ನವದೆಹಲಿ: ಇಸ್ರೋ ವಿಜ್ಞಾನಿಗಳು ಮತ್ತೆ ವಿಕ್ರಂ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸುತ್ತಾರೆ ಎಂದು ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ಈ ಹಿಂದೆ ಹಲವು ವಿಚಾರಗಳನ್ನು ಮೊದಲೇ ಊಹಿಸಿ ಪ್ರಸಿದ್ಧಿ ಪಡೆದಿರುವ ಅನಿರುದ್ಧ ಕುಮಾರ್ ಮಿಶ್ರಾ ಅವರು ಈ ಭವಿಷ್ಯವನ್ನು ನುಡಿದಿದ್ದಾರೆ. ನನ್ನ ಲೆಕ್ಕಾಚಾರದ ಪ್ರಕಾರ ಸೆ.20ರ ವರೆಗೆ ವಿಕ್ರಂ ಲ್ಯಾಂಡರ್ ಜೊತೆ ಮತ್ತೆ ಸಂವಹನ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಇಸ್ರೋ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯನಿರತರಾಗಿದ್ದಾರೆ. ಇವರಿಗೆ ನನ್ನ ಶುಭ ಹಾರೈಕೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಇವರ ಟ್ವೀಟ್ ಅನ್ನು 1 ಸಾವಿರಕ್ಕೂ ಹೆಚ್ಚು ಜನ ರೀ ಟ್ವೀಟ್ ಮಾಡಿದ್ದರೆ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.
https://twitter.com/Anirudh_Astro/status/1170217193809817601
ನಿಜವಾದ ಭವಿಷ್ಯಗಳು:
ಅಮೆರಿಕದ ದೊಡ್ಡ ಮಟ್ಟದಲ್ಲಿ ಚಂಡಮಾರುತ ಆಗಸ್ಟ್ ಕೊನೆಯಲ್ಲಿ ಬೀಸಲಿದೆ ಎಂದು ಜೂನ್ 28 ರಂದು ಭವಿಷ್ಯ ನುಡಿದಿದ್ದರು. ಈ ಭವಿಷ್ಯ ನಿಜವಾಗಿದೆ ಎಂದು ತೋರಿಸಲು ಬಹಾಮ ದ್ವೀಪದ 50 ಸಾವಿರ ಮನೆಗಳ ಪೈಕಿ ಶೇ.70 ರಷ್ಟು ಮನೆಗಳು ಜಲಾವೃತಗೊಂಡಿದೆ ಎಂಬುದನ್ನು ಬ್ಲೂಮ್ ಬರ್ಗ್ ವರದಿ ಮಾಡಿದೆ ಎಂದು ಸೆ.5 ರಂದು ಟ್ವೀಟ್ ಮಾಡಿದ್ದರು.
ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದು ಸೋನಿಯಾ ಗಾಂಧಿ ಅವರನ್ನು ಹಂಗಾಮಿಯಾಗಿ ಮತ್ತೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಅನಿರುದ್ಧ ಕುಮಾರ್ ಅವರು 2017ರ ಅಕ್ಟೋಬರ್ ನಲ್ಲಿ, ಕಾಂಗ್ರೆಸ್ ಸದ್ಯದ ಸ್ಥಿತಿ ನೋಡಿದರೆ ಮಹಿಳೆಯರು ಅಧ್ಯಕ್ಷರಾಗುವ ಸಾಧ್ಯತೆಯಿದೆ. ನನ್ನ ಪ್ರಕಾರ ಸೋನಿಯಾ ಗಾಂಧಿಯವರೇ ಮೂರು ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು 2017ರ ಅಕ್ಟೋಬರ್ ನಲ್ಲೇ ತಿಳಿಸಿದ್ದರು.
https://twitter.com/Anirudh_Astro/status/1160491776945221632
ಈ ವರ್ಷದ ಜೂನ್ ತಿಂಗಳಿನಲ್ಲಿ ಅಮಿತ್ ಶಾ ಅವರ ಬಗ್ಗೆ ಭವಿಷ್ಯ ನುಡಿದಿದ್ದ ಅವರು, ಜೂನ್ 2019 ರಿಂದ ಮಾರ್ಚ್ 2020ರ ಅವಧಿ ಒಳಗಡೆ ಅಮಿತ್ ಶಾ ಪಶ್ಚಿಮ ಬಂಗಾಳ, ಕಾಶ್ಮೀರ, ನಕ್ಸಲ್ ಸಮಸ್ಯೆ ಬಗ್ಗೆ ಬಹಳ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದರು.
