Tag: ಗ್ರೂಪ್ ಅಡ್ಮಿನ್

  • ವಾಟ್ಸಪ್ ಗ್ರೂಪ್ ಅಡ್ಮಿನ್‍ಗಳಿಗೆ ಶೀಘ್ರವೇ ಸಿಗಲಿದೆ ಫುಲ್ ಪವರ್

    ವಾಟ್ಸಪ್ ಗ್ರೂಪ್ ಅಡ್ಮಿನ್‍ಗಳಿಗೆ ಶೀಘ್ರವೇ ಸಿಗಲಿದೆ ಫುಲ್ ಪವರ್

    ವಾಷಿಂಗ್ಟನ್: ಮೆಟಾ ಮಾಲಿಕತ್ವದ ಮೆಸೇಜಿಂಗ್ ಆ್ಯಪ್ ಶೀಘ್ರವೇ ಹೊಸ ಫೀಚರ್ ತರಲಿದೆ. ಇದರ ಮೂಲಕ ವಾಟ್ಸಪ್ ಗ್ರೂಪ್‍ನ ಅಡ್ಮಿನ್ ಇತರ ಸದಸ್ಯರ ಚ್ಯಾಟ್‍ಅನ್ನು ಅಳಿಸಲು ಸಹಾಯವಾಗಲಿದೆ. ಈಗಾಗಲೇ ವಾಟ್ಸಪ್ ಈ ಫೀಚರ್‍ಅನ್ನು ಬಳಕೆದಾರರಿಗೆ ಲಭ್ಯವಾಗಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ.

    ಈ ವೈಶಿಷ್ಯ ಬಳಕೆಗೆ ಬಂದ ಬಳಿಕ ಗ್ರೂಪ್ ಅಡ್ಮಿನ್ ಇತರರು ಕಳುಹಿಸುವ ಅಶ್ಲೀಲ ಅಥವಾ ಆಕ್ಷೇಪಾರ್ಹ ಸಂದೇಶಗಳನ್ನು ಸುಲಭವಾಗಿ ಅಳಿಸಲು ಸಾಧ್ಯವಾಗಲಿದೆ. ಗ್ರೂಪ್ ನಿರ್ವಾಹಕ ಸಂದೇಶ ಅಳಿಸಿದ ಬಳಿಕ ಇತರ ಸದಸ್ಯರಿಗೆ ದಿಸ್ ವಾಸ್ ಡಿಲಿಟೆಡ್ ಬೈ ಆನ್ ಅಡ್ಮಿನ್ (ಈ ಸಂದೇಶ ನಿರ್ವಾಹಕರಿಂದ ಅಳಿಸಲಾಗಿದೆ) ಎಂದು ಗೋಚರಿಸಲಿದೆ. ಇದನ್ನೂ ಓದಿ: ಎಲಾನ್ ಮಸ್ಕ್ ಅವರ ಬಿಗ್ ಆಫರ್ ತಿರಸ್ಕರಿಸಿದ ಯುವಕ

    ನೀವು ಗ್ರೂಪ್ ಅಡ್ಮಿನ್ ಆಗಿದ್ದರೆ ಮುಂದಿನ ವಾಟ್ಸಪ್ ಆಂಡ್ರಾಯ್ಡ್ ಬೀಟಾ ಅಪ್ಡೇಟ್‍ಗಳಲ್ಲಿ ನೀವು ಗ್ರೂಪ್‍ನ ಯಾವುದೇ ಸಂದೇಶಗಳನ್ನು ಅಳಿಸಲು ಸಾಧ್ಯವಾಗಲಿದೆ ಎಂದು ವೆಬಿಟೈನ್ಫೋ ತಿಳಿಸಿದೆ.

