Tag: ಗ್ರೀನ್ ಝೋನ್

  • ಗ್ರೀನ್‍ಝೋನ್ ರಾಯಚೂರು ಜಿಲ್ಲೆಯಾದ್ಯಂತ ರಾತ್ರೋರಾತ್ರಿ ನಿಷೇಧಾಜ್ಞೆ ಜಾರಿ

    ಗ್ರೀನ್‍ಝೋನ್ ರಾಯಚೂರು ಜಿಲ್ಲೆಯಾದ್ಯಂತ ರಾತ್ರೋರಾತ್ರಿ ನಿಷೇಧಾಜ್ಞೆ ಜಾರಿ

    ರಾಯಚೂರು: ಗ್ರೀನ್ ಝೋನ್ ನಲ್ಲಿದ್ದ ರಾಯಚೂರು ಜಿಲ್ಲೆಯಾದ್ಯಂತ ಭಾನುವಾರ ರಾತ್ರೋರಾತ್ರಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

    ಮೇ 31ರವರೆಗೆ ನಿಷೇಧಾಜ್ಞೆ ನಿಷೇಧಾಜ್ಞೆ ಮುಂದುವರಿಸಿ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

    ಸಂಜೆ 7 ರಿಂದ ಬೆಳಗ್ಗೆ 7ರವರೆಗೆ ಜನರು ಓಡಾಡದಂತೆ ಎಚ್ಚರಿಕೆ ನೀಡಲಾಗಿದೆ. ಂಮಹಾರಾಷ್ಟ್ರದ ಮುಂಬೈ ನಂಟಿನಿಂದ ರಾಯಚೂರಿನಲ್ಲಿ ಆತಂಕ ಸೃಷ್ಟಿಯಾಗಿದೆ. ಮುಂಬೈನಿಂದ ಬಂದ 6 ಮಂದಿಯಲ್ಲಿ ಕೊರೊನಾ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿಗಳಿಂದ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

    ಮುಂಬೈನಿಂದ ಬಂದ ಕೂಲಿ ಕಾರ್ಮಿಕರಲ್ಲಿ ಪಾಸಿಟಿವ್ ಶಂಕೆ ಇದ್ದು, ದೇವದುರ್ಗದಲ್ಲಿ ಇಬ್ಬರು, ರಾಯಚೂರು ನಗರದಲ್ಲಿ ನಾಲ್ಕು ಜನರಲ್ಲಿ ಸೋಂಕು ಇರುವ ಸಂಬಂಧ ಶಂಕೆ ವ್ಯಕ್ತವಾಗಿದೆ.

    ಅಧಿಕಾರಿಗಳು ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡುತ್ತಿದ್ದಾರೆ. ಈ ಮೂಲಕ ಗ್ರೀನ್ ಝೋನ್ ಜಿಲ್ಲೆಯಲ್ಲಿ ಹಳದಿ ಝೋನ್ ವಾತಾವರಣ ನಿರ್ಮಾಣವಾಗಿದೆ. ಇದೂವರೆಗೆ ಜಿಲ್ಲೆಯಲ್ಲಿ 96 ಜನ ಆಸ್ಪತ್ರೆ ಐಸೋಲೆಷನ್ ನಲ್ಲಿದ್ದಾರೆ. 8,938 ಮಂದಿ ಸರ್ಕಾರಿ ಕ್ವಾರಂಟೈನ್ ನಲ್ಲಿದ್ದಾರೆ. ಇಲ್ಲಿಯವರೆಗೂ ಪ್ರಯೋಗಾಲಯಕ್ಕೆ ಕಳುಹಿಸಿದ್ದ 2,853 ಜನರ ವರದಿ ನೆಗೆಟಿವ್ ಬಂದಿದ್ದು, ಇನ್ನೂ 708 ಜನರ ವರದಿ ಬರಬೇಕಾಗಿದೆ.

  • ಗ್ರೀನ್ ಝೋನ್‍ನಲ್ಲಿಯೇ ಮುಂದುವರಿದ ಕೊಪ್ಪಳ – ನಿಟ್ಟುಸಿರು ಬಿಟ್ಟ ಜಿಲ್ಲೆಯ ಜನ

    ಗ್ರೀನ್ ಝೋನ್‍ನಲ್ಲಿಯೇ ಮುಂದುವರಿದ ಕೊಪ್ಪಳ – ನಿಟ್ಟುಸಿರು ಬಿಟ್ಟ ಜಿಲ್ಲೆಯ ಜನ

    ಕೊಪ್ಪಳ: ಜಿಲ್ಲೆಗೆ ಭೇಟಿ ಕೊಟ್ಟು ಹೋಗಿದ್ದ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಕೊರೊನಾ ಸೊಂಕಿತ ವ್ಯಕ್ತಿಯ ಪ್ರಕರಣದಿಂದ ಆತಂಕ್ಕಕ್ಕೊಳಗಾದ ಕೊಪ್ಪಳ ಜನತೆ ಈಗ ಬಿಗ್ ರಿಲೀಫ್ ಸಿಕ್ಕಂತಾಗಿದೆ.

