Tag: ಚಂದ್ರಶೇಖರ್ ಬಂಡಿಯಪ್ಪ

  • ಪೃಥ್ವಿ ಅಂಬಾರ್ ಚಿತ್ರಕ್ಕೆ ರಥಾವರ ಚಂದ್ರಶೇಖರ್ ಬಂಡಿಯಪ್ಪ ಡೈರೆಕ್ಟರ್

    ಪೃಥ್ವಿ ಅಂಬಾರ್ ಚಿತ್ರಕ್ಕೆ ರಥಾವರ ಚಂದ್ರಶೇಖರ್ ಬಂಡಿಯಪ್ಪ ಡೈರೆಕ್ಟರ್

    ಥಾವರ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ಸಿನಿಮಾ. 2015ರಲ್ಲಿ ತೆರೆಗೆ ಬಂದಿದ್ದ ಈ ಚಿತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಹೊಸ ಅವತಾರದಲ್ಲಿ ಘರ್ಜಿಸಿದ್ದರು. ಬಾಕ್ಸಾಫೀಸ್ ನಲ್ಲಿಯೂ ಒಳ್ಳೆ ಬೆಳೆ ತೆಗೆದಿದ್ದ ರಥಾವರ ಸಿನಿಮಾ ಮೂಲಕ ವಿಶಿಷ್ಟ ಕಥೆ ಹೇಳಿ ನಿರ್ದೇಶನದಲ್ಲಿಯೂ ಗೆದ್ದವರು ಚಂದ್ರಶೇಖರ್ ಬಂಡಿಯಪ್ಪ. ಆನೆ ಪಟಾಕಿ ಮೂಲಕ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಟ್ಟಿದ್ದ ಅವರು ಆ ಬಳಿಕ ರಥಾವರ, ತಾರಕಾಸುರ ಸಿನಿಮಾ ಮಾಡಿ ಗೆದ್ದರು. ಈ ಚಿತ್ರಗಳ ಸಕ್ಸಸ್ ಬಳಿಕ ಬಾಲಿವುಡ್ ಗೆ ಹಾರಿರುವ ಚಂದ್ರಶೇಖರ್ ಬಂಡಿಯಪ್ಪ ರೆಡ್ ಕಾಲರ್ ಎಂಬ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕೆಲಸ ಮುಗಿಸಿರುವ ಅವರು ಗುರುದತ್ ಗಾಣಿಗ ನಿರ್ದೇಶನದ ಕರಾವಳಿ ಚಿತ್ರಕ್ಕೂ ಕಥೆ ಬರೆದಿದ್ದಾರೆ. ಇದೀಗ ಚಂದ್ರಶೇಖರ್ ಬಂಡಿಯಪ್ಪ ಹೊಸ ಕಥೆ ಹೇಳೋದಿಕ್ಕೆ ನಿಮ್ಮ ಮುಂದೆ ಬರ್ತಿದ್ದಾರೆ.

    ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ (Pruthvi ambaar) ಜೊತೆ ಚಂದ್ರಶೇಖರ್ ಬಂಡಿಯಪ್ಪ (Chandrasekhar Bandiappa)  ಕೈ ಜೋಡಿಸಿದ್ದಾರೆ. ಕಲ್ಟ್ ಕಥೆಗಳನ್ನು ಹೇಳಿ ಸಕ್ಸಸ್ ಕಂಡಿರುವ ಅವರೀಗ ಫ್ಯಾಮಿಲಿ ಕತೆಯತ್ತ ವಾಲಿದ್ದಾರೆ. ಹೌದು ಈ ಬಾರಿ ಚಂದ್ರಶೇಖರ್ ಬಂಡಿಯಪ್ಪ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ ಮಾಡುತ್ತಿದ್ದಾರೆ. ಸಹಜ ನಟನೆಯಿಂದಲೇ ಹೆಸರು ಮಾಡಿದವರು ಪೃಥ್ವಿ..ದಿಯಾ ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ಕರಾವಳಿ ಕುವರ ಪರಭಾಷೆಯಲ್ಲಿಯೂ ಮಿಂಚುತ್ತಿದ್ದು, ಇದೀಗ ರಥಾವರ ಡೈರೆಕ್ಟರ್ ಜೊತೆ ಸಿನಿಮಾ ಮಾಡುತ್ತಿರುವುದು ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.

    ಚಂದ್ರಶೇಖರ್ ಬಂಡಿಯಪ್ಪ ಪ್ರತಿ ಸಿನಿಮಾದಲ್ಲಿಯೂ ಹೊಸ ಕಥೆಯೊಂದಿಗೆ ಬರ್ತಾರೆ. ಆನೆ ಪಟಾಕಿಯಲ್ಲಿ ಕಾಮಿಡಿ, ರಥಾವರದಲ್ಲಿ ಕಲ್ಟ್, ತಾರಕಾಸುರದಲ್ಲೊಂದು ಬಗೆ, ರೆಡ್ ಕಾಲರ್ ನಲ್ಲಿ ಕ್ರೈಮ್ ಥ್ರಿಲ್ಲರ್, ಕರಾವಳಿಯಲ್ಲಿ ಕರಾವಳಿ ಸೊಡಗನ್ನು ಕಟ್ಟಿಕೊಟ್ಟಿರುವ ಅವರು ಹೊಸ ಸಿನಿಮಾದಲ್ಲಿ ಯಾವ ರೀತಿ ಕಥೆಯನ್ನು ಹೇಳಿದ್ದಾರೆ ಎಂಬ ಕುತೂಹಲ ಕೆರಳಿಸಿದೆ.

    ಪೃಥ್ವಿ-ಚಂದ್ರಶೇಖರ್ ಬಂಡಿಯಪ್ಪ ಜೋಡಿಯ ಸಿನಿಮಾವನ್ನು ವಿದ್ಯಾ ಶೇಖರ್ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಉಳಿದ ತಾರಾಬಳಗ ಹಾಗೂ ತಾಂತ್ರಿಕ ಬಳಗವನ್ನು ಚಿತ್ರತಂಡದ ಒಂದೊಂದಾಗಿ ಮಾಹಿತಿ ನೀಡಲಿದೆ.

  • ತಾರಕಾಸುರ: ಮಂಗಳಮುಖಿಯರ ಕಥೆ ಹೇಳಿದ್ದವರ ಕಡೆಯಿಂದ ಬುಡ್ ಬುಡ್ಕೆ ಸದ್ದು!

    ತಾರಕಾಸುರ: ಮಂಗಳಮುಖಿಯರ ಕಥೆ ಹೇಳಿದ್ದವರ ಕಡೆಯಿಂದ ಬುಡ್ ಬುಡ್ಕೆ ಸದ್ದು!

    ಶ್ರೀಮುರುಳಿ ಅಭಿನಯದ ರಥಾವರ ಚಿತ್ರದಲ್ಲಿ ಮಂಗಳಮುಖಿಯರ ನಿಗೂಢ ಜಗತ್ತಿಗೆ ಕಣ್ಣಾಗಿದ್ದವರು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ರಥಾವರ ಚಿತ್ರ ಅಷ್ಟು ದೊಡ್ಡ ಮಟ್ಟದಲ್ಲಿ ಯಶ ಕಂಡಿದ್ದರ ಹಿಂದೆ ಈ ವಿಶೇಷವಾದ ಕಥೆಯ ಪಾತ್ರವೂ ಪ್ರಮುಖವಾದದ್ದು. ಹಾಗಿರೋವಾಗ ಬಂಡಿಯಪ್ಪ ಅವರೇ ನಿರ್ದೇಶನ ಮಾಡಿರುವ ತಾರಕಾಸುರ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಕೊಳ್ಳದಿರಲು ಸಾಧ್ಯವೇ?