    ವಾಟ್ಸಪ್ ವೆಬ್‍ನಲ್ಲಿ ಎರಡು ಹಂತಗಳ ಪರಿಶೀಲನೆಯ(ಟು ಸ್ಟೆಪ್ ವೆರಿಫಿಕೇಷನ್) ಸಾಮರ್ಥ್ಯವನ್ನೂ ಅಭಿವೃದ್ಧಿಪಡಿಸುತ್ತಿದೆ. ಮುಂದಿನ ಅಪ್ಡೇಟ್‍ಗಳಲ್ಲಿ ಅದನ್ನು ಜನರು ಬಳಸಲು ಸಾಧ್ಯವಾಗಲಿದೆ ಎಂದು ತಿಳಿಸಿದೆ. ಟು ಸ್ಟೆಪ್ ವೆರಿಫಿಕೇಷನ್ ಸೌಲಭ್ಯ ಈಗಾಗಲೇ ಮೊಬೈಲ್ ಅಪ್ಲಿಕೇಶನ್‍ನಲ್ಲಿ ಲಭ್ಯವಿದೆ. ಇದನ್ನೂ ಓದಿ: ಪೆಗಾಸಸ್‌ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ಗೆ ಮನವಿ

    ಇತ್ತೀಚೆಗೆ ವಾಟ್ಸಪ್‍ನಲ್ಲಿ ಫೋಟೋ ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುವ ವಿಧಾನವನ್ನೂ ಬದಲಾಯಿಸುವುದಾಗಿ ವಾಟ್ಸಪ್ ತಿಳಿಸಿತ್ತು. ಇದರ ಬಗ್ಗೆ ಬೀಟಾ ಅಪ್ಡೇಟ್‍ನಲ್ಲಿ ಸುಳಿವು ನೀಡಿತ್ತು.

  • 12 ವಾಟ್ಸಪ್ ಗ್ರೂಪ್‍ನಲ್ಲಿ ಚುನಾವಣಾ ಪ್ರಚಾರ: ಅಡ್ಮಿನ್‍ಗಳಿಗೆ ನೋಟಿಸ್

    12 ವಾಟ್ಸಪ್ ಗ್ರೂಪ್‍ನಲ್ಲಿ ಚುನಾವಣಾ ಪ್ರಚಾರ: ಅಡ್ಮಿನ್‍ಗಳಿಗೆ ನೋಟಿಸ್

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ರಂಗೇರುತ್ತಿದ್ದು, ವಾಟ್ಸಪ್ ಗ್ರೂಪ್‍ನಲ್ಲಿ ಪ್ರಚಾರ ಮಾಡಿದ್ದಕ್ಕೆ 12 ಗ್ರೂಪ್‍ಗಳ ಅಡ್ಮಿನ್‍ಗಳಿಗೆ ನೋಟಿಸ್ ಜಾರಿಯಾಗಿದೆ.

    ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ 12 ಖಾಸಗಿ ವಾಟ್ಸಾಪ್ ಗ್ರೂಪ್‍ಗಳ ಅಡ್ಮಿನ್‍ಗಳಿಗೆ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ (ಎಂಸಿಎಂಸಿ) ನೋಟಿಸ್ ಕಳುಹಿಸಿದೆ. ಮುಖ್ಯ ವಿಷಯವೆಂದರೆ ನೋಟಿಸ್ ಪಡೆದವರು ಯಾರೂ ಗ್ರೂಪ್‍ನಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂದೇಶ ಕಳುಹಿಸಲಿಲ್ಲ. ಆದರೆ ಗುಂಪುನ ಸದಸ್ಯರೊಬ್ಬರು ಕಳುಹಿಸಿದ ಸಂದೇಶದಿಂದ ಅಡ್ಮಿನ್‍ಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.

    ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ಖಾಸಗಿ ವಾಟ್ಸಾಪ್ ಗುಂಪಿನಲ್ಲಿ ಅಭ್ಯರ್ಥಿ ಪರ ಮತ ಚಲಾಯಿಸಲು ಪ್ರೇರೇಪಿಸುವುದು ತಪ್ಪು. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಇಂತಹ ಸಂದೇಶವನ್ನು ಯಾರಾದರೂ ಸ್ಕ್ರೀನ್ ಶಾಟ್ ತೆಗೆದು ಅದನ್ನು ಚುನಾವಣಾ ಆಯೋಗದ ಅಪ್ಲಿಕೇಶನ್ ಸಿವಿಜಿಲ್ (cVigil) ಆ್ಯಪ್‍ಗೆ ಕಳುಹಿಸಿದರೆ ಆಯೋಗವು ಆ ಗುಂಪಿನ ಅಡ್ಮಿನ್‍ಗಳಿಗೆ ನೋಟಿಸ್ ನೀಡುತ್ತದೆ.

    ಈ ನಿಯಮವು ವಾಟ್ಸಾಪ್ ಗ್ರೂಪ್‍ಗೆ ಮಾತ್ರವಲ್ಲ ಫೇಸ್‍ಬುಕ್ ಮತ್ತು ಟ್ವಿಟರ್ ಗಳಿಗೂ ಅನ್ವಯಿಸುತ್ತದೆ. ಎರಡು ವರ್ಷಗಳ ಹಿಂದೆ ಅಮೆರಿಕದಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣದ ನಂತರ, ಚುನಾವಣಾ ರಂಗದಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ ಬಹಳ ಮುಖ್ಯವಾಗಿದೆ. ಇದರ ಪ್ರಾಮುಖ್ಯತೆಯನ್ನು ಭಾರತದಲ್ಲಿಯೂ ತಿಳಿಯಬಹುದಾಗಿದೆ.

    ಸಿವಿಜಿಲ್ ಆ್ಯಪ್‍ನಲ್ಲಿ 1200 ದೂರು:
    ನಂದೇಡ್ ಎಂಸಿಎಂಸಿ ಮುಖ್ಯಸ್ಥ ರಾಜೇಂದ್ರ ಚವಾಣ್, ಯಾವುದೇ ಅಭ್ಯರ್ಥಿಯು ಮುದ್ರಣ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ಕುರಿತು ಚುನಾವಣಾ ಆಯೋಗದಿಂದ ಅನುಮತಿ ಪಡೆಯಬೇಕು. ಯಾರಾದರೂ ಅನುಮತಿಯಿಲ್ಲದೆ ಮಾಧ್ಯಮದಲ್ಲಿ ಪ್ರಚಾರ ಕೈಗೊಂಡರೆ ಅಭ್ಯರ್ಥಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ದಾಖಲಾಗುತ್ತದೆ. ಮಾಧ್ಯಮದಲ್ಲಿ ಹರಿಬಿಟ್ಟ ಸಂದೇಶವು ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಸಂಬಂಧಿಸಿದ್ದು ಎಂಬುದು ಮುಖ್ಯವಲ್ಲ. ಈ ಮೂಲಕ ಮಹಾರಾಷ್ಟ್ರದಲ್ಲಿ ನೀತಿ ಸಂಹಿತೆ ಜಾರಿಯಾದ ಬಳಿಕ ಒಟ್ಟು ಸಿವಿಜಿಲ್ ಅಪ್ಲಿಕೇಶನ್‍ಗೆ 1,200 ದೂರುಗಳು ಬಂದಿವೆ ಎಂದು ಮಾಹಿತಿ ನೀಡಿದ್ದಾರೆ.