    ಕಂಪ್ಲಿ ನಿವಾಸಿಯಲ್ಲಿ ಕೊರೊನಾ ಸೋಂಕು ಧೃಡ ಪಡುತ್ತಿದಂತೆ ಆತನ ಪ್ರಥಮ ಸಂಪರ್ಕ ಹೊಂದಿದ್ದ ಕೊಪ್ಪಳ ಜಿಲ್ಲೆಯ 34 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಎಲ್ಲರ ವರದಿ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

    ಮೇ 5ರಂದು ಬೆಂಗಳೂರಿನಿಂದ ಗಂಗಾವತಿಗೆ ಆಗಮಿಸಿದ್ದ ಕಂಪ್ಲಿ ನಿವಾಸಿ ನಂತರ ಕಂಪ್ಲಿಗೆ ವಾಪಸ್ ತೆರಳಿದ್ದರು. ಕಂಪ್ಲಿಗೆ ಸೇರುತ್ತಿದಂತೆ ಅವರಿಗೆ ಕೊರೊನಾ ವೈರಸ್ ಸೋಂಕಿರುವುದು ದೃಢ ಪಟ್ಟಿದೆ ಎಂದು ವರದಿಯಾಗಿದೆ. ಹೀಗಾಗಿ ಆತನೊಂದಿಗೆ ಬಸ್ಸಿನಲ್ಲಿ ಆಗಮಿಸಿದ ಪ್ರಯಾಣಿಕರು, ಬಸ್ ಚಾಲಕ ಸೇರಿದಂತೆ ಪ್ರಥಮ ಚಿಕಿತ್ಸೇ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೇರಿ, ಒಟ್ಟು 34 ಜನರನ್ನ ಕ್ವಾರಂಟೈನ್ ಮಾಡಲಾಗಿತ್ತು.

    ಜಿಲ್ಲೆಯ ಜನತೆಯ ಚಿತ್ತ ಅವರ ವರದಿ ಮೇಲೆ ಇತ್ತು ಈಗ ಅವರೆಲ್ಲರ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆ ಮತ್ತೊಮ್ಮೆ ಕೊರೊನಾದಿಂದ ಸೇಫ್ ಆದಂತಾಗಿದೆ. ಕೊರೊನಾ ಭೀತಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಕಾರ್ಯಕ್ಕೆ ಜಿಲ್ಲೆಯ ಜನತೆ ಶಹಬ್ಬಾಶ್ ಹೇಳುತ್ತಿದ್ದಾರೆ. ಇನ್ನೂ ಜಿಲ್ಲಾಡಳಿತ ಇಲ್ಲಿವರೆಗೆ 1,268 ಜನರ ಸ್ಯಾಂಪಲ್ ಕಳಿಸಿದ್ದು, ಎಲ್ಲರ ವರದಿ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆ ಗ್ರೀನ್ ಝೋನ್ ಪಟ್ಟಿಯಲ್ಲಿ ಮುಂದುವರೆದಿದೆ.

  • ಇದ್ದಕ್ಕಿದ್ದಂತೆ ಯಾದಗಿರಿಯಲ್ಲಿ ಲಾಕ್‍ಡೌನ್ ಮತ್ತಷ್ಟು ಬಿಗಿ

    ಇದ್ದಕ್ಕಿದ್ದಂತೆ ಯಾದಗಿರಿಯಲ್ಲಿ ಲಾಕ್‍ಡೌನ್ ಮತ್ತಷ್ಟು ಬಿಗಿ

    ಯಾದಗಿರಿ: ಗ್ರೀನ್ ಝೋನ್ ನಲ್ಲಿರುವ ಯಾದಗಿರಿಯಲ್ಲಿ ಸಡಿಲಿಕೆಯಾಗಿದ್ದ ಲಾಕ್ ಡೌನ್ ಅನ್ನು ದಿಢೀರ್ ಆಗಿ ಮತ್ತಷ್ಟು ಬಿಗಿ ಮಾಡಲಾಗಿದೆ.

    ಜಿಲ್ಲೆಯಲ್ಲಿ ಕೊರೊನಾ ಸೊಂಕು ಹರಡುವ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೊದಲನೆಯ ಹಂತದಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಮಧ್ಯರಾತ್ರಿವರೆಗೂ ಮತ್ತೆ ಬೀಗಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

    ಕೇವಲ ತರಕಾರಿ ಮತ್ತು ಆಸ್ಪತ್ರೆ, ಮೆಡಿಕಲ್ ಶಾಪ್ ತೆರೆಯಲು ಮಾತ್ರ ಅವಕಾಶ ನೀಡಲಾಗಿದೆ. ಇದರ ಜೊತೆಗೆ ವೈನ್ ಶಾಪ್ ಸಹ ಬಂದ್ ಮಾಡಲಾಗಿದೆ. ಜಿಲ್ಲಾಧಿಕಾರಿ ಎಂ ಕೂರ್ಮರಾವ್ ಸೂಚನೆ ಮೇರೆಗೆ ಸಹಾಯಕ ಆಯುಕ್ತ ಶಂಕರಗೌಡ ಈ ಆದೇಶವನ್ನು ಹೊರಡಿಸಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ಸಹಾಯಕ ಆಯುಕ್ತ ಶಂಕರಗೌಡ ಕೂಡ ಸ್ಪಷ್ಟಪಡಿಸಿದ್ದಾರೆ.

