Tag: ಚರ್ಚೆ

  • ದೈವಗಳ ವಿಚಾರ ಮಾತನಾಡಿ ಮತ್ತೆ ಪರ ವಿರೋಧದ ಚರ್ಚೆ ಹುಟ್ಟು ಹಾಕಿದ ನಟ ಕಿಶೋರ್

    ದೈವಗಳ ವಿಚಾರ ಮಾತನಾಡಿ ಮತ್ತೆ ಪರ ವಿರೋಧದ ಚರ್ಚೆ ಹುಟ್ಟು ಹಾಕಿದ ನಟ ಕಿಶೋರ್

    ರಾವಳಿ ಭಾಗದ ದೈವಗಳ (Daiva) ಬಗ್ಗೆ ಇತ್ತೀಚಿನ ದಿನಗಳಲ್ಲಿ ವ್ಯಾಪಕ ಪ್ರಚಾರ ಸಿಗುತ್ತಿದೆ. ಕಾಂತಾರ (Kantara) ಸಿನಿಮಾ ರಿಲೀಸ್ ಆಗಿ, ಅದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಅನೇಕರು ದೈವಗಳ ಹೊಸ ಹೊಸ ವಿಚಾರಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಹಾಗಾಗಿ ಈ ದೈವಗಳ ನಂಬಿಕೆ ಮತ್ತು ಅಪನಂಬಿಕೆಗಳ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ (Discussion) ನಡೆಯುತ್ತಿದೆ. ಈ ಚರ್ಚೆಗೆ ಕಾರಣವಾಗಿದ್ದು ನಟ ಕಿಶೋರ್ (Kishor) ಹಾಕಿರುವ ಪೋಸ್ಟ್ ಎನ್ನುವುದು ಗಮನಿಸಬೇಕಾದ ಅಂಶ.

    ಇತ್ತೀಚೆಗಷ್ಟೇ ದೈವಗಳಿಗೆ ಅಪಮಾನ ಮಾಡಿದವರು ಹೇಗೆ ರಕ್ತಕಾರಿಕೊಂಡು ಸತ್ತರು ಎಂದು ತೋರಿಸುವ ವಿಡಿಯೋವೊಂದು ವೈರಲ್ ಆಗಿತ್ತು. ಇಂಥದ್ದೊಂದು ವಿಡಿಯೋ ನೋಡಿದ್ದ ಕಿಶೋರ್ ಅವರು, ನಂಬಿಕೆ ಮತ್ತು ಮೂಢನಂಬಿಕೆ ಕುರಿತಾಗಿ ಸುದೀರ್ಘ ಬರೆದು ಪೋಸ್ಟ್ ಮಾಡಿದ್ದರು.  ಆ ಫೋಸ್ಟ್ ಕುರಿತಾಗಿಯೇ ಚರ್ಚೆ ನಡೆದಿದೆ. ಕಿಶೋರ್ ಹೇಳಿದ ಮಾತಿಗೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ನಂಬಿಕೆ ಮತ್ತು ಮೂಢನಂಬಿಕೆ ಬಗ್ಗೆ ಮಾತನಾಡಿದ ಕಿಶೋರ್, ತಾವೇ ನಟಿಸಿದ್ದ ಕಾಂತಾರ ಸಿನಿಮಾದಲ್ಲೂ ಅಂಥದ್ದೊಂದು ದೃಶ್ಯವಿದೆ. ಮೂಢನಂಬಿಕೆಯ ಬಗ್ಗೆ ಮಾತನಾಡುವವರು ಅದನ್ನು ಪ್ರಚೋದಿಸುವಂತಹ ಚಿತ್ರದಲ್ಲಿ ನಟಿಸಿದ್ದು ಯಾಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಅವರವರ ನಂಬಿಕೆ ಬಗ್ಗೆ ಯಾರೂ ಮಾತನಾಡಬಾರದು. ಅದನ್ನು ಅವರ ಪಾಲಿಗೆ ಬಿಟ್ಟುಬಿಡಬೇಕು ಎಂದೂ ಸಲಹೆ ನೀಡಿದ್ದಾರೆ.

    ಕಾಂತಾರ ಸಿನಿಮಾ ಬಂದ ನಂತರ ದೈವಗಳ ಬಗ್ಗೆ ರೀಲ್ಸ್ ಮಾಡಲಾಯಿತು. ಬೇರೆ ಬೇರೆ ಸನ್ನಿವೇಶಗಳಿಗೆ ಆ ಸಿನಿಮಾದ ದೃಶ್ಯಗಳನ್ನು ಹೋಲಿಸಲಾಯಿತು. ಹಾಗೆ ಮಾಡಬೇಡಿ ಎಂದು ಸ್ವತಃ ರಿಷಬ್ ಶೆಟ್ಟಿ (Rishabh Shetty) ಅವರೇ ಕೇಳಿಕೊಂಡರೂ, ಇಂತಹ ಸಾಕಷ್ಟು ಘಟನೆಗಳು ನಡೆಯುತ್ತಲೇ ಇವೆ. ಈ ಕಾರಣದಿಂದಾಗಿಯೇ ಕಿಶೋರ್ ಸುದೀರ್ಘ ಬರಹವೊಂದನ್ನು ಬರೆದರು, ಇದೀಗ ಆ ಬರಹದ ಬಗ್ಗೆಯೂ ಚರ್ಚೆ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಎಪಿಎಂಸಿ ಕಾಯ್ದೆ ವಿರೋಧಿಸುವವರು ಚರ್ಚೆಗೆ ಬರಲಿ: ಸಚಿವ ಸಿ.ಟಿ.ರವಿ

    ಎಪಿಎಂಸಿ ಕಾಯ್ದೆ ವಿರೋಧಿಸುವವರು ಚರ್ಚೆಗೆ ಬರಲಿ: ಸಚಿವ ಸಿ.ಟಿ.ರವಿ

    – ಕಾಯ್ದೆಯಿಂದ ನಷ್ಟ ಯಂಕ-ನಾಣಿ-ಸೀನನಿಗೆ, ರೈತರಿಗಲ್ಲ

    ಚಿಕ್ಕಮಗಳೂರು: ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುವವರಿಗೆ ಸಚಿವ ಸಿ.ಟಿ.ರವಿ ಸಾರ್ವಜನಿಕ ಚರ್ಚೆಗೆ ಆಹ್ವಾನ ನೀಡಿದ್ದಾರೆ.

    ಚಿಕ್ಕಮಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ವಿರೋಧಕ್ಕಾಗಿ ವಿರೋಧ ಮಾಡೋದು ಅರ್ಥಹೀನ. 2003ರಲ್ಲಿ ಡ್ರಾಫ್ಟ್ ಆಯ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಆ ಡ್ರಾಫ್ಟ್ ನ ಪರಿಷ್ಕರಣೆ ಮಾಡಿ ಮಾಡೆಲ್ ಡ್ರಾಫ್ಟ್ ಆದ ಬಳಿಕ 16 ರಾಜ್ಯಗಳು ಅದನ್ನು ಒಪ್ಪಿಕೊಂಡವು. ಈಗ ಅದನ್ನು ಇನ್ನಷ್ಟು ಸುಧಾರಣೆ ಮಾಡಿ ರೈತ ಸ್ನೇಹಿಯಾಗಿ ಹೊಸ ಕಾಯ್ದೆಯನ್ನು ಜಾರಿಗೆ ತಂದಿದೆ. ಅದನ್ನು ವಿರೋಧ ಮಾಡುವವರಿಗೆ ನಾನು ಸಾರ್ವಜನಿಕ ಚರ್ಚೆಗೆ ಆಹ್ವಾನ ಮಾಡುತ್ತೇನೆ ಎಂದಿದ್ದಾರೆ.

    ಈ ಕಾಯ್ದೆಯಿಂದ ರೈತರಿಗೆ ಏನು ತೊಂದರೆ ಆಗುತ್ತೆ ಹೇಳಿ ಎಂದು ವಿರೋಧಿಸುವವರಿಗೆ ಪ್ರಶ್ನಿಸಿದ್ದಾರೆ. ಹೆಚ್ಚು ಜನ ಖರೀದಿದಾರರು ಹುಟ್ಟಿಕೊಂಡರೆ ರೈತರಿಗೆ ಲಾಭ ಹೆಚ್ಚೋ ವಿನಃ ನಷ್ಟವಲ್ಲ. ಯಾರು ಹೆಚ್ಚು ಬೆಲೆ ಕೊಡುತ್ತಾರೆ. ಎಲ್ಲಿ ಹೆಚ್ಚು ಲಾಭ ಸಿಗುತ್ತೆ ರೈತರು ಅಲ್ಲಿ ಹೋಗಿ ಮಾರಬಹುದು. ಸ್ಪರ್ಧೆ ಬೆಳೆಯುತ್ತೆ, ಅವಕಾಶ ಹೆಚ್ಚಾದಾಗ ರೈತರು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಸಿಗುತ್ತೆ ಎಂದು ತಿಳಿಸಿದರು.

    ಹೋಗಿ ಬೀದಿಗೆ ಸುರಿಯಬೇಕು. ಇಲ್ಲ ಕೇಳಿದಷ್ಟು ದರಕ್ಕೆ ಕೊಡುವ ವ್ಯವಸ್ಥೆ ಹೋಗಿ ಹಲವು ಮಾರ್ಗ, ಮಾರುಕಟ್ಟೆಗಳು ಹುಟ್ಟಿಕೊಂಡಾಗ ಮಾರುವ ಅವಕಾಶ ಹೆಚ್ಚಿರುತ್ತೆ. ಎಲ್ಲಿ ಲಾಭ ಸಿಗುತ್ತೊ ಅಲ್ಲಿಗೆ ರೈತರು ಮಾರುತ್ತಾರೆ. ಇದನ್ನು ವಿರೋಧ ಮಾಡೋದು ಅರ್ಥಹೀನ ಎಂದು ವಿರೋಧಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ತೊಂದರೆಯಾಗುತ್ತೆ. ಯಾರಿಗೆ ಅಂದರೆ ತಮ್ಮದೆ ವಿಂಗ್ ಮಾಡಿಕೊಂಡು ರೇಟ್ ರೈಸ್ ಆಗದಂತೆ ನೋಡಿಕೊಳ್ಳುತ್ತಿದ್ದ ಯಂಕ, ನಾಣಿ, ಸೀನರ ಆಟ ಬಂದ್ ಆಗಲಿದೆ ಎಂದಿದ್ದಾರೆ. ಅಂದರೆ ಈ ಕಾಯ್ದೆಯಿಂದ ರೈತರಿಗೆ ಅನುಕೂಲವಾಗಲಿದ್ದು, ಮಧ್ಯವರ್ತಿಗಳಿಗೆ ತೊಂದರೆಯಾಗಲಿದೆ. ಹಾಗಾಗಿ ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವವರು ಚರ್ಚೆಗೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ.

  • ಅಸ್ಪೃಶ್ಯತೆ, ಮತಾಂತರದ ಕುರಿತು ಪರಿಷತ್‍ನಲ್ಲಿ ಚರ್ಚೆ

    ಅಸ್ಪೃಶ್ಯತೆ, ಮತಾಂತರದ ಕುರಿತು ಪರಿಷತ್‍ನಲ್ಲಿ ಚರ್ಚೆ

    ಬೆಂಗಳೂರು: ಅಸ್ಪೃಶ್ಯರ ಸ್ಥಿತಿಗತಿ, ಮತಾಂತರಕ್ಕೆ ಕಾರಣಗಳೇನು. ಸಂವಿಧಾನ ಬದ್ಧ ಹಕ್ಕುಗಳು ಅವಕಾಶಗಳಿಂದ ಅಸ್ಪೃಶ್ಯರು ವಂಚಿತವಾಗುತ್ತಿರುವ ಕುರಿತು ಬೆಳಕು ಚೆಲ್ಲುವ ಅರ್ಥಪೂರ್ಣ ಚರ್ಚೆ ವಿಧಾನ ಪರಿಷತ್ ಕಲಾಪದಲ್ಲಿ ನಡೆಯಿತು.

    ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಂವಿಧಾನದ ಮೇಲಿನ ಚರ್ಚೆಗೆ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವಕಾಶ ನೀಡಿದರು. ಕಾಂಗ್ರೆಸ್ ಸದಸ್ಯ ಧರ್ಮಸೇನಾ ಮಾತನಾಡಿ, ಇಂದು ಕೂಡ ಮತಾಂತರ ಆಗುತ್ತಿದೆ. ಯಾಕೆ ಆಗುತ್ತಿದೆ ಎನ್ನುವ ಹಿನ್ನಲೆ ಹುಡುಕಬೇಕಿದೆ ಎಂದರು.

    1976-77ರಲ್ಲಿ ತಮಿಳುನಾಡಿನ ವೈದ್ಯನಾಥೇಶ್ವರ ಕೋಯಲ್‍ನಲ್ಲಿ ದಲಿತರು ಸಾಮೂಹಿಕ ಮತಾಂತರಕ್ಕೆ ಮುಂದಾಗಿದ್ದರು. ಆಗ ಅಂದಿನ ಪ್ರಧಾನಿ ಇಂದಿರಾಗಾಂಧಿ ಮತಾಂತರ ಬೇಡ ಎಂದು ಕಠಿಣ ಸಂದೇಶ ನೀಡುತ್ತಾರೆ. ಆದರೂ ಅಲ್ಲಿನ ದಲಿತರು ನಾವು ಇಲ್ಲಿ ಉಳಿಯಲ್ಲ. ಬೌದ್ಧ ಧರ್ಮ ಸ್ವೀಕಾರ ಮಾಡುತ್ತೇವೆ ಎಂದಾಗ ವೈದ್ಯನಾಥೇಶ್ವರ ಕೋಯಲ್‍ಗೆ ಬಾಬು ಜಗಜೀವನ್ ರಾಮ್‍ರನ್ನು ಕಳಿಸಿಕೊಟ್ಟರು. ಅವರು ತಿಳಿಹೇಳಿ ಮತಾಂತರ ತಪ್ಪಿಸಿದರು. ಈಗಲೂ ನನ್ನ ಕ್ಷೇತ್ರವಾದ ಟಿ.ನರಸೀಪುರಲ್ಲಿ ಬಹಳ ಜನ ಮತಾಂತರ ಆಗುತ್ತಿದ್ದಾರೆ. ಅಲ್ಲಿ ಯಾರೂ ಕ್ರಿಶ್ಚಿಯನ್ ಇಲ್ಲ. ಕ್ರಿಶ್ಚಿಯನ್‍ಗೆ ಮತಾಂತರದವರೇ ಇದ್ದಾರೆ. ಅಸ್ಪೃಶ್ಯರಿಗೆ ರಕ್ಷಣೆ ಇಲ್ಲದ ಕಾರಣಕ್ಕೆ ಹೀಗಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಅಸ್ಪೃಶ್ಯತೆ ನಿವಾರಣೆಗೆ ಕಾಂಗ್ರೆಸ್ ಏನು ಮಾಡಿತು ಎನ್ನುತ್ತಾರೆ. ಅಂದು ಹೋಟೆಲ್ ನಲ್ಲಿ ಅವರ ಲೋಟ ಅವರೇ ತೊಳೆಯಬೇಕಿತ್ತು. ದೇವಾಲಯಕ್ಕೆ ಪ್ರವೇಶ ಇರಲಿಲ್ಲ. ಇದೆಲ್ಲ ಕಾಂಗ್ರೆಸ್ ತೊಡೆದು ಹಾಕಿದೆ ಎಂದರು. ಅಸ್ಪೃಶ್ಯತೆ ನಡೆದಾಗ ಆ ಜವಾಬ್ದಾರಿ ಶಾಸಕರೇಕೆ ತೆಗೆದುಕೊಳ್ಳಲ್ಲ. ಕ್ಷೇತ್ರ ನನ್ನದು ಎನ್ನುವ ಶಾಸಕ, ಡಿಸಿ, ಎಸಿ, ತಹಶೀಲ್ದಾರ್, ಗ್ರಾಮ ಪಂಚಾಯತಿ ಅಧ್ಯಕ್ಷರು ಜವಾಬ್ದಾರಿ ತೆಗೆದುಕೊಳ್ಳಬೇಕು. ಧರ್ಮ ಹಾಗೂ ಸಂವಿಧಾನದಿಂದ ಅಸ್ಪೃಶ್ಯರಿಗೆ ರಕ್ಷಣೆ ಬೇಕಿದೆ. ಸಂವಿಧಾನ ತಿದ್ದುಪಡಿ ಸಾಕಷ್ಟು ಬಾರಿ ಆಗಿದೆ ಅದಕ್ಕೆ ನನ್ನದು ವಿರೋಧ ಇಲ್ಲ. ಆದರೆ ಅಸ್ಪೃಶ್ಯರಿಗೆ ಅನುಕೂಲ ಮಾಡಿಕೊಡಬೇಕು. ಕಾನೂನು ತಿದ್ದುಪಡಿ, ಸಂವಿಧಾನದ ಮೂಲಕವೇ ಒಳಮೀಸಲಾತಿ ತರಬೇಕಿದೆ ಎಂದು ಸದಾಶಿವ ಆಯೋಗ, ಒಳಮೀಸಲಾತಿ ಹೋರಾಟದ ಪ್ರಸ್ತಾಪ ಮಾಡಿದರು.