    ನೋಟಿಸ್ ಜಾರಿಯಾಗಿರುವ 12 ವಾಟ್ಸಪ್ ಗ್ರೂಪ್‍ಗಳ ಅಡ್ಮಿನ್‍ಗಳು ತಮ್ಮ ಗ್ರೂಪ್‍ನಲ್ಲಿ ಪ್ರಚಾರವನ್ನು ನಿಲ್ಲಿಸಲು ಹಾಗೂ ಅದಕ್ಕೆ ಸೂಕ್ತ ಪ್ರತಿಕ್ರಿಯೆ ಕಾರಣವನ್ನು ಒಂದು ವಾರದೊಳಗೆ ಚುನಾವಣಾ ಆಯೋಗಕ್ಕೆ ನೀಡಬೇಕಾಗಿದೆ. ಹಿರಿಯ ಅಧಿಕಾರಿಗಳು ನೋಟಿಸ್ ಪಡೆದ ಅಡ್ಮಿನ್‍ಗಳಿ ಶಿಕ್ಷೆ ವಿಧಿಸಲ್ಲ. ಆದರೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುತ್ತಾರೆ. ಒಂದು ವೇಳೆ ಮತ್ತೆ ನೀತಿ ಸಂಹಿತೆ ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಅಭ್ಯರ್ಥಿಯು ಸಾಮಾಜಿಕ ಜಾಲತಾಣದಲ್ಲಿ ತನ್ನ ಖಾತೆ ಮೂಲಕ ಪ್ರಚಾರ ನಡೆಸುತ್ತಿರುವ ಬಗ್ಗೆ ತಿಳಿದಿದ್ದರೆ ಅವರನ್ನು ಚುನಾವಣಾ ಕಣದಿಂದ ವಜಾ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಕೆಲವು ಪ್ರಕರಣದಲ್ಲಿ ಮುಂದಿನ ನಾಲ್ಕು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವುದರಿಂದ ಅವರನ್ನು ಅನರ್ಹಗೊಳಿಸಬಹುದು.

    ಫೇಸ್‍ಬುಕ್ ಮೇಲೆ ನಿಗಾ ಇಡಲಾಗುತ್ತಿದೆ. ಕಾಂಗ್ರೆಸ್, ಎಂಎನ್‍ಎಸ್ ಮತ್ತು ಶಿವಸೇನೆಗೆ ಸಂಬಂಧಿಸಿದ ನಾಲ್ಕು ಫೇಸ್‍ಬುಕ್ ಪುಟಗಳಿಗೆ ಅನುಮತಿಯಿಲ್ಲದೆ ಪ್ರಚಾರ ಮಾಡದಿರಲು ನೋಟಿಸ್ ಕಳುಹಿಸಲಾಗಿದೆ ಎಂದು ಮುಂಬೈ ನಗರ ಜಿಲ್ಲಾಧಿಕಾರಿ ಶಿವಾಜಿ ಜೊನಾಧಲೆ ತಿಳಿಸಿದ್ದಾರೆ.

  • ಪಾಕಿಸ್ತಾನ್ ಜಿಂದಾಬಾದ್ ಮೆಸೇಜ್ – ಆರೋಪಿ, ಗ್ರೂಪ್ ಅಡ್ಮಿನ್‍ಗೆ ಜಾಮೀನಿಲ್ಲ

    ಪಾಕಿಸ್ತಾನ್ ಜಿಂದಾಬಾದ್ ಮೆಸೇಜ್ – ಆರೋಪಿ, ಗ್ರೂಪ್ ಅಡ್ಮಿನ್‍ಗೆ ಜಾಮೀನಿಲ್ಲ

    ಬೆಂಗಳೂರು: ವಾಟ್ಸಪ್ ಗ್ರೂಪ್‍ನಲ್ಲಿ ಏನ್ ಮೆಸೇಜ್ ಮಾಡಿದರೂ ಯಾರು ಏನು ಮಾಡುವುದಕ್ಕೆ ಆಗುವುದಿಲ್ಲ ಎನ್ನುವವರಿಗೆ ಮಂಗಳವಾರ ಹೈಕೋರ್ಟ್ ಸರಿಯಾಗಿ ಚಾಟಿ ಬೀಸಿದೆ.

