Tag: ಘತ್ತರಗಿ

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಶುಕ್ರವಾರ ವಿದ್ಯಾರ್ಥಿಗಳಿಗೆ ರಜಾ ನೀಡಿ ದೇಗುಲದಲ್ಲಿ ಕೆಲಸ- ಎಚ್ಚೆತ್ತ ಶಿಕ್ಷಣ ಇಲಾಖೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಶುಕ್ರವಾರ ವಿದ್ಯಾರ್ಥಿಗಳಿಗೆ ರಜಾ ನೀಡಿ ದೇಗುಲದಲ್ಲಿ ಕೆಲಸ- ಎಚ್ಚೆತ್ತ ಶಿಕ್ಷಣ ಇಲಾಖೆ

    – ಕ್ರಮಕ್ಕೆ ಸಚಿವ ಸುರೇಶ್ ಕುಮಾರ್ ಸೂಚನೆ
    – ದೇವಸ್ಥಾನದಲ್ಲಿ ಮಕ್ಕಳಿಗೆ ಬೊಟ್ಟು ಇಡುವ ಕೆಲ್ಸ

    ಕಲಬುರಗಿ: ಜಿಲ್ಲೆಯ ಘತ್ತರಗಿ ಮತ್ತು ದೇವಲಗಾಣಗಪುರದಲ್ಲಿನ ದೇವಸ್ಥಾನ ಉತ್ತರ ಕರ್ನಾಟಕದಲ್ಲಿಯೇ ಫೇಮಸ್. ಆದರೆ ಇಂತಹ ಪವಿತ್ರ ಕ್ಷೇತ್ರಗಳಲ್ಲಿ ಶಾಲೆ ಕಲಿಯಬೇಕಾದ ನೂರಾರು ವಿದ್ಯಾರ್ಥಿಗಳು, ಶಾಲೆಗೆ ಚಕ್ಕರ ಹಾಕಿ ಭಿಕ್ಷೆ ಬೇಡುವ ಮತ್ತು ಬರುವ ಭಕ್ತರಿಗೆ ಕುಂಕುಮದ ಬೊಟ್ಟು (ತಿಲಕ) ಇಟ್ಟು ಹಣ ಸಂಪಾದನೆಯಲ್ಲಿ ತೊಡಗಿದ್ದಾರೆ.

    ಮಕ್ಕಳು ಕೆಲಸಕ್ಕೆ ಹೋಗುವುದನ್ನು ಶಿಕ್ಷಣ ಇಲಾಖೆ ತಡೆ ಹಿಡಿಯುವ ಬದಲಿಗೆ ಶುಕ್ರವಾರ ಶಾಲೆಗೆ ರಜೆ ನೀಡಿ, ಮಕ್ಕಳಿಗೆ ಘತ್ತರಗಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಬೊಟ್ಟು ಇಡುವ ಕೆಲಸ ಹಾಗೂ ವಾಹನ ಕ್ಲೀನ್ ಮಾಡಲು ಅನುವು ಮಾಡಿಕೊಟ್ಟಿತ್ತು. ಈ ಸಂಬಂಧ ಪಬ್ಲಿಕ್ ಟಿವಿ ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಶಾಲೆಯ ಶಿಕ್ಷಕರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.

    ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಚಿವರು, ಇದು ಇತ್ತೀಚೆಗೆ ಸಂಭವಿಸಿರುವ ಘಟನೆಯಲ್ಲ. ಬಹಳ ವರ್ಷಗಳಿಂದಲೂ ಇದೇ ರೀತಿ ನಡೆದುಕೊಂಡು ಬಂದಿದೆ. ಶಾಲೆಯ ಆವರಣದಲ್ಲಿ ಭಾಗ್ಯವಂತಿ ದೇವತೆಯ ದೇಗುಲವಿದೆ. ಇತ್ತೀಚಿನ ವರ್ಷಗಳಲ್ಲಿ ಇದು ತುಂಬಾ ಹೆಸರುವಾಸಿಯಾಗಿದೆ. ಹಾಗಾಗಿ ಪ್ರತಿ ಶುಕ್ರವಾರದಂದು ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಪರಿಣಾಮ ಶಾಲೆಯ ಚಟುವಟಿಕೆಗಳಿಗೆ ಅಡಚಣೆಯಾಗಿದೆ. ಹಾಗಾಗಿ ಭಾನುವಾರದ ಬದಲು ಶುಕ್ರವಾರ ಶಾಲೆಗೆ ರಜೆ ನೀಡುತ್ತಾ ಬಂದಿದ್ದಾರೆ ಎಂದು ಹೇಳಿದರು.

    ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗ್ಯವಂತಿ ದೇವತೆಯ ದೇಗುಲಕ್ಕೆ ಬರುವುದರಿಂದ ಶಾಲೆಯ ವಿದ್ಯಾರ್ಥಿಗಳು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ. ಇದಕ್ಕೆ ಯಾರು ಅನುಮತಿ ಕೊಟ್ಟಿದ್ದಾರೆ ಎನ್ನುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಕೇಳಿದ್ದೇನೆ. ಈ ಸಂಬಂಧ ವಿವರಣೆ ನೀಡುವಂತೆ ಡಿಡಿಪಿಐ ಅವರಿಗೆ ಸೂಚಿಸಿದ್ದೇನೆ. ಡಿಡಿಪಿಐ ವಿವರಣೆ ನೀಡಿದ ಬಳಿಕ ಶಾಲೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕೋ, ಬೇಡವೋ ಎಂಬುದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

    ಏನಿದು ಪ್ರಕರಣ?:
    ರಾಜ್ಯದ ಎಲ್ಲಾ ಶಾಲೆಗಳು ರವಿವಾರ ರಜೆಯಿದ್ದರೆ ಘತ್ತರಗಿ ಗ್ರಾಮದ ಶಾಲೆ ಮಾತ್ರ ಶುಕ್ರವಾರ ರಜೆ ನೀಡಿ ಪರೋಕ್ಷವಾಗಿ ಮಕ್ಕಳನ್ನು ಹಣಗಳಿಕೆ ಮಾಡಲು ಶಿಕ್ಷಣ ಇಲಾಖೆ ಕುಮ್ಮಕ್ಕು ನೀಡಿದೆ. ಶುಕ್ರವಾರ ರಜೆ ನೀಡಿ ಭಾನುವಾರ ತರಗತಿಗಳನ್ನು ತೆಗೆದುಕೊಳ್ಳುವ ರಾಜ್ಯದ ಏಕೈಕ ಶಾಲೆಯಾಗಿದೆ.

    ಶಿಕ್ಷಣ ಇಲಾಖೆ ಹೀಗೆ ನಿರ್ಣಯ ಕೈಗೊಳ್ಳಲು ಒಂದು ಕಾರಣವಿದೆ. ಪ್ರತಿ ಶುಕ್ರವಾರ ಅಂದ್ರೆ ಅದು ಘತ್ತರಗಿ ಭಾಗ್ಯವಂತಿ ದೇವಿಯ ದಿನವಾಗಿದೆ. ಹೀಗಾಗಿ ಈ ದೇವಸ್ಥಾನಕ್ಕೆ ಉತ್ತರಕರ್ನಾಟಕ ಸೇರಿದಂತೆ ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಹೀಗೆ ಬಂದ ಭಕ್ತರಿಗೆ ಶಾಲಾ ಮಕ್ಕಳು ಬೊಟ್ಟು ಹಚ್ಚಿ ಹಾಗೂ ಅವರ ವಾಹನಗಳನ್ನು ತೊಳೆದು ಹಣಗಳಿಕೆಗೆ ಮುಂದಾಗಿದ್ದಾರೆ. ಮಕ್ಕಳು ಹೀಗೆ ಕೆಲಸದಿಂದ ತಡೆದು ಅವರಿಗೆ ಜಾಗೃತಿ ಮೂಡಿಸಬೇಕಾದ ಶಿಕ್ಷಣ ಇಲಾಖೆ ಸಹ ಮಕ್ಕಳ ಬೆನ್ನಿಗೆ ನಿಂತಿದ್ದು, ಘತ್ತರಗಿ ಗ್ರಾಮದಲ್ಲಿರುವ ಪ್ರೌಢ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪ್ರತಿ ಭಾನುವಾರದ ಬದಲು ಶುಕ್ರವಾರ ಬಂದ್ರೆ ಅಧಿಕೃತ ರಜೆ ಘೋಷಿಸಿದೆ.