    ತಾರಕಾಸುರ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತಲ್ಲಾ? ಅದರ ಮೂಲಕವೇ ಈ ಚಿತ್ರದೆಡೆಗಿನ ಕ್ರೇಜ್ ಮತ್ತಷ್ಟು ಹೆಚ್ಚಿಕೊಂಡಿದೆ. ತುಳಿತಕ್ಕೊಳಗಾಗಿ, ಅವಸಾನದ ಅಂಚಿನಲ್ಲಿರೋ ಬುಡ್ ಬುಡಿಕೆ ಸಮುದಾಯದ ಸೂಕ್ಷ್ಮವಾದ ಕಥಾನಕವನ್ನು ಚಂದ್ರಶೇಖರ್ ಬಂಡಿಯಪ್ಪ ಈ ಚಿತ್ರಕ್ಕಾಗಿ ಆರಿಸಿಕೊಂಡಿರೋ ವಿಚಾರವೂ ಇದೀಗ ಬಯಲಾಗಿದೆ. ನರಸಿಂಹಲು ನಿರ್ಮಾಣ ಮಾಡಿರುವ, ಅವರ ಪುತ್ರ ವೈಭವ್ ನಾಯಕನಾಗಿ ನಟಿಸಿರೋ ಈ ಚಿತ್ರದಲ್ಲಿ ಮಾನ್ವಿತಾ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಚಿತ್ರದಲ್ಲಿಯೇ ಮೂರು ಶೇಡುಗಳಲ್ಲಿ ನಟಿಸಿರೋ ವೈಭವ್ ಕೂಡಾ ಎಲ್ಲರ ಗಮನ ಸೆಳೆದಿದ್ದಾರೆ.

    ಈ ಹಿಂದೆ ರಥಾವರ ಚಿತ್ರ ನಿರ್ದೇಶನ ಮಾಡಿದ್ದಾಗ, ಈಗ ತಾರಕಾಸುರ ಚಿತ್ರದ ಮೂಲಕ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿಜಕ್ಕೂ ಬೆರಗು ಮೂಡಿಸಿದ್ದಾರೆ. ನಮ್ಮ ನಡುವಿದ್ದೂ ಗಮನಕ್ಕೆ ಬಾರದ ಇಂಥಾ ಸೂಕ್ಷ್ಮವಾದ ಕಥಾ ಹಂದರವನ್ನು ಅವರು ಹೇಗೆ ಗ್ರಹಿಸುತ್ತಾರೆಂಬ ಅಚ್ಚರಿ ಎಲ್ಲರಲ್ಲಿಯೂ ಇದ್ದೇ ಇದೆ. ಇದೇ ಪ್ರಶ್ನೆಯೊಂದಿಗೆ ಪಬ್ಲಿಕ್ ಟಿವಿ ಅವರನ್ನು ಮುಖಾಮುಖಿಯಾದಾಗ ನಿಜಕ್ಕೂ ರೋಚಕವೆನ್ನಿಸೋ ಹಲವಾರು ವಿಚಾರಗಳನ್ನವರು ಹಂಚಿಕೊಂಡಿದ್ದಾರೆ.

    ಇಂಥಾ ವಿರಳ ಕಥಾನಕಗಳಿಗೆ ಕಣ್ಣಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಚಂದ್ರಶೇಖರ್ ಬಂಡಿಯಪ್ಪ ಬಳಿಯಿರುವ ಉತ್ತರ `ಕುತೂಹಲ’. ರಥಾವರ ಚಿತ್ರದಲ್ಲಿ ಮಂಗಳಮುಖಿಯರ ಜಗತ್ತಿಗೆ ಹಣಕಿ ಹಾಕೋ ಪ್ರಯತ್ನ ಮಾಡುವಂತೆ ಪ್ರೇರೇಪಿಸಿದ್ದೂ ಕೂಡಾ ಆ ಕುತೂಹಲವೇ ಎಂಬುದು ವಿಶೇಷ. ಮಂಡ್ಯ ಸೀಮೆಯ ರೈತಾಪಿ ಬದುಕಿನ ಘಮಲನ್ನೇ ಹೊದ್ದುಕೊಂಡು ಸಿನಿಮಾ ಕನಸನ್ನು ಎದೆಯೊಳಗಿಟ್ಟುಕೊಂಡು ಬೆಂಗಳೂರಿಗೆ ಬಂದಿಳಿದ ಅವರ ಪಾಲಿಗೆ ಈ ನಗರಿಯೇ ಒಂದು ಕೌತುಕ. ನಂತರ ಹೇಗೋ ಮಾಡಿ ನಿರ್ದೇಶಕ ಎಸ್ ನಾರಾಯಣ್ ಅವರ ಬಳಿ ಸೇರಿಕೊಂಡ ನಂತರ ಅವರ ಪಾಲಿಗೆ ಸಿನಿಮಾ ಪಾಠಗಳು ತೆರೆದುಕೊಳ್ಳಲಾರಂಭಿಸಿದ್ದವು. ಆ ಕಾಲಕ್ಕೆ ಬಸವೇಶ್ವರ ನಗರದಲ್ಲಿದ್ದ ಎಸ್ ನಾರಾಯಣ್ ಮನೆಯಲ್ಲಿ ಸಿನಿಮಾ ಕೆಲಸ ಮಾಡುತ್ತಿದ್ದ ಬಂಡಿಯಪ್ಪ ಬಿಡುವಿನ ವೇಳೆಯಲ್ಲಿ ಕಾಲ ಕಳೆಯುತ್ತಿದ್ದದ್ದು ಕುರುಬರಳ್ಳಿಯ ಅಡ್ಡೆಯೊಂದರಲ್ಲಿ.