    ವಾಟ್ಸಪ್ ಗ್ರೂಪ್‍ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂತ ಮೆಸೇಜ್ ಹಾಕಿದ್ದ ಸದಸ್ಯ ಹಾಗೂ ಅಡ್ಮಿನ್‍ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಈ ಮೂಲಕ ಗ್ರೂಪ್ ಅಡ್ಮಿನ್ ಗಳು ಹಾಗೂ ಮೆಸೇಜ್ ಹಾಕಿದ ಓರ್ವ ಸೇರಿದಂತೆ ಮೂವರ ಜೈಲುವಾಸ ಮುಂದುವರಿಯಲಿದೆ.

    ಪ್ರಕರಣದ ಕುರಿತು ಇಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರರಾವ್ ಅವರು, ಘೋಷಣೆ ಒಂದೆರಡು ವಾಕ್ಯವಿರಬಹುದು. ಆದರೆ ಅದರ ಪರಿಣಾಮ ಮಾತ್ರ ತೀವ್ರ ಸ್ವರೂಪದ್ದಾಗಿದೆ. ಹೀಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿ ಜಾಮೀನು ನೀಡಲು ನಿರಾಕರಿಸಿದರು.

    ಏನಿದು ಪ್ರಕರಣ?:
    ಮುಸ್ತಾಫ್, ಶಬ್ಬೀರ್ ಸಾಬ್ ಹಾಗೂ ಚಾಂದ್ ಪಾಷಾ ಎಂಬವರು ಪಾಕಿಸ್ತಾನ್ ಜಿಂದಾಬಾದ್ ಅಂತ 2018ರ ಆಗಸ್ಟ್ 14ರಂದು ತಮ್ಮ ವಾಟ್ಸಪ್ ಗ್ರೂಪ್‍ನಲ್ಲಿ ಮೆಸೆಜ್ ಮಾಡಿದ್ದರು. ಇದರಿಂದ ಆಕ್ರೋಶ ಹೊರಹಾಕಿದ ಹನುಮನಗೌಡ ಎಂಬವರು ರಾಜದ್ರೋಹದ ಅಡಿಯಲ್ಲಿ ಕೊಪ್ಪಳದ ಕನಕಗಿರಯ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು.

    ಈ ಕುರಿತು ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯವು ಕೂಡ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕಾರ ಮಾಡಿತ್ತು. ಹೀಗಾಗಿ ಅದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಕೂಡ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ವಾಟ್ಸಪ್ ಗ್ರೂಪ್ ಅಡ್ಮಿನ್ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ!

    ವಾಟ್ಸಪ್ ಗ್ರೂಪ್ ಅಡ್ಮಿನ್ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ!

    ಚಂಡೀಗಢ: ವಾಟ್ಸಪ್‍ನಲ್ಲಿ ಪೋಸ್ಟ್ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಗ್ರೂಪ್ ಅಡ್ಮಿನ್ ಒಬ್ಬ ಸದಸ್ಯನನ್ನು ಕೊಲೆ ಮಾಡಿದ ಘಟನೆ ಹರ್ಯಾಣದ ಸೋನಿಪತ್ ಜಿಲ್ಲೆಯಲ್ಲಿ ನಡೆದಿದೆ.

