Tag: ಗ್ರಾಹಕ

  • ಗೋಕಾಕ್ ಸಹಕಾರಿ ಬ್ಯಾಂಕ್ ಮುಂದೆ ಶವವಿಟ್ಟು ಗ್ರಾಹಕರಿಂದ ಪ್ರತಿಭಟನೆ

    ಗೋಕಾಕ್ ಸಹಕಾರಿ ಬ್ಯಾಂಕ್ ಮುಂದೆ ಶವವಿಟ್ಟು ಗ್ರಾಹಕರಿಂದ ಪ್ರತಿಭಟನೆ

    ಬೆಳಗಾವಿ: ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ರೇಣುಕಾಚಾರ್ಯ ಮಹಿಳಾ ಪತ್ತಿನ ಸಹಕಾರಿ ಬ್ಯಾಂಕ್ ಮುಂದೆ ಶವವನ್ನು ಇರಿಸಿ ಗ್ರಾಹಕರು ಪ್ರತಿಭಟನೆ ನಡೆಸಿದ್ದಾರೆ.

    ರೇಣುಕಾಚಾರ್ಯ ಮಹಿಳಾ ಪತ್ತಿನ ಸಹಕಾರಿ ಬ್ಯಾಂಕ್‍ನಿಂದ ಮೋಸವಾಗಿದೆ ಎಂದು ಆರೋಪಿಸಿ ಗ್ರಾಹಕರೊಬ್ಬರ ಶವವನ್ನು ಇಟ್ಟುಕೊಂಡು ಪ್ರತಿಭಟನೆ ಮಾಡಲಾಯಿತು. ಸುಮಾರು ನಾಲ್ಕು ಕೋಟಿಗೂ ಅಧಿಕ ಠೇವಣಿ ಹಣವನ್ನು ಬ್ಯಾಂಕ್ ದುರುಪಯೋಗ ಮಾಡಿಕೊಂಡಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

    ತಮ್ಮಯ್ಯ ಬನಶೆಟ್ಟಿ ಎಂಬುವವರು ರೇಣುಕಾಚಾರ್ಯ ಬ್ಯಾಂಕಿನಲ್ಲಿ ಹಣ ಕೂಡಿಸಿಟ್ಟಿದ್ದರು. ಆದರೆ ತಮ್ಮಯ್ಯ ಅವರು ಕಟ್ಟಿದ್ದ ಹಣವನ್ನು ಹಿಂಪಡೆಯಲು ಬ್ಯಾಂಕ್‍ಗೆ ಹೋಗಿದ್ದರು. ಈ ವೇಳೆ ಬ್ಯಾಂಕ್ ಸಿಬ್ಬಂದಿ ಅವರಿ ಹಣ ನೀಡಲು ನಿರಾಕರಿಸಿದ್ದಾರೆ. ತಾವು ಕೂಡಿಸಿಟ್ಟಿದ್ದ ಹಣ ಸಿಗದಿದ್ದಕ್ಕೆ ತಮ್ಮಯ್ಯ ಮನನೊಂದು ಅನಾರೋಗ್ಯಕ್ಕಿಡಾಗಿದ್ದರು.

    ಕೊನೆಗೆ ಚಿಕಿತ್ಸೆ ಪಡೆಯಲು ಕೂಡ ಹಣವಿಲ್ಲದೆ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ಕೋಪಗೊಂಡ ತಿಮ್ಮಯ್ಯ ಅವರ ಕುಟುಂಬಸ್ಥರು ಠೇವಣಿಯ ಹಣ ಕೊಡುವಂತೆ ಒತ್ತಾಯಿಸಿ ಸಹಕಾರಿ ಬ್ಯಾಂಕ್ ಮುಂದೆ ಶವವಿಟ್ಟು ಪ್ರತಿಭಟನೆ ಮಾಡಿದ್ದಾರೆ. ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆನ್ ಲೈನ್ ಮೂಲಕ ಮೊಬೈಲ್ ಕೊಳ್ಳಲು ಹೋದ ವ್ಯಕ್ತಿಗೆ ಮೋಸ

    ಆನ್ ಲೈನ್ ಮೂಲಕ ಮೊಬೈಲ್ ಕೊಳ್ಳಲು ಹೋದ ವ್ಯಕ್ತಿಗೆ ಮೋಸ

    ಬೆಂಗಳೂರು: ಪ್ರತಿಷ್ಠಿತ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಜಾಹೀರಾತನ್ನು ನೋಡಿ ಕಡಿಮೆ ದರದಲ್ಲಿ ಆನ್ ಲೈನ್ ಮೂಲಕ, ಮೊಬೈಲ್ ಕೊಳ್ಳಲು ಹೋಗಿ ವ್ಯಕ್ತಿಯೊಬ್ಬ ಮೋಸಹೋದ ಘಟನೆ ನಗರದ ನೆಲಮಂಗಲದಲ್ಲಿ ವರದಿಯಾಗಿದೆ.

