Tag: ಗ್ರ್ಯಾಂಟ್ ಫ್ಲವರ್

  • ಸಲಹೆ ಕೊಟ್ಟ ಕೋಚ್ ಕುತ್ತಿಗೆ ಮೇಲೆ ಚಾಕು ಇಟ್ಟಿದ್ದ ಯೂನಿಸ್ ಖಾನ್

    ಸಲಹೆ ಕೊಟ್ಟ ಕೋಚ್ ಕುತ್ತಿಗೆ ಮೇಲೆ ಚಾಕು ಇಟ್ಟಿದ್ದ ಯೂನಿಸ್ ಖಾನ್

    ಹರಾರೆ: ಪಾಕಿಸ್ತಾನ ಕ್ರಿಕೆಟ್ ಆಟಗಾರರು ಸ್ಪಾಟ್ ಫಿಕ್ಸಿಂಗ್ ಸೇರಿದಂತೆ ವಿವಾದತ್ಮಾಕ ಹೇಳಿಕೆಗಳನ್ನು ನೀಡುತ್ತಾ ಸದಾ ಸುದ್ದಿಯಲ್ಲಿರುತ್ತಾರೆ. ಸಹ ಆಟಗಾರರೊಂದಿಗೆ ಮಾತ್ರವಲ್ಲದೇ ತಂಡದ ಕೋಚ್ ಜೊತೆಯೂ ಜಗಳವಾಡಿರುವ ಹಲವು ಘಟನೆಗಳು ಪಾಕ್ ಕ್ರಿಕೆಟ್‍ನಲ್ಲಿ ಸಾಮಾನ್ಯವಾಗಿವೆ. ಉದಾಹರಣೆಗೆ ಕಳೆದ ವರ್ಷ ಫಿಟ್ನೆಸ್ ಪರೀಕ್ಷೆ ಪಾಸ್ ಮಾಡಲು ವಿಫಲರಾಗಿದ್ದ ಕಮ್ರಾನ್ ಅಕ್ಮಲ್ ಫಿಟ್ನೆಸ್ ತರಬೇತುದಾರರೊಂದಿಗೆ ವಾಗ್ವಾದ ನಡೆಸಿದ್ದ. ಅಂತೆಯೇ ಪಾಕ್ ಮಾಜಿ ನಾಯಕ ಯೂನಿಸ್ ಖಾನ್ ಹಿಂದೆ ಜಿಂಬಾಬ್ವೆ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಕುತ್ತಿಗೆ ಮೇಲೆ ಕತ್ತಿ ಇಟ್ಟು ಬೆದರಿಕೆ ಹಾಕಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಸ್ವತಃ ಗ್ರ್ಯಾಂಟ್ ಫ್ಲವರ್ ಈ ಕುರಿತು ಮಾತನಾಡಿದ್ದಾರೆ.

    ಜಿಂಬಾಬ್ವೆ ತಂಡದ ಮಾಜಿ ಕ್ರಿಕೆಟಿಗ ಗ್ರ್ಯಾಂಟ್ ಫ್ಲವರ್, 2014 ರಿಂದ 2019ರ ಅವಧಿಯಲ್ಲಿ ಪಾಕಿಸ್ತಾನ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಪಾಕ್ ತಂಡದ ಮುಖ್ಯ ಕೋಚ್ ಆಗಿ ಮಿಕ್ಕಿ ಆರ್ಥರ್ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಸರಣಿ ವೇಳೆ ಒಂದು ದಿನ ಬೆಳಗ್ಗೆ ಕೋಚ್ ಹಾಗೂ ಕ್ರಿಕೆಟ್ ಆಟಗಾರರು ಬೆಳಗಿನ ಉಪಹಾರ ಸೇವಿಸುತ್ತಿದ್ದರು. ಈ ವೇಳೆ ಗ್ರ್ಯಾಂಟ್ ಫ್ಲವರ್, ಯೂನಿಸ್ ಖಾನ್‍ ಬ್ಯಾಟಿಂಗ್ ಕುರಿತು ಸಲಹೆಯೊಂದನ್ನು ನೀಡಿದ್ದರು. ಇದರಿಂದ ಕುಪಿತಗೊಂಡ ಯೂನಿಸ್ ಖಾನ್, ಟೇಬಲ್ ಮೇಲಿದ್ದ ಚಾಕು ತೆಗೆದುಕೊಂಡು ಕೋಚ್ ಕುತ್ತಿಗೆ ಮೇಲಿಟ್ಟು ಬೆದರಿಕೆ ಹಾಕಿದ್ದರು. ಕೂಡಲೇ ಸ್ಥಳದಲ್ಲಿದ್ದ ಮಿಕ್ಕಿ ಅರ್ಥರ್ ಯೂನಿಸ್ ಖಾನ್‍ನನ್ನು ತಡೆದಿದ್ದರು.

    ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಗ್ರ್ಯಾಂಟ್ ಫ್ಲವರ್, ಪಾಕ್ ಕ್ರಿಕೆಟ್ ತಂಡದಲ್ಲಿ ನನಗೆ ಅತ್ಯುತ್ತಮ ಅವಕಾಶ ಲಭಿಸಿತ್ತು. ಆದರೆ ಯೂನಿಸ್ ಖಾನ್‍ನನ್ನು ಹ್ಯಾಂಡಲ್ ಮಾಡುವುದು ತುಂಬಾ ಕಷ್ಟವಾಗಿತ್ತು. ಬ್ರಿಸ್ಬೇನ್‍ನಲ್ಲಿ ನಡೆದ ಘಟನೆಯೊಂದು ನನಗೆ ನೆನಪಿಗೆ ಬರುತ್ತಿದ್ದು, ಈ ಘಟನೆಯನ್ನು ಎಂದು ಮರೆಯುವುದಿಲ್ಲ. ಅಂದು ಪಂದ್ಯ ಆರಂಭಕ್ಕೂ ಮುನ್ನ ಎಲ್ಲರೂ ಒಂದೆಡೆ ಸೇರಿ ಬ್ರೇಕ್ ಫಾಸ್ಟ್ ಮಾಡುತ್ತಿದ್ದ ಸಂದರ್ಭದಲ್ಲಿ ಯೂನಿಸ್ ಖಾನ್ ಬ್ಯಾಟಿಂಗ್ ಕುರಿತು ಸಣ್ಣ ಸಲಹೆಯೊಂದನ್ನು ನೀಡಿದ್ದೆ. ಕೂಡಲೇ ಕೋಪಗೊಂಡ ಯೂನಿಸ್ ನನ್ನ ಕುತ್ತಿಗೆ ಮೇಲೆ ಚಾಕು ಇಟ್ಟಿದ್ದ. ಇದರಿಂದ ಮಿಕ್ಕಿ ಆರ್ಥರ್ ಕೂಡ ಶಾಕ್‍ಗೆ ಒಳಗಾಗಿದ್ದರು. ಕೂಡಲೇ ಆರ್ಥರ್ ಮಧ್ಯಪ್ರವೇಶ ಮಾಡಿದ್ದ ಪರಿಣಾಮ ನನ್ನ ಜೀವ ಉಳಿದಿತ್ತು. ಆಟಗಾರರಿಗೆ ಸಲಹೆ ನೀಡುವುದು ಕೋಚ್ ಮಾಡುವ ಸಂದರ್ಭದಲ್ಲಿ ಸಾಮಾನ್ಯ. ಆದರೆ ಅದನ್ನು ಯೂನಿಸ್ ಖಾನ್ ಸ್ವೀಕರಿಸಲಿಲ್ಲ ಎಂದು ಗ್ರ್ಯಾಂಟ್ ಫ್ಲವರ್ ವಿವರಿಸಿದ್ದಾರೆ.

    ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇತ್ತೀಚೆಗೆ ತಂಡದ ಬ್ಯಾಟಿಂಗ್ ಕೋಚ್ ಆಗಿ ಯೂನಿಸ್ ಖಾನ್‍ನನ್ನು ನೇಮಕ ಮಾಡಿದ್ದಾಗಿ ಘೋಷಣೆ ಮಾಡಿತ್ತು. ಟೆಸ್ಟ್ ಕ್ರಿಕೆಟ್‍ನಲ್ಲಿ ಪಾಕ್ ಪರ 10 ಸಾವಿರ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಗಳಿಸಿರುವ ಯೂನಿಸ್, 2017 ರಲ್ಲಿ ನಿವೃತ್ತಿ ಘೋಷಣೆ ಮಾಡಿದ್ದರು. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕ್ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ.