Tag: ಗ್ರಾಹಕ

  • ಕೊತ್ತಂಬರಿ ಸೊಪ್ಪು ಖರೀದಿಸದ್ದಕ್ಕೆ ಚಾಕು ಇರಿದ ವ್ಯಾಪಾರಿ

    ಕೊತ್ತಂಬರಿ ಸೊಪ್ಪು ಖರೀದಿಸದ್ದಕ್ಕೆ ಚಾಕು ಇರಿದ ವ್ಯಾಪಾರಿ

    ಹುಬ್ಬಳ್ಳಿ: ಮಾರಾಟಕ್ಕಿಟ್ಟ ಕೊತ್ತಂಬರಿ ಸರಿಯಿಲ್ಲವೆಂದು ಕೊತ್ತಂಬರಿ ಖರೀದಿಸದ ಗ್ರಾಹಕನಿಗೆ ವ್ಯಾಪಾರಸ್ಥ ಹಾಗೂ ಆತನ ಸಹಚರರು ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ಗೌಳಿಗಲ್ಲಿಯಲ್ಲಿ ಹಳೇ ಹುಬ್ಬಳ್ಳಿಯ ನಿವಾಸಿ ಮಹಮ್ಮದಗೌಸ್ ಬಿಜಾಪುರ ಮೇಲೆ ಕೊತ್ತಂಬರಿ ವ್ಯಾಪಾರ ಮಾಡುತ್ತಿದ್ದ ಖಾದರ್ ಹಾಗೂ ಸಹಚರರು ಚಾಕು ಇರಿದು ಕೊಲೆಗೆ ಯತ್ನಿಸಿದ್ದಾರೆ.

    ಮಹಮ್ಮದಗೌಸ್ ಪ್ರತಿನಿತ್ಯ ಖಾದರ್ ಬಳಿಯೇ ಕೊತ್ತಂಬರಿ ಖರೀದಿ ಮಾಡುತ್ತಿದ್ದರು. ಆದರೆ ನಿನ್ನೆ ಕೊತ್ತಂಬರಿ ಸರಿಯಿಲ್ಲವೆಂದು ಕೊತ್ತಂಬರಿ ಸೊಪ್ಪು ಖರೀದಿ ಮಾಡಲು ನಿರಾಕರಿಸಿದ್ದಕ್ಕೆ ಕೋಪಿತಗೊಂಡ ಖಾದರ್ ಚಾಕು ಇರಿದಿದ್ದಾನೆ. ಸದ್ಯ ಗಾಯಾಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಬೆಂಗಳೂರಿನ ಹಂಪಿನಗರ ಮನೆಯಲ್ಲಿ ನಿಗೂಢ ಸ್ಫೋಟ

  • ಶಾಪಿಂಗ್ ತಾಣಗಳಲ್ಲಿ ಫ್ಲ್ಯಾಶ್ ಸೇಲ್ ನಿಷೇಧ?

    ಶಾಪಿಂಗ್ ತಾಣಗಳಲ್ಲಿ ಫ್ಲ್ಯಾಶ್ ಸೇಲ್ ನಿಷೇಧ?

    ನವದೆಹಲಿ: ಆನ್‍ಲೈನ್ ಶಾಪಿಂಗ್ ತಾಣಗಳಲ್ಲಿ ನಡೆಯುತ್ತಿರುವ ಕೆಲ ನಿರ್ದಿಷ್ಟ ಫ್ಲ್ಯಾಶ್ ಸೇಲ್ ಗಳನ್ನು ನಿಷೇಧ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

    ಫ್ಲ್ಯಾಶ್ ಸೇಲ್ ಹೆಸರಿನಲ್ಲಿ ಗ್ರಾಹಕರಿಗೆ ಮೋಸ, ಅನ್ಯಾಯವಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಖಾತೆಯ ಸಚಿವಾಲಯ ಆನ್‍ಲೈನ್ ಶಾಪಿಂಗ್ ತಾಣಗಳಿಗೆ ಕೆಲ ನಿಯಮಗಳನ್ನು ರೂಪಿಸಿದ್ದು ಕರಡು ಮಾದರಿಯನ್ನು ಬಿಡುಗಡೆ ಮಾಡಿದೆ.

    ಫ್ಲಾಶ್ ಸೇಲ್ ಹೆಸರಿನಲ್ಲಿ ನಕಲಿ ಕಂಪನಿಗಳು, ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡುವುದಕ್ಕೆ ನಿಯಂತ್ರಣ ಹೇರುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸರ್ಕಾರ ತಿಳಿಸಿದೆ.  ಇದನ್ನೂ ಓದಿ: ಮುಕೇಶ್‌ ಅಂಬಾನಿಯಿಂದ ಬಿಗ್‌ ಬಜಾರ್‌ ಶಾಪಿಂಗ್‌ – ರಿಲಯನ್ಸ್‌ ಪ್ಲ್ಯಾನ್‌ ಏನು?

    ಹೇಗೆ ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ನಿಯಮಗಳನ್ನು ರೂಪಿಸಿತ್ತೋ ಅದೇ ರೀತಿಯಾಗಿ ಆನ್‍ಲೈನ್ ಶಾಪಿಂಗ್ ತಾಣಗಳು ಭಾರತದಲ್ಲಿ ಅನುಸರಣ ಅಧಿಕಾರಿ ಹಾಗೂ ಸಾರ್ವಜನಿಕರ ಕುಂದು ಕೊರತೆ ಆಲಿಸುವ ಅಧಿಕಾರಿಗಳನ್ನು ನೇಮಿಸಬೇಕು ಎಂದು ತಿಳಿಸಲಾಗಿದೆ.

    ಸಾಂಪ್ರದಾಯಿಕ ಇ-ಕಾಮರ್ಸ್ ಫ್ಲ್ಯಾಷ್ ಮಾರಾಟವನ್ನು ನಿಷೇಧಿಸುವುದಿಲ್ಲ. ಗ್ರಾಹಕರ ಆಯ್ಕೆಯನ್ನು ಮಿತಿಗೊಳಿಸುವ, ಬೆಲೆಗಳನ್ನು ಹೆಚ್ಚಿಸುವ ನಿರ್ದಿಷ್ಟ ಫ್ಲ್ಯಾಶ್ ಮಾರಾಟ ಅಥವಾ ಬ್ಯಾಕ್-ಟು-ಬ್ಯಾಕ್ ಮಾರಾಟವನ್ನು ಮಾತ್ರ ನಿಷೇಧಿಸಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.

