Tag: ಘರ್ಷಣೆ

  • ಕೇರಳ ವಿದ್ಯಾರ್ಥಿಗಳ ಬೀದಿರಂಪಾಟ – ಪೊಲೀಸರ ಮೇಲೆ ಹಲ್ಲೆ

    ಕೇರಳ ವಿದ್ಯಾರ್ಥಿಗಳ ಬೀದಿರಂಪಾಟ – ಪೊಲೀಸರ ಮೇಲೆ ಹಲ್ಲೆ

    ಮಂಗಳೂರು: ಕೇರಳದ ವಿದ್ಯಾರ್ಥಿಗಳ ಬೀದಿ ರಂಪಾಟ ಬಿಡಿಸಲು ಹೋದ ಪೊಲೀಸರ ಮೇಲೂ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ನಗರದ ಜಪ್ಪು ಮಾರ್ಕೆಟ್ ಪ್ರದೇಶದ ಗಜ್ಜರ ಕೆರೆ ಎಂಬಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಮೂರು ಮಂದಿ ಪೊಲೀಸರಿಗೆ ಗಾಯವಾಗಿದೆ.

    ಯೇನಪೋಯ ಡಿಗ್ರಿ ಕಾಲೇಜಿನ ಹಾಸ್ಟೆಲ್ ಪರಿಸರದಲ್ಲಿ ಕೇರಳದ ವಿದ್ಯಾರ್ಥಿಗಳು ಜಗಳವಾಡಿದ್ದಾರೆ. ಅಷ್ಟೇ ಅಲ್ಲದೆ ಇಲ್ಲಿನ ಸ್ಥಳೀಯರೊಂದಿಗೂ ವಿದ್ಯಾರ್ಥಿಗಳು ಘರ್ಷಣೆಗೆ ಇಳಿದಿದ್ದರು. ಈ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಕುರಿತಾಗಿ ಕಾಲೇಜು ಆಡಳಿತ ಮಂಡಳಿ ಹಾಗೂ ಸ್ಥಳೀಯರೊಂದಿಗೆ ಕಮಿಷನರ್ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪರಿಸರದಲ್ಲಿ ಕೇರಳ ವಿದ್ಯಾರ್ಥಿಗಳ ಪುಂಡಾಟಿಕೆ ಮಿತಿಮೀರುತ್ತಿದೆ ಎಂದು ಗುಜ್ಜರ ಕೆರೆ ನಿವಾಸಿಗಳು ಆರೋಪಿಸಿದರು. ಇದನ್ನೂ ಓದಿ: ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್

    ಯೇನಪೋಯ ಕಾಲೇಜಿನ ವಿದ್ಯಾರ್ಥಿಗಳ ಹಾಸ್ಟೆಲ್‌ನ್ನು ಈ ಕೂಡಲೇ ಸ್ಥಳಾಂತರಿಸುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ 9 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ:  ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ

  • ಶಬರಿಮಲೆಗೆ ಮಹಿಳೆಯರ ಪ್ರವೇಶ: ಇಂದು ಕೇರಳ ಬಂದ್, ಘರ್ಷಣೆಗೆ 1 ಬಲಿ

    ಶಬರಿಮಲೆಗೆ ಮಹಿಳೆಯರ ಪ್ರವೇಶ: ಇಂದು ಕೇರಳ ಬಂದ್, ಘರ್ಷಣೆಗೆ 1 ಬಲಿ

    ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ಖಂಡಿಸಿ ಇಂದು ಕೇರಳ ಬಂದ್‍ಗೆ ಕರೆ ನೀಡಲಾಗಿದೆ. ಶಬರಿಮಲೆ ಕರ್ಮ ಸಮಿತಿ ಬಂದ್ ಗೆ ಕರೆ ನೀಡಿದ್ದು, ಬಿಜೆಪಿ, ಹಿಂದೂಪರ ಸಂಘಟನೆಗಳು, ಯುಡಿಎಫ್ ಈ ಬಂದ್‍ಗೆ ಬೆಂಬಲ ನೀಡಿದೆ.

    ಬುಧವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕಲ್ಲುತೂರಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮಹಿಳೆಯರ ಪ್ರವೇಶವನ್ನು ಖಂಡಿಸಿ ಶಬರಿಮಲೆ ಕರ್ಮ ಸಮಿತಿ ಕಾರ್ಯಕರ್ತ ಚಂದ್ರನ್ ಎಂಬವರು ಬುಧವಾರ ಪಂದಳಂನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಿಪಿಎಂ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ ಪರಿಣಾಮ ಚಂದ್ರನ್ ಮೃತಪಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಕೇರಳ ಸರ್ಕಾರ ತನಿಖೆಗೆ ಆದೇಶಿಸಿದೆ.