    ಹಾಗೇ ಒಂದು ದಿನ ಗೆಳೆಯರ ಜೊತೆ ಬೇಕರಿಯೊಂದರ ಮುಂದೆ ಮಾತಾಡುತ್ತಿರುವಾಗ ಹೆಣವೊಂದರ ಅಂತಿಮ ಯಾತ್ರೆ ಹಾದು ಹೋಗಿತ್ತು. ಅದರ ಹಿಂದೆ ಮಂಗಳಮುಖಿಯರ ದಂಡೂ ಹೊರಟಿತ್ತು. ಅದು ವಿರಳ ಸನ್ನಿವೇಶ. ಹಾಗೆ ತೆಗೆದುಕೊಂಡು ಹೋಗುತ್ತಿದ್ದ ಹೆಣದ ಮುಖ ಮುಚ್ಚಲಾಗಿತ್ತು. ಅದ್ಯಾಕೆ ಎಂಬ ಕುತೂಹಲದಿಂದ ಚಂದ್ರಶೇಖರ್ ಮಾತಾಡಿದಾಗ ಗೆಳೆಯರೊಬ್ಬರು `ಮಂಗಳಮುಖಿಯರು ಸತ್ತಾಗ ಹೆಣದ ಮುಖ ಯಾರಿಗೂ ತೋರಿಸಲ್ಲ’ ಅಂತ ಉತ್ತರ ಬಂದಿತ್ತು. ಯಾಕ ತೋರಿಸೋದಿಲ್ಲ ಎಂಬ ಕುತೂಹಲ ಹುಟ್ಟಿಕೊಂಡಿದ್ದೇ ಅವರನ್ನು ಮಂಗಳಮುಖಿಯರ ಜಗತ್ತಿನ ಬೆಂಬೀಳುವಂತೆ ಮಾಡಿತ್ತು.

    ಆ ಬಳಿಕ ಆ ಏರಿಯಾದಲ್ಲಿದ್ದ ಕೆಲ ಮಂಗಳಮುಖಿಯರ ಪರಿಚಯ ಮಾಡಿಕೊಂಡಿದ್ದ ಚಂದ್ರಶೇಖರ್, ಅವರ ಸ್ನೇಹ ಸಂಪಾದಿಸಿ ಒಂದಷ್ಟು ವಿವರ ಕಲೆ ಹಾಕಿದ್ದರು. ಇದಕ್ಕಾಗಿ ಹಿಡಿದದ್ದು ಭರ್ತಿ ಒಂದು ವರ್ಷ. ಹಾಗೆ ಕೆಲ ವಿವರ ಕಲೆ ಹಾಕಿದ ಬಂಡಿಯಪ್ಪ ಆ ಕ್ಷಣವೇ ಕಥೆಯೊಂದನ್ನು ಹೆಣೆದಿದ್ದರು. ಹಾಗೆ ಹುಟ್ಟು ಪಡೆದದ್ದು ರಥಾವರ ಚಿತ್ರ!

