Tag: ಚಲನ ಚಿತ್ರೋತ್ಸವ

  • ನಮ್ಮ ಹುಡುಗರಿಗೆ ಶಕ್ತಿಯಿದೆ, ಸ್ವಲ್ಪ ಹುರಿದುಂಬಿಸಬೇಕು: ಯಶ್

    ನಮ್ಮ ಹುಡುಗರಿಗೆ ಶಕ್ತಿಯಿದೆ, ಸ್ವಲ್ಪ ಹುರಿದುಂಬಿಸಬೇಕು: ಯಶ್

    – ನಾವು ಇಂಡಿಯನ್ ಸಿನಿಮಾವನ್ನು ಆಳುತ್ತೇವೆ
    – ಸಿನಿಮಾ ಚಿಕ್ಕ ವಯಸ್ಸಿನಲ್ಲೇ ನನ್ನನ್ನು ಆವರಿಸಿತು

    ಬೆಂಗಳೂರು: ನಮ್ಮ ಹುಡುಗರಿಗೆ ಶಕ್ತಿಯಿದೆ, ಸ್ವಲ್ಪ ಹುರಿದುಂಬಿಸಬೇಕು ಎಂದು ರಾಕಿಂಗ್ ಸ್ಟಾರ್ ಯಶ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

    ಇಂದು ನಗರದಲ್ಲಿ ನಡೆದ ಚಲನ ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ವೇದಿಕೆ ಮೇಲೆಯಿಂದ ಯಡಿಯೂರಪ್ಪ ಅವರಿಗೆ ನಮಗೆ ಇಲ್ಲೇ ಒಂದು ಸ್ಟುಡಿಯೋ ಮಾಡಿಕೊಡಿ. ನಮ್ಮ ಹುಡುಗರಿಗೆ ಶಕ್ತಿಯಿದೆ. ಸ್ವಲ್ಪ ಹುರಿದುಂಬಿಸಬೇಕು. ಅದಕ್ಕೆ ನಿಮ್ಮ ಸಹಕಾರ ಬೇಕು ಎಂದರು.

    ಸಿನಿಮಾ ಚಿಕ್ಕ ವಯಸ್ಸಿನಲ್ಲೇ ನನ್ನನ್ನು ಆವರಿಸಿತು. ಸಿನಿಮಾ ಸಮಾಜದಲ್ಲಿ ಸ್ಥಾನ ಕೊಡ್ತು, ಅನ್ನ ಕೊಡ್ತು ಎಲ್ಲವನ್ನು ಕೊಡ್ತು. ಸಿನಿಮಾ ಜೀವನಕ್ಕೆ ಸ್ಫೂರ್ತಿ, ಸಿನಿಮಾ ಬದುಕಲು ನನಗೆ ರೀಸನ್. ಅಂಥ ಸಿನಿಮಾವನ್ನು ಆಚರಣೆ ಮಾಡಲು ನಾವು ಸೇರಿದ್ದೇವೆ. ಬಹಳ ಅದ್ಧೂರಿಯಾಗಿ ಆಚರಣೆ ಮಾಡೋಣ. ಇದು ಮೊದಲಿಗೆ ಪಲ್ಲವಿ ಥೀಯೇಟರ್‍ನಲ್ಲಿ ನಡೆಯುತ್ತಿತ್ತು. ಆ ಸಮಯದಲ್ಲಿ ನಾನು ಬಂದು ಸಿನಿಮಾ ನೋಡುತ್ತಿದ್ದೆ ಎಂದು ತಿಳಿಸಿದರು.

    ಈ ವೇಳೆ ವೇದಿಕೆಯ ಮೇಲೆ ಇದ್ದ ಸಿಎಂ ಯಡಿಯೂರಪ್ಪಗೆ ಕರ್ನಾಟಕದಲ್ಲೇ ಒಂದು ಸ್ಟುಡಿಯೋ ಮಾಡಿಕೊಡಿ, ನಮ್ಮ ಹುಡುಗರಿಗೆ ಶಕ್ತಿಯಿದೆ. ಮಾಡಬೇಕು ಎಂಬ ಛಲ ಇದೆ. ಅದಕ್ಕೆ ನೀವು ಸಹಕಾರ ನೀಡಬೇಕು. ಕಾಲಕಾಲದಿಂದ ಈ ಸ್ಟುಡಿಯೋ ವಿಚಾರ ಮುಂದೆ ಹೋಗುತ್ತಲೇ ಇದೆ. ನಾವು ಬೇರೆ ಊರಿಗೆ ಹೋಗಿ ಕೆಲಸ ಮಾಡಬೇಕು. ಹಾಗಾಗಿ ನಮ್ಮ ಹುಡುಗರಿಗೆ ಶಕ್ತಿ ಕೊಡಿ ಇಲ್ಲಿನ ಹುಡುಗರ ಜೊತೆ ಈ ಉದ್ಯಮವು ಬೆಳೆಯುತ್ತೆ ಎಂದು ಮನವಿ ಮಾಡಿದರು.

    70 ದಶಕದಿಂದಲೂ ಚೆನ್ನೈನಲ್ಲೇ ಸಿನಿಮಾರಂಗದ ಎಲ್ಲಾ ಕೆಲಸ ನಡೆಯುತ್ತಿತ್ತು. ಹಾಗಾಗಿ ಅವರಿಗೆ ಕಲಿಯಲು ಅವಕಾಶ ಇತ್ತು. ಆದರೆ ನಾವು ಏಕಲವ್ಯನ ತರ ನಾವೇ ಎಲ್ಲೋ ನೋಡಿ ಕಲಿತು ನಂತರ ಸಿನಿಮಾ ಮಾಡಿ ಬೇರೆಯವರಿಗೆ ಸ್ಪರ್ಧೆ ನೀಡುತ್ತಿದ್ದೇವೆ. ಆದ್ದರಿಂದ ನಮ್ಮ ಹುಡುಗರಿಗೆ ಒಳ್ಳೆಯ ಸಿನಿಮಾ ಸಂಸ್ಥೆಗಳು ಹಾಗೂ ಶಿಕ್ಷಣ ಕೊಡಬೇಕು. ಹಾಗೇ ಅದರೆ ನಮ್ಮಲ್ಲೂ ಒಳ್ಳೆಯ ನಿರ್ದೇಶಕ ಹಾಗೂ ಕ್ಯಾಮೆರಾಮ್ಯಾನ್‍ಗಳು ಬರುತ್ತಾರೆ. ನಾವು ಇಂಡಿಯನ್ ಸಿನಿಮಾವನ್ನು ಆಳುತ್ತೇವೆ. ನಮಗೆ ಒಂದು ಸ್ಟುಡಿಯೋ ಮಾಡಿ ಕೊಡಿ, ನಮ್ಮವರು ಇಂಡಸ್ಟ್ರೀಯನ್ನು ಬೇರೆ ಲೆವೆಲ್ ಗೆ ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದರು.

    ಚಲನ ಚಿತ್ರೋತ್ಸವದ ಮೊದಲ ದಿನದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಯಶ್, ನಟಿ ಅದಿತಿ, ನಿರ್ಮಾಪಕ ಬೋನಿ ಕಪೂರ್, ಗಾಯಕ ಸೋನು ನಿಗಂ, ಹಿರಿಯ ನಟಿ ಜಯಪ್ರದಾ ಅವರು ಉಪಸ್ಥಿತರಿದ್ದರು.