    ಒಟ್ಟಿನಲ್ಲಿ ಇಡೀ ಯಾದಗಿರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಯಾದಗಿರಿ ಜಿಲ್ಲಾಡಳಿತದ ಈ ದಿಢೀರ್ ನಡೆ ಗ್ರೀನ್ ಝೋನ್ ಜಿಲ್ಲೆಗೂ ಕೊರೊನಾ ಕಂಟಕ ಎದುರಾಯ್ತಾ ಅನ್ನೊ ಪ್ರಶ್ನೆ ಮೂಡಿದೆ.

  • 14 ದಿನದ ಷರತ್ತಿಗೆ ಒಪ್ಪುವುದಾದ್ರೆ ಉಡುಪಿಗೆ ಸ್ವಾಗತ: ಜಿಲ್ಲಾಧಿಕಾರಿ ಜಿ. ಜಗದೀಶ್

    14 ದಿನದ ಷರತ್ತಿಗೆ ಒಪ್ಪುವುದಾದ್ರೆ ಉಡುಪಿಗೆ ಸ್ವಾಗತ: ಜಿಲ್ಲಾಧಿಕಾರಿ ಜಿ. ಜಗದೀಶ್

    ಉಡುಪಿ: ಹೊರ ದೇಶ ಮತ್ತು ಹೊರ ರಾಜ್ಯದಿಂದ ಬರುವವರು ಸರ್ಕಾರಿ ಕ್ವಾರಂಟೈನ್ ಒಪ್ಪುವುದಾದರೆ ಉಡುಪಿ ಜಿಲ್ಲೆಗೆ ನಿಮಗೆ ಸ್ವಾಗತ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.

    ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೊರ ದೇಶ ಮತ್ತು ಹೊರ ರಾಜ್ಯದಿಂದ ಉಡುಪಿ ಜಿಲ್ಲೆಗೆ ಬರುವವರು ಸೇವಾ ಸಿಂಧು ಆ್ಯಪ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಿ. ನಿಮ್ಮ ಮೊಬೈಲ್‍ಗೆ ಈ ಪಾಸ್ ಬರುತ್ತದೆ. ತಪಾಸಣೆ ಮಾಡಿ ಉಡುಪಿ ಜಿಲ್ಲಾ ಪ್ರವೇಶ ಮಾಡಬಹುದು ಎಂದು ಡಿಸಿ ಜಗದೀಶ್ ಮಾಹಿತಿ ನೀಡಿದರು.

    ಉಡುಪಿ ಜಿಲ್ಲೆಯಲ್ಲಿ ಕಳೆದ ನಲವತ್ತು ದಿನಗಳಿಂದ ಯಾವುದೇ ಪಾಸಿಟಿವ್ ಕೇಸುಗಳು ಇಲ್ಲ. ಹಾಗಾಗಿ ಕೇಂದ್ರ ಸರ್ಕಾರ ಉಡುಪಿ ಜಿಲ್ಲೆಯನ್ನು ಗ್ರೀನ್ ಝೋನ್ ಎಂದು ಘೋಷಣೆ ಮಾಡಿದೆ. ಜಿಲ್ಲೆಯನ್ನು ಗ್ರೀನ್ ಝೋನ್ ವ್ಯಾಪ್ತಿಯಲ್ಲಿ ಮುಂದುವರಿಸಲು ಹೊರ ರಾಜ್ಯ ಮತ್ತು ಹೊರ ದೇಶದಿಂದ ಬರುವವರು ಸಹಕರಿಸಿ ಎಂದು ವಿನಂತಿ ಮಾಡಿದ್ದಾರೆ. ಈ ಪಾಸ್ ತೆಗೆದುಕೊಂಡು ಬಂದವರನ್ನು ಹದಿನಾಲ್ಕು ದಿನ ಕಡ್ಡಾಯವಾಗಿ ಸರ್ಕಾರ ಕ್ವಾರಂಟೈನ್ ಮಾಡುತ್ತೇವೆ. ಈಗಾಗಲೇ ಹಾಸ್ಟೆಲ್ ಗಳನ್ನು ನಿಗದಿ ಮಾಡಿದ್ದೇವೆ. ಉಪಹಾರ ಮತ್ತು ಊಟವನ್ನು ಉಚಿತವಾಗಿ ಕೊಡುತ್ತೇವೆ. ಕ್ವಾರಂಟೈನ್ ಅವಧಿ ಮುಗಿಸಿ ಅವರು ಸೇಫ್ ಆಗಿ ಮನೆಗೆ ಹೋಗಬಹುದು ಎಂದು ಡಿಸಿ ಹೇಳಿದರು.

    ಸರ್ಕಾರಿ ವ್ಯವಸ್ಥೆಯಲ್ಲಿ ಉಳಿದುಕೊಳ್ಳುವ ಇಚ್ಛೆ ಇಲ್ಲದಿದ್ದರೆ ಹೋಟೆಲ್ ಅಥವಾ ಲಾಡ್ಜಿಂಗ್ ಅರೇಂಜ್ಮೆಂಟ್ ಮಾಡುತ್ತೇವೆ. ಅಲ್ಲಿನ ಸಂಪೂರ್ಣ ವೆಚ್ಚವನ್ನು ಅವರೇ ಭರಿಸತಕ್ಕದ್ದು ಎಂದು ಅವರು ತಿಳಿಸಿದರು. ಜನಪ್ರತಿನಿಧಿಗಳು, ಅಧಿಕಾರಿಗಳು, ವೈದ್ಯರ ತಂಡ ಸಭೆ ನಡೆಸಿ ಈ ತೀರ್ಮಾನಕ್ಕೆ ಬಂದಿರುವುದಾಗಿ ಅವರು ಹೇಳಿದರು.