    ಚಂದ್ರಶೇಖರ ಬಂಡಿಯಪ್ಪನವರಿಗೆ ಓದೆಂದರೆ ಬದುಕಿನ ಭಾಗ. ಪೂರ್ಣಚಂದ್ರ ತೇಜಸ್ವಿ ಮತ್ತು ಎಸ್ ಎಲ್ ಬೈರಪ್ಪ ಅವರ ಇಷ್ಟದ ಬರಹಗಾರರು. ಏನು ಸಿಕ್ಕರೂ ಓದೋ ಗೀಳು ಹೊಂದಿರೋ ಅವರಿಗೆ ಅದುವೇ ಶಕ್ತಿ. ಹೀಗೆ ಓದಿನ ಗೀಳಿನಿಂದಲೇ ತಾರಕಾಸುರನ ಕಥೆ ಹುಟ್ಟಿಕೊಂಡಿದ್ದೂ ವಿಶೇಷವೇ. ಯಾವುದೋ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನದ ತುಣುಕೊಂದು ಅವರನ್ನು ಬುಡ್ ಬುಡ್ಕೆ ಸಮುದಾಯದ ಬಗ್ಗೆ ಅಧ್ಯಯನ ನಡೆಸಲು ಪ್ರೇರೇಪಿಸಿತ್ತಂತೆ. ಅದರ ಫಲವಾಗಿಯೇ ತಾರಕಾಸುರ ಚಿತ್ರ ಹುಟ್ಟಿಕೊಂಡಿದೆ.

    ಒಂದು ಕಲಾತ್ಮಕ ಚಿತ್ರವಾಗಬಲ್ಲ ಕಥೆಗೆ ಪಕ್ಕಾ ಕಮರ್ಷಿಯಲ್ ಫ್ರೇಮು ಹಾಕೋದರಲ್ಲಿ ಬಂಡಿಯಪ್ಪ ನಿಸ್ಸೀಮರು. ಅದು ರಥಾವರ ಚಿತ್ರದಲ್ಲಿಯೇ ಸಾಬೀತಾಗಿತ್ತು. ತಾರಕಾಸುರ ಚಿತ್ರವನ್ನೂ ಕೂಡಾ ಅವರು ಅಂಥಾದ್ದೇ ಆವೇಗದೊಂದಿಗೆ ರೂಪಿಸಿದ್ದಾರೆ. ಅದು ಟ್ರೈಲರ್ ಮೂಲಕವೇ ಪ್ರೇಕ್ಷಕರಿಗೂ ಅರ್ಥವಾಗಿದೆ. ಈ ಮೂಲಕವೇ ಎಲ್ಲೆಡೆ ತಾರಕಾಸುರನ ಅಬ್ಬರವೂ ಶುರುವಾಗಿದೆ. ರಥಾವರದ ನಂತರ ಈ ಮೂಲಕ ಮತ್ತೊಂದು ಮಹಾ ಗೆಲುವಿನ ನಿರೀಕ್ಷೆ ಚಂದ್ರಶೇಖರ್ ಬಂಡಿಯಪ್ಪನವರಿಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ತಾರಕಾಸುರ ಟ್ರೈಲರ್ ಬಿಡುಗಡೆ

    ತಾರಕಾಸುರ ಟ್ರೈಲರ್ ಬಿಡುಗಡೆ

    ಬೆಂಗಳೂರು: ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ತಾರಕಾಸುರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಹಿಂದೆ ರಥಾವರ ಚಿತ್ರದಲ್ಲಿ ಮಂಗಳಮುಖಿಯರ ನಿಗೂಢ ಜಗತ್ತನ್ನು ಬೆರಗಾಗುವಂತೆ ತೆರೆದಿಟ್ಟಿದ್ದವರು ಬಂಡಿಯಪ್ಪ. ತಾರಕಾಸುರ ಚಿತ್ರ ಎಂಥಾ ಕಥೆ ಹೊಂದಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇತ್ತು. ಇದೀಗ ಬಿಡುಗಡೆಯಾಗಿರೋ ಟ್ರೈಲರ್ ಅದನ್ನು ಸಣ್ಣದಾಗಿ ತಣಿಸುತ್ತಲೇ ದೊಡ್ಡ ಮಟ್ಟದಲ್ಲಿಯೇ ಕ್ರೇಜ್ ಹುಟ್ಟುಹಾಕುವಂತಿದೆ!