    ಕೇರಳದ ಹಲವು ಪ್ರದೇಶಗಳಲ್ಲಿ ರಸ್ತೆಯನ್ನು ತಡೆದು ಟೈರ್ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡದಲ್ಲಿ ಗಡಿಯಲ್ಲಿರುವ ಕಾಸರಗೋಡಿನಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ಇಂದಿನ ಬಂದ್‍ಗೆ ಯುಡಿಎಫ್ ಸಹ ಬೆಂಬಲ ನೀಡಿದೆ.

    ಕರ್ನಾಟಕದಿಂದ ಬಸ್ ಇಲ್ಲ: ಕೇರಳದಲ್ಲಿ ಪ್ರತಿಭಟನೆಗಳು ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಕೇರಳಕ್ಕೆ ತೆರಳುವ ಎಲ್ಲ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

    ಬಿಜೆಪಿ ರಾಜ್ಯಾದ್ಯಂತ ಎರಡು ದಿನ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಪ್ರತಿಭಟನೆ ಜೋರಾಗುತ್ತಿದ್ದಂತೆ ಕೇರಳದ ವಿವಿಧ ವಿಶ್ವವಿದ್ಯಾಲಯಗಳ ಪರೀಕ್ಷೆಗಳು ಮುಂದೂಡಲ್ಪಟ್ಟಿದೆ. ಕೇರಳ ಸಚಿವರ ಕಾರುಗಳಿಗೆ ಕಪ್ಪು ಬಾವುಟವನ್ನು ತೋರಿಸಿ ಪ್ರತಿಭಟಿಸಲಾಗುತ್ತಿದೆ.

    ಮಹಿಳೆಯರಾದ ಬಿಂದು ಮತ್ತು ಕನಕ ಮಧ್ಯರಾತ್ರಿ ಬೆಟ್ಟವನ್ನು ಹತ್ತಿ, ವಿಐಪಿ ಮತ್ತು ಮಾಧ್ಯಮಗಳ ಪ್ರವೇಶಕ್ಕೆ ಇರುವ ದ್ವಾರದ ಮೂಲಕ ಬುಧವಾರ ಬೆಳಗ್ಗೆ 3.45ಕ್ಕೆ ದೇವಾಲಯವನ್ನು ಪ್ರವೇಶಿಸಿದ್ದರು. ಈ ಸಮಯದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು ಮತ್ತು ಯಾವುದೇ ಮಾಧ್ಯಮಗಳು ಸಹ ಇರಲಿಲ್ಲ.

    44 ವರ್ಷ ಬಿಂದು ತಲಶೇರಿಯಲ್ಲಿ ಕಾಲೇಜು ಉಪನ್ಯಾಸಕಿ ಮತ್ತು ಸಿಪಿಐ(ಎಂ) ಕಾರ್ಯಕರ್ತೆಯಾಗಿದ್ದು, 42 ವರ್ಷದ ಕನಕದುರ್ಗ ನಾಗರಿಕ ಸರಬರಾಜು ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.

    ಬೆಳಗ್ಗೆ 9 ಗಂಟೆಯ ವೇಳೆಗೆ ಮಹಿಳೆಯರಿಬ್ಬರು ದೇವಾಲಯವನ್ನು ಪ್ರವೇಶಿಸಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ಸುದ್ದಿ ಪ್ರಕಟಿಸಿದವು. ಇದರ ಬೆನ್ನಲ್ಲೇ ಮಹಿಳೆಯರ ಪ್ರವೇಶವನ್ನು ಖಚಿತಪಡಿಸಿದ ಕೇರಳ ಸಿಎಂ ಪಿಣರಯ್ ವಿಜಯನ್, ಇಬ್ಬರು ಮಹಿಳೆಯರು ಪೊಲೀಸ್ ಭದ್ರತೆಯಲ್ಲಿ ಶಬರಿಮಲೆ ಪ್ರವೇಶಿಸಿದ್ದಾರೆ. ಅವರಿಗೆ ರಕ್ಷಣೆ ನೀಡಿದ್ದಕ್ಕೆ ನಮಗೆ ಹೆಮ್ಮೆಯಿದೆ ಎಂದು ಪ್ರತಿಕ್ರಿಯಿಸಿದ್ದರು.

