Tag: ಚಪ್ಪಲಿ

  • ವೃದ್ಧೆಯ ಕೊಲೆ ಕೇಸ್ ಆರೋಪಿ ಬಂಧನ: ಕೊಲೆಗಾರನ ಸುಳಿವು ನೀಡಿತ್ತು ಚಪ್ಪಲಿ

    ವೃದ್ಧೆಯ ಕೊಲೆ ಕೇಸ್ ಆರೋಪಿ ಬಂಧನ: ಕೊಲೆಗಾರನ ಸುಳಿವು ನೀಡಿತ್ತು ಚಪ್ಪಲಿ

    ಬೆಂಗಳೂರು: ನಗರದ ಅಡುಗೋಡಿಯಲ್ಲಿ ನಡೆದಿದ್ದ ವೃದ್ಧೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    22 ವರ್ಷ ವಯಸ್ಸಿನ ಸೈಯದ್ ನದೀಮ್ ಬಂಧಿತ ಆರೋಪಿ. ಈತ 16ನೇ ತಾರೀಖಿನಂದು ವೃದ್ಧೆ ಗಜಲಕ್ಷ್ಮಿ ಎಂಬವರನ್ನ ಕೊಂದು ಚಿನ್ನಾಭರಣ ದೋಚಿದ್ದ. ವಿವೇಕನಗರದ ನೀಲಸಂದ್ರದಲ್ಲಿ ಈ ಘಟನೆ ನಡೆದಿತ್ತು. 75 ವರ್ಷದ ಗಜಲಕ್ಷ್ಮೀ ಮನೆಯಲ್ಲಿ ಮಲಗಿದ್ದ ವೇಳೆ ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೊಲೆಗಾರನ ಪತ್ತೆಗೆ ಬಲೆ ಬೀಸಿದ್ದರು.

    ಚಪ್ಪಲಿ ನೀಡಿತ್ತು ಕೊಲೆಗಾರನ ಸುಳಿವು: ಈ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಸುಳಿವು ನೀಡಿದ್ದು ಚಪ್ಪಲಿ. ಚಪ್ಪಲಿಯಲ್ಲಿದ್ದ ತೂತುಗಳಿಂದ ಪೊಲೀಸರು ಕೊಲೆಗಾರನನ್ನ ಪತ್ತೆ ಹಚ್ಚಿದ್ದಾರೆ. ಆರೋಪಿ ಕೊಲೆ ಮಾಡಿದ ಬಳಿಕ ಚಪ್ಪಲಿಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದ. ಚಪ್ಪಲಿಯನ್ನು ಪರಿಶೀಲಿಸಿದ ಪೊಲೀಸರು ಚಪ್ಪಲಿಯಲ್ಲಿರೋ ರಂಧ್ರ ನೋಡಿದ್ರು. ವೆಲ್ಡಿಂಗ್ ಮಾಡೋರ ಚಪ್ಪಲಿಯಲ್ಲಿ ಮಾತ್ರ ಈ ರೀತಿಯ ರಂಧ್ರಗಳಿರುತ್ತೆ ಎಂದು ತಿಳಿದು ಪರಿಶೀಲನೆ ನಡೆಸಿದ್ದರು.

    ಬಳಿಕ ಸೈಯದ್‍ನನ್ನು ಪತ್ತೆ ಹಚ್ಚಿದ್ರು. ಸೈಯದ್ ಕೂಡ ವೆಲ್ಡಿಂಗ್ ಮಾಡೋ ಜಾಗದಲ್ಲಿ ಕೆಲಸ ಮಾಡ್ತಿದ್ದ. ಇದೀಗ ಈತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

