Tag: ಗ್ರಾಮ

  • ಗ್ರಾಮದಲ್ಲೇ ಸವದತ್ತಿ ಯಲ್ಲಮ್ಮ ಜಾತ್ರೆಯನ್ನು ಆಚರಿಸಿದ ಗ್ರಾಮಸ್ಥರು

    ಗ್ರಾಮದಲ್ಲೇ ಸವದತ್ತಿ ಯಲ್ಲಮ್ಮ ಜಾತ್ರೆಯನ್ನು ಆಚರಿಸಿದ ಗ್ರಾಮಸ್ಥರು

    ಧಾರವಾಡ: ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಕೊರೊನಾ ಹಾವಳಿ ಹೆಚ್ಚಾದ ಹಿನ್ನೆಯಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಜಾತ್ರೆ ರದ್ದು ಪಡಿಸಲಾಗಿದೆ. ಹಾಗಾಗಿ ಜಿಲ್ಲೆಯ ಗ್ರಾಮಸ್ಥರು ಗ್ರಾಮದಲ್ಲೇ ಜಾತ್ರೆ ಮಾಡಿ ಭಕ್ತಿ ಮೆರೆದಿದ್ದಾರೆ.

    ಹುಣ್ಣಿಮೆಯಂದು ನಡೆಯುವ ಇಲ್ಲಿನ ಜಾತ್ರೆಗೆ ಪ್ರತಿ ವರ್ಷ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಕರ್ನಾಟಕದಲ್ಲಿ ಮುನ್ನೆಚ್ಚರಿಕೆಯಿಂದ ಜಾತ್ರೆಗೆ ಅವಕಾಶ ನೀಡಿಲ್ಲ. ಹಾಗಾಗಿ ದೇವಿಯ ಭಕ್ತರು ತಾವಿದ್ದ ಸ್ಥಳದಲ್ಲೇ ದೇವರಿಗೆ ಪೂಜೆ ಮಾಡಿ ಭಕ್ತಿಯಿಂದ ಕೈ ಮುಗಿದಿದ್ದಾರೆ. ಮನಸೂರ ಗ್ರಾಮದ ಕರೆಮ್ಮ ದೇವಿ ದೇವಸ್ಥಾನದಲ್ಲಿ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಗ್ರಾಮದ ಜನರು ಎರಡು ದಿನ ಅಲ್ಲೇ ಇದ್ದು, ಅಲ್ಲಿಯೇ ಅಡುಗೆ ಮಾಡಿ ಹಡ್ಡಲಗಿ ತುಂಬಿಸಿ ಯಲ್ಲಮ್ಮ ದೇವಿಗೆ ಭಕ್ತಿ ಸಮರ್ಪಣೆ ಮಾಡಿದ್ದಾರೆ.

    ಪ್ರತಿ ವರ್ಷ ಜಿಲ್ಲೆಯ ಗ್ರಾಮಸ್ಥರು ಮತ್ತು ಅಕ್ಕಪಕ್ಕದ ಗ್ರಾಮದ ಜನರು ಟ್ರ್ಯಾಕ್ಟರ್ ಹಾಗೂ ಚಕ್ಕಡಿ ಮೂಲಕ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿ ಜಾತ್ರೆ ಮಾಡುತ್ತಿದ್ದರು. ಈ ವರ್ಷ ಮಾತ್ರ ಭಕ್ತರಿಗೆ ಯಲ್ಲಮ್ಮ ಗುಡ್ಡಕ್ಕೆ ಹೋಗಲು ಅವಕಾಶ ಸಿಗದ ಹಿನ್ನೆಲೆ ಗ್ರಾಮದ ಜನರು ಕೋವಿಡ್ ನಿಯಮ ಪಾಲಿಸಿ ಶ್ರೀಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಹೇಗೆ ಜಾತ್ರೆ ಮಾಡಲಾಗುತ್ತಿತ್ತೋ ಅದೇ ರೀತಿ ಈ ಬಾರಿ ಗ್ರಾಮದಲ್ಲೇ ಪೂಜೆ ಪುನಸ್ಕಾರ ಮಾಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.

  • ಮನೆಮಂದಿಗೆ ಚಾಕು ತೋರಿಸಿ ಚಿನ್ನ ದೋಚಿದ ಖದೀಮರು

    ಮನೆಮಂದಿಗೆ ಚಾಕು ತೋರಿಸಿ ಚಿನ್ನ ದೋಚಿದ ಖದೀಮರು

    ಹಾಸನ: ಮನೆಮಂದಿಯೆಲ್ಲ ಮನೆಯಲ್ಲಿರುವಾಗಲೇ ಕಳ್ಳರ ಗುಂಪೊಂದು ಮನೆಗೆ ನುಗ್ಗಿ ಚಾಕು ತೋರಿಸಿ ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ದೋಚಿರುವಂತಹ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಅರಕೆರೆ ಗ್ರಾಮದ ರಾಜಶೇಖರ್ ಎಂಬವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಮನೆ ಮಂದಿಯೆಲ್ಲ ಎಂದಿನಂತೆ ಮನೆಯಲ್ಲಿದ್ದ ವೇಳೆ ಏಕಾಏಕಿ ನಾಲ್ಕೈದು ಮಂದಿಯ ತಂಡ ಮನೆಯ ಹಿಂಬಾಗಿಲಿನಿಂದ ಒಳಬಂದಿದ್ದಾರೆ. ಅಲ್ಲದೆ ಮಾಲೀಕರಿಗೆ ಚಾಕು ತೋರಿಸಿ ಮನೆಯಲ್ಲಿದ್ದ 70 ಗ್ರಾಂ. ಚಿನ್ನ 50 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

