Tag: ಚಪ್ಪಲಿ

  • ಬಡಾವಣೆಯೊಂದರಲ್ಲಿಯೇ 18 ಮನೆಗಳಲ್ಲಿ ಚಪ್ಪಲಿ, ಶೂ ಎಗರಿಸಿದ ಖದೀಮರು

    ಬಡಾವಣೆಯೊಂದರಲ್ಲಿಯೇ 18 ಮನೆಗಳಲ್ಲಿ ಚಪ್ಪಲಿ, ಶೂ ಎಗರಿಸಿದ ಖದೀಮರು

    ಬೆಂಗಳೂರು: ಸಾರ್ವಜನಿಕರೇ ಹುಷಾರ್.. ಮನೆ ಮುಂದೆ ಚಪ್ಪಲಿ ಬಿಡುವ ಮುನ್ನ ಎಚ್ಚರವಾಗಿರಿ. ನಗರದಲ್ಲಿ ಚಪ್ಪಲಿ ಕಳ್ಳರು ಹುಟ್ಟಿಕೊಂಡಿದ್ದಾರೆ.

    ನಗರದಲ್ಲಿ ಮನೆ ಮುಂದೆ ಇಟ್ಟಿದ್ದ ಚಪ್ಪಲಿಗಳನ್ನು ಬೆಳಗಾಗುವಷ್ಟರಲ್ಲೇ ಖದೀಮರು ಎಗರಿಸುತ್ತಿದ್ದಾರೆ. ಕಳ್ಳರು ಬ್ರಾಂಡೆಡ್ ಕಂಪೆನಿಯ ಶೂ ಮತ್ತು ಚಪ್ಪಲಿಗಳನ್ನು ಟಾರ್ಗೆಟ್ ಮಾಡುತ್ತಿದ್ದು, ಒಂದು ಜೊತೆ ಚಪ್ಪಲಿಯನ್ನು ಬಿಡದೆ ಹೊತ್ತೊಯ್ಯುತ್ತಿದ್ದಾರೆ.

    ಸೋಮವಾರ ರಾತ್ರಿ ನಗರದ ಅಬ್ಬಿಗೆರೆಯ ವೆಂಕಟೇಶ್ವರ ಬಡಾವಣೆಯಲ್ಲಿ ವಿಚಿತ್ರ ಘಟನೆ ನಡೆದಿದೆ. ಈ ಬಡಾವಣೆಯಲ್ಲಿ ಸುಮಾರು 18 ಮನೆಗಳಲ್ಲಿ ಚಪ್ಪಲಿ ಮತ್ತು ಶೂ ಗಳನ್ನ ಖದೀಮರು ಎಗರಿಸಿದ್ದಾರೆ. ಇದರಿಂದ ಸ್ಥಳೀಯರು ಚಪ್ಪಲಿ ಕಳ್ಳರಿಗೆ ಹಿಡಿಶಾಪ ಹಾಕಿದ್ದಾರೆ.

  • ಬಸ್ಸಿನಲ್ಲಿ ಕಿರುಕುಳ ನೀಡಿದ್ದ ವ್ಯಕ್ತಿಗೆ ಚಪ್ಪಲಿಯಲ್ಲಿ ಹೊಡೆದ ಯುವತಿ – ವೀಡಿಯೊ ವೈರಲ್

    ಬಸ್ಸಿನಲ್ಲಿ ಕಿರುಕುಳ ನೀಡಿದ್ದ ವ್ಯಕ್ತಿಗೆ ಚಪ್ಪಲಿಯಲ್ಲಿ ಹೊಡೆದ ಯುವತಿ – ವೀಡಿಯೊ ವೈರಲ್

    ಭುವನೇಶ್ವರ: ಯುವತಿಯೊಬ್ಬಳು ಬಸ್ಸಿನಲ್ಲಿ ಕಿರುಕುಳ ನೀಡಿದ ವ್ಯಕ್ತಿಗೆ ತನ್ನ ಚಪ್ಪಲಿ ತೆಗೆದು ಬಾರಿಸಿದ್ದು, ಈಗ ಆ ವೀಡಿಯೊ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.

    ಈ ಘಟನೆ ಮಂಗಳವಾರ ನಡೆದಿದ್ದು, ನಗರದ ಬಸ್ ಒಂದರಲ್ಲಿ ಯುವತಿಯ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಯುವತಿ ಧೈರ್ಯದಿಂದ ಎದ್ದು ಆತನಿಗೆ ಬೈದಿದ್ದಾರೆ. ಆದರೆ ಆ ವ್ಯಕ್ತಿ ತಾನು ಮುಗ್ಧ ಎಂದು ಸಾಬೀತುಪಡಿಸಲು ಪ್ರಯತ್ನಿಸಿದ್ದಾನೆ. ನಂತರ ಆಕೆ ತನ್ನ ಚಪ್ಪಲಿ ತೆಗೆದು ಹೊಡೆದಿದ್ದಾರೆ. ಬಳಿಕ ಬಸ್ ನಲ್ಲಿ ಕೆಲವರು ಸಹ-ಪ್ರಯಾಣಿಕರು ಕ್ಷಮೆ ಕೇಳುವಂತೆ ವ್ಯಕ್ತಿಗೆ ಒತ್ತಾಯಪಡಿಸುವುದರ ಮೂಲಕ ಯುವತಿಯನ್ನ ಬೆಂಬಲಿಸಿದ್ದಾರೆ.