    ಸಿಎಂ ಅಧಿಕೃತವಾಗಿ ಪ್ರಕಟಿಸುತ್ತಿದ್ದಂತೆ ಶಬರಿಮಲೆಯ ದೇವಾಲಯದ ಪ್ರಧಾನ ಅರ್ಚಕರು ತಾತ್ಕಾಲಿಕವಾಗಿ ಮುಚ್ಚುವ ತೀರ್ಮಾನವನ್ನು ತೆಗೆದುಕೊಂಡರು. ಅದರಂತೆ ಬೆಳಗ್ಗೆ 10.30ರ ವೇಳೆಗೆ ವೇಳೆಗೆ ದೇವಾಲಯದ ಬಾಗಿಲನ್ನು ಮುಚ್ಚಲಾಯಿತು. ಒಂದು ಗಂಟೆಯ ಕಲಶ ಶುದ್ಧಿಯ ಬಳಿಕ ದೇವಾಲಯದ ಬಾಗಿಲನ್ನು ಭಕ್ತರಿಗಾಗಿ ಮತ್ತೆ ತೆರೆಯಲಾಯಿತು.

    ಮಹಿಳೆಯರ ಪ್ರವೇಶದಿಂದ ದೇವಾಲಯ ಅಪವಿತ್ರಗೊಂಡಿದೆ. ಹೀಗಾಗಿ ಕಲಶ ಶುದ್ಧಿಗಾಗಿ ಬಂದ್ ಮಾಡಿದ್ದೇವೆ ಎಂದು ಪ್ರಧಾನ ಅರ್ಚಕರು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷದ ಪಾರ್ಟಿ ವೇಳೆ ಯುವಕರ ಮಧ್ಯೆ ಘರ್ಷಣೆ- ಓರ್ವ ಸಾವು

    ಹೊಸ ವರ್ಷದ ಪಾರ್ಟಿ ವೇಳೆ ಯುವಕರ ಮಧ್ಯೆ ಘರ್ಷಣೆ- ಓರ್ವ ಸಾವು

    ಮಂಡ್ಯ: ಹೊಸ ವರ್ಷದ ಪಾರ್ಟಿ ಮಾಡುವ ವೇಳೆ ಯುವಕರ ಮಧ್ಯೆ ಘರ್ಷಣೆ ನಡೆದು ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹೊನಗಾನಹಳ್ಳಿ ಗ್ರಾಮದ ಹೊರವಲಯದ ಕೆರೆಯ ಬಳಿ ನಡೆದಿದೆ.

    ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಗ್ರಾಮದ 26 ವರ್ಷದ ಯುವಕ ಶಿವಕುಮಾರ್ ಮೃತ ದುರ್ದೈವಿ. ಶಶಿ ಎಂಬ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಕುಮಾರ್ ಮತ್ತು ಶಶಿ ಹೊನಗಾನಹಳ್ಳಿ ಗ್ರಾಮದ ಹೊರವಲಯದ ಕೆರೆಯ ಬಳಿ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಕೆಲ ಯುವಕರು ಹಳೇ ದ್ವೇಷದ ಕಾರಣಕ್ಕೆ ಗಲಾಟೆ ಮಾಡಿದ್ದಾರೆ.

    ಈ ವೇಳೆ ಶಿವಕುಮಾರ್ ಹಾಗೂ ಶಶಿಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ತೀವ್ರ ರಕ್ತಸ್ರಾವಗೊಂಡ ಶಿವಕುಮಾರ ಹಾಗೂ ಶಶಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮಾರ್ಗ ಮಧ್ಯೆ ಶಿವಕುಮಾರ್ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಶಶಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸ್ಥಳಕ್ಕೆ ಪಾಂಡವಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಸಿಎಂ ತವರಿನಲ್ಲೇ 2 ಸಮುದಾಯದ ನಡುವೆ ಗಂಪು ಘರ್ಷಣೆ

    ಸಿಎಂ ತವರಿನಲ್ಲೇ 2 ಸಮುದಾಯದ ನಡುವೆ ಗಂಪು ಘರ್ಷಣೆ

    ಮೈಸೂರು: ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿರುವ ಘಟನೆ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರವಾದ ಮೈಸೂರಿನ ನಂಜನಗೂಡು ತಾಲೂಕಿನ ಕಾಮಹಳ್ಳಿ ಗ್ರಾಮದಲ್ಲಿ ನಡೆದಿದೆ