  • ಪಾದರಾಯನಪುರ ಕೇಸ್- ಎಲ್ಲ ಸಿಬ್ಬಂದಿಗೆ ನೆಗೆಟಿವ್, ಗ್ರೀನ್ ಝೋನ್‍ನಲ್ಲಿ ರಾಮನಗರ

    ಪಾದರಾಯನಪುರ ಕೇಸ್- ಎಲ್ಲ ಸಿಬ್ಬಂದಿಗೆ ನೆಗೆಟಿವ್, ಗ್ರೀನ್ ಝೋನ್‍ನಲ್ಲಿ ರಾಮನಗರ

    – ಅಶ್ವತ್ಥ ನಾರಾಯಣ ಕ್ವಾರಂಟೈನ್ ಅವಧಿ ಮುಕ್ತಾಯ

    ಬೆಂಗಳೂರು: ಪಾದರಾಯನಪುರ ಪ್ರಕರಣದಿಂದ ಆತಂಕಕ್ಕೆ ಒಳಗಾಗಿದ್ದ ರಾಮನಗರ ಜಿಲ್ಲೆಯ ಜನರಿಗೆ ಗುಡ್‍ನ್ಯೂಸ್ ಸಿಕ್ಕಿದೆ. ಪಾದರಾಯನಪುರ ಗಲಭೆಯ ಆರೋಪಿಗಳ ನಿಗಾವಹಿಸಿದ್ದ ವಿವಿಧ ಇಲಾಖೆಗಳ ಸಿಬ್ಬಂದಿಗೆ ಕೊರೊನಾ ಟೆಸ್ಟ್ ವರದಿಯು ನೆಗೆಟಿವ್ ಬಂದಿದೆ.

    ಈ ಕುರಿತು ಟ್ವಿಟ್ ಮಾಡಿರುವ ಅಶ್ವತ್ಥ ನಾರಾಯಣ ಅವರು, ರಾಮನಗರದ ಜಿಲ್ಲಾ ಕಾರಾಗೃಹದಲ್ಲಿ ಪಾದರಾಯನಪುರ ಗಲಭೆಯ ಆರೋಪಿಗಳ ನಿಗಾವಹಿಸಿದ್ದ ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿ ಒಟ್ಟು 68 ಮಂದಿಯ ಎರಡನೇ ಬಾರಿಯ ಕೊರೊನಾ ತಪಾಸಣೆ ಫಲಿತಾಂಶಗಳು ಕೂಡ ನೆಗೆಟಿವ್ ಬಂದಿವೆ. ಈ ಸಂತಸದ ಸುದ್ದಿಯನ್ನು ಹಂಚಿಕೊಳ್ಳುತ್ತಾ, ರಾಮನಗರ ಜಿಲ್ಲೆ ಗ್ರೀನ್ ಝೋನ್‍ನಲ್ಲೇ ಉಳಿದಿದೆ ಎಂದು ಹೇಳಬಯಸುತ್ತೇನೆ ಎಂದು ತಿಳಿಸಿದ್ದಾರೆ.

    ಪಾದರಾಯನಪುರದ ಪುಂಡರು ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಗಲಭೆ ಎಬ್ಬಿಸಿದ್ದ 124 ಮಂದಿಯಲ್ಲಿ ಐವರಿಗೆ ಕೊರೊನಾ ಸೋಂಕು ಹಬ್ಬಿದೆ. ಅವರು ಕಾಲಿಟ್ಟಿದ್ದ ರಾಮನಗರ ಜಿಲ್ಲೆಗೂ ಕೊರೊನಾ ಸೋಂಕು ಹಬ್ಬುವ ಭೀತಿ ಎದುರಾಗಿತ್ತು. ಅದೃಷ್ಟವಶಾತ್ ಯಾವುದೇ ಸಿಬ್ಬಂದಿಗೆ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ರಾಮನಗರ ಜಿಲ್ಲೆಯ ಜನರು ನಿಟ್ಟುಸಿರುಬಿಟ್ಟಿದ್ದಾರೆ.

    ಪಾದರಾಯನಪುರದ ಪುಂಡರಲ್ಲಿ ಐವರಿಗೆ ಕೊರೊನಾ ಹೇಗೆ ಬಂತು ಎನ್ನುವುದು ಈಗ ಆರೋಗ್ಯ ಇಲಾಖೆಗೆ ಸವಾಲಾಗಿದೆ. ಈ ಪುಂಡರು ಕೊರೊನಾ ಸೋಂಕಿತರ ಪ್ರಾಥಮಿಕ ಅಥವಾ ಸೆಕೆಂಡರಿ ಸಂಪರ್ಕದಲ್ಲಿದ್ದ ಬಗ್ಗೆ ಮಾಹಿತಿ ಇಲ್ಲ. ಅವರಿಗೆ ಕೊರೊನಾ ಹಬ್ಬಿದ್ದು ಹೇಗೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ಪತ್ತೆ ಮಾಡುತ್ತಿದೆ.

    ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಅವರು, ನನ್ನ ಸೆಲ್ಫ್ ಕ್ವಾರಂಟೈನ್ ಅವಧಿ ಇಂದು ಮುಕ್ತಾಯವಾಗಿದೆ. ಮತ್ತೆ ನೆಗೆಟಿವ್ ಫಲಿತಾಂಶ ಬಂದಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟದ ಕಾರ್ಯಗಳಲ್ಲಿ ಭಾಗಿಯಾಗಿದ್ದೇನೆ. ಎಂದಿನಂತೆ ಜನಸೇವೆ ಮಾಡಲು ಉತ್ಸುಕನಾಗಿದ್ದೇನೆ. ಈ ದಿನಗಳಲ್ಲಿ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ನನಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.

    ಕೊರೊನಾ ಸೋಂಕಿತ ಕ್ಯಾಮೆರಾಮೆನ್‍ನ ಪ್ರಾಥಮಿಕ ಸಂಪರ್ಕದಲ್ಲಿದ್ದ ಅಶ್ವತ್ಥ ನಾರಾಯಣ ಅವರು ಕಳೆದ ತಿಂಗಳ 29ರಿಂದ ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ ಆಗಿದ್ದರು. ಈಗ ಅವರ ಹೋಂ ಕ್ವಾರಂಟೈನ್ ಅವಧಿ ಮುಕ್ತಾಯಗೊಂಡಿದೆ.

  • ಗ್ರೀನ್ ಝೋನ್ ಚಿತ್ರದುರ್ಗಕ್ಕೆ ಬಂದ ತಬ್ಲಿಘಿಗಳು

    ಗ್ರೀನ್ ಝೋನ್ ಚಿತ್ರದುರ್ಗಕ್ಕೆ ಬಂದ ತಬ್ಲಿಘಿಗಳು

    ಚಿತ್ರದುರ್ಗ: ಕೊರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳದೆ ಗ್ರೀನ್ ಝೋನ್‍ನಲ್ಲಿರು ಚಿತ್ರದುರ್ಗಕ್ಕೆ ತಬ್ಲಿಘಿಗಳು ವಾಪಸ್ ಆಗಿದ್ದಾರೆ.

    ಭಾರತದಲ್ಲಿ ಕೊರೊನಾ ಶುರುವಾದಾಗ ವಿದೇಶಕ್ಕೆ ತೆರಳಿದ್ದ ಚಿತ್ರದುರ್ಗ ಮೂಲದ ಓರ್ವ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದ್ದದಿಂದ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದರು. ಮಹಿಳೆ ಗುಣಮುಖರಾಗಿ ಮನೆ ಸೇರಿದ ಬಳಿಕ ನಿಟ್ಟುಸಿರು ಬಿಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಯಾರಿಗೂ ಸೋಂಕು ಕಾಣಿಸಿಕೊಳ್ಳದೆ ಗ್ರೀನ್ ಝೋನ್‍ನಲ್ಲಿದೆ. ಆದರೆ ಮಂಗಳವಾರ ಗುಜರಾತ್‍ನಿಂದ ಬಂದಿರುವ 33ಜನ ತಬ್ಲಿಘಿಗಳು ಬಂದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದುರ್ಗ ಡಿಎಚ್‍ಓ ಡಾ.ಪಾಲಾಕ್ಷ ಅವರು, ಅದೃಷ್ಟವಶಾತ್ ಅವರೆಲ್ಲರೂ ಸಹ ಈಗಾಗಲೇ ಗುಜರಾತ್‍ನಲ್ಲಿ ತಪಾಸಣೆಗೊಳಪಟ್ಟಿದ್ದು, 30 ದಿನಗಳ ಕ್ವಾರಂಟೈನ್ ಸಹ ಮುಗಿಸಿದ್ದಾರೆ. ಆದರೂ ಅವರನ್ನು ಮುಂಜಾಗ್ರತಾಕ್ರಮವಾಗಿ ಚಿತ್ರದುರ್ಗದ ಸರ್ಕಾರಿ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಹಾಗೆಯೇ ಮತ್ತೊಮ್ಮೆ ಅವರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸುವುದರ ಜೊತೆಗೆ ಅವರ ಮೇಲೆ ಒಂದು ವಾರಗಳ ಕಾಲ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