    ನೆಲಮಂಗಲ ಪಟ್ಟಣದ ಸಮೀಪದ ರಾಯನ್‍ನಗರ ನಿವಾಸಿ, ಶಿವಕುಮಾರ್ ಆನ್ ಲೈನ್ ಮೂಲಕ ಮೋಸ ಹೋದ ವ್ಯಕ್ತಿ. ಕೇವಲ 2,800 ರೂ. ಗೆ ಒಂದು ಸ್ಯಾಮ್ ಸಂಗ್ ಮೊಬೈಲ್ ಕೊಂಡರೆ ಮತ್ತೊಂದು ಮೊಬೈಲ್ ಉಚಿತ. ಜೊತೆಗೆ ಚಾರ್ಜರ್, ಹೆಡ್ ಸೆಟ್ ನೀಡುವುದಾಗಿ ಜಾಹೀರಾತು ಪ್ರಕಟವಾಗಿತ್ತು. ಹೀಗೆ ಕಡಿಮೆ ದರದಲ್ಲಿ ಫೋನ್ ಸಿಗುತ್ತದೆ ಎಂದು ಜಾಹೀರಾತು ನೋಡಿ ಬೆರಗಾದ ಶಿವಕುಮಾರ್, ಆನ್ ಲೈನ್ ಮೂಲಕ ಮೊಬೈಲ್ ಬುಕ್ ಮಾಡಿದ್ದಾರೆ. ಆದ್ರೆ ಅಂಚೆ ಮೂಲಕ ಬಂದತಂಹ ಕವರ್ ಓಪನ್ ಮಾಡಿದಾಗ ಅದರೊಳಗೆ ಕಳಪೆ ಗುಣಮಟ್ಟದ ಬೇರೆ ಕಂಪೆನಿಯ ಮೊಬೈಲ್ ನೀಡಿದ್ದಾರೆ ಎಂದು ಶಿವಕುಮಾರ್ ಆರೋಪ ಮಾಡಿದ್ದಾರೆ.

    ನನಗೆ ಆದ ಮೋಸ ಬೇರೆ ಯಾರಿಗೂ ಆಗಬಾರದು ಎನ್ನುವ ಉದ್ದೇಶದಿಂದ ಶಿವಕುಮಾರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಆನ್ ಲೈನ್ ಮುಖಾಂತರ ವ್ಯವಹರಿಸುವಾಗ ಎಚ್ಚರವಿದ್ದರೆ ಮಾತ್ರ, ಇಂತಹ ವಂಚನೆಗಳನ್ನು ತಡೆಯಬಹುದು ಎಂದು ಶಿವಕುಮಾರ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಕನ್ನಡದಲ್ಲಿ ಚಲನ್ ಕೇಳಿದ್ದಕ್ಕೆ ಗ್ರಾಹಕನ ಮೇಲೆಯೇ ದರ್ಪ ತೋರಿದ ಬ್ಯಾಂಕ್ ಅಧಿಕಾರಿ!

    ಕನ್ನಡದಲ್ಲಿ ಚಲನ್ ಕೇಳಿದ್ದಕ್ಕೆ ಗ್ರಾಹಕನ ಮೇಲೆಯೇ ದರ್ಪ ತೋರಿದ ಬ್ಯಾಂಕ್ ಅಧಿಕಾರಿ!

    ಕೋಲಾರ: ಗ್ರಾಹಕರು ಕನ್ನಡದಲ್ಲಿ ಚಲನ್ ನೀಡುವಂತೆ ಕೇಳಿದಾಗ ಬ್ಯಾಂಕ್ ಅಧಿಕಾರಿಯೂ ಕನ್ನಡದಲ್ಲಿ ಚಲನ್ ಸಿಗುವುದಿಲ್ಲವೆಂದು ದರ್ಪದಿಂದ ನಡೆದುಕೊಂಡ ಘಟನೆ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆದಿದೆ.

    ರಾಜ್ಯದ ಹಲವು ಬ್ಯಾಂಕ್‍ಗಳಲ್ಲಿ ಕನ್ನಡಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ಇರುವುದು ಈಗ ಮತ್ತೊಮ್ಮೆ ಸಾಬೀತಾಗಿದ್ದು, ಜಿಲ್ಲೆಯ ಬಂಗಾರಪೇಟೆಯ ಕೆನರಾ ಬ್ಯಾಂಕ್‍ನಲ್ಲಿ ಅಧಿಕಾರಿ ಹಿಂದಿಯಲ್ಲೇ ಮಾತಾಡುವಂತೆ ಗ್ರಾಹಕರ ಮೇಲೆ ದಬ್ಬಾಳಿಕೆ ನಡೆಸಿದ್ದಾನೆ.

    ಬಂಗಾರಪೇಟೆಯ ನಿವಾಸಿ ಗ್ರಾಹಕ ಪ್ರಸನ್ನಕುಮಾರ್ ಹಣ ಪಾವತಿಸಲು ಬ್ಯಾಂಕಿಗೆ ತೆರಳಿದ್ದರು. ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಚಲನ್ ಮುದ್ರಿಸಿದ ಹಿನ್ನೆಲೆಯಲ್ಲಿ ಪ್ರಸನ್ನರವರು ಬ್ಯಾಂಕ್ ಸಿಬ್ಬಂದಿಗೆ ಕನ್ನಡದಲ್ಲಿ ಚಲನ್ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿ ಹಿಂದಿಯಲ್ಲೇ ಮಾತನಾಡುವಂತೆ ಪ್ರಸನ್ನರಿಗೆ ತಾಕೀತು ಮಾಡಿದ್ದಾರೆ.