    2020ರ ಇ-ಕಾಮರ್ಸ್ ಗ್ರಾಹಕರ ಹಕ್ಕುಗಳ ಸಂರಕ್ಷಣಾ ನಿಯಮಗಳನ್ನು ಪರಿಷ್ಕರಣೆ ಮಾಡಲು ಸರ್ಕಾರ ತೀರ್ಮಾನಿಸಿದ್ದು ಕರಡು ಮಾದರಿಯನ್ನು www.consumeraffairs.nic.in ಪ್ರಕಟಿಸಿದೆ. ಸಾರ್ವಜನಿಕರು ಈ ಕರಡನ್ನು ಓದಿ ಜುಲೈ 6ರ ಒಳಗಡೆ  js-ca@nic.in .nic.in  ಸಲಹೆ ಮತ್ತು ಅಭಿಪ್ರಾಯಗಳನ್ನು ನೀಡಬಬಹುದು ಎಂದು ಸಚಿವಾಲಯ ಕೇಳಿಕೊಂಡಿದೆ.

    ಹೊಸ ನಿಯಮಗಳ ಪ್ರಕಾರ ಪ್ರಕಾರ, ಇ-ಕಾಮರ್ಸ್ ಕಂಪನಿಗಳು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ(ಡಿಪಿಐಐಟಿ) ಅಡಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಸರ್ಕಾರಿ ಸಂಸ್ಥೆ, ತನಿಖಾ ಸಂಸ್ಥೆಗಳು ಗುರುತಿನ ಪರಿಶೀಲನೆಗಾಗಿ, ಯಾವುದೇ ಅಪರಾಧಗಳ ಪ್ರಕರಣ ಸಂಬಂಧ ಮಾಹಿತಿಗಳನ್ನು ಕೇಳಿದಾಗ ಕಾನೂನುಬದ್ಧವಾಗಿ ಆ ಮಾಹಿತಿಗಳನ್ನು ಹಂಚಿಕೊಳ್ಳಬೇಕಾಗುತ್ತದೆ.

    ಏನಿದು ಫ್ಲ್ಯಾಶ್ ಸೇಲ್?
    ಕಂಪನಿಯೊಂದು ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿದ ಬಳಿಕ ಅದನ್ನು ಆನ್‍ಲೈನ್ ಶಾಪಿಂಗ್ ತಾಣಗಳಲ್ಲಿ ಮಾರಾಟ ಮಾಡಲು ಮುಂದಾಗುತ್ತದೆ. ಉತ್ಪನ್ನ ಕಡಿಮೆ ಪ್ರಮಾಣದಲ್ಲಿ ಲಭ್ಯ ಇರುವ ಹಿನ್ನೆಲೆಯಲ್ಲಿ ಗ್ರಾಹಕ ಮೊದಲೇ ಆ ಉತ್ಪನ್ನ ಖರೀದಿಸಲು ಬುಕ್ ಮಾಡಬೇಕಾಗುತ್ತದೆ ಅಥವಾ ಒಂದು ನಿರ್ದಿಷ್ಟ ಸಮಯವನ್ನು ನಿಗದಿ ಮಾಡಲಾಗುತ್ತದೆ. ಆ ನಿರ್ದಿಷ್ಟ ಸಮಯದಲ್ಲಿ ಯಾರಿಗೆ ಅದೃಷ್ಟ ಇರುತ್ತದೋ ಆ ಗ್ರಾಹಕರಿಗೆ ಉತ್ಪನ್ನ ಸಿಗುತ್ತದೆ.

    ಈ ರೀತಿಯ ಫ್ಲ್ಯಾಶ್ ಸೇಲ್ ಬಗ್ಗೆ ಹಿಂದಿನಿಂದಲೂ ದೂರುಗಳು ಬರುತ್ತಿದ್ದವು. ಕಂಪನಿಗಳು ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲು ಈ ರೀತಿಯ ಫ್ಲ್ಯಾಶ್ ಸೇಲ್ ತಂತ್ರ ಮಾಡುತ್ತಿವೆ. ಕೆಲವು ನಕಲಿ ಕಂಪನಿಗಳು ಉತ್ಪನ್ನ ಮಾರಾಟ ಮಾಡುವ ನೆಪದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ನಂತರ ವಸ್ತುಗಳನ್ನು ಮಾರಾಟ ಮಾಡದೇ ಗ್ರಾಹಕರಿಗೆ ಮೋಸ ಮಾಡುತ್ತಿವೆ ಎಂದು ದೂರುಗಳು ದಾಖಲಾಗಿದ್ದವು.

  • 2012ರಲ್ಲಿ ತಯಾರಾದ ಗ್ಲೂಕೋಸ್ – 2021ರ ಲೇಬಲ್ ಹಾಕಿ ಮಾರಾಟ

    2012ರಲ್ಲಿ ತಯಾರಾದ ಗ್ಲೂಕೋಸ್ – 2021ರ ಲೇಬಲ್ ಹಾಕಿ ಮಾರಾಟ

    ಚಿಕ್ಕಮಗಳೂರು: 2012ರ ಏಪ್ರಿಲ್ ತಿಂಗಳಲ್ಲಿ ತಯಾರಾಗಿರುವ ರೋಗಿಗಳ ದೇಹದಲ್ಲಿ ಶಕ್ತಿ ವೃದ್ಧಿಸಲು ಬಳಸುವ ಗ್ಲೂಕೋಸ್ ಪ್ಯಾಕೇಟಿನ ಮೇಲೆ 2021ರ ಏಪ್ರಿಲ್ ತಿಂಗಳ ಲೇಬಲ್ ಹಾಕಿ 9 ವರ್ಷದ ಹಳೇ ಗ್ಲೂಕೋಸನ್ನು ಮಾರಾಟ ಮಾಡುತ್ತಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನರಿಕ್ ಮೆಡಿಸನ್ ಔಷಧಿ ಕೇಂದ್ರದಲ್ಲಿ ಈ ರೀತಿಯ ಗ್ಲೂಕೋಸ್ ಪ್ಯಾಕೇಟ್ ಪತ್ತೆಯಾಗಿದೆ. ಸೋಮವಾರ ನಗರದ ಗುರು ಎಂಬವರು ತಮ್ಮ ಸಂಬಂಧಿಕರಿಗೆ ಆರೋಗ್ಯ ಸರಿ ಇಲ್ಲ ಎಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ವೈದ್ಯರು ಎಳನೀರು ಹಾಗೂ ಗ್ಲೂಕೋಸ್ ಕೊಡಲು ಹೇಳಿದ್ದರು. ಆಸ್ಪತ್ರೆಯ ಆವರಣದಲ್ಲೇ ಇದ್ದ ಮೆಡಿಕಲ್ ಸ್ಟೋರ್‍ನಲ್ಲಿ ಗ್ಲೂಕೋಸ್ ಪ್ಯಾಕೇಟ್ ಖರೀದಿಸಿದ್ದಾರೆ.