    ಚಿತ್ರದುರ್ಗಕ್ಕೆ ವಾಪಸ್ ಆಗಿರುವ ತಬ್ಲಿಘಿಗಳೆಲ್ಲರೂ ಚಿತ್ರದುರ್ಗ, ತುಮಕೂರು ಮೂಲದವರಾಗಿದ್ದು, ಅವರಲ್ಲಿ ಚಿತ್ರದುರ್ಗದ 15 ಜನ ಹಾಗೂ ತುಮಕೂರಿನ 18 ಜನ ತಬ್ಲಿಗಿಗಳು ಒಂದೇ ಬಸ್‍ನಲ್ಲಿ ವಾಪಸ್ ಆಗಿದ್ದಾರೆ. ಅವರು ಗುಜರಾತ್‍ನ ಅಹಮದಾಬಾದ್‍ನಲ್ಲಿ ಮಾರ್ಚ್ 8ರಂದು ನಡೆದ ತಬ್ಲಿಘಿ ಸಭೆಗೆ ತೆರಳಿದ್ದರು. ಲಾಕ್‍ಡೌನ್ ಸಡಿಲಿಕೆಯಿಂದಾಗಿ ಸೋಮವಾರ ಗುಜರಾತಿನಿಂದ ಪ್ರಯಾಣ ಬೆಳೆಸಿ ಇಂದು ಅವರ ಸ್ವಗ್ರಾಮಗಳಿಗೆ ತೆರಳಲು ಆಗಮಿಸಿದ್ದಾರೆ. ಆದರೆ ಎಚ್ಚೆತ್ತ ಜಿಲ್ಲೆಯ ಪೊಲೀಸರು ಚಿತ್ರದುರ್ಗ ತಾಲೂಕಿನ ಬೊಗಳೇರಹಟ್ಟಿ ಚೆಕ್ ಪೋಸ್ಟ್ ಬಳಿ ಅವರನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಕೋಟೆನಾಡಿನ ಮಂದಿ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯಾಧಿಕಾರಿ ಮನವಿ ಮಾಡಿದ್ದಾರೆ.

    ಜಿಲ್ಲಾ ಆರೋಗ್ಯಾಧಿಕಾರಿಗಳು ಕೂಡ ಚಿತ್ರದುರ್ಗದ 15 ಜನರನ್ನು ಮಾತ್ರ ಇಲ್ಲಿ ಕ್ವಾರಂಟೈನ್ ಮಾಡಿದ್ದು, 18 ಜನರನ್ನು ತುಮಕೂರಿಗೆ ಕಳಿಸಿದ್ದಾರೆ. ಆದರೆ ಈವರೆಗೆ ನಿರಾತಂಕವಾಗಿ ಯಾವುದೇ ಭಯವಿಲ್ಲದೇ ನಿರ್ಭಯವಾಗಿ ಓಡಾಡುತ್ತಿದ್ದ ಚಿತ್ರದುರ್ಗದ ಜನರು ತಬ್ಲಿಘಿಗಳ ಆಗಮನದಿಂದ ಮತ್ತೆ ಚಿಂತಾಕ್ರಾಂತರಾಗಿದ್ದಾರೆ.

  • ಬೆಂಗ್ಳೂರಿನಲ್ಲಿ ಕಡಿಮೆಯಾಗ್ತಿದೆ ಡಬಲ್ ಟ್ರಬಲ್

    ಬೆಂಗ್ಳೂರಿನಲ್ಲಿ ಕಡಿಮೆಯಾಗ್ತಿದೆ ಡಬಲ್ ಟ್ರಬಲ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೊರೊನಾ ಹಾರ್ಟ್‍ಸ್ಪಾಟ್ ಈಗ ಸುಧಾರಿಸುತ್ತಿದಿಯಾ ಎಂಬ ಪ್ರಶ್ನೆ ಕಾಡುತ್ತಿದೆ. ಪಾದರಾಯನಪುರ ಹಾಗೂ ಹೊಂಗಸಂದ್ರ ಫುಲ್ ಕ್ಲೀನ್ ಆಗುತ್ತಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸಂಖ್ಯೆ ಈಗ 131ಕ್ಕೆ ಏರಿದೆ. ಸೋಂಕಿತರಲ್ಲಿ ಹೊಂಗಸಂದ್ರ, ಪಾದರಾಯನಪುರದ ನಿವಾಸಿಗಳೇ ಹೆಚ್ಚಾಗಿದ್ದಾರೆ. ಹೊಂಗಸಂದ್ರ 29 ಮತ್ತು ಪಾದರಾಯನಪುರದಲ್ಲಿ ಸುಮಾರು 32 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಪಾದರಾಯನಪುರ ಮತ್ತು ಹೊಂಗಸಂದ್ರಗಳನ್ನು ರೆಡ್‍ಝೋನ್, ಹಾಟ್‍ಸ್ಪಾಟ್, ಕಂಟೈನ್‍ಮೆಂಟ್ ಎಂದು ಹೆಸರಿಸಲಾಗಿತ್ತು.

    ದಿನಕ್ಕೆ ಹತ್ತಾರು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರದ ವಿಶೇಷ ಕಾಳಜಿ, ಬಿಬಿಎಂಪಿ ಹಾಗೂ ಹೆಲ್ತ್ ವಾರಿಯರ್ಸ್ ಗಳ ಕಟ್ಟುನಿಟ್ಟಿನ ಕ್ರಮದಿಂದಾಗಿ ಹೊಂಗಸಂದ್ರ ಮತ್ತು ಪಾದರಾಯನಪುರದಲ್ಲಿ ಕೊರೊನಾ ಕಂಟ್ರೋಲ್‍ಗೆ ಬರುತ್ತಿದೆ. ಕೊರೊನಾ ಕಂಟ್ರೋಲ್‍ಗೆ ಬಂದಿದೆ ಅನ್ನೋದಕ್ಕೆ ಈ ಎರಡೂ ಏರಿಯಾಗಳಲ್ಲಿ ಇತ್ತೀಚಿನ ವರದಿ ನೋಡಿದರೆ ತಿಳಿದು ಬರುತ್ತಿದೆ.