    ಪ್ರಕರಣ ನಡೆದ ವಿಷಯ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಶ್ವಾನ ದಳ ಮತ್ತು ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಕೆಲ ಮಾಹಿತಿಗಳನ್ನು ಸಂಗ್ರಹಣೆ ಮಾಡಿದ್ದು ಆರೋಪಿಗಳಿಗಾಗಿ ಬಲೆಬೀಸಿದ್ದಾರೆ. ಈ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

  • ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿ ಬೋನಿಗೆ ಬಿತ್ತು ಚಿರತೆ ಮರಿ

    ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿ ಬೋನಿಗೆ ಬಿತ್ತು ಚಿರತೆ ಮರಿ

    – ತಾಯಿ ಚಿರತೆಗಾಗಿ ಅರಣ್ಯಾಧಿಕಾರಿಗಳ ಶೋಧ

    ನೆಲಮಂಗಲ: ದಕ್ಷಿಣಕಾಶಿ ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿ ಚಿರತೆ ಮರಿ ಬೋನಿಗೆ ಬಿದ್ದಿದ್ದು ನೆಲಮಂಗಲ ತಾಲೂಕಿನ ನಾರಾಯಣಪುರ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

    ಸುಮಾರು 2 ವರ್ಷದ ಹೆಣ್ಣು ಚಿರತೆ ಮರಿ ಬೋನಿಗೆ ಬಿದ್ದಿದೆ. ಸ್ಥಳಕ್ಕೆ ನೆಲಮಂಗಲ ಅರಣ್ಯ ಅಧಿಕಾರಿಗಳ ದೌಡಾಯಿಸಿದ್ದು, ಚಿರತೆ ಮರಿಯನ್ನು ಬನ್ನೇರುಘಟ್ಟ ಅರಣ್ಯಕ್ಕೆ ಸಾಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

    ಬೆಳ್ಳಂಬೆಳಗ್ಗೆ ಚಿರತೆ ಮರಿಯನ್ನು ಕಂಡ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಾವೆಲ್ಲ ಸೇರಿ ಚಿರತೆ ಮರಿ ಬಿದ್ದಿರುವ ಬೋನನ್ನು ತಂದಿದ್ದೇವೆ. ಎರಡು ಮೂರು ಚಿರತೆ ಬೀಡು ಬಿಟ್ಟಿರುವ ಪಕ್ಕದ ಗೆರುಗುಟ್ಟುಕ್ಕೆ ತೆರಳಲು ನಮಗೆ ಭಯವಾಗುತ್ತದೆ ಎಂದು ಹೇಳಿ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.

    15 ಮೇಕೆ, 10 ಕೋಳಿ, 3 ಹಸು, ಸಾಕಷ್ಟು ನಾಯಿ ತಿಂದು ಭಕ್ಷಿಸಿರುವ ಚಿರತೆಗಳು ಗ್ರಾಮದಲ್ಲಿದೆ. ಅದಷ್ಟೂ ಬೇಗ ಎಲ್ಲಾ ಚಿರತೆಗಳನ್ನು ಹಿಡಿಯಿರಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹಲವಾರು ತಿಂಗಳಿನಿಂದ ಚಿರತೆಗಳು ಬೀಡುಬಿಟ್ಟಿದ್ದು, ಸುಮಾರು 2 ತಿಂಗಳಿನಿಂದ ಬೋನು ಇರಿಸಿದ್ದಾರೆ.

    ಚಿರತೆಗಳನ್ನು ಮತ್ತೆ ಹತ್ತಿರದ ಕಾಡಿನಲ್ಲಿ ಬಿಡಬೇಡಿ, ಬನ್ನೇರುಘಟ್ಟ ಕಾಡಿಗೆ ಬಿಟ್ಟಿದ್ದೇವೆ ಎಂಬ ಪತ್ರವನ್ನು ಪಂಚಾಯತಿಗೆ ನೀಡಿಲ್ಲ. ಹೀಗಾಗಿ ಅರಣ್ಯ ಅಧಿಕಾರಿಗಳು ನಮಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ಅಗ್ರಹಿಸಿದರು.

  • ಮೂಡಿಗೆರೆಯ ಗ್ರಾಮದಲ್ಲಿ ಒಂಟಿ ಸಲಗ ಓಡಾಟ – ಆತಂಕದಲ್ಲಿ ಸ್ಥಳೀಯರು

    ಮೂಡಿಗೆರೆಯ ಗ್ರಾಮದಲ್ಲಿ ಒಂಟಿ ಸಲಗ ಓಡಾಟ – ಆತಂಕದಲ್ಲಿ ಸ್ಥಳೀಯರು

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿ-ಹೆಸಗೋಡು ಗ್ರಾಮಗಳ ಅಂಚಿನಲ್ಲಿ ಒಂಟಿ ಸಲಗ ಘೀಳಿಡುತ್ತಾ ನಡೆಯುತ್ತಿರುವುದನ್ನು ಕಂಡು ಹಳ್ಳಿಗರು ಆತಂಕದಲ್ಲಿ ಬದುಕುತ್ತಿದ್ದಾರೆ.

