Tag: ಚಂದ್ರಯಾನ-2. ಶ್ರೀಹರಿಕೋಟಾ

  • ಚಂದ್ರಯಾನ-2 ಉಡಾವಣೆಗೆ ಸಾಕ್ಷಿಯಾಗಬೇಕೆ? ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳಿ

    ಚಂದ್ರಯಾನ-2 ಉಡಾವಣೆಗೆ ಸಾಕ್ಷಿಯಾಗಬೇಕೆ? ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳಿ

    ಶ್ರೀಹರಿಕೋಟಾ: ತಾಂತ್ರಿಕ ಕಾರಣದಿಂದ ಜು.15ರಂದು ರದ್ದಾಗಿದ್ದ ಭಾರತ ಮಹತ್ವಾಕಾಂಕ್ಷಿಯ ಬಾಹ್ಯಾಕಾಶ ಯೋಜನೆ ಚಂದ್ರಯಾನ-2 ಉಡಾವಣೆಯ ದಿನಾಂಕವನ್ನು ಜು.22(ಸೋಮವಾರ)ಕ್ಕೆ ನಿಗದಿಪಡಿಸಲಾಗಿದ್ದು, ಉಡಾವಣೆಯ ವೀಕ್ಷಣೆಗಾಗಿ ಆನ್‍ಲೈನ್ ಟಿಕೆಟ್ ಬುಕಿಂಗ್‍ನ್ನು ಇಸ್ರೋ ಪ್ರಾರಂಭಿಸಿದೆ.

    ಈ ತಿಂಗಳ ಕೊನೆಯಲ್ಲಿ ಉಡಾವಣೆಗೆ ಚಂದ್ರಯಾನ-2ನ್ನು ನಿಗದಿ ಪಡಿಸಿದ್ದು, ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಚಂದ್ರಯಾನ-2 ಉಡಾವಣೆಯನ್ನು ನೋಡಲು ಬರುವವರಿಗೆ ಜು.19ರಿಂದ ಆನ್‍ಲೈನ್‍ನಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.

    ಟ್ವಿಟ್ಟರ್ ಮೂಲಕ ಈ ಮಾಹಿತಿ ಖಚಿತಪಡಿಸಿರುವ ಇಸ್ರೋ, ಸತೀಶ್ ಧವನ್ ಸ್ಪೇಸ್ ಸೆಂಟರ್‍ನಿಂದ ಉಡಾವಣೆಗೊಳ್ಳುತ್ತಿರುವ #GSLVMkIII-M1/#Chandrayaan2 ಉಡಾವಣೆಗೆ ನೀವು ಸಾಕ್ಷಿಯಾಗಬೇಕಾದಲ್ಲಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಜು.19 ರಂದು ಸಂಜೆ 6ಕ್ಕೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿದೆ. ಈ ಹಿಂದೆ ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಜುಲೈ 15ರಂದು ನಸುಕಿನ ಜಾವ 2.51 ಗಂಟೆಗೆ ಚಂದ್ರಯಾನ-2 ಉಡಾವಣೆಯಾಗಬೇಕಿತ್ತು. ಆದರೆ ರಾಕೆಟ್‍ನಲ್ಲಿ ಉಡಾವಣೆಗೆ ನಿಗದಿಪಡಿಸಿದ ಕಾಲಮಾನಕ್ಕಿಂತ 1 ಗಂಟೆ ಮುನ್ನ ತಾಂತ್ರಿಕ ದೋಷ ಕಂಡು ಬಂದು ಉಡಾವಣೆ ರದ್ದುಪಡಿಸಲಾಗಿತ್ತು.

  • ಇದೇ ತಿಂಗಳಲ್ಲೇ ಉಡಾವಣೆಯಾಗಲಿದೆ ಚಂದ್ರಯಾನ-2

    ಇದೇ ತಿಂಗಳಲ್ಲೇ ಉಡಾವಣೆಯಾಗಲಿದೆ ಚಂದ್ರಯಾನ-2

    ಶ್ರೀಹರಿಕೋಟಾ: ಇದೇ ತಿಂಗಳಲ್ಲಿ ಚಂದ್ರಯಾನ-2 ಉಪಗ್ರಹ ಉಡಾವಣೆಯಾಗುವ ಸಾಧ್ಯತೆಯಿದೆ ಎಂದು ಇಸ್ರೋ ಮೂಲವನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಬಹುನಿರೀಕ್ಷಿತ ಚಂದ್ರಯಾನ-2ನ ಉಪಗ್ರಹವನ್ನು ಸೋಮವಾರ ಬೆಳಗಿನ ಜಾವ 2.51ಕ್ಕೆ ಉಡಾವಣೆ ಮಾಡಬೇಕಿತ್ತು. ಆದರೆ, ಉಡಾವಣೆಗೆ ಕೇವಲ ಒಂದು ಗಂಟೆ ಬಾಕಿ ಇರುವಾಗಲೇ ರಾಕೆಟ್‍ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಪರಿಣಾಮ ಉಡಾವಣೆಯನ್ನು ರದ್ದುಪಡಿಸಲಾಯಿತು ಎಂದು ಇಸ್ರೋ ತಿಳಿಸಿದೆ.