    ಇದು ಪಕ್ಕಾ ಫೋರ್ಸ್ ಹೊಂದಿರೋ ಮಾಸ್ ಟ್ರೈಲರ್. ಚಂದ್ರಶೇಖರ್ ಈ ಹಿಂದೆ ತಾರಕಾಸುರ ಎಂಬುದು ತುಳಿತಕ್ಕೊಳಗಾಗಿ, ಅವಸಾನದಂಚಿನಲ್ಲಿರೋ ಜಾನಪದ ಸಂಸ್ಕøತಿ ಹಾಗೂ ಸಮುದಾಯದ ಕಥೆ ಹೊಂದಿದೆ ಎಂಬ ಸುಳಿವು ನೀಡಿದ್ದರು. ಅದು ಯಾವ ಸಮುದಾಯ ಎಂಬ ಸಣ್ಣ ಹಿಂಟ್ ಕೂಡಾ ಈ ಟ್ರೈಲರಿನಲ್ಲಿ ಕಾಣ ಸಿಗುತ್ತದೆ. ಹಾಲಿವುಡ್‍ನ ಖ್ಯಾತ ನಟ ಡ್ಯಾನಿ ಸಫಾನಿ ಭಯಾನಕ ಶೇಡ್ ಹೊಂದಿರೋ ಪಾತ್ರದಲ್ಲಿ ನಟಿಸಿರೋದೂ ಕೂಡಾ ಪಕ್ಕಾ ಆಗಿದೆ.

    ಬಿಡುಗಡೆಯಾಗಿ ಗಂಟೆ ಕಳೆಯೋದರೊಳಗೇ ಈ ಟ್ರೈಲರ್ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ. ಕಲಾತ್ಮಕ ಚಿತ್ರವಾಗಿ ಕಳೆದು ಹೋಗಬಹುದಾದ ಕಥಾ ಎಳೆಯನ್ನೂ ಕೂಡಾ ಕಮರ್ಷಿಯಲ್ಲಾಗಿ ಹೇಳ ಬಲ್ಲ ಛಾತಿ ಹೊಂದಿರುವವರು ಚಂದ್ರಶೇಖರ್ ಬಂಡಿಯಪ್ಪ. ಅವರೊಳಗಿನ ಕುತೂಹಲದ ಕಣ್ಣು ಈ ಟ್ರೈಲರ್ ಮೂಲಕ ಎಲ್ಲರೆದೆಗೂ ಅಚ್ಚರಿಯೊಂದನ್ನು ರವಾನಿಸಿದೆ. ನಿರ್ಮಾಪಕ ಎಂ.ನರಸಿಂಹಲು ಈ ಚಿತ್ರವನ್ನು ರಿಚ್ ಆಗಿಯೇ ನಿರ್ಮಾಣ ಮಾಡಿರೋ ಸ್ಪಷ್ಟ ಸುಳಿವೂ ಸಿಕ್ಕಿದೆ. ಅವರ ಪುತ್ರ ವೈಭವ್ ನಟನೆಯೂ ಗಮನ ಸೆಳೆಯುತ್ತದೆ.

    ಒಟ್ಟಾರೆಯಾಗಿ ಈ ಚಿತ್ರ ಭಿನ್ನ ಕಥಾ ಹಂದರದ ಸುಳಿವು ನೀಡುತ್ತಲೇ ತನ್ನ ಮಾಸ್ ಲುಕ್ಕಿನ ಖದರ್ ಎಂಥಾದ್ದೆಂಬುದನ್ನು ಈ ಟ್ರೈಲರ್ ಮೂಲಕ ಅನಾವರಣಗೊಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಳೆ ಆರ್ಭಟಿಸಲಿದೆ ತಾರಕಾಸುರ ಟ್ರೈಲರ್