https://twitter.com/Anirudh_Astro/status/1158418640523448320
ಸದ್ಯ ಈಗ ಭಾರತದ ಆರ್ಥಿಕತೆ ಕುಸಿಯುತ್ತಿದ್ದರೂ ನವೆಂಬರ್ ಬಳಿಕ ಚೇತರಿಕೆ ಕಾಣಲಿದೆ. 2025ರ ವರೆಗೆ ಭಾರತ ಉತ್ತಮ ಪ್ರಗತಿಯನ್ನು ಕಾಣಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ. ಬಿಜೆಪಿ ಏಕಾಂಗಿಯಾಗಿ 300ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಅನಿರುದ್ಧ ಕುಮಾರ್ ಮಿಶ್ರಾ ಭವಿಷ್ಯ ನುಡಿದಿದ್ದರು. ಆದರೆ ಈ ಬಾರಿಯ ಐಪಿಎಲ್ ಬಗ್ಗೆ ಹೇಳಿದ್ದ ಭವಿಷ್ಯ ಸುಳ್ಳಾಗಿತ್ತು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದರು.
https://twitter.com/Anirudh_Astro/status/1131881712055726080
ರಾತ್ರಿ ಏನಾಯ್ತು?
1.39ಕ್ಕೆ ಲ್ಯಾಂಡರ್ ಚಂದ್ರನತ್ತ ಇಳಿಯುವ ಕೊನೆಯ ಸಿದ್ಧತೆ ಆರಂಭಗೊಂಡಿತ್ತು. ಇಸ್ರೋ ನಿಗದಿ ಪಡಿಸಿದ ಪಥದಲ್ಲೇ ಲ್ಯಾಂಡರ್ ಚಲಿಸುತಿತ್ತು. 1.48 ಕೇವಲ 6.ಕಿ.ಮೀ ದೂರದಲ್ಲಿತ್ತು. ಕೊನೆಯ ಹಂತದಲ್ಲಿ ಲ್ಯಾಂಡರ್ ವೇಗೋತ್ಕರ್ಷವನ್ನು ಕಳೆದುಕೊಂಡಿತು. ದೊಡ್ಡ ಪರದೆಯಲ್ಲಿ ಕೆಂಪು ಬಣ್ಣದ ರೇಖೆ ಸಾಗಬೇಕಾದ ದಾರಿ ತೋರಿಸುತ್ತಿದ್ದರೆ ಹಸಿರು ಬಣ್ಣ ಟ್ರಾಜೆಕ್ಟರಿ ರೇಖೆ ಕೆಂಪು ಬಣ್ಣದ ಮೇಲೆಯೇ ಹೋಗುತಿತ್ತು. 1.55ಕ್ಕೆ ಹಸಿರು ಬಣ್ಣದ ಟ್ರಾಜೆಕ್ಟರಿ ರೇಖೆ ಕೆಂಪು ಬಣ್ಣವನ್ನು ಬಿಟ್ಟು ಬೇರೆ ಕಡೆ ಹೋಗುವುದನ್ನು ನೋಡುತ್ತಿದ್ದ ವಿಜ್ಞಾನಿಗಳು ಆಂತಕಕ್ಕೆ ಒಳಗಾದರು. ಅಲ್ಲಿಯವರೆಗೆ ಸಂಭ್ರಮದಲ್ಲೇ ಇದ್ದ ವಿಜ್ಞಾನಿಗಳು ಲ್ಯಾಂಡರಿನಿಂದ ಬರುತ್ತಿರುವ ಸಿಗ್ನಲ್ ನೋಡಿ ಮುಖದಲ್ಲಿದ್ದ ಸಂಭ್ರಮ ಮರೆಯಾಗಿ ಆತಂಕ ಹೆಚ್ಚಾಯಿತು. ಏನು ನಡೆಯುತ್ತಿದೆ ಎನ್ನುವುದು ಯಾರಿಗೂ ತಿಳಿಯಲಿಲ್ಲ. ಕೊನೆಗೆ 2.17 ಕ್ಕೆ ಇಸ್ರೋ ಅಧ್ಯಕ್ಷ ಶಿವನ್ 2.1 ಕಿ.ಮೀ ದೂರದಲ್ಲಿದ್ದಾಗ ವಿಕ್ರಮ್ ಸಂಪರ್ಕ ಕಡಿತಗೊಂಡಿದೆ ಎಂದು ಬಹಳ ಗದ್ಗದಿತವಾಗಿ ಪ್ರಕಟಿಸಿ, ಸಂಪರ್ಕ ಸಾಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.