    ಗುತ್ತಿ, ಬೈರಾಪುರ, ಗೌಡಹಳ್ಳಿ, ಸಾರಗೋಡು, ಹೆಸಗೋಡು ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಆನೆ ಕಾಟ ಹೆಚ್ಚಾಗಿದೆ. ಎರಡ್ಮೂರು ಜನ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ನೂರಾರು ಜನ ಮನೆ-ತೋಟ-ಗದ್ದೆಗಳನ್ನ ಕಳೆದುಕೊಂಡಿದ್ದಾರೆ. ತೋಟ, ಗದ್ದೆಗಳಲ್ಲಿ ದಾಂಧಲೆ ಮಾಡುತ್ತಿದ್ದ ಒಂಟಿ ಸಲಗ ಇದೀಗ ಗ್ರಾಮದ ಅಂಚಿಗೂ ಕಾಲಿಟ್ಟಿರೋದು ಹಳ್ಳಿಗರಲ್ಲಿ ಆತಂಕವನ್ನುಂಟು ಮಾಡಿದೆ.

    ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಇಂದಿಗೂ ನಿಂತಿಲ್ಲ. ಮೂರ್ನಾಲ್ಕು ಕಾಡಾನೆಗಳ ಹಿಂಡು ತಾಲೂಕಿನ ಗ್ರಾಮೀಣ ಭಾಗದಲ್ಲಿ ದಾಳಿ ಮಾಡಿ ಕಾಫಿ, ಅಡಿಕೆ, ಮೆಣಸು, ಬಾಳೆ ಸೇರಿದಂತೆ ಅನೇಕ ಬೆಳೆಗಳನ್ನ ಹಾಳು ಮಾಡುತ್ತಿವೆ. ಜೀವ ಉಳಿಸಿಕೊಳ್ಳುತ್ತಿದ್ದ ಜನರಿಗೆ ಇದೀಗ ಆನೆಗಳು ಗ್ರಾಮದಂಚಿಗೆ ಬರುತ್ತಿರೋದು ಆತಂಕ ಸೃಷ್ಟಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನ ಓಡಿಸಲು ಅಥವ ಹಿಡಿದು ಸ್ಥಳಾಂತರಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂಬ ಸ್ಥಳಿಯರ ಆರೋಪಕ್ಕೂ ದಶಕಗಳ ಇತಿಹಾಸವಿದೆ. ಸ್ಥಳಿಯರು ಆನೆಗಳು ಬಂದಿವೆ ಎಂದು ಫೋನ್ ಮಾಡಿದ ಬಹಳ ಹೊತ್ತಿನ ನಂತರ ಬರುವ ಅಧಿಕಾರಿಗಳು ಎರಡು ಪಟಾಕಿ ಸಿಡಿಸಿ ನಮ್ಮ ಕೈಗೆ ಪಟಾಕಿ ಕೊಟ್ಟು ಹೋಗುತ್ತಾರೆ.

    ಆನೆಗಳನ್ನ ಹಿಡಿದು ಸ್ಥಳಾಂತರಿಸುವುದಿಲ್ಲ. ಒಂದು ವಾರ-ಹದಿನೈದು ದಿನ ಬಳಿಕ ಮತ್ತೆ ಬರುತ್ತವೆ ಎಂದು ಸ್ಥಳಿಯರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಒಂಟಿ ಸಲಗ ಗ್ರಾಮದ ಅಂಚಿಗೆ ಬಂದಿರುವುದರಿಂದ ಹಳ್ಳಿಗರ ಆತಂಕ ಹೆಚ್ಚಾಗಿದ್ದು ಹೊಲ-ಗದ್ದೆ ತೋಟಗಳಿಗೆ ಕೆಲಸಕ್ಕೆ ಹೋಗಲು ಭಯಪಡುವ ಸ್ಥಿತಿ ನಿಮಾರ್ಣವಾಗಿದೆ. ಅರಣ್ಯ ಇಲಾಖೆ ಇತ್ತ ಗಮನ ಹರಿಸಿ ಆನೆ ಓಡಿಸುವ ಬದಲು ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

  • ಶಾರ್ಟ್ ಸರ್ಕ್ಯೂಟ್‌ನಿಂದ  ಮನೆಗೆ ಬೆಂಕಿ – ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿ

    ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿ

    ಹಾವೇರಿ: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಮನೆಗೆ ಬೆಂಕಿ ಬಿದ್ದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ.