    ಸೋಮವಾರ ರಾತ್ರಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಎರಡು ಸಮುದಾಯದ ಗುಂಪುಗಳ ನಡುವೆ ಘರ್ಷಣೆಯಾಗಿ ಹಲವು ಮಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಾಮಹಳ್ಳಿ ಈ ಘಟನೆ ನಡೆದಿದ್ದು, ಮನೆಯ ಮುಂಭಾಗದಲ್ಲಿ ನಿಂತಿದ್ದ ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ಜಖಂ ಮಾಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಡಿವೈಎಸ್‍ಪಿ ಮಹಮ್ಮದ್ ಸುಜಿತಾ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

    ಚಿಕಿತ್ಸೆ ಪಡೆಯುತ್ತಿದ್ದವರನ್ನು ಪೊಲೀಸರು ಬಲವಂತವಾಗಿ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಗಾಯಾಳುಗಳ ಸಂಬಂಧಿಕರ ನಡುವೆ ಮಾತಿನ ಚಕಮಕಿ ನಡೆದಿದೆ.

    ಕೆ.ಆರ್ ಆಸ್ಪತ್ರೆಯ ಆವರಣದಲ್ಲಿ ಕೆಲ ಕಾಲ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೂ ಗ್ರಾಮಸ್ಥರನ್ನ ಲೆಕ್ಕಿಸದೇ ಪೊಲೀಸರು ಗಾಯಾಳುಗಳನ್ನು ಕರೆದುಕೊಂಡು ಹೋಗಿದ್ದಾರೆ.

  • ಗುಂಪು ಘರ್ಷಣೆ- ಜಗಳ ಬಿಡಿಸಲು ಬಂದ ಗುಂಪಿನಿಂದಲೇ ಹಲ್ಲೆ, 15 ಮಂದಿಗೆ ಗಾಯ

    ಗುಂಪು ಘರ್ಷಣೆ- ಜಗಳ ಬಿಡಿಸಲು ಬಂದ ಗುಂಪಿನಿಂದಲೇ ಹಲ್ಲೆ, 15 ಮಂದಿಗೆ ಗಾಯ

    ರಾಯಚೂರು: ಗುಂಪುಗಳ ಮಧ್ಯೆ ಘರ್ಷಣೆಯಾಗುತ್ತಿದ್ದ ವೇಳೆ ಜಗಳ ಬಿಡಿಸಲು ಬಂದ ಗುಂಪಿನವರೇ ಹಲ್ಲೆ ಮಾಡಿರುವ ಘಟನೆ ರಾಯಚೂರು ತಾಲೂಕಿನ ಗಣಮೂರು ಗ್ರಾಮದಲ್ಲಿ ನಡೆದಿದೆ.

    ಘಟನೆಯಿಂದ ಹೊನ್ನಪ್ಪ, ಜಮಲಮ್ಮ ಮತ್ತು ಬಸ್ಸಮ್ಮ ಎಂಬವರು ಸೇರಿದಂತೆ ಸುಮಾರು 15 ಜನರಿಗೆ ದೊಣ್ಣೆ ಮತ್ತು ಬೆತ್ತದಿಂದ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಮಲ್ಲೇಶ, ತಿಪ್ಪಯ್ಯ ಹಾಗೂ ಮಾರೆಪ್ಪ ಸೇರಿ ಇತರರು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಮದು ತಿಳಿದುಬಂದಿದೆ.

    ಗಣಮೂರು ಗ್ರಾಮದ ಬಸ್ಸಮ್ಮರನ್ನು ಕುರುಬನದೊಡ್ಡಿ ಗೋಪಾಲ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ದೀಪಾವಳಿ ಹಬ್ಬಕ್ಕೆಂದು ಬಸ್ಸಮ್ಮರನ್ನು ಗೋಪಾಲ ಆಕೆಯ ತವರಿಗೆ ಕಳುಹಿಸಿದ್ದನು. ಆದರೆ ಗೋಪಾಲ ರಾತ್ರೋರಾತ್ರಿ ಪಾನಮತ್ತನಾಗಿ ಹೆಂಡತಿಯನ್ನ ಕರೆದುಕೊಂಡು ಹೋಗಲು ಬಂದಿದ್ದಾನೆ. ಪತ್ನಿಯ ತವರು ಮನೆಯವರು ಬೆಳಿಗ್ಗೆ ಕಳುಹಿಸುತ್ತೇವೆ ಎಂದಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಪತ್ನಿ ತವರು ಮನೆಯಲ್ಲಿ ರಾದ್ದಾಂತ ಮಾಡಿದ್ದಾನೆ. ಈ ವೇಳೆ ಗುಂಪೊಂದು ಇವರ ಜಗಳವನ್ನು ಬಿಡಿಸಲು ಬಂದಿದೆ. ಹೀಗೆ ಬಂದತಂತಹ ಗುಂಪು ಹಾಗೂ ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದು, ಗುಂಪು ಹಲ್ಲೆ ನಡೆಸಿ ಪರಾರಿಯಾಗಿದೆ.