  • ಕಾಮುಕನಿಗೆ ಚಪ್ಪಲಿಯಿಂದ ಬಾರಿಸಿದ ಪಬ್‍ನ ಮಹಿಳಾ ನೌಕರರು- ವಿಡಿಯೋ ವೈರಲ್

    ಕಾಮುಕನಿಗೆ ಚಪ್ಪಲಿಯಿಂದ ಬಾರಿಸಿದ ಪಬ್‍ನ ಮಹಿಳಾ ನೌಕರರು- ವಿಡಿಯೋ ವೈರಲ್

    ಗುರಗಾಂವ್: ಇಲ್ಲಿನ ಪಬ್‍ವೊಂದರ ಮಹಿಳಾ ನೌಕರರು ಕಾಮುಕನನ್ನು ಚಪ್ಪಲಿಯಿಂದ ಸಾರ್ವಜನಿಕವಾಗಿಯೇ ಥಳಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಶನಿವಾರ ರಾತ್ರಿ ಗುರಗಾಂವ್‍ನ ಎಂಜಿ ರೋಡ್‍ನಲ್ಲಿ ಈ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಪಬ್‍ನ ಮಹಿಳಾ ನೌಕರೆಯೊಬ್ಬರ ಬಳಿ ಬಂದು ಹಿಂದಿನಿಂದ ಹಿಡಿದುಕೊಂಡಿದ್ದಾನೆ. ತಕ್ಷಣವೇ ಮಹಿಳೆಯ ಸಹೋದ್ಯೋಗಿಗಳು ಆಕೆಯ ನೆರವಿಗೆ ಧಾವಿಸಿದ್ದು, ಆ ವ್ಯಕ್ತಿಗೆ ಚಪ್ಪಲಿಯಿಂದ ಬಾರಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಶೇರ್ ಆಗ್ತಿದೆ.

    ಘಟನೆ ನಡೆದ ವೇಳೆ ಸ್ಥಳದಲ್ಲಿ ಪೊಲೀಸರು ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಾವು ಪುರುಷ ಹಾಗೂ ಮಹಿಳಾ ಪೇದೆಗಳನ್ನ ನಿಯೋಜಿಸಿದ್ದೇವೆ. ಸಂತ್ರಸ್ಥರು ಪೊಲೀಸರ ಬಳಿ ಬಂದಾಗ ಎಫ್‍ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದೇವೆ ಎಂದು ಸಹಾಯಕ ಪೊಲೀಸ್ ಆಯುಕ್ತರಾದ ಮನಿಷ್ ಸೆಹ್ಗಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