     

     

     

    ಗ್ರಾಮದ ಚಂದ್ರಪ್ಪ ಬೂದಿಹಳ್ಳಿ ಮತ್ತು ನಿಂಗಪ್ಪ ಬೂದಿಹಳ್ಳಿ ಅವರ ಮನೆ ಹಾನಿಗೊಳಗಾಗಿದೆ. ಮನೆಯಲ್ಲಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳು ಹಾಗೂ ಮನೆಯ ಮೇಲ್ಛಾವಣಿ ಸಂಪೂರ್ಣ ಸುಟ್ಟು ಹಾನಿಯಾಗಿದೆ. ಬೆಂಕಿ ಕಾಣಿಸಿಕೊಳ್ತಿದ್ದಂತೆ ಮನೆಯಿಂದ ಹೊರಗೆ ಬಂದಿದ್ದರಿಂದ ಮನೆಯವರು ಅದೃಷ್ಟವಶಾತ್ ಪಾರಾಗಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ಮಾಡಿದ್ದಾರೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಕಿಡಿಗೇಡಿಗಳಿಂದ ಗ್ರಾಮದಲ್ಲಿ ವಾಮಾಚಾರ

    ಕಿಡಿಗೇಡಿಗಳಿಂದ ಗ್ರಾಮದಲ್ಲಿ ವಾಮಾಚಾರ

    ಮಡಿಕೇರಿ: ಕುಡಿಕೆಯೊಂದರಲ್ಲಿ ವಾಮಾಚಾರ ಮಾಡಿ ಗ್ರಾಮದಲ್ಲಿ ತಂದಿಟ್ಟಿರುವುದನ್ನು ಗಮನಿಸಿದ ಗ್ರಾಮಸ್ಥರು ಅತಂಕ ಒಳಗಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಹ್ಯಗ್ರಾಮದಲ್ಲಿ ನಡೆದಿದೆ.

    ಗುಹ್ಯ ಗ್ರಾಮದಲ್ಲಿ ರಾತ್ರಿ ಗ್ರಾಮದ ಮೂರು ರಸ್ತೆಗಳು ಸೇರುವ ಜಾಗದಲ್ಲಿ ವಾಮಾಚಾರ ಮಾಡಿದ್ದಾರೆ. ರಸ್ತೆಯಲ್ಲಿ ಕುಡಿಕೆಗೆ ಕೆಂಪುಬಟ್ಟೆ ಕಟ್ಟಿ ಇಟ್ಟ ಕಿಡಿಗೇಡಿಗಳು ಅಲ್ಲಿಂದ ಹೋಗಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು ಇದೀಗ ಅತಂಕ ಒಳಗಾಗಿದ್ದಾರೆ.

    ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ವಾಮಾಚಾರ ಅಗಿದೆ. ಇದರಿಂದ ಗ್ರಾಮದ ಜನತೆ ಅತಂಕಗೊಂಡಿದ್ದಾರೆ. ಯಾರೋ ಈ ರೀತಿಯಲ್ಲಿ ಗ್ರಾಮದಲ್ಲಿ ರಸ್ತೆಯಲ್ಲಿ ಮಡಿಕೆ ಇಟ್ಟಿದ್ದಾರೆ. ಆದರೆ ಇದು ವಾಮಾಚಾರ ಮಾಡಿರುವುದಾ ಎಂಬುದು ಇನ್ನು ನಿಖರವಾಗಿಲ್ಲ. ಆದರೆ ಇದರಿಂದ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದಾರೆ.

  • ಬೆಟ್ಟಕ್ಕೆ ಬೆಂಕಿ – ಹೆದರಿ ಗ್ರಾಮಕ್ಕೆ ಬಂದ ಚಿರತೆ

    ಬೆಟ್ಟಕ್ಕೆ ಬೆಂಕಿ – ಹೆದರಿ ಗ್ರಾಮಕ್ಕೆ ಬಂದ ಚಿರತೆ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಹಲವು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಅರಣ್ಯದಲ್ಲಿದ್ದ ಚಿರತೆ, ಬೆಂಕಿಗೆ ಹೆದರಿ ಗ್ರಾಮವನ್ನು ಸೇರಿದ ಘಟನೆ ನಡೆದಿದೆ.

    ಶುಕ್ರವಾರ ರಾತ್ರಿ 9.30ರ ಸಮಯದಲ್ಲಿ ಬೆಟ್ಟಕ್ಕೆ ಬೆಂಕಿ ಇಟ್ಟಿರುವುದು ತಿಳಿದು ಬಂದಿದೆ. ಬೆಂಕಿಯ ಕೆನ್ನಾಲಿಗೆ ತೀವ್ರವಾಗಿದ್ದ ಕಾರಣ ಹಾಗೂ ಬೆಟ್ಟದಲ್ಲಿನ ಹುಲ್ಲು ಒಣಗಿರುವ ಕಾರಣ ತ್ವರಿತಗತಿಯಲ್ಲಿ ಬೆಂಕಿ ಇಡೀ ಬೆಟ್ಟ ವ್ಯಾಪಿಸಿದೆ ಎನ್ನಲಾಗುತ್ತಿದೆ. ಕಿಡಿಗೇಡಿಗಳ ಕೃತ್ಯದಿಂದ ಮರ ಗಿಡಗಳು ಬೆಂಕಿಗಾಹುತಿಯಾಗಿವೆ. ಬೆಟ್ಟಕ್ಕೆ ಬೆಂಕಿ ಬಿದ್ದಿರುವ ಹಿನ್ನೆಲೆ ಚಿರತೆ ಬೆಂಕಿಗೆ ಹೆದರಿ ಮಾಕಳಿ ಗ್ರಾಮದ ಬಳಿ ಬೀಡು ಬಿಟ್ಟಿದೆ.