    ಈ ವೇಳೆ ಅಲ್ಲೇ ಇದ್ದ ಬ್ಯಾಂಕ್ ಅಧಿಕಾರಿ ನಿನಗೆ ಏನೇ ಬೇಕಾದರೂ ಹಿಂದಿಯಲ್ಲೇ ಕೇಳು, ಹಿಂದಿ ನ್ಯಾಷನಲ್ ಭಾಷೆ ನಾನು ಅದರಲ್ಲೇ ಉತ್ತರಿಸುತ್ತೇನೆ ಎಂದು ಗ್ರಾಹಕನ ಮೇಲೆ ದರ್ಪ ಮೆರೆದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಗ್ರಾಹಕ ನೀವು ಇರುವುದು ಕರ್ನಾಟಕದಲ್ಲಿ, ಮೊದಲು ನೀವು ಕನ್ನಡ ಕಲಿಯಿರಿ ಎಂದು ಹೇಳಿದ್ದಾರೆ. ಬ್ಯಾಂಕ್ ಸಿಬ್ಬಂದಿ ದರ್ಪ ನಡೆಸಿದರ ಸಂಬಂಧ ಗ್ರಾಹಕ ಪ್ರಸನ್ನರವರು ಬಂಗಾರಪೇಟೆ ಪೊಲೀಸರಿಗೆ ಈಗ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಎಟಿಎಂನಲ್ಲಿ ಬಂತು ಪೀಸ್ ಪೀಸ್ ನೋಟು – ಗ್ರಾಹಕ ಶಾಕ್

    ಎಟಿಎಂನಲ್ಲಿ ಬಂತು ಪೀಸ್ ಪೀಸ್ ನೋಟು – ಗ್ರಾಹಕ ಶಾಕ್

    ಬೆಂಗಳೂರು: ಎಟಿಎಂನಲ್ಲಿ ಗರಿ ಗರಿ ನೋಟ್ ಬರುತ್ತೆ ಅಂತಾ ಡ್ರಾ ಮಾಡಿದ್ದ ಗ್ರಾಹಕನಿಗೆ ಪೀಸ್ ಪೀಸ್ ಆದ ನೋಟುಗಳು ಸಿಕ್ಕಿದೆ.

    ನಗರದ ನಂದಿನಿ ಲೇಔಟ್‍ನ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ತೆಗೆದ ನೋಟು ಪೀಸ್ ಪೀಸ್ ಆಗಿ ಬಂದಿವೆ. ಗ್ರಾಹಕ ಜಯರಾಜ್ ಶನಿವಾರ ಹಣ ಡ್ರಾ ಮಾಡಿದ್ದಾರೆ. ಡ್ರಾ ಮಾಡಿದ ಹಣವನ್ನು ಮನೆಯಲ್ಲಿ ನೋಡಿದ್ದಾರೆ. ಅಲ್ಲಿ ಪುಡಿ ಪುಡಿಯಾಗಿ ನೋಟುಗಳು ಉದುರಿವೆ.

    ಈ ಪುಡಿಯಾಗಿರುವ ಕಳಪೆ ನೋಟಿನ ಬಗ್ಗೆ ಆರ್  ಬಿಐ ಅಧಿಕಾರಿಗಳ ಗಮನಕ್ಕೆ ತರಲು ನಾನು ಮುಂದಾಗಿದ್ದೇನೆ. ಸೋಮವಾರ ಆರ್ ಬಿಐ  ಅಧಿಕಾರಿಗಳನ್ನು ಭೇಟಿ ಮಾಡಿ ನೋಟು ನೀಡಿ ಪರಿಹಾರ ಕೇಳುತ್ತೇನೆ. ಹೊಸ ನೋಟು ಬಂದು ಒಂದು ವರ್ಷ ಆಗಿಲ್ಲ. ಆಗಲೇ ಈ ರೀತಿಯ ಕಳಪೆ ನೋಟುಗಳು ಬರುತ್ತಿರುವ ಕಾರಣ ಇದರ ಬಗ್ಗೆ ತನಿಖೆಯಾಗಬೇಕು ಎಂದು ಜಯರಾಜ್ ಆಗ್ರಹಿಸಿದ್ದಾರೆ.

  • ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಗ್ರಾಹಕನಿಂದ ಹಲ್ಲೆ

    ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಗ್ರಾಹಕನಿಂದ ಹಲ್ಲೆ

    ಉಡುಪಿ: ಬ್ಯಾಂಕಿನಲ್ಲಿ ಚಿನ್ನದ ಸರ ಅಡವಿಟ್ಟು ಪಡೆದ ಸಾಲದ ಹಣ ವಾಪಾಸ್ ನೀಡದ್ದಕ್ಕೆ ಸರವನ್ನು ಹರಾಜು ಹಾಕಿದ್ದರಿಂದ ಗ್ರಾಹಕನೊಬ್ಬ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಕಾಸರಗೋಡು ಸಮೀಪದ ಕುಂಬ್ಳೆಯಲ್ಲಿ ನಡೆದಿದೆ.