    ಪಾದರಾಯನಪುರ ಈಗ ಸೇಫ್ ಆಗುತ್ತಿದೆ. ಬುಧವಾರ 48 ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ. ಎಲ್ಲಾ ಸ್ಯಾಂಪಲ್‍ಗಳ ರಿಪೋರ್ಟ್ ನೆಗೆಟಿವ್ ಬಂದಿದೆ. ಮತ್ತೆ 19 ಜನರ ಪರೀಕ್ಷೆ ಮಾಡಲಾಗಿದ್ದು, ರಿಪೋರ್ಟ್ ಬರಬೇಕಿದೆ.

    ಇನ್ನೂ ಹೊಂಗಸಂದ್ರ ನಿವಾಸಿಗಳು ನಿಟ್ಟುಸಿರು ಬಿಡುತ್ತಿದ್ದಾರೆ. 78 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎಲ್ಲಾ ರಿಪೋರ್ಟ್ ನೆಗೆಟಿವ್ ಬಂದಿದೆ. ಭಾನುವಾರ 49, ಸೋಮವಾರ 73, ಬುಧವಾರ 72 ಒಟ್ಟು ಮೂರು ದಿನಗಳಲ್ಲಿ 194 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎಲ್ಲಾ ರಿಪೋರ್ಟ್ ನೆಗೆಟಿವ್ ಬಂದಿದೆ.

    ಬಿಹಾರಿ ಕಾರ್ಮಿಕರನ್ನು ಬಿಟ್ಟು ಸ್ಥಳೀಯ ನಿವಾಸಿಗಳಲ್ಲಿ ಯಾರಿಗೂ ಸೋಂಕು ಪತ್ತೆಯಾಗಿಲ್ಲ. ಹೊಂಗಸಂದ್ರ ವಿದ್ಯಾಜ್ಯೋತಿ ನಗರದ ಯಾವುದೇ ರಿಪೋರ್ಟ್ ಬಾಕಿ ಇಲ್ಲ. ಹೀಗಾಗಿ ಬೆಂಗಳೂರಿಗೆ ತಲೆನೋವಾಗಿದ್ದ ಹೊಂಗಸಂದ್ರ, ಪಾದರಾಯನಪುರ ಏರಿಯಾಗಳು ಕೊರೊನಾ ಮುಕ್ತವಾಗುತ್ತಿದ್ದು, ಶೀಘ್ರದಲ್ಲೇ ಗ್ರೀನ್ ಝೋನ್‍ ಆಗುವ ಸಾಧ್ಯತೆ ಇದೆ.

  • ಗ್ರೀನ್ ಝೋನ್‍ನಲ್ಲಿದ್ದ ದಾವಣಗೆರೆಗೆ ಶಾಕ್ – ಜಿಲ್ಲೆಯಲ್ಲಿ ಮೊದಲ ಸೋಂಕು ಪತ್ತೆ

    ಗ್ರೀನ್ ಝೋನ್‍ನಲ್ಲಿದ್ದ ದಾವಣಗೆರೆಗೆ ಶಾಕ್ – ಜಿಲ್ಲೆಯಲ್ಲಿ ಮೊದಲ ಸೋಂಕು ಪತ್ತೆ

    ದಾವಣಗೆರೆ: ಗ್ರೀನ್ ಝೋನ್‍ನಲ್ಲಿ ಇದ್ದ ದಾವಣಗೆರೆಗೂ ಕೊರೊನಾ ಮಹಾಮಾರಿ ಎಂಟ್ರಿಕೊಟ್ಟಿದೆ. ಜಿಲ್ಲೆಯ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

    ನಾವು ಗ್ರೀನ್ ಝೋನ್‍ನಲ್ಲಿ ಇದ್ದೇವೆ ಎಂದು ನೆಮ್ಮದಿಯಯಲ್ಲಿದ್ದ ದಾವಣಗೆರೆ ಜಿಲ್ಲೆಯ ಜನತೆ ಭಯದ ವಾತಾವರಣ ನಿರ್ಮಾಣವಾಗಿದೆ. ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 38 ವರ್ಷದ ಮಹಿಳೆಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲಾಗಿದೆ.

    ದಾವಣಗೆರೆ ನಗರದ ಭಾಷಾ ನಗರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಅವರ ಗಂಟಲ ದ್ರವ ಮತ್ತು ಬ್ಲಡ್ ಅನ್ನು ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್ ರವಾನೆ ಮಾಡಲಾಗಿತ್ತು. ಆದರೆ ಇಂದು ಬಂದ ವರದಿಯಲ್ಲಿ ಮಹಿಳೆಗೆ ಸೋಂಕು ಇರುವುದು ಪತ್ತೆಯಾಗಿದೆ.