    ಕೊನೆಗೆ ಪ್ರಯಾಣಿಕರು ಮತ್ತು ಬಸ್ ಸಿಬ್ಬಂದಿ ತಕ್ಷಣವೇ ಆ ವ್ಯಕ್ತಿಯನ್ನು ಬಸ್ಸಿನಿಂದ ಹೊರ ಹೋಗಲು ಹೇಳಿದ್ದಾರೆ. ನಂತರ ಆ ವ್ಯಕ್ತಿ ಕೆಳಗಿಳಿದು ಹೋಗಿದ್ದಾನೆ. ಇದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

    ಈ ಘಟನೆಯನ್ನು ಬಸ್ಸಿನಲ್ಲಿ ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ಘಟನೆ ಸಂಬಂಧ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಅಷ್ಟೇ ಅಲ್ಲದೇ ಈ ಘಟನೆ ಸಂಭವಿಸಿದ ನಿಖರ ಸ್ಥಳ ಇನ್ನೂ ತಿಳಿದಿಲ್ಲ. ಆದರೆ ನಗರದ ಖಂಡಗಿರಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

    https://youtu.be/qaaDnE6cJYU

  • ಮಿಲ್ಕಿ ಬ್ಯೂಟಿ ಕ್ವೀನ್ ತಮನ್ನಾ ಮೇಲೆ ಬಿಟೆಕ್ ಪದವೀಧರನಿಂದ ಚಪ್ಪಲಿ ಎಸೆತ!

    ಮಿಲ್ಕಿ ಬ್ಯೂಟಿ ಕ್ವೀನ್ ತಮನ್ನಾ ಮೇಲೆ ಬಿಟೆಕ್ ಪದವೀಧರನಿಂದ ಚಪ್ಪಲಿ ಎಸೆತ!

    ಹೈದರಾಬಾದ್: ಖ್ಯಾತ ತೆಲುಗು ನಟಿ ತಮನ್ನಾ ಭಾಟಿಯಾ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆಯಲು ಯತ್ನಿಸಿರುವ ಘಟನೆ ಹೈದರಾಬಾದ್‍ನ ನಾರಾಯಂಗುಡಾದಲ್ಲಿ ನಡೆದಿದೆ.

    ಭಾನುವಾರ ಹಿಮ್ಮತ್ ನಗರದ ಜ್ಯುವೆಲ್ಲರಿ ಶೋ ರೂಂ ಉದ್ಘಾಟನೆಗೆ ನಟಿ ತಮನ್ನಾ ಆಗಮಿಸಿದ್ದರು. ಅಂತೆಯೇ ತಮನ್ನಾ ಶೋ ರೂಂ ಉದ್ಘಾಟನೆ ಮಾಡಿ ಹೊರಬರುವ ವೇಳೆ ವ್ಯಕ್ತಿಯೊಬ್ಬ ಇವರಿಗೆ ಗುರಿಯಿಟ್ಟು ಚಪ್ಪಲಿ ಎಸೆದಿದ್ದಾನೆ. ಆದರೆ ಅದು ಗುರಿ ತಪ್ಪಿ ಮಳಿಗೆಯ ಸಿಬ್ಬಂದಿ ಮೇಲೆ ಬಿದ್ದಿದೆ. ತಕ್ಷಣವೇ ಅಭಿಮಾನಿಗಳನ್ನು ನಿಯಂತ್ರಿಸಿ ತಮನ್ನಾ ಅವರನ್ನು ರಕ್ಷಿಸಲು ಅವರ ಬಾಡಿಗಾರ್ಡ್ಸ್  ಮುಂದಾಗಿದ್ದಾರೆ.

    ಈ ಘಟನೆಯಿಂದ ತಮನ್ನಾ, ಶೋ ರೂಂ ಮಾಲೀಕರು ಹಾಗೂ ಪೊಲೀಸರು ಕೂಡ ದಿಗ್ಭ್ರಮೆಗೊಂಡಿದ್ದು, ತಕ್ಷಣ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಳಿಕ ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಚಪ್ಪಲಿ ಎಸೆದ ವ್ಯಕ್ತಿ ಬಿಟೆಕ್ ಪದವೀಧರನಾಗಿದ್ದು, ಮುಶೀರಾಬಾದ್ ನಿವಾಸಿ ಕರಿಮುಲ್ಲಾ ಎಂದು ಗುರುತಿಸಲಾಗಿದೆ. ಈತ ತಮನ್ನಾರ ಅಭಿಮಾನಿಯಾಗಿದ್ದು, ಇತ್ತೀಚಿನ ಚಿತ್ರಗಳಲ್ಲಿ ತಮನ್ನಾ ನಟನೆಯ ಬಗ್ಗೆ ಕರಿಮುಲ್ಲಾ ಅಸಮಾಧಾನ ಹೊಂದಿದ್ದನು ಎನ್ನಲಾಗಿದೆ.