  • ಬಳ್ಳಾರಿಯಲ್ಲಿ ವಿದೇಶಿಗರ ದರ್ಬಾರ್ – ಹಂಪಿ ದೇಗುಲದಲ್ಲೇ ಮದ್ಯಾರಾಧನೆ

    ಬಳ್ಳಾರಿಯಲ್ಲಿ ವಿದೇಶಿಗರ ದರ್ಬಾರ್ – ಹಂಪಿ ದೇಗುಲದಲ್ಲೇ ಮದ್ಯಾರಾಧನೆ

    – ಚಪ್ಪಲಿ ಹಾಕಿ ಭಾರತೀಯ ಸಂಸ್ಕೃತಿಗೆ ಅಪಮಾನ

    ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿ ಬರಬರುತ್ತಾ ಅನೈತಿಕ ತಾಣವಾಗುತ್ತಿದೆಯಾ ಎಂಬ ಅನುಮಾನಗಳು ಇದೀಗ ಮೂಡಿವೆ. ಯಾಕಂದ್ರೆ ಮಂಗಳವಾರ ಸಂಜೆ ವಿದೇಶಿ ಪ್ರವಾಸಿಗರು ವಿಶ್ವ ಪ್ರಸಿದ್ದಿ ವಿರೂಪಾಕ್ಷೇಶ್ವರ ದೇವಾಲಯದಲ್ಲೇ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡು ದೇವಸ್ಥಾನದ ಆವರಣದಲ್ಲೆಲ್ಲಾ ಮದ್ಯಸೇವನೆ ಮಾಡುತ್ತಾ ಓಡಾಡಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಅಲ್ಲದೇ ದೇವಸ್ಥಾನದ ಪ್ರಾಗಂಣದಲ್ಲಿ ಚಪ್ಪಲಿ ಧರಿಸಿಕೊಂಡು ನಡೆದಾಡಿದ್ದು ಸಹ ವಿದೇಶಿ ಪ್ರವಾಸಿಗರ ಸ್ವೇಚ್ಛಾಚಾರವನ್ನು ಎತ್ತಿತೋರಿಸುತ್ತಿತ್ತು. ದೇವಸ್ಥಾನದಲ್ಲಿ ಹತ್ತಾರು ಕಾವಲುಗಾರರು, ಹಾಗೂ ಧಾರ್ಮಿಕ ದತ್ತಿ ಇಲಾಖೆ ಕಚೇರಿಯಿದ್ದರೂ ಸಹ ಯಾರೊಬ್ಬರು ಸಹ ವಿದೇಶಿ ಪ್ರವಾಸಿಗರ ಈ ವರ್ತನೆಯನ್ನು ವಿರೋಧಿಸದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ದೇವಸ್ಥಾನದ ಆವರಣದಲ್ಲಿ ಮದ್ಯಪಾನ-ಚಪ್ಪಲಿಯನ್ನು ನಿಷೇಧಿಸಿದ್ರೂ ವಿದೇಶಿ ಪ್ರವಾಸಿಗರು ಕ್ಯಾರೆ ಎನ್ನದೇ ದುರ್ವವರ್ತನೆ ತೋರಿದ್ದಾರೆ. ವಿದೇಶಿ ಪ್ರವಾಸಿಗರು ಪ್ರವಾಸದ ನೆಪದಲ್ಲಿ ಹಂಪಿಯಲ್ಲಿ ಸ್ವೇಚ್ಛಾಚಾರದಿಂದ ವರ್ತನೆ ಮಾಡುತ್ತಿದ್ದಾರೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಶಿವಸೇನೆ ಸಂಸದನ ಆರ್ಭಟಕ್ಕೆ ಬ್ರೇಕ್: ಇನ್ಮುಂದೆ ಈ ವಿಮಾನಗಳಲ್ಲಿ ಹಾರುವಂತಿಲ್ಲ

    ಶಿವಸೇನೆ ಸಂಸದನ ಆರ್ಭಟಕ್ಕೆ ಬ್ರೇಕ್: ಇನ್ಮುಂದೆ ಈ ವಿಮಾನಗಳಲ್ಲಿ ಹಾರುವಂತಿಲ್ಲ

    ಮುಂಬೈ: ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡರಿಗೆ ಖಾಸಗಿ ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿದೆ. ಗುರುವಾರ ಏರ್ ಇಂಡಿಯಾದ ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದು ಅಧಿಕಾರ ದರ್ಪವನ್ನು ತೋರಿದ್ದ ಹಿನ್ನೆಲೆಯಲ್ಲಿ ಇಂಡಿಯನ್ ಏರ್‍ಲೈನ್ಸ್ ಫೆಡರೇಷನ್(ಎಫ್‍ಐಎ) ಅಡಿಯಲ್ಲಿ ಬರುವ ಖಾಸಗಿ ಕಂಪೆನಿಗಳು ಗಾಯಕ್ವಾಡ್ ಅವರಿಗೆ ತಮ್ಮ ಸಂಸ್ಥೆಯಲ್ಲಿ ಟಿಕೆಟ್ ನೀಡದೇ ಇರಲು ನಿರ್ಧಾರವನ್ನು ಕೈಗೊಂಡಿದೆ ಎಂದು ಮೂಲಗಳು ಹೇಳಿವೆ.

    ಎಫ್‍ಐಎ ಸದಸ್ಯರಾಗಿರುವ ಜೆಟ್ ಏರ್‍ವೇಸ್, ಗೋ ಏರ್, ಇಂಡಿಗೋ, ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗಳು ರವೀಂದ್ರ ಅವರ ಮೇಲೆ ಕಠಿಣ ಕ್ರಮವನ್ನು ತಗೆದುಕೊಂಡಿದೆ ಎಂದು ಎಫ್‍ಐಎ ವಕ್ತಾರರೊಬ್ಬರು ತಿಳಿಸಿದ್ದಾರೆ.

    ಸಿಬ್ಬಂದಿಗೆ ಹೊಡೆದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ರವೀಂದ್ರ ಗಾಯಕ್ವಾಡ್ ಅವರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಏರ್ ಇಂಡಿಯಾದ ಅಧಿಕಾರಿಯೊಬ್ಬರು ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಬ್ಲಾಕ್‍ಲಿಸ್ಟ್ ಅವಧಿ ಎಲ್ಲಿಯವರೆಗೆ ಇರಲಿದೆ ಎನ್ನುವುದು ತಿಳಿದು ಬಂದಿಲ್ಲ.

    ಉಸ್ಮನಾ ಬಾದ್ ಲೋಕಸಭಾ ಕ್ಷೇತ್ರದ ಸಂಸದ ರವೀಂದ್ರ ಗಾಯಕ್ವಾಡ್ ಏರ್ ಇಂಡಿಯಾದ ನಿವೃತ್ತ ಅಂಚಿನಲ್ಲಿರೋ ತಮ್ಮ ತಂದೆ ವಯಸ್ಸಿನ ಏರ್ ಇಂಡಿಯಾದ ಸಿಬ್ಬಂದಿ ಸುಕುಮಾರ್ ಅವರಿಗೆ 25 ಬಾರಿ ಚಪ್ಪಲಿಯಿಂದ ಹೊಡೆದಿದ್ದರು. ಬಳಿಕ ವಿಮಾನದಲ್ಲಿ ಸೀಟ್ ಬದಲಾವಣೆ ವಿಚಾರದಲ್ಲಿ ಗಲಾಟೆ ನಡೆದಾಗ ಹೊಡೆದಿದ್ದೇನೆ ಅಂತ ಪೌರುಷ ತೋರಿದ್ದರು.

    ರವೀಂದ್ರ ಗಾಯಕ್ವಾಡ್ ಪುಣೆಯಿಂದ ದೆಹಲಿಯತ್ತ ಹೊರಟಿದ್ದರು. ನಾನು ಬಿಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದು, ಆದ್ರೆ ನನ್ನ ಎಕನಾಮಿ ಕ್ಲಾಸ್ ಸೀಟ್‍ನಲ್ಲಿ ಕೂರಿಸಿದ್ದಾರೆ ಎಂದು ಏರ್ ಇಂಡಿಯಾ ವಿರುದ್ಧ ಆರೋಪ ಮಾಡಿದ್ದರು. ಘಟನೆ ಬಗ್ಗೆ ಮಾತಾನಾಡಿರೋ ಹಲ್ಲೆಗೊಳಗಾದ ಸಿಬ್ಬಂದಿ ಸುಕುಮಾರ್ ಈ ದೇಶವನ್ನು ಆ ದೇವರೇ ಕಾಪಾಡಬೇಕು ಅಂತಾ ಬೇಸರ ವ್ಯಕ್ತಪಡಿಸಿದ್ದರು.

    ಏರ್ ಇಂಡಿಯಾ ರವೀಂದ್ರ ಗಾಯಕ್ವಾಡ್ ವಿರುದ್ಧ ಎರಡು ಎಫ್‍ಐಆರ್ ಗಳನ್ನು ದಾಖಲಿಸಿದೆ. ಒಂದು ತಮ್ಮ ಸಿಬ್ಬಂದಿ ಹಲ್ಲೆ ಮಾಡಿದ್ದು ಮತ್ತು 40 ನಿಮಿಷ ವಿಮಾನ ಪ್ರಯಾಣಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ದೂರು ದಾಖಲಿಸಿದೆ.