    ಸಾಲ ಮರುಪಾವತಿಸದಿದ್ದಕ್ಕೆ ಚಿನ್ನದ ಸರವನ್ನು ಹರಾಜು ಹಾಕಿದ ಫೈನಾನ್ಸ್ ನವರ ಕ್ರಮವನ್ನು ವಿರೋಧಿಸಿ ಗ್ರಾಹಕನೋರ್ವ ಬ್ಯಾಂಕ್ ನೊಳಗೆ ನುಗ್ಗಿ ಬ್ಯಾಂಕ್ ಮ್ಯಾನೇಜರ್ ಗೆ ಥಳಿಸಿದ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ನಡೆದಿದೆ. ಇಮ್ತೀಯಾಝ್ ಹಲ್ಲೆ ಮಾಡಿದ ಆರೋಪಿ. 2016ರಲ್ಲಿ ಇಮ್ತೀಯಾಝ್ 10 ಗ್ರಾಂ ಚಿನ್ನವನ್ನು ಮುತ್ತೂಟ್ ಫೈನಾನ್ಸ್ ಬ್ಯಾಂಕ್‍ನಲ್ಲಿ ಅಡವಿಟ್ಟು 20 ಸಾವಿರ ರೂ. ಸಾಲ ಪಡೆದಿದ್ದ.

    ಒಂದು ವರ್ಷಗಳಿಂದ ನೋಟಿಸ್ ನೀಡಿದ್ರೂ ಹಣ ಪಾವತಿಸದ ಹಿನ್ನೆಲೆಯಲ್ಲಿ ಚಿನ್ನದ ಸರವನ್ನು ಬ್ಯಾಂಕ್ ನವರು ಹರಾಜು ಹಾಕಿದ್ರು. ಇಂದು ಬೆಳಗ್ಗೆ 10 ಗಂಟೆಗೆ ಬ್ಯಾಂಕ್ ಗೆ ಬಂದ ಇಮ್ತೀಯಾಝ್ ಬ್ಯಾಂಕ್ ನವರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಲ್ಯಾಪ್ ಟಾಪ್ ಗಳನ್ನು ಬಿಸಾಡಿ ಬ್ಯಾಂಕ್ ಮ್ಯಾನೇಜರ್ ಅಶ್ವಿನಿ ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ಅಶ್ವಿನಿಯನ್ನು ಕುಂಬ್ಳೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹಲ್ಲೆ ಮಾಡಿದ ಇಮ್ತಿಯಾಝ್ ವಿರುದ್ಧ ಕುಂಬ್ಳೆ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

  • MRPಯಲ್ಲಿ ಮದ್ಯ ಮಾರಾಟ ಮಾಡದ್ದಕ್ಕೆ ಕೊಪ್ಪಳದಲ್ಲಿ ಬಾರ್ ಮಾಲೀಕರು, ಗ್ರಾಹಕರ ನಡ್ವೆ ಜಗಳ

    MRPಯಲ್ಲಿ ಮದ್ಯ ಮಾರಾಟ ಮಾಡದ್ದಕ್ಕೆ ಕೊಪ್ಪಳದಲ್ಲಿ ಬಾರ್ ಮಾಲೀಕರು, ಗ್ರಾಹಕರ ನಡ್ವೆ ಜಗಳ

    ಕೊಪ್ಪಳ: ಮದ್ಯವನ್ನ ಎಂಆರ್ ಪಿ ಬೆಲೆಯಲ್ಲಿ ಮಾರಾಟ ಮಾಡೋದಕ್ಕೆ ಬಾರ್ ಮಾಲೀಕರು ಹಾಗೂ ಗ್ರಾಹಕರ ನಡುವೆ ವಾಗ್ವಾದ ನಡೆದಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳದ ಗಂಗಾವತಿಯಲ್ಲಿ ಸಿಎಲ್ 2 ಬಾರ್ ನಲ್ಲೇ ಪ್ರತಿ ಮದ್ಯದ ಪೌಚ್ ಮೇಲೆ 20 ರಿಂದ 30 ರೂಪಾಯಿ ಹೆಚ್ಚುವರಿ ಹಣ ಪಡೆಯುತ್ತಿರೋ ಬಾರ್‍ಗಳ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ಕೂಡಾ ಸಾಕಷ್ಟು ವರದಿ ಮಾಡಿದರೂ ಅಬಕಾರಿ ಇಲಾಖೆ ಮಾತ್ರ ಕ್ರಮಕ್ಕೆ ಮುಂದಾಗಿಲ್ಲ.

    ಗಂಗಾವತಿ ತಾಲೂಕಿನಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಅವರ ಸಿಎಲ್ 2 ಅಂಗಡಿಗಳಿವೆ. ಹಗಲುದರೋಡೆ ಮಾಡುತ್ತಿರೋ ಬಾರ್ ಗಳ ವಿರುದ್ಧ ಯಾವೊಬ್ಬ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಮದ್ಯಪ್ರಿಯರು ಈ ವಿಚಾರವನ್ನು ಸಾಕಷ್ಟು ಬಾರಿ ಹೇಳಿದರೂ ಯಾರು ತಲೆಯೇ ಕೆಡಿಸಿಕೊಂಡಿಲ್ಲ ಗ್ರಾಹಕ ರಮೇಶ್ ತಿಳಿಸಿದ್ದಾರೆ.