    ಪ್ರಸ್ತುತ ತಮನ್ನಾ ಬಾಲಿವುಡ್ ಬ್ಲಾಕ್ ಮಾಸ್ಟರ್ `ರಾಣಿ’  ರೀಮೇಕ್  ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  • ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಕಾರಿನ ಮೇಲೆ ಚಪ್ಪಲಿ ಎಸೆತ

    ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಕಾರಿನ ಮೇಲೆ ಚಪ್ಪಲಿ ಎಸೆತ

    ರಾಮನಗರ: ಮಾಗಡಿ ಪುರಸಭೆ ಅದ್ಯಕ್ಷ ಚುನಾವಣೆಯಲ್ಲಿ ದಲಿತರಿಗೆ ಮಾತು ಕೊಟ್ಟು ಬೇರೆಯವರಿಗೆ ಮಣೆ ಹಾಕಿದ್ದಕ್ಕೆ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಕಾರಿನ ಮೇಲೆ ಚಪ್ಪಲಿ ಎಸೆದಿರುವ ಘಟನೆ ಮಾಗಡಿಯಲ್ಲಿ ನಡೆದಿದೆ.

    ಇಂದು ಮಾಗಡಿ ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ನಡೆದಿತ್ತು. ಚುನಾವಣೆಗೆ ಮುನ್ನ ದಲಿತ ಮುಖಂಡರಾದ ರಂಗಹನುಮಯ್ಯನವರ ಪತ್ನಿಗೆ ಅಧ್ಯಕ್ಷ ಸ್ಥಾನದ ಭರವಸೆ ನೀಡಲಾಗಿತ್ತು. ಆದ್ರೆ ಇಂದು ನಡೆದ ಚುನಾವಣೆಯಲ್ಲಿ ಕುರುಬ ಸಮುದಾಯದ ಮಂಜುನಾಥ್ ಗೆ ಅಧ್ಯಕ್ಷ ಪಟ್ಟ ನೀಡಲಾಯ್ತು.

    ದಲಿತ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ತಪ್ಪಿದ್ದರಿಂದ ದಲಿತರು ಪುರಸಭೆಯಿಂದ ಹೊರಟಿದ್ದ ಶಾಸಕ ಬಾಲಕೃಷ್ಣರ ಕಾರನ್ನು ಅಡ್ಡಗಟ್ಟಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಇನ್ನೂ ಕಾರಿಗೆ ಹಾಕಿದ್ದ ಹೂವಿನ ಹಾರವನ್ನು ಕಿತ್ತೆಸೆದರು. ನಂತರ ಮುಂದೆ ಸಾಗುತ್ತಿದ್ದ ಕಾರಿನ ಮೇಲೆ ಚಪ್ಪಲಿ ಎಸೆಯಲಾಗಿದೆ. ಆದ್ರೆ ಕಾರು ಮುಂದೆ ಸಾಗಿದ್ರಿಂದ ದೂರದಲ್ಲಿ ಚಪ್ಪಲಿ ಬಿದ್ದಿದೆ. ಬಾಲಕೃಷ್ಣರಿಗೆ ಮಾತ್ರವಲ್ಲದೆ ಸಚಿವ ಎಚ್.ಎಂ.ರೇವಣ್ಣ ಹಾಗೂ ಸಂಸದ ಡಿ.ಕೆ ಸುರೇಶ್ ವಿರುದ್ಧ ಧಿಕ್ಕಾರ ಕೂಗಿ, ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

    https://www.youtube.com/watch?v=LenMxp3xZrU

  • ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಚಪ್ಪಲಿ ಕದಿಯುತ್ತಿದ್ದ ಖತರ್ನಾಕ್ ಕಳ್ಳನ ಬಂಧನ

    ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಚಪ್ಪಲಿ ಕದಿಯುತ್ತಿದ್ದ ಖತರ್ನಾಕ್ ಕಳ್ಳನ ಬಂಧನ

    ಬೆಂಗಳೂರು: ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಇನ್ಪೆಕ್ಷನ್ ಆಗಬಾರದು ಎನ್ನುವ ನಿಟ್ಟಿನಲ್ಲಿ ಐಸಿಯುಗೆ ಹೋಗುವಾಗ ವೈದ್ಯರಿಂದ ಹಿಡಿದು ರೋಗಿಯ ಎಟೆಂಡರ್ ವರೆಗೂ ಚಪ್ಪಲಿ, ಶೂಗಳನ್ನು ಬಿಟ್ಟು ಹೋಗಬೇಕು.

    ಇದನ್ನೇ ಬಂಡವಾಳ ಮಾಡಿಕೊಂಡ ಖತರ್ನಾಕ್ ಕಳ್ಳನೊಬ್ಬ ಆಸ್ಪತ್ರೆಯಲ್ಲಿ ಚಪ್ಪಲಿ, ಶೂಗಳನ್ನು ಕಳ್ಳತನ ಮಾಡಲು ಶುರುಮಾಡಿಕೊಂಡಿದ್ದನು. ಕದ್ದ ಮಾಲನ್ನು ಆಸ್ಪತ್ರೆಯ ಕೂಗಳತೆಯಲ್ಲಿರೋ ನೈಟ್ ಬಾಟ ಎಂದೇ ಫೇಮಸ್ ಆಗಿರೋ ಸೆಕೆಂಡ್ ಹ್ಯಾಂಡ್ ಚಪ್ಪಲಿ, ಶೂಗಳನ್ನು ಮಾರಾಟ ಮಾಡೋ ಫುಟ್ ಪಾತ್ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದನು.

    ಕಳೆದ ಎರಡು ತಿಂಗಳಿಂದ ಆಸ್ಪತ್ರೆಯ ಸಿಬ್ಬಂದಿಗೆ ಇದು ದೊಡ್ಡ ತಲೆ ನೋವಾಗಿತ್ತು. ವೈದ್ಯರ ಕಾಸ್ಟ್ಲೀ ಶೂಗಳು, ರೋಗಿಯನ್ನು ನೋಡಲು ಬರುವವರ ಚಪ್ಪಲಿ, ಶೂಗಳು ಪ್ರತಿನಿತ್ಯ ಮಾಯವಾಗುತ್ತಿತ್ತು. ಹೇಗಾದರೂ ಮಾಡಿ ಆ ಕಳ್ಳನನ್ನು ಹಿಡಿಯಲೇಬೇಕು ಎಂದು ಆಸ್ಪತ್ರೆಯ ಸೆಕ್ಯುರಿಟಿಗಳು ನಿರ್ಧರಿಸಿದ್ದರು.

    ಆದರೆ ಗುರುವಾರ ಆ ಕಳ್ಳನ ನಸೀಬು ಕೈ ಕೊಟ್ಟಿತ್ತು. ರೋಗಿಯ ಸಂಬಂಧಿಕರ ರೀತಿ ಆಸ್ಪತ್ರೆಗೆ ಬರಿಗಾಲಲ್ಲಿ ಬಂದು ಒಳ್ಳೆಯ ಚಪ್ಪಲಿಯನ್ನು ಹಾಕಿಕೊಂಡು ಎಸ್ಕೇಪ್ ಆಗುತ್ತಿದ್ದ ವೇಳೆ ಆಸ್ಪತ್ರೆಯ ಸಿಬ್ಬಂದಿ ಹಿಡಿದು ಜಾಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಂದಹಾಗೆ ಈ ಚಪ್ಪಲಿ, ಶೂಗಳು ಕಳ್ಳತನ ಆಗುತ್ತಿದ್ದದ್ದು ಬೆಂಗಳೂರಿನ ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ.

    ನೇಪ್ರೊ ನ್ಯೂರಾಲಜಿ ಬ್ಲಾಕ್ ನಲ್ಲಿ ಐಸಿಯುವಿಗೆ ಹೋಗೋ ಡಾಕ್ಟರ್ ಗಳು, ರೋಗಿಯ ಕಡೆಯವರು ಚಪ್ಪಲಿ, ಶೂಗಳನ್ನು ಶೂ ಸ್ಟಾಂಡ್ ನಲ್ಲಿ ಬಿಟ್ಟು ಹೋಗುತ್ತಾರೆ. ಕಳೆದ 2 ತಿಂಗಳಿಂದ ಪ್ರತಿನಿತ್ಯ ಎರಡು ಜೊತೆ ಚಪ್ಪಲಿ ಅಥವಾ ಶೂಗಳ ಕಳ್ಳತನ ಮಾಡುತ್ತಿದ್ದ ಈತ ಇಂದು ಪೊಲೀಸರ ಅಥಿತಿಯಾಗಿದ್ದಾನೆ.

     

  • ಇದು ಜಗತ್ತಿನ ಅತ್ಯಂತ ದುಬಾರಿ ಚಪ್ಪಲಿ- ಇದರ ಬೆಲೆ ಕೇಳಿದ್ರೆ ದಂಗಾಗ್ತೀರ

    ಇದು ಜಗತ್ತಿನ ಅತ್ಯಂತ ದುಬಾರಿ ಚಪ್ಪಲಿ- ಇದರ ಬೆಲೆ ಕೇಳಿದ್ರೆ ದಂಗಾಗ್ತೀರ

    ಲಂಡನ್: ಜಗತ್ತಿನ ಅತ್ಯಂತ ದುಬಾರಿ ಚಪ್ಪಲಿ ಅನಾವರಣಗೊಂಡಿದೆ. ಇಂಗ್ಲೆಂಡಿನ ಡಿಸೈನರ್ ಡೆಬ್ಬಿ ವಿಂಗ್ಹಾಮ್ ಈ ಚಪ್ಪಲಿಯನ್ನ ವಿನ್ಯಾಸಗೊಳಿಸಿದ್ದಾರೆ.