    26 ರೂಪಾಯಿ ಇದ್ದ ಗ್ಲೂಕೋಸ್‍ಗೆ 13 ರೂಪಾಯಿ ತೆಗೆದುಕೊಂಡಿದ್ದಾರೆ. ಗ್ಲೂಕೋಸ್ ಖರೀದಿಸಿದ ಗುರು, ಅರ್ಧ ಹಣ ತೆಗೆದುಕೊಂಡದ್ದನ್ನ ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದರು. ಆದರೆ ಗುರು ಆಸ್ಪತ್ರೆಯ ವಾರ್ಡಿಗೆ ಬಂದು ನೋಡಿದಾಗ ಲೇಬಲ್ ಹಚ್ಚಿರುವುದು ಗೊತ್ತಾಗಿದೆ. ಲೇಬಲ್ ತೆಗೆದು ನೋಡಿದಾಗ ಮೂಲ ಪ್ಯಾಕೇಟ್ ಮೇಲಿದ್ದ 2012ನೇ ಇಸವಿಗೆ ಬ್ಲಾಕ್ ಮಾರ್ಕರ್‌ನಿಂದ ರಬ್ ಮಾಡಿ ಅದರ ಮೇಲೆ 2021ನೇ ಇಸವಿಯ ಲೇಬಲ್ ಹಾಕಿದ್ದಾರೆ.

    ಕೂಡಲೇ ಒಂದು ಹೀಗಾಗಿರಬೇಕೆಂದು ಗುರು ತನ್ನ ಚಿಕ್ಕಪ್ಪನ ಮೂಲಕ ಅದೇ ಮೆಡಿಕಲ್ ಸ್ಟೋರ್‍ನಿಂದ ಮತ್ತೊಂದು ಗ್ಲೂಕೋಸ್ ಪ್ಯಾಕೇಟ್ ಖರೀದಿಸಿದ್ದಾರೆ. ಅದರ ಮೇಲೂ ಅದೇ ರೀತಿಯ ಲೇಬಲ್ ಹಾಕಿರುವುದು ಕಾಣಿಸಿದೆ. ಅದನ್ನು ಕಿತ್ತಾಗಲು ಆ ಪ್ಯಾಕೇಟ್ ಕೂಡ 2012ರಲ್ಲಿ ತಯಾರಾಗಿರುವುದಾಗಿತ್ತು. ಇದನ್ನು ಮಕ್ಕಳು ರೋಗಿಗಳಿಗೆ ಕೊಟ್ಟರೆ ಕಥೆ ಏನೆಂದು ಖರೀದಿಸಿದ ಗುರು ಕೂಡ ಕಂಗಾಲಾಗಿದ್ದಾರೆ.

    ಇದು 9 ವರ್ಷ ಹಿಂದಿನ ಗ್ಲೂಕೋಸ್. ಇದರ ವಾಯಿದೆ ಇರುವುದೇ 24 ತಿಂಗಳು ಮಾತ್ರ. ಬಳಿಕ ಇದು ಔಷಧಿಯಾದರೂ ವಿಷವಾಗುತ್ತೆ. ಇದನ್ನು ರೋಗಿಗಳು ಬಳಸಿದರೆ ಅವರ ಆರೋಗ್ಯ ಏನಾಗಬೇಡ ಎಂದು ಖರೀದಿಸಿದಾತ ಆತಂಕಕ್ಕೀಡಾಗಿದ್ದಾರೆ. 24 ತಿಂಗಳು ವ್ಯಾಲಿಡಿಟಿಯ ಈ ಗ್ಲೂಕೋಸ್ ಪ್ಯಾಕೇಟಿನ ವಾಯಿದೆ ಮುಗಿದೇ 9 ವರ್ಷ ಕಳೆದಿವೆ. ಇದನ್ನು ಹೇಗೆ ಮಾರಾಟ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಹಕ ಗುರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

  • ಬೇಳೆಕಾಳುಗಳ ದರ ಏರಿಕೆ – ಯಾವುದಕ್ಕೆ ಎಷ್ಟು ರೂ.?

    ಬೇಳೆಕಾಳುಗಳ ದರ ಏರಿಕೆ – ಯಾವುದಕ್ಕೆ ಎಷ್ಟು ರೂ.?

    ಬೆಂಗಳೂರು: ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿದ್ದು, ಇದರ ನೇರ ಪರಿಣಾಮ ಬೇಳೆಕಾಳುಗಳ ಮೇಲೆ ಬಿದ್ದಿದ್ದು ದರ ಏರಿಕೆ ಆಗತೊಡಗಿದೆ.

    ಹೊಲಸೇಲ್ ಗಿಂತ ರಿಟೇಲ್ ಅಂಗಡಿಗಳಲ್ಲಿ ದರ ಏರಿಕೆಯಾಗಿದೆ. ಅದ್ರಲ್ಲೂ ಬಟಾಣಿ ಬೆಲೆ ಕೆ.ಜಿಗೆ 150 ರೂಪಾಯಿ ಏರಿಕೆಯಾಗಿದೆ. ದೋಸೆ, ಪಡ್ಡು ಹಾಗೂ ಇಡ್ಲಿಗೆ ಅವಶ್ಯವಾದ ಉದ್ದಿನ ಬೇಳೆ ಕೆಜಿಗೆ 130 ರೂಪಾಯಿ ಆಗಿದೆ. ತೋಗರಿಬೇಳೆ ಕೆ.ಜಿಗೆ 150 ರೂಪಾಯಿ ಆಗಿದೆ.