    ಶುಕ್ರವಾರ ರಾತ್ರಿ 9.45ರ ಸಮಯದಲ್ಲಿ ಗ್ರಾಮಕ್ಕೆ ನುಗ್ಗಿ ಮೂರು ಕೋಳಿಗಳನ್ನು ಹೊತ್ತೊಯ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ರಾತ್ರಿಯಿಡಿ ಪಟಾಕಿ ಹೊಡೆದು, ತಮಟೆ ಸದ್ದು ಮಾಡುತ್ತಾ ಚಿರತೆ ಗ್ರಾಮಕ್ಕೆ ಬರದಂತೆ ಗ್ರಾಮಸ್ಥರು ಕಾವಲು ಕಾದಿದ್ದಾರೆ. ಇಂದು ಚಿರತೆ ಬಂಧನಕ್ಕೆ ಕ್ರಮಕೈಗೊಳ್ಳಲು ಮಾಕಳಿ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲು ಮುಂದಾಗಿದ್ದಾರೆ.

  • ಹೊನ್ನಾಳಿಯಲ್ಲಿ ದೇವರ ಕೋಣಕ್ಕೆ ಮೂರು ಗ್ರಾಮಸ್ಥರ ಜಗಳ: ಕೊನೆಗೆ ಠಾಣೆಯಲ್ಲಿ ಇತ್ಯರ್ಥ

    ಹೊನ್ನಾಳಿಯಲ್ಲಿ ದೇವರ ಕೋಣಕ್ಕೆ ಮೂರು ಗ್ರಾಮಸ್ಥರ ಜಗಳ: ಕೊನೆಗೆ ಠಾಣೆಯಲ್ಲಿ ಇತ್ಯರ್ಥ

    – ದೇವರ ಮೊರೆ ಹೋದ ಗ್ರಾಮಸ್ಥರು
    – ಪೊಲೀಸರ ಸಂಧಾನ ಯಶಸ್ವಿ

    ದಾವಣಗೆರೆ: ದೇವರಿಗೆ ಬಿಟ್ಟಿದ್ದ ಒಂದು ಕೋಣಕ್ಕೆ ಮೂರು ಗ್ರಾಮದ ಜನರು ಜಟಾಪಟಿ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಒಂದೇ ಕೋಣವನ್ನು ನಮ್ಮದು ಎಂದು ಮೂರು ಗ್ರಾಮಗಳ ಜನರು ಪಟ್ಟುಹಿಡಿದಿದ್ದಾರೆ. ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಗ್ರಾಮದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕೋಣಕ್ಕಾಗಿ ವಾದವಿವಾದಗಳು ನಡೆದು ಕೊನೆಗೆ ಪೊಲೀಸ್ ಠಾಣೆಯಲ್ಲಿ ವಿಚಾರ ಇತ್ಯರ್ಥವಾಗಿದೆ.

    ಏನಿದು ಗಲಾಟೆ?
    ಸಾಸ್ವೆಹಳ್ಳಿ ಗ್ರಾಮಕ್ಕೆ ನಾಲ್ಕು ವರ್ಷಗಳ ಹಿಂದೆ ಮರಿಕೋಣವು ಎಲ್ಲಿಂದಲೋ ಬಂದಿತ್ತು. ಅದೇ ಗ್ರಾಮದಲ್ಲಿ ಓಡಾಡಿಕೊಂಡಿತ್ತು. ಈಗ ಅಲ್ಲಿನ ಗ್ರಾಮದ ಜನರು ಆ ಕೋಣವನ್ನು ಸಾಸ್ವೇಹಳ್ಳಿ ಗ್ರಾಮದ ಗ್ರಾಮಸ್ಥರು ಆಂಜನೇಯ ದೇವಸ್ಥಾನಕ್ಕೆ ದೇವರ ಕೋಣ ಎಂದು ಬಿಟ್ಟದ್ದರು.

    ಈ ನಡುವೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಜಂಬರಗಟ್ಟೆ ಗ್ರಾಮದಿಂದ 70 ಜನ ಬಂದು, ಹದಿನೈದು ದಿನಗಳಿಂದ ತಮ್ಮ ಗ್ರಾಮದ ಕೋಣವನ್ನು ಹುಡುಕುತ್ತಿದ್ದೆವು. ಗ್ರಾಮ ದೇವತೆ ದುರ್ಗಾದೇವಿಯು ಉತ್ತರ ಭಾಗದಲ್ಲಿ ನಮ್ಮ ದೇವರ ಕೋಣ ಸಿಗುತ್ತದೆ ಎಂದು ಅಪ್ಪಣೆ ಕೊಟ್ಟಿದ್ದರಿಂದ ನಾವು ಹುಡುಕುತ್ತ ಬಂದೆವು. ಈ ಗ್ರಾಮದಲ್ಲಿ ನಮ್ಮ ಕೋಣ ಸಿಕ್ಕಿದೆ. ಸಾಸ್ವೆಹಳ್ಳಿಯಲ್ಲಿರುವ ಕೋಣ ನಮ್ಮದು ಎಂದು ಕೋಣವನ್ನು ಹಿಡಿದು ಪಟ್ಟು ಹಿಡಿದಿದ್ದಾರೆ.