    ವಿಂಗ್ಹಾಮ್ ಈ ಹಿಂದೆ ವಿಶ್ವದ ಅತ್ಯಂತ ದುಬಾರಿ ಡ್ರೆಸ್ ವಿನ್ಯಾಸಗೊಳಿಸಿದ್ದರು. 64 ಮಿಲಿಯನ್ ಡಾಲರ್‍ನ ಕೇಕ್ ಹಾಗೂ 15.45 ಮಿಲಿಯನ್ ಡಾಲರ್‍ನ ಡ್ರೆಸ್ ವಿನ್ಯಾಸಗೊಳಿಸಿದ್ರು. ಸೆಲೆಬ್ರಿಟಿಗಳಿಗಾಗಿ ದುಬಾರಿ ಉತ್ಪನ್ನಗಳನ್ನ ತಯಾರಿಸೋದು ಈಕೆಯ ಹೆಗ್ಗಳಿಕೆ.

    ಇದೀಗ ವಿಂಗ್ಹಾಮ್ ತಯಾರಿಸಿರೋ ಈ ಸಿಕ್ಕಾಪಟ್ಟೆ ಕಾಸ್ಟ್ಲಿ ಚಪ್ಪಲಿಯ ಬೆಲೆ ಬರೋಬ್ಬರಿ 15.1 ಮಿಲಿಯನ್ ಡಾಲರ್. ಅಂದ್ರೆ ಭಾರತೀಯ ಕರೆನ್ಸಿಯಲ್ಲಿ ಅಂದಾಜು 97.8 ಕೋಟಿ ರೂಪಾಯಿ. ಇದನ್ನ ಹುಟ್ಟುಹಬ್ಬದ ಉಡುಗೊರೆಗಾಗಿ ಗ್ರಾಹಕರೊಬ್ಬರು ತಯಾರು ಮಾಡಿಸಿದ್ದಾರೆ.

    ಅಂಥದ್ದೇನಪ್ಪಾ ಈ ಚಪ್ಪಲಿಯ ವಿಶೇಷತೆ ಅಂದ್ರಾ? ಇದು ಸಾಮಾನ್ಯ ಚಪ್ಪಲಿಯಲ್ಲ. ಇದರಲ್ಲಿ ಜಗತ್ತಿನ ಅತ್ಯಂತ ಅಪರೂಪದ ಗುಲಾಬಿ ಬಣ್ಣದ ವಜ್ರ ಹಾಗೂ ನೀಲಿ ವಜ್ರಗಳನ್ನ ಹಾಕಲಾಗಿದೆ. ಪ್ರತ್ಯೇಕವಾಗಿ ಈ ವಜ್ರಗಳ ಬೆಲೆಯೇ ಸುಮಾರು 84 ಕೋಟಿ ರೂ. ಆಗುತ್ತದೆ. ಇದರ ಜೊತೆಗೆ 3 ಕ್ಯಾರೆಟ್‍ನ ಬಿಳಿ ವಜ್ರ ಹಾಕಲಾಗಿದೆ. ಕೇಕ್ ಐಸಿಂಗ್‍ನಂತೆ ಮಾಡಲಾಗಿರುವ ಡಿಸೈನ್‍ನಲ್ಲಿ 1000 ಪಾಂಯ್ಟರ್ ವಜ್ರಗಳಿವೆ.

    ಚಪ್ಪಲಿಯ ಝಿಪ್ ಮತ್ತು ಕೆಳಭಾಗವನ್ನ ಚಿನ್ನದಿಂದ ವಿನ್ಯಾಸ ಮಾಡಲಾಗಿದೆ. ಪ್ರತಿಯೊಂದು ದುಬಾರಿ ವಜ್ರವನ್ನೂ ಪ್ಲಾಟಿನಂನಿಂದ ಕೂರಿಸಲಾಗಿದೆ. ಚಪ್ಪಲಿಯ ಹಿಮ್ಮಡಿಯನ್ನ ಲೆದರ್‍ನಿಂದ ಮಾಡಲಾಗಿದ್ದು, 24 ಕ್ಯಾರೆಟ್ ಚಿನ್ನದ ಪೇಂಟ್‍ನಿಂದ ಪೇಂಟ್ ಮಾಡಲಾಗಿದೆ. ಇದನ್ನ 18 ಕ್ಯಾರೆಟ್‍ನ ಚಿನ್ನದ ನೂಲಿನಲ್ಲಿ ಹೊಲಿಯಲಾಗಿದೆ. ಚಪ್ಪಲಿಯ ಒಳಭಾಗದಲ್ಲೂ ಚಿನ್ನದ ನೂಲಿನಿಂದ ಅಲಂಕಾರ ಮಾಡಲಾಗಿದೆ.

    ತಾನು ತಯಾರಿಸಿದ ಅತ್ಯಂತ ದುಬಾರಿ ವಸ್ತುಗಳಲ್ಲಿ ಈ ಚಪ್ಪಲಿಯೇ ಕೊನೆಯದ್ದಾಗಿರುತ್ತದೆ ಎಂದು ವಿಂಗ್ಹಾಮ್ ಹೇಳಿದ್ದಾರೆ.

  • ಬಾಗಿಲು ತಟ್ಟದೇ ಅಧ್ಯಕ್ಷನ ಮನೆಯೊಳಗೆ ಹೋಗಿದ್ದಕ್ಕೆ ಚಪ್ಪಲಿಯಿಂದ ಹೊಡೆದು, ಎಂಜಲು ನೆಕ್ಕುವಂತೆ ಶಿಕ್ಷೆ

    ಬಾಗಿಲು ತಟ್ಟದೇ ಅಧ್ಯಕ್ಷನ ಮನೆಯೊಳಗೆ ಹೋಗಿದ್ದಕ್ಕೆ ಚಪ್ಪಲಿಯಿಂದ ಹೊಡೆದು, ಎಂಜಲು ನೆಕ್ಕುವಂತೆ ಶಿಕ್ಷೆ

    ಪಾಟ್ನಾ: ಬಾಗಿಲು ತಟ್ಟದೆ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಮನೆಯೊಳಗೆ ಹೋಗಿದ್ದಕ್ಕೆ ವೃದ್ಧ ವ್ಯಕ್ತಿಯೊಬ್ಬರಿಗೆ ನೆಲಕ್ಕೆ ಉಗುಳಿ ತನ್ನ ಎಂಜಲನ್ನು ತಾನೇ ನೆಕ್ಕುವಂತೆ ಅಮಾನವೀಯವಾಗಿ ಶಿಕ್ಷೆ ನೀಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ತವರು ಜಿಲ್ಲೆಯಾದ ನಳಂದದಲ್ಲಿರುವ ಅಜೈಪುರ್ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ವಯಸ್ಸಾದ ವ್ಯಕ್ತಿಯೊಬ್ಬರು ಸರ್ಕಾರದ ಯೋಜನೆಯೊಂದರ ಸೌಲಭ್ಯ ಪಡೆಯಲು ಗ್ರಾಮದ ಅಧ್ಯಕ್ಷರನ್ನು ಭೇಟಿಯಾಗಲು ಹೋಗಿದ್ದರು ಎಂದು ವರದಿಯಾಗಿದೆ.

    ವಯಸ್ಸಾದ ವ್ಯಕಿಯನ್ನು ಇಬ್ಬರು ಮಹಿಳೆಯರು ಚಪ್ಪಲಿಯಿಂದ ಹೊಡೆಯೋದನ್ನ ಕೂಡ ವಿಡಿಯೋದಲ್ಲಿ ಕಾಣಬಹುದು.

    ನಳಂದದಲ್ಲಿ ನಡೆದ ಈ ಘಟನೆಯನ್ನು ಬಿಹಾರ ಸಂಪುಟ ಸಚಿವ ನಂದಕಿಶೋರ್ ಯಾದವ್ ಖಂಡಿಸಿದ್ದು, ಈ ಕೃತ್ಯವೆಸಗಿದವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

    ಈ ಘಟನೆಯನ್ನು ನಾನು ಖಂಡಿಸುತ್ತೇನೆ. ರಾಜ್ಯದಲ್ಲಿ ಇಂತಹ ಅಮಾನವೀಯ ಘಟನೆಗಳನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುಲಾಗುತ್ತದೆ. ರಾಜ್ಯದ ಜನರು ಬಿಜೆಪಿ ಮತ್ತು ಪಕ್ಷದ ಸದಸ್ಯರನ್ನು ನಂಬಬೇಕು. ಈ ರೀತಿಯ ಘಟನೆ ಮತ್ತೆ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

  • 425 ರೂ. ಬೆಲೆಯ ಚಪ್ಪಲಿ ಕಳುವಾಗಿದ್ದಕ್ಕೆ ದೂರು!

    425 ರೂ. ಬೆಲೆಯ ಚಪ್ಪಲಿ ಕಳುವಾಗಿದ್ದಕ್ಕೆ ದೂರು!

    ಪುಣೆ: ವ್ಯಕ್ತಿ ಕಾಣೆಯಾಗಿದ್ದಾರೆ, ಚಿನ್ನಾಭರಣ ದೋಚಿದ್ದಾರೆ, ವಾಹನ ಕಳವಾಗಿದೆ, ಹಣ ಕದ್ದಿದ್ದಾರೆ ಎಂಬಂತಹ ಹಲವಾರು ನಾಪತ್ತೆಯಾಗಿರುವ ದೂರುಗಳನ್ನು ಕೇಳಿದ್ದೇವೆ, ಆದರೆ ಪುಣೆಯಲ್ಲಿ ವ್ಯಕ್ತಿಯೊಬ್ಬರು ಚಪ್ಪಲಿ ನಾಪತ್ತೆಯಾಗಿವೆ ಎಂದು ದೂರನ್ನು ದಾಖಲಿಸಿದ್ದಾರೆ.