    ನಾಳೆ ಆರ್ಭಟಿಸಲಿದೆ ತಾರಕಾಸುರ ಟ್ರೈಲರ್

    ಬೆಂಗಳೂರು: ಶ್ರೀಮುರಳಿಯವರ ಯಶಸ್ಸಿನ ಓಟ ನಾಗಾಲೋಟ ಪಡೆಯಲು ಕಾರಣವಾಗಿದ್ದ ಚಿತ್ರ ರಥಾವರ. ಈ ಚಿತ್ರದ ಮೂಲಕ ಭಿನ್ನವಾದ ಕಥೆಯೊಂದನ್ನು ಆರಿಸಿಕೊಂಡಿದ್ದವರು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ಪ್ರೇಕ್ಷಕರನ್ನು ಅಚ್ಚರಿಗೀಡುಮಾಡಿದ್ದ ಕಂಟೆಂಟಿನಿಂದಲೇ ಗಮನ ಸೆಳೆದಿದ್ದ ಬಂಡಿಯಪ್ಪ ನಿರ್ದೇಶನ ಮಾಡಿರೋ ತಾರಕಾಸುರ ಚಿತ್ರದ ಬಗ್ಗೆ ಕುತೂಹಲದ ಕಣ್ಣು ನೆಡದಿರುತ್ತಾ?

    ತನ್ನ ರಗಡ್ ಪೋಸ್ಟರ್, ಹಾಲಿವುಡ್‍ನ ದೈತ್ಯ ನಟ ಡ್ಯಾನಿ ಸಫಾನಿಯ ಖಳನ ಪಾತ್ರ ಮತ್ತು ಹಾಡುಗಳ ಮೂಲಕ ಅಲೆಯೆಬ್ಬಿಸಿರೋ ಚಿತ್ರ ತಾರಕಾಸುರ. ಇದೀಗ ಆ ಕುತೂಹಲವನ್ನು ಇಮ್ಮಡಿಗೊಳಿಸಲೆಂದೇ ಟ್ರೈಲರ್ ಒಂದನ್ನು ರಿಲೀಸ್ ಮಾಡಲು ಚಿತ್ರ ತಂಡ ತೀರ್ಮಾನಿಸಿದೆ. ನಾಳೆ ಮಧ್ಯಾಹ್ನ 3.45ಕ್ಕೆ ಒರಾಯನ್ ಮಾಲ್‍ನಲ್ಲಿ ಈ ಟ್ರೈಲರ್ ಬಿಡುಗಡೆಯಾಗಲಿದೆ.

    ಈ ಟ್ರೈಲರ್ ಅನ್ನು ಈಗಾಗಲೇ ನಿರ್ದೇಶಕ ದುನಿಯಾ ಸೂರಿ ನೋಡಿದ್ದಾರೆ. ನಿರ್ದೇಶಕ ಚಂದರ್ರಶೇಖರ್ ಬಂಡಿಯಪ್ಪ ಅವರ ವಿಭಿನ್ನ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿಯೇ ಮೂರು ಶೇಡುಗಳಲ್ಲಿ, ಸವಾಲಿನ ಪಾತ್ರದಲ್ಲಿ ನಟಿಸಿರೋ ವೈಭವ್ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಎಂ ನರಸಿಂಹಲು ನಿರ್ಮಾಣದ ಈ ಚಿತ್ರದಲ್ಲಿ ಅವರ ಪುತ್ರ ವೈಭವ್ ನಾಯಕನಾಗಿ ನಟಿಸಿದ್ದಾರೆ. ರಥಾವರ ಚಿತ್ರದಲ್ಲಿ ಚಂದ್ರಶೇಖರ್ ಬಂಡಿಯಪ್ಪ ಮಂಗಳಮುಖಿಯರ ನಿಗೂಢ ಲೋಕವೊಂದನ್ನು ಅನಾವರಣಗೊಳಿಸಿದ್ದರು. ಆ ಮೂಲಕ ಪ್ರೇಕ್ಷಕರು ಬೆರಗಾಗುವಂತೆಯೂ ಮಾಡಿದ್ದರು. ಇದೀಗ ಅಂಥಾದ್ದೇ ಮತ್ತೊಂದು ಬೆರಗಾಗಿಸೋ ಕಥೆಯೊಂದಿಗೇ ಅವರು ತಾರಕಾಸುರನನ್ನು ಅಣಿಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv