Tag: ಚರಂಜಿತ್ ಸಿಂಗ್ ಚನ್ನಿ

  • ಪಂಜಾಬ್‌ನಲ್ಲಿ ನೈಟ್ ಕರ್ಫ್ಯೂ ಜೊತೆಗೆ ಶಾಲಾ-ಕಾಲೇಜು ಬಂದ್

    ಪಂಜಾಬ್‌ನಲ್ಲಿ ನೈಟ್ ಕರ್ಫ್ಯೂ ಜೊತೆಗೆ ಶಾಲಾ-ಕಾಲೇಜು ಬಂದ್

    ಚಂಡೀಗಢ: ಪಂಜಾಬ್‌ನಲ್ಲಿ ಕೊರೊನಾ ಹೆಚ್ಚುತ್ತಿದ್ದ ಹಿನ್ನೆಲೆ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಪರಿಶೀಲನಾ ಸಭೆಯಲ್ಲಿ ಹೊಸ ಆದೇಶಗಳನ್ನು ಘೋಷಿಸಿದ್ದಾರೆ.

    ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗುವುದು ಮತ್ತು ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲು ರಾತ್ರಿ ಕರ್ಫ್ಯೂ ವಿಧಿಸಲಾಗುತ್ತದೆ.

    ಪಂಜಾಬ್‌ನಲ್ಲಿ ದಿನೇ ದಿನೇ ಕೊರೊನಾ ಸೋಂಕು ಹರಡುವಿಕೆ ವೇಗವಾಗಿ ಹೆಚ್ಚುತ್ತಿದೆ. ರಾಜ್ಯದಲ್ಲಿ ಡಿಸೆಂಬರ್ 28 ರಂದು 51 ಕೇಸ್‌ಗಳು ದಾಖಲಾಗಿದ್ದು, ನಿನ್ನೆ ಒಮ್ಮಿಂದೊಮ್ಮೆಲೆ 419 ಪ್ರಕರಣಗಳು ವರದಿಯಾಗಿದೆ. ಹರಡುವಿಕೆಯ ದರವು ಡಿಸೆಂಬರ್ 29ರಂದು ಶೇ.0.46ರಷ್ಟಿತ್ತು. ಆದರೆ ನಿನ್ನೆ ಶೇ.4.47ಕ್ಕೆ ಏರಿದ ಹಿನ್ನೆಲೆಯಿಂದಾಗಿ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ. ಇದನ್ನೂ ಓದಿ: ಒಂದೇ ದಿನದಲ್ಲಿ 100 ವೈದ್ಯರಿಗೆ ಕೋವಿಡ್ ಪಾಸಿಟಿವ್!

    ಹೊಸ ಆದೇಶದಲ್ಲಿ ಏನಿದೆ?
    ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳು ನಡೆಸುತ್ತಿದ್ದ ಆಫ್‌ಲೈನ್ ತರಗತಿಗಳನ್ನು ನಿಲ್ಲಿಸಲಾಗುತ್ತದೆ ಮತ್ತು ಆನ್‌ಲೈನ್ ತರಗತಿಗಳು ಮುಂದುವರಿಸಲಾಗುತ್ತದೆ. ಆದರೆ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳಿಗೆ ಎಂದಿನಂತೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

    ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಬಾರ್‌ಗಳು, ಸಿನಿಮಾ ಹಾಲ್‌ಗಳು, ಮಲ್ಟಿಪ್ಲೆಕ್ಸ್, ಮಾಲ್, ರೆಸ್ಟೋರೆಂಟ್, ಮ್ಯೂಸಿಯಂ, ಮತ್ತು ಮೃಗಾಲಯಗಳು ಶೇ.5ಂ ರಷ್ಟು ಕಾರ್ಯನಿರ್ವಹಿಸಬಹುದು. ಎಲ್ಲಾ ಸಿಬ್ಬಂದಿ ಸದಸ್ಯರು ಸಂಪೂರ್ಣವಾಗಿ ಲಸಿಕೆ ಹಾಕಿದ್ದರೆ ಮಾತ್ರ ಅವರನ್ನು ಒಳಗೆ ಬಿಡಬೇಕು. ಈ ಹೊಸ ಆದೇಶಗಳು ಜನವರಿ 15 ರವರೆಗೆ ಮುಂದುವರಿಯುತ್ತದೆ ಎಂದು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ತಿಳಿಸಿದ್ದಾರೆ.

    ಕ್ರೀಡಾ ಸ್ಟೇಡಿಯಂಗಳು, ಈಜುಕೊಳಗಳು, ಮತ್ತು ಜಿಮ್‌ಗಳನ್ನು ಮುಚ್ಚಲಾಗುತ್ತದೆ. ಆದರೆ  ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ  ಕ್ರೀಡಾಪಟುಗಳಿಗೆ ತರಬೇತಿ ನೀಡಲು ಅವಕಾಶವಿದೆ. ಎರಡು ಲಸಿಕೆ ಪೂರ್ಣಗೊಂಡಿರುವ ಸಿಬ್ಬಂದಿಗೆ ಮಾತ್ರ ಸರ್ಕಾರಿ ಹಾಗೂ ಖಾಸಗಿ ಕಛೇರಿಗಳಿಗೆ ಭೇಟಿ ನೀಡಲು ಅವಕಾಶವಿದೆ. ರಾಜಕೀಯ ಸಭೆಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧನೆ ಇಲ್ಲ ಎಂದು ಹೇಳಲಾಗಿದೆ.
    ಇದನ್ನೂ ಓದಿ: ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ – ಶನಿವಾರ, ಭಾನುವಾರ ಕಂಪ್ಲೀಟ್‌ ಬಂದ್