Tag: ಗ್ಲಾಡಿಯೋಲಸ್ ಹೂವು

  • ಬಿಸಿಲಲ್ಲೇ ಒಣಗುತ್ತಿವೆ ಹೂವುಗಳು – ರೈತರಿಗೆ ಲಕ್ಷಾಂತರ ರೂ. ನಷ್ಟ

    ಬಿಸಿಲಲ್ಲೇ ಒಣಗುತ್ತಿವೆ ಹೂವುಗಳು – ರೈತರಿಗೆ ಲಕ್ಷಾಂತರ ರೂ. ನಷ್ಟ

    ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ದೇಶದ ಬೆನ್ನೆಲುಬು ರೈತರು ನಲುಗಿ ಹೋಗುತ್ತಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ರೈತರು ಸಹ ತತ್ತರಿಸಿ ಹೋಗಿದ್ದು, ತಾಲೂಕಿನ ಕತ್ರಿಗುಪ್ಪೆ, ಮರಳುಕುಂಟೆ ಗ್ರಾಮಗಳಲ್ಲಿ ಬೆಳೆದ ಅಲಂಕಾರಿಕ ಗ್ಲಾಡಿಯೋಲಸ್ ಹೂವುಗಳಿಗೆ ಬೇಡಿಕೆಯಿಲ್ಲದೆ ಈಗ ತೋಟದಲ್ಲೇ ಬಾಡಿ ಹೋಗುತ್ತಿವೆ.

    ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಇದರಿಂದ ಮುದುವೆ, ಮುಂಜಿ ಶುಭ ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಇತ್ತ ಗ್ಲಾಡಿಯೋಲಸ್ ಬೆಳೆದ ರೈತರಿಗೆ ಈಗ ಲಕ್ಷಾಂತರ ರೂಪಾಯಿ ನಷ್ಟವಾಗ್ತಿದೆ. ಈ ಬಾರಿ ಏಪ್ರಿಲ್ ತಿಂಗಳಲ್ಲಿ ಸಾಕಷ್ಟು ಮದುವೆ ಶುಭ ಸಮಾರಂಭಗಳಿದ್ದವು. ಆದರೆ ಈಗ ಕೊರೊನಾ ಎಫೆಕ್ಟ್ ನಿಂದ ಎಲ್ಲವೂ ನಿಂತುಹೋಗಿವೆ. ಇದರಿಂದ ಕಾರ್ಯಕ್ರಮಗಳಲ್ಲಿ ಅಲಂಕಾರಕ್ಕೆ ಬಲು ಬೇಡಿಕೆ ಇರುತ್ತಿದ್ದ ಈ ಗ್ಲಾಡಿಯೋಲಸ್ ಹೂವುಗಳನ್ನು ಕೇಳೋರೆ ಎಲ್ಲದಂತಾಗಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಉಪಯೋಗವಾಗುತ್ತಿಲ್ಲ. ಹೀಗಾಗಿ ತೋಟಗಳಲ್ಲೇ ಗಿಡಗಳಲ್ಲಿ ಗ್ಲಾಡಿಯೋಲಸ್ ಹೂವುಗಳನ್ನ ಹಾಗೆ ಬಿಡುತ್ತಿದ್ದು, ಎಲ್ಲವೂ ಬಾಡಿ ಹೋಗ್ತಿವೆ.

    ಮತ್ತೊಂದೆಡೆ ಹೂವುಗಳನ್ನ ಹಾಗೆ ಬಿಟ್ಟರೆ ರೋಗ ಬರುತ್ತೆ ಅಂತ ಕಟಾವು ಮಾಡಿ ಬಿಸಾಡಲಾಗುತ್ತಿದೆ. ಕೆಲ ಹೂವುಗಳನ್ನ ಓಣಗಿಸಿ ದನಕರುಗಳಿಗೆ ಮೇವಾಗಿ ಬಳಸಲಾಗುತ್ತಿದೆ. ಆದರೆ ಅತಿಯಾಗಿ ಹಸುಗಳು ಸಹ ಇದನ್ನ ತಿನ್ನುವಂತಿಲ್ಲ. ಒಂದು ಹೂವಿನ ಕಡ್ಡಿಗೆ ಸರಾಸರಿ 5-6 ಹೂವುಗಳಿ ಸಿಗುತ್ತೆ. ಮದುವೆ ಸಮಾರಂಭಗಳು ಜಾಸ್ತಿ ಇರುವ ಸಮಯದಲ್ಲಿ 20 ರೂಪಾಯಿವರೆಗೆ ಇದರ ದರ ಏರಿಕೆಯಾಗುತ್ತೆ. ಸದ್ಯ ಮರಳುಕುಂಟೆ, ಕತ್ರಿಗುಪ್ಪೆ, ಕಾಡ ದಿಬ್ಬೂರು, ಅಂಗರೇಖನಹಳ್ಳಿಯ ನೂರಾರು ಮಂದಿ ರೈತರು ಎಕ್ರೆಗಟ್ಟಲೆ ಇದೇ ರೀತಿ ಗ್ಲಾಡಿಯೋಲಸ್ ಹೂವು ಬೆಳೆದಿದ್ದು, ಕೊರೊನಾ ಹೊಡೆತಕ್ಕೆ ನಲುಗಿ ಹೋಗಿದ್ದಾರೆ.