    ಖಿಡ್ನಿ ತಕಲ್ಕರವಾಡಿ ರಸ್ತೆಯ ಪಾಲಾಶ್ ರೆಸಿಡೆನ್ಸಿ ಅಪಾರ್ಟ್‍ಮೆಂಟ್‍ನ 3 ನೇ ಮಹಡಿಯಲ್ಲಿ ವಾಸವಾಗಿರುವ ವಿಶಾಲ್ ಕಲೇಕರ್(36) ಎಂಬುವರು ತಮ್ಮ ಚಪ್ಪಲಿಗಳನ್ನು ಯಾರೋ ಕದ್ದಿದ್ದಾರೆಂದು ಪುಣೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

    ನಾನು 425 ರೂಪಾಯಿ ನೀಡಿ ಹೊಸ ಕಪ್ಪು ಬಣ್ಣದ ಸ್ಯಾಂಡಲ್ ಗಳನ್ನು ಖರೀದಿಸಿದ್ದೆ. ಅವುಗಳನ್ನು ಮನೆಯ ಹೊರಗಡೆ ಬಿಟ್ಟಿರುವಾಗ ಯಾರೋ ಅಪರಿಚಿತ ವ್ಯಕ್ತಿಗಳು ಬಂದು ಚಪ್ಪಲಿಯನ್ನು, ಅಕ್ಟೋಬರ್ 3 ರಂದು ಮುಂಜಾನೆ ಸುಮಾರು 3 ರಿಂದ 8 ಗಂಟೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ದೂರಿದ್ದಾರೆ.

    ಕಲೇಕಾರ್ ಅವರು ನೀಡಿದ ದೂರನ್ನು ಪೊಲೀಸರು ಐಪಿಸಿ ಸೆಕ್ಷನ್ 379(ಸಂಪತ್ತು ಕಳವು) ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಕಲೇಕಾರ್ ಗುರುತಿಸಿದ ಅಥವಾ ಅನುಮಾನಿಸಿದ ವ್ಯಕ್ತಿಗಳನ್ನು ವಿಚಾರಿಸಲಾಗಿದ್ದು ಆದರೆ ಯಾರನ್ನು ಬಂಧಿಸಿಲ್ಲ, ಯಾರು ಕದ್ದಿದ್ದಾರೆಂದು ಇದುವರೆಗೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸ್ ಅಧಿಕಾರಿ ನಾಯ್ಕ್ ಎಸ್‍ಎಂ ಧೋಳೆಯವರು ಈ ತನಿಖೆಯನ್ನು ನಡೆಸುತ್ತಿದ್ದಾರೆ.

  • ಹೊಸ ಚಪ್ಪಲಿ ಕೊಡಿಸಲಿಲ್ಲ ಅಂತ ಗೆಳೆಯನನ್ನೇ ಕೊಲೆ ಮಾಡ್ದ!

    ಹೊಸ ಚಪ್ಪಲಿ ಕೊಡಿಸಲಿಲ್ಲ ಅಂತ ಗೆಳೆಯನನ್ನೇ ಕೊಲೆ ಮಾಡ್ದ!

    ನವದೆಹಲಿ: ಕ್ಷುಲ್ಲಕ ಕಾರಣಕ್ಕೆ ಅನೇಕ ಕೊಲೆಗಳು ನಡೆದಿರುವ ಬಗ್ಗೆ ಕೇಳಿದ್ದೀವಿ. ಆದ್ರೆ ಇಲ್ಲೊಬ್ಬ ಹೊಸ ಚಪ್ಪಲಿ ಕೊಡಿಸಲಿಲ್ಲ ಅಂತ ತನ್ನ ಗೆಳೆಯನನ್ನ ಕೊಲೆ ಮಾಡಿದ್ದಾನೆ.

    47 ವರ್ಷದ ರಾಮ್‍ದತ್ ರಜಪುತ್ ಅಲಿಯಾಸ್ ದತ್ತಾ ಮಾಚಿವಾಲೆ ತನ್ನ ಸ್ನೇಹಿತ ರಾಮ್‍ಸ್ನೇಹ ರಾವತ್(32) ರನ್ನು ಕೊಲೆ ಮಾಡಿದ್ದಾನೆ. ರಾವತ್ ಕಳೆದ 2 ತಿಂಗಳಿನಿಂದ ಹೊಸ ಚಪ್ಪಲಿ ತರುವುದಾಗಿ ಹೇಳುತ್ತಿದ್ದರು. ಆದ್ರೆ ತಂದುಕೊಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ.

    ಸೆಪ್ಟೆಂಬರ್ 24ರಂದು ಈ ಘಟನೆ ನಡೆದಿದ್ದು, ಕೃತ್ಯವೆಸಗಿದ ನಂತರ ಪುಣೆಯಿಂದ ರಜಪುತ್ ಪರಾರಿಯಾಗಿದ್ದ. ಭಾನುವಾರದಂದು ಪೊಲೀಸರು ರಜಪುತ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ರಾವತ್ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದರು. ರಜಪುತ್ ಮೀನುಗಾರನಾಗಿದ್ದ. ಇಬ್ಬರೂ ಒಂದೇ ಸಮುದಾಯದವರಾಗಿದ್ದರಿಂದ ಸ್ನೇಹಿತರಾಗಿದ್ದರು. ರಜಪುತ್‍ಗೆ ರಾವತ್ ಒಳ್ಳೆಯ ಮೀನು ತಂದುಕೊಡುತ್ತಿದ್ದ. ಆದ್ರೆ ಅದಕ್ಕೆ ಹಣ ತೆಗೆದುಕೊಳ್ಳುತ್ತಿರಲಿಲ್ಲ ಅಂತ ಚಿಂಚವಾಡ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ವಿಠಲ್ ಹೇಳಿದ್ದಾರೆ.