    ಇಂದು ಕೂಡ ದೇಶದ ಸಂವಿಧಾನ ಮತ್ತು ಧರ್ಮದದಿಂದ ಅಸ್ಪೃಶ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ, ಮೀಸಲಾತಿ ತೆಗೆಯುವ ಚಿಂತನೆ ಬರುತ್ತಿದೆ. ಕೆಲವರು ಈ ಕುರಿತು ಮಾತನಾಡುತ್ತಿದ್ದಾರೆ. ಒಂದು ವೇಳೆ ಮೀಸಲಾತಿ ರದ್ದುಪಡಿಸಿದರೆ ಅಂದೇ ಪ್ರಜಾಪ್ರಭುತ್ವ ಹೊರಟು ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಇದಕ್ಕೆ ಪೂರಕವಾಗಿ ಮಾತನಾಡಿದ ತೇಜಸ್ವಿನಿ ರಮೇಶ್ ಮತಾಂತರಕ್ಕೆ ಕೇವಲ ಅಸ್ಪೃಶ್ಯತೆ ಕಾರಣವಲ್ಲ. ಬಡತನ ಹಾಗೂ ಮುಗ್ಧತೆಯ ಕಾರಣಕ್ಕೆ ಮತಾಂತರ ನಡೆಯುತ್ತಿದೆ ಎಂದರು. ಈ ವೇಳೆ ಆರ್.ಬಿ ತಿಮ್ಮಾಪೂರ್, ಮೇಲ್ವರ್ಗದ ರಾಜಕಾರಣಿಗಳು ಇಂದು ಕೂಡ ಜೇಬಿನಲ್ಲಿ ಲೋಟ ಕೊಂಡೊಯ್ದು ಹೋಗಿ ಅಸ್ಪೃಶ್ಯರ ಮನೆಗಳಲ್ಲಿ ಟೀ ಹಾಕಿಸಿಕೊಂಡು ಕುಡಿಯುತ್ತಾರೆ ಅಂತಹ ಪದ್ಧತಿ ಇನ್ನು ಇದೆ ಎಂದರು.

    ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ರವಿಕುಮಾರ್, ನಾವು ಯಾವ ಕಾಲದಲ್ಲಿ ಇದ್ದೇವೆ. ನಾಚಿಕೆಯಾಗಬೇಕು. ತಮ್ಮ ಲೋಟ ತೆಗೆದುಕೊಂಡು ಹೋಗಿ ಅಸ್ಪೃಶ್ಯರ ಮನೆಯಲ್ಲಿ ಟೀ ಹಾಕಿಸಿಕೊಳ್ಳುತ್ತಾರೆ ಎಂದರೆ ಖಂಡಿಸಬೇಕು. ಇವರಿಗೆ ಮನುಷ್ಯತ್ವ ಇದೆ ಅನ್ನಬೇಕಾ? ಶಾಸಕ, ಸಂಸದ, ಮಂತ್ರಿ ಯಾರೇ ಆಗಲಿ ಇಂತಹ ಕೆಲಸ ಮಾಡಿದಲ್ಲಿ ಅದು ಖಂಡನೀಯ ಎಂದರು. ಪಕ್ಷಾತೀತವಾಗಿ ಇದರ ವಿರುದ್ಧ ಧ್ವನಿ ಕೇಳಿ ಬಂತು.

  • ನವವೃಂದಾವನಕ್ಕೆ ಪೇಜಾವರ ಶ್ರೀ ಭೇಟಿ- ಪುನರ್ ನಿರ್ಮಾಣ ಕಾರ್ಯದ ಬಗ್ಗೆ ಚರ್ಚೆ

    ನವವೃಂದಾವನಕ್ಕೆ ಪೇಜಾವರ ಶ್ರೀ ಭೇಟಿ- ಪುನರ್ ನಿರ್ಮಾಣ ಕಾರ್ಯದ ಬಗ್ಗೆ ಚರ್ಚೆ

    ಕೊಪ್ಪಳ: ಆನೆಗೊಂದಿಯಲ್ಲಿ ವ್ಯಾಸರಾಯರ ವೃಂದಾವನ ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ನವವೃಂದಾವನಕ್ಕೆ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ಭೇಟಿ ನೀಡಿ, ವೃಂದಾವನ ಪುನರ್ ನಿರ್ಮಾಣ ಕಾರ್ಯದ ಕುರಿತು ಚರ್ಚಿಸಿದ್ದಾರೆ.

    ನವವೃಂದಾವನ ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಗುರುವಾರ ರಾಯರು ಹಾಗೂ ಸೋಸಲೆ ವ್ಯಾಸರಾಯ ಮಠದ ಶ್ರೀಗಳು ಭೇಟಿ ನೀಡಿದ್ದರು. ಇಂದು ನವವೃಂದಾವನಕ್ಕೆ ಪೇಜಾವರ ಶ್ರೀಗಳು ಭೇಟಿ ನೀಡಿದ್ದಾರೆ. ಈ ವೇಳೆ ನವವೃಂದಾವನ ಧ್ವಂಸದ ಬಗ್ಗೆ ಬೇಸರ ವ್ಯಕ್ತಪಡಿಸಿ, ನವವೃಂದಾವನ ಪುನರ್ ನಿರ್ಮಾಣ ಕಾರ್ಯದ ಕುರಿತು ಭಕ್ತರೊಂದಿಗೆ ಶ್ರೀಗಳು ಚರ್ಚೆ ನಡೆಸಿದ್ದಾರೆ.

    ಗಂಗಾವತಿ ತಾಲೂಕಿನ ಆನೆಗುಂದಿ ಸಮೀಪವಿರುವ ನವಬೃಂದಾವನ ಗಡ್ಡೆ ತುಂಗಭದ್ರಾ ನದಿಯ ಮಧ್ಯದಲ್ಲಿದೆ. ಇಲ್ಲಿ ವ್ಯಾಸರಾಜರು ಸೇರಿದಂತೆ ಒಟ್ಟು ಒಂಬತ್ತು ಯತಿಗಳ ಸಮಾಧಿಗಳು ಇವೆ. ದುಷ್ಕರ್ಮಿಗಳು ನಿಧಿಯ ಆಸೆಗಾಗಿ ಬುಧವಾರ ರಾತ್ರಿ ನವಬೃಂದಾವನವನ್ನು ಅಗೆದು ಹಾಕಿದ್ದರು. ಸಮಾಧಿಯ ಕೆಳಭಾಗವನ್ನು ಸಹ ಸಂಪೂರ್ಣ ಅಗೆದಿದ್ದರಿಂದ ನಿಧಿಗಾಗಿ ಹೀಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ನವಬೃಂದಾವನದಲ್ಲಿ ಪ್ರತಿವರ್ಷ ರಾಘವೇಂದ್ರ ಮಠದವರಿಂದ ಮತ್ತು ಉತ್ತಾರಾಧಿ ಮಠದಿಂದ ಅದ್ಧೂರಿಯಾಗಿ ಆರಾಧನೆ ಕಾರ್ಯಕ್ರಮ ಜರಗುತ್ತದೆ. ನವಬೃಂದಾವನ ಮಾಲೀಕತ್ವಕ್ಕಾಗಿ ಈ ಎರಡು ಮಠದವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಯಾರ ಪರವೂ ತೀರ್ಪು ಬಂದಿರಲಿಲ್ಲ.

  • ವಿಶ್ವಾಸಮತ ಯಾಚನೆಗೆ ಸಮಯ ಕೋರಿದ ಸಿಎಂ – ಇತ್ತ ಶಾಸಕರೊಂದಿಗೆ ಬಿಎಸ್‍ವೈ ಚರ್ಚೆ

    ವಿಶ್ವಾಸಮತ ಯಾಚನೆಗೆ ಸಮಯ ಕೋರಿದ ಸಿಎಂ – ಇತ್ತ ಶಾಸಕರೊಂದಿಗೆ ಬಿಎಸ್‍ವೈ ಚರ್ಚೆ

    ಬೆಂಗಳೂರು: ಇಂದಿನ ವಿಧಾನಸಭಾ ಕಲಾಪದಲ್ಲಿ ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆಗೆ ಸಮಯ ಕೋರಿದ ಬೆನ್ನಲ್ಲೇ ಬಿ.ಎಸ್. ಯಡಿಯೂರಪ್ಪ ತಮ್ಮ ಶಾಸಕರೊಂದಿಗೆ ಚರ್ಚೆ ಮಾಡುತ್ತಿದ್ದಾರೆ.

    ಸದನದಲ್ಲಿ ಸಿಎಂ ಅವರು ನಾನು ಅಧಿಕಾರದಲ್ಲಿ ಶಾಶ್ವತವಾಗಿ ಕುಳಿತುಕೊಳ್ಳಲು ಬಂದಿಲ್ಲ. ಹಲವು ಶಾಸಕರ ಕೆಲ ನಿರ್ಣಯಗಳಿಂದ ಗೊಂದಲದ ವಾತಾವರಣ ನಿರ್ಮಾಣ ಆಗಿದೆ. ಆದ್ದರಿಂದ ನಾನು ವಿಶ್ವಾಸ ಮತ ಮಂಡನೆ ಮಾಡಲು ತೀರ್ಮಾನಿಸಿದ್ದೇನೆ. ಇದನ್ನು ಸದನದ ಸದಸ್ಯರ ಗಮನಕ್ಕೆ ತರುತ್ತಿದ್ದೇನೆ. ನಾನು ಎಲ್ಲದಕ್ಕೂ ತಯಾರಾಗಿ ಬಂದಿದ್ದು, ಸದನದ ಮುಖಾಂತರ ಒಂದು ಉತ್ತಮ ನಿರ್ಧಾರ ಮಾಡುವ ಅವಕಾಶ ಕೋರುತ್ತಿದ್ದೇನೆ ಎಂದರು. ಇದೇ ಸದನದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ಅವರು ಸಿಎಂ ಮಾತನ್ನು ಕೇಳಿದ್ದ ತಕ್ಷಣ ಕಲಾಪದ ಮಧ್ಯೆ ತಮ್ಮ ಕೊಠಡಿಗೆ ಎದ್ದು ಹೋಗಿದ್ದಾರೆ.

    ಕೊಠಡಿಯಲ್ಲಿ ಯಡಿಯೂರಪ್ಪ ಕೆಲ ಬಿಜೆಪಿ ಶಾಸಕರೊಂದಿಗೆ ಚರ್ಚೆ ಮಾಡಿದ್ದಾರೆ. ವಿಶ್ವಾಸ ಮತಕ್ಕೆ ಕೋರಿದ ಹಿನ್ನೆಲೆಯಲ್ಲಿ 14 ದಿನಗಳ ಒಳಗಡೆ ಸ್ಪೀಕರ್ ಯಾವ ದಿನ ಬೇಕಾದರೂ ಅನುಮತಿ ನೀಡಬಹುದು.

    ಸಿಎಂ ವಿಶ್ವಾಸಮತಯಾಚನೆಗೆ ಸಮಯ ಕೇಳುತ್ತಾರೆ ಎಂದು ಬಿಜೆಪಿಯವರು ಊಹಿಸಿರಲಿಲ್ಲ. ಸಿಎಂ ಅವರ ನಿರ್ಧಾರ ಬಿಜೆಪಿ ಅಚ್ಚರಿ ಮೂಡಿಸಿದ್ದು, ಸರ್ಕಾರ ರಕ್ಷಣೆಗೆ ದೋಸ್ತಿ ನಾಯಕರು ಏನು ಪ್ಲಾನ್ ಮಾಡಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಹೀಗಾಗಿ ಬಿಎಸ್‍ವೈ ಸಿಎಂ ಅವರು ಪ್ಲಾನ್ ಏನು, ನಮ್ಮ ಮುಂದಿನ ನಡೆ ಏನು? ಎಂಬುದರ ಬಗ್ಗೆ ಶಾಸಕರೊಂದಿಗೆ ಚರ್ಚೆ ಮಾಡುತ್ತಿದ್ದಾರೆ.

    ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿ ಮಂಗಳವಾರದವರೆಗೂ ಯಥಾಸ್ಥಿತಿಯಲ್ಲಿ ಇರಬೇಕು ಎಂದು ಆದೇಶ ನೀಡಿದೆ. ಈ ಮೂಲಕ ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವಂತಿಲ್ಲ, ಜೊತೆಗೆ ಅವರನ್ನು ಅನರ್ಹ ಮಾಡುವಂತಿಲ್ಲ ಎಂದು ಆದೇಶಿಸಿದೆ. ಕೋರ್ಟಿನ ಇಂದಿನ ಆದೇಶದಿಂದ ದೋಸ್ತಿ ಸರ್ಕಾರ ತಾತ್ಕಾಲಿಕವಾಗಿ ಸೇಫ್ ಆಗಿದೆ. ಇತ್ತ ಅನರ್ಹ ಭೀತಿಯಲ್ಲಿದ್ದ ಅತೃಪ್ತರು ಕೂಡ ರಿಲೀಫ್ ಆಗಿದ್ದಾರೆ.

  • 1 ವಿಕೆಟ್ ಉರುಳಿಸಿದ ಬಳಿಕ ಮೂರು ವಿಕೆಟ್ ಬೀಳಿಸಲು ತಂತ್ರ!

    1 ವಿಕೆಟ್ ಉರುಳಿಸಿದ ಬಳಿಕ ಮೂರು ವಿಕೆಟ್ ಬೀಳಿಸಲು ತಂತ್ರ!

    ಬೆಂಗಳೂರು: ಲೋಕಸಭಾ ಚುನಾವಣೆಗೂ ಮೊದಲೇ ಕರ್ನಾಟಕದಲ್ಲಿ ರಾಜಕೀಯ ಕ್ರಾಂತಿ ಶುರುವಾಗಿದ್ದು, ಈಗಾಗಲೇ ಒಂದು ವಿಕೆಟ್ ಉರುಳಿಸಿ ಆಗಿದೆ. ಇನ್ನೂ ಮೂರು ವಿಕೆಟ್ ಬೀಳಿಸಲು ತಮ್ಮ ಭಂಟನ ಮೂಲಕ ಸದ್ದಿಲ್ಲದೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ `ಆಪರೇಷನ್’ ಕಸರತ್ತು ಮಾಡುತ್ತಿದ್ದಾರೆ.

    ಬಿಎಸ್‍ವೈ ದೇವದುರ್ಗ ಶಾಸಕ ಶಿವನಗೌಡ ನಾಯಕ್ ರನ್ನು ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡುವಂತೆ ಸೂಚಿಸಿದ್ದಾರೆ. ಹೀಗಾಗಿ ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ನಲ್ಲಿರುವ ರಮೇಶ್ ಜಾರಕಿಹೊಳಿ ಮನೆಯಲ್ಲಿಯೇ ಭೇಟಿ ನೀಡಿ ಬರೋಬ್ಬರಿ ಒಂದೂವರೆ ಗಂಟೆ ಚರ್ಚೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

    ಈಗಾಗಲೇ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಕಾಂಗ್ರೆಸ್ಸಿಗೆ ರಾಜೀನಾಮೆ ಕೊಟ್ಟಿದ್ದಾರೆ. ಇತ್ತ ರಮೇಶ್ ಜಾರಕಿಹೊಳಿ ರಾಜೀನಾಮೆಯ ಸುಳಿವು ಬೆನ್ನಲ್ಲೇ ಅವರ ಮನವೊಲಿಸಲು ಕುಮಾರಸ್ವಾಮಿ ದಿಢೀರ್ ಮಾತುಕತೆ ನಡೆಸಿದ್ದರು. ಆದಾದ ಬಳಿಕ ಸ್ಪೀಕರ್ ಅವರಿಂದ ನಾಲ್ವರು ಅತೃಪ್ತ ನಾಯಕರಿಗೆ ಸಭೆಗೆ ಹಾಜರಾಗುವಂತೆ ನೋಟಿಸ್ ಕೂಡ ನೀಡಲಾಗಿತ್ತು. ಸ್ಪೀಕರ್ ನೋಟಿಸ್ ಕೊಟ್ಟ ಬೆನ್ನಲ್ಲೇ ಬಿಜೆಪಿಯಿಂದ ಮಾತುಕತೆ ನಡೆಯುತ್ತಿದೆ.

    ರಮೇಶ್ ಜಾರಕಿಹೊಳಿ ತಂಡ ಸೆಳೆಯಲು ಬಿಜೆಪಿಯಿಂದ ಕಸರತ್ತು ಮುಂದುವರಿದಿದ್ದು, ಇವತ್ತು ಸಹ ರಮೇಶ್ ಜಾರಕಿಹೊಳಿಗೆ ಬಿಜೆಪಿ ಗಾಳ ಹಾಕಿದೆ. ಬಿಜೆಪಿಯ ಪ್ರಮುಖ ದೇವದುರ್ಗ ಶಾಸಕ ಶಿವನಗೌಡ ನಾಯಕ್ ರಿಂದ ರಮೇಶ್ ಜಾರಕಿಹೊಳಿ ಭೇಟಿ ಮಾಡಿಸಲಾಗಿದೆ. ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ಮನೆಯಲ್ಲಿ ಮಹತ್ವದ ಮಾತುಕತೆ ನಡೆದಿದ್ದು, ರಮೇಶ್ ಜಾರಕಿಹೊಳಿ ಮನೆಯಲ್ಲೇ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕೂಡ ಹಾಜರಾಗಿದ್ದರು.

    ಯಡಿಯೂರಪ್ಪ ಅವರು ಕಾಂಗ್ರೆಸ್ ಅತೃಪ್ತರಿಗೆ ಹೊಸ ಆಫರ್ ಕೊಟ್ಟಿದ್ದು, ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿಗೆ ಟಿಕೆಟ್ ಆಫರ್ ಮಾಡಿದ್ದಾರೆ. ಯಡಿಯೂರಪ್ಪ ದೆಹಲಿಯಲ್ಲಿ ಕೂತೇ ಶಿವನಗೌಡ ನಾಯಕ್ ಮೂಲಕ ಮಾತುಕತೆಗೆ ಸ್ಕೆಚ್ ಹಾಕಿದ್ದು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಮೇಶ್ ಜಾರಕಿಹೊಳಿ ಜೊತೆ ಶಿವನಗೌಡ ನಾಯಕ್ ಚರ್ಚೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ರಮೇಶ್ ಜಾರಕಿಹೊಳಿ ಜೊತೆ ಮಾತುಕತೆ ಮುಗಿಸಿ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಯಾವುದೇ ಪ್ರತಿಕ್ರಿಯೆ ಕೊಡದೇ ಕಾರೊಳಗೆ ಕೂತು ಮುಖ ಆಕಡೆ ತಿರುಗಿಸಿಕೊಂಡು ಹೊರಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಮಸ್ಕಾರ ಬಿಟ್ಟುಬಿಡ್ರಪ್ಪ, ನನಗೆ ಸಾಕಾಗಿದೆ ಏನಿದ್ರೂ ಅಧ್ಯಕ್ಷರನ್ನೇ ಕೇಳಿ- ಡಿ.ಕೆ ಶಿವಕುಮಾರ್

    ನಮಸ್ಕಾರ ಬಿಟ್ಟುಬಿಡ್ರಪ್ಪ, ನನಗೆ ಸಾಕಾಗಿದೆ ಏನಿದ್ರೂ ಅಧ್ಯಕ್ಷರನ್ನೇ ಕೇಳಿ- ಡಿ.ಕೆ ಶಿವಕುಮಾರ್

    ಬೆಂಗಳೂರು: ಡಿಸ್ಚಾರ್ಜ್ ಆಗುತ್ತಿದ್ದಂತೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಮನೆಗೆ ತೆರಳದೆ ಸೀದಾ ಸಿದ್ದರಾಮಯ್ಯ ಅವರನ್ನು ನೋಡಲು ತೆರಳಿದರು. ಈ ವೇಳೆ ಮಾಧ್ಯಮಗಳಿಗೆ ನಮಸ್ಕಾರ ಬಿಟ್ಟುಬಿಡ್ರಪ್ಪ, ನನಗೆ ಸಾಕಾಗಿದೆ, ಏನಿದ್ರೂ ಅಧ್ಯಕ್ಷರನ್ನೇ ಕೇಳಿ ಎಂದು ಹೇಳಿದ್ದಾರೆ.

    ಫುಡ್ ಪಾಯ್ಸನ್‍ನಿಂದ ಕಳೆದ ಮೂರು ದಿನಗಳ ಹಿಂದೆ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಡಿಕೆಶಿ ಗುರುವಾರ ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾರ್ಜ್ ಆಗುತ್ತಿದ್ದಂತೆ ಡಿ.ಕೆ ಶಿವಕುಮಾರ್ ಮನೆಗೆ ತೆರಳದೆ ಸೀದಾ ಸಿದ್ದರಾಮಯ್ಯ ಅವರನ್ನು ಕಾಣಲು ಕಾವೇರಿ ನಿವಾಸಕ್ಕೆ ತೆರಳಿದರು. ಡಿಕೆಶಿ ಜೊತೆ ಸಂಸದ ಡಿಕೆ ಸುರೇಶ್ ಮತ್ತು ಕುಣಿಗಲ್ ಶಾಸಕ ಡಾ. ರಂಗನಾಥ್ ಸಹ ತೆರಳಿದರು.

    ರಾಜ್ಯ ರಾಜಕಾರಣದಲ್ಲಿ ನಡೆಯತ್ತಿರುವ ಪೊಲಿಟಿಕಲ್ ಗೇಮ್ ಬಗ್ಗೆ ಸಿದ್ದರಾಮಯ್ಯ ಹೈಕಮಾಂಡ್ ಬಳಿ ಚರ್ಚಿಸಿ ಗುರುವಾರ ಸಂಜೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ನಡೆದ ಚರ್ಚೆಗಳ ಬಗ್ಗೆ ಚರ್ಚಿಸಿರುವ ಸಾಧ್ಯತೆಗಳಿವೆ.

    ಸಿದ್ದರಾಮಯ್ಯ ಜೊತೆ ಚರ್ಚಿಸಿ ಹೊರಬಂದ ಮೇಲೆ ಡಿ.ಕೆ ಶಿವಕುಮಾರ್, ನಮಸ್ಕಾರ ಮಾಡ್ತಿನಿ ಬಿಡ್ರಪ್ಪಾ. ನನಗೆ ಸಾಕಾಗಿದೆ. ಕೆಪಿಸಿಸಿ ಅಧ್ಯಕ್ಷರಿದ್ದಾರೆ. ಅವರೇ ಎಲ್ಲಾ ಹೇಳ್ತಾರೆ ಎಂದು ಹೇಳಿದ್ದರು. ಅಲ್ಲದೇ ಎಂಎಲ್‍ಸಿ ನಾಮಪತ್ರ ಸಲ್ಲಿಕೆ ಮಾಡಬೇಕಿತ್ತು. ಆ ಡೇಟ್ ಯಾವಾಗ ಅಂತಾ ಮಾತುಕತೆ ಆಯ್ತು ಎಂದು ಡಿಕೆಶಿ ಹೇಳಿದ್ದಾರೆ.

    ದೆಹಲಿಯಿಂದ ಬಂದ ನಂತರ ಸಭೆ ಮಾಡಿದ್ದೀವಿ. ರಾಜಕೀಯ ವಿದ್ಯಾಮಾನಗಳ ಬಗ್ಗೆ ಚರ್ಚೆ ಆಯಿತ್ತು. ನಾವೆಲ್ಲ ಒಗ್ಗಟ್ಟಿನಿಂದ ಇದ್ದೇವೆ. ಯಾವುದೇ ಭಯ ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಒಟ್ಟಿನಲ್ಲಿ ಸಿದ್ದು-ಡಿಕೆಶಿ ಭೇಟಿ ಕುತೂಹಲ ಮೂಡಿಸಿದ್ದು ಮೈತ್ರಿ ಸರ್ಕಾರ ಉಳಿಸಲು ಒಳಗೊಳಗೆ ಏನೋ ಪ್ಲಾನ್ ಮಾಡುತ್ತಿರುವ ಹಾಗೇ ಕಾಣುತ್ತಿದೆ. ಡಿಕೆಶಿ ಇಂದು ದೇವರ ಮೊರೆ ಹೋಗೋ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಮ್ಮಿಂದ ಸಾಧ್ಯವಾಗದೇ ಇದ್ರೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ- ಸಿದ್ದು, ಜಾರಕಿಹೊಳಿ ಸಭೆಯ ಇನ್‍ಸೈಡ್ ಸ್ಟೋರಿ

    ನಿಮ್ಮಿಂದ ಸಾಧ್ಯವಾಗದೇ ಇದ್ರೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ- ಸಿದ್ದು, ಜಾರಕಿಹೊಳಿ ಸಭೆಯ ಇನ್‍ಸೈಡ್ ಸ್ಟೋರಿ

    ಬೆಂಗಳೂರು: ರಾಜ್ಯ ರಾಜಕೀಯ ಇದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಆಪರೇಷನ್ ಕಮಲ, ಕಾಂಗ್ರೆಸ್ ಒಳ ಬೇಗುದಿಯ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಅತೃಪ್ತ ಶಾಸಕರೊಂದಿಗೆ ಸಂಧಾನ ಮಾತುಕತೆ ನಡೆಸಿದ್ದಾರೆ.

    ಈ ಮಾತುಕತೆ ವೇಳೆ ಬೆಳಗಾವಿ ರಾಜಕೀಯದಲ್ಲಿ ಮೂಗು ತೂರಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿಕೆಶಿಗೆ ಹೈಕಮಾಂಡಿನಿಂದಲೇ ಎಚ್ಚರಿಕೆ ನೀಡಬೇಕೆಂದು ರಮೇಶ್ ಜಾರಕಿಹೊಳಿ ಒತ್ತಡ ಹೇರಿದ್ದಾರೆ. ಇದು ಸಾಧ್ಯವಾಗದಿದ್ದರೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಸಿದ್ದರಾಮಯ್ಯಗೆ ರಮೇಶ್ ಜಾರಕಿಹೊಳಿ ಖಡಕ್ ಆಗಿ ಹೇಳಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನು ಓದಿ: ಕೊನೆಗೂ ಸಚಿವ ರಮೇಶ್ ಜಾರಕಿಹೊಳಿಗೆ ಮಣಿದ ರಾಜ್ಯ ಸರ್ಕಾರ

    ಯಾವುದೇ ಕಾರಣಕ್ಕೂ ಬಹಿರಂಗ ಹೇಳಿಕೆ ನೀಡಬೇಡಿ ಎಂದು ಸೂಚಿಸಿರುವ ಸಿದ್ದರಾಮಯ್ಯ, ಹೈಕಮಾಂಡ್ ಬಳಿ ಈ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಅಸಮಾಧಾನಗೊಂಡಿರುವ ಶಾಸಕರೊಂದಿಗೂ ಸಭೆ ನಡೆಸಿದ ಸಿದ್ದರಾಮಯ್ಯ, ಸೆ.30ರವರೆಗೆ ಕಾಯುವಂತೆ ಸೂಚಿಸಿದ್ದಾರೆ.

    ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳಿಗೆ ನೇಮಕ ಸಂದರ್ಭದಲ್ಲಿ ಅತೃಪ್ತರಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಈ ಸಂಧಾನ ಮಾತುಕತೆಗಳ ಬೆನ್ನಲ್ಲೇ ಹೈಕಮಾಂಡ್ ಸೂಚನೆ ಮೇರೆಗೆ ಮಂಗಳವಾರ ದೆಹಲಿಗೆ ಸಿದ್ದರಾಮಯ್ಯ ಸಹಿತ ರಾಜ್ಯ ನಾಯಕರು ದೆಹಲಿಗೆ ತೆರಳುವ ಸಾಧ್ಯತೆಗಳಿವೆ. ಇದನ್ನು ಓದಿ: ಸ್ವ ಕ್ಷೇತ್ರದಲ್ಲೇ ಸಿಎಂಗೆ ಮುಖಭಂಗ: ಕೈ ಬೆಂಬಲಿತ ಬಿಜೆಪಿ ಅಭ್ಯರ್ಥಿಗೆ ಜಯ

    ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ದೆಹಲಿಗೆ ಪ್ರಯಾಣಿಸುತ್ತಿದ್ದು, ಹೈಕಮಾಂಡ್ ಬುಲಾವ್ ನೀಡಿಲ್ಲ ಸ್ಪಷ್ಪಪಡಿಸಿದ್ದಾರೆ. ಕಾಂಗ್ರೆಸ್ ಒಳ ಬೇಗುದಿಯ ನಡುವೆಯೇ, ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯರೇ ಶ್ರೀರಕ್ಷೆ ಅಂತ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯರೇ ಕಂಟಕ ಅನ್ನೋದೆಲ್ಲಾ ಸುಳ್ಳು. ಅವರ ಶ್ರೀರಕ್ಷೆಯಿಂದಲೇ ಈ ಸರ್ಕಾರ ಐದು ವರ್ಷ ಅಧಿಕಾರ ಪೂರೈಸಲಿದೆ ಅಂತ ತಿಳಿಸಿದ್ದಾರೆ. ನಮ್ಮ ಬಳಿ 104 ಶಾಸಕರಿದ್ದಾರೆ ಅಂತ ಹೇಳುವವರೇ ಈ ಸರ್ಕಾರಕ್ಕೆ ವಿಲನ್ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

    ಸುಧಾಕರ್ ದೂರು:
    ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಅವರಂತೂ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ದೂರು ನೀಡಿದ್ದಾರೆ. ಇವರಿಬ್ಬರ ನಿರ್ಲಿಪ್ತತೆಯಿಂದಾಗಿ ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಲಾಗಿದೆ ಅಂತ ದೂರಿದ್ದಾರೆ. ಸಚಿವ ಜಾರಕಿಹೊಳಿ ಜೊತೆಗೆ ಪ್ರತ್ಯೇಕ ಸಭೆ ನಡೆಸಿದ ಅತೃಪ್ತ ಶಾಸಕರು ದು:ಖ-ದುಮ್ಮಾನ ತೋಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನು ಓದಿ: ಸಾಂಬಾರ್ ಬಡಿಸುವ ವೇಳೆ ಅನ್ನದ ತಟ್ಟೆ ಕಿತ್ಕೊಂಡ್ರು- ಪಕ್ಷೇತರ ಶಾಸಕ ನಾಗೇಶ್ ಸಿಟ್ಟು

    ಕ್ಷೇತ್ರಗಳ ಅಭಿವೃದ್ಧಿ, ಮಂತ್ರಿ ಮಾಡದಿರುವುದಕ್ಕೆ ಅಸಮಾಧಾನವಿದ್ದು ಮಂಗಳವಾರ ಅತೃಪ್ತ ಶಾಸಕರೆಲ್ಲಾ ಸೇರಿ ನಮ್ಮ ಮನಸ್ಸಿನಲ್ಲಿ ಏನಿದೆ ಅಂತ ಹೇಳುತ್ತೇವೆ ಎಂದು ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್ ಹೇಳಿದ್ದಾರೆ. ಶಾಸಕ ಭೀಮಾನಾಯ್ಕ್ ಕೂಡ ಜಾರಕಿಹೊಳಿ ಅವರನ್ನು ಭೇಟಿಯಾಗಿ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ. ಈ ತಿಂಗಳಾಂತ್ಯಕ್ಕೆ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳಿಗೆ ನೇಮಕವಾಗಲಿದ್ದು, ಅಲ್ಲಿಯವರೆಗೆ ಕಾಯಿರಿ ಅಂತ ರಮೇಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಓದಿ: ನಾನ್ಯಾಕೆ ರಾಜೀನಾಮೆ ಕೊಡ್ಲಿ ಸ್ವಾಮಿ: ರಮೇಶ್ ಜಾರಕಿಹೊಳಿ

    ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವೇನು?
    – ದೋಸ್ತಿ ಸರ್ಕಾರವಿದ್ದರೂ ನಮ್ಮನ್ನು ಕಡೆಗಣನೆ ಮಾಡಲಾಗಿದೆ
    – ಡಿಸಿಎಂ ಪರಮೇಶ್ವರ್, ಸಚಿವ ಡಿಕೆಶಿ ಸ್ಪಂದಿಸುತ್ತಿಲ್ಲ
    – ನಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಯಾರೂ ಅಲಿಸುತ್ತಿಲ್ಲ
    – ಸಿಎಂ ಕುಮಾರಸ್ವಾಮಿ ಜೆಡಿಎಸ್ ಶಾಸಕರಿಗೆ ಸೀಮಿತವಾಗಿದ್ದಾರೆ
    – ಸರ್ಕಾರ ಮಟ್ಟದಲ್ಲಿ ನಮ್ಮ ಸಮಸ್ಯೆಗಳು ಬಗೆಹರಿಯುತ್ತಿಲ್ಲ
    – ಕ್ಷೇತ್ರದಲ್ಲಿ ತಲೆ ಎತ್ತಿಕೊಂಡು ಹೋಗಲು ಆಗುತ್ತಿಲ್ಲ
    – ನಾವು 3-4 ಬಾರಿ ಗೆದ್ದಿದ್ದೇವೆ ನಮಗೂ ಸಚಿವ ಸ್ಥಾನ ಬೇಕು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಚ್‍ಡಿ ರೇವಣ್ಣಗೆ ಪರೋಕ್ಷವಾಗಿ ಮಾಜಿ ಸಿಎಂ ಟಾಂಗ್

    ಹೆಚ್‍ಡಿ ರೇವಣ್ಣಗೆ ಪರೋಕ್ಷವಾಗಿ ಮಾಜಿ ಸಿಎಂ ಟಾಂಗ್

    ಬೆಂಗಳೂರು: ವಿಧಾನಸಭೆಯಲ್ಲಿ ಮೊದಲ ಬಾರಿಗೆ ಚರ್ಚೆಯಲ್ಲಿ ಪಾಲ್ಗೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಪಕ್ಷದ ನಾಯಕ ಸಚಿವ ಹೆಚ್‍ಡಿ ರೇವಣ್ಣಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ಯಡಿಯೂರಪ್ಪ ಇರುವಾಗ ಹಾಲಿಗೆ ಎರಡು ರೂ. ಪ್ರೋತ್ಸಾಹ ಧನ ಇತ್ತು. ನಾನು ಅದನ್ನು 4-5 ರೂ. ಮಾಡಿದೆ. ಆದಾದ್ಮೇಲೆ 50,000 ಹಾಲು ಒಂದು ದಿನಕ್ಕೆ ಬರುತ್ತಿದ್ದದ್ದು, 75 ಲಕ್ಷ ಹಾಲು ಒಂದು ದಿನಕ್ಕೆ ಹೆಚ್ಚಾಗಿತ್ತು. ಆಗಂತ ನಾನು ಕೆಎಂಎಫ್‍ನಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳಲ್ಲ. ಅನಗತ್ಯ ನೇಮಕಾಗಿ ಮಾಡಿಕೊಂಡಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಸಂಬಳ ಕೊಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಕೊಟ್ಟಿದ್ದ ಪ್ರೋತ್ಸಾಹ ಧನ ದುರುಪಯೋಗ ಆಗಿಲ್ಲ ಅಂತ ಸಮರ್ಥಿಸಿಕೊಂಡಿದ್ದಾರೆ.

    ಸಿದ್ದರಾಮಯ್ಯ ಮಾತನಾಡಿದ ಬಳಿಕ ಕೆಲವು ಹಾಲು ಉತ್ಪಾದಕರ ಸಂಘಗಳಲ್ಲಿ ಸದಸ್ಯರೇ ರೈತರ ಹೆಸರಲ್ಲಿ ನಕಲಿ ಖಾತೆಗಳನ್ನು ತೆರೆದು ಪ್ರೋತ್ಸಾಹ ಧನ ಕಬಳಿಸುತ್ತಿರುವುದು ನಿಜ. ಇದನ್ನು ತಪ್ಪಿಸಿ ನೈಜ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಮಾಡಬೇಕು ಅಂತ ಲೋಕೋಪಯೋಗಿ ಸಚಿವ ಹೆಚ್‍ಡಿ ರೇವಣ್ಣ ಉತ್ತರ ನೀಡಿದರು.

  • ಉತ್ತರ, ದಕ್ಷಿಣ ಎಂದು ಯಾವುದೇ ತಾರತಮ್ಯ ಮಾಡಿಲ್ಲ – ಬಜೆಟ್ ಟೀಕೆಗೆ ಸಿಎಂ ತಿರುಗೇಟು

    ಉತ್ತರ, ದಕ್ಷಿಣ ಎಂದು ಯಾವುದೇ ತಾರತಮ್ಯ ಮಾಡಿಲ್ಲ – ಬಜೆಟ್ ಟೀಕೆಗೆ ಸಿಎಂ ತಿರುಗೇಟು

    ಬೆಂಗಳೂರು: ಬಜೆಟ್ ಬಗ್ಗೆ ಟೀಕೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಬಿಜೆಪಿ ಅವರಿಗೆ ನನ್ನ ಬಜೆಟ್ ಅರ್ಥವೇ ಮಾಡಿಕೊಂಡಿಲ್ಲ. ಏನೇನೋ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಸಿಎಂ ಎಚ್‍ಡಿಕೆ, ಉತ್ತರ, ದಕ್ಷಿಣ ಎಂದು ಯಾವುದೇ ತಾರತಮ್ಯ ಮಾಡಿಲ್ಲ. ನನ್ನ ಬಜೆಟ್ ನ ಸೂಕ್ಷ್ಮ ವಿಚಾರಗಳನ್ನ ಅರ್ಥ ಮಾಡಿಕೊಳ್ಳದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿದ್ದಾರೆ. ಮೋದಿ 4 ವರ್ಷಗಳಲ್ಲಿ ಬೆಲೆ ಜಾಸ್ತಿ ಮಾಡಿದಾಗ ಯಾರು ಮಾತನಾಡಿಲ್ಲ. ಆದರೆ ಈಗ ಎಲ್ಲರೂ ಮಾತನಾಡುತ್ತಿದ್ದಾರೆ. 34 ಸಾವಿರ ಕೋಟಿ ನಾನು ದರೋಡೆಕೋರಿಗೆ ಕೊಡುತ್ತಿಲ್ಲ. ನನ್ನ ಮನೆಗೆ ತೆಗೆದುಕೊಂಡು ಹೋಗುತ್ತಿಲ್ಲ. ಜನರ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯರ ಯಾವ ಯೋಜನೆಯನ್ನು ನಿಲ್ಲಿಸಿಲ್ಲ. ಹೀಗಿದ್ದರು ಬಿಜೆಪಿ ನಾಯಕರು ಲಂಗು ಲಗಾಮು ಇಲ್ಲದೆ ಮಾತನಾಡುತ್ತಾರೆ. ಎಲ್ಲದ್ದಕ್ಕೂ ಅಧಿವೇಶನದಲ್ಲಿ ಉತ್ತರ ಕೊಡುತ್ತೇನೆ. ನಾನು ಓಡಿ ಹೋಗೋದಿಲ್ಲ ಎಂದರು.

    ನಾನು ಅನ್ನದಾತನ ಮುಖ್ಯಮಂತ್ರಿ, ಆದರೆ ಮಾಧ್ಯಮಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ತಪ್ಪು ಸುದ್ದಿಗಳಿಂದ ದಾರಿ ತಪ್ಪಿಸಬಾರದು. ಸಾಲಮನ್ನಾದಿಂದ ಕೇವಲ ಒಕ್ಕಲಿಗರಿಗೆ ಸಹಾಯ ಆಗುವುದಿಲ್ಲ. ಎಲ್ಲಾ ಭಾಗದ ರೈತರಿಗ ಅನುಕೂಲವಾಗುತ್ತೆ. ಸುಳ್ಳು ಮಾಹಿತಿ ನೀಡಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಬೇಡಿ ಎಂದು ಮನವಿ ಮಾಡಿದರು.

    ಇದೇ ವೇಳೆ ಒಕ್ಕಲಿಗರಿಗೆ ಹೆಚ್ಚು ಸಹಾಯ ಆಗುತ್ತೆ ಎಂಬ ಅಂಕಿ – ಅಂಶ ನೀಡಿದವರ ವಿರುದ್ಧ ಕ್ರಮ ತೆಗೆದುಕೊಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಯಾರ ಮೇಲೆ ಕ್ರಮ ತೆಗೆದುಕೊಳ್ಳಲಿ. ಮಾಧ್ಯಮಗಳ ಮೇಲೆ ಕೇಸ್ ಹಾಕಬೇಕು ಅಷ್ಟೇ. ಹೀಗಾಗಿ ಸತ್ಯ ಸುದ್ದಿ ಪ್ರಸಾರ ಮಾಡಿ ಎಂದು ಮನವಿ ಮಾಡಿದರು. ಇದೇ ವೇಳೆ ರೈತರಿಗೂ ಮನವಿ ಮಾಡಿದ ಸಿಎಂ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನೀವು ಆತ್ಮಹತ್ಯೆ ಮಾಡಿಕೊಂಡರೆ ಸಾಲಮನ್ನಾ ಮಾಡಿದ್ದು ಪ್ರಯೋಜನ ಆಗುವುದಿಲ್ಲ. ನಿಮ್ಮೆಲ್ಲರ ಅಭಿವೃದ್ಧಿಗೆ ನಾನು ಕೆಲಸ ಮಾಡುತ್ತೇನೆ ಎಂದರು.

    ಮಾಜಿ ಡಿಸಿಎಂ ಆರ್.ಅಶೋಕ್ ವಿರುದ್ಧ ಕಿಡಿಕಾರಿದ ಸಿಎಂ, ಅಶೋಕ ಚಕ್ರವರ್ತಿಗಳು ಬೆಂಗಳೂರಿಗೆ ಏನು ಮಾಡಿಲ್ಲ. ಈ ಕುರಿತು ಚರ್ಚೆಗೆ ನಾನು ಸಿದ್ಧ. ಅಧಿವೇಶನದಲ್ಲೇ ಎಲ್ಲರಿಗೂ ಉತ್ತರ ಕೊಡುತ್ತೇನೆ. ಟ್ವಿಟ್ಟರ್ ನಲ್ಲಿ ಬಿಜೆಪಿ ನಾಯಕರ ವಿರೋಧಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿಎಂ, ನನ್ನ ಹೆಸರು ಕೆಡಿಸಬೇಕು ಎಂದು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.