    ಬಹುತೇಕ ಎಲ್ಲಾ ಅಡುಗೆ ಸಾಮಗ್ರಿಗಳಲ್ಲೂ ಕಳೆದ ಒಂದು ತಿಂಗಳಿನಲ್ಲಿ 5-10 ರೂ. ಹೆಚ್ಚಳವಾಗಿದೆ. ಈ ಬೆಲೆ ಹೆಚ್ಚಳ, ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

    ಎಷ್ಟು ದರ ಇದೆ?
    ಪದಾರ್ಥಗಳ ಹೆಸರು – ಹೋಲ್ ಸೇಲ್ ರೇಟ್(ಕೆ.ಜಿಗೆ) ರಿಟೈಲ್ ರೇಟ್(ಕೆ.ಜಿಗೆ)
    ತೊಗರಿಬೇಳೆ – 100 ರೂ. – 120 ರೂ.
    ಉದ್ದಿನಬೇಳೆ – 115 ರೂ. – 130 ರೂ.
    ಹೆಸರಬೇಳೆ – 95 ರೂ. – 110 ರೂ.
    ಕಡಲೆಬೇಳೆ – 60 ರೂ. – 75 ರೂ.
    ಹೆಸರಕಾಳು – 105 ರೂ. -120 ರೂ.
    ಕಡಲೆಕಾಳು – 50 ರೂ. -70 ರೂ.
    ಅಳಸಂದಿ – 60 ರೂ. – 80 ರೂ.
    ಬಟಾಣಿ – 120 ರೂ. – 150 ರೂ.
    ಸೋನಾಮಸೂರಿ ಅಕ್ಕಿ – 50 ರೂ. – 56 ರೂ.
    ರಾ ರೈಸ್ – 50 ರೂ. – 56 ರೂ.

  • ಡೆಲಿವರಿ ಬಾಯ್‍ನಿಂದ ಫುಡ್ ದೋಚಿದ ಖದೀಮರು – ಆರ್ಡರ್ ರದ್ದು ಮಾಡಿದ ಸ್ವಿಗ್ಗಿ

    ಡೆಲಿವರಿ ಬಾಯ್‍ನಿಂದ ಫುಡ್ ದೋಚಿದ ಖದೀಮರು – ಆರ್ಡರ್ ರದ್ದು ಮಾಡಿದ ಸ್ವಿಗ್ಗಿ

    ಲಕ್ನೋ: ಸ್ವಿಗ್ಗಿ ಡೆಲಿವರಿ ಬಾಯ್ ಬಳಿಯಿದ್ದ ಆಹಾರವನ್ನು ಅಪರಿಚಿತ ವ್ಯಕ್ತಿಗಳು ಕಿತ್ತುಕೊಂಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಈ ವಿಚಾರವಾಗಿ ಗ್ರಾಹಕರೊಬ್ಬರು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

    ಚಯನಿಕ್ ದಾಸ್ ಎಂಬವರು ಫುಡ್ ಡೆಲಿವರಿ ಆ್ಯಪ್ ಮೂಲಕ ಮೊದಲ ಬಾರಿಗೆ ನೋಯ್ಡಾ ವಿಳಾಸಕ್ಕೆ ಫುಡ್ ಆರ್ಡರ್ ಮಾಡಿದ್ದರು. ಆದರೆ ಕಳ್ಳರು ಆಹಾರವನ್ನು ದೋಚಿರುವ ಕಾರಣ ಅವರ ಆರ್ಡರ್ ರದ್ದುಗೊಳಿಸಬೇಕಾಯಿತು.

    ಈ ವಿಚಾರವಾಗಿ ‘ದಯಾವಿಟ್ಟು ಕ್ಷಮಿಸಿ ನಿಮ್ಮ ಆರ್ಡರ್ ನನ್ನು ಕಳ್ಳರು ದೋಚಿರುವ ಕಾರಣ ನಿಮಗೆ ತಲುಪಿಸಲು ಆಗಲಿಲ್ಲ. ನಿಮಗೆ ಇದರಿಂದ ಅಸಮಾಧಾನ ಉಂಟಾಗುತ್ತದೆ ಎಂದು ತಿಳಿದಿದೆ. ಆದರೂ ನಾನು ಮುಂದುವರಿಸಲೇಬೇಕಾಗಿದೆ ನಿಮ್ಮ ಆರ್ಡರ್ ನನ್ನು ರದ್ದುಗೊಳಿಸಲಾಗುತ್ತಿದೆ. ಇತರೆ ರೆಸ್ಟೋರೆಂಟ್ ಮೂಲಕ ಹೊಸ ಫುಡ್ ಆರ್ಡರ್ ಮಾಡಿಕೊಳ್ಳಿ ಎಂದು ವಿನಂತಿಸುತ್ತೇನೆ’ ಎಂದು ಸ್ವಿಗ್ಗಿ ಸಂದೇಶ ಕಳುಹಿಸಿತ್ತು.

    ಇದನ್ನು ದಾಸ್ ಸ್ಕ್ರೀನ್ ಶಾಟ್ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಜೊತೆಗೆ ನೋಯ್ಡಾದಲ್ಲಿ ಇಂತಹ ಘಟನೆಗಳು ಸಹಜ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಹಲವಾರು ಕಮೆಂಟ್ ಗಳು ಹರಿದು ಬರುತ್ತಿದ್ದು, ನೆಟ್ಟಿಗರು ಸ್ವಿಗ್ಗಿಯನ್ನು ಟೀಕಿಸಲು ಆರಂಭಿಸಿದ್ದಾರೆ.

    ಈ ಪೋಸ್ಟ್ ಗೆ 1000ಕ್ಕೂ ಅಧಿಕ ಲೈಕ್ಸ್ ಮತ್ತು ಕಾಮೆಂಟ್‍ಗಳು ಹರಿದು ಬರುತ್ತಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ದಾಸ್ ಗೆ, ನಿಮ್ಮ ಆರ್ಡರ್ ನನ್ನು ಕಳ್ಳರು ದೋಚಿಕೊಂಡು ಫುಡ್ ಡೆಲಿವರಿ ಬಾಯ್ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ ಹೀಗಾಗಿ ಫುಡ್ ಆರ್ಡರ್ ರದ್ದು ಗೊಳಿಸಲಾಯಿತು ಎಂದು ಕಸ್ಟಮರ್ ಕೇರ್ ನಿಂದ ಕರೆ ಮಾಡಿ ತಿಳಿಸಿದ್ದಾರೆ.