    ಇತ್ತ ನ್ಯಾಮತಿ ತಾಲ್ಲೂಕಿನ ಮಡಿಕೆ ಚೀಲೂರಿನ ಗ್ರಾಮಸ್ಥರು ಕೂಡ ಈ ಕೋಣ ನಮ್ಮ ಗ್ರಾಮದ ದೇವರ ಕೋಣ ಎಂದು ತಕರಾರು ತೆಗೆದಿದ್ದಾರೆ. ಇದರಿಂದ ಸಾಸ್ವೆಹಳ್ಳಿ ಗ್ರಾಮದಲ್ಲಿ ಮೂರು ಗ್ರಾಮದ ಗ್ರಾಮಸ್ಥರು ಕೋಣಕ್ಕಾಗಿ ವಾದ ವಿವಾದಗಳನ್ನು ನಡೆಸುತ್ತಿದ್ದರು.

    ದೇವರ ಮೊರೆ ಹೋದ ಗ್ರಾಮಸ್ಥರು: ಸಾಸ್ವೆಹಳ್ಳಿ ಕೋಟೆ ಆಂಜನೇಯ ದೇವಸ್ಥಾನ ಸಮಿತಿಯವರು ಗ್ರಾಮದಲ್ಲಿ ಹನುಮಂತ ದೇವರ ಅಪ್ಪಣೆ ಕೇಳಿ ಯಾರಿಗೆ ವರ ನೀಡುತ್ತದೆಯೋ ಅವರು ಕೋಣ ತೆಗೆದುಕೊಂಡು ಹೋಗಬಹುದು ಎಂದರು. ಮಧ್ಯರಾತ್ರಿಯವರೆಗೂ ಯಾರಿಗೂ ದೇವರು ಅಪ್ಪಣೆ ನೀಡಲಿಲ್ಲ. ನಂತರ ನ್ಯಾಮತಿ ತಾಲೂಕಿನ ಮಡಿಕೆ ಚೀಲೂರು ಗ್ರಾಮಕ್ಕೆ ಕರೆದೊಯ್ದಿದ್ದು, ಆ ಗ್ರಾಮದ ದೇವರ ಅಪ್ಪಣೆ ಪಡೆದು ಒಯ್ಯಲು ತೀರ್ಮಾನ ಮಾಡಿದ್ದಾರೆ. ಆದರೆ ಮಡಿಕೆ ಚೀಲೂರಿನವರಿಗೆ ದೇವರು ಅಪ್ಪಣೆ ನೀಡದ ಕಾರಣ ಅವರು ಜಂಬರಗಟ್ಟೆ ಗ್ರಾಮದವರಿಗೆ ಒಯ್ಯುವಂತೆ ಸೂಚಿಸಿದರು. ಜಂಬರಗಟ್ಟೆ ಗ್ರಾಮದ ದೇವತೆ ಅಪ್ಪಣೆ ನೀಡಿದ ಕಾರಣ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ.

    ಠಾಣೆಯಲ್ಲಿ ಇತ್ಯರ್ಥ: ದೇವರ ಕೋಣದ ವಿವಾದ ಇತ್ಯರ್ಥ ಆಯ್ತು ಎನ್ನುವಷ್ಟರಲ್ಲಿ ಮರಿಗೊಂಡನಹಳ್ಳಿಯ ಗ್ರಾಮಸ್ಥರು ಪೊಲೀಸರೊಂದಿಗೆ ಬಂದು, ಇದು ನಮ್ಮೂರಿನ ಕೋಣ ಎಂದು ತಕರಾರು ತೆಗೆದಿದ್ದಾರೆ. ಕಳೆದ ಕೆಲ ದಿನಗಳಿಂದ ನಮ್ಮ ಗ್ರಾಮದ ದೇವರ ಕೋಣ ಕಾಣೆಯಾಗಿದೆ. ಇದೇ ನಮ್ಮ ಗ್ರಾಮದ ಕೋಣ ಎಂದು ಪಟ್ಟು ಹಿಡಿದಿದ್ದಾರೆ.

    ವಾದ ವಿವಾದದ ನಡುವೆ ಪ್ರವೇಶಿದ ಹೊನ್ನಾಳಿ ಠಾಣೆ ಪೊಲೀಸರು ಬಂಜರಗಟ್ಟೆ ಹಾಗೂ ಮರಿಗೊಂಡನಹಳ್ಳಿ ಗ್ರಾಮದವರಿಂದ ಸಾಕ್ಷಿ, ಪುರಾವೆ ಕೇಳಿ ಚರ್ಚಿಸಿದರು. ಸಮಸ್ಯೆ ಬಿಗಡಾಯಿಸಿದ್ದರಿಂದ ಕೋಣವನ್ನು ಪೊಲೀಸ್ ಠಾಣೆಗೆ ವಾಹನ ಸಮೇತ ಒಯ್ಯಲಾಯಿತು. ನಂತರ ಹೊನ್ನಾಳಿ ಠಾಣೆಯ ಬಂದು, ಎರಡೂ ಗ್ರಾಮಗಳ ಮುಖಂಡರ ಸಮ್ಮುಖದಲ್ಲಿ ಚರ್ಚಿಸಿ, ಕೋಣಕ್ಕಾಗಿ ಗ್ರಾಮಗಳ ನಡುವೆ ವೈಷಮ್ಯ ಮೂಡಿಸುವುದು ಬೇಡ ಎಂದು ಸಂಧಾನ ಸೂತ್ರ ಅನುಸರಿಸಿ ಎಂದು ಮನವಿ ಮಾಡಿಕೊಂಡು, ಮರಿಗೊಂಡನಹಳ್ಳಿ ಗ್ರಾಮದವರ ಮನವೊಲಿಸಿ ಜಂಬರಗಟ್ಟೆ ಗ್ರಾಮದವರಿಗೆ ಕೋಣವನ್ನು ಒಯ್ಯಲು ಅನುಮತಿ ನೀಡಿದರು.