    ಹತ್ಯೆಯಾದ ವ್ಯಕ್ತಿ ಲವಕುಮಾರ್ ಎಂದು ತಿಳಿದು ಬಂದಿದ್ದು, ಆರೋಪಿ ದಿನೇಶ್ ಕುಮಾರ್ ಅಲಿಯಾಸ್ ಬಂಟಿ ವಿರುದ್ಧ ಲವ ಕುಮಾರನ ಸಂಬಂಧಿಕರು ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸ್ ಅಧಿಕಾರಿ ನರೇಂದ್ರ ಕುಮಾರ್ ಮಾತನಾಡಿ ಆರೋಪಿಯ ವಿರುದ್ಧ ಕೊಲೆ, ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ಲವ ಕುಮಾರ್ ವಾಹನಗಳ ಎಸಿ ರಿಪೇರಿ ವ್ಯಾಪಾರ ಮಾಡುತ್ತಿದ್ದು, ಮೂಲತಃ ಚಿನ್ನದ ವರ್ತಕ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ದಿನೇಶ್ ಕುಮಾರ್ ಸೋಪು ವ್ಯಾಪಾರ ಕೆಲಸ ಮಾಡಿಕೊಂಡಿದ್ದನು. ಇಬ್ಬರು ಸ್ಥಳೀಯ ನಿವಾಸಿಗಳಾಗಿದ್ದು, ಪರಸ್ಪರ ಪರಿಚಯಸ್ಥರಾಗಿದ್ದಾರೆ. ದಿನೇಶ್ `ಜೋಹ್ರಿ’ ಎಂಬ ವಾಟ್ಸಪ್ ಗ್ರೂಪ್ ರಚಿಸಿ ಗ್ರೂಪ್ ಅಡ್ಮಿನ್ ಆಗಿದ್ದನು.

    ಘಟನಾ ವಿವರ:
    ವಾಟ್ಸಪ್‍ನಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದ ವಸ್ತುಗಳ ಕುರಿತು ದಿನೇಶ್ ಸಂದೇಶ ಹಾಕಿದ್ದ. ಇದನ್ನು ಪ್ರಶ್ನಿಸಿದ ಲವಕುಮಾರ್ ಮತ್ತು ಇತರೆ ಸದಸ್ಯರು ವಾಟ್ಸಪ್‍ನಲ್ಲಿಯೇ ಕಿತ್ತಾಡಿಕೊಂಡಿದ್ದರು. ಈ ಸಂಬಂಧ ಮಾತನಾಡಲು ಆರೋಪಿಗೆ ಕರೆ ಮಾಡಿದಾಗ ಅಂಗಡಿ ಹತ್ತಿರ ಬರುವಂತೆ ಹೇಳಿದ್ದಾನೆ. ಲವ ತನ್ನ ತಮ್ಮ ಮೋನಿ ಹಾಗೂ ಸಂಬಂಧಿಕರೊಂದಿಗೆ ಅವನ ಅಂಗಡಿಗೆ ತೆರಳಿದ್ದಾರೆ. ಅಂಗಡಿಯಲ್ಲಿ ದಿನೇಶ್ ಸಿಕ್ಕಿಲ್ಲ, ಬಳಿಕ ಕರೆ ಮಾಡಿ ಮನೆಗೆ ಬರುವಂತೆ ಸೂಚಿಸಿದ್ದಾನೆ.

    ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ದಿನೇಶ್ ಮತ್ತು ಸಂಗಡಿಗರು, ಮನೆಗೆ ಬಂದ ಲವ ಕುಮಾರ್ ಮತ್ತು ಸಂಬಂಧಿಕರ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡು ಲವಕುಮಾರ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ, ಶವವನ್ನು ಪರೀಕ್ಷೆಗೆ ರವಾನಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೆ ವಾಟ್ಸಪ್‍ನಲ್ಲಾದ ಜಗಳವೇ ಕಾರಣವೆಂದು ತಿಳಿದು ಬಂದಿದ್ದು. ಗ್ರೂಪ್ ಅಡ್ಮಿನ್ ಆದ ದಿನೇಶ್ ಪ್ರಮುಖ ಆರೋಪಿಯಾಗಿದ್ದಾನೆ. ಕೃತ್ಯಕ್ಕೆ ಸಹಾಯ ಮಾಡಿದ ಆರೋಪಿಗಳ ಗುರುತು ಪತ್ತೆಯಾಗಿದ್ದು, ಶೀಘ್ರವೇ ಬಂಧಿಸಲಾಗುವುದು. ಕೃತ್ಯಕ್ಕೆ ಬಳಸಿದ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.