    ಲಿಗಲ್ ಮೆಟ್ರೋಲಜಿ ಕಾಯ್ದೆ ಏನು ಹೇಳುತ್ತೆ?
    ಪ್ಯಾಕೇಜ್ಡ್ ಉತ್ಪನ್ನಗಳನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಲೀಗಲ್ ಮೆಟ್ರೋಲಜಿ ಕಾಯ್ದೆ ಪ್ರಕಾರ ಅಪರಾಧ. ಯಾವುದೇ ವಸ್ತುವನ್ನು ಪೇಪರ್ ನಲ್ಲಿ ಪ್ಯಾಕ್ ಮಾಡಿದ್ದರೂ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತದೆ. ಕಡ್ಡಾಯವಾಗಿ ಪೊಟ್ಟಣ ಸಾಮಗ್ರಿ ನಿಯಮಾವಳಿಗಳನ್ನು ಪಾಲಿಸಿರಬೇಕು. ವಸ್ತುಗಳ ದರ ಹಾಗೂ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಇದನ್ನು ಉಲ್ಲಂಘಿಸಿದರೆ ಮಾರಾಟಗಾರರ ಮೇಲೆ ಸ್ಥಳದಲ್ಲೇ ದಂಡ ವಿಧಿಸಲು ಅವಕಾಶವಿದೆ. ಕಾನೂನು ಮಾಪನಶಾಸ್ತ್ರ ಇಲಾಖೆ ವ್ಯಾಪ್ತಿಗೆ ಎಲ್ಲ ಅಂಗಡಿಗಳು, ಪೆಟ್ರೋಲ್ ಬಂಕ್, ಸೀಮೆಎಣ್ಣೆ ಮಾರಾಟಗಾರರು, ಬಟ್ಟೆ ಅಂಗಡಿಗಳು, ಪೊಟ್ಟಣ ತಯಾರಿಕಾ ಉದ್ಯಮಗಳು ಒಳಪಡುತ್ತದೆ.

    ದಂಡ ಎಷ್ಟು?
    ಯಾವುದೇ ಪ್ರೀ ಪ್ಯಾಕೇಜ್ಡ್ ಉತ್ಪನ್ನದ ಮೇಲೆ ನಮೂದಿಸಿರುವುದಕ್ಕೆ ಬದ್ಧವಾಗಿರದೆ ಅದನ್ನ ಮಾರಾಟ, ವಿತರಣೆ ಅಥವಾ ಡೆಲಿವರಿ ಮಾಡುವಾಗ ಸಿಕ್ಕಿಬಿದ್ದರೆ ಮೊದಲನೇ ಅಪರಾಧಕ್ಕಾಗಿ 25 ಸಾವಿರ ರೂ. ದಂಡ ಹಾಕುವ ಮೂಲಕ ಶಿಕ್ಷಿಸಲಾಗುತ್ತದೆ ಎಂದು ಲೀಗಲ್ ಮೆಟ್ರೊಲಜಿ ಕಾಯ್ದೆಯ ಸೆಕ್ಷನ್ 36 ಹೇಳುತ್ತದೆ. ಎರಡನೇ ಅಪರಾಧಕ್ಕೆ 50 ಸಾವಿರ ರೂ. ಹಾಗೂ ನಂತರದ ಅಪರಾಧಗಳಿಗೆ 1 ಲಕ್ಷ ರೂ ದಂಡ ಅಥವಾ 1 ವರ್ಷ ಜೈಲು ಶಿಕ್ಷೆ ಅಥವಾ ಎರಡೂ ಶಿಕ್ಷೆ ವಿಧಿಸಲಾಗುತ್ತದೆ. ಇದನ್ನೂ ಓದಿ: ಕೊಪ್ಪಳದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಮದ್ಯಕೋಟೆ?- ಇಲ್ಲಿ ಎಂಆರ್‍ಪಿಗಿಂತ ದುಪ್ಪಟ್ಟು ವಸೂಲಿ

  • ಕೊಟ್ಟ ಹಣಕ್ಕಿಂತ ಕಡಿಮೆ ಪೆಟ್ರೋಲ್- ಮಂಡ್ಯದ ಪೆಟ್ರೋಲ್ ಬಂಕ್ ಬಳಿ ನೂರಾರು ಗ್ರಾಹಕರಿಂದ ತರಾಟೆ

    ಕೊಟ್ಟ ಹಣಕ್ಕಿಂತ ಕಡಿಮೆ ಪೆಟ್ರೋಲ್- ಮಂಡ್ಯದ ಪೆಟ್ರೋಲ್ ಬಂಕ್ ಬಳಿ ನೂರಾರು ಗ್ರಾಹಕರಿಂದ ತರಾಟೆ

    ಮಂಡ್ಯ: ಪೆಟ್ರೋಲ್ ಬಂಕ್ ನಲ್ಲಿ ತಾವು ಕೊಟ್ಟ ಹಣಕ್ಕಿಂತ ಕಡಿಮೆ ಪೆಟ್ರೋಲ್ ಹಾಕುತ್ತಿದ್ದಾರೆಂದು ನೂರಾರು ಸಾರ್ವಜನಿಕರು ರಾತ್ರೋರಾತ್ರಿ ಪೆಟ್ರೋಲ್ ಬಂಕ್ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.