    ರಾಕೆಟ್ ಹಾಗೂ ಉಪಗ್ರಹ ಸುರಕ್ಷಿತವಾಗಿವೆ. ತುಂಬಾ ಅಪಾಯಕಾರಿ ಇಂಧನ ಲಿಕ್ವಿಡ್ ಹೈಡ್ರೋಜನ್, ಲಿಕ್ವಿಡ್ ಆಕ್ಸಿಜನ್‍ಗಳನ್ನು ರಾಕೆಟ್‍ನಿಂದ ಹೊರ ತೆಗೆಯಲಾಗಿದೆ. ಉಡಾವಣೆಯ ಸಂದರ್ಭದಲ್ಲಾದ ತೊಂದರೆಯನ್ನು ವಿಜ್ಞಾನಿಗಳು ರಾಕೆಟ್ ಪರಿಶೀಲಿಸಿದ ನಂತರ ತಿಳಿಯಲಿದೆ. ವಿಜ್ಞಾನಿಗಳು ಸಮಸ್ಯೆ ಪತ್ತೆ ಹಚ್ಚಿದ ನಂತರ ವಿಮರ್ಶೆ ಮಾಡಲಾಗುವುದು ಎಂದು ಇಸ್ರೋ ಮೂಲಗಳು ತಿಳಿಸಿವೆ.

    ಚಂದ್ರಯಾನ ಉಡಾವಣೆಯನ್ನು ಸ್ಥಗಿತಗೊಳಿಸಿರುವುದು ಸರಿಯಾದ ನಿರ್ಧಾರ, ಇಂತಹ ದೊಡ್ಡ ಕಾರ್ಯಾಚರಣೆಯ ಅವಕಾಶವನ್ನು ಮತ್ತೊಮ್ಮೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಇಸ್ರೋ ನಿರ್ಧಾರ ಸಮಂಜಸವಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‍ಡಿಓ)ಯ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ರವಿ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

    ಏನೇನಾಯ್ತು?
    ರಾತ್ರಿ 1 ಗಂಟೆ 55 ನಿಮಿಷ 24 ಸೆಕೆಂಡ್‍ಗೆ ಚಂದ್ರಯಾನ-2 ರಾಕೆಟಿನಲ್ಲಿ ತಾಂತ್ರಿಕ ದೋಷ ಇರುವುದು ಪತ್ತೆಯಾಗಿದೆ. ತಕ್ಷಣ ಅಧಿಕಾರಿಗಳು ಸಮಾಲೋಚನೆ ನಡೆಸಿ 2 ಗಂಟೆ 9 ನಿಮಿಷಕ್ಕೆ ಚಂದ್ರಯಾನ- 2 ತಾತ್ಕಾಲಿಕ ತಡೆ ನೀಡಿ ಬಳಿಕ 2 ಗಂಟೆ 16 ನಿಮಿಷಕ್ಕೆ ಚಂದ್ರಯಾನ- 2 ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡರು. ಬಳಿಕ ಟ್ವೀಟ್ ಮಾಡಿ ಅಧಿಕೃತವಾಗಿ ರದ್ದುಗೊಳಿಸುವ ನಿರ್ಧಾರವನ್ನು ಪ್ರಕಟಿಸಿದರು.

    ಈ ಯೋಜನೆಗೆ ಸುಮಾರು 978 ಕೋಟಿ ವೆಚ್ಚವಾಗಿದೆ. ಇದರಲ್ಲಿ ಉಪಗ್ರಹದ ವೆಚ್ಚ 603 ಕೋಟಿ, ರಾಕೆಟ್‍ಗೆ 375 ಕೋಟಿ ಖರ್ಚು. ಚಂದ್ರಯಾನ 2 ಉಪಗ್ರಹದ ಒಟ್ಟು ತೂಕ 3,850 ಕೆಜಿ. ಇದೆ. 3 ಲಕ್ಷದ 82 ಸಾವಿರ ಕಿ.ಮೀ. ಸಾಗಲಿದೆ. 54 ದಿನಗಳ ಬಳಿಕ ಈ ಉಪಗ್ರಹ ಚಂದ್ರನ ದಕ್ಷಿಣ ದ್ರುವ ತಲುಪಲಿದೆ.