  • ಮೊಬೈಲ್ ಗೇಮ್‍ಗೆ ಬ್ಯಾಂಕ್ ಲಿಂಕ್ ಮಾಡೋ ಮುನ್ನ ಎಚ್ಚರ

    ಮೊಬೈಲ್ ಗೇಮ್‍ಗೆ ಬ್ಯಾಂಕ್ ಲಿಂಕ್ ಮಾಡೋ ಮುನ್ನ ಎಚ್ಚರ

    – ಗೇಮ್ ಆಡ್ತಾ ಹಣ ಕಳ್ಕೊಂಡ ಗ್ರಾಹಕ

    ಹುಬ್ಬಳ್ಳಿ: ಮೊಬೈಲ್‍ನಲ್ಲಿ ಆನ್‍ಲೈನ್ ಗೇಮ್ ಆಡುವಾಗ ಕಡಿತಗೊಂಡ ಹಣದ ಬಗ್ಗೆ ವಿಚಾರಿಸಲು ಹೋಗಿ ನಕಲಿ ಕಸ್ಟಮರ್ ಕೇರ್ ನವರಿಂದ ಮತ್ತಷ್ಟು ಹಣ ಕಳೆದುಕೊಂಡ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಗ್ರಾಹಕ ತನ್ನ ಮೊಬೈಲ್ ಪೋನ್‍ನಲ್ಲಿ ಗೇಮ್ ಆಡುವಾಗ ಎಸ್‍ಬಿಐ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿದ್ದನು. ಈ ವೇಳೆ ಆತನ ಬ್ಯಾಂಕಿನಲ್ಲಿ 9,739 ರೂ. ಕಡಿತವಾಗಿತ್ತು. ಈ ಬಗ್ಗೆ ವಿಚಾರಿಸಲು ಗ್ರಾಹಕ ಗೂಗಲ್ ಕಸ್ಟಮರ್ ಕೇರ್ ನಂಬರ್‌ಗೆ ಫೋನ್ ಮಾಡಿದ್ದಾನೆ. ಆಗ ಕರೆ ಸ್ವೀಕರಿಸಿದ ವ್ಯಕ್ತಿ ತನ್ನನ್ನು ಶಂಕರ್ ಮಂಡಲ್ ಎಂದು ಪರಿಚಯಿಸಿಕೊಂಡಿದ್ದಾನೆ.

    ಕಡಿತಗೊಂಡ ಹಣವನ್ನು ಮರಳಿ ವರ್ಗಾವಣೆ ಮಾಡುವುದಾಗಿ ಹೇಳಿದ ಈತ ಮೊಬೈಲ್‍ಗೆ ‘Any desk app’ ಇನ್‌ಸ್ಟಾಲ್ ಮಾಡಿಕೊಳ್ಳಲು ಹೇಳಿದ್ದಾನೆ. ಬಳಿಕ ಡೆಬಿಟ್ ಕಾರ್ಡ್ ನಂ. ಮತ್ತು ಸಿವಿವಿ ನಂ. ಮಾಹಿತಿ ಪಡೆದು 16,689 ರೂಪಾಯಿಯನ್ನು ತನ್ನ ಪೇಟಿಎಂ ಖಾತೆ ನಂಬರ್‌ಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.

    ಗ್ರಾಹಕ ಮತ್ತೆ ಅದೇ ನಂಬರ್‌ಗೆ ಫೋನ್ ಮಾಡಿದಾಗ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಸದ್ಯಕ್ಕೆ ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಿಲಿಟರಿ ಅಧಿಕಾರಿ ಹೆಸರಿನಲ್ಲಿ ಗ್ರಾಹಕರಿಗೆ ದೋಖಾ

    ಮಿಲಿಟರಿ ಅಧಿಕಾರಿ ಹೆಸರಿನಲ್ಲಿ ಗ್ರಾಹಕರಿಗೆ ದೋಖಾ

    ಶಿವಮೊಗ್ಗ: ಮಿಲಿಟರಿ ಅಧಿಕಾರಿ ಹೆಸರಿನಲ್ಲಿ 1.17 ಲಕ್ಷ ರೂ. ಆನ್‍ಲೈನ್ ದೋಖಾ ಮಾಡಿರುವ ಪ್ರತ್ಯೇಕ ಎರಡು ಘಟನೆಗಳು ವರದಿಯಾಗಿವೆ.

    ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಗರದ ಬೊಮ್ಮನಕಟ್ಟೆ ನಿವಾಸಿಯವರು ಮೋಸ ಹೋಗಿದ್ದು, 92 ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ. ಹಳೆಯ ಕಾರು ಖರೀದಿಸುವ ಉದ್ದೇಶದಿಂದ ಓಎಲ್‍ಎಕ್ಸ್ ನಲ್ಲಿ ಕಾರು ಮಾರಾಟಕ್ಕಿದೆ ಎಂಬ ಜಾಹೀರಾತು ಗಮನಿಸಿ ಕರೆ ಮಾಡಿದ್ದಾರೆ. ಆರೋಪಿ ತಾನು ಮಿಲಿಟರಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೇ ಆತ ತಾನು ಮೈಸೂರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ಆನ್‍ಲೈನ್‍ನಲ್ಲಿ 92 ಸಾವಿರ ರೂ. ಪಾವತಿ ಮಾಡಿದ್ದಲ್ಲಿ ಕಾರನ್ನು ತಮ್ಮ ವಿಳಾಸಕ್ಕೆ ಕಳುಹಿಸುವ ಭರವಸೆ ನೀಡಿದ್ದ. ಆತನ ಮಾತನನ್ನು ನಂಬಿದ ಗ್ರಾಹಕ ಗೂಗಲ್ ಪೇ ಮೂಲಕ 92 ಸಾವಿರ ರೂ. ಹಾಕಿ ಟೋಪಿ ಹಾಕಿಸಿಕೊಂಡಿದ್ದಾರೆ.

    ಮತ್ತೊಂದು ಪ್ರಕರಣ ನಗರದ ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಹೊಸಮನೆ ಬಡಾವಣೆ ನಿವಾಸಿಯೊಬ್ಬರು ಬೈಕ್ ಕೊಳ್ಳುವ ಉದ್ದೇಶದಿಂದ ಓಎಲ್‍ಎಕ್ಸ್ ನಲ್ಲಿ ಹುಡುಕಾಟ ನಡೆಸಿದ್ದರು. ಅದೇ ವೇಳೆ 25 ಸಾವಿರಕ್ಕೆ ಡಿಯೋ ಬೈಕ್ ಮಾರಾಟಕ್ಕೆ ಇದೆ ಎಂಬ ಜಾಹೀರಾತು ನೋಡಿದ್ದರು. ಆ ಬೈಕ್ ಇಷ್ಟವಾಗಿದ್ದಕ್ಕೆ ಜಾಹೀರಾತಿನಲ್ಲಿದ್ದ ಬೈಕಿನ ಮಾಲೀಕರಿಗೆ ಕರೆ ಮಾಡಿದ್ದರು.

    ಈತ ಕೂಡ ತಾನು ಮಿಲಿಟರಿ ಅಧಿಕಾರಿ ಎಂದು ಗ್ರಾಹಕರ ಜೊತೆ ಪರಿಚಯ ಮಾಡಿಕೊಂಡಿದ್ದ. ಮಿಲಿಟರಿ ಅಧಿಕಾರಿ ಮೋಸ ಮಾಡುವುದಿಲ್ಲ ಎಂಬ ನಂಬಿಕೆಯಿಂದ ಗ್ರಾಹಕ ಗೂಗಲ್ ಪೇ ಮೂಲಕ 25 ಸಾವಿರ ರೂ. ಹಣ ಹಾಕಿದ್ದಾರೆ. ಆದರೆ ಬೈಕ್ ಬೇಕಾದರೆ ಮತ್ತೊಮ್ಮೆ ಹಣ ಪಾವತಿಸುವಂತೆ ಡಿಮ್ಯಾಂಡ್ ಮಾಡಿದ್ದಾನೆ. ಹೀಗಾಗಿ ತಾನು ಮೋಸ ಹೋಗಿರುವುದಾಗಿ ಅರಿತ ಗ್ರಾಹಕ ಪೊಲೀಸರಿಗೆ ದೂರು ನೀಡಿದ್ದಾನೆ.

    ಮಿಲಿಟರಿ ಅಧಿಕಾರಿ ಹೆಸರಿನಲ್ಲಿ ಕೆಲವರು ಆನ್‍ಲೈನ್‍ನಲ್ಲಿ ಮೋಸ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಹಕರು ಆನ್‍ಲೈನ್‍ನಲ್ಲಿ ವಸ್ತುಗಳನ್ನು ಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು ಹಾಗೂ ಮೋಸ ಹೋಗಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

  • ಕಾಂಡೋಮ್ ಕಂಪನಿ ವಿರುದ್ಧ ಸಮರ ಆರಂಭಿಸಿದ ಗ್ರಾಹಕ

    ಕಾಂಡೋಮ್ ಕಂಪನಿ ವಿರುದ್ಧ ಸಮರ ಆರಂಭಿಸಿದ ಗ್ರಾಹಕ

    – ಗ್ರಾಹಕನ ಆರೋಪವನ್ನು ತಿರಸ್ಕರಿಸಿದ ಕಂಪನಿ
    – ಕಾಂಡೋಮ್ ಧರಿಸಿದ್ರು ಪತ್ನಿ ಗರ್ಭಿಣಿ

    ಬೀಜಿಂಗ್: ಚೀನಾದ ವ್ಯಕ್ತಿಯೊಬ್ಬ ಡುರೆಕ್ಷ್ ಕಾಂಡೋಮ್ ಕಂಪನಿ ವಿರುದ್ಧ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮೊರೆ ಹೋಗಿದ್ದಾನೆ. ಡುರೆಕ್ಷ್ ಕಂಪನಿಯ ಕಾಂಡೋಮ್ ಧರಿಸಿ ಲೈಂಗಿಕ ಕ್ರಿಯೆ ನಡೆಸಿದ್ರೂ ನನ್ನ ಪತ್ನಿ ಗರ್ಭಿಣಿಯಾಗಿದ್ದಾಳೆಂದು ವ್ಯಕ್ತಿ ಆರೋಪಿಸಿದ್ದಾನೆ.

    ದೂರು ಸಲ್ಲಿಸಿದ ವ್ಯಕ್ತಿಯ ಹೆಸರು ವ್ಯಾಂಗ್ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ದೂರುದಾರನ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. ಗ್ರಾಹಕ ರಕ್ಷಣಾ ಪ್ರಾಧಿಕಾರದಲ್ಲಿ ಆರೋಪವನ್ನು ಸಾಬೀತು ಮಾಡುವಲ್ಲಿ ವ್ಯಾಂಗ್ ವಿಫಲನಾಗಿದ್ದು, ಕಾನೂನಿನ ಹೋರಾಟ ನಡೆಸಲು ಮುಂದಾಗಿದ್ದಾನೆ.

    ನನಗೆ ಈಗಾಗಲೇ ಎರಡು ಮಕ್ಕಳಿದ್ದು, ಮೂರನೇ ಮಗು ನಮಗೆ ಬೇಡವಾಗಿತ್ತು. ಕಾಂಡೋಮ್ ಮೇಲೆ ನಂಬಿಕೆಯಿಟ್ಟು ಅದನ್ನು ಧರಿಸಿಯೇ ಪತ್ನಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದೆ. ಸೆಕ್ಸ್ ಬಳಿಕ ಕಾಂಡೋಮ್ ನಲ್ಲಿ ರಂಧ್ರವಿರೋದು ನನ್ನ ಗಮನಕ್ಕೆ ಬಂದಾಗ ಶಾಕ್ ಆಗಿತ್ತು. ಕೊನೆಗೆ ಪತ್ನಿಗೆ ಗರ್ಭನಿರೋಧಕ ಮಾತ್ರೆಗಳನ್ನು ತಂದು ಕೊಡುವ ಅನಿವಾರ್ಯ ಎದುರಾಯ್ತು. ಮರುದಿನ ಮತ್ತೊಂದು ಕಾಂಡೋಮ್ ನಲ್ಲಿಯೂ ರಂಧ್ರವಿದ್ದರಿಂದ ಪತ್ನಿ ಗರ್ಭಿಣಿಯಾದಳು ಎಂದು ವ್ಯಾಂಗ್ ಹೇಳಿದ್ದಾನೆ.

    ಪತ್ನಿ ಮೂರನೇ ಮಗುವಿಗೆ ಜನ್ಮ ನೀಡುವ ಹಾಗಿರಲಿಲ್ಲ. ಅನಾರೋಗ್ಯದಿಂದಾಗಿ ಪತ್ನಿಗೆ ಗರ್ಭಪಾತ ಮಾಡಿಸಲಾಯ್ತು. ಇದರಿಂದಾಗಿ ಪತ್ನಿ ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿದ್ದಾಳೆ. ಕಳಪೆ ಕಾಂಡೋಮ್ ನಿಂದಾಗಿ ನನ್ನ ಪತ್ನಿ ಈ ತೊಂದರೆ ಅನುಭವಿಸುತ್ತಿದ್ದಾಳೆ ಎಂದು ವ್ಯಾಂಗ್ ಆರೋಪಿಸಿದ್ದಾನೆ.

    ಈ ಸಂಬಂಧ ವ್ಯಾಂಗ್ ತಾನು ಖರೀದಿಸಿದ ಕಾಂಡೋಮ್ ಅಂಗಡಿಗೆ ತೆರಳಿ ಅಲ್ಲಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಆದ್ರೆ ಮಾರಾಟ ಮಾಡಿದ ವ್ಯಕ್ತಿ ಇದರಲ್ಲಿ ನಮ್ಮದು ಯಾವುದೇ ತಪ್ಪಿಲ್ಲ. ಬೇಕಾದ್ರೆ ನೀವು ಖರೀದಿಸಿದ ಕಾಂಡೋಮ್ ಬೆಲೆಯನ್ನು ಹಿಂದಿರುಗಿಸುತ್ತವೆ ಎಂದು ಹೇಳಿದ್ದಾರೆ.

    ಕೊನೆಗೆ ವ್ಯಾಂಗ್ ನ್ಯಾಯ ಕೋರಿ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮೊರೆ ಹೋಗಿದ್ದಾನೆ. ಪ್ರಾಧಿಕಾರ ನೀವು ಕಾಂಡೋಮ್ ಹೇಗೆ ಬಳಸಿದ್ದೀರಿ ಎಂಬುದನ್ನ ವಿವರಿಸಬೇಕೆಂದಾಗ ವ್ಯಾಂಗ್ ಸಂಕಷ್ಟಕ್ಕೆ ಸಿಲುಕಿದ್ದಾನೆ. ಒಂದು ವೇಳೆ ನಿಮ್ಮಿಂದ ವಿವರಣೆ ನೀಡಲು ಸಾಧ್ಯವಾಗದಿದ್ದಾಗ ನೀವು ಬಳಸಿದ ಕಾಂಡೋಮ್ ಬ್ಯಾಚ್ ನ ಕೆಲವು ಸ್ಯಾಂಪಲ್ ಗಳನ್ನು ಪರೀಕ್ಷಿಸಿದ್ರೆ ಸತ್ಯ ತಿಳಿಯಲಿದೆ ಎಂದು ಪ್ರಾಧಿಕಾರ ಹೇಳಿದೆ.

    ವ್ಯಾಂಗ್ ನವೆಂಬರ್ 2018ರ ಬ್ಯಾಚ್ ನ ಕಾಂಡೋಮ್ ಖರೀದಿಸಿರೋದು ಪ್ಯಾಕೆಟ್ ಮೇಲಿದೆ. ಆದ್ರೆ ಕಾಂಡೋಮ್ ಕಂಪನಿ ನಾವು ಈಗಾಗಲೇ 2018 ನವೆಂಬರ್ ಬ್ಯಾಚಿನ ಉತ್ಪನ್ನಗಳನ್ನು ಮಾರಾಟ ಮಾಡಿದ್ದೇವೆ ಎಂದು ದಾಖಲಾತಿ ನೀಡಿದೆ. ಇದರಿಂದಾಗಿ ವ್ಯಾಂಗ್ ಆರೋಪ ಸಾಬೀತು ಮಾಡಲು ವಿಫಲವಾಗಿದ್ದಾನೆ. ಆದ್ರೆ ವ್ಯಾಂಗ್ ಪತ್ನಿ ಅನುಭವಿಸಿದ ಕಷ್ಟವನ್ನು ಭಾವನಾತ್ಮಕವಾಗಿ ವಿವರಿಸಿ ನ್ಯಾಯ ಕೇಳುತ್ತಿದ್ದಾರೆ. ಇದೀಗ ವ್ಯಾಂಗ್ ಕಂಪನಿ ವಿರುದ್ಧ ಕಾನೂನಿನ ಹೋರಾಟ ನಡೆಸಲು ಮುಂದಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

  • ಈರುಳ್ಳಿ ದರ ಕುಸಿತ – ಗ್ರಾಹಕರ ಮೊಗದಲ್ಲಿ ಮಂದಹಾಸ

    ಈರುಳ್ಳಿ ದರ ಕುಸಿತ – ಗ್ರಾಹಕರ ಮೊಗದಲ್ಲಿ ಮಂದಹಾಸ

    ಬೆಂಗಳೂರು: ಇಷ್ಟು ದಿನ ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ದರ ಇಳಿಕೆಯಾಗಿದೆ. ಈರುಳ್ಳಿ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸುಗ್ಗಿ ಹಬ್ಬದ ಸಂದರ್ಭದಲ್ಲಿ ಸಿಹಿ ಸುದ್ದಿ ಸಿಕ್ಕಂತಾಗಿದೆ. ಈರುಳ್ಳಿ ದರ ಈಗ ಕುಸಿತ ಕಂಡಿದ್ದು, ಗ್ರಾಹಕರ ಸಂಕ್ರಾಂತಿ ಸಂಭ್ರಮವನ್ನು ಹೆಚ್ಚಿಸಿದೆ.