    ನಿಶಾಂಶ್ ಪಟೇಲ್ ಎಂಬ ಯುವಕ ಮಂಡ್ಯದ ಸಂಜಯ ವೃತ್ತದ ಬಳಿಯಿರುವ ಎಚ್‍ಪಿ ಪೆಟ್ರೋಲ್ ಬಂಕ್ ನಲ್ಲಿ 200 ರೂಪಾಯಿ ಕೊಟ್ಟು ಪ್ಲಾಸ್ಟಿಕ್ ಕ್ಯಾನ್ ಗೆ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಆದರೆ ಕ್ಯಾನ್ ಗೆ ತಾವು ಕೊಟ್ಟ ಹಣಕ್ಕಿಂತ ಸುಮಾರು 200 ಮಿಲಿಲೀಟರ್ ಪೆಟ್ರೋಲ್ ಕಡಿಮೆ ಹಾಕಿದ್ದಾರೆ ಎಂದು ಯುವಕ ಬಂಕ್‍ ನವರನ್ನು ಪ್ರಶ್ನೆ ಮಾಡಿದ್ದಾರೆ.

    ಈ ಸಂದರ್ಭದಲ್ಲಿ ಪೆಟ್ರೋಲ್ ಹಾಕಿಸಲು ಬಂದಿದ್ದ ಗ್ರಾಹಕರು ಕೂಡ ಯುವಕನ ಪರವಾಗಿ ಬಂಕ್ ನವರನ್ನು ಪ್ರಶ್ನೆ ಮಾಡಿದ್ದಾರೆ. ಆಗ ಬಂಕ್ ನವರು ಮತ್ತೆ ಪ್ರತ್ಯೇಕವಾಗಿ ಪೆಟ್ರೋಲ್ ಅಳತೆ ಮಾಡಿ ಗ್ರಾಹಕರಿಗೆ ತೋರಿಸಿದ್ದಾರೆ. ಅದರಲ್ಲೂ ಪೆಟ್ರೋಲ್ ಕಡಿಮೆ ಬಂದಿದೆ. ವಿಷಯ ಒಬ್ಬರಿಂದ ಒಬ್ಬರಿಗೆ ಹರಡಿ ನೂರಾರು ಗ್ರಾಹಕರು ಪೆಟ್ರೋಲ್ ಬಂಕ್ ಬಳಿ ಜಮಾಯಿಸಿ ಬಂಕ್ ನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ವೇಳೆ ಬಂಕ್ ನವರು ಮತ್ತು ಗ್ರಾಹಕರ ನಡುವೆ ಜೋರು ಧ್ವನಿಯಲ್ಲಿ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡುವ ಭರವೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದರು.

  • ಜಿಎಸ್‍ ಟಿ ಹೆಸ್ರಲ್ಲಿ ಉದ್ಯಮಿ ಅಕೌಂಟ್‍ ನಲ್ಲಿದ್ದ 24 ಲಕ್ಷ ರೂ. ಮಂಗಮಾಯ!

    ಜಿಎಸ್‍ ಟಿ ಹೆಸ್ರಲ್ಲಿ ಉದ್ಯಮಿ ಅಕೌಂಟ್‍ ನಲ್ಲಿದ್ದ 24 ಲಕ್ಷ ರೂ. ಮಂಗಮಾಯ!

    ದಾವಣಗೆರೆ: ಜಿಎಸ್‍ ಟಿ ಹೆಸರಲ್ಲಿ ಉದ್ಯಮಿ ಅಕೌಂಟ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಮಂಗಮಾಯವಾಗಿರೋ ಘಟನೆಯೊಂದು ನಡೆದಿರುವ ಬಗ್ಗೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.

    ದಾವಣಗೆರೆಯ ಪೂಜಾರ್ ಪ್ರೋಸೆಸ್ ಕಂಪನಿಗೆ ಸೇರಿದ ಅಕೌಂಟ್ ನಿಂದ 24 ಲಕ್ಷ ರೂಪಾಯಿ ಹಣ ಮಾಯವಾಗಿದೆ. ಕಂಪನಿ ಮಾಲೀಕ ನಾಗರಾಜ್ ಕೆಲ ಚೆಕ್ ಗಳನ್ನು ಗ್ರಾಹಕರಿಗೆ ನೀಡಿದ್ರು. ಆದ್ರೆ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲ ಅಂತಾ ಗ್ರಾಹಕರು ಆರೋಪಿಸಿದ್ರು.

    ಮೊನ್ನೆ ಲಕ್ಷಾಂತರ ರೂಪಾಯಿ ಖಾತೆಯಲ್ಲಿತ್ತು. ಇದೀಗ ಝಿರೋ ಬ್ಯಾಲೆನ್ಸ್ ನಿಂದ ಆಘಾತಗೊಂಡು ಬ್ಯಾಂಕ್ ಗೆ ಹೋಗಿ ವಿಚಾರಿಸಿದ್ರು. ನೀವು ಜಿಎಸ್ ಟಿ ಕಟ್ಟಿಲ್ಲ. ಅದಕ್ಕೆ ಬಹುಶಃ ಮುಟ್ಟುಗೋಲು ಹಾಕಿಕೊಂಡಿರಬಹುದು. ನಮ್ಮಿಂದ ಯಾವುದೇ ತೊಂದರೆಯಾಗಿಲ್ಲ ಅಂತಾ ಬ್ಯಾಂಕ್ ಆಫ್ ಇಂಡಿಯಾ ಸಮರ್ಥಿಸಿಕೊಂಡಿದೆ.