  • ಗ್ರಾ.ಪಂ. ಚುನಾವಣೆಯಲ್ಲಿ ಸೋತಿದ್ದಕ್ಕೆ ಗ್ರಾಮದ ರಸ್ತೆಯನ್ನೇ ಬಂದ್ ಮಾಡಿದ

    ಗ್ರಾ.ಪಂ. ಚುನಾವಣೆಯಲ್ಲಿ ಸೋತಿದ್ದಕ್ಕೆ ಗ್ರಾಮದ ರಸ್ತೆಯನ್ನೇ ಬಂದ್ ಮಾಡಿದ

    ಕೋಲಾರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ತಮ್ಮ ಸೋಲಿಗೆ ಕಾರಣವಾದ ಗ್ರಾಮದ ಜನ ಓಡಾಡದಂತೆ ರಸ್ತೆಯನ್ನೇ ಬಂದ್ ಮಾಡಿದ್ದಾನೆ.

    ಜಿಲ್ಲೆಯ ಮಾಲೂರು ತಾಲೂಕಿನ ಅಗ್ರಹಾರ ಹೊಸಳ್ಳಿಯಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಇದೇ ಗ್ರಾಮದ ಗಿರಿಗೌಡ ಪತ್ನಿ ಸುನಿತಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ದುರದೃಷ್ಟ ಎಂಬಂತೆ ಹನ್ನೊಂದು ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಸೋಲಿಗೆ ಕಾರಣರಾದ ಗ್ರಾಮಸ್ಥರಿಗೆ ತಮ್ಮ ಜಮೀನಿನಲ್ಲಿ ಬಿಟ್ಟಿದ್ದ ದಾರಿಯನ್ನು ಬಂದ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಮ್ಮ ಪತ್ನಿಗೆ ಮತ ನೀಡದ ಹಿನ್ನೆಲೆ ಬೇಸರಗೊಂಡ ಗಿರಿಗೌಡ, ಈ ರಸ್ತೆ ಕೊಟ್ಟರೂ ಪ್ರಯೋಜನ ಆಗಿಲ್ಲ ಎಂದು ರಸ್ತೆಯಲ್ಲಿ ಗುಂಡಿ ತೆಗೆದು ಸಂಚಾರ ಬಂದ್ ಮಾಡಿದ್ದಾರೆ. ಹೊಸಹಳ್ಳಿ ಗ್ರಾಮದಿಂದ ಹುಣಸೇದಿನ್ನೆ ಗ್ರಾಮಕ್ಕೆ ತೆರಳಲು ಒಂದೇ ರಸ್ತೆ ಇದ್ದು, ನಿನ್ನೆ ರಾತ್ರಿ ಈ ರಸ್ತೆಯನ್ನು ಜೆಸಿಬಿ ಮೂಲಕ ಅಗೆದು ದಾರಿಯನ್ನು ಬಂದ್ ಮಾಡಲಾಗಿದೆ.

    ಮಾಹಿತಿ ಪ್ರಕಾರ ಇದು ಸರ್ಕಾರಿ ರಸ್ತೆಯಲ್ಲ. ಗಿರಿಗೌಡರಿಗೆ ಸೇರಿದ ಸರ್ವೆ ನಂಬರ್‍ನಲ್ಲಿರುವ ಭೂಮಿಯಾಗಿದ್ದು, ಅನುಕಂಪದ ಆಧಾರದ ಮೇಲೆ ರಸ್ತೆಯನ್ನು ಬಿಡಲಾಗಿತ್ತು. ಗ್ರಾಮಕ್ಕೆ ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಲೆಂದು ರಸ್ತೆ ಬಿಟ್ಟಿದ್ದೇವೆ. ಆದರೆ ಈ ರೋಡ್ ಬಿಟ್ಟರೂ ಜನ ನಮ್ಮನ್ನು ಸೋಲಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಹುಣಿಸೇದಿನ್ನೆ ಗ್ರಾಮಸ್ಥರು ಮಾತನಾಡಿ. ಇದು ನಮ್ಮ ಗ್ರಾಮಕ್ಕಿರುವ ಏಕೈಕ ರಸ್ತೆ, ಪಕ್ಕದ ಗ್ರಾಮಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ ಹೀಗಾಗಿ ಸರ್ಕಾರ ಹಾಗೂ ಅಧಿಕಾರಿಗಳು ಈ ರಸ್ತೆಯನ್ನು ಸರಿಪಡಿಸಿಕೊಡುವಂತೆ ಮನವಿ ಮಾಡಿದ್ದಾರೆ.