    ಸದ್ಯ ಗಾಯಾಳುಗಳನ್ನು ಸಮೀಪದ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಈ ಘಟನೆ ಸಂಬಂಧ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉತ್ತರಪ್ರದೇಶದಲ್ಲಿ ಜಾತಿ ಘರ್ಷಣೆ – ಓರ್ವ ಸಾವು, 12 ಮಂದಿಗೆ ಗಾಯ

    ಉತ್ತರಪ್ರದೇಶದಲ್ಲಿ ಜಾತಿ ಘರ್ಷಣೆ – ಓರ್ವ ಸಾವು, 12 ಮಂದಿಗೆ ಗಾಯ

    ಲಕ್ನೋ: ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ಚಂದ್ರಪುರ ಗ್ರಾಮದಲ್ಲಿ ಜಾತಿ ಘರ್ಷಣೆ ನಡೆದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ 4 ಹಿರಿಯ ಅಧಿಕಾರಿಗಳನ್ನ ಕಳಿಸಲಾಗಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ವರದಿಗಳ ಪ್ರಕಾರ ಬಿಎಸ್‍ಪಿ ನಾಯಕಿ ಮಾಯಾವತಿಯವರ ಕಾರ್ಯಕ್ರಮಕ್ಕೂ ಮುನ್ನ ದಲಿತರ ಗುಂಪೊಂದು ಶಬ್ಬಿರ್‍ಪುರದ ಕೆಲ ರಜಪೂತರ ಮನೆಗಳ ಮೇಲೆ ಕಲ್ಲು ತೂರಿದ ಕಾರಣ ಎರಡು ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿದೆ. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಆದ್ರೆ ಅನಂತರ ಆ ಕಾರ್ಯಕ್ರಮದಿಂದ ಹಳ್ಳಿಗೆ ಹಿಂದಿರುಗುತ್ತಿದ್ದ ದಲಿತರಿದ್ದ ಟ್ರಕ್ ಮೇಲೆ ಈ ಪ್ರದೇಶದ ಠಕೂರ್‍ಗಳು ದಾಳಿ ಮಾಡಿದ್ದಾರೆ ಎನ್ನಲಾಗಿದ್ದು, ಘರ್ಷಣೆಯಲ್ಲಿ ಓರ್ವ ದಲಿತ ವ್ಯಕ್ತಿ ಮೃತಪಟ್ಟು ಇಬ್ಬರಿಗೆ ಗಂಭಿರವಾಗಿ ಗಾಯವಾಗಿದೆ.

    ಮಂಗಳವಾರ ನಡೆದ ಹಿಂಸಾಚಾರಕ್ಕೆ ಮಾಜಿ ಮುಖ್ಯಮಂತ್ರಿ ಮತ್ತು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿಯ ಭೇಟಿಯೇ ಕಾರಣವೆಂದು ಉತ್ತರಪ್ರದೇಶ ಸರ್ಕಾರ ಆರೋಪಿಸಿದೆ. ಇದೇ ತಿಂಗಳಲ್ಲಿ ಶಬ್ಬಿರ್‍ಪುರದಲ್ಲಿ ದಲಿತರು ಹಾಕೂ ಠಾಕೂರ್‍ಗಳ ಮಧ್ಯೆ ಘರ್ಷಣೆಯಾಗಿ ದಲಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಮಾಯಾವತಿ ಭೇಟಿ ನೀಡಿದ್ದರು.

    ಭಾನುವಾರದಂದು ಉತ್ತರಪ್ರದೇಶದ ಭೀಮ್ ಆರ್ಮಿ ಎಂಬ ಗುಂಪಿನ ನೇತೃತ್ವದಲ್ಲಿ ಸಾವಿರಾರು ದಲಿತ ಬಲಪಂತೀಯರು ದೆಹಲಿಯ ಜಂತರ್ ಮಂತರ್ ಬಳಿ ಸೇರಿ ಸಹರಾನ್‍ಪುರದಲ್ಲಿನ ಜಾತಿ ಆಧಾರಿತ ಹಿಂಸಾಚಾರದ ವಿರುದ್ಧ ಪ್ರತಿಭಟಿಸಿದ್ದರು. ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದರೂ ಕೂಡ ಸುಮಾರು 5 ಸಾವಿರ ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.