    ಈ ಕಡೆ ಜಿಎಸ್ ಟಿ ಆಫೀಸ್ ಗೆ ಹೋಗಿ ಕೇಳಿದ್ರೆ ನಾವು ಹಣ ಮುಟ್ಟುಗೋಲು ಹಾಕಿಕೊಳ್ಳುವಾಗ ಗ್ರಾಹಕರಿಗೆ ನೋಟಿಸ್ ಕೊಡ್ತಿವಿ. ಜಿಎಸ್ ಟಿ ಜಾರಿಗೆ ಬಂದಾಗಿನಿಂದ ಪ್ರತಿ ತಿಂಗಳು ತಪ್ಪದೆ ಜಿಎಸ್ ಟಿ ಕಟ್ಟಿಕೊಂಡು ಬಂದಿದ್ದಾರೆ. ಕಳೆದ ತಿಂಗಳು ಮಾತ್ರ ಸರ್ವರ್ ಬ್ಯುಸಿ ಇದ್ದುದರಿಂದ ಒಂದು ದಿನ ತಡವಾಯಿತು. ಅಲ್ಲದೆ 5 ಬಾರಿ ಪ್ರಯತ್ನ ಮಾಡಿದ್ರು ಟ್ರಾನ್ಷೇಷನ್ ಫೇಲ್ ಆಗುತ್ತಾ ಬಂದಿತು. ಕೊನೆಯ ಬಾರಿ ಕಳುಹಿಸಿದಾಗ ಸಕ್ಸಸ್ ಆಯ್ತು. ಆದ್ರೆ ಈಗ ನೋಡಿದ್ರೆ ನಮ್ಮ ಖಾತೆಯಲ್ಲಿ ಹಣವನ್ನು ಮುಟ್ಟುಗೋಲು ಆಗಿದೆ. ಇದು ಬ್ಯಾಂಕ್ ನವರ ಎಡವಟ್ಟೋ ಇಲ್ಲ ಜಿಎಸ್‍ಟಿ ಯವರ ಯಡವಟ್ಟೋ ಗೊತ್ತಿಲ್ಲ. ಬ್ಯಾಕ್ ನಲ್ಲಿ ಅಕೌಂಟ್ ಸ್ಟೇಟಸ್ ತೆಗೆಸಿದ್ರೆ ಜಿ ಎಸ್ ಟಿ ರಿಕವರಿ ಎಂದು ತೋರಿಸುತ್ತಿದೆ ಅಂತ ಹೇಳಿಕೆ ನೀಡಿದ್ದಾರೆ.

  • ಏರ್‍ಟೆಲ್ ಬ್ರಾಡ್‍ಬ್ಯಾಂಡ್ ಗ್ರಾಹಕರಿಗೆ ಗುಡ್‍ನ್ಯೂಸ್

    ಏರ್‍ಟೆಲ್ ಬ್ರಾಡ್‍ಬ್ಯಾಂಡ್ ಗ್ರಾಹಕರಿಗೆ ಗುಡ್‍ನ್ಯೂಸ್

    ನವದೆಹಲಿ: ಏರ್‍ಟೆಲ್ ಬ್ರಾಡ್‍ಬ್ಯಾಂಡ್ ಗ್ರಾಹಕರಿಗೆ ಗುಡ್‍ನ್ಯೂಸ್. ಇನ್ನು ಮುಂದೆ ಬಳಕೆ ಮಾಡದೇ ಇರುವ ಬ್ರಾಡ್ ಬ್ಯಾಂಡ್ ಡೇಟಾವನ್ನು ಮುಂದಿನ ತಿಂಗಳಿಗೆ ಕ್ಯಾರಿ ಮಾಡಬಹುದಾದ ಸೌಲಭ್ಯವನ್ನು ಏರ್ ಟೆಲ್ ಘೋಷಿಸಿದೆ.

    ರೋಲ್‍ಓವರ್ ಸೌಲಭ್ಯ ಎಂಬ ಹೊಸ ಸೌಲಭ್ಯವನ್ನು ಗ್ರಾಹಕರು ಪಡೆದುಕೊಳ್ಳುವ ಮೂಲಕ ತಾವು ಬಳಕೆ ಮಾಡದೇ ಇರುವ ಡೇಟಾವನ್ನು ಮುಂದಿನ ತಿಂಗಳಿಗೆ ಕ್ಯಾರಿ ಮಾಡುವ ಅವಕಾಶವನ್ನು ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಭಾರತಿ ಏರ್‍ಟೆಲ್ ಕಂಪೆನಿಯ ಸಿಇಒ ಜಾರ್ಜ್ ಮ್ಯಾಥನ್, ಹೊಸ ಸೌಲಭ್ಯವು ಮನೆಯಲ್ಲಿ ಬ್ರಾಡ್ ಬ್ಯಾಂಡ್ ಸೇವೆಯನ್ನು ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಉತ್ತಮವಾದ ಕೊಡುಗೆಯಾಗಲಿದೆ ಎಂದು ತಿಳಿಸಿದ್ದಾರೆ.