    ಮಹಾರಾಷ್ಟ್ರದಿಂದ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದರಿಂದ ದರ ಇಳಿಕೆಯಾಗಿದೆ. ಪ್ರತಿ ಕೆಜಿಗೆ ಸೋಮವಾರ ಕೆ.ಆರ್. ಮಾರುಕಟ್ಟೆಯಲ್ಲಿ ಈರುಳ್ಳಿ 40ರಿಂದ 50 ರೂ.ಗೆ ಮಾರಾಟವಾಯಿತು. ಉತ್ತಮ ಗುಣಮಟ್ಟದ ಈರುಳ್ಳಿ 60ರಿಂದ 80 ರೂ.ನಂತೆ ಮಾರಾಟವಾಗುತ್ತಿದೆ. ಹಾಪ್‍ಕಾಮ್ಸ್ ಮಳಿಗೆಗಳಲ್ಲಿ ಪ್ರತಿ ಕೆ.ಜಿ.ಗೆ 70 ರೂ.ನಂತೆ ಮಾರಾಟವಾಯಿತು. ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಈರುಳ್ಳಿ ಪ್ರತಿ ಕೆ.ಜಿ.ಗೆ 20 ರೂ.ಗೆ ಮಾರಾಟವಾದ್ರೆ, ಉತ್ತಮ ಗುಣಮಟ್ಟದ ಈರುಳ್ಳಿ 40ರಿಂದ 42 ರೂ. ಹಾಗೂ ಟರ್ಕಿ ಈರುಳ್ಳಿ 10 ರಿಂದ 20 ರೂ.ಗೆ ಮಾರಾಟವಾಯಿತು.

    ನವೆಂಬರ್‍ನಿಂದ ಈರುಳ್ಳಿ ದರದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡು, ಪ್ರತಿ ಕೆಜಿಗೆ 150 ರಿಂದ 200 ರೂ. ರವರೆಗೂ ತಲುಪಿತ್ತು. ಹೀಗಾಗಿ ದಾಸ್ತಾನು ಕೊರತೆ ನೀಗಿಸಲು ವಿದೇಶಗಳಿಂದಲೂ ಈರುಳ್ಳಿಯನ್ನ ಆಮದು ಮಾಡಿಕೊಳ್ಳಲಾಗಿತ್ತು. ಟರ್ಕಿ, ಈಜಿಪ್ಟ್‍ನಿಂದ ಆಮದು ಬಳಿಕವೂ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿತ್ತು. ಕರ್ನಾಟಕ, ಮಹಾರಾಷ್ಟ್ರದಿಂದ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವುದರಿಂದ ದರ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

    ಎರಡು ದಿನಗಳಿಂದ ಈರುಳ್ಳಿ ಪೂರೈಕೆ ಹೆಚ್ಚಿದೆ. ಸೋಮವಾರ 215 ಟ್ರಕ್‍ಗಳಲ್ಲಿ ಈರುಳ್ಳಿ ನಗರಕ್ಕೆ ಬಂದಿದೆ. ಪ್ರತಿ ಕ್ವಿಂಟಲ್‍ಗೆ 4 ಸಾವಿರದಿಂದ 4.2 ಸಾವಿರ ರೂ.ವರೆಗೆ ಮಾರಾಟ ಆಗುತ್ತಿದೆ.

  • ತಂಪು ಪಾನೀಯ ಬಾಟಲಿಯಲ್ಲಿ ಸ್ಕ್ರೂಡ್ರೈವರ್ ಪತ್ತೆ – ಗ್ರಾಹಕ ಶಾಕ್

    ತಂಪು ಪಾನೀಯ ಬಾಟಲಿಯಲ್ಲಿ ಸ್ಕ್ರೂಡ್ರೈವರ್ ಪತ್ತೆ – ಗ್ರಾಹಕ ಶಾಕ್

    ಶಿವಮೊಗ್ಗ: ತಂಪು ಪಾನೀಯದ ಬಾಟಲಿಯೊಂದರಲ್ಲಿ ಕಬ್ಬಿಣದ ಸ್ಕ್ರೂಡ್ರೈವರ್ ಪತ್ತೆಯಾಗಿರುವ ಘಟನೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಹೋಟೆಲ್ ವೊಂದರಲ್ಲಿ ನಡೆದಿದೆ.

    ಇಂದು ಸಂಜೆಯ ವೇಳೆಗೆ ಮೂರು ಮಂದಿ ಗ್ರಾಹಕರ ಗುಂಪೊಂದು ಹೋಟೆಲ್ ಗೆ ತೆರಳಿ ತಂಪು ಪಾನೀಯ ಕುಡಿಯಲು ಹೋಗಿದ್ದಾರೆ. ಹೋಟೆಲ್ ನವರು ತಂಪು ಪಾನೀಯವನ್ನು ನೀಡಿದ್ದಾರೆ. ಈ ವೇಳೆ ಗ್ರಾಹಕ ಸುರೇಂದ್ರ ಎಂಬುವರು ಕುಡಿಯುತ್ತಿದ್ದ ತಂಪು ಪಾನೀಯ ಬಾಟಲಿಯೊಂದರಲ್ಲಿ ಕಬ್ಬಿಣದ ಸ್ಕ್ರೂಡ್ರೈವರ್ ಪತ್ತೆಯಾಗಿದ್ದು ತಂಪು ಪಾನೀಯ ಕುಡಿಯುತ್ತಿದ್ದ ಗ್ರಾಹಕನಿಗೆ ಶಾಕ್ ಆಗಿದೆ.

    ಕುಡಿಯುತ್ತಿದ್ದ ಬಾಟಲಿಯನ್ನು ಅರ್ಧಕ್ಕೆ ಬಿಟ್ಟು ಹೋಟೆಲ್ ಮಾಲೀಕರನ್ನು ಕರೆದು ತೋರಿಸಿದ್ದಾರೆ. ಈ ವೇಳೆ ಹೋಟೆಲ್ ಮಾಲೀಕ ಬಾಟಲಿಯನ್ನು ಹಿಂಪಡೆದುಕೊಂಡಿದ್ದಾರೆ. ಆದರೆ ಅಷ್ಟಕ್ಕೇ ಸಮಾಧಾನಗೊಳ್ಳದ ಗ್ರಾಹಕ ಘಟನೆ ಬಳಿಕ ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದ್ದರು.

    ಗ್ರಾಹಕರು ನೀಡಿದ ದೂರಿನ ಮೇರೆಗೆ ಹೋಟೆಲ್ ಗೆ ಆಗಮಿಸಿದ ಅಧಿಕಾರಿಗಳು ತಂಪು ಪಾನೀಯ ಬಾಟಲಿಯನ್ನು ಪರಿಶೀಲನೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ತಂಪು ಪಾನೀಯ ಕಂಪನಿಯ ಅಧಿಕಾರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಆಹಾರ ಇಲಾಖೆ ಅಧಿಕಾರಿ ಡಾ. ಶಮಾ ತಿಳಿಸಿದ್ದಾರೆ.