    ಸೋಂಕಿತ ಮಹಿಳೆಗೆ ಪತಿ ಹಾಗೂ 18 ವರ್ಷದ ಪುತ್ರ ಇದ್ದು, ಜಿಲ್ಲಾಧಿಕಾರಿಗಳು ಆಕೆ ವಾಸವಿದ್ದ ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರ ಮಾಹಿತಿ ಸಂಗ್ರಹಿಸಿ, ಆ ಪ್ರದೇಶವನ್ನು ಸಂಪೂರ್ಣ ಸೀಲ್‍ಡೌನ್ ಮಾಡಿದ್ದಾರೆ. ಇದಕ್ಕೂ ಮೊದಲು ಆಸ್ಪತ್ರೆಯಲ್ಲಿ ಸೋಂಕಿತೆ ಸೇವೆ ಸಲ್ಲಿಸಿದ್ದು, ಆಸ್ಪತ್ರೆಗೆ ಬರುವ ರೋಗಿಗಳ ಸಂಪರ್ಕದಿಂದ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಆಕೆಯ ಜೊತೆ ಪ್ರಾಥಮಿಕ ಮತ್ತು ಎರಡನೇ ಹಂತದ ಸಂಪರ್ಕಕ್ಕೆ ಬಂದವರ ಬಗ್ಗೆ ಜಿಲ್ಲಾಡಳಿತ ಮಾಹಿತಿ ಸಂಗ್ರಹ ಮಾಡುತ್ತಿದೆ.

  • ಮಾಸ್ಕ್ ಇಲ್ಲದೆ ಓಡಾಡಿದ್ರೆ 50 ಬಸ್ಕಿ ಹೊಡೆಯುವ ಶಿಕ್ಷೆ

    ಮಾಸ್ಕ್ ಇಲ್ಲದೆ ಓಡಾಡಿದ್ರೆ 50 ಬಸ್ಕಿ ಹೊಡೆಯುವ ಶಿಕ್ಷೆ

    – ನಗರಕ್ಕೆ ಆಗಮಿಸುವ ವಾಹನಗಳಿಗೂ ಬ್ರೇಕ್
    – ಹಾಸನ ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ

    ಹಾಸನ: ಹಾಸನದಲ್ಲಿ ಈ ವರೆಗೆ ಯಾವುದೇ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಗ್ರೀನ್ ಝೋನ್‍ಗೆ ಒಳಪಟ್ಟಿದೆ. ಹೀಗಾಗಿ ಲಾಕ್‍ಡೌನ್ ನಿಯಮಗಳನ್ನು ಕೊಂಚ ಸಡಿಲಿಕೆ ಮಾಡಿದ್ದು, ಜನ ಮಾಸ್ಕ್ ಇಲ್ಲದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ.

    ಗ್ರೀನ್‍ಝೋನ್‍ನಲ್ಲಿ ನಿಯಮ ಸಡಿಲಿಕೆ ಮಾಡಿದ ಬೆನ್ನಲ್ಲೇ ಜನ ಬೇಕಾಬಿಟ್ಟಿಯಾಗಿ ಬೀದಿಗಿಳಿಯುತ್ತಿದ್ದು, ಕೆಲವರು ಏನೂ ಕೆಲಸವಿಲ್ಲದಿದ್ದರೂ ರಸ್ತೆಗಿಳಿಯುತ್ತಿದ್ದಾರೆ. ಅಲ್ಲದೆ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದಾರೆ. ಇದನ್ನು ಮನಗಂಡ ಪೊಲೀಸರು ಶಿಕ್ಷೆ ನೀಡಲು ಮುಂದಾಗಿದ್ದು, ಅನಗತ್ಯವಾಗಿ ಓಡಾಡುವವರಿಗೆ ಹಾಗೂ ಮಾಸ್ಕ್ ಇಲ್ಲದೆ ರಸ್ತೆಗಿಳಿಯುವವರಿಗೆ 50 ಬಸ್ಕಿ ಹೊಡೆಸುತ್ತಿದ್ದಾರೆ. ಈ ಮೂಲಕ ಮಾಸ್ಕ್ ಇಲ್ಲದೆ ಬೀದಿಗಿಳಿದ ಜನಕ್ಕೆ ಹಾಸನ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.

    ಕಾರ್, ಆಟೋಗಳಲ್ಲಿ ಅನವಶ್ಯಕವಾಗಿ ಹೆಚ್ಚು ಜನರನ್ನು ತುಂಬಿಕೊಂಡು ಸಂಚರಿಸುತ್ತಿದ್ದು, ಅಂತಹವರನ್ನು ಹಿಡಿದು ಬಸ್ಕಿ ಹೊಡೆಸುತ್ತಿದ್ದಾರೆ. ಅಲ್ಲದೆ ವಾಹನದಲ್ಲಿ ಓಡಾಡುವುದು ಮತ್ತೆ ಮರುಕಳಿಸಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಹಾಸನ ಗ್ರೀನ್ ಝೋನ್‍ನಲ್ಲಿರುವ ಕಾರಣ ಅನವಶ್ಯಕವಾಗಿ ನಗರಕ್ಕೆ ಬರುತ್ತಿರುವವರನ್ನು ನಗರದ ಹೊರಭಾಗದಲ್ಲೇ ತಡೆದು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ. ಹಾಸನ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಕಾವಲು ಕಾಯುತ್ತಿದ್ದು, ಎಲ್ಲ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸೂಕ್ತ ಕಾರಣ ನೀಡದವರನ್ನು ನಗರದ ಒಳಗೆ ಬಿಡದೆ ವಾಪಸ್ ಕಳುಹಿಸುತ್ತಿದ್ದಾರೆ. ಈ ಮೂಲಕ ಅನಾವಶ್ಯಕವಾಗಿ ಸುತ್ತಾಡಲು ಬರುತ್ತಿದ್ದವರು ಇದೀಗ ವಾಪಸ್ ಹೋಗುವಂತಾಗಿದೆ.