉಪಾಯ ಕಂಡುಕೊಂಡು ಜೀವನ ರೂಪಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಹೌದು. ಪ್ರಿಯಾಂಕಾ ಗುಪ್ತಾ ಪರ್ಯಾಯ ಮಾರ್ಗ ಕಂಡುಕೊಂಡು ಯಶಸ್ಸು ಕಂಡ ಯುವತಿ. ಪಾಟ್ನಾ ಮೂಲದವರಾಗಿರುವ ಈಕೆ 2019ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಆದರೆ ಆ ಬಳಿಕ ಇವರು ಸಾಕಷ್ಟು ಕಡೆಗಳಲ್ಲಿ ಪ್ರಯತ್ನಿಸಿದರೂ ಎಲ್ಲಿಯೂ ಉದ್ಯೋಗ ದೊರಕಲಿಲ್ಲ. ಬರೋಬ್ಬರಿ 2 ವರ್ಷಗಳಿಂದ ಹುಡುಕಿದರೂ ಕೆಲಸ ಸಿಗದ ಪರಿಣಾಮ 24 ವರ್ಷದ ಪ್ರಿಯಾಂಕಾ, ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಲು ನಿರ್ಧರಿಸಿದ್ದಾರೆ. ಅಂತೆಯೇ ಚಹಾ ಅಂಗಡಿಯೊಂದನ್ನು ಓಪನ್ ಮಾಡಿದ್ದಾರೆ.

    ಪಾಟ್ನಾದ ಮಹಿಳಾ ಕಾಲೇಜು ಮುಂದೆ ಚಹಾ ಅಂಗಡಿ ತೆರೆದು, ಇದೀಗ ಇದರಲ್ಲಿ ಯಶಸ್ಸು ಕಂಡಿದ್ದಾರೆ. ತಮ್ಮ ಅಂಗಡಿಯಲ್ಲಿ ಅತೀ ಕಡಿಮೆ ಬೆಲೆಗೆ ಕುಲ್ಹಾದ್ ಟೀ, ಮಸಾಲಾ ಟೀ, ಪಾನ್ ಚಹಾ ಮತ್ತು ಚಾಕ್ಲೇಟ್ ಟೀ ಮಾರಾಟ ಮಾಡುತ್ತಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಟೀ ಸ್ಟಾಲ್ ಹೆಚ್ಚು ಜನಪ್ರಿಯವಾಗಿದ್ದು, ಕೇವಲ 15ರಿಂದ 20ರೂ.ಗೆ ಚಹಾ ಮಾರಾಟ ಮಾಡುತ್ತಿರುವುದರಿಂದ ಇದೀಗ ಪ್ರಿಯಾಂಕಾ ಹೆಚ್ಚಿನ ಆದಾಯ ಸಹ ಗಳಿಸುತ್ತಿದ್ದಾರೆ.

    ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಬ್ಯಾಂಕ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನುತ್ತೀರ್ಣವಾದ ಬಳಿಕ ಚಹಾ ಅಂಗಡಿ ಓಪನ್ ಮಾಡುವ ನಿರ್ಧಾರ ಮಾಡಿದ್ದೇನೆ. ಇದೀಗ ಸ್ವಂತ ಚಹಾ ಅಂಗಡಿ ನಡೆಸುತ್ತಿದ್ದು, ಆರಂಭದಲ್ಲಿ ನನ್ನ ಸ್ನೇಹಿತರು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಇದೀಗ ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಭಾರತದಿಂದ ವೈದ್ಯಕೀಯ ಉಪಕರಣ ಬಯಸಿದ ರಷ್ಯಾ

    ಪ್ರಿಯಾಂಕಾ ತಮ್ಮ ಟೀ ಸ್ಟಾಲ್‍ಗೆ ‘ಚಾಯ್ ವಾಲಿ’ ಎಂದು ಹೆಸರಿಟ್ಟಿದ್ದಾರೆ. ಇವರಿಗೆ ಬೆಂಗಳೂರಿನ ಎಂಬಿಎ ಚಾಯ್ ವಾಲಾ ಎಂದೇ ಖ್ಯಾತಿ ಪಡೆದಿರುವ ಪ್ರಫುಲ್ ಬಿಲೋರ್ ಅವರು ಮಾದರಿಯಂತೆ. ಅಲ್ಲದೆ ಅವರ ಅಂಗಡಿಯ ಕೆಲವೊಂದು ಪಂಚ್ ಲೈನ್ ಅನ್ನು ತಮ್ಮ ಅಂಗಡಿಯಲ್ಲಿ ಪ್ರಿಯಾಂಕಾ ಬರೆದುಕೊಂಡಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್- ಚಹಾ ಅಂಗಡಿ ಮಾಲೀಕ ಆತ್ಮಹತ್ಯೆ

    ಲಾಕ್‍ಡೌನ್ ಎಫೆಕ್ಟ್- ಚಹಾ ಅಂಗಡಿ ಮಾಲೀಕ ಆತ್ಮಹತ್ಯೆ

    ದಾವಣಗೆರೆ: ಲಾಕ್‍ಡೌನ್‍ನಿಂದಾಗಿ ಎಲ್ಲ ವಲಯದ ಮೇಲೂ ಪರಿಣಾಮ ಬೀರಿದ್ದು, ದೇಶದ ಆರ್ಥಿಕತೆಯೇ ಏರುಪೇರಾಗಿದೆ. ಅದೇ ರೀತಿ ಸಣ್ಣ ವ್ಯಾಪಾರಿಗಳಿಗೂ ನಷ್ಟ ಉಂಟಾಗಿದ್ದು, ಚಹಾ ಅಂಗಡಿ ಮಾಲೀಕ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಂಚುಗಾರನಹಳ್ಳಿಯ ಪ್ರಕಾಶ್(45) ಸಾವನ್ನಪ್ಪಿದ ದುರ್ದೈವಿ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ವ್ಯಕ್ತಿ ಕೆರೆಗೆ ಹಾರಿದ್ದು, 3 ಗಂಟೆ ವೇಳೆಗೆ ವಿಷಯ ತಿಳಿದಿದೆ. ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ.

    ಈತ ದಾವಣಗೆರೆಯ ಆರ್ ಟಿಓ ಕಚೇರಿ ಮುಂಭಾಗ ಟೀ ಶಾಪ್ ನಡೆಸುತ್ತಿದ್ದ. ಲಾಕ್‍ಡೌನ್ ನಿಂದಾಗಿ ಮೂರು ತಿಂಗಳಿನಿಂದ ಚಹಾ ಅಂಗಡಿಯನ್ನು ಮುಚ್ಚಿದ್ದು, ಇದರಿಂದ ತೀವ್ರ ನಷ್ಟ ಉಂಟಾಗಿದೆ. ದುಡಿಮೆ ಇಲ್ಲದ್ದಕ್ಕೆ ಪ್ರಕಾಶ್ ಸಾಲ ಮಾಡಿಕೊಂಡಿದ್ದ. ಹೀಗಾಗಿ ಬೇಸತ್ತು ಕೆರೆಗೆ ಹಾರಿದ್ದಾನೆ ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಜು ತಜ್ಞರು ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಬಸವಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.