    ಈ ಸೌಲಭ್ಯದ ಮೂಲಕ ಗ್ರಾಹಕರು ಸುಮಾರು 1,000 ಜಿಬಿ ವರೆಗಿನ ಡೇಟಾವನ್ನು ಕ್ಯಾರಿ ಮಾಡಬಹುದಾಗಿದೆ. ಗ್ರಾಹಕರು ತಮ್ಮ ಖಾತೆಯಲ್ಲಿನ ಡಾಟಾ ಬ್ಯಾಲೆನ್ಸ್ ಕುರಿತ ಮಾಹಿತಿಯನ್ನು ಮೈ ಏರ್‍ಟೆಲ್ ಆಪ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಬ್ರಾಡ್ ಬ್ಯಾಂಡ್ ಬಳಕೆ ದಾರರಿಗೆ ಈ ಯೋಜನೆ ಮಂಗಳವಾರದಿಂದಲೇ ಅನ್ವಯವಾಗುತ್ತದೆ, ಅದರಲ್ಲೂ ಏರ್‍ಟೆಲ್ ನ ಉನ್ನತ ಮಟ್ಟದ ವಿ-ಫೈಬರ್ ನೆಟ್‍ವರ್ಕ್ ಅಳವಡಿಸಿಕೊಂಡಿರುವ ಗ್ರಾಹಕರಿಗೆ ಈ ಸೌಲಭ್ಯ ಹೆಚ್ಚು ಉಪಯುಕ್ತವಾಗಲಿದೆ. ಇನ್ನೂ ಏರ್ ಟೆಲ್ ತನ್ನ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಕಳೆದ ಜುಲೈ ತಿಂಗಳಿನಲ್ಲಿ ರೋಲ್‍ಓವರ್ ಸೌಲಭ್ಯವನ್ನು ನೀಡಿತ್ತು.

    ದೇಶಾದ್ಯಂತ 2.1 ಮಿಲಿಯನ್ ಗ್ರಾಹಕರು ಏರ್‍ಟೆಲ್ ಬ್ರಾಡ್ ಬ್ಯಾಂಡ್ ನ್ನು ಬಳಕೆ ಮಾಡುತ್ತಿದ್ದಾರೆ. ದೇಶದಲ್ಲಿ ಅತ್ಯಂತ ಹೆಚ್ಚು ಬ್ರಾಡ್ ಬ್ಯಾಂಡ್ ಗ್ರಾಹಕರನ್ನು ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಏರ್‍ಟೆಲ್ ಪಡೆದುಕೊಂಡಿದೆ. ಏರ್‍ಟೆಲ್ ವಿ ಫೈಬರ್ ವಿಶ್ವದ 87 ನಗರಗಳಲ್ಲಿ 100 ಎಂಬಿಬಿಎಸ್ ವೇಗದ ಡೇಟಾ ಸೇವೆಯನ್ನು ನೀಡುತ್ತಿದೆ.

     

     

     

  • ಗ್ರಾಹಕರೇ ಎಚ್ಚರ, ಇದೀಗ ಎಟಿಎಂನಲ್ಲಿ ಬರ್ತಿದೆ ಪೇಪರ್ ಪೀಸ್!

    ಗ್ರಾಹಕರೇ ಎಚ್ಚರ, ಇದೀಗ ಎಟಿಎಂನಲ್ಲಿ ಬರ್ತಿದೆ ಪೇಪರ್ ಪೀಸ್!

    ಬಳ್ಳಾರಿ: ಎಟಿಎಂನಲ್ಲಿ ಹಣ ಡ್ರಾ ಮಾಡಿದಾಗ ನೋಟಿನ ಬದಲು ಪೇಪರ್ ಪೀಸ್ ಬಂದ ಘಟನೆಯು ನಗರದ ಟ್ಯಾಂಕ್ ಬಂಡ್ ರೋಡ್‍ನಲ್ಲಿ ನಡೆದಿದೆ.

    ಇಂದು ಮುಂಜಾನೆ ಎಸ್‍ಬಿಐ ಬ್ಯಾಕ್‍ನ ಎಟಿಎಂ ಒಂದರಲ್ಲಿ ರಮೇಶ್ ಎಂಬವರು ಹಣ ಡ್ರಾ ಮಾಡಲು ಹೋದಾಗ ಹಣದ ಜೊತೆಯಲ್ಲಿ ನೋಟಿನ ಅಳತೆಯ ಪೇಪರ್ ತುಂಡೊಂದು ಬಂದಿದೆ.

    ರಮೇಶ್ 8 ಸಾವಿರ ರೂ. ಡ್ರಾ ಮಾಡಿದ್ದಾರೆ. ಅದರಲ್ಲಿ 7500 ಅಸಲಿ ನೋಟು ಮತ್ತು 500 ರೂಪಾಯಿಯ ಬದಲಾಗಿ ಒಂದು ಪೇಪರ್ ಪೀಸ್ ಬಂದಿದೆ. ಹೀಗಾಗಿ ಹಣ ಡ್ರಾ ಮಾಡಲು ಬಂದ ರಮೇಶ್ ಗೆ ಶಾಕ್ ಆಗಿ ಮಾಧ್ಯಮಗಳಿಗೆ ವಿಷಯ ತಿಳಿಸಿ ಮೋಸವನ್ನು ಖಂಡಿಸಿದ್ದಾರೆ.

    ಎಟಿಎಂ ಗೆ ಆಗಮಿಸಿದ್ದವರು ಮತ್ತು ಸ್ಥಳೀಯರು ಎಟಿಎಂ ಮುಂದೆ ಸೇರಿ ಬ್ಯಾಂಕ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆದ್ರೆ ಬ್ಯಾಂಕ್ ಸಿಬ್ಬಂದಿ ಸ್ಥಳಕ್ಕೆ ಬಾರದಿದ್ದರಿಂದ ಬ್ಯಾಂಕ್ ವಂಚನೆ ವಿರುದ್ಧ ರಮೇಶ್ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.