  • ಹನುಮ ಹುಟ್ಟಿದ ದಿನ ಗೊತ್ತಾ, ಸುಮ್ನೆ ತಿನ್ಲಾ- ಮಾಂಸಾಹಾರ ಭೋಜನ ಸವಿದ ಸಿದ್ದು

    ಹನುಮ ಹುಟ್ಟಿದ ದಿನ ಗೊತ್ತಾ, ಸುಮ್ನೆ ತಿನ್ಲಾ- ಮಾಂಸಾಹಾರ ಭೋಜನ ಸವಿದ ಸಿದ್ದು

    – ಚಿಕನ್ ತಿನ್ನುವಾಗ ಹನುಮಜಯಂತಿ ನೆನಪಿಸಿದ ಸ್ನೇಹಿತನಿಗೆ ಸಿದ್ದು ಉತ್ತರ

    ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತದಾನ ಮಾಡಲು ತಮ್ಮ ಸ್ವ ಗ್ರಾಮ ಸಿದ್ದರಾಮನಹುಂಡಿಗೆ ತೆರಳಿದ್ದು, ಈ ವೇಳೆ ಸ್ನೇಹಿತರ ಮನೆಯಲ್ಲಿ ಮಾಂಸಾಹಾರ ಭೋಜನ ಸವಿದಿದ್ದಾರೆ.

    ಸಿದ್ದರಾಮಯ್ಯನವರು ಹನುಮಜಯಂತಿಯಂದು ಮಾಂಸಾಹಾರ ಊಟಕ್ಕೆ ಕುಳಿತಿದ್ದು, ಈ ವೇಳೆ ಸ್ನೇಹಿತರೊಬ್ಬರು ಅಣ್ಣ ಇಂದು ಹನುಮಜಯಂತಿ ಎಂದು ನೆನಪಿಸಿದ್ದಾರೆ. ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಸಿದ್ದರಾಮಯ್ಯ, ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು ನಿನಗೆ ಗೊತ್ತಾ? ಗೊತ್ತಿಲ್ಲ ತಾನೇ, ಏನು ಆಗಲ್ಲ ತಿನ್ಲಾ ಎಂದು ಗದರಿಸಿದ್ದಾರೆ.

    ಹನುಮ ಹುಟ್ಟಿದ್ದ ದಿನಾಂಕ ಗೊತ್ತಿದ್ದರೆ ಮಾಡಬೇಕು. ಗೊತ್ತಿಲ್ಲ ಅಂದ್ರೆ ಚಿಕನ್ ತಿನ್ನು. ಚಿಕನ್ ತಿನ್ನಲು ಹನುಮ ಜಯಂತಿ ನೆಪ ಹೇಳಿದ ಸ್ನೇಹಿತನಿಗೆ ಸಿದ್ದು ಉತ್ತರಿಸಿದ್ದಾರೆ. ಸಿದ್ದರಾಮನಹುಂಡಿ ಗ್ರಾಮದ ಕೆಂಪೀರಯ್ಯ ಮನೆಯಲ್ಲಿ ಘಟನೆ ನಡೆದಿದೆ.

    ಇದೇ ವೇಳೆ ಹಳೆ ನೆನಪುಗಳನ್ನು ಮೆಲುಕು ಹಾಕಿರುವ ಅವರು, ನಾನು ಮೊದಲು ದಿನ ಮೂರು ಹೊತ್ತು ನಾನ್‍ವೆಜ್ ತಿನ್ನುತ್ತಿದ್ದೆ. ಈಗ ಆಂಜಿಯೋಗ್ರಾಮ್ ಆದಮೇಲೆ ಕಡಿಮೆಮಾಡಿದ್ದೇನೆ. ಭಾನುವಾರ, ಬುಧವಾರ, ಶುಕ್ರವಾರ ನಾನ್‍ವೆಜ್ ತಿನ್ನುತ್ತೇನೆ. ಸಿಕ್ಕಾಪಟ್ಟೆ ಸಿಗರೇಟ್ ಸೇದುತ್ತಿದ್ದೆ. ಸ್ನೇಹಿತ ಮಹೇಶ್ ಫಾರಿನ್‍ನಿಂದ ಎರಡು ಬಂಡಲ್ ಸಿಗರೇಟು ತಂದು ಕೊಟ್ಟಿದ್ದ. ಕೂತ್ಕೊಂಡು ಎಲ್ಲವನ್ನೂ ಸೇದ್ಬಿಟ್ಟೆ. ಒಂದು ದಿನ ಟ್ರಿಪ್ ಗೆ ಹೋದಾಗ ನಾನು ಇಷ್ಟೋಂದು ಸಿಗರೇಟ್ ಸೇದುತ್ತೀನಿ ಏನಾಗ್ಬೇಡ ಎಂದು ಕೂತ್ಕೊಂಡು ಯೋಚನೆ ಮಾಡಿದೆ. ಬಳಿಕ ಒಂದು ವಾರ ಟ್ರಿಪ್‍ಗೆ ಹೋಗಿ ಬರೋವಷ್ಟರಲ್ಲಿ ಸಂಪೂರ್ಣ ಸಿಗರೇಟ್ ಬಿಟ್ಟೆ ಎಂದು ಹೇಳಿದರು.