    ಶಾಲೆಗೆ ಕರೆತಂದು ಶಿಕ್ಷಣ ನೀಡುವ ಬದಲು ಮಕ್ಕಳನ್ನು ಹೀಗೆ ಕೆಲಸಕ್ಕೆ ಹೋಗಲು ಶಿಕ್ಷಣ ಇಲಾಖೆಯೇ ಪ್ರೋತ್ಸಾಹ ನೀಡುತ್ತಿದೆ. ಹೀಗಾಗಿ ಗ್ರಾಮದಲ್ಲಿ ಪ್ರತಿ ಶುಕ್ರವಾರ ಶಾಲೆಗೆ ಬೀಗ ಜಡಿದು, ಭಾನುವಾರದಂದು ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವಿಪರ್ಯಾಸವೆಂದರೆ ಮಕ್ಕಳಲ್ಲಿ ಬಹುತೇಕರು 8ರಿಂದ 12 ವರ್ಷದವರು ಎನ್ನುವದು ಗಮನಾರ್ಹ. ಮಕ್ಕಳ ಹಕ್ಕುಗಳ ರಕ್ಷಣೆ ಮಾಡಬೇಕಾದ ಶಾಲಾ ಆಡಳಿತ ಮಂಡಳಿಯೇ ಇವರ ಬೆನ್ನೆ ಹಿಂದೆ ನಿಂತಿರುವುದನ್ನು ಪ್ರಜ್ಞಾವಂತ ಜನರು ಹಾಗೂ ಮಕ್ಕಳ ಹಕ್ಕುಗಳ ಸದಸ್ಯರು ತೀವ್ರವಾಗಿ ಖಂಡಿಸುತ್ತಿದ್ದಾರೆ.

    ಶಾಲೆಗೆ ಭಾನುವಾರದ ಬದಲು ಶುಕ್ರವಾರ ರಜೆ ನೀಡಿರುವುದು ಇಂದು ನಿನ್ನೆಯದಲ್ಲ. ಕಳೆದ 15 ವರ್ಷಗಳ ಹಿಂದೆಯೇ ಶಿಕ್ಷಣ ಇಲಾಖೆ ಈ ಸುತ್ತೋಲೆಯನ್ನು ಹೊರಡಿಸಿದೆ. ಈ ಮೂಲಕ ಅಂದಿನಿಂದ ಘತ್ತರಗಿ ಗ್ರಾಮದ ಮಕ್ಕಳು ಶುಕ್ರವಾರ ಬಂದ್ರೆ ಶಾಲೆಯ ಬದಲು ದೇವಸ್ಥಾನದಲ್ಲಿ ಸಿಗುವ ಹಣದಾಸೆಗೆ ಒಳಗಾಗುತ್ತಿದ್ದಾರೆ. ಮಕ್ಕಳು ಹೀಗೆ ಕೆಲಸಕ್ಕೆ ಹೋಗುವುದರ ಹಿಂದೆ ಇಲ್ಲಿನ ಪೋಷಕರ ಹಣದಾಸೆ ಇರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಇದಕ್ಕೆ ಪ್ರಮುಖವಾಗಿ ಇಲ್ಲಿ ಕಿತ್ತು ತಿನ್ನುವ ಬಡತನ ಇರುವ ಹಿನ್ನೆಲೆ ವಾರದಲ್ಲಿ ಒಂದು ದಿನವಾದರೂ ಮಕ್ಕಳು ಹಣಗಳಿಸಿ ತಮ್ಮ ಸಂಸಾರಕ್ಕೆ ನೇರವಾಗಲಿ ಅಂತ ಪೋಷಕರು ಮಕ್ಕಳ ಹಿಂದೆ ನಿಂತಿದ್ದಾರೆ.

    ದುರಂತವೆಂದರೆ ಹೀಗೆ ಮಕ್ಕಳ ಹಕ್ಕುಗಳ ಉಲಂಘನೆಯಾಗುತ್ತಿರುವುದು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿ ಅಡಿಯಲ್ಲಿಯೇ ಘತ್ತರಗಿ ದೇವಸ್ಥಾನ ಒಳಪಡುತ್ತದೆ. ಹೀಗಾಗಿ ಧಾರ್ಮಿಕ ದತ್ತಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದರು.

    ಭಾನುವಾರದ ಬದಲು ಶುಕ್ರವಾರ ಯಾಕೆ ಸಾರ್ವತ್ರಿಕ ರಜೆ ಎಂದು ಕಲಬುರಗಿ ಡಿಡಿಪಿಐ ಅವರನ್ನು ಕೇಳಿದರೆ, ಈ ಗ್ರಾಮದಲ್ಲಿ ಪ್ರತಿ ಶುಕ್ರವಾರ ರಜೆ ನೀಡಿ ಭಾನುವಾರ ಶಾಲೆ ನಡೆಸುವುದು ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಇದೀಗ ನಾವು ಅದರ ಬಗ್ಗೆ ಪರಿಶೀಲನೆ ಮಾಡುವುದಾಗಿ ಹೇಳಿದ್ದರು.