    ಸೆಪ್ಟೆಂಬರ್ 24ರಂದು ರಜಪುತ್‍ಗೆ ಚಪ್ಪಲಿ ಗಿಫ್ಟ್ ಮಾಡುವುದಾಗಿ ರಾವತ್ ಕಳೆದ 2 ತಿಂಗಳಿನಿಂದ ಹೇಳುತ್ತಾ ಬಂದಿದ್ದರು. ಆದ್ರೆ ತಾನು ಹೇಳಿದಂತೆ ರಾವತ್ ಆ ದಿನ ಚಪ್ಪಲಿ ತಂದಿರಲಿಲ್ಲ. ಇದರಿಂದ ಇಬ್ಬರ ನಡುವೆ ಜಗಳವಾಗಿತ್ತು. ನಂತರ ಅದೇ ರಾತ್ರಿ ರಜಪೂತ್ ರಾವತ್‍ರನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಪುಣೆಯಿಂದ ಪರಾರಿಯಾಗಿದ್ದ ಎಂದು ವಿಠಲ್ ತಿಳಿಸಿದ್ದಾರೆ.

    ರಜಪುತ್ ಎಲ್ಲಿಗೆ ಪರಾರಿಯಾಗಿದ್ದಾನೆ ಎಂಬ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಕೆಲವು ವಿವರಣೆ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ನಮ್ಮ ತಂಡ ಆತನನ್ನು ಹಿಡಿಯಲು ಮುಂಬೈಗೆ ದೌಡಾಯಿಸಿತು. ಆದ್ರೆ ಆತ ಅಲ್ಲಿಂದ ಉತ್ತರಪ್ರದೇಶಕ್ಕೆ ಪರಾರಿಯಾಗಿದ್ದ. ಅಲ್ಲಿ ನಾವು ಆತನನ್ನು ಹಿಡಿದು ಪುಣೆಗೆ ತಂದಿದ್ದೇವೆ. ತಾನು ಮಾತು ಕೊಟ್ಟಂತೆ ರಾವತ್ ಚಪ್ಪಲಿ ತಂದುಕೊಡದ ಕಾರಣ ಕೊಲೆ ಮಾಡಿರುವುದಾಗಿ ರಜಪುತ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಮಾತು ಕೊಟ್ಟಂತೆ ನಡೆದುಕೊಳ್ಳದ್ದಕ್ಕೆ ಪಾಠ ಕಲಿಸಲು ಹೀಗೆ ಮಾಡಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೋಮವಾರದಂದು ರಜಪುತ್‍ನನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಒಂದು ವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

  • ವಿಡಿಯೋ: ಎಲ್ಲರೆದುರೇ ಮಹಿಳೆಯಿಂದ ವಕೀಲನಿಗೆ ಚಪ್ಪಲಿಯಲ್ಲಿ ಹೊಡೆತ

    ವಿಡಿಯೋ: ಎಲ್ಲರೆದುರೇ ಮಹಿಳೆಯಿಂದ ವಕೀಲನಿಗೆ ಚಪ್ಪಲಿಯಲ್ಲಿ ಹೊಡೆತ

    ಬೆಂಗಳೂರು: ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ ವಕೀಲನಿಗೆ ಮಹಿಳೆ ಚಪ್ಪಲಿಯಿಂದ ಹೊಡೆದ ಘಟನೆ ಬೆಂಗಳೂರು ಹೊರವಲಯದ ಹೊಸಕೋಟೆಯಲ್ಲಿ ನಡೆದಿದೆ.

    ಜಯಮಾಲಾ ತನ್ನ ಸಂಬಂಧಿಯೊಬ್ಬರ ಕೇಸನ್ನು ಕೋರ್ಟ್ ನಲ್ಲಿ ವಾದಿಸುವಂತೆ ವಕೀಲ ರಾಮಾಂಜಿನಪ್ಪಗೆ ಹಣ ನೀಡಿದ್ರು. ಆದ್ರೆ ಈ ಕೇಸಿನ ಸಂಬಂಧ ವಿರೋಧಿ ಬಳಿಯೂ ಹಣ ಪಡೆದಿದ್ದ ವಿಚಾರ ತಿಳಿದು ಜಯಮಾಲಾ ಇಂದು ವಕೀಲ ರಾಮಾಂಜಿನಪ್ಪಾ ಮನೆಗೆ ಬಳಿ ತೆರಳಿದ್ರು.

    ಈ ಸಂದರ್ಭದಲ್ಲಿ ರಾಮಾಂಜಿನಪ್ಪ ಜಯಮಾಲಾ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಜಯಮಾಲಾ ಸಾರ್ವಜನಿಕವಾಗಿ ವಕೀಲನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.  ಈ ಘಟನೆಯನ್ನು ಸ್ಥಳದಲ್ಲಿದ್ದವರೊಬ್ಬರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಈ ಘಟನೆ ಸಂಬಂಧ ತಿರುಮಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಾಯಾಳು ಜಯಮಾಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

    https://www.youtube.com/watch?v=4wak_8